ಕುಡಿಯುವ ನೀರಿನಲ್ಲಿ E. coli ಬ್ಯಾಕ್ಟೀರಿಯಾ, ಶೇ. 11 ರಷ್ಟು ನಿಲ್ದಾಣಗಳಲ್ಲಿ ಮಾತ್ರ ಮೂಲಸೌಕರ್ಯ: CAG ಕಳವಳಕ್ಕೆ ಕಾರಣವೇನು?

ಸಾಂದರ್ಭಿಕ ಚಿತ್ರ (AI)
ರೈಲ್ವೆ ನಿಲ್ದಾಣಗಳಲ್ಲಿನ ಸೌಲಭ್ಯಗಳ ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಸಿದ್ಧಪಡಿಸಿರುವ ಇತ್ತೀಚಿನ ವರದಿ ಪ್ರಯಾಣಿಕರಿಗೆ ಆತಂಕ ತರುವಂತಹ ಅಂಶಗಳನ್ನು ಬಹಿರಂಗಪಡಿಸಿದೆ. ಕುಡಿಯುವ ನೀರಿನ ಮಾದರಿಗಳಲ್ಲಿ ಇ-ಕೋಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಶೇಕಡಾ 89 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಆಸನ, ಶೌಚಾಲಯ, ಫ್ಯಾನ್ ಮತ್ತು ಸೂಚನಾ ಫಲಕಗಳಂತಹ ಒಂದಲ್ಲ ಒಂದು ಮೂಲಸೌಕರ್ಯಗಳ ಕೊರತೆಯಿದೆ. ನೈರ್ಮಲ್ಯ, ನೀರಿನ ಲಭ್ಯತೆ ಮತ್ತು ವೈದ್ಯಕೀಯ ನೆರವಿಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿವೆ. ಶೇಕಡಾ 59 ರಷ್ಟು ಪ್ರಯಾಣಿಕರ ಸೌಲಭ್ಯ ಕಾಮಗಾರಿಗಳು ವಿಳಂಬವಾಗಿವೆ ಹಾಗೂ ಇಂತಹ ಸೌಲಭ್ಯಗಳಿಗೆ ಹಂಚಿಕೆಯಾದ ಹಣ ಸರಿಯಾಗಿ ಬಳಕೆಯಾಗಿಲ್ಲ ಎಂದು ಆಗಸ್ಟ್ 12 ರಂದು ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿ ತಿಳಿಸಿದೆ. ಈ ಪರಿಶೋಧನೆಯು 2019-20 ರಿಂದ 2023-24 ರವರೆಗಿನ ಅವಧಿಯನ್ನು ಒಳಗೊಂಡಿದೆ.
ಈ ವರದಿಯ ಬೆನ್ನಲ್ಲೇ ಸಕ್ರಿಯಗೊಂಡಿರುವ ಸರ್ಕಾರ, ವಾಟರ್ ಕೂಲರ್ ಸೇರಿದಂತೆ ಸುಮಾರು 20,000 ಸ್ಥಳಗಳಲ್ಲಿ ಹೊಸ 'ಟ್ಯಾಂಕ್ ಟು ಟ್ಯಾಪ್' ನೀರು ಸೋಸುವ ವ್ಯವಸ್ಥೆಯನ್ನು ಅಳವಡಿಸುವುದು ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವಿವಾರ ನಿರ್ದೇಶನ ನೀಡಿದ್ದಾರೆ.
"ಇನ್ಮುಂದೆ ನಿಲ್ದಾಣಗಳಲ್ಲಿನ ನೀರಿನ ಗುಣಮಟ್ಟವನ್ನು ರೈಲ್ವೆ ಮಂಡಳಿಯ ಹಂತದಲ್ಲೇ ಮೇಲ್ವಿಚಾರಣೆ ಮಾಡಲಾಗುತ್ತದೆ. ನೀರಿನ ಟ್ಯಾಂಕ್ಗಳ ನಿಯಮಿತ ಸ್ವಚ್ಛತೆ ಮತ್ತು ನಿರ್ವಹಣೆ ನಡೆಯಲಿದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರಗತಿ ವರದಿ ಮತ್ತು ನೀರಿನ ಗುಣಮಟ್ಟದ ವರದಿಗಳನ್ನು ಕಾಲಕಾಲಕ್ಕೆ ಪ್ರಕಟಿಸಲಾಗುವುದು" ಎಂದು ಹಿರಿಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಎಜಿ ಕೊನೆಯ ಬಾರಿಗೆ 2016 ರಲ್ಲಿ ನಿಲ್ದಾಣಗಳಲ್ಲಿನ ಪ್ರಯಾಣಿಕರ ಸೌಲಭ್ಯಗಳ ಆಡಿಟ್ ನಡೆಸಿತ್ತು. ಸುಮಾರು ಒಂದು ದಶಕದ ನಂತರ, ತನ್ನ ಹಿಂದಿನ ವರದಿಗೆ ರೈಲ್ವೆ ಸಚಿವಾಲಯವು ಪದೇ ಪದೇ ಭರವಸೆ ನೀಡಿದ್ದರೂ ಕುಂದುಕೊರತೆಗಳು ಹಾಗೆಯೇ ಉಳಿದುಕೊಂಡಿವೆ ಎಂದು ರಾಷ್ಟ್ರೀಯ ಲೆಕ್ಕ ಪರಿಶೋಧಕ ಸಂಸ್ಥೆ ಗಮನಿಸಿದೆ. ಈ ವರದಿಯ ಪ್ರಮುಖ ಅಂಶಗಳು ಇಲ್ಲಿವೆ.
ಕನಿಷ್ಠ ಅತ್ಯಗತ್ಯ ಸೌಲಭ್ಯಗಳು:
ರೈಲ್ವೆ ನಿಲ್ದಾಣಗಳಲ್ಲಿ ಕಡ್ಡಾಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಯಮವನ್ನು ರೈಲ್ವೆ ಮಂಡಳಿಯು ಮೊದಲು 2003 ರಲ್ಲಿ ಪರಿಚಯಿಸಿತು.2018 ಎಪ್ರಿಲ್ ನಲ್ಲಿ ಇದನ್ನು ತಿದ್ದುಪಡಿ ಮಾಡಿತು. ಕುಡಿಯುವ ನೀರಿನ ನಲ್ಲಿಗಳು, ಆಸನಗಳು, ಮೂತ್ರ ವಿಸರ್ಜನೆ ಮಾಡುವ ಸ್ಥಳ, ಶೌಚಾಲಯಗಳು, ಕಾಯುವ ಕೊಠಡಿಗಳು, ವಾಟರ್ ಕೂಲರ್ಗಳು, ಫ್ಯಾನ್ಗಳು, ಗಡಿಯಾರಗಳು, ಪ್ಲಾಟ್ಫಾರ್ಮ್ ಛಾವಣಿಗಳು, ಸಾರ್ವಜನಿಕ ಧ್ವನಿವರ್ಧಕ ವ್ಯವಸ್ಥೆ, ಪಾರ್ಕಿಂಗ್ ಪ್ರದೇಶಗಳು ಮತ್ತು ಎಲೆಕ್ಟ್ರಾನಿಕ್ ರೈಲು ಸೂಚನಾ ಫಲಕಗಳು ಇದರಲ್ಲಿ ಸೇರಿವೆ. ಈ ಸೌಲಭ್ಯಗಳನ್ನು 2018 ಆಗಸ್ಟ್ 31ರ ವೇಳೆಗೆ ಎಲ್ಲಾ ನಿಲ್ದಾಣಗಳಲ್ಲಿ ಒದಗಿಸಬೇಕಿತ್ತು.
ಕನಿಷ್ಠ ಸೌಲಭ್ಯಗಳ ನಿಯಮ ಜಾರಿಯಾಗಿ ಎರಡು ದಶಕಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಪರಿಶೀಲಿಸಿದ ನಿಲ್ದಾಣಗಳಲ್ಲಿ ಶೇಕಡಾ 11 ರಷ್ಟು ನಿಲ್ದಾಣಗಳು ಮಾತ್ರ ಈ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿವೆ ಎಂದು ಸಿಎಜಿ ಕಂಡುಕೊಂಡಿದೆ. ವರ್ಷಕ್ಕೆ 710 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಮತ್ತು 1.03 ಕೋಟಿಯಿಂದ 11.47 ಕೋಟಿಯಷ್ಟು ಪ್ರಯಾಣಿಕರು ಭೇಟಿ ನೀಡುವ ಪ್ರಮುಖ ನಿಲ್ದಾಣಗಳಲ್ಲೂ ಮೂಲಸೌಕರ್ಯಗಳ ಕೊರತೆಯಿದೆ ಎಂದು ಆಡಿಟ್ ತಿಳಿಸಿದೆ. ಹೊಸದಿಲ್ಲಿ, ಹೌರಾ, ಹಜರತ್ ನಿಝಾಮುದ್ದೀನ್ ಜಂಕ್ಷನ್, ಸಿಕಂದರಾಬಾದ್, ಎಂಜಿಆರ್ ಚೆನ್ನೈ ಸೆಂಟ್ರಲ್, ಅಹಮದಾಬಾದ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಕೆಎಸ್ಆರ್ ಬೆಂಗಳೂರು, ಸೂರತ್ ಮತ್ತು ಆನಂದ್ ವಿಹಾರ್ ಟರ್ಮಿನಸ್ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿಯೂ ಈ ಕೊರತೆ ಕಂಡುಬಂದಿದೆ.
ಸಿಎಜಿ ತನ್ನ ಅಧ್ಯಯನಕ್ಕಾಗಿ ಒಟ್ಟು 512 ಉಪನಗರವಲ್ಲದ ನಿಲ್ದಾಣಗಳನ್ನು (ಒಟ್ಟು 5,900 ಕ್ಕೂ ಹೆಚ್ಚು ನಿಲ್ದಾಣಗಳ ಪೈಕಿ ಶೇ. 8.66) ಆಯ್ಕೆ ಮಾಡಿಕೊಂಡಿತ್ತು. 13 ವಲಯಗಳಲ್ಲಿ ಹರಡಿರುವ ಕೇವಲ 54 ನಿಲ್ದಾಣಗಳು (ಶೇ. 11 ಕ್ಕಿಂತ ಕಡಿಮೆ) ಮಾತ್ರ ನಿಯಮಗಳಂತೆ ಎಲ್ಲಾ ಕನಿಷ್ಠ ಅತ್ಯಗತ್ಯ ಸೌಲಭ್ಯಗಳನ್ನು ಒದಗಿಸಿವೆ ಎಂಬುದು ತಿಳಿದುಬಂದಿದೆ.
188 ನಿಲ್ದಾಣಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಕುಡಿಯುವ ನೀರಿನ ನಲ್ಲಿಗಳಿರಲಿಲ್ಲ ಮತ್ತು 21 ನಿಲ್ದಾಣಗಳಲ್ಲಿ ಕಾಯುವ ಕೊಠಡಿಗಳೇ ಇರಲಿಲ್ಲ. 111 ನಿಲ್ದಾಣಗಳಲ್ಲಿ ಮೂತ್ರವಿಸರ್ಜನೆಗೆ ನಿರ್ದಿಷ್ಟ ಸ್ಥಳ ಹಾಗೂ 59 ನಿಲ್ದಾಣಗಳಲ್ಲಿ ಶೌಚಾಲಯಗಳು ನಿಗದಿತ ಸಂಖ್ಯೆಯಲ್ಲಿರಲಿಲ್ಲ. 62 ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಛಾವಣಿಯ ವ್ಯಾಪ್ತಿಯು ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆಯಿತ್ತು. ಇನ್ನು 60 ನಿಲ್ದಾಣಗಳಲ್ಲಿ ಗಡಿಯಾರಗಳಿರಲಿಲ್ಲ, 128 ನಿಲ್ದಾಣಗಳಲ್ಲಿ ವಾಟರ್ ಕೂಲರ್ಗಳ ಸಂಖ್ಯೆ ಕಡಿಮೆಯಿತ್ತು ಹಾಗೂ 149 ನಿಲ್ದಾಣಗಳಲ್ಲಿ ನಿಯಮದಂತೆ ಕಸದ ಬುಟ್ಟಿಗಳನ್ನು ಇರಿಸಿರಲಿಲ್ಲ.
ದಿವ್ಯಾಂಗರಿಗಾಗಿ (ಅಂಗವಿಕಲರು) ಇರುವ ಸೌಲಭ್ಯಗಳಲ್ಲೂ ಭಾರೀ ಕೊರತೆಯಿದೆ ಎಂದು ಸಿಎಜಿ ವರದಿ ಮಾಡಿದೆ. ರೈಲಿಂಗ್ಗಳಿರುವ ರ್ಯಾಂಪ್ಗಳು (ಶೇ. 44), ಕಾಯ್ದಿರಿಸಿದ ಪಾರ್ಕಿಂಗ್ ಪ್ರದೇಶಗಳು (ಶೇ. 55), ಜಾರದಂತಹ ಕಾಲುದಾರಿಗಳು (ಶೇ. 32) ಮತ್ತು ಪ್ರತಿ ಪ್ಲಾಟ್ಫಾರ್ಮ್ನ ನೀರಿನ ಬೂತ್ಗಳಲ್ಲಿ ದಿವ್ಯಾಂಗರಿಗೆ ಸೂಕ್ತವಾದ ಕುಡಿಯುವ ನೀರಿನ ನಲ್ಲಿಗಳ (ಶೇ. 58) ಸೌಲಭ್ಯ ಸರಿಯಾಗಿರಲಿಲ್ಲ.
2019-20 ರಿಂದ 2023-24 ರವರೆಗಿನ ಐದು ವರ್ಷಗಳ ಅವಧಿಯಲ್ಲಿ 'ಗ್ರಾಹಕ ಸೌಲಭ್ಯಗಳಿಗಾಗಿ' ಹಂಚಿಕೆಯಾದ ಅನುದಾನದಲ್ಲಿ ಶೇಕಡಾ 36 ರಿಂದ ಶೇಕಡಾ 44 ರಷ್ಟು ಹಣ ಬಳಕೆಯಾಗದೆ ಉಳಿದಿದೆ.
ಕುಡಿಯುವ ನೀರಿನ ಗುಣಮಟ್ಟ:
ರೈಲ್ವೆ ನಿಲ್ದಾಣಗಳಲ್ಲಿನ ಪ್ರಯಾಣಿಕರ ಸೌಲಭ್ಯಗಳ ನೈರ್ಮಲ್ಯ, ಸ್ವಚ್ಛತೆ ಮತ್ತು ನಿರ್ವಹಣೆಯನ್ನು ಸಹ ಸಿಎಜಿ ಪರಿಶೀಲಿಸಿದೆ. ವಾಟರ್ ಕೂಲರ್ಗಳ ನಿರ್ವಹಣೆ, ಕಸ ತೆರವು, ಕೀಟ ಮತ್ತು ಇಲಿಗಳ ನಿಯಂತ್ರಣ ಕ್ರಮಗಳು, ಚರಂಡಿ ಅಥವಾ ಶೌಚಾಲಯಗಳಿಂದ ಹರಿಯುವ ತ್ಯಾಜ್ಯನೀರು ಹಾಗೂ ಶೌಚಾಲಯ-ಸ್ನಾನಗೃಹಗಳ ನಿರ್ವಹಣೆಯಲ್ಲಿ ಲೋಪಗಳು ಕಂಡುಬಂದಿವೆ.
ಕೊಯಮತ್ತೂರು, ಪಾಲಕ್ಕಾಡ್ ಜಂಕ್ಷನ್, ಹೈದರಾಬಾದ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಭಿವಂಡಿ ರೋಡ್, ಕಲ್ಯಾಣ್, ಲೋನಾವಾಲ ಮತ್ತು ಮಧುಪುರ ನಿಲ್ದಾಣಗಳ ವಾಟರ್ ಕೂಲರ್ಗಳಿಂದ ಸಂಗ್ರಹಿಸಿದ ನೀರಿನ ಮಾದರಿಗಳಲ್ಲಿ ಇ-ಕೋಲಿ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. 11 ವಲಯಗಳ 179 ನಿಲ್ದಾಣಗಳಲ್ಲಿ ಆರೋಗ್ಯ ಪರಿವೀಕ್ಷಕರು ಕುಡಿಯುವ ನೀರಿನ ರಾಸಾಯನಿಕ ತಪಾಸಣೆಯನ್ನು ನಡೆಸಿಲ್ಲ. 6 ವಲಯಗಳ 77 ನಿಲ್ದಾಣಗಳಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ (ವರ್ಷಕ್ಕೆ ಎರಡು ಬಾರಿ) ಈ ತಪಾಸಣೆ ನಡೆದಿಲ್ಲ ಎಂದು ಸಿಎಜಿ ವರದಿ ಹೇಳಿದೆ.
ಆಯ್ಕೆ ಮಾಡಲಾದ 512 ನಿಲ್ದಾಣಗಳಲ್ಲಿ ಯಾವುದರಲ್ಲೂ 'ಏಕರೂಪದ ಕುಡಿಯುವ ನೀರಿನ ಗುಣಮಟ್ಟದ ಮಾನದಂಡ'ಗಳಿಗೆ ಅನುಗುಣವಾಗಿ ಎಲ್ಲಾ ಮಾಪನಗಳ ತಪಾಸಣೆ ನಡೆಸಲಾಗಿಲ್ಲ ಎಂಬುದು ಆಡಿಟ್ನಲ್ಲಿ ತಿಳಿದುಬಂದಿದೆ.
ನಿಲ್ದಾಣಗಳ ನೈರ್ಮಲ್ಯ ಕಾಪಾಡಲು ರೈಲ್ವೆ ಇಲಾಖೆಯು ಪ್ರತಿವರ್ಷ ಸುಮಾರು 700 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಈ ಕುಂದುಕೊರತೆಗಳು ಹಾಗೆಯೇ ಉಳಿದುಕೊಂಡಿವೆ. ನೈರ್ಮಲ್ಯಕ್ಕಾಗಿ ಮೀಸಲಿಟ್ಟ ಬಜೆಟ್ ಅನುದಾನಕ್ಕಿಂತ 2022-23 ರಲ್ಲಿ 72.66 ಕೋಟಿ ರೂಪಾಯಿ ಮತ್ತು 2023-24 ರಲ್ಲಿ 9.20 ಕೋಟಿ ರೂಪಾಯಿ ಹೆಚ್ಚುವರಿ ಹಣ ವೆಚ್ಚ ಮಾಡಲಾಗಿದೆ.
ಕಳಪೆ ಮೇಲ್ವಿಚಾರಣೆ, ಹೆಚ್ಚುತ್ತಿರುವ ದೂರುಗಳು:
ಪ್ರಯಾಣಿಕರ ಸೌಲಭ್ಯಗಳ ಮೇಲ್ವಿಚಾರಣೆ ನಡೆಸಬೇಕಾದ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಗಳು (ZRUCC) ಮತ್ತು ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಗಳು (DRUCC) ನಿಯಮದಂತೆ ವರ್ಷಕ್ಕೆ ಮೂರು ಬಾರಿ ಸಭೆ ನಡೆಸಿಲ್ಲ ಎಂದು ಸಿಎಜಿ ಹೇಳಿದೆ.
ಅಲ್ಲದೆ, 'ರೈಲ್ ಮದದ್' ಪೋರ್ಟಲ್ ಮೂಲಕ ಸಲ್ಲಿಕೆಯಾದ ಪ್ರಯಾಣಿಕರ ದೂರುಗಳನ್ನು ಗಮನಿಸಿದಾಗ, ವೈದ್ಯಕೀಯ ನೆರವು, ಸ್ವಚ್ಛತೆ, ವಿದ್ಯುತ್ ಉಪಕರಣಗಳ ದುರಸ್ತಿ ಹಾಗೂ ನೀರಿನ ಲಭ್ಯತೆಗೆ ಸಂಬಂಧಿಸಿದ ದೂರುಗಳು ಗಣನೀಯವಾಗಿ ಹೆಚ್ಚಾಗಿವೆ.
ದೂರು ಅಥವಾ ಸಲಹೆಗಳನ್ನು ನೀಡಿದ ಪ್ರಯಾಣಿಕರಲ್ಲಿ, ತಮ್ಮ ಕುಂದುಕೊರತೆಗಳನ್ನು ಪರಿಹರಿಸಿದ ರೀತಿಯ ಬಗ್ಗೆ 2022-23 ರಲ್ಲಿ ಶೇಕಡಾ 37 ರಷ್ಟು ಮತ್ತು 2023-24 ರಲ್ಲಿ ಶೇಕಡಾ 42 ರಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಪೆ: indianexpress.com






