ಅಂಡಾಣು ಮಾರಾಟ | ಬಡ ಮಹಿಳೆಯರನ್ನು ಕರೆತಂದು ಅಂಡಾಣು ಸಂಗ್ರಹ ಮಾಡುತ್ತಿದ್ದ ಐವಿಎಫ್ ಹಗರಣ ಬಹಿರಂಗ

Photo Credit : thehindu.com
ಹೈದರಾಬಾದ್, ಸಿಕಂದರಾಬಾದ್ನ 5 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು: ಅಂಡಾಣು ಸಂಗ್ರಹ ಜಾಲದಲ್ಲಿ ಸಿಕ್ಕಿಬಿದ್ದಿದ್ದ 43 ಮಹಿಳೆಯರ ರಕ್ಷಣೆ
ಅಕ್ರಮವಾಗಿ ಅಂಡಾಣುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದರ ವಿರುದ್ಧ ತೆಲಂಗಾಣದ ಮಲ್ಕಾಜ್ಗಿರಿ ಪೊಲೀಸರು ಅಕ್ಟೋಬರ್ 30ರಂದು ಕಾರ್ಯಾಚರಣೆ ನಡೆಸಿದ್ದಾರೆ. ಹೈದರಾಬಾದ್ ಮತ್ತು ಸಿಕಂದರಾಬಾದ್ನ ಐದು ಕಡೆಗಳಲ್ಲಿ ಪ್ರಕಾಶ್ನಗರ, ಬೇಗಂಪೇಟೆ, ಎರ್ರಗಡ್ಡ, ಸರೂರ್ನಗರ ಮತ್ತು ಗೋಪಾಲಪುರಂ ಏಕಕಾಲದಲ್ಲಿ ದಾಳಿ ನಡೆಸಿ ಒಟ್ಟು 43 ಸಂತ್ರಸ್ತ ಮಹಿಳೆಯರನ್ನು ರಕ್ಷಿಸಲಾಗಿದೆ. ಇದೊಂದು ಅಕ್ರಮ ಅಂಡಾಣು ಸಂಗ್ರಹ ಹಗರಣ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಹಣದ ಆಮಿಷವು ಬಹಳ ದೊಡ್ಡ ಪ್ರಲೋಭನೆಯಾಗಿತ್ತು. ಹೈದರಾಬಾದ್ನ ಹೊರವಲಯದಲ್ಲಿರುವ ಮಹಿಳಾ ಆಶ್ರಯ ತಾಣವೊಂದರ ಕೋಣೆಯಿಂದ ರಕ್ಷಿಸಲಾದ 25 ವರ್ಷದ ಯುವತಿಯೊಬ್ಬರ ತಂದೆಯ ಮೂತ್ರಪಿಂಡಗಳು ವಿಫಲವಾಗಿದ್ದವು. ಅವರಿಗೆ ಕಸಿಯ ಅಗತ್ಯವಿತ್ತು. ಅದಕ್ಕಾಗಿ 3.5 ಲಕ್ಷ ರೂ. ಸಾಲ ಪಡೆದಿದ್ದರು. ಅದನ್ನು ತೀರಿಸಲು ಇಲ್ಲಿಗೆ ಬಂದಿದ್ದರು. “ಅಂಡಾಣು ಮಾರಾಟ ಮಾಡುವುದು ಕಾನೂನು ಬಾಹಿರ ಎಂದು ನನಗೆ ತಿಳಿದಿರಲಿಲ್ಲ. ಇದಕ್ಕಾಗಿ ನನಗೆ 50,000 ರೂ. ನೀಡುವುದಾಗಿ ಹೇಳಲಾಗಿತ್ತು” ಎಂದು ಮಹಿಳೆ ತಿಳಿಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಆರ್ಥಿಕವಾಗಿ ಬಡ ಮಹಿಳೆಯರನ್ನು ಅಕ್ರಮವಾಗಿ ಅಂಡಾಣು ದಾನ ಮಾಡಲು ಪ್ರಲೋಭನೆ ಒಡ್ಡಿ ಹೈದರಾಬಾದ್ಗೆ ಕರೆತರಲಾಗಿತ್ತು. ಇಂತಹ ಅಂಡಾಣು ಸಂಗ್ರಹ ಪ್ರಕ್ರಿಯೆ ಹೆಚ್ಚಾಗಿ ಮಹಿಳಾ ಹಾಸ್ಟೆಲ್ ಮತ್ತು ಇತರ ವಸತಿ ಸೌಕರ್ಯವಿರುವ ಸ್ಥಳಗಳಲ್ಲಿ ನಡೆಯುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಎಂಟು ಜನರನ್ನು ಬಂಧಿಸಲಾಗಿದೆ. ಜಾಲವು ಕಳೆದ 2 ವರ್ಷಗಳಿಂದ ಸಕ್ರಿಯವಾಗಿರಬಹುದು ಎಂದು ಶಂಕಿಸಲಾಗಿದೆ. ನಗರದಲ್ಲಿರುವ 23 ಐವಿಎಫ್ ಕೇಂದ್ರಗಳ ಜೊತೆಗೆ ಈ ಜಾಲಕ್ಕೆ ಸಂಪರ್ಕವಿರುವ ಸಾಧ್ಯತೆಯಿದೆ.
ಈ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿದ್ದ ‘ಹ್ಯೂಮಾಗ್ ಎಚ್ಪಿ 150 ಐಯು’ ಇಂಜೆಕ್ಷನ್ಗಳ ಐದು ಬಾಟಲಿಗಳು, ಒಂದು ಸಿರಿಂಜ್, ಎರಡು ಸೂಜಿಗಳು ಮತ್ತು ಕೃತಕ ಪ್ರೊಜೆಸ್ಟಿನ್ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ ಕಾಯ್ದೆ 2021 ಮಾನವ ಅಂಡಾಣುಗಳ ಮಾರಾಟ ಅಥವಾ ವರ್ಗಾವಣೆಯನ್ನು ನಿಷೇಧಿಸುತ್ತದೆ. ಅಂಡಾಣು ದಾನಿ 23ರಿಂದ 35 ವರ್ಷ ವಯಸ್ಸಿನವರಾಗಬೇಕು. ಅವರ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ದಾನ ಮಾಡಬಹುದು. ಏಳು ಅಂಡಾಣುಗಳಿಗಿಂತ ಹೆಚ್ಚು ಪಡೆಯಬಾರದು ಎಂದು ಷರತ್ತು ವಿಧಿಸಲಾಗಿದೆ. ಮರುಪಡೆಯುವಿಕೆ ಪ್ರಕ್ರಿಯೆಯಿಂದ ಉಂಟಾಗುವ ತೊಡಕುಗಳನ್ನು ಸರಿದೂಗಿಸಲು ಕಮಿಷನ್ ಮಾಡುವ ದಂಪತಿಗಳು ಅಥವಾ ಮಹಿಳೆ ದಾನಿಗೆ 12 ತಿಂಗಳವರೆಗೆ ಆರೋಗ್ಯ ವಿಮೆ ಒದಗಿಸಬೇಕೆಂದು ಕಾನೂನು ಬಯಸುತ್ತದೆ.
ತನಿಖಾಧಿಕಾರಿಗಳ ಪ್ರಕಾರ, ಪೊಲೀಸ್ ದಾಳಿಗಳ ನಂತರ ದೊಡ್ಡ ಜಾಲದ ಪತ್ತೆಯಾಗಿದೆ. ಅಂಡಾಣು ದಾನಕ್ಕೆ ಬದಲಾಗಿ ಹಣ ನೀಡುವ ಮೂಲಕ ವಿವಿಧ ರಾಜ್ಯಗಳಲ್ಲಿ ಮಹಿಳೆಯರನ್ನು ಗುರುತಿಸುವ ಸಂಘಟಕರು, ನೇಮಕಾತಿದಾರರು, ಏಜೆಂಟ್ಗಳು ಮತ್ತು ಮಧ್ಯವರ್ತಿಗಳ ಮೂಲಕ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಅಧಿಕಾರಿಗಳ ಪ್ರಕಾರ, ಯುವತಿಯರಿಗೆ ಹೈದರಾಬಾದ್ಗೆ ಆಮಿಷವೊಡ್ಡಿ ನಂತರ ಹಾಸ್ಟೆಲ್ ಮತ್ತು ವಿಲ್ಲಾಗಳಲ್ಲಿ ವಸತಿ ನೀಡಲಾಗಿತ್ತು. ರಕ್ಷಿಸಲಾದ ಮಹಿಳೆಯರು ದಿಲ್ಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಂದ ಬಂದವರಾಗಿದ್ದರು.
ರಕ್ಷಣಾ ಕೇಂದ್ರದಲ್ಲಿದ್ದ ಯುವತಿಯೊಬ್ಬರು ಮೂಲತಃ ಮುಂಬೈನವರು. ಹಾಸಿಗೆ ಹಿಡಿದಿರುವ ತಮ್ಮ ಪತಿ ಮತ್ತು ಅಜ್ಜಿಯ ಕಾರಣದಿಂದ ಈ ಕೆಲಸ ಒಪ್ಪಿಕೊಂಡಿದ್ದರು. “75 ವರ್ಷದ ಅಜ್ಜಿಯನ್ನು ಮತ್ತು ಅಪಘಾತದಿಂದ ಗಾಯಗೊಂಡ ಪತಿಯನ್ನು ನೋಡಿಕೊಳ್ಳಬೇಕಿದೆ. ಇಲ್ಲಿ 30,000ರೂ. ನೀಡುವುದಾಗಿ ಹೇಳಿದರು. ನಾಲ್ಕು ಹೊತ್ತು ಊಟ ಒದಗಿಸುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಒಪ್ಪಿಕೊಂಡೆ” ಎಂದು ಅವರು ಹೇಳಿದ್ದಾರೆ.
ಕೋಲ್ಕತ್ತಾದ 30 ವರ್ಷದ ಮಹಿಳೆಗೆ ಮಕ್ಕಳಿಲ್ಲದವರಿಗೆ ಸಹಾಯ ಮಾಡಿ ಜೀವನೋಪಾಯ ಕಂಡುಕೊಳ್ಳಬಹುದು ಎಂದು ಹೇಳಲಾಗಿತ್ತು. “ಮಕ್ಕಳಿಲ್ಲದ ಜನರಿಗೆ ಸಹಾಯ ಮಾಡುವ ಮೂಲಕ ಜೀವನವನ್ನೂ ಕಂಡುಕೊಳ್ಳಬಹುದು ಎಂದು ಬಂದೆ” ಎನ್ನುತ್ತಾರೆ. 33 ವರ್ಷದ ಮಹಿಳೆಯೊಬ್ಬರ ಪ್ರಕಾರ, “ಕುಟುಂಬದಲ್ಲಿ ಪತಿ ಮತ್ತು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದ್ದಾಗ ಇವರ ಪರಿಚಯವಾಯಿತು. ತಿಂಗಳಿಗೆ 30,000ರೂ. ಸಿಗುತ್ತದೆ ಎಂದಾಗ ಸಂಕಷ್ಟದ ಸಮಯದಿಂದ ಪಾರಾಗಲು ದಾರಿ ಸಿಕ್ಕಿತ್ತು” ಎನ್ನುತ್ತಾರೆ.
ಆದರೆ, ಮಹಿಳೆಯರಿಗೆ ತಾವು ಯಾವ ಪರಿಸ್ಥಿತಿಗೆ ಸಿಲುಕಿಕೊಳ್ಳುತ್ತೇವೆ ಎನ್ನುವ ಅರಿವು ಇರಲಿಲ್ಲ. “ಇದೊಂದು ಅಡುಗೆ ಅಥವಾ ಊಟದ ವ್ಯವಸ್ಥೆ ಸಂಬಂಧಿತ ಕೆಲಸವಾಗಿದ್ದು, ತಿಂಗಳಿಗೆ 40,000ರೂ. ಸಿಗುತ್ತದೆ ಎಂದು ಹೇಳಲಾಗಿತ್ತು. ನಂತರ ಅಂಡಾಣು ಮಾರಾಟ ಮಾಡುವ ಕೆಲಸ ಎಂದು ಅರಿವಾಗಿತ್ತು. ಆದರೆ ನೋವು ರಹಿತವಾದ ಪ್ರಕ್ರಿಯೆ ಎಂದು ಒಪ್ಪಿಕೊಂಡೆ” ಎನ್ನುತ್ತಾರೆ 26 ವರ್ಷದ ಮಹಿಳೆ.
ಆದರೆ ಏಜೆಂಟ್ಗಳು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ದಾಖಲೆಗಳನ್ನು ಕಸಿದುಕೊಂಡು ನಂತರ ಅವರಿಗೆ ಮರಳಿಸಲಿಲ್ಲ. ಮಹಿಳೆಯರು ದೀಪಾವಳಿ ಸಂದರ್ಭದಲ್ಲಿ ಊರಿಗೆ ಹೋಗಲು ಬಯಸಿದ್ದರು. ಆದರೆ, ಈ ಮಹಿಳೆಯರು ಪ್ರಮುಖ ಸಾಕ್ಷಿಗಳು ಮತ್ತು ಸಂತ್ರಸ್ತರೂ ಹೌದು. ಜಾಲದಲ್ಲಿ ಭಾಗಿಯಾಗಿರುವ ಉಳಿದವರು ಸಿಕ್ಕಿ ಬೀಳಲು ಮಹಿಳೆಯರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸುವುದು ಮುಖ್ಯವಾಗಿದೆ. ಸೂಕ್ತ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳದೆ ಅವರನ್ನು ಕಳುಹಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಪೊಲೀಸರು.






