ಶಿಕ್ಷಣ, ವಿಜ್ಞಾನ: ಹಿಂದುತ್ವದ ದಾಳಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ?

ಕನ್ನಡಕ್ಕೆ: ಡಾ. ಬಂಜಗೆರೆ ಜಯಪ್ರಕಾಶ್
ಶಿಕ್ಷಣದ ಮಹತ್ವವನ್ನು ಸರಿಯಾಗಿ ಗಮನಕೊಡಲಿಲ್ಲವೆಂದು ಕಮ್ಯುನಿಸ್ಟರ ವಿರುದ್ಧ ತೀವ್ರ ಟೀಕೆಗಳಿವೆ. ಶಿಕ್ಷಣ ಕ್ಷೇತ್ರದಲ್ಲಿ ಕಮ್ಯುನಿಸ್ಟರು ಕಷ್ಟಪಡಲಿಲ್ಲವೆಂದಲ್ಲ, ಶಿಕ್ಷಕರ ಸಂಬಳ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಕಾಲೇಜುಗಳಲ್ಲಿ ಸೀಟು ಮುಂತಾದ ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು ಹೊರತುಪಡಿಸಿ ‘‘ನೀವು ಏನು ಓದಿಸುತ್ತಿದ್ದೀರಿ?’’ ಎನ್ನುವ ಪ್ರಶ್ನೆಯ ಮೇಲೆ ಗಮನ ಹಾಕಿದ್ದು ಬಹಳ ಕಡಿಮೆ ಎನ್ನುವುದು ವಿಮರ್ಶೆ.
ಎಡಪಕ್ಷಗಳಿಗೆ ನಮ್ಮ ಅಧ್ಯಯನದ ಬಗ್ಗೆ ಅಭಿಪ್ರಾಯದ ಕೊರತೆ ಇಲ್ಲ. ಅವು ‘ಅವೈಜ್ಞಾನಿಕ’ ಎಂಬ ಸಾಮಾನ್ಯ ಗ್ರಹಿಕೆ ಬಹುಶಃ ಇತ್ತು. ಬಹುಶಃ ಈಗಲೂ ಇದೆ. ನಮ್ಮ ಪಠ್ಯಪುಸ್ತಕಗಳಲ್ಲಿ ಧರ್ಮ, ಇತಿಹಾಸ, ಸಂಸ್ಕೃತಿ, ಸಾಹಿತ್ಯ ಹೀಗೆ ಎಲ್ಲ ವಿಷಯಗಳ ಬಗ್ಗೆ ಹೇಳಿರುವುದು ಸ್ಥೂಲವಾಗಿ ‘ಅವೈಜ್ಞಾನಿಕ’ ಎನ್ನುವ ಈ ವ್ಯಾಖ್ಯೆಯೇ ಉತ್ತರವಾಗಿದೆ.
ಜನರ ಲೋಕ ದೃಷ್ಟಿಕೋನವನ್ನು ರೂಪಿಸುವಲ್ಲಿ ಶಿಕ್ಷಣದ ಪ್ರಮುಖ ಪಾತ್ರವನ್ನು ಎಡಪಂಥೀಯ ಚಳವಳಿಗಳು ಸರಿಯಾಗಿ ಅರ್ಥಮಾಡಿಕೊಂಡಂತೆ ಕಾಣುವುದಿಲ್ಲ. ಅಷ್ಟರಮಟ್ಟಿಗೆ ಅವರ ಮೇಲಿನ ಟೀಕೆಗಳು ನ್ಯಾಯಯುತವಾಗಿವೆ. ನಾವು, ನಮ್ಮ ದೇಶ, ನಮ್ಮ ಸಮಾಜ ಮತ್ತು ನಮ್ಮ ಜನಾಂಗ ಎಂಬವು ಯಾರು, ಏನು, ಎಂತಹದು ಎಂಬ ಪ್ರಶ್ನೆಗಳಿಗೆ ಒಂದು ಉತ್ತರವನ್ನು ನೀಡಿ ಆ ಬೆಳಕಿನಲ್ಲಿ ವ್ಯಕ್ತಿತ್ವಗಳನ್ನು ರೂಪಿಸುವ ಸಾಮಾಜಿಕ ಶಕ್ತಿಗಳಲ್ಲಿ ಶಿಕ್ಷಣ ವ್ಯವಸ್ಥೆಯು ಪ್ರಮುಖವಾಗಿದೆ. ಈ ಪ್ರಶ್ನೆಗಳಿಗೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಉತ್ತರವಿದೆ. ಈ ವಿಷಯಗಳ ಬಗ್ಗೆ ಒಂದು ಅಭಿಪ್ರಾಯವಿರುತ್ತದೆ. ಅವು ಎಲ್ಲಿಂದ ಬಂದಿವೆ ಎಂದು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಶಿಕ್ಷಣ ವ್ಯವಸ್ಥೆಯೇ ಮುಖ್ಯ ಉತ್ತರವಾಗಿ ಕಾಣಿಸುತ್ತದೆ. ಮನೆಯಲ್ಲಿ ದೊಡ್ಡವರು ಕಲಿಸುವ ವಿಚಾರಗಳು ಮತ್ತು ಅಭಿಪ್ರಾಯಗಳಿಗೆ ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಇಲ್ಲವೇ ಎಂದು ಕೇಳಬಹುದು. ಇದು ಒಬ್ಬೊಬ್ಬರ ವಿಷಯದಲ್ಲಿ ಇರಬಹುದೋ ಏನೋ, ಆದರೆ ಪೋಷಕರ ಅಭಿಪ್ರಾಯಗಳು ಮತ್ತು ಶಿಕ್ಷಕರ ಅಭಿಪ್ರಾಯಗಳ ನಡುವೆ ಘರ್ಷಣೆ ಬಂದರೆ ಹೆಚ್ಚಾಗಿ ಶಿಕ್ಷಕರ ಮಾತನ್ನು ಮಕ್ಕಳು ಮಾನದಂಡವಾಗಿ ತೆಗೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಶಾಲೆಗಳಲ್ಲಿ ಕಲಿಸುವ ಸತ್ಯವು ಹೆಚ್ಚು ಮಾನ್ಯವಾಗಿದೆ ಏಕೆಂದರೆ ಶಿಕ್ಷಣ ಕ್ಷೇತ್ರವು ಸತ್ಯದ ಮಾನದಂಡವನ್ನು ಕಲಿಸುತ್ತದೆ.ಆದ್ದರಿಂದ ಪಾಠಶಾಲೆಗಳಲ್ಲಿ ಕಲಿಸುವ ಸತ್ಯಗಳಿಗೇ ಮಾನ್ಯತೆ ಹೆಚ್ಚು.
ಇದೆಲ್ಲ ಮಧ್ಯಮ ವರ್ಗಕ್ಕೆ ಅನ್ವಯಿಸುತ್ತದೆಯೇ ಹೊರತು ದುಡಿಯುವ ವರ್ಗಕ್ಕೆ ಅಲ್ಲ ಎಂದು ನಂಬುವವರು ಈಗಲೂ ಇದ್ದಾರೇನೋ ನನಗೆ ಗೊತ್ತಿಲ್ಲ. ಒಂದು ಕಡೆ ಎಲ್ಲರಿಗೂ ಶಿಕ್ಷಣ ಬೇಕು ಎಂದು ಬಯಸುತ್ತಾ, ಇನ್ನೊಂದು ಕಡೆ ಆ ಶಿಕ್ಷಣ ಬರೀ ಸಾಕ್ಷರತೆಯ ರೂಪದಲ್ಲಿ ಬರುವುದಿಲ್ಲ ಬದಲಾಗಿ ಸಂಘಟಿತವಾದ ವಿಶ್ವ ದೃಷ್ಟಿಕೋನದಿಂದ ಬರುತ್ತದೆ ಎಂದು ಗುರುತಿಸಲು ನಿರಾಕರಿಸುವುದು ಜಾಣತನ ಎನಿಸುವುದಿಲ್ಲ. ಶಿಕ್ಷಣ ವ್ಯವಸ್ಥೆಯಿಂದ ಸಂಪೂರ್ಣವಾಗಿ ಹೊರಗಿರುವವರಿಗೆ ಮೇಲಿನ ಚರ್ಚೆ ಅನ್ವಯಿಸದಿರಬಹುದು, ಆದರೆ ಬೆಳೆಯುತ್ತಿರುವ ಹೊಸ ಪೀಳಿಗೆಯಲ್ಲಿ ಅಂತಹ ಜನರು ಅಲ್ಪಸಂಖ್ಯಾತರಾಗಿದ್ದಾರೆ.
ಪ್ರಮಾಣಿತ ಪಠ್ಯಕ್ರಮವನ್ನು ಸಿದ್ಧಪಡಿಸುವ, ಪ್ರಮಾಣಿತ ಪಠ್ಯಪುಸ್ತಕಗಳನ್ನು ಬರೆಯುವ ಮತ್ತು ಎಲ್ಲರಿಗೂ ಒಂದೇ ಮಾದರಿಯಲ್ಲಿ ಕಲಿಸುವ ಶಿಕ್ಷಣ ವ್ಯವಸ್ಥೆಯು ‘ನಾವು’ ಎನ್ನುವ ಒಂದು ಸಮಷ್ಟಿಯನ್ನು, ಅದಕ್ಕೊಂದು ಸ್ವಭಾವವನ್ನು ಮತ್ತು ಒಂದು ಗುರಿಯನ್ನು ರೂಪಿಸುತ್ತದೆ. ಅದು ದೇಶವಾಗಿರಬಹುದು. ಒಂದು ಜನಾಂಗ ಇರಬಹುದು, ಬೇರೆ ಯಾವುದೇ ಸಮೂಹವಾಗಿರಬಹುದು. ಅಂತಹ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಇಲ್ಲದ ಆ ದಿನಗಳಲ್ಲಿ ವರ್ಣಧರ್ಮವನ್ನು ಪ್ರಚಾರ ಮಾಡುವ ಧಾರ್ಮಿಕ ಸಾಹಿತ್ಯ ಮತ್ತು ಅದಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಪ್ರಕ್ರಿಯೆಗಳು ಮತ್ತು ಆಚರಣೆಗಳು ಆ ಪಾತ್ರವನ್ನು ನಿರ್ವಹಿಸಿದವು. ಅವುಗಳ ಸ್ಥಾನದಲ್ಲಿ, ಒಂದು ಸಾರ್ವಜನಿಕವಾದ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿ ‘ಆಧುನಿಕ’ ‘ಲೌಕಿಕ’ ಪರಿಕಲ್ಪನೆಗಳ ತಳಹದಿಯ ಮೇಲೆ ರಾಷ್ಟ್ರ ಮತ್ತು ರಾಷ್ಟ್ರವನ್ನು ವ್ಯಾಖ್ಯಾನಿಸುವುದು ತಮ್ಮ ಲಕ್ಷ್ಯಕ್ಕೆ ಸರಿಯಾದ ಮಾರ್ಗವೆಂದು ರಾಷ್ಟ್ರೀಯ ಚಳವಳಿಯ ಆಧುನಿಕತಾವಾದಿಗಳು - ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಂಡರೆ ಆಗದವರೂ ಸೇರಿದಂತೆ -ಭಾವಿಸಿದರು. ಈ ಆಧುನಿಕವಾದಿಗಳು ಆಧುನಿಕವಾದಿಗಳಲ್ಲದವರೊಂದಿಗೆ ರಾಜಿ ಮಾಡಿಕೊಂಡ ಕಾರಣ, ಇತರ ಕಾರಣಗಳಿಂದ ಆ ಪ್ರಯತ್ನವು ಕುಂಟು ನಡಿಗೆ ನಡೆಯುತ್ತಿದ್ದರೂ ಸ್ವಲ್ಪ ಮಟ್ಟಿಗೆ ಆ ಗುರಿಗೆ ಅನುಗುಣವಾಗಿ ಶೈಕ್ಷಣಿಕ ವ್ಯವಸ್ಥೆಯನ್ನು ಅವರು ರೂಪುಗೊಳಿಸಲು ಸಾಧ್ಯವಾಯಿತು.
ಅವರೊಂದಿಗೆ ಸಮಾನವಾಗಿ ಶಿಕ್ಷಣ ವ್ಯವಸ್ಥೆಯ ಮಹತ್ವವನ್ನು ಗುರುತಿಸಿದ ಹಿಂದುತ್ವವಾದಿಗಳಿಗೆ ಅದಕ್ಕಾಗಿಯೇ ಪ್ರಸಕ್ತ ಶಿಕ್ಷಣ ವ್ಯವಸ್ಥೆಯೆಂದರೆ ಅಷ್ಟು ಅಸಹನೆ. ಅದು ಅವರ ಹಿತಾಸಕ್ತಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದಲ್ಲ. ಆದರೆ ಅವರು ಬಯಸುವುದು ತಮ್ಮೊಂದಿಗೆ ರಾಜಿಯಾಗುವ ಆಧುನಿಕವಾದವಲ್ಲ.ಹಾಗೆಂದು ಅವರಿಗೆ ಬೇಕಾಗಿರುವುದು ಮಧ್ಯಕಾಲೀನ ವೈದಿಕ ಧರ್ಮವೂ ಅಲ್ಲ. ಅವರಿಗೇನು ಬೇಕು ಎನ್ನುವುದನ್ನು ಆಮೇಲೆ ನೋಡೋಣ ಆದರೆ ಅದಕ್ಕೆ ತಕ್ಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಹಂಬಲ ಅವರಲ್ಲಿ ಮೂಡಿರುವುದು ಈಗ ಸ್ಪಷ್ಟವಾಗಿದೆ.
ಉದಾರವಾದಿ ಆಧುನಿಕವಾದಿಗಳಿಗೆ ಮತ್ತು ಹಿಂದುತ್ವವಾದಿಗಳಿಗೆ ಸ್ಪಷ್ಟವಾಗಿರುವ ಶಿಕ್ಷಣದ ಮಹತ್ವ ಎಡಪಂಥೀಯರಿಗೆ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಶಿಕ್ಷಣದ ‘ಮೂಲಸೌಕರ್ಯ’ಕ್ಕೆ ಎಡಪಂಥೀಯರು ನೀಡಿದ ಪ್ರಾಮುಖ್ಯತೆಯನ್ನು ಅದರ ಸ್ವರೂಪ ಮತ್ತು ಸಾರಾಂಶಕ್ಕೆ ನೀಡಿಲ್ಲ - ಇದು ಅವೈಜ್ಞಾನಿಕ ಎಂದು ಸಾಂದರ್ಭಿಕವಾಗಿ ಟೀಕೆ ಮಾಡುವುದನ್ನು ಹೊರತುಪಡಿಸಿ.
ವಾಸ್ತವವಾಗಿ ಈ ಸಾರ ಮತ್ತು ಸ್ವಭಾವದಲ್ಲಿ ಮುಖ್ಯವಾದುದು ವೈಜ್ಞಾನಿಕ - ಅವೈಜ್ಞಾನಿಕ ವರ್ಗೀಕರಣವಲ್ಲ. ಮಾನವೀಯ ಮತ್ತು ಅಮಾನವೀಯ, - ಪ್ರಜಾಸತ್ತಾತ್ಮಕ ಮತ್ತು ಅಪ್ರಜಾಸತ್ತಾತ್ಮಕ ಎಂಬುದು ಮುಖ್ಯ. ಈ ಪರಮಾಣು ಯುಗದಲ್ಲಿ ವಿಜ್ಞಾನ ಮತ್ತು ಮಾನವೀಯತೆ ಒಂದೇ ಎಂದರೆ ಯಾರೂ ವಾದಿಸುವುದಿಲ್ಲ ಎಂದುಕೊಳ್ಳುತ್ತೇನೆ. ಶಿಕ್ಷಣವು ‘ನಾವು’ ಎನ್ನುವ ಸಮಷ್ಟಿಯನ್ನು ಹೇಗೆ ವ್ಯಾಖ್ಯಾನಿಸುತ್ತಿದೆ? ಅದರ ಮುಂದೆ ಯಾವ ಗುರಿಯನ್ನು ಇರಿಸುತ್ತಿದೆ? ಅದನ್ನು ಯಾವ ದಿಕ್ಕಿನೆಡೆಗೆ ನಡೆಸುವ ಚೈತನ್ಯವನ್ನು ಒದಗಿಸುತ್ತಿದೆ?
ಹಿಂದುತ್ವವು ಶಿಕ್ಷಣ ವ್ಯವಸ್ಥೆಯನ್ನು ಮತ್ತು ಇಡೀ ಶಿಕ್ಷಣ ಕ್ಷೇತ್ರವನ್ನು ಈ ದೃಷ್ಟಿಯಿಂದ ನೋಡಿದೆ. ಹಾಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಶಾಲೆಗಳನ್ನು ಸ್ಥಾಪಿಸಿದರು. ಮಕ್ಕಳನ್ನು ತಮಗೆ ಬೇಕಾದ ಪ್ರಜೆಗಳನ್ನಾಗಿಸಲು ಬೇಕಾದ ಭಾವನೆಗಳನ್ನು, ಅಭಿಪ್ರಾಯಗಳನ್ನು ಹೇಳಿಕೊಟ್ಟರು. ಅವರು ವಿದ್ಯೆಯನ್ನೊಂದು ಚಳವಳಿಯನ್ನಾಗಿ ತೆಗೆದುಕೊಂಡರು. ಅಧಿಕಾರಕ್ಕೆ ತುಂಬಾ ದೂರವಾಗಿದ್ದ ದಿನಗಳಲ್ಲಿ ಶಿಕ್ಷಣವನ್ನು ಒಂದು ಚಳವಳಿಯಾಗಿ ತೆಗೆದುಕೊಂಡ ಹಿಂದುತ್ವವಾದಿಗಳು ಈಗ ಅಧಿಕಾರಕ್ಕೆ ಬಂದ ನಂತರ ಅಧಿಕೃತವಾಗಿ ಮುಂದುವರಿಸುತ್ತಿದ್ದಾರೆ.
ಅವರು ಮನುಧರ್ಮವನ್ನು ಮರುಸ್ಥಾಪಿಸಬಯಸಿದ್ದಾರೆ ಎಂದು ದಲಿತರು ಆರೋಪಿಸುತ್ತಿದ್ದಾರೆ. ಇದರಲ್ಲಿ ಸ್ವಲ್ಪಸತ್ಯವಿದೆ ಆದರೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮನುಧರ್ಮದ ಮರುಸ್ಥಾಪನೆಯು ಒಂದು ಅರ್ಥದಲ್ಲಿ ಹಿಂದುತ್ವವಾದಿಗಳ ಕಾರ್ಯಸೂಚಿಯ ಪ್ರಧಾನವಾದ ಅಂಶವೇ ಆಗಿದ್ದರೂ ಅದು ಅದರ ಮಧ್ಯಕಾಲೀನ ಅರ್ಥದಲ್ಲಿ ಅಲ್ಲ. ದಲಿತವಾದಿಗಳು ಇದನ್ನು ಸ್ಪಷ್ಟವಾಗಿ ಗುರುತಿಸುತ್ತಿರುವಂತೆ ಕಾಣುತ್ತಿಲ್ಲ. ದಲಿತ ಬಹುಜನ ಜಾತಿಗೆ ಸೇರಿದ ಅನೇಕರು ಹಿಂದುತ್ವವನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು ಗುರುತಿಸಿ (ಗ್ರಹಾಂ ಸ್ಟೈನ್ನನ್ನು ಕೊಂದಿದ್ದು ಆದಿವಾಸಿಗಳೇ ಎಂಬುದನ್ನು ಮರೆಯಬಾರದು) ಮಧ್ಯಕಾಲೀನ ಮಾದರಿಯಲ್ಲಿ ಮನುಧರ್ಮ ಮರುಸ್ಥಾಪನೆ ಮಾಡಲು ಹೊರಟಿದ್ದಾರೆ ಎಂದು ಮಾತನಾಡುವುದು ಅದರ ಬಗೆಗಿನ ಅರಿವನ್ನು ಹೆಚ್ಚಿಸುವುದಿಲ್ಲ. ಹಾಗೆಂದು ಅವರು ಜಾತಿ ತೊರೆದು ವರ್ಗವನ್ನೇ ಆಧಾರವಾಗಿ ಮಾಡಿಕೊಂಡಿದ್ದಾರೆ ಎಂದು ಭಾವಿಸುವುದೂ ಸರಿಯಾಗುವುದಿಲ್ಲ.
ಹಾಗಾದರೆ ಅವರ ಮಾದರಿ ಏನು? ಅದಕ್ಕೂ ಮನುಧರ್ಮಕ್ಕೂ ಏನು ಸಂಬಂಧ? ಅವರು ಹಿಂದೂ ಧರ್ಮದ ಒಂದು ಪ್ರಮುಖ ಪರಿಕಲ್ಪನೆಯನ್ನು ‘ಆಧುನಿಕ’ ಹಿತಾಸಕ್ತಿಗಳ ಸಾಧನೆಗೆ ಅನುಕೂಲಕರವಾಗಿ ಅಳವಡಿಸಿಕೊಳ್ಳಲು ಬಯಸಿದ್ದಾರೆ. ಈ ‘ಆಧುನಿಕ’ ಉದ್ದೇಶಗಳಲ್ಲಿ ಪ್ರಮುಖವಾದುದು ‘ರಾಷ್ಟ್ರ ಹಿತಾಸಕ್ತಿ’. ‘ರಾಷ್ಟ್ರ’ (ಇಂಗ್ಲಿಷ್ನಲ್ಲಿ ನೇಷನ್) ಆಧುನಿಕ ಪರಿಕಲ್ಪನೆಯಾಗಿದೆ. ಆಧುನಿಕ ಹಿಂದುತ್ವವಾದದಲ್ಲಿ ಇದು ಪ್ರಮುಖ ಪರಿಕಲ್ಪನೆಯಾಗಿದೆ. ಮನುಧರ್ಮದಲ್ಲಿ ‘ಧರ್ಮ’ ಎಂಬುದು ಆರ್ಯ ಸಮಾಜಕ್ಕೆ ಸಂಬಂಧಿಸಿದ ಪರಿಕಲ್ಪನೆ. ರಾಷ್ಟ್ರ ಎಂಬ ಆಧುನಿಕ ಪರಿಕಲ್ಪನೆಗೆ ಅದನ್ನು ಅನ್ವಯಿಸುವುದರಿಂದ ಆಧುನಿಕ ಹಿಂದುತ್ವವಾದ ಪ್ರಾರಂಭವಾಗುತ್ತದೆ. ಈ ‘ರಾಷ್ಟ್ರ’ದಲ್ಲಿ ಪ್ರತಿಯೊಬ್ಬರಿಗೂ ಒಂದು ಸ್ಥಾನವಿದೆ. ಇದನ್ನು ಜಾತಿ, ಆರ್ಥಿಕ ಸ್ಥಿತಿ, ಉದ್ಯೋಗ, ಮನೆಯಿಂದ ಇವು ಯಾವುದರಿಂದಲಾದರೂ ವ್ಯಾಖ್ಯಾನಿಸಬಹುದು ಮತ್ತು ಆ ಸ್ಥಾನದಿಂದ ಉದ್ಭವಿಸುವ ಒಂದು ಕರ್ತವ್ಯ ಇರುತ್ತದೆ. ಆ ಕರ್ತವ್ಯವನ್ನು ನಿರ್ವಹಿಸುವುದು ‘ರಾಷ್ಟ್ರ’ದ ಪ್ರತಿಯೊಬ್ಬರ ಧರ್ಮ. ಆ ಕರ್ತವ್ಯ ನಿರ್ವಹಣೆಯಲ್ಲಿ ಎಲ್ಲರೂ ಯಾವ ಮಟ್ಟಿಗೆ ಬದ್ಧರಾಗಿರುತ್ತಾರೋ ಆ ಮಟ್ಟಿಗೆ ‘ರಾಷ್ಟ್ರ’ ಬಲವಾಗಿರುತ್ತದೆ. ಮತ್ತಷ್ಟು ಬಲಿಷ್ಠವಾಗಿ ರೂಪುಗೊಳ್ಳುತ್ತದೆ. ಕರ್ತವ್ಯ ನಿರ್ವಹಣೆಗೆ ಹಾನಿ ಮಾಡುವ ಹಕ್ಕುಗಳ ಆಕಾಂಕ್ಷೆ ರಾಷ್ಟ್ರಕ್ಕೆ ನಷ್ಟದಾಯಕ. ರಾಷ್ಟ್ರವನ್ನು ಜಗತ್ತಿನ ಉತ್ತುಂಗಕ್ಕೆ ಕೊಂಡೊಯ್ಯುವುದು ರಾಷ್ಟ್ರದ ಜನರೆಲ್ಲರ ಧರ್ಮವಾಗಿರುವುದರಿಂದ ಪ್ರತಿಯೊಬ್ಬರೂ ಕರ್ತವ್ಯ ಪಾಲನೆಗೆ ಆದ್ಯತೆ ನೀಡಬೇಕು.
ಹಕ್ಕುರಹಿತರು ಈ ದೃಷ್ಟಿಕೋನವನ್ನು ಏಕೆ ಅನುಮೋದಿಸುತ್ತಾರೆ? ಹಕ್ಕುಗಳ ದೃಷ್ಟಿಕೋನದಿಂದ ನೋಡಿದ್ದಾದರೆ, ಅದನ್ನು ಅನುಮೋದಿಸಲಾಗುವುದಿಲ್ಲ. ಆದರೆ ಹಕ್ಕುಗಳ ಕೊರತೆಯಿರುವವರು ಹಕ್ಕುಗಳ ದೃಷ್ಟಿಕೋನದಿಂದ ಜಗತ್ತನ್ನು ನೋಡುತ್ತಾರೆಂದುಕೊಳ್ಳುವುದು ತಪ್ಪು. ಅಪರಿಪೂರ್ಣ ಮಾನವ ಜೀವನ - ಆ ಅಪೂರ್ಣತೆಯ ಮೂಲವು ವೈಯಕ್ತಿಕ ಅಥವಾ ಸಾಮಾಜಿಕವಾಗಿರಬಹುದು - ತನಗಿಂತ ಶ್ರೇಷ್ಠವಾದ ಮಾನವಾತೀತತೆಯ ವಿಷಯದಲ್ಲಿ ಪರಿಪೂರ್ಣತೆಯನ್ನು ಹುಡುಕಿಕೊಳ್ಳುತ್ತದೆ. ಇದು ಯಾವುದೇ ಸುಳ್ಳು ಸಿದ್ಧಾಂತದ ಪರಿಣಾಮವಲ್ಲ, ಆದರೆ ಮನುಷ್ಯನ ಅತ್ಯಂತ ಸ್ವಾಭಾವಿಕವಾದ ಗುಣ. ಸರ್ವಾಧಿಕಾರಿಗಳೆಲ್ಲರೂ ಅದನ್ನು ಜಾಣ್ಮೆಯಿಂದ ಬಳಸಿಕೊಂಡವರೇ. ಆಧುನಿಕ ಕಾಲದಲ್ಲಿ ಸರ್ವಾಧಿಕಾರಿ ರಾಜಕಾರಣವು ‘ರಾಷ್ಟ್ರ’ ಎಂಬ ಅತೀತಶಕ್ತಿಯನ್ನು ಈ ಉದ್ದೇಶಕ್ಕಾಗಿ ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡಿದೆ. ಆಧುನಿಕ ಹಿಂದುತ್ವವಾದಕ್ಕೆ ಮೂಲಪುರುಷ ಸಾವರ್ಕರ್ ಸರ್ವಾಧಿಕಾರಿಗಳಲ್ಲಿ ಅತ್ಯಂತ ಕ್ರೂರನಾಗಿದ್ದ ಹಿಟ್ಲರ್ ಅನ್ನು ಮೆಚ್ಚಿಕೊಂಡಿದ್ದರು ಎಂಬ ಸಂಗತಿ ಗೊತ್ತಿರುವಂತಹುದೆ.
ಬಲಿಷ್ಠವಾದ ಭಾರತರಾಷ್ಟ್ರ- ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುವಾಗ ಹಿಂದೂ ರಾಷ್ಟ್ರ - ಆಧುನಿಕ ಹಿಂದುತ್ವದ ಗುರಿ. ಇದು ಮಧ್ಯಯುಗದ ಮನುಧರ್ಮ ಸಮಾಜದ ರೂಪದಲ್ಲಿ ಇರುವುದಿಲ್ಲ. ಆದರೆ ಆ ಮನು ಧರ್ಮಕ್ಕೆ ಸಂಬಂಧಿಸಿದ ಪ್ರಮುಖ ಪರಿಕಲ್ಪನೆಯನ್ನು - ಮೇಲೆ ವಿವರಿಸಿದಂತೆ - ಅದರ ಆಧುನಿಕ ಉದ್ದೇಶಕ್ಕೆ ಸರಿಹೊಂದುವಂತೆ ಬಳಸುತ್ತದೆ. ಇದು ‘ಧರ್ಮ’ ಎನ್ನುವ ಯಥಾಸ್ಥಿತಿವಾದವನ್ನು ಆಧಾರ ಮಾಡಿಕೊಂಡು ಕಂಪ್ಯೂಟರ್ ಸಾಫ್ಟ್ವೇರ್ನಿಂದ ಪರಮಾಣು ಹಾರ್ಡ್ವೇರ್ವರೆಗೆ ಎಲ್ಲದರಲ್ಲೂ ಆಧುನಿಕವಾದ- ಶಕ್ತಿಯುತವಾದ - ಸೂಪರ್ ಪವರ್ ಅಥವಾ ಸೂಪರ್-ರಾಷ್ಟ್ರವಾಗಿ ರೂಪಿಸಬೇಕೆಂದು ನೋಡುತ್ತದೆ.
ಇದನ್ನೇ ಗುರಿಯಾಗಿಟ್ಟುಕೊಳ್ಳುವ ಯುವಕರನ್ನು- ಅದಕ್ಕೆ ಅನುಗುಣವಾಗಿ ಧರ್ಮ ಎಂಬ ಭಾವನೆಗೆ ಹಿಂದುತ್ವವಾದಿಗಳು ಕೊಡುವ ಆಧುನಿಕ ವ್ಯಾಖ್ಯಾನವನ್ನು ಅಂತರ್ಗತ ಮಾಡಿಕೊಂಡ ಯುವಜನರನ್ನು ರೂಪಿಸುವ ಶಿಕ್ಷಣ ವ್ಯವಸ್ಥೆ ಅವರಿಗೆ ಬೇಕು. ಕಾಂಗ್ರೆಸ್ ಮಾದರಿಯ ಉದಾರವಾದಿ ರಾಷ್ಟ್ರೀಯವಾದವು ನಿರ್ಮಿಸಿದ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟು ದೋಷಗಳಿದ್ದರೂ ಅದೂ ಇದೂ ಒಂದೇ ಅಲ್ಲ. ಆದರೆ ಹಿಂದುತ್ವವಾದ ಪರಿಕಲ್ಪನೆಗಳು ನಮ್ಮ ಸಮಾಜದಲ್ಲಿ-ವಿಶೇಷವಾಗಿ ಬ್ರಾಹ್ಮಣರು ಮತ್ತು ಇತರ ಮೇಲ್ಜಾತಿಗಳಲ್ಲಿ - ವ್ಯಾಪಕವಾಗಿ ಹರಡಿಕೊಂಡಿವೆ. ಆದ್ದರಿಂದ ಪ್ರಸಕ್ತ ಶಿಕ್ಷಣ ವ್ಯವಸ್ಥೆಯೊಳಗೇ ಅವು ಚಾಪೆ ಕೆಳಗಿನ ನೀರಿನಂತೆ ವ್ಯಾಪಿಸಿಕೊಂಡಿವೆ. ಆದರೆ ಸಂಪೂರ್ಣವಾಗಿ ಅದೇ ಮಾದರಿಯಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸುವ ಕೆಲಸ ಆಧುನಿಕ ಹಿಂದುತ್ವವಾದಿಗಳ ಮುಂದಿದೆ.
ಇದರಲ್ಲಿನ ಇತಿಹಾಸದ ಪಾಠಗಳಿಗೆ ಅವರ ಆದ್ಯತೆ ಕೊಡುವುದು ಅವರ ಗುರಿಗಳನ್ನು ಪರಿಗಣಿಸಿಕೊಂಡರೆ ಸಹಜ. ಯುವಕರಲ್ಲಿ ರಾಷ್ಟ್ರದ ಬಗೆಗಿನ ಆರಾಧನಾ ಭಾವನೆಯನ್ನು ಹೆಚ್ಚಿಸಬೇಕಾದರೆ ಈ ರಾಷ್ಟ್ರವು ಒಂದು ಕಾಲದಲ್ಲಿ ಅತ್ಯಂತ ಶ್ರೇಷ್ಠವಾಗಿತ್ತು ಎಂದು ಹೇಳಬೇಕು, ಆದರೆ ಅನ್ಯ ರಾಷ್ಟ್ರಗಳ ಷಡ್ಯಂತ್ರಗಳಿಂದ, ದಾಳಿಯಿಂದ, ಅತಿಕ್ರಮಣದಿಂದ, ಸಾಂಸ್ಕೃತಿಕ ‘ಸಂಕರ’ದಿಂದ ಅದು ತನ್ನ ತೇಜಸ್ಸನ್ನು ಕಳೆದುಕೊಂಡಿದೆ ಎಂದು ಹೇಳಬೇಕು. ವಾಸ್ತವಿಕತೆ ಹೆಸರಲ್ಲಿ ಅಥವಾ ವಿಜ್ಞಾನದ ಹೆಸರಿನಲ್ಲಿ ದೌರ್ಬಲ್ಯಗಳನ್ನು ಎತ್ತಿ ತೋರಿಸುವುದು ಮತ್ತು ಜಾತ್ಯತೀತತೆ ಅಥವಾ ಸಹಿಷ್ಣುತೆಯ ಹೆಸರಿನಲ್ಲಿ ‘ಸಂಕರ’ವನ್ನು ಆಹ್ವಾನಿಸುವುದು ರಾಷ್ಟ್ರ ಮತ್ತು ರಾಷ್ಟ್ರದ ಭವಿಷ್ಯಕ್ಕೆ ಹಾನಿಕಾರಕವೆಂದು ಕಲಿಸಬೇಕು. ಸಾಮಾಜಿಕ ನ್ಯಾಯ ಅಥವಾ ಸಮಾನತೆಯ ಹೆಸರಿನಲ್ಲಿ ‘ನಮ್ಮ’ ಸಂಸ್ಕೃತಿಯನ್ನು ಅವಹೇಳನ ಮಾಡುವುದು ಅನಿಷ್ಟ ಎಂದು ಬೋಧಿಸಬೇಕು.
ಅದಕ್ಕಾಗಿಯೇ ಅವರು ಇತಿಹಾಸ ಬರವಣಿಗೆ ಮತ್ತು ಇತಿಹಾಸ ಪಠ್ಯಪುಸ್ತಕಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ವಾಸ್ತವವಾಗಿ ಈ ‘ಹೋರಾಟ’ ಬಹಳ ಹಿಂದಿನಿಂದಲೂ ನಡೆಯುತ್ತಿದ್ದರೂ ಹಿಂದುತ್ವವಾದಿಗಳು ಇಲ್ಲಿಯವರೆಗೆ ಮೇಲುಗೈ ಸಾಧಿಸಿಲ್ಲ. ಬ್ರಾಹ್ಮಣೀಯಲೋಕ ದೃಷ್ಟಿಕೋನವನ್ನು ಅವಿಮರ್ಶಾತ್ಮಕವಾಗಿ ನುಂಗಿರುವ ಹಲವು ಇತಿಹಾಸಕಾರರು ಜಾತ್ಯತೀತ, ಮಾನವತಾವಾದಿ, ವೈಜ್ಞಾನಿಕ ಇತಿಹಾಸಶಾಸ್ತ್ರದೊಂದಿಗೆ ಐವತ್ತು ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ಹೆಚ್ಚುಕಮ್ಮಿ ೨೦ನೇ ಶತಮಾನದ ಆರಂಭದ ವರ್ಷಗಳಿಂದಲೂ ಘರ್ಷಣೆಯನ್ನು ಮುಂದುವರಿಸಿದ್ದಾರೆ. ಆದರೆ ಇದೀಗ ಪ್ರಥಮ ಬಾರಿಗೆ ಹಿಂದುತ್ವವಾದದ್ದೇ ಮೇಲುಗೈಯಾಗುವ ಸೂಚನೆಗಳು ಗೋಚರಿಸುತ್ತಿವೆ.
ಆದರೆ ಈ ಹೋರಾಟ ಇತಿಹಾಸದ ಹತ್ತಿರ ನಿಂತುಬಿಡುವುದಿಲ್ಲ. ಸಾಹಿತ್ಯ, ತತ್ವಶಾಸ್ತ್ರ ಮತ್ತು ಸಂಸ್ಕೃತಿಯ ಇತರ ‘ಮಾನವಿಕ’ ಶಾಸ್ತ್ರಗಳು ಮತ್ತು ಸಾಮಾಜಿಕ ವಿಜ್ಞಾನಗಳಿಗೂ ಕೂಡ ಹರಡುತ್ತದೆ. ಗಣಿತದಲ್ಲೂ ಸಹ ‘ವೇದಗಣಿತ’ ಒಂದಿದೆ ಎನ್ನುತ್ತಿದ್ದಾರೆ. ಆದರೆ ಇದು ಗಣಿತದ ಅಧ್ಯಯನಕ್ಕಿಂತ ಇತಿಹಾಸದ ಅಧ್ಯಯನಕ್ಕೆ ಹೆಚ್ಚು ವ್ಯತ್ಯಾಸವನ್ನುಂಟು ಮಾಡುತ್ತದೆ.
ಈ ಹೋರಾಟದಲ್ಲಿ ಹಿಂದುತ್ವವಾದವನ್ನು ಎದುರಿಸಲು ಎಲ್ಲ ಪ್ರಗತಿಪರರು ಸಿದ್ಧರಿದ್ದಾರಾದರೂ, ಅವರನ್ನು ರಾಜಕೀಯವಾಗಿ ಎದುರಿಸಿದರೆ ಸಾಕಾಗುವುದಿಲ್ಲ, ಸಂಶೋಧನಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ ಎದುರಿಸಬೇಕಾಗಿದೆ. ಪ್ರಜಾಸತ್ತಾತ್ಮಕ ಚಳವಳಿಗಳು ಇದಕ್ಕೆ ಸಿದ್ಧವಾಗಿವೆಯೇ? ನನ್ನ ಪ್ರಶ್ನೆ ಇಚ್ಛಾಶಕ್ತಿಯ ಬಗ್ಗೆ ಅಲ್ಲ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಸಾಮರ್ಥ್ಯದಲ್ಲಿ ಸಿದ್ಧವಿದೆಯೇ?







