ಏಮ್ಸ್ ಸ್ಥಾಪನೆಯಿಂದ ಅತ್ಯಾಧುನಿಕ ಆರೋಗ್ಯ ಸೇವೆ :ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

ಡಾ.ಶರಣ ಪ್ರಕಾಶ್ ಪಾಟೀಲ್
ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈಗಾಗಲ್ಲೇ ಕ್ಯಾನ್ಸರ್ ಘಟಕವನ್ನು ಪ್ರಾರಂಭಿಸಿ ಮೆಡಿಕಲ್ ಆಂಕಾಲಜಿ ಹಾಗೂ ಸರ್ಜಿಕಲ್ ಆಂಕಾಲಜಿ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ, ಈ ಭಾಗದ ಬಡ ಜನರು ಚಿಕಿತ್ಸೆಗಾಗಿ ಹೈದರಾಬಾದ್, ಬೆಂಗಳೂರಿಗೆ ಹೋಗುವ ಸಂಕಷ್ಟ ತಪ್ಪಿದೆ. ಕ್ಯಾನ್ಸರ್ಗೆ ಸಂಬಂದಪಟ್ಟ ಶಸ್ತ್ರ ಚಿಕಿತ್ಸೆಗಳು, ಕಿಮಿಯೋಥೆರಪಿ ಸೌಲಭ್ಯ ಲಭ್ಯವಿದೆ. ಅಲ್ಲದೇ, ಔಷಧಿಗಳನ್ನು ಈ ಆಸ್ಪತ್ರೆಯಲ್ಲಿಯೆ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಎಲ್ಲ ಚಿಕಿತ್ಸೆಗಳು ಉಚಿತವಾಗಿ ನೀಡಲಾಗುತ್ತಿದೆ. ಇದೇ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಆರಂಭವಾಗಿರುವುದರಿಂದ ಬಡವರಿಗೆ ಅನುಕೂಲವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿರುವ ವಿಶೇಷ
ಸಂದರ್ಶನದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
► ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎರಡೂವರೆ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಯಾವುವು?
ಶರಣ ಪ್ರಕಾಶ್ ಪಾಟೀಲ್: ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಆರಂಭ, ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಆವರಣದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಫೆರಿಫರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಲಾಗುತ್ತಿದೆ. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ನಗರದಲ್ಲಿ ಸುಸಜ್ಜಿತ
ವಾದ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಾಯಚೂರು ಮತ್ತು ಸಿಂಧನೂರು ತಾಲೂಕುಗಳಲ್ಲಿ ಜಿಟಿಟಿಸಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ಜಿಲ್ಲೆಯಲ್ಲಿ ಮೆಗಾ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇರ್ನ್ಫಾಮೇಷನ್ ಟೆಕ್ನಾಲಜಿ ಕಟ್ಟಡದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
► ರಾಯಚೂರು ಜಿಲ್ಲೆಗೆ ಏಮ್ಸ್ ಸಿಗಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಈ ನಿಟ್ಟಿನಲ್ಲಿ ನಿಮ್ಮ ಮುಂದಿನ ನಡೆ ಏನು?
ಶರಣ ಪ್ರಕಾಶ್ ಪಾಟೀಲ್: ಏಮ್ಸ್ ಸ್ಥಾಪನೆಗೆ ಬೇಕಾದ ಎಲ್ಲಾ ದಾಖಲೆಗಳು, ವರದಿಗಳು ಮತ್ತು ತಾಂತ್ರಿಕ ಪ್ರಸ್ತಾವನೆಗಳನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಈಗಾಗಲೇ ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ರಾಜ್ಯ ಸರಕಾರವೂ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಬೆಂಬಲ ಸೂಚಿಸಿದೆ. ಆದರೆ ಅಂತಿಮ ಅನುಮೋದನೆ ನೀಡಬೇಕಿರುವ ಕೇಂದ್ರ ಸರಕಾರದಿಂದ ಇನ್ನೂ ಒಪ್ಪಿಗೆ ಬಂದಿಲ್ಲ. ಈ ಉದ್ದೇಶಕ್ಕಾಗಿ ನಮ್ಮ ಜಿಲ್ಲೆಯ ಹೋರಾಟ
ಗಾರರು, ಆರೋಗ್ಯ ವೃಂದದವರು ಹಾಗೂ ರಾಜಕಾರಣಿಗಳು ಏಮ್ಸ್ ಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.
► ರಾಯಚೂರು ಜಿಲ್ಲೆಯಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಯಾವ ಯೋಜನೆಗಳನ್ನು ರೂಪಿಸಲಾಗಿದೆ?
ಶರಣ ಪ್ರಕಾಶ್ ಪಾಟೀಲ್: ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ 29 ಅಂಶಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಸೆಸೆಲ್ಸಿ ಮಕ್ಕಳಿಗೆ, ಎಸ್ಸಿ, ಎಸ್ಟಿಹಾಗೂ ಇತರ ಸಮುದಾಯಗಳ ಹೆಣ್ಣು ಮಕ್ಕಳಿಗೆ ಶುಲ್ಕ ಮರುಪಾವತಿ ಮಾಡಲಾಗುತ್ತಿದೆ. ಶಾಲೆಗಳಿಗೆ ಅಗತ್ಯ
ವಿರುವ ಡೆಸ್ಕ್, ಗಣಕಯಂತ್ರಗಳು, ಸ್ಮಾರ್ಟ್ ಕ್ಲಾಸ್ಗಳಿಗೆ ಅಗತ್ಯವಿರುವ ಸೌಲಭ್ಯಗಳು, ಕೆಪಿಎಸ್ ಶಾಲೆಗಳ ಸ್ಥಾಪನೆ, ಎನ್ಎಸ್ಕ್ಯೂಎಫ್, ಇಸಿಸಿಇ ದ್ವಿಭಾಷಾ
ವಿಶೇಷ ತರಗತಿ, ವಿಜ್ಞಾನ ಉಪಕರಣಗಳನ್ನು ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಡಯಟ್ ವತಿಯಿಂದ ಶಿಕ್ಷಕರಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಖಾಲಿರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸರಕಾರಿ ಶಾಲಾ ವಿದ್ಯಾರ್ಥಿ ಗಳಿಗೆ ಸಮವಸ್ತ್ರ, ಶೂ, ಸಾಕ್ಸ್, ಅಕ್ಷರದಾಸೋಹ ಯೋಜನೆ ಯಡಿ ಬಿಸಿಯೂಟ, ಕ್ಷೀರಭಾಗ್ಯ, ಬಾಳೆಹಣ್ಣು, ಮೊಟ್ಟೆ, ಚಿಕ್ಕಿ ಇತ್ಯಾದಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜಿಲ್ಲೆಗೆ ಎಂಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೊಸದಾಗಿ ಮಂಜೂರಾಗಿವೆ. ನಾಲ್ಕು ಸಮುದಾಯ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಯಿಂದ 50 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಸಿಂಧನೂರು ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯಿಂದ 200 ಹಾಸಿಗೆಯ ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಸಮು ದಾಯ ಆರೋಗ್ಯ ಕೇಂದ್ರ ವನ್ನು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕ್ರಮವಾಗಿ ರಾಯಚೂರು ಮತ್ತು ಮಾನ್ವಿ ತಾಲೂಕಿ ನಲ್ಲಿ ಪ್ರಾರಂಭಿಸಲಾ ಗುವುದು. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 50 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುಷ್ಮಾನ್ ಆರೋಗ್ಯ ಕೇಂದ್ರಗಳು, 7 ನಗರ ಆರೋಗ್ಯ ಕೇಂದ್ರಗಳು, 19 ನಮ್ಮ ಕ್ಲಿನಿಕ್ಗಳು, ಕಾರ್ಯನಿರ್ವಹಿಸುತ್ತಿವೆ.
ಪ್ರತಿ ತಾಲೂಕಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರಾಯಚೂರು, ಮಾನ್ವಿ, ಸಿಂಧನೂರಿನಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲಾಗಿದ್ದು, ಲಿಂಗಸುಗೂರು ತಾಲೂಕಿನಲ್ಲಿ 100 ಹಾಸಿಗೆಯುಳ್ಳ ತಾಯಿ ಮಕ್ಕಳ ಆಸ್ಪತ್ರೆಯನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದು. ದೇವದುರ್ಗ ತಾಲೂಕಿನಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿದೆ. ಗುತ್ತಿಗೆ ಆಧಾರದ ಮೇಲೆ 30 ಜನ ಎಂಬಿಬಿಎಸ್ ವೈದ್ಯರು ಮತ್ತು 15 ಜನ ವಿವಿಧ ತಜ್ಞ ವೈದ್ಯರನ್ನು ನೇಮಕ ಮಾಡಲಾಗಿದೆ.
► ಓಪೆಕ್ ಆಸ್ಪತ್ರೆಯ ಪುನಶ್ಚತನಕ್ಕೆ ಕೈಗೊಂಡಿರುವ ಕ್ರಮಗಳೇನು? ಪುಟ್ಟಪರ್ತಿಯ ಸತ್ಯಸಾಯಿ ಸಂಸ್ಥೆ ಈ ಆಸ್ಪತ್ರೆಯನ್ನು ನಿರ್ವಹಿಸುವ ಸಂಬಂಧ ಮಾತುಕತೆ ನಡೆದಿದೆಯೇ?
ಶರಣ ಪ್ರಕಾಶ್ ಪಾಟೀಲ್: ಓಪೆಕ್ ಆಸ್ಪತ್ರೆಯ ಪುನಶ್ಚೇತನಕ್ಕೆ ಹಾಗೂ ಆಸ್ಪತ್ರೆಯ ಮುಂಭಾಗ, ಹೊರ ಮತ್ತು ಒಳರೋಗಿಗಳ ವಿಭಾಗ, ಓಪಿಡಿಗಳ ವಿಭಾಗ ಸೇರಿದಂತೆ ಆಸ್ಪತ್ರೆಯ ಒಳ ಆವರಣವನ್ನು ನವೀಕರಿಸಲು 7 ಕಾಮಗಾರಿಗಳು ಪ್ರಾರಂಭವಾಗಿದ್ದು, ಅದರಲ್ಲಿ 5 ಕಾಮಗಾರಿಗಳು ಪೂರ್ಣಗೊಂಡಿವೆ, 2 ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಜತೆಗೆ ಕಳೆದ ಎರಡೂವರೆ ವರ್ಷಗಳಲ್ಲಿ ಬೆಲೆ ಬಾಳುವ ಉಪಕರಣಗಳನ್ನು ಸಂಬಂಧಪಟ್ಟ ವಿಭಾಗದಲ್ಲಿ ಅಳವಡಿಸಲಾಗುತ್ತಿದೆ.
► ರಾಯಚೂರು ಜಿಲ್ಲೆಯಲ್ಲಿ ಹತ್ತಿ ಹೆಚ್ಚು ಬೆಳೆಯಲಾಗುತ್ತದೆ. ಮೆಗಾ ಟೆಕ್ಸ್ಟೈಲ್ ಪಾರ್ಕ್ ನಿರ್ಮಿಸಬೇಕೆಂಬ ಬೇಡಿಕೆಗೆ ಕೇಂದ್ರ ಸರಕಾರ ಕಿವಿಗೊಡುತ್ತಿಲ್ಲ. ಹತ್ತಿ ಬೆಳೆಗಾರರ ರಕ್ಷಣೆಗೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮವೇನು?
ಶರಣ ಪ್ರಕಾಶ್ ಪಾಟೀಲ್: ಹತ್ತಿ ಬೆಳೆಗಾರರು ಹತ್ತಿಯನ್ನು ಬೆಳೆದು ಹತ್ತಿ ಗಿರಣಿಯಲ್ಲಿ ಮಾರಾಟ ಮಾಡುತ್ತಾರೆ. ಹತ್ತಿ ಬೆಳೆಗಾರರಿಗೆ ಮಾರಾಟದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಹತ್ತಿ ಗಿರಣಿಗಳನ್ನು ಸ್ಥಾಪಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಯೋಜನೆಗಳನ್ನು ನೀಡಲಾಗುತ್ತಿದೆ. ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-24 ಅಡಿ ಹೊಸದಾಗಿ ಸ್ಥಾಪಿತವಾದ ಜವಳಿ ಆಧಾರಿತ ಕೈಗಾರಿಕೆಗಳಿಗೆ ರಿಯಾಯಿತಿ ಮತ್ತು ಪ್ರೋತ್ಸಾಹ ಧನಗಳನ್ನು ಒದಗಿಸಲಾಗುವುದು. ಪ್ರಮುಖವಾಗಿ ಸಾಲ ಆಧಾರಿತ ಬಂಡವಾಳ ಹೂಡಿಕೆ ಸಹಾಯಧನ, ಬಡ್ಡಿ ಸಹಾಯಧನ, ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ರಿಯಾಯಿತಿ ಸೌಲಭ್ಯ, ಕಾರ್ಮಿಕರ ಇಎಸ್ಐ ಮತ್ತು ಇಪಿಎಫ್, ವಿದ್ಯುತ್ ಸಹಾಯಧನ ನೀಡಲಾಗುತ್ತಿದೆ. ನೇಕಾರರ ಪ್ಯಾಕೇಜ್ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವೈಯಕ್ತಿಕ ಫಲಾನುಭವಿ, ಪಾಲುದಾರಿಕೆ ಸಂಸ್ಥೆ, ಕಂಪನಿ, ಜವಳಿ ಸಹಕಾರಿ ಸಂಘ, ಸಂಸ್ಥೆಗಳು ಸ್ಥಾಪಿಸುವ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿಸಣ್ಣ (ಎಸ್ಎಮ್ಇ) ಸಂಸ್ಥೆಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಹಾಗೂ ಶೇ.15ರಷ್ಟು ಬಡ್ಡಿ ಸಹಾಯಧನ ಒದಗಿಸಲಾಗುವುದು.







