S I R ಸೂಚನೆಗಳನ್ನು ವಾಟ್ಸಾಪ್ ಮೂಲಕ ನೀಡುತ್ತಿರುವ ಚುನಾವಣಾ ಆಯೋಗ: the reportersʼ collective ವರದಿ

Photo Credit : reporters-collective.in
S I R ವೇಳೆ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ಗೆ TMC ಅರ್ಜಿ ಸಲ್ಲಿಸಿದ್ದು, ಚುನಾವಣಾ ಆಯೋಗ ತನ್ನ ಸೂಚನೆಗಳನ್ನು ವಾಟ್ಸಾಪ್ ಮೂಲಕ ನೀಡುತ್ತಿದೆ ಎನ್ನುವುದೂ ಆ ಆರೋಪಗಳಲ್ಲಿ ಒಂದಾಗಿದೆ. ಈ ಆದೇಶಗಳಲ್ಲಿ ಕೆಲವಂತೂ ಪಶ್ಚಿಮ ಬಂಗಾಳದಲ್ಲಿ S I R ಸಂಬಂಧ ಚುನಾವಣಾ ಆಯೋಗ ನೀಡಿರುವ ಲಿಖಿತ ಸೂಚನೆಗಳಿಗೆ ವಿರುದ್ಧವಾಗಿವೆ ಎನ್ನಲಾಗಿದೆ.
TMC ನಾಯಕ, ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಯಾನ್ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮಾಡಿದ ಆರೋಪಗಳನ್ನು ಸ್ವತಂತ್ರವಾಗಿ ಪರಿಶೀಲಿಸಿರುವ the reportersʼ collective ತನ್ನ ವರದಿಯಲ್ಲಿ ಅವುಗಳನ್ನು ದೃಢಪಡಿಸಿದೆ.
ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ವಾಟ್ಸಾಪ್ ಮೂಲಕ ರಾಜ್ಯ ಅಧಿಕಾರಿಗಳಿಗೆ ಅನೌಪಚಾರಿಕವಾಗಿ ಸೂಚನೆಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಕೆಲವು ಆಯೋಗದ ಲಿಖಿತ ಆದೇಶಗಳಿಗೆ ವಿರುದ್ಧವಾಗಿವೆ ಎಂಬುದನ್ನು ʼರಿಪೋರ್ಟರ್ಸ್ ಕಲೆಕ್ಟಿವ್ʼ ವರದಿ ಖಚಿತಪಡಿಸಿದೆ. ಒಬ್ರಯಾನ್ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಈಗಾಗಲೇ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, ಇದೇ ಹೊತ್ತಲ್ಲಿ the reportersʼ collective ವರದಿ ಮಹತ್ವದ ಅಂಶಗಳನ್ನು ಹೊರಹಾಕಿದೆ.
ನಿತಿನ್ ಸೇಥಿ ಮತ್ತು ಆಯುಷಿ ಕರ್ ಸಿದ್ಧಪಡಿಸಿರುವ ಈ ವರದಿ, ರಾಜ್ಯದ ಕೆಲ ಅಧಿಕಾರಿಗಳು S I R ಪ್ರಕ್ರಿಯೆ ಸಂಬಂಧ ನಿರ್ದಿಷ್ಟ ಸೂಚನೆಗಳಿಗಾಗಿ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಯನ್ನು ವರ್ಚುವಲ್ ಸಭೆಯ ವೇಳೆ ಪ್ರಶ್ನಿಸಿದ್ದನ್ನು ದೃಢಪಡಿಸುತ್ತದೆ.
S I R ನ ನಿಗದಿತ ನಿಯಮಗಳಿಗೆ ವಿರುದ್ಧವಾಗಿರುವ ಎರಡು ವಾಟ್ಸಾಪ್ ಸಂದೇಶಗಳ ಬಗ್ಗೆ ವರದಿ ಉಲ್ಲೇಖಿಸಿದೆ. S I R ಅಡಿಯಲ್ಲಿ ಮತದಾರರ ಆರಂಭಿಕ ನೋಂದಣಿಗೆ ಗಡುವು ನಿಗದಿಪಡಿಸಲಾಗಿತ್ತು. ಆದರೆ ವಾಟ್ಸಾಪ್ ಮೂಲಕ ಮಾತ್ರ ನೀಡಲಾದ ಸೂಚನೆಗಳಲ್ಲಿ, ಈ ನಿಗದಿತ ಗಡುವಿಗೆ ಮುನ್ನವೇ ಮತದಾರರು ಕಂಡುಬಂದಿಲ್ಲ ಎಂದು ನಮೂದಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಹಾಗೆ ನಮೂದಿಸುವ ಮೊದಲು, ಕಡಿಮೆ ಅವಧಿಯಲ್ಲಿ ಮೂರು ಮನೆಗಳಿಗೆ ಭೇಟಿ ಪೂರ್ಣಗೊಳಿಸಬೇಕೆಂದು ವಾಟ್ಸಾಪ್ ಸೂಚನೆಗಳಲ್ಲಿ ಹೇಳಲಾಗಿತ್ತು. ವರ್ಚುವಲ್ ಸಭೆಯ ವೇಳೆ ಹಾಜರಿದ್ದ ಮೂವರು ಅಧಿಕಾರಿಗಳ ಬಳಿ ʼರಿಪೋರ್ಟರ್ಸ್ ಕಲೆಕ್ಟಿವ್ʼ ಈ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದೆ. ಇಬ್ಬರು ಅಧಿಕಾರಿಗಳು ಆ ಸಂದೇಶಗಳನ್ನು ತೋರಿಸಿದರೆ, ಮತ್ತೊಬ್ಬರು ಅಂಥ ಸಂದೇಶ ಬಂದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಚುನಾವಣಾ ಆಯೋಗದ ಡೇಟಾಬೇಸ್ನಲ್ಲಿ ರೋಲ್ ಬ್ಯಾಕ್ ಆಯ್ಕೆಯ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ಹಲವಾರು ಅಧಿಕಾರಿಗಳು ಹೇಳಿದ್ದಾರೆ. ಮತದಾರರನ್ನು ಕರಡು ಪಟ್ಟಿಯಿಂದ ಇದ್ದಕ್ಕಿದ್ದಂತೆ ತೆಗೆದುಹಾಕಲಾಗಿತ್ತು. ಆದರೆ ಈ ರೋಲ್ಬ್ಯಾಕ್ ಆಯ್ಕೆ ಕಾರ್ಯರೂಪಕ್ಕೆ ಬರಲಿಲ್ಲ.
ಸರ್ಕಾರಿ ನಿಯಮಗಳ ಪ್ರಕಾರ, ಅಧಿಕಾರಿಗಳು ಅನೌಪಚಾರಿಕ ಸಂವಹನಗಳ ಆಧಾರದಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಹೊಣೆಗಾರಿಕೆ ಮತ್ತು ಪಾರದರ್ಶಕತೆ ಖಚಿತಪಡಿಸಲು ಎಲ್ಲಾ ಆದೇಶಗಳು ಮತ್ತು ಸಂವಹನಗಳಿಗೆ ಔಪಚಾರಿಕ ದಾಖಲೆ ಹಾಗೂ ಫೈಲಿಂಗ್ ವ್ಯವಸ್ಥೆ ಇರಬೇಕೆಂದು ನಿಯಮಗಳು ಹೇಳುತ್ತವೆ.
ಆದರೆ S I Rನ ಆರಂಭಿಕ ಆದೇಶಗಳನ್ನಷ್ಟೇ ಬಹಿರಂಗಪಡಿಸಲಾಗಿದ್ದು, ನಂತರ ರಾಜ್ಯದ ಅಧಿಕಾರಿಗಳಿಗೆ ಕಳುಹಿಸಲಾದ ಹಲವು ಆದೇಶಗಳು ಮತ್ತು ಸೂಚನೆಗಳನ್ನು ಆಯೋಗ ಬಹಿರಂಗಪಡಿಸಿಲ್ಲ. ಈ ಹಿಂದೆ ಆಯೋಗ ಮತದಾರರ ನೋಂದಣಿಯ ಪ್ರತಿಯೊಂದು ಹಂತದ ಬಗ್ಗೆ ಬಹಿರಂಗವಾಗಿ ವಿವರಿಸಿತ್ತು. ಈಗ ರಾಜ್ಯದ ಅಧಿಕಾರಿಗಳಿಗೆ ಖಾಸಗಿಯಾಗಿ ಸೂಚನೆ ನೀಡಲಾಗುತ್ತಿದೆ.
ತುರ್ತು ಸಂದರ್ಭಗಳಲ್ಲಿ ಸೂಚನೆಗಳನ್ನು ಮೌಖಿಕವಾಗಿ ಅಥವಾ ಅನೌಪಚಾರಿಕವಾಗಿ ನೀಡುವ ಸಂದರ್ಭಗಳು ಇರಬಹುದು. ಆದರೆ ನಿಯಮಗಳ ಪ್ರಕಾರ, ಅವುಗಳನ್ನೂ ನಂತರ ಔಪಚಾರಿಕವಾಗಿ ದಾಖಲಿಸಬೇಕಾಗಿದೆ. ಈಗ ಕಳುಹಿಸಲಾದ ವಾಟ್ಸಾಪ್ ಆದೇಶಗಳನ್ನು ನಂತರ ಔಪಚಾರಿಕ ದಾಖಲೆಗಳಲ್ಲಿ ದಾಖಲಿಸಲಾಗಿದೆವೆಯೇ ಎಂಬ ಪ್ರಶ್ನೆಗೆ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಉತ್ತರಿಸಿಲ್ಲ ಎಂದು ವರದಿ ಹೇಳುತ್ತದೆ.
ಈ ಸಂದೇಶಗಳನ್ನು ‘ಪಶ್ಚಿಮ ಬಂಗಾಳ ಸಿಇಒ ಮತ್ತು ಜಿಲ್ಲಾ ಚುನಾವಣಾಧಿಕಾರಿ’ ಎಂಬ ವಾಟ್ಸಾಪ್ ಗುಂಪಿನ ಮೂಲಕ ಹಂಚಿಕೊಳ್ಳಲಾಗಿದೆ. ಈ ವಾಟ್ಸಾಪ್ ಸಂದೇಶಗಳನ್ನು S I R ನ ಎಣಿಕೆ ಹಂತದಲ್ಲಿ ಕಳುಹಿಸಲಾಗಿದೆ. ಅವುಗಳೆಲ್ಲವೂ ಕೈಪಿಡಿಗಳು ಮತ್ತು ಲಿಖಿತ ಆದೇಶಗಳಿಗೆ ವಿರುದ್ಧವಾಗಿವೆ ಎಂದು ಹಲವು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
S I Rನ ಎಣಿಕೆ ಹಂತದ ಮಧ್ಯೆ ಆಯೋಗ ದಾಖಲೆರಹಿತ ಸಾಫ್ಟ್ವೇರ್ ಅನ್ನು ಪರಿಚಯಿಸಿದ ಸಮಯದಲ್ಲೇ ಈ ವಾಟ್ಸಾಪ್ ಸೂಚನೆಗಳ ಬಳಕೆಯಾಗಿದೆ ಎಂದು ವರದಿ ಗಮನಿಸಿದೆ.
ಸಾಫ್ಟ್ವೇರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಆರಂಭದಲ್ಲಿ ಕೇವಲ ಎರಡು ರಾಜ್ಯಗಳಲ್ಲಿ 3.66 ಕೋಟಿಗೂ ಹೆಚ್ಚು ಮತದಾರರನ್ನು ಅನುಮಾನಾಸ್ಪದರೆಂದು ಗುರುತಿಸಲಾಗಿತ್ತು. ನಂತರ ಇದನ್ನು ‘ತಾರ್ಕಿಕ ವ್ಯತ್ಯಾಸಗಳು’ ಎಂದು ಹೇಳಲಾಗಿದ್ದು, ಮತದಾರರು ತಮ್ಮ ಗುರುತು, ಮತದಾನದ ಹಕ್ಕು ಮತ್ತು ಪೌರತ್ವದ ದಾಖಲೆಗಳನ್ನು ಸಲ್ಲಿಸಬೇಕಾಯಿತು.
ಆರಂಭಿಕ ಲಿಖಿತ ಆದೇಶಗಳಲ್ಲಿ ಸಾಫ್ಟ್ವೇರ್ ಬಳಕೆಯ ಉಲ್ಲೇಖವೇ ಇರಲಿಲ್ಲ. ಸಾಫ್ಟ್ವೇರ್ ಸಕ್ರಿಯಗೊಳಿಸುವ ಎರಡು ವಾರಗಳ ಮುಂಚೆಯೇ ಆಯೋಗ ತನ್ನ ಸಾಫ್ಟ್ವೇರ್ ದೋಷಯುಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿತ್ತು.
ಡಿಸೆಂಬರ್ 29ರಂದು ಎಣಿಕೆ ಹಂತ ಪೂರ್ಣಗೊಂಡ ಬಳಿಕ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಾಫ್ಟ್ವೇರ್ ಅಸಮರ್ಪಕತೆಯನ್ನು ಒಪ್ಪಿಕೊಂಡಿತು. 2002ರ ಮತದಾರರ ಪಟ್ಟಿಯನ್ನು ನಿಖರವಾಗಿ ಡಿಜಿಟಲೀಕರಣಗೊಳಿಸದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಅನುಮಾನಾಸ್ಪದ ಎಂದು ಗುರುತಿಸಲಾದ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಲು ನಂತರ ಸಾಫ್ಟ್ವೇರ್ನಲ್ಲಿ ಬದಲಾವಣೆ ಮಾಡಲಾಗಿದೆ.
ಪಶ್ಚಿಮ ಬಂಗಾಳ ಸಿಇಒ ಕಚೇರಿಯಿಂದ ಯಾವ ಆದೇಶಗಳು ಬರುತ್ತಿವೆ ಮತ್ತು ಯಾವವು ಆಯೋಗದ ಕೇಂದ್ರ ಕಚೇರಿಯಿಂದ ಬರುತ್ತಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮತ್ತೊಬ್ಬ ಜಿಲ್ಲಾ ಚುನಾವಣಾಧಿಕಾರಿ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಈ ಸೂಚನೆಗಳಲ್ಲಿ ಯಾವುದಾದರೂ ತಪ್ಪಿನಿಂದ ಮತದಾರರ ಹಕ್ಕುಗಳು ಅಳಿಸಿಹೋಗಿದರೆ, ಅದರ ಹೊಣೆಗಾರರು ಯಾರು ಎಂಬ ಪ್ರಶ್ನೆಯನ್ನೂ ಆ ಅಧಿಕಾರಿ ಎತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪರಿಶೀಲನೆಯ ಮಟ್ಟ ಇತರ ರಾಜ್ಯಗಳಿಗಿಂತ ಒಂದು ಹಂತ ಹೆಚ್ಚಿನದ್ದಾಗಿದೆ ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅನುಮಾನಾಸ್ಪದ ಮತದಾರರ ಪರಿಶೀಲನೆ ಹೇಗೆ ನಡೆಯುತ್ತಿದೆ ಎಂಬುದನ್ನೂ ಅವರು ವಿವರಿಸಿದ್ದಾರೆ.
ರಾಜ್ಯದ ಅಧಿಕಾರಿಗಳು ಸೂಕ್ಷ್ಮ ವೀಕ್ಷಕರ ಸಮ್ಮುಖದಲ್ಲಿ ನಡೆಯುವ ವಿಚಾರಣೆಗಳ ಛಾಯಾಚಿತ್ರ ಸಾಕ್ಷ್ಯವನ್ನು ಅಪ್ಲೋಡ್ ಮಾಡಬೇಕಾಗಿದೆ. ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಲು ಬ್ಲಾಕ್ ಮಟ್ಟದಲ್ಲಿ ಕೇವಲ 160 ಕೇಂದ್ರಗಳಷ್ಟೇ ಇವೆ.
ಈ ಪ್ರಕ್ರಿಯೆ ಅತ್ಯಂತ ಕಷ್ಟಕರವಾಗಿದ್ದು, ಇಷ್ಟು ಕಡಿಮೆ ಕೇಂದ್ರಗಳಲ್ಲಿ ಲಕ್ಷಾಂತರ ಮತದಾರರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸಾಧ್ಯವಿಲ್ಲ ಎಂಬ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.







