ಅನ್ನದೊಳಗೆ ಭೇದ ಬೇಡ

NHFS- 5 ರ ಸಮೀಕ್ಷೆಯ ವರದಿಗಳು ಹೇಳುವಂತೆ ಹೆಚ್ಚು ಸಸ್ಯಾಹಾರವಿರುವ ಪಶ್ಚಿಮ ಭಾರತ ಅದರಲ್ಲೂ ಗುಜರಾತಿನಲ್ಲಿ ಅಪೌಷ್ಟಿಕತೆಯ ಸಮಸ್ಯೆ ತೀವ್ರವಾಗಿದೆ.
ಗುಜರಾತಿನ ಶೇ. 82 ರಷ್ಟು ಗ್ರಾಮೀಣ ಭಾಗದ ಮಕ್ಕಳಲ್ಲಿ ಹಿಮೊಗ್ಲೋಬಿನ್ ಮಟ್ಟ 11 ಕ್ಕಿಂತ ಕಡಿಮೆ ಇದೆ. ನಮ್ಮಲ್ಲಿ ಶೇ. 65.5 ಮಕ್ಕಳು ಹಿಮೊಗ್ಲೋಬಿನ್ ಕೊರತೆಯಿಂದ ಒದ್ದಾಡುತ್ತಿದ್ದಾರೆ. ಕೇರಳದಲ್ಲಿ ಇದರ ಪ್ರಮಾಣ ಶೇ. 39.4 ರಷ್ಟಿದೆ.
15-49 ವರ್ಷದ ಹೆಣ್ಣು ಮಕ್ಕಳಲ್ಲಿ ಅನೀಮಿಯ ಸಮಸ್ಯೆ ಗುಜರಾತಿನಲ್ಲಿ ಶೇ. 65 ರಷ್ಟಿದೆ. ಕರ್ನಾಟಕದ ಶೇ. 47 ರಷ್ಟು ಹೆಣ್ಣು ಮಕ್ಕಳು ಅನೀಮಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೇರಳದಲ್ಲಿ ಇದರ ಪ್ರಮಾಣ ಶೇ.36 ರಷ್ಟಿದೆ.
ಹೀಗಿದ್ದಾಗ ನಾವು ನಮ್ಮ ನಾಡುಗಳನ್ನು ಜಗತ್ತಿನ ಎದುರು ಸ್ಪರ್ಧೆಗೆ ನಿಲ್ಲಿಸುವುದು ಹೇಗೆ?
ಮಾಂಸಾಹಾರವಿಲ್ಲದೆ ಊಟವೆ ಇಲ್ಲ ಎಂದು ಬದುಕುವ ಪಶ್ಚಿಮ ಮತ್ತು ಪೂರ್ವದ ದೇಶಗಳು ಜ್ಞಾನ ವಿಜ್ಞಾನಗಳನ್ನು ಸಂಪೂರ್ಣ ಕಬ್ಜಾ ಮಾಡಿಕೊಂಡು ಕೂತಿವೆ. ಪ್ರತೀ ವರ್ಷ ಪ್ರಕಟಗೊಳ್ಳುವ ನೊಬೆಲ್ ಪ್ರಶಸ್ತಿಗಳು ಹತ್ತತ್ತಿರ ಶೇ.100 ರಷ್ಟು ಮಾಂಸಾಹಾರಿ ದೇಶಗಳಿಗೆ ಹೋಗುತ್ತಿವೆ. ಅವರು ಕರುಣೆ, ದಯೆ, ಬುದ್ಧಿ, ಕೌಶಲ್ಯಗಳಲ್ಲಿ ಅಪಾರವಾದುದನ್ನು ಸಾಧಿಸಿದ್ದಾರೆ.
ಹಾಗಾಗಿ ಆಹಾರದಲ್ಲಿ ತಾಮಸ, ಸಾತ್ವಿಕ ಅಂತೆಲ್ಲ ಇಲ್ಲ. ಅನ್ನದೊಳಗೆ ಭೆೇದವೆಣಿಸಿದ್ದು ಮನುಷ್ಯತ್ವವೂ ಅಲ್ಲ. ವಿಜ್ಞಾನತ್ವವೂ ಅಲ್ಲ. ಬುದ್ಧ ಅಹಿಂಸೆಯ ಕುರಿತು ಮಾತನಾಡಿದ್ದಕ್ಕೆ ಕಾರಣ; ಕಾಲವು ಒತ್ತಾಯಿಸಿದ ರಾಜಕೀಯ, ಸಾಮಾಜಿಕ ಒತ್ತಡದ ಪರಿಣಾಮ. ಬುದ್ಧನ ಈ ಪ್ರಮೇಯವನ್ನು ಸೋಲಿಸಲು ಮಾಡಿದ ಕೆಲಸ ಅದನ್ನು ವಿರೋಧಿಸಿದ್ದಲ್ಲ. ಬದಲಾಗಿ ಆ ತತ್ವವನ್ನು ಕ್ರೂ ಡಾಗಿ ತನ್ನದನ್ನಾಗಿ ಮಾಡಿಕೊಂಡಿದ್ದು.
ಪ್ರಮೇಯ ಮತ್ತು ಪ್ರತಿಮೆಗಳ ಕಬ್ಜಾತನದಲ್ಲಿ ಈ ದೇಶದ ಸಮುದಾಯಗಳ ಸೋಲು- ಗೆಲುವುಗಳು ತೀರ್ಮಾನವಾಗಿ ಹೋಗಿವೆ.
ಹಾಗಾಗಿ ಬಲಿಷ್ಠ ದೇಹ, ಬಲಿಷ್ಠ ಮನಸ್ಸು ಅಥವಾ ಮೆದುಳು ಮುಖ್ಯ, ಇಲ್ಲದಿದ್ದರೆ ಉದ್ಧಾರವಾಗುವುದು ಹೇಗೆ ಎಂದ ಸ್ವಾಮಿ ವಿವೇಕಾನಂದರ ಮಾತು ಇವತ್ತಿಗೆ ಪ್ರಸ್ತುತ.
ಸಮಾಜಗಳು ಇದರ ಕುರಿತು ಯೋಚಿಸಬೇಕು.
ಸಮರ್ಪಕ ಅನ್ನ, ಸಂಪೂರ್ಣ ಜ್ಞಾನಗಳು ನಮ್ಮನ್ನು ಬಿಡುಗಡೆಗೊಳಿಸುತ್ತವೆ. ವಿಶ್ವ ಸಮುದಾಯದ ಜೊತೆ ಹೆಗಲಿಗೆ ಹೆಗಲು ತಾಕಿಸಿ ನಡೆಯುವಂತೆ ಮಾಡುತ್ತವೆ.
ಸ್ವಾರ್ಥ ಬಿಟ್ಟು ಉದಾರವಾಗಬೇಕು. ಇಲ್ಲದಿದ್ದರೆ ನಾಶವಾಗಲು ಸಿದ್ಧರಾಗಬೇಕು.







