Iran ನ ವ್ಯಾಪಾರ ಪಾಲುದಾರರ ಮೇಲೆ 25% ಸುಂಕ ವಿಧಿಸಿದ ಟ್ರಂಪ್; ಭಾರತದ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರುತ್ತದೆ?

ಡೊನಾಲ್ಡ್ ಟ್ರಂಪ್ | Photo Credit : AP\ PTI
ಇರಾನ್ ಅಥವಾ ಉಕ್ರೇನ್—ಎಲ್ಲೇ ಬಿಕ್ಕಟ್ಟು ಉಂಟಾದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವಾಗಲೂ ಭಾರತವನ್ನು ಗುರಿಯಾಗಿಸಲು ಒಂದು ಕಾರಣವನ್ನು ಕಂಡುಕೊಳ್ಳುತ್ತಾರೆ. ಅಮೆರಿಕದ ಪಾಲಿಗೆ ಭಾರತಕ್ಕಿಂತ ಮುಖ್ಯವಾದ ದೇಶ ಇನ್ನೊಂದಿಲ್ಲ. ಎರಡೂ ದೇಶಗಳು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಇದರ ಬೆನ್ನಲ್ಲೇ, ಇರಾನ್ ಜೊತೆ ವ್ಯಾಪಾರ ನಡೆಸುವ ಯಾವುದೇ ದೇಶದ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇರಾನ್ ನ ಅಗ್ರ ಐದು ವ್ಯಾಪಾರ ಪಾಲುದಾರರಲ್ಲಿ ಭಾರತವೂ ಒಂದು. ಟ್ರಂಪ್ ಅವರ ಈ ನಿರ್ಧಾರದಿಂದ ಅಮೆರಿಕದ ಆಮದುಗಳ ಮೇಲಿನ ಒಟ್ಟು ಸುಂಕ ದರವು ಶೇಕಡಾ 75ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ತಕ್ಷಣದಿಂದ ಜಾರಿಗೆ ಬರುವಂತೆ, ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗೆ ವ್ಯವಹಾರ ನಡೆಸುವ ಯಾವುದೇ ದೇಶವು ಅಮೆರಿಕದೊಂದಿಗೆ ಮಾಡುವ ಎಲ್ಲಾ ವ್ಯವಹಾರಗಳ ಮೇಲೆ ಶೇಕಡಾ 25ರಷ್ಟು ಸುಂಕವನ್ನು ಪಾವತಿಸಬೇಕು. ಈ ಆದೇಶವು ಅಂತಿಮ ಮತ್ತು ನಿರ್ಣಾಯಕವಾಗಿದೆ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವಿಲ್ಲದೆ ಭಾರತೀಯ ಸರಕುಗಳು ಈಗಾಗಲೇ ಅಮೆರಿಕದ ಅತ್ಯಧಿಕ ಶೇಕಡಾ 50ರಷ್ಟು ಸುಂಕ ದರವನ್ನು ಎದುರಿಸುತ್ತಿವೆ. ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಟ್ರಂಪ್ ಭಾರತ ಮೇಲೆ ಹೆಚ್ಚುವರಿಯಾಗಿ ಶೇಕಡಾ 25ರಷ್ಟು ಸುಂಕ ವಿಧಿಸಿದ್ದಾರೆ. ಇನ್ನೂ ಶೇಕಡಾ 25ರಷ್ಟು ಸುಂಕ ಜಾರಿಯಾದರೆ, ಅಮೆರಿಕಕ್ಕೆ ಭಾರತೀಯ ಆಮದುಗಳ ಮೇಲಿನ ಒಟ್ಟು ಸುಂಕ ಶೇಕಡಾ 75ಕ್ಕೆ ತಲುಪಲಿದೆ.
ನಿರ್ಬಂಧಗಳ ಹೊರತಾಗಿಯೂ ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ಶೇಕಡಾ 500ರಷ್ಟು ಸುಂಕ ವಿಧಿಸುವ ಮಸೂದೆಗೆ ಸಂಬಂಧಿಸಿದ ಭೀತಿಯೂ ಇದೆ. ಭಾರತ, ಚೀನಾ ಮತ್ತು ಬ್ರೆಜಿಲ್ನಂತಹ ದೇಶಗಳನ್ನು ಗುರಿಯಾಗಿಸಿಕೊಂಡ ಈ ಮಸೂದೆಯನ್ನು ಟ್ರಂಪ್ ಈಗಾಗಲೇ ಅನುಮೋದಿಸಿದ್ದಾರೆ.
ಭಾರತವು ಟೆಹ್ರಾನ್ ನೊಂದಿಗೆ ದೀರ್ಘಕಾಲದ ವ್ಯಾಪಾರ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಹೊಂದಿದೆ. ಇದರಲ್ಲಿ ಇಂಧನ ಆಮದುಗಳು ಹಾಗೂ ಪಾಕಿಸ್ತಾನವನ್ನು ಬೈಪಾಸ್ ಮಾಡುವ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಭಾರತದ ಹೆಬ್ಬಾಗಿಲು ಎಂದು ಪರಿಗಣಿಸಲಾದ ಕಾರ್ಯತಂತ್ರದ ಪ್ರಮುಖ ಯೋಜನೆಯಾದ ಚಬಹಾರ್ ಬಂದರಿನ ಅಭಿವೃದ್ಧಿಯೂ ಸೇರಿವೆ.
ಚೀನಾ ಇರಾನ್ನ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದರೂ, ಟ್ರಂಪ್ ಅವರ ಈ ನಡೆ ವ್ಯಾಪಾರವನ್ನು ಮೀರಿ ಭಾರತಕ್ಕೂ ಪರಿಣಾಮಗಳನ್ನು ಬೀರುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ವ್ಯಾಪಾರ ಒಪ್ಪಂದದ ಕುರಿತು ಭಾರತ ಮತ್ತು ಅಮೆರಿಕ ಅಧಿಕಾರಿಗಳು ಮತ್ತೊಂದು ಸುತ್ತಿನ ಮಾತುಕತೆಗೆ ಕುಳಿತುಕೊಳ್ಳುವ ಕೆಲವೇ ಗಂಟೆಗಳ ಮೊದಲು ಟ್ರಂಪ್ ಈ ಘೋಷಣೆಗಳನ್ನು ಮಾಡಿದ್ದಾರೆ. ಈ ನಡುವೆ, ಹೊಸ ಸುಂಕ ಘೋಷಣೆಯನ್ನು ಭಾರತವು ವ್ಯಾಪಾರ ಒಪ್ಪಂದದ ಕುರಿತ ಅಮೆರಿಕದ ನಿಯಮಗಳಿಗೆ ಒಪ್ಪಿಗೆ ನೀಡುವಂತೆ ಮಾಡುವ ಮತ್ತೊಂದು ಒತ್ತಡ ತಂತ್ರವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತ–ಇರಾನ್ ವ್ಯಾಪಾರ ಸಂಬಂಧ
ಇರಾನ್-ಸಂಬಂಧಿತ ಸುಂಕವು ಭಾರತದ ಮೇಲೆ ಈಗಾಗಲೇ ಇರುವ ವ್ಯಾಪಾರ ಒತ್ತಡಗಳನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಮೊದಲೇ ಹೇಳಿದಂತೆ, ಭಾರತವು ಇರಾನ್ ನ ಅಗ್ರ ಐದು ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ.
ಸರ್ಕಾರಿ ಮಾಹಿತಿಯ ಪ್ರಕಾರ, 2024–25ರಲ್ಲಿ ಭಾರತ ಮತ್ತು ಇರಾನ್ ನಡುವಿನ ಒಟ್ಟು ವ್ಯಾಪಾರ 1.68 ಬಿಲಿಯನ್ ಡಾಲರ್ (ಸುಮಾರು 14,000 ಕೋಟಿ ರೂ.) ಆಗಿತ್ತು. ಭಾರತವು 1.24 ಬಿಲಿಯನ್ ಡಾಲರ್ (10,000 ಕೋಟಿ ರೂ.) ಮೌಲ್ಯದ ಸರಕುಗಳನ್ನು ರಫ್ತು ಮಾಡಿದ್ದರೆ, 440 ಮಿಲಿಯನ್ ಡಾಲರ್ (3,700 ಕೋಟಿ ರೂ.) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತ್ತು. ಆದರೆ, ಟ್ರಂಪ್ ಆಡಳಿತದ ನಿರ್ಬಂಧಗಳ ಹಿನ್ನೆಲೆಯಲ್ಲಿ 2019ರಲ್ಲಿ ಭಾರತ ಇರಾನ್ ನಿಂದ ತೈಲ ಆಮದು ನಿಲ್ಲಿಸಿದ ನಂತರ, ಭಾರತ–ಇರಾನ್ ವ್ಯಾಪಾರವು ತೀವ್ರವಾಗಿ ಕುಸಿದಿದೆ. 2019ರಿಂದ ಟೆಹ್ರಾನ್ನೊಂದಿಗಿನ ಭಾರತದ ವ್ಯಾಪಾರ ಶೇಕಡಾ 87ರಷ್ಟು ಇಳಿಕೆಯಾಗಿದ್ದು, 17.6 ಬಿಲಿಯನ್ ಡಾಲರ್ (ಸುಮಾರು 1.5 ಲಕ್ಷ ಕೋಟಿ ರೂ.) ಇಂದ 2024ರಲ್ಲಿ 2.3 ಬಿಲಿಯನ್ ಡಾಲರ್ (19,100 ಕೋಟಿ ರೂ.) ಗೆ ಕುಸಿದಿದೆ.
ಭಾರತವು ಇರಾನ್ ಗೆ ರಫ್ತು ಮಾಡುವ ಪ್ರಮುಖ ವಸ್ತುಗಳಲ್ಲಿ ಸಾವಯವ ರಾಸಾಯನಿಕಗಳು, ಬಾಸ್ಮತಿ ಅಕ್ಕಿ, ಚಹಾ, ಸಕ್ಕರೆ, ಔಷಧೀಯ ವಸ್ತುಗಳು, ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ಮಾಂಸ ಉತ್ಪನ್ನಗಳು ಸೇರಿವೆ. ಇರಾನ್ ಭಾರತೀಯ ಬಾಸ್ಮತಿ ಅಕ್ಕಿಗೆ ಪ್ರಮುಖ ವಿದೇಶಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಹೊಸ ಸುಂಕಗಳು ಬಾಸ್ಮತಿ ರಫ್ತಿಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಪ್ರಮುಖ ಆಮದುಗಳಲ್ಲಿ ಮೆಥನಾಲ್, ಪೆಟ್ರೋಲಿಯಂ ಬಿಟುಮೆನ್, ದ್ರವೀಕೃತ ಪ್ರೊಪೇನ್, ಸೇಬುಗಳು, ಖರ್ಜೂರ ಮತ್ತು ರಾಸಾಯನಿಕಗಳು ಸೇರಿವೆ.
ಟ್ರೇಡಿಂಗ್ ಎಕನಾಮಿಕ್ಸ್ ವರದಿಯ ಪ್ರಕಾರ, 2024ರಲ್ಲಿ ಭಾರತವು ಇರಾನ್ಗೆ ಮಾಡಿದ ರಫ್ತಿನಲ್ಲಿ ಧಾನ್ಯಗಳು 698.51 ಮಿಲಿಯನ್ ಡಾಲರ್ನಷ್ಟು ದೊಡ್ಡ ಪಾಲು ಹೊಂದಿದ್ದವು. ಟೆಹ್ರಾನ್ನಿಂದ ಭಾರತದ ಆಮದಿನಲ್ಲಿ ಸಾವಯವ ರಾಸಾಯನಿಕಗಳು 512.92 ಮಿಲಿಯನ್ ಡಾಲರ್ನಷ್ಟು ಪ್ರಮುಖ ಪಾಲನ್ನು ಹೊಂದಿದ್ದವು. ಇತರ ಪ್ರಮುಖ ರಫ್ತುಗಳಲ್ಲಿ ಆಹಾರ ಉದ್ಯಮದ ತ್ಯಾಜ್ಯ ಮತ್ತು ಪಶುಮೇವು (149.49 ಮಿಲಿಯನ್ ಡಾಲರ್), ಕಾಫಿ, ಚಹಾ ಮತ್ತು ಮಸಾಲೆಗಳು (73.93 ಮಿಲಿಯನ್ ಡಾಲರ್), ಹಣ್ಣುಗಳು, ಬೀಜಗಳು, ಸಿಟ್ರಸ್ ಹಣ್ಣಿನ ಸಿಪ್ಪೆಗಳು ಮತ್ತು ಕಲ್ಲಂಗಡಿ (66.12 ಮಿಲಿಯನ್ ಡಾಲರ್), ಹಾಗೂ ಯಂತ್ರೋಪಕರಣಗಳು, ಪರಮಾಣು ರಿಯಾಕ್ಟರ್ಗಳು ಮತ್ತು ಬಾಯ್ಲರ್ಗಳು (32.65 ಮಿಲಿಯನ್ ಡಾಲರ್) ಸೇರಿವೆ.
ಯುಎಸ್ ಸುಂಕದ ನಿರಂತರ ಜಾರಿಯು ಭಾರತೀಯ ಕಂಪೆನಿಗಳನ್ನು ಅಮೆರಿಕ ಮಾರುಕಟ್ಟೆಗೆ ಪ್ರವೇಶವನ್ನು ಉಳಿಸಿಕೊಳ್ಳಲು ಇರಾನ್ನೊಂದಿಗಿನ ವ್ಯವಹಾರಗಳನ್ನು ಕಡಿಮೆ ಮಾಡಲು ಒತ್ತಾಯಿಸಬಹುದು. ಇದರಿಂದ ರಾಸಾಯನಿಕ, ಕೃಷಿ ಮತ್ತು ಔಷಧೀಯ ಉತ್ಪನ್ನಗಳ ರಫ್ತುದಾರರಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
ಇದು ಚಬಹಾರ್ ಬಂದರಿನ ಮೇಲೆ ಪರಿಣಾಮ ಬೀರುತ್ತದೆಯೇ?
ಭಾರತ–ಇರಾನ್ ಸಂಬಂಧಗಳ ಪ್ರಮುಖ ಕೇಂದ್ರವೇ ಚಬಹಾರ್ ಬಂದರು. ಇಲ್ಲಿ ಭಾರತ ಶಾಹಿದ್ ಬೆಹೆಶ್ತಿ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಸದ್ಯಕ್ಕೆ, ಅಮೆರಿಕದ ಹೊಸ ಸುಂಕವು ಬಂದರಿನ ಅಭಿವೃದ್ಧಿಯ ಮೇಲೆ ಯಾವುದೇ ನೇರ ಪರಿಣಾಮ ಬೀರುವ ಸಾಧ್ಯತೆ ಕಾಣಿಸುವುದಿಲ್ಲ.
ಕಳೆದ ವರ್ಷ ಇರಾನ್ನ ಚಬಹಾರ್ ಬಂದರಿನ ವಿರುದ್ಧ ಅಮೆರಿಕ ಹೇರಿದ್ದ ನಿರ್ಬಂಧಗಳಿಂದ ಆರು ತಿಂಗಳ ವಿನಾಯಿತಿಯನ್ನು ಭಾರತ ಪಡೆಯಲು ಯಶಸ್ವಿಯಾಗಿತ್ತು. ಈ ವಿನಾಯಿತಿ ಏಪ್ರಿಲ್ 29ರಂದು ಮುಕ್ತಾಯಗೊಳ್ಳಲಿದೆ. ಟ್ರಂಪ್ ಆಡಳಿತವು 2018ರಲ್ಲಿ ಮೊದಲು ನೀಡಿದ್ದ ವಿನಾಯಿತಿಯನ್ನು ರದ್ದುಪಡಿಸಿದ ನಂತರ, ಈ ವಿನಾಯಿತಿಯನ್ನು ಸೆಪ್ಟೆಂಬರ್ 2025ರಲ್ಲಿ ಹಿಂತೆಗೆದುಕೊಳ್ಳಲಾಯಿತು.
ಚಬಹಾರ್ ಬಂದರು ಭಾರತಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಅತಿ ದೊಡ್ಡ ಮತ್ತು ಭಾರವಾದ ಹಡಗುಗಳನ್ನು ನಿರ್ವಹಿಸಬಲ್ಲ ಈ ಆಳವಾದ ನೀರಿನ ಬಂದರು ಓಮನ್ ಕೊಲ್ಲಿಯ ಸಮೀಪದಲ್ಲಿದ್ದು, ಮಧ್ಯಪ್ರಾಚ್ಯವನ್ನು ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕ ಮಾರುಕಟ್ಟೆಗಳಿಗೆ ಸಂಪರ್ಕಿಸುವ ಪ್ರಮುಖ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮುಖಭಾಗದಲ್ಲಿದೆ.
ನಿರ್ಣಾಯಕವಾಗಿ, ಈ ಬಂದರು ಪಾಕಿಸ್ತಾನವನ್ನು ಬೈಪಾಸ್ ಮಾಡಿ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ಮಾರುಕಟ್ಟೆಗಳನ್ನು ಪ್ರವೇಶಿಸಲು ಭಾರತಕ್ಕೆ ಸಹಕಾರ ನೀಡುತ್ತದೆ. ಜೊತೆಗೆ, ಪಾಕಿಸ್ತಾನದ ಗ್ವಾದರ್ ಬಂದರಿಗೆ ಭಾರತದ ಪ್ರತಿಯಾಗಿ ಚಬಹಾರ್ ಬಂದರನ್ನು ನೋಡಲಾಗುತ್ತದೆ. ಅಲ್ಲಿ ಚೀನಾ ಭಾರೀ ಹೂಡಿಕೆ ಮಾಡಿ ಅರೇಬಿಯನ್ ಸಮುದ್ರಕ್ಕೆ ಪ್ರವೇಶ ಪಡೆದುಕೊಳ್ಳುತ್ತಿದೆ. ಚಬಹಾರ್ ಮೂಲಕ ಪರ್ಷಿಯನ್ ಕೊಲ್ಲಿಯಲ್ಲಿ ಚೀನಾದ ಚಟುವಟಿಕೆಗಳ ಮೇಲೆ ಭಾರತ ನಿಗಾ ವಹಿಸಬಹುದು.
ಇರಾನ್ ನಲ್ಲಿ ಪ್ರತಿಭಟನೆ ತೀವ್ರ
ಸರ್ಕಾರ ಇಂಟರ್ನೆಟ್ ಮತ್ತು ದೂರವಾಣಿ ಜಾಲಗಳನ್ನು ಸ್ಥಗಿತಗೊಳಿಸಿದ್ದರೂ, ದುರ್ಬಲ ಆರ್ಥಿಕತೆಯಿಂದ ಪ್ರಚೋದಿತ ಹಿಂಸಾತ್ಮಕ ಪ್ರತಿಭಟನೆಗಳು ಇರಾನ್ ನಲ್ಲಿ ಮುಂದುವರಿದಿವೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಇರಾನ್ನ ಪರಮಾಣು ಕಾರ್ಯಕ್ರಮದ ಮೇಲೆ ವಿಶ್ವಸಂಸ್ಥೆ ಮತ್ತೆ ನಿರ್ಬಂಧಗಳನ್ನು ಹೇರಿದ ನಂತರ ಆರ್ಥಿಕ ಒತ್ತಡ ತೀವ್ರಗೊಂಡಿದ್ದು, ದೇಶದ ಕರೆನ್ಸಿ ರಿಯಾಲ್ ಕುಸಿತಕ್ಕೊಳಗಾಗಿದೆ.
ಈ ಪ್ರತಿಭಟನೆಗಳಲ್ಲಿ ಸಾವಿಗೀಡಾದವರ ಸಂಖ್ಯೆ ಕನಿಷ್ಠ 646 ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಹಿಂಸಾಚಾರದ ನಿಖರ ಮಾಹಿತಿಯನ್ನು ವರದಿ ಮಾಡುವ ಯುಎಸ್ ಮೂಲದ HRANA ಸಂಸ್ಥೆ, ಇರಾನ್ನಲ್ಲಿರುವ ತನ್ನ ಬೆಂಬಲಿಗರ ಮಾಹಿತಿಯನ್ನು ಆಧರಿಸಿ ಈ ಅಂಕಿಅಂಶಗಳನ್ನು ನೀಡಿದೆ. ಸಾವಿಗೀಡಾದವರಲ್ಲಿ 512 ಮಂದಿ ಪ್ರತಿಭಟನಾಕಾರರು ಹಾಗೂ 132 ಮಂದಿ ಭದ್ರತಾ ಪಡೆ ಸದಸ್ಯರು ಎಂದು ಅದು ಹೇಳಿದೆ.
ಕಳೆದ ಎರಡು ವಾರಗಳಲ್ಲಿ ಪ್ರತಿಭಟನೆಗಳಿಗೆ ಸಂಬಂಧಿಸಿ 10,700ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅದು ತಿಳಿಸಿದೆ.







