ತೃಣಮೂಲ ಕಾಂಗ್ರೆಸ್ ಹೆಸರು ಮತ್ತು ಚಿಹ್ನೆಗೆ ತಾತ್ಕಾಲಿಕ ಮುಟ್ಟುಗೋಲು ನಂತರ ಎರಡೂ ಬಣಗಳಿಗೆ ಹೊಸ ಹೆಸರು, ಚಿಹ್ನೆ ನೀಡಿದ ಚುನಾವಣಾ ಆಯೋಗ; ಇಲ್ಲಿವರೆಗೆ ಏನೇನಾಯ್ತು?

ಚುನಾವಣಾ ಆಯೋಗ , ತೃಣಮೂಲ ಕಾಂಗ್ರೆಸ್
ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಪಕ್ಷದ ಒಳಜಗಳದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು (ECI) ಪಕ್ಷದ ಹೆಸರು ಮತ್ತು ‘ಹೂವು ಮತ್ತು ಹುಲ್ಲು’ ಚಿಹ್ನೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು ಗುರುವಾರ ಆದೇಶ ಹೊರಡಿಸಿದೆ. ಮಮತಾ ಬ್ಯಾನರ್ಜಿ ಮತ್ತು ಅರೂಪ್ ರಾಯ್ ನೇತೃತ್ವದ ಎರಡು ಬಣಗಳು ಪಕ್ಷದ ಮೇಲೆ ಹಕ್ಕು ಸಾಧಿಸುತ್ತಿರುವುದರಿಂದ ಆಯೋಗ ಈ ಕ್ರಮ ಕೈಗೊಂಡಿದೆ.
ಅಕ್ಟೋಬರ್ 6ರಂದು ನಡೆಯಲಿರುವ ರೇಜಿನಗರ್ ಮತ್ತು ನಂದಿಗ್ರಾಮ ವಿಧಾನಸಭಾ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ. ಹುಮಾಯೂನ್ ಕಬೀರ್ ಮತ್ತು ಸುವೇಂದು ಅಧಿಕಾರಿ ಅವರ ರಾಜೀನಾಮೆಯಿಂದ ತೆರವಾದ ಈ ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ. ಪಕ್ಷದೊಳಗಿನ ವಿವಾದ ಇತ್ಯರ್ಥವಾಗುವವರೆಗೆ ಉಭಯ ಬಣಗಳೂ ಪಕ್ಷದ ಅಧಿಕೃತ ಹೆಸರು ಹಾಗೂ ಮೀಸಲು ಚಿಹ್ನೆಯನ್ನು ಬಳಸುವಂತಿಲ್ಲ ಎಂದು 14 ಪುಟಗಳ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಗುರುವಾರ ಹೊರಡಿಸಲಾದ 14 ಪುಟಗಳ ಆದೇಶದಲ್ಲಿ ಹೀಗೆ ಹೇಳಲಾಗಿದೆ: "ಆಯೋಗದ ದಾಖಲೆಯಲ್ಲಿ ಲಭ್ಯವಿರುವ ಸಮಗ್ರ ಮಾಹಿತಿಯನ್ನು ಸರಿಯಾಗಿ ಪರಿಗಣಿಸಿದ ನಂತರ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ನಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಒಂದು ಬಣ ಮತ್ತು ಅರೂಪ್ ರಾಯ್ ಅವರ ನೇತೃತ್ವದ ಮತ್ತೊಂದು ಬಣ ಎಂಬ ಎರಡು ಪ್ರತಿ ಸ್ಪರ್ಧಿ ಗುಂಪುಗಳಿವೆ ಎಂದು ಆಯೋಗವು ಅಭಿಪ್ರಾಯಪಡುತ್ತದೆ. ಪ್ರತಿ ಗುಂಪೂ ತಾವೇ ಅಸಲಿ ಪಕ್ಷವೆಂದು ಹಕ್ಕು ಸಾಧಿಸುತ್ತಿರುವುದರಿಂದ, ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ 1968ರ ಪ್ಯಾರಾ 15ರ ಅಡಿಯಲ್ಲಿ ಈ ವಿಷಯದ ಬಗ್ಗೆ ಆಯೋಗವು ಸಮಗ್ರ ತೀರ್ಮಾನ ಕೈಗೊಳ್ಳುವುದು ಅಗತ್ಯವಾಗಿದೆ."
ಅದಕ್ಕೆ ಅನುಗುಣವಾಗಿ, ಎರಡೂ ಪ್ರತಿ ಸ್ಪರ್ಧಿ ಗುಂಪುಗಳಿಗೆ "ಸಮಾನ ಅವಕಾಶ ಕಲ್ಪಿಸಲು ಮತ್ತು ಅವುಗಳ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ರಕ್ಷಿಸಲು, ಹಾಗೂ ಹಿಂದಿನ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು", ಉಪಚುನಾವಣೆಯ ಉದ್ದೇಶಕ್ಕಾಗಿ ಆಯೋಗವು ಮಧ್ಯಂತರ ಆದೇಶವನ್ನು ಹೊರಡಿಸಿದೆ.
ವಿವಾದವು ಬಗೆಹರಿಯುವವರೆಗೆ ಈ ಆದೇಶವು ಜಾರಿಯಲ್ಲಿರುತ್ತದೆ ಎಂದು ಚುನಾವಣಾ ಆಯೋಗ ಹೆೇಳಿದೆ,
ಉಭಯ ಬಣಗಳೂ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' ಹೆಸರನ್ನು ಸ್ವತಂತ್ರವಾಗಿ ಬಳಸುವಂತಿಲ್ಲ, ಹಾಗೆಯೇ ತೃಣಮೂಲ ಕಾಂಗ್ರೆಸ್ಗೆ ಮೀಸಲಾಗಿರುವ 'ಹೂವು ಮತ್ತು ಹುಲ್ಲು' ಚಿಹ್ನೆಯನ್ನು ಸಹ ಬಳಸುವಂತಿಲ್ಲ.ಎರಡೂ ಗುಂಪುಗಳು ತಮ್ಮದೇ ಆದ ಗುಂಪುಗಳಿಗಾಗಿ ತಾವು ಬಯಸುವ ಹೆಸರುಗಳನ್ನು ಇಟ್ಟುಕೊಳ್ಳಬಹುದು. ತಾವು ಬಯಸಿದರೆ, ತಮ್ಮ ಮೂಲ ಪಕ್ಷವಾದ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' ಜೊತೆಗೂ ಹೆಸರನ್ನು ಜೋಡಿಸಿಕೊಳ್ಳಬಹುದು" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆಯೋಗವು ತಾತ್ಕಾಲಿಕವಾಗಿ ಗುರುತಿಸಲು ಅನುಮೋದಿಸಬಹುದಾದ ಹೆಸರುಗಳನ್ನು ಶುಕ್ರವಾರ ಬೆಳಿಗ್ಗೆ 11 ಗಂಟೆಯೊಳಗೆ ಸಲ್ಲಿಸುವಂತೆ ಎರಡೂ ಗುಂಪುಗಳಿಗೆ ಸೂಚಿಸಲಾಗಿತ್ತು. ಅವರು ತಮ್ಮ ಆದ್ಯತೆಯ ಕ್ರಮದಲ್ಲಿ ಮೂರು ಆಯ್ಕೆಗಳನ್ನು ನೀಡಬೇಕು, ಅದರಲ್ಲಿ ಯಾವುದಾದರೂ ಒಂದನ್ನು ಆಯೋಗವು ಅನುಮೋದಿಸಬಹುದು. ಈ ಗುಂಪುಗಳು ತಮ್ಮ ಆದ್ಯತೆಯ ಕ್ರಮದಲ್ಲಿ ಮೂರು ಮುಕ್ತ ಚಿಹ್ನೆಗಳ ಹೆಸರುಗಳನ್ನು ಸಹ ಆಯೋಗಕ್ಕೆ ಸಲ್ಲಿಸಬೇಕು.
ಆಯೋಗವು ಗುರುವಾರ ಎರಡೂ ಬಣಗಳ ನಿಯೋಗಗಳ ವಾದವನ್ನು ಆಲಿಸಿತು.
ತನ್ನ ಆದೇಶದಲ್ಲಿ, ಚಿಹ್ನೆ ಆದೇಶದ ಪ್ಯಾರಾ 15ರ ಅಡಿಯಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯವಿಲ್ಲ ಎಂದು ಅದು ಗಮನಿಸಿದೆ.
"ಏತನ್ಮಧ್ಯೆ, ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಪಕ್ಷದ ಚಿಹ್ನೆ ಮತ್ತು ಪಕ್ಷದ ಹೆಸರನ್ನು ಬಳಸುವ ತುರ್ತು ಪರಿಸ್ಥಿತಿಯನ್ನು ಆಯೋಗವು ಗಮನಿಸಿದೆ" ಎಂದು ಅದು ಹೇಳಿದೆ.
ಮಾನ್ಯತೆ ಪಡೆದ ರಾಜಕೀಯ ಪಕ್ಷದಲ್ಲಿ ಪರಸ್ಪರ ವಿರೋಧಿ ವಿಭಾಗಗಳು ಅಥವಾ ಗುಂಪುಗಳಿವೆ ಮತ್ತು ಪ್ರತಿಯೊಂದೂ ತಾವೇ ಆ ಪಕ್ಷವೆಂದು ಹಕ್ಕು ಸಾಧಿಸುತ್ತಿವೆ ಎಂದು ಇಸಿಐಗೆ ಮನವರಿಕೆಯಾದಾಗ, ಲಭ್ಯವಿರುವ ಎಲ್ಲ ಅಂಶಗಳು ಮತ್ತು ಪರಿಸ್ಥಿತಿಗಳನ್ನು ಪರಿಗಣಿಸಿ, ಆ ವಿಭಾಗಗಳ ಅಥವಾ ಗುಂಪುಗಳ ಪ್ರತಿನಿಧಿಗಳನ್ನು ಹಾಗೂ ಕೇಳಿಸಿಕೊಳ್ಳಲು ಬಯಸುವ ಇತರ ವ್ಯಕ್ತಿಗಳನ್ನು ಆಲಿಸಿದ ನಂತರ, ಅಂತಹ ಒಂದು ವಿರೋಧಿ ಗುಂಪು ಅಥವಾ ವಿಭಾಗವು ಆ ಮಾನ್ಯತೆ ಪಡೆದ ಪಕ್ಷವಾಗಿದೆ ಅಥವಾ ಯಾರೂ ಅಲ್ಲ ಎಂದು ಆಯೋಗವು ನಿರ್ಧರಿಸಬಹುದು ಎಂದು ಪ್ಯಾರಾ 15 ಹೇಳುತ್ತದೆ.
ಚುನಾವಣಾ ಆಯೋಗದ ಈ ನಿರ್ಣಯವು ಅಂತಹ ಎಲ್ಲ ವಿರೋಧಿ ವಿಭಾಗಗಳು ಅಥವಾ ಗುಂಪುಗಳಿಗೆ ಬದ್ಧವಾಗಿರುತ್ತದೆ.
►ಎಐಟಿಸಿ ಹೆಸರು ಮತ್ತು ಚಿಹ್ನೆಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿದ್ದು ಯಾಕೆ?
ಅಂತಿಮ ಆದೇಶ ಬರುವವರೆಗೆ, 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' ಹೆಸರು ಮತ್ತು ಅದರ 'ಹೂವು ಮತ್ತು ಹುಲ್ಲು' ಚಿಹ್ನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ನಿರ್ಧರಿಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಅಕ್ಟೋಬರ್ 6ರಂದು ನಂದಿಗ್ರಾಮ ಮತ್ತು ರೇಜಿನಗರ್ ಸೇರಿದಂತೆ ಮುಂಬರುವ ಉಪಚುನಾವಣೆಗಳಲ್ಲಿ ಈ ಎರಡು ಎದುರಾಳಿ ಬಣಗಳ ಪೈಕಿ ಯಾರೂ ಸಹ ಪಕ್ಷದ ಪ್ರಸ್ತುತ ಹೆಸರು ಅಥವಾ ಚಿಹ್ನೆಯನ್ನು ಬಳಸಬಾರದು ಎಂಬುದು ಈ ಮಧ್ಯಂತರ ಕ್ರಮದ ಅರ್ಥ.
ಚುನಾವಣಾ ಆಯೋಗದ ಪ್ರಕಾರ, "ಎರಡೂ ಬಣಗಳಿಗೆ ಸಮಾನ ಅವಕಾಶ ಕಲ್ಪಿಸಲು ಹಾಗೂ ಅವುಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು" ಈ ಮಧ್ಯಂತರ ವ್ಯವಸ್ಥೆಯನ್ನು ಮಾಡಲಾಗಿದೆ. ಉಪಚುನಾವಣೆಗಾಗಿ ಸೂಚಿಸಲಾದ ಮುಕ್ತ ಚಿಹ್ನೆಗಳ ಪಟ್ಟಿಯಿಂದ ಪ್ರತ್ಯೇಕ ಹೆಸರುಗಳು ಮತ್ತು ಚಿಹ್ನೆಗಳನ್ನು ಆರಿಸಿಕೊಳ್ಳುವಂತೆ ಎರಡೂ ಬಣಗಳಿಗೆ ಸೂಚಿಸಲಾಗಿದೆ.
ಮಾನ್ಯತೆ ಪಡೆದ ರಾಜಕೀಯ ಪಕ್ಷವನ್ನು ಯಾವ ಬಣವು ಪ್ರತಿನಿಧಿಸುತ್ತದೆ ಎಂಬುದನ್ನು ನಿರ್ಧರಿಸಲು, ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ 1968ರ ಪ್ಯಾರಾ 15ರ ಅಡಿಯಲ್ಲಿ "ಸಮಗ್ರ ತೀರ್ಮಾನ" ಅಗತ್ಯವಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆ ನಿರ್ಣಯ ಕೈಗೊಳ್ಳುವವರೆಗೆ ಈ ಮಧ್ಯಂತರ ಆದೇಶವು ಜಾರಿಯಲ್ಲಿರುತ್ತದೆ.
►ತೃಣಮೂಲ ಪಕ್ಷದೊಳಗಿನ ಹೆಸರು-ಚಿಹ್ನೆ ವಿವಾದ
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸಿಂಧುತ್ವ ಮತ್ತು ಪದಾಧಿಕಾರಿಗಳ ನೇಮಕಾತಿ ಸೇರಿದಂತೆ ಪಕ್ಷದ ಸಾಂಸ್ಥಿಕ ಅಧಿಕಾರದ ಮೇಲಿನ ಪರಸ್ಪರ ಹಕ್ಕು ಮಂಡನೆಗಳೇ ಈ ವಿವಾದದ ಕೇಂದ್ರಬಿಂದುವಾಗಿವೆ. ಚುನಾವಣಾ ಆಯೋಗವು ಎರಡು ವಿರೋಧಿ ಗುಂಪುಗಳನ್ನು ಗುರುತಿಸಿದೆ: ಒಂದು ಮಮತಾ ಬ್ಯಾನರ್ಜಿ ನೇತೃತ್ವದ ಗುಂಪು ಮತ್ತು ಮತ್ತೊಂದು ರಿತಬ್ರತ ಬ್ಯಾನರ್ಜಿ ಹಾಗೂ ಅರೂಪ್ ರಾಯ್ ಅವರೊಂದಿಗೆ ಗುರುತಿಸಿಕೊಂಡಿರುವ ಗುಂಪು. ಅರೂಪ್ ರಾಯ್-ರಿತಬ್ರತ ಬ್ಯಾನರ್ಜಿ ಬಣದ ಪ್ರಕಾರ, ರಾಷ್ಟ್ರೀಯ ಕಾರ್ಯಕಾರಿಣಿಯ ಅವಧಿಯು 2025 ಫೆಬ್ರವರಿ 11ರಂದು ಮುಕ್ತಾಯಗೊಂಡಿದೆ. 2026 ಜೂನ್ 22ರಂದು ನಡೆದ ವಿಶೇಷ ಅಧಿವೇಶನವು ಅರೂಪ್ ರಾಯ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದು ಅದು ವಾದಿಸಿದೆ.
ಮಮತಾ ಬ್ಯಾನರ್ಜಿ ಬಣವು ಆ ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸಿದೆ. ಆಯೋಗಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮಮತಾ ಬ್ಯಾನರ್ಜಿ ಅವರು, ಎದುರಾಳಿ ಗುಂಪಿನ ಹಕ್ಕುಗಳು ಮತ್ತು ಪದಾಧಿಕಾರಿಗಳ ಚುನಾವಣೆಗಳು ಪಕ್ಷದ ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ. ಪಕ್ಷದ ಸಂವಿಧಾನಕ್ಕೆ ತಂದ ತಿದ್ದುಪಡಿಗಳು ರಾಷ್ಟ್ರೀಯ ಕಾರ್ಯಕಾರಿಣಿ ಹಾಗೂ ಇತ್ತೀಚಿನ ಇತರ ಸಾಂಸ್ಥಿಕ ಸಂಸ್ಥೆಗಳ ಅವಧಿಯನ್ನು 3 ವರ್ಷಗಳಿಂದ 5 ವರ್ಷಗಳಿಗೆ ವಿಸ್ತರಿಸಿವೆ ಎಂದು ಅವರ ಬಣ ವಾದಿಸಿದೆ. ರಿತಬ್ರತ ಬ್ಯಾನರ್ಜಿ ಅವರು ಆ ತಿದ್ದುಪಡಿಗಳ ಸಿಂಧುತ್ವವನ್ನು ವಿರೋಧಿಸಿದ್ದಾರೆ.
►ಹೊಸ ಹೆಸರುಗಳು ಮತ್ತು ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಮತಾ ನೇತೃತ್ವದ ಟಿಎಂಸಿ
ಪಶ್ಚಿಮ ಬಂಗಾಳದಲ್ಲಿ ಅಕ್ಟೋಬರ್ 6ರಂದು ನಡೆಯಲಿರುವ ಉಪಚುನಾವಣೆಗಳ ಮತಪತ್ರದಿಂದ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' (ಎಐಟಿಸಿ) ಹೆಸರು ಮತ್ತು ಅದರ 'ಹೂವು ಮತ್ತು ಹುಲ್ಲು' ಚಿಹ್ನೆಯನ್ನು ತಾತ್ಕಾಲಿಕವಾಗಿ ಕೈಬಿಡುವ ಚುನಾವಣಾ ಆಯೋಗದ ಮಧ್ಯಂತರ ಆದೇಶಕ್ಕೆ, ಪಕ್ಷದ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದೆ.
ಮೂಲಗಳ ಪ್ರಕಾರ, ಮುಂಬರುವ ಚುನಾವಣೆಗೆ ಹೊಸ ಹೆಸರುಗಳು ಮತ್ತು ಚಿಹ್ನೆಗಳ ಆಯ್ಕೆಗಳನ್ನು ಪಕ್ಷವು ಗುರುವಾರ ರಾತ್ರಿ 11:36 ರ ಸುಮಾರಿಗೆ ಚುನಾವಣಾ ಆಯೋಗಕ್ಕೆ ಇಮೇಲ್ ಮೂಲಕ ಕಳುಹಿಸಿದ್ದು, "ತೀವ್ರ ಪ್ರತಿರೋಧದ ನಡುವೆಯೂ" ಇವುಗಳನ್ನು ಸಲ್ಲಿಸಿದೆ.
ಗುರುವಾರ ರಾತ್ರಿ ಹೊರಡಿಸಲಾದ ಮಧ್ಯಂತರ ಆದೇಶದಲ್ಲಿ, ಎಐಟಿಸಿ ಮೇಲಿನ ವಿವಾದಕ್ಕೆ ಸಂಬಂಧಿಸಿದ ಎರಡೂ ಬಣಗಳು ಪಶ್ಚಿಮ ಬಂಗಾಳದ ಉಪಚುನಾವಣೆಗಳಿಗೆ ಪಕ್ಷದ ಹೆಸರು ಮತ್ತು ಅದರ 'ಹೂವು ಮತ್ತು ಹುಲ್ಲು' ಚಿಹ್ನೆಯನ್ನು ಬಳಸದಂತೆ ಚುನಾವಣಾ ಆಯೋಗವು ನಿರ್ದೇಶನ ನೀಡಿತ್ತು. ಅಲ್ಲದೆ, ಶುಕ್ರವಾರ ಬೆಳಗ್ಗೆ ತಮ್ಮ ಆದ್ಯತೆಯ ಹೆಸರುಗಳು ಮತ್ತು ಚಿಹ್ನೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು.
ಪ್ರಸ್ತಾವಿತ ಹೆಸರು ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಅನ್ನು ಹೋಲುವಂತಿರಬಹುದು ಮತ್ತು ಚಿಹ್ನೆಯನ್ನು ಸ್ವತಂತ್ರ ಅಭ್ಯರ್ಥಿಗಳು ಹಾಗೂ ನೋಂದಾಯಿತ ಗುರುತಿಸಲ್ಪಡದ ರಾಜಕೀಯ ಪಕ್ಷಗಳಿಗಾಗಿ ಸೂಚಿಸಲಾದ ಮುಕ್ತ ಅಥವಾ ಲಭ್ಯವಿರುವ ಚಿಹ್ನೆಗಳ ಪಟ್ಟಿಯಿಂದ ಆಯ್ಕೆ ಮಾಡಬೇಕು ಎಂದು ಆಯೋಗ ತಿಳಿಸಿದೆ.
ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ಪ್ರಾರಂಭವಾಗಿ ನಂತರ ಸಂಸತ್ತಿಗೂ ಹಬ್ಬಿದ ಬಂಡಾಯದ ಹಿನ್ನೆಲೆಯಲ್ಲಿ ಈ ಚುನಾವಣಾ ಆಯೋಗದ ಆದೇಶ ಹೊರಬಿದ್ದಿದೆ. ಜೂನ್ನಲ್ಲಿ, 58 ಬಂಡಾಯ ಶಾಸಕರು ಮಮತಾ ಬಣದ ಅಭ್ಯರ್ಥಿ ಸೋವಂದೇಬ್ ಚಟ್ಟೋಪಾಧ್ಯಾಯ ಅವರ ಬದಲಿಗೆ ಉಚ್ಛಾಟಿತ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರು ಮತ್ತು ವಿಧಾನಸಭಾ ಸ್ಪೀಕರಿಂದ ಮಾನ್ಯತೆ ಪಡೆದರು. ಇದು ಪಕ್ಷದ 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಿರುಕಿಗೆ ಕಾರಣವಾಯಿತು.
►ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ಚಿಹ್ನೆ ಮತ್ತು ಹೆಸರು
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಪಕ್ಷವು ಗುರುವಾರ ರಾತ್ರಿ ಚುನಾವಣಾ ಆಯೋಗದ ಆದೇಶದ ನಂತರ ಹೆಸರು ಮತ್ತು ಚಿಹ್ನೆಗಾಗಿ ತಲಾ ಮೂರು ಆಯ್ಕೆಗಳನ್ನು ಸಲ್ಲಿಸಿದೆ. ಮತ್ತೊಂದೆಡೆ, ರಿತಬ್ರತ ಬ್ಯಾನರ್ಜಿ ನೇತೃತ್ವದ ಬಣವು ಶುಕ್ರವಾರ ಬೆಳಿಗ್ಗೆ ತನ್ನ ಆಯ್ಕೆಗಳನ್ನು ಕಳುಹಿಸಿದೆ ಎಂದು ವರದಿಯಾಗಿದೆ.
ʼಇಕನಾಮಿಕ್ ಟೈಮ್ಸ್ʼ ಮೂಲಗಳನ್ನು ಉಲ್ಲೇಖಿಸಿ ರಿತಬ್ರತ ಬ್ಯಾನರ್ಜಿ ನೇತೃತ್ವದ ಬಣವು ಪರಿಗಣನೆಗಾಗಿ ಬ್ಲ್ಯಾಕ್ಬೋರ್ಡ್ , ಟಾರ್ಚ್ ಮತ್ತು ಎನ್ವಲಪ್ ಈ ಮೂರು ಚಿಹ್ನೆಗಳನ್ನು ಅಂತಿಮಗೊಳಿಸಿದೆ ಎಂದು ವರದಿ ಮಾಡಿದೆ. ಹಿರಿಯ ನಾಯಕ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಅಕ್ರುಜ್ಜಮಾನ್ ಮತ್ತು ಇತರ ನಾಯಕರೊಂದಿಗೆ ಝೂಮ್ ಮೂಲಕ ಸಭೆ ನಡೆಸಿದ ನಂತರ, ಮೂರು ಚಿಹ್ನೆಗಳು ಮತ್ತು ಹೆಸರುಗಳನ್ನು ಅಂತಿಮಗೊಳಿಸಿ ಚುನಾವಣಾ ಆಯೋಗಕ್ಕೆ ಇಮೇಲ್ ಮಾಡಲಾಗಿದೆ.
ಪಕ್ಷದ ಹೆಸರುಗಳಿಗೆ ಸಂಬಂಧಿಸಿದಂತೆ, ಮೂರು ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಅವು ನ್ಯಾಷನಲಿಸ್ಟ್ ತೃಣಮೂಲ ಕಾಂಗ್ರೆಸ್ (ಜಾತಿಯೋತಬಾದಿ ತೃಣಮೂಲ ಕಾಂಗ್ರೆಸ್), ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ ಮತ್ತು ವೆಸ್ಟ್ ಬೆಂಗಾಲ್ ತೃಣಮೂಲ ಕಾಂಗ್ರೆಸ್.
ಮಮತಾ ನೇತೃತ್ವದ ತೃಣಮೂಲವು ಮೂರು ಹೆಸರುಗಳನ್ನು ಸೂಚಿಸಿದೆ .ಅವು ಮಮತಾ ಆಲ್ ಇಂಡಿಯನ್ ತೃಣಮೂಲ ಕಾಂಗ್ರೆಸ್, ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಮತ್ತು ತೃಣಮೂಲ ಮಮತಾ ಕಾಂಗ್ರೆಸ್. ಫುಟ್ಬಾಲ್ ಆಟಗಾರನ ಚಿಹ್ನೆಯನ್ನು ಮಮತಾ ಬಣ ಸಲ್ಲಿಸಿದೆ.
ಚುನಾವಣಾ ಆಯೋಗವು 184 ಮುಕ್ತ ಚಿಹ್ನೆಗಳ ಪಟ್ಟಿಯನ್ನು ಹೊಂದಿದೆ. ಈಗ ತೃಣಮೂಲ ಕಾಂಗ್ರೆಸ್ನ ಎರಡು ಬಣಗಳಿಗೆ 184 ಮುಕ್ತ ಚಿಹ್ನೆಗಳಲ್ಲಿ ಯಾವುದಾದರೂ ಎರಡನ್ನು ಹಂಚಿಕೆ ಮಾಡಲಾಗುತ್ತದೆ.
ಚುನಾವಣಾ ಆಯೋಗದ ಆದೇಶವು ಅಸಂವಿಧಾನಿಕ ಎಂದು ಕರೆದಿರುವ ತೃಣಮೂಲ ಸಂಸದ ಕಲ್ಯಾಣ್ ಬ್ಯಾನರ್ಜಿ, ಆಯೋಗದ ಆದೇಶವು ಅಸಂವಿಧಾನಿಕವಾಗಿರುವುದರಿಂದ ತಮ್ಮ ಬಣವು ಅದನ್ನು ಒಪ್ಪಿಕೊಳ್ಳುತ್ತಿಲ್ಲ ಆದರೆ "ಈಗ ಏನು ಬೇಕೋ ಅದನ್ನು ಮಾಡಲಿದೆ" ಎಂದಿದ್ದಾರೆ. ನಾವು ಈ ಆದೇಶವನ್ನು ಒಪ್ಪುತ್ತಿಲ್ಲ. ಕಾನೂನುಬಾಹಿರ ಸಂಗತಿಗಳನ್ನು ತಾತ್ಕಾಲಿಕವಾಗಿ ಹೇಗೆ ಒಪ್ಪಿಕೊಳ್ಳಬೇಕೋ, ಹಾಗೆಯೇ ಇದನ್ನೂ ಒಪ್ಪಿಕೊಳ್ಳಬೇಕಾಗಿದೆ" ಎಂದು ಅವರು ಹೇಳಿದರು.
ಟಿಎಂಸಿ ವಕ್ತಾರ ಕುನಾಲ್ ಘೋಷ್ ಮಾತನಾಡಿ, ಮಮತಾ ಬ್ಯಾನರ್ಜಿ ಅವರೇ ನಮ್ಮ ಚಿಹ್ನೆ, ಚಳವಳಿ ಮತ್ತು ಶಕ್ತಿ. ಮಮತಾ ಬ್ಯಾನರ್ಜಿ ಅವರು ಪ್ಲ್ಯಾನ್ ಎ, ಬಿ ಮತ್ತು ಸಿ ಯೊಂದಿಗೆ ಸಿದ್ಧರಾಗಿದ್ದಾರೆ ಎಂದರು.
ಎಕ್ಸ್ ನಲ್ಲಿ ಬರೆದುಕೊಂಡಿರುವ ರಿತಬ್ರತ ಬ್ಯಾನರ್ಜಿ, "ಚಿಹ್ನೆ ಮತ್ತು ಹೆಸರಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಈ ನಿರೂಪಣೆಗೆ ಸಂಬಂಧಿಸಿದಂತೆ, ಇಂದಿನ ಚುನಾವಣಾ ಆಯೋಗದ ಮಧ್ಯಂತರ ಆದೇಶವು ಕುಟುಂಬ ರಾಜಕಾರಣಕ್ಕೆ ಯಾವುದೇ ಸ್ಥಳವಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ರಾಜಕೀಯ ಪಕ್ಷವು ಖಾಸಗಿ ಲಿಮಿಟೆಡ್ ಕಂಪನಿಯಲ್ಲ, ಹಾಗೆಯೇ ರಾಜಕೀಯ ಪಕ್ಷಕ್ಕೆ ಯಾವುದೇ ವಾರಸುದಾರರಿರಲು ಸಾಧ್ಯವಿಲ್ಲ. ಇದು ಇಂದು ಸಾಬೀತಾಗಿದೆ" ಎಂದು ಹೇಳಿದ್ದಾರೆ.
►ಮಮತಾ ಬ್ಯಾನರ್ಜಿ ಪಕ್ಷ ಮತ್ತು ಬಂಡಾಯ ಬಣಕ್ಕೆ ಹೊಸ ಹೆಸರು, ಚುನಾವಣಾ ಚಿಹ್ನೆ ಹಂಚಿಕೆ
ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಸ್ತುತ ಹೆಸರು ಮತ್ತು ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡ ಬಳಿಕ, ಚುನಾವಣಾ ಆಯೋಗವು ಶುಕ್ರವಾರ ಪಕ್ಷದ ಎರಡೂ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರುಗಳನ್ನು ಮತ್ತು ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ 'ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' ಹೆಸರನ್ನು ಹಾಗೂ 'ಫುಟ್ಬಾಲ್ ಆಟಗಾರ' ಚುನಾವಣಾ ಚಿಹ್ನೆಯನ್ನು ನೀಡಲಾಗಿದೆ. ಹಾಗೆಯೇ, ಬಂಡಾಯ ಬಣಕ್ಕೆ 'ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್' ಹೆಸರು ಮತ್ತು ಎನ್ವಲಪ್ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.
ಪಶ್ಚಿಮ ಬಂಗಾಳದ ವಿರೋಧ ಪಕ್ಷದ ಮೇಲಿನ ಹಿಡಿತಕ್ಕಾಗಿ ನಡೆಯುತ್ತಿರುವ ಜಟಾಪಟಿ ಮುಂದುವರಿದಿರುವ ಕಾರಣ, ಈ ಚಿಹ್ನೆಗಳು ತಾತ್ಕಾಲಿಕವಾಗಿದ್ದು ಮುಂಬರುವ ಉಪಚುನಾವಣೆಗಳಿಗೆ ಮಾತ್ರ ಅನ್ವಯಿಸುತ್ತವೆ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.






