Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಡಿಎಸ್‌ಸಿ ಎ20: ಸನ್ನದ್ಧವಾದ ದೇಶೀಯ...

ಡಿಎಸ್‌ಸಿ ಎ20: ಸನ್ನದ್ಧವಾದ ದೇಶೀಯ ಮುಳುಗು ಬೆಂಬಲ ನೌಕೆ

ಗಿರೀಶ್ ಲಿಂಗಣ್ಣಗಿರೀಶ್ ಲಿಂಗಣ್ಣ21 Dec 2025 7:40 AM IST
share
ಡಿಎಸ್‌ಸಿ ಎ20: ಸನ್ನದ್ಧವಾದ ದೇಶೀಯ ಮುಳುಗು ಬೆಂಬಲ ನೌಕೆ

ಡಿಎಸ್‌ಸಿ ಎ20ಯನ್ನು ಇಂಡಿಯನ್ ರಿಜಿಸ್ಟರ್ ಆಫ್ ಶಿಪ್ಪಿಂಗ್ (ಐಆರ್‌ಎಸ್) ನಿಗದಿಪಡಿಸಿರುವ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿಯೇ ನಿರ್ಮಿಸಲಾಗಿದ್ದು, ನೌಕೆ ಗಟ್ಟಿಮುಟ್ಟಾಗಿ, ಸುರಕ್ಷಿತವಾಗಿ ಮತ್ತು ಸಮುದ್ರದಲ್ಲಿ ನಂಬಿಕಾರ್ಹವಾಗಿರುವಂತೆ ಖಾತ್ರಿಪಡಿಸಲಾಗಿದೆ.

ಭಾರತೀಯ ನೌಕಾಪಡೆ ತನ್ನ ಮೊದಲ ಡೈವಿಂಗ್ ನೆರವು ನೌಕೆಯಾದ ಡಿಎಸ್‌ಸಿ ಎ20ಯನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಿದೆ. ಈ ನೌಕೆಯನ್ನು ಕೋಲ್ಕತಾದ ತಿತಾಘರ್ ರೈಲ್ ಸಿಸ್ಟಮ್ಸ್ ಸಂಪೂರ್ಣ ದೇಶೀಯವಾಗಿ ನಿರ್ಮಿಸಿದೆ. ಈ ನೌಕೆ ನೌಕಾಪಡೆಯ ಮುಳುಗುಗಾರರಿಗೆ (ಡೈವರ್‌ಗಳು) ನೀರಿನಾಳದಲ್ಲಿ ರಕ್ಷಣಾ ಕಾರ್ಯಾಚರಣೆ, ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ನಡೆಸಲು ನೆರವಾಗುತ್ತದೆ. ಪ್ರಸ್ತುತ ನೌಕೆಯ ನಿರ್ಮಾಣದ ಮೂಲಕ ಭಾರತ ಈಗ ತಾನು ಅತ್ಯಾಧುನಿಕವಾದ ನೌಕಾ ಉಪಕರಣಗಳನ್ನು ವಿದೇಶಗಳ ಮೇಲಿನ ಅವಲಂಬನೆ ಇಲ್ಲದೆ, ದೇಶದೊಳಗೆ ತಾನೇ ತಯಾರಿಸಬಲ್ಲೆ ಎನ್ನುವುದನ್ನು ಸಾಬೀತುಪಡಿಸಿದೆ.

ನೌಕೆಯ ಅಧಿಕೃತ ಸೇರ್ಪಡೆಯ ಸಮಾರಂಭ ಡಿಸೆಂಬರ್ 16, 2025ರಂದು ಕೊಚ್ಚಿಯ ನೌಕಾನೆಲೆಯಲ್ಲಿ ನೆರವೇರಿತು. ಈ ನೌಕೆಯನ್ನು 2025ರ ಸೆಪ್ಟಂಬರ್ ತಿಂಗಳಲ್ಲೇ ನೌಕಾಪಡೆಗೆ ಪೂರೈಸಲಾಗಿತ್ತು. ಭಾರತೀಯ ರಕ್ಷಣಾ ಸಚಿವಾಲಯ ಫೆಬ್ರವರಿ 12, 2021ರಂದು ಕೋಲ್ಕತಾದ ತಿತಾಘರ್ ರೈಲ್ ಸಿಸ್ಟಮ್ಸ್ ಸಂಸ್ಥೆಯೊಡನೆ ಭಾರತೀಯ ನೌಕಾಪಡೆಯ ಬಳಕೆಗಾಗಿ ಐದು ಡೈವಿಂಗ್ ಬೆಂಬಲ ನೌಕೆಗಳನ್ನು ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಅಂದರೆ, ಡಿಎಸ್‌ಸಿ ಎ20 ಇಂತಹ ಐದು ನೌಕೆಗಳ ಪೈಕಿ ಮೊದಲನೆಯ ನೌಕೆಯಾಗಿದ್ದು, ಮುಂದಿನ ವರ್ಷಗಳಲ್ಲಿ ನಮ್ಮ ನೌಕಾಪಡೆಯ ಸಾಮರ್ಥ್ಯಗಳನ್ನು ವೃದ್ಧಿಸಲಿದೆ.

ವಿನ್ಯಾಸ ಹಂತದಲ್ಲಿ ನೌಕೆ ಎನ್‌ಎಸ್‌ಟಿಎಲ್ ವಿಶಾಖಪಟ್ಟಣಂನಲ್ಲಿ ಹಲವಾರು ಹೈಡ್ರೋಡೈನಾಮಿಕ್ ಅನಾಲಿಸಿಸ್ ಎನ್ನಲಾಗುವ ನೀರಿನ ಹರಿವಿನ ಪರೀಕ್ಷೆಗಳಿಗೆ ಒಳಗಾಗಿತ್ತು. ಅಂದರೆ, ಹಡಗು ನೀರಿನ ಮೂಲಕ ಹೇಗೆ ಸೀಳಿಕೊಂಡು ಮುಂದೆ ಸಾಗುತ್ತದೆ ಎನ್ನುವುದನ್ನು ಪರಿಶೀಲಿಸಲು, ಸಮತೋಲನ ಹೊಂದಿರುತ್ತದೆಯೇ ಮತ್ತು ಸಮುದ್ರದಲ್ಲಿ ಹೇಗೆ ಸುರಕ್ಷಿತವಾಗಿರುತ್ತದೆ ಎಂದು ಪರಿಶೀಲಿಸಲು ಕೃತಕ ಅಲೆಗಳು ಮತ್ತು ಹರಿವುಗಳನ್ನು ಸೃಷ್ಟಿಸಿ ಅದರಲ್ಲಿ ಪರೀಕ್ಷಿಸಲಾಗುತ್ತದೆ.

ಮುಳುಗು ಬೆಂಬಲ ನೌಕೆಗಳು ಅತ್ಯಂತ ಪ್ರಕ್ಷುಬ್ಧವಾದ ಸಮುದ್ರದಲ್ಲೂ ಸಂಪೂರ್ಣ ಸ್ಥಿರವಾಗಿ ನಿಲ್ಲಬೇಕಿರುವುದರಿಂದ, ಈ ಪರೀಕ್ಷೆಗಳು ಅತ್ಯಂತ ಮುಖ್ಯವಾಗಿವೆ. ಏಕೆಂದರೆ, ಮುಳುಗುಗಾರರು ನೀರಿನಾಳದಲ್ಲಿ ತಮ್ಮ ಸುರಕ್ಷತೆಗೆ ಇದೇ ನೌಕೆಯ ಮೇಲೆ ಅವಲಂಬಿತರಾಗಿರುತ್ತಾರೆ.

ಡಿಎಸ್‌ಸಿ ಎ20ಯನ್ನು ಇಂಡಿಯನ್ ರಿಜಿಸ್ಟರ್ ಆಫ್ ಶಿಪ್ಪಿಂಗ್ (ಐಆರ್‌ಎಸ್) ನಿಗದಿಪಡಿಸಿರುವ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿಯೇ ನಿರ್ಮಿಸಲಾಗಿದ್ದು, ನೌಕೆ ಗಟ್ಟಿಮುಟ್ಟಾಗಿ, ಸುರಕ್ಷಿತವಾಗಿ ಮತ್ತು ಸಮುದ್ರದಲ್ಲಿ ನಂಬಿಕಾರ್ಹವಾಗಿರುವಂತೆ ಖಾತ್ರಿಪಡಿಸಲಾಗಿದೆ.

ಡಿಎಸ್‌ಸಿ ಎ20 ಕೆಟಮರಾನ್ ವಿನ್ಯಾಸವನ್ನು ಬಳಸುತ್ತದೆ. ಅಂದರೆ, ಇದು ಎರಡು ಪ್ರತ್ಯೇಕ ಹಲ್‌ಗಳನ್ನು (ಹಲ್ ಎಂದರೆ ಹಡಗಿನ ಮುಖ್ಯ ತೇಲುವ ಭಾಗ) ಒಂದರ ಪಕ್ಕ ಒಂದರಂತೆ ಹೊಂದಿರುತ್ತದೆ. ಈ ವಿನ್ಯಾಸ ನೌಕೆಗೆ ಉತ್ತಮ ಸಮತೋಲನ ಮತ್ತು ಸಮುದ್ರದಲ್ಲಿ ಹೆಚ್ಚಿನ ಸ್ಥಿರತೆ ಒದಗಿಸುತ್ತದೆ. ಇಂತಹ ಅವಳಿ ಹಲ್ ವಿನ್ಯಾಸ ವಿಶೇಷವಾಗಿ ಡೈವಿಂಗ್ ಕಾರ್ಯಾಚರಣೆಗಳಿಗೆ ಹೆಚ್ಚು ಮುಖ್ಯವಾಗಿದ್ದು, ಇದರಿಂದ ಮುಳುಗುಗಾರರು ನೀರಿನೊಳಗೆ ಜಿಗಿಯುವಾಗ ಅಥವಾ ಮೇಲಕ್ಕೆ ಬರುವಾಗ ನೌಕೆ ಹೆಚ್ಚು ತುಯ್ದೆಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಭಾರತದ ಬಳಿ ಸಾಕಷ್ಟು ಸಾಮಾನ್ಯ ಬೋಟುಗಳು ಮತ್ತು ಹಡಗುಗಳು ಇರುವಾಗ, ಈ ವಿಶೇಷ ಡೈವಿಂಗ್‌ಗೆ ನೆರವು ನೀಡುವ ನೌಕೆಯ ಅಗತ್ಯವೇನು ಎಂದು ನಿಮಗೆ ಅನಿಸಬಹುದು. ಇದಕ್ಕೆ ಉತ್ತರ, ನೀರಿನಾಳದಲ್ಲಿ ನಡೆಸುವ ಕಾರ್ಯಾಚರಣೆಗಳಿಗೆ ಬೇಕಾಗುವ ವಿಶಿಷ್ಟ ಅವಶ್ಯಕತೆಗಳಲ್ಲಿದೆ. ಮಾಮೂಲಿ ಹಡಗುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ, ಡೈವಿಂಗ್ ಬೆಂಬಲ ನೌಕೆಗಳು ಒಂದು ರೀತಿ ತೇಲಾಡುವ ಕಾರ್ಯಾಗಾರಗಳಿದ್ದಂತೆ. ಮುಳುಗುಗಾರರು ನೀರಿನಾಳದಲ್ಲಿ ಕೆಲಸ ಮಾಡುತ್ತಿರುವಾಗ, ಈ ನೌಕೆಗಳು ಸಂಪೂರ್ಣ ನಿಶ್ಚಲವಾಗಿ ಒಂದೇ ಜಾಗದಲ್ಲಿ ಹಲವಾರು ಗಂಟೆಗಳ ಕಾಲ ನಿಂತಿರಬೇಕಾಗುತ್ತದೆ. ಇವುಗಳು ಏರ್ ಕಂಪ್ರೆಸರ್, ಸಂವಹನ ವ್ಯವಸ್ಥೆಗಳು ಮತ್ತು ಸುರಕ್ಷತಾ ಚೇಂಬರ್‌ಗಳನ್ನು ಹೊಂದಿದ್ದು, ದೈನಂದಿನ ಹಡಗುಗಳು ಅಥವಾ ನೌಕೆಗಳು ಈ ವ್ಯವಸ್ಥೆಗಳನ್ನು ಹೊಂದಿರುವುದಿಲ್ಲ. ಇವುಗಳ ನಡುವಿನ ವ್ಯತ್ಯಾಸವನ್ನು ಒಂದು ಕಾರ್ ಮತ್ತು ಆಂಬುಲೆನ್ಸ್ ನಡುವಿನ ವ್ಯತ್ಯಾಸಕ್ಕೆ ಹೋಲಿಸಬಹುದು. ಎರಡೂ ವಾಹನಗಳು ಚಕ್ರಗಳು ಮತ್ತು ಇಂಜಿನ್‌ಗಳನ್ನು ಹೊಂದಿದ್ದರೂ, ಆಂಬುಲೆನ್ಸ್ ಜೀವರಕ್ಷಕ ಉಪಕರಣಗಳನ್ನು ಹೊಂದಿ, ಕಾರಿಗಿಂತ ಸಂಪೂರ್ಣ ಭಿನ್ನವಾದ ಉದ್ದೇಶವನ್ನು ಪೂರೈಸುತ್ತದೆ.

ನೀರಿನಾಳದಲ್ಲಿ ನಡೆಸುವ ದುರಸ್ತಿ ಕಾರ್ಯಗಳಿಗೆ, ಸುರಕ್ಷತಾ ಪರಿಶೀಲನೆಗೆ, ಬಂದರು ಸ್ವಚ್ಛತಾ ಕಾರ್ಯಗಳಿಗೆ ಮತ್ತು ಕರಾವಳಿ ತೀರದಲ್ಲಿ ಪ್ರಮುಖ ಡೈವಿಂಗ್ ಕಾರ್ಯಾಚರಣೆಗಳಿಗೆ ನೆರವಾಗಲು ಈ ನೌಕೆಗೆ ಅತ್ಯಾಧುನಿಕ ಡೈವಿಂಗ್ ಉಪಕರಣಗಳನ್ನು ಅಳವಡಿಸಲಾಗಿರುತ್ತದೆ. ಡೈವಿಂಗ್ ಸಪೋರ್ಟ್ ಕ್ರಾಫ್ಟ್ (ಡಿಎಸ್‌ಸಿ) ಎ20 ಸೇರ್ಪಡೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ಭಾರತೀಯ ನೌಕಾ ಸೇನೆಯ ಭಾರತೀಯ ನಿರ್ಮಾಣದ ಹಡಗುಗಳು ಮತ್ತು ನೌಕೆಗಳನ್ನು ಹೊಂದುವ ಯೋಜನೆ ಮತ್ತು ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಯೋಜನೆಗಳಿಗೆ ಬೆಂಬಲ ಒದಗಿಸುತ್ತದೆ. ಈ ವಿಶೇಷ ನೌಕೆಯನ್ನು ಭಾರತದಲ್ಲೇ ನಿರ್ಮಿಸಿರುವುದು ಭಾರತದ ರಕ್ಷಣಾ ಉದ್ಯಮದ ಸಾಮರ್ಥ್ಯ ಹೆಚ್ಚುತ್ತಿರುವುದನ್ನು ಪ್ರದರ್ಶಿಸಿದ್ದು, ವಿದೇಶೀ ಉಪಕರಣಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ಸ್ಪಷ್ಟ ಸಂದೇಶ ನೀಡಿದೆ.

ಈ ನೌಕೆ ಎರಡು ಜನರ ರಿಕಂಪ್ರೆಶನ್ ಚೇಂಬರ್‌ಗಳನ್ನು (ಆರ್‌ಸಿಸಿ ಡೈವಿಂಗ್ ನಡೆಸಿ ಬಂದ ಬಳಿಕ, ಅಂದರೆ ನೀರಿನಾಳದಲ್ಲಿ ಅಲ್ಲ, ದೇಹದ ಒತ್ತಡವನ್ನು ಸುರಕ್ಷಿತವಾಗಿ ಸಹಜ ಸ್ಥಿತಿಗೆ ತರಲು ಬಳಕೆಯಾಗುತ್ತದೆ) ಹೊಂದಿದೆ. ಇದು ಆಳದ ಮುಳುಗುವಿಕೆ ನಡೆಸಿದ ಬಳಿಕವೂ ಸುರಕ್ಷಿತ ಚೇತರಿಕೆಯನ್ನು ಖಾತ್ರಿಪಡಿಸುತ್ತದೆ. ನೌಕಾಪಡೆಯ ಮುಳುಗುಗಾರರು 30ರಿಂದ 60 ಮೀಟರ್‌ಗಳಷ್ಟು ಆಳದಲ್ಲಿ ಕಾರ್ಯಾಚರಿಸಬಲ್ಲವರಾಗಿದ್ದು, ಇದರಿಂದ ದೀರ್ಘಾವಧಿಯ ಸುರಕ್ಷಿತ ನೀರಿನಾಳದ ಕಾರ್ಯಾಚರಣೆ ನಡೆಸಲು ಮತ್ತು ಸುಭದ್ರ ಸಾಗರ ಭದ್ರತೆ ಹೊಂದಲು ಸಾಧ್ಯವಾಗುತ್ತದೆ. ಡೈವರ್‌ಗಳು ಬಲುಬೇಗನೆ ಆಳ ಸಮುದ್ರದಿಂದ ಮೇಲೆ ಬಂದರೆ, ಆಗ ಅವರ ರಕ್ತದಲ್ಲಿ ಸಾರಜನಕದ ಗುಳ್ಳೆಗಳು ಉಂಟಾಗಿ, ಅವರಲ್ಲಿ ಗಂಭೀರ ಅಸ್ವಸ್ಥತೆ ಕಾಣಿಸಿಕೊಳ್ಳುವಂತೆ ಮಾಡಬಹುದು. ಆದರೆ, ಆರ್‌ಸಿಸಿ ವ್ಯವಸ್ಥೆ ಅವರ ದೇಹವನ್ನು ನಿಧಾನವಾಗಿ ಸಹಜ ಒತ್ತಡಕ್ಕೆ ಕರೆ ತರುವುದರಿಂದ ಇಂತಹ ಅಪಾಯಕಾರಿ ಸನ್ನಿವೇಶಗಳು ನಿರ್ಮಾಣವಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ.

ಈ ನೌಕೆ ನೀರಿನಾಳದಲ್ಲಿ ಹಡಗುಗಳ ಪರಿಶೀಲನೆ ಮತ್ತು ದುರಸ್ತಿ ನಡೆಸಬಲ್ಲದು, ಹುಡುಕಾಟ ಮತ್ತು ರಕ್ಷಣಾ ಡೈವಿಂಗ್ ನಿರ್ವಹಿಸಿ, ಬಂದರುಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಹಾನಿಗೊಳಗಾದ ವಸ್ತುಗಳನ್ನು ಶೋಧಿಸಲು ನೆರವಾಗಬಲ್ಲದು ಮತ್ತು ನೌಕಾಪಡೆಯ ಮುಳುಗುಗಾರರಿಗೆ ತರಬೇತಿ ನೀಡಲು ಸಹಾಯ ಮಾಡಬಲ್ಲದು. ಈ ನೌಕೆ ದೈನಂದಿನ ನಿರ್ವಹಣೆ ಮತ್ತು ತುರ್ತು ನೀರಿನಾಳದ ಕಾರ್ಯಗಳಿಗೆ ಬಹಳ ಮುಖ್ಯವಾಗಿದ್ದು, ಭಾರತೀಯ ನೌಕಾಪಡೆಗೆ ಎಲ್ಲ ಪರಿಸ್ಥಿತಿಗೂ ಉತ್ತಮ ಸಿದ್ಧತೆ ಹೊಂದಿರಲು ನೆರವಾಗುತ್ತದೆ. ಯಾವುದಾದರೂ ಹಡಗನ್ನು ಮರಳಿ ಡಾಕ್‌ಗೆ ತರದೆ ಅದರ ಪ್ರೊಪೆಲ್ಲರ್ ಅನ್ನು ಜೋಡಿಸುವುದಾಗಲಿ, ಮುಳುಗಿರುವ ಉಪಕರಣಗಳನ್ನು ಹುಡುಕುವುದಾಗಲಿ, ಇಂತಹ ಕಾರ್ಯಗಳನ್ನು ಡಿಎಸ್‌ಸಿ ಎ20 ವೇಗವಾಗಿ ಮತ್ತು ದಕ್ಷವಾಗಿ ನಿರ್ವಹಿಸುತ್ತದೆ. ಈ ಸಾಧನೆ ಭಾರತದ ಬೆಳೆಯುತ್ತಿರುವ ತಾಂತ್ರಿಕ ಆತ್ಮವಿಶ್ವಾಸ ಮತ್ತು ಸ್ವಾವಲಂಬಿಯಾಗಿ ರಕ್ಷಣಾ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸಿ, ನಮ್ಮ ಕರಾವಳಿಯನ್ನು ನಾವೇ ರಕ್ಷಿಸುವ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

share
ಗಿರೀಶ್ ಲಿಂಗಣ್ಣ
ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Next Story
X