Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 2024ರ ಚುನಾವಣೆಯಲ್ಲಿ 200...

2024ರ ಚುನಾವಣೆಯಲ್ಲಿ 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂಬ ದಾಖಲೆಯೇ ಚುನಾವಣಾ ಆಯೋಗದ ಬಳಿಯಿಲ್ಲ

► ವರದಿ: ಸುಮೇಧಾ ಮಿತ್ತಲ್ ಮತ್ತು ವೆಂಕಟೇಶ್ ನಾಯಕ್ / The Reporters' Collective ► ಸಂಪಾದನೆ: ಫುರ್ಖಾನ್ ಅಮೀನ್

ಸುಮೇಧಾ ಮಿತ್ತಲ್ಸುಮೇಧಾ ಮಿತ್ತಲ್ವೆಂಕಟೇಶ್ ನಾಯಕ್ವೆಂಕಟೇಶ್ ನಾಯಕ್18 Nov 2026 8:30 AM IST
share
2024ರ ಚುನಾವಣೆಯಲ್ಲಿ 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂಬ ದಾಖಲೆಯೇ ಚುನಾವಣಾ ಆಯೋಗದ ಬಳಿಯಿಲ್ಲ

The Reporters' Collective ನಲ್ಲಿ ಪ್ರಕಟವಾಗಿರುವ ಇದರ ಮೂಲ ಇಂಗ್ಲೀಷ್ ವರದಿಯ ಲಿಂಕ್ ಇಲ್ಲಿದೆ : https://www.reporters-collective.in/election-audit-series/eci-no-record-voters-after-5-pm-2024-elections

ಮತಗಟ್ಟೆ ಮಟ್ಟದಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು, ಪ್ರತಿ ಎರಡು ಗಂಟೆಗಳಿಗೊಮ್ಮೆ ಮತಗಟ್ಟೆಗೆ ಬಂದ ಮತದಾರರ ಸಂಖ್ಯೆ ಮತ್ತು ಚಲಾವಣೆಯಾದ ಮತಗಳ ಸಂಖ್ಯೆಯನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಾಳೆ ಮಾಡಿ ನೋಡುವುದು ಕಡ್ಡಾಯವಾಗಿದೆ. ಆದರೆ, ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದ 200 ಕ್ಷೇತ್ರಗಳ ಚುನಾವಣಾ ಆಯೋಗದ ಆಂತರಿಕ ವರದಿಗಳಲ್ಲಿ ಈ ದಾಖಲೆಗಳೇ ಇಲ್ಲದಿರುವುದನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್' (The Reporters’ Collective) ಪತ್ತೆಹಚ್ಚಿದೆ.

2024ರಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ ನಡೆದ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಳ 200 ಕ್ಷೇತ್ರಗಳಲ್ಲಿ, ಸಂಜೆ 5 ಗಂಟೆಯ ನಂತರ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂಬ ಮಾಹಿತಿಯನ್ನು ದಾಖಲಿಸುವಲ್ಲಿ ಭಾರತೀಯ ಚುನಾವಣಾ ಆಯೋಗ (ECI) ವಿಫಲವಾಗಿದೆ. ಚುನಾವಣಾ ಆಯೋಗವು ಮೊದಲೇ ನಿಗದಿಪಡಿಸಿದ ಸಮಯದವರೆಗೆ ಮತದಾನ ನಡೆಯುತ್ತದೆ. ಒಂದು ವೇಳೆ ಆ ಸಮಯಕ್ಕೆ ಮತಗಟ್ಟೆಯ ಹೊರಗೆ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರೆ, ಅವರೆಲ್ಲರೂ ಮತ ಹಾಕುವವರೆಗೂ ಮತದಾನ ಮುಂದುವರಿಯುತ್ತದೆ. 2024ರಲ್ಲಿ ನಾವು ಪರಿಶೀಲಿಸಿದ 530 ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಳ್ಳುವ ನಿಗದಿತ ಸಮಯ ಸಂಜೆ 6 ಗಂಟೆಯಾಗಿತ್ತು. ಚುನಾವಣಾ ಆಯೋಗದ 2024ರ ಚುನಾವಣೆಯ ಆಂತರಿಕ ದಾಖಲೆಗಳಲ್ಲಿ ದೊಡ್ಡಮಟ್ಟದ ಲೋಪವಿರುವುದು ನಮ್ಮ ತನಿಖೆಯಿಂದ ಬಯಲಾಗಿದೆ. ಮತದಾನದ ದಿನ ಸೂರ್ಯ ಮುಳುಗುತ್ತಿದ್ದಂತೆ, ಈ 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಮತದಾನ ಹೇಗೆ ನಡೆಯಿತು ಎಂಬ ಬಗ್ಗೆ ಆಯೋಗದ ಕೇಂದ್ರ ಕಚೇರಿಗೆ ಯಾವುದೇ ಮಾಹಿತಿಯೇ ಇಲ್ಲದಂತಾಗಿದೆ.

►ಸಂಜೆಯ ವೇಳೆ ಚಲಾವಣೆಯಾಗುವ ಮತಗಳ ಲೆಕ್ಕ ಇಡುವುದು ಏಕೆ ಮುಖ್ಯ? :

ಮತದಾನದ ಕೊನೆಯ ಗಂಟೆಗಳಲ್ಲಿ ನಕಲಿ ಮತದಾನ (ಬೋಗಸ್ ವೋಟಿಂಗ್) ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ ತಜ್ಞರು. ಏಕೆಂದರೆ, ಆ ಹೊತ್ತಿಗೆ ರಾಜಕೀಯ ಪಕ್ಷಗಳ ಅನೇಕ ಏಜೆಂಟರು, ಅದರಲ್ಲೂ ವಿಶೇಷವಾಗಿ ಪ್ರಬಲವಾಗಿಲ್ಲದ ಪಕ್ಷಗಳ ಏಜೆಂಟರು ಮತಗಟ್ಟೆಗಳನ್ನು ಬಿಟ್ಟು ಹೊರಟುಹೋಗಿರುತ್ತಾರೆ.

ಮತದಾನದ ದಿನ, ಮತದಾನ ಮುಕ್ತಾಯವಾಗುವವರೆಗೂ ಪ್ರತಿ ಎರಡು ಗಂಟೆಗಳಿಗೊಮ್ಮೆ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (EVM) ದಾಖಲಾದ ಮತಗಳ ಸಂಖ್ಯೆಯನ್ನು ಬರೆದಿಡುವಂತೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚಿಸಿರುತ್ತದೆ. ಮತ ಹಾಕಲು ಮತಗಟ್ಟೆಯೊಳಗೆ ಬಂದ ಜನರ ಸಂಖ್ಯೆಯೊಂದಿಗೆ ಈ ದಾಖಲೆಯನ್ನು ತಾಳೆ ಮಾಡಿ ನೋಡಬೇಕು. ಮತಗಟ್ಟೆಗೆ ಬಂದವರ ವಿವರವನ್ನು 'ಫಾರ್ಮ್ 17A' ಎಂಬ ಪ್ರತ್ಯೇಕ ರಿಜಿಸ್ಟರ್ ನಲ್ಲಿ ದಾಖಲಿಸಲಾಗಿರುತ್ತದೆ.

ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಈ ಎರಡೂ ಅಂಕಿ-ಅಂಶಗಳು ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗಬೇಕು. ಅಂದರೆ, ಪ್ರತಿ ಎರಡು ಗಂಟೆಗೊಮ್ಮೆ ಪರಿಶೀಲಿಸಿದಾಗಲೂ ಮತ್ತು ದಿನದ ಕೊನೆಯಲ್ಲಿ ಮತದಾನ ಮುಕ್ತಾಯವಾದಾಗಲೂ ಈ ಎರಡೂ ಲೆಕ್ಕಗಳು ಒಂದೇ ಆಗಿರಬೇಕು. ಮತದಾನದ ದಿನ ತಾನು ಬಿಡುಗಡೆ ಮಾಡುವ ಮತದಾನದ ಅಂಕಿ-ಅಂಶಗಳು ಕೇವಲ ತಾತ್ಕಾಲಿಕ ಎಂದು ಆಯೋಗವೇ ಹೇಳಿಕೊಳ್ಳುವುದರಿಂದ, ಈ ದಾಖಲೆಯನ್ನು ಪ್ರತ್ಯೇಕವಾಗಿ ನಿರ್ವಹಿಸುವುದು ಇನ್ನೂ ಹೆಚ್ಚು ಮುಖ್ಯವಾಗುತ್ತದೆ.

ಮತದಾನದ ಕೊನೆಯ ಗಂಟೆಯ ಈ ಮಹತ್ವದ ಮಾಹಿತಿಯನ್ನು ದಾಖಲಿಸದೇ ಇರುವುದು ಆಯೋಗದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಮತದಾನದ ದಿನ ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಸಾರಾಂಶದ ವರದಿಯನ್ನು ಮತಗಟ್ಟೆ ಅಧಿಕಾರಿಗಳು ದಾಖಲಿಸಿದಂತೆ ಚುನಾವಣಾ ಆಯೋಗ ಪಡೆಯುತ್ತದೆ. ಒಂದು ಕ್ಷೇತ್ರದ ನಿರ್ದಿಷ್ಟ ಮತಗಟ್ಟೆಯಲ್ಲಿ ಸಂಜೆ 5 ಗಂಟೆಯ ನಂತರ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಈ ಒಟ್ಟುಗೂಡಿಸಿದ ಮಾಹಿತಿ ಕೇಂದ್ರ ಕಚೇರಿಗೆ ಸಾಕಾಗುವುದಿಲ್ಲ. ಆದರೆ, ಈ 200 ಪ್ರಕರಣಗಳಲ್ಲಿ ಆಗಿರುವಂತೆ ಇಡೀ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಮಾಹಿತಿಯೇ ಇಲ್ಲದಂತಾದಾಗ, ಅದು ಎಚ್ಚರಿಕೆಯ ಗಂಟೆಯಾಗಬೇಕಿತ್ತು.

2024ರಲ್ಲಿ ಚುನಾವಣೆ ನಡೆದ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದ 467 ವಿಧಾನಸಭಾ ಹಾಗೂ 63 ಲೋಕಸಭಾ ಕ್ಷೇತ್ರಗಳ ಚುನಾವಣಾ ಆಯೋಗದ ಆಂತರಿಕ ದಾಖಲೆಗಳನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್' (The Reporters’ Collective) ಪರಿಶೀಲಿಸಿದೆ.

ಚುನಾವಣಾ ಆಯೋಗವು ಈ ದಾಖಲೆಗಳನ್ನು ಎಂದಿಗೂ ಸಾರ್ವಜನಿಕಗೊಳಿಸದ ಕಾರಣ, ಆಯೋಗದ ಹೊರಗಿನವರು ಇಷ್ಟು ದೊಡ್ಡ ಮಟ್ಟದಲ್ಲಿ ಇವುಗಳನ್ನು ಪರಿಶೀಲಿಸುತ್ತಿರುವುದು ಇದೇ ಮೊದಲು.

ಮತದಾನದ ಕೊನೆಯ ಗಂಟೆಯ ಕುರಿತು ನಾವು ನಡೆಸಿದ ತನಿಖೆಯು ಮತ್ತೊಂದು ಗಂಭೀರ ಲೋಪವನ್ನು ಎತ್ತಿ ತೋರಿಸಿದೆ. ಒಟ್ಟು 530 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಲ್ಲಿ, ಮತದಾನ ಮುಕ್ತಾಯಗೊಳ್ಳುವ ಸಮಯಕ್ಕೆ ಪ್ರತಿ ಮತಗಟ್ಟೆಯ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ಎಷ್ಟು ಸ್ಲಿಪ್ ಗಳನ್ನು ವಿತರಿಸಲಾಗಿದೆ ಎಂಬ ಮಾಹಿತಿಯನ್ನೇ ಚುನಾವಣಾ ಆಯೋಗದ ಅಧಿಕಾರಿಗಳು ದಾಖಲಿಸಿಲ್ಲ.

ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗುವ ಹೊತ್ತಿಗೆ ಸರತಿ ಸಾಲಿನಲ್ಲಿ ಕಾಯುತ್ತಿರುವ ಜನರಿಗೆ ಮತಗಟ್ಟೆ ಅಧಿಕಾರಿಗಳು ಹಿಮ್ಮುಖ ಕ್ರಮದಲ್ಲಿ (ಸಾಲಿನ ಕೊನೆಯವರಿಂದ ಮೊದಲಿನವರವರೆಗೆ) ಈ ಸ್ಲಿಪ್ ಗಳನ್ನು ನೀಡುತ್ತಾರೆ. ಮತಗಟ್ಟೆ ಅಧಿಕೃತವಾಗಿ ಮುಚ್ಚಿದ ನಂತರ, ಈ ಸ್ಲಿಪ್ ಗಳನ್ನು ಹೊಂದಿರುವ ಮತದಾರರಿಗೆ ಮಾತ್ರ ಮತ ಹಾಕಲು ಅವಕಾಶವಿರುತ್ತದೆ.

ಸಂಜೆ 5 ಗಂಟೆಯ ನಂತರದ ದಾಖಲೆಗಳು ನಾಪತ್ತೆಯಾಗಿರುವ ವಿಚಾರಕ್ಕೆ ಅನ್ವಯಿಸುವ ತರ್ಕವೇ ಇಲ್ಲಿಯೂ ಅನ್ವಯಿಸುತ್ತದೆ. ವಿತರಿಸಲಾದ ಈ ಸ್ಲಿಪ್ ಗಳ ನಿಖರ ಲೆಕ್ಕವಿಲ್ಲದಿದ್ದರೆ, ಯಾರಿಗಾದರೂ ಅಕ್ರಮವಾಗಿ ಮತ ಹಾಕಲು ಅವಕಾಶ ನೀಡಲಾಗಿದೆಯೇ ಎಂಬುದನ್ನು ಕಂಡುಹಿಡಿಯಲು ಆಯೋಗಕ್ಕೆ ಸಾಧ್ಯವಾಗುವುದಿಲ್ಲ.

ಈ ವರದಿಯು 'ಎಲೆಕ್ಷನ್ ಆಡಿಟ್' ಸರಣಿಯ 2ನೇ ಭಾಗವಾಗಿದೆ. ಇದೇ ಆಂತರಿಕ ದಾಖಲೆಗಳನ್ನು ಬಳಸಿಕೊಂಡು ನಡೆಸಿದ ತನಿಖೆಯ ಮೊದಲ ಭಾಗದಲ್ಲಿ, 530 ಕ್ಷೇತ್ರಗಳ ಪೈಕಿ 51 ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳು ಮತ್ತು ಚುನಾವಣಾ ಆಯೋಗ ಎಣಿಕೆ ಮಾಡಿದ ಮತಗಳ ನಡುವೆ ವ್ಯತ್ಯಾಸವಿರುವುದನ್ನು ನಾವು ಪತ್ತೆಹಚ್ಚಿದ್ದೆವು. ಮೊದಲ ಭಾಗವನ್ನು ನೀವು ಇಲ್ಲಿ ಓದಬಹುದು.

► https://www.reporters-collective.in/trc/eci-records-of-2024-elections-votes-cast-do-not-match-votes-counted

► https://www.varthabharati.in/vishesha-varadigalu/ecis-internal-records-of-2024-elections-in-51-seats-of-two-states-and-a-ut-votes-cast-do-not-match-votes-counted-2289752

2024ರ ಲೋಕಸಭಾ ಚುನಾವಣೆಯ ನಂತರ, ವಿಶೇಷವಾಗಿ ಸಂಜೆ 5 ಗಂಟೆಯ ನಂತರ ಬೋಗಸ್ ವೋಟಿಂಗ್ ನಡೆದಿದೆ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಆರೋಪಿಸುತ್ತಿವೆ. ಪ್ರತಿ ಬಾರಿಯೂ ಚುನಾವಣಾ ಆಯೋಗವು ಈ ಆರೋಪಗಳನ್ನು ತಳ್ಳಿಹಾಕುತ್ತಲೇ ಬಂದಿದೆ.

ಅದೇ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರವೂ ಇಂಥದ್ದೇ ಆರೋಪಗಳು ಕೇಳಿಬಂದಿದ್ದವು. ಮತದಾನದ ದಿನ ಸಂಜೆ 5 ಗಂಟೆಗೆ ಶೇ. 58.22ರಷ್ಟು ಮತದಾನವಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿತ್ತು. ಮರುದಿನವೇ ಆ ಅಂಕಿ-ಅಂಶವನ್ನು ಶೇ. 66.05ಕ್ಕೆ ಪರಿಷ್ಕರಿಸಲಾಯಿತು. ಇದರಿಂದ ಸುಮಾರು 76 ಲಕ್ಷ ಮತಗಳ ಏರಿಕೆಯಾಗಿದ್ದು, ಮತದಾನ ಮುಕ್ತಾಯವಾದ ನಂತರ ಮತಗಳ ತಿರುಚುವಿಕೆ ನಡೆದಿದೆ ಎಂದು ವಿರೋಧ ಪಕ್ಷಗಳು ದೂರಿದ್ದವು.

ಆದರೆ, ಚುನಾವಣಾ ಆಯೋಗದ ಆಂತರಿಕ ದತ್ತಾಂಶಗಳ ನಮ್ಮ ವಿಶ್ಲೇಷಣೆಯು ಬೇರೆಯದೇ ಕಥೆಯನ್ನು ಹೇಳುತ್ತದೆ. ಸಂಜೆ 5 ಗಂಟೆಯ ನಂತರದ ಮಾಹಿತಿ ದಾಖಲಾಗಿರುವ 174 ಕ್ಷೇತ್ರಗಳಲ್ಲಿ, ಸಂಜೆ 5 ಗಂಟೆಯ ನಂತರ ಕೇವಲ 50.87 ಲಕ್ಷ ಮತಗಳು ಮಾತ್ರ ಚಲಾವಣೆಯಾಗಿವೆ ಎಂಬುದನ್ನು ಇದು ತೋರಿಸುತ್ತದೆ. ಇದು ಚುನಾವಣಾ ಆಯೋಗ ಹೇಳಿಕೊಂಡಿದ್ದ ಕೊನೆಯ ಗಂಟೆಯ 76 ಲಕ್ಷ ಮತಗಳ ಏರಿಕೆಗಿಂತ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ.

ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ (CEO) ಎಸ್. ಚೊಕ್ಕಲಿಂಗಂ ಅವರು ಅದೇ ಸಮಯದಲ್ಲಿ ಚುನಾವಣೆ ನಡೆದ ಜಾರ್ಖಂಡ್ ನ ಮತದಾನದ ಪ್ರವೃತ್ತಿಯನ್ನು ಉಲ್ಲೇಖಿಸಿದ್ದರು. ಜಾರ್ಖಂಡ್ ಗಿಂತ ಭಿನ್ನವಾಗಿ, ಮಹಾರಾಷ್ಟ್ರದಲ್ಲಿ ಸಂಜೆಯ ವೇಳೆ ಮತದಾನ ಹೆಚ್ಚಾಗಲು ಜನರು ತಡವಾಗಿ ಮತದಾನ ಮಾಡಲು ಬಂದಿದ್ದು ಮತ್ತು ಸಂಜೆ 5 ಗಂಟೆಯ ನಂತರ ದೊಡ್ಡ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದು ಕಾರಣ ಎಂದು ಅವರು ಸಮರ್ಥಿಸಿಕೊಂಡಿದ್ದರು.

ಆದರೆ, ಮಹಾರಾಷ್ಟ್ರದ 288 ಕ್ಷೇತ್ರಗಳ ಪೈಕಿ 114 ಕ್ಷೇತ್ರಗಳಲ್ಲಿ (ಸುಮಾರು ಶೇ. 40ರಷ್ಟು) ಸಂಜೆ 5 ಗಂಟೆಯ ನಂತರ ಚಲಾವಣೆಯಾದ ಮತಗಳ ಯಾವುದೇ ದಾಖಲೆಯೇ ಇಲ್ಲದಿರುವಾಗ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಈ ಹೇಳಿಕೆಗೆ ಆಧಾರವೇನಿತ್ತು?

ಇಲ್ಲಿಯೇ ಮತಗಟ್ಟೆಗೆ ಬಂದ ಮತದಾರರು ಮತ್ತು ಚಲಾವಣೆಯಾದ ಮತಗಳ ಭೌತಿಕ ದಾಖಲೆಗಳನ್ನು ಇಡುವುದು ಹಾಗೂ ದಿನದ ಕೊನೆಯಲ್ಲಿ ಅವುಗಳನ್ನು ತಾಳೆ ಮಾಡಿ ನೋಡುವುದು ಅತ್ಯಂತ ಮಹತ್ವದ್ದಾಗುತ್ತದೆ ಮತ್ತು ಅನಿವಾರ್ಯವಾಗುತ್ತದೆ. ಪ್ರಸ್ತುತ, ಮತಗಟ್ಟೆ ಅಕ್ರಮಗಳ ಬಗ್ಗೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ದೂರು ನೀಡುವವರೆಗೂ ಚುನಾವಣಾ ಆಯೋಗ ಕಾಯುತ್ತದೆ. ಆನಂತರವಷ್ಟೇ ಆ ದೂರುಗಳನ್ನು ಪರಿಶೀಲಿಸುತ್ತದೆ. ಆದರೆ, ಆಯೋಗವು ಕಾಯುವ ಅಗತ್ಯವಿಲ್ಲ. ಮತಗಟ್ಟೆ ಅಧಿಕಾರಿಗಳು ಕಡ್ಡಾಯವಾಗಿ ಇಡಬೇಕಾದ ಈ ದಾಖಲೆಗಳನ್ನು ಬಳಸಿಕೊಂಡು, ಆಯೋಗವು ತಾನಾಗಿಯೇ ಮುಂಚಿತವಾಗಿ ಸಂಭಾವ್ಯ ಅಕ್ರಮಗಳನ್ನು ಪತ್ತೆಹಚ್ಚಬಹುದು.

ಸಂಜೆ 5 ಗಂಟೆಯ ನಂತರದ ಮತದಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಳ್ಳುವಂತೆ ವಿರೋಧ ಪಕ್ಷಗಳು ಕೇಳಿದಾಗ, ಚುನಾವಣಾ ಆಯೋಗವು ಅದನ್ನು ಸಾರಾಸಗಟಾಗಿ ನಿರಾಕರಿಸಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ, "ನಮ್ಮ ತಾಯಂದಿರು, ಸೊಸೆಯಂದಿರು ಮತ್ತು ಹೆಣ್ಣುಮಕ್ಕಳ ಸಿಸಿಟಿವಿ ದೃಶ್ಯಾವಳಿಗಳನ್ನು ಚುನಾವಣಾ ಆಯೋಗ ಹಂಚಿಕೊಳ್ಳಬೇಕೇ?” ಎಂದು ಪ್ರಶ್ನಿಸಿದ್ದರು.

ಚುನಾವಣಾಧಿಕಾರಿಗಳು ಪ್ರತಿ ಎರಡು ಗಂಟೆಗೊಮ್ಮೆ ನಡೆಯುವ ಈ ಮತದಾನದ ವಿವರಗಳನ್ನು ರಿಟರ್ನಿಂಗ್ ಆಫೀಸರ್ ಗಳು ಸಲ್ಲಿಸುವ ವರದಿಗಳಲ್ಲಿ ದಾಖಲಿಸುತ್ತಾರೆ.

530 ಕ್ಷೇತ್ರಗಳ ಚುನಾವಣಾಧಿಕಾರಿಗಳು ಸಲ್ಲಿಸಿದ ಈ ಆಂತರಿಕ ಚುನಾವಣಾ ವರದಿಗಳನ್ನು 'ದಿ ಕಲೆಕ್ಟಿವ್' ಪಡೆದುಕೊಂಡಿದೆ. ಈ ತನಿಖೆಗಾಗಿ ನಾವು 4,212 ಭೌತಿಕ ದಾಖಲೆಗಳನ್ನು ಡಿಜಿಟಲೀಕರಿಸಿ, ಮರುಪರಿಶೀಲಿಸಿ ಮೌಲ್ಯಮಾಪನ ಮಾಡಿದ್ದೇವೆ. ನಾವು ಎಲ್ಲಾ 531 ಕ್ಷೇತ್ರಗಳ ದಾಖಲೆಗಳಿಗಾಗಿ ಹುಡುಕಾಡಿದರೂ, ಜಮ್ಮು ಮತ್ತು ಕಾಶ್ಮೀರದ 'ದೇವಸರ್' ಎಂಬ ಒಂದು ಕ್ಷೇತ್ರದ ವರದಿ ನಮಗೆ ಸಿಗಲಿಲ್ಲ.

► ನಮ್ಮ ಪ್ರಶ್ನೆಯನ್ನು ಮತ್ತೆ 'ದೂರು' ಎಂದು ಪರಿಗಣಿಸಿದ ಚುನಾವಣಾ ಆಯೋಗ :

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಹಾಗೂ ಚುನಾವಣಾ ಆಯೋಗದ ವಕ್ತಾರ ಆಶಿಶ್ ಗೋಯಲ್ ಅವರನ್ನು ಉಲ್ಲೇಖಿಸಿ ನಾವು ಚುನಾವಣಾ ಆಯೋಗಕ್ಕೆ ವಿವರವಾದ ಪ್ರಶ್ನೆಗಳನ್ನು ಕಳುಹಿಸಿದ್ದೇವೆ. ಜೊತೆಗೆ ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿಗಳಿಗೂ ಪ್ರಶ್ನೆಗಳನ್ನು ಕಳುಹಿಸಿದ್ದೇವೆ.

ಈ ಬಾರಿಯೂ ಆಯೋಗವು ನಮ್ಮ ಮಾಧ್ಯಮ ಸಂಬಂಧಿತ ಪ್ರಶ್ನೆಗಳನ್ನು 'ದೂರು' ಎಂದು ಪರಿಗಣಿಸಿ, ಅದನ್ನು ತನ್ನ 'ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಗೆ' (Public Grievance Redressal System) ಕಳುಹಿಸಿದೆ. ಅಲ್ಲದೆ, ಆಯೋಗದ ಬಳಿಯೇ ಇರುವ ದಾಖಲೆಗಳನ್ನು ತನಗೆ ಒದಗಿಸುವಂತೆ ಮತ್ತೆ ನಮ್ಮನ್ನೇ ಕೇಳಿದ್ದು, ಈ ಪ್ರಕ್ರಿಯೆಯನ್ನೂ ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ.

ಈ ಸರಣಿಯ ಮೊದಲ ಭಾಗ ಪ್ರಕಟವಾದ ನಂತರ, ನಾವು ತಮಗೆ ಪ್ರಶ್ನೆಗಳನ್ನೇ ಕಳುಹಿಸಿಲ್ಲ ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಸುಳ್ಳು ಹೇಳಿದ್ದರು. ಹೀಗಾಗಿ, ಎರಡನೇ ಭಾಗಕ್ಕಾಗಿ ಕಳುಹಿಸಲಾದ ಪ್ರಶ್ನೆಗಳನ್ನು ನಾವು ಇಲ್ಲಿ ಬಹಿರಂಗಪಡಿಸತ್ತಿದ್ದೇವೆ.

ಮೊದಲ ಭಾಗದ ವರದಿಗೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗವು, "ಮತದಾರರು, EVMನಲ್ಲಿ ಚಲಾವಣೆಯಾದ ಮತಗಳು, ಅಂಚೆ ಮತಗಳು ಮತ್ತು ಒಟ್ಟು ಚಲಾವಣೆಯಾದ ಮತಗಳ" ಎಲ್ಲಾ ವಿವರಗಳನ್ನು ತಾನು ಆನ್ಲೈನ್ನಲ್ಲಿ ಪ್ರಕಟಿಸುವ ಇಂಡೆಕ್ಸ್ ಕಾರ್ಡ್ಗಳಲ್ಲಿ (Index cards) ನೀಡುವುದಾಗಿ ಹೇಳಿಕೊಂಡಿತ್ತು.

ಈ ಕುರಿತು 'ದಿ ಕಲೆಕ್ಟಿವ್' ಜೊತೆ ಮಾತನಾಡಿದ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ, "ಚುನಾವಣಾಧಿಕಾರಿಯ ವರದಿ ಮತ್ತು (ಚುನಾವಣಾ ಆಯೋಗ ಸಾರ್ವಜನಿಕಗೊಳಿಸುವ) ಇಂಡೆಕ್ಸ್ ಕಾರ್ಡ್ಗಳ ನಡುವೆ ಯಾವುದೇ ವ್ಯತ್ಯಾಸವಿರಬಾರದು, ಏಕೆಂದರೆ ಅವೆರಡನ್ನೂ ಒಬ್ಬರೇ ಅಧಿಕಾರಿ ಸಿದ್ಧಪಡಿಸಿರುತ್ತಾರೆ" ಎಂದು ತಿಳಿಸಿದ್ದಾರೆ.

ಈ 'ಎಲೆಕ್ಷನ್ ಆಡಿಟ್' ಸರಣಿಯ ಅಂತಿಮ ಭಾಗದೊಂದಿಗೆ, ಎಲ್ಲಾ ಕಚ್ಚಾ ದತ್ತಾಂಶಗಳು (raw data) ಮತ್ತು ಚುನಾವಣಾ ಆಯೋಗದ ಮೂಲ ದಾಖಲೆಗಳನ್ನು 'ದಿ ಕಲೆಕ್ಟಿವ್' ಸಾರ್ವಜನಿಕಗೊಳಿಸಲಿದೆ ಎಂದು ನಾವು ಪುನರುಚ್ಚರಿಸುತ್ತೇವೆ. ನಾವು ಯಾವುದೇ 'ಕುಂದುಕೊರತೆ' (grievance) ಸಲ್ಲಿಸುವುದಿಲ್ಲ ಅಥವಾ ಚುನಾವಣಾ ಆಯೋಗದೊಂದಿಗೆ ರಹಸ್ಯವಾಗಿ ಸಂವಹನ ನಡೆಸುವುದಿಲ್ಲ.

►ನಾಪತ್ತೆಯಾದ ಡೇಟಾಗಳು :

ಚುನಾವಣಾ ಫಲಿತಾಂಶ ಪ್ರಕಟವಾದ ಎರಡು ವಾರಗಳ ನಂತರ, ಕ್ಷೇತ್ರದ ಉಸ್ತುವಾರಿ ವಹಿಸಿರುವ ರಿಟರ್ನಿಂಗ್ ಆಫೀಸರ್ ಈ ವರದಿಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸುತ್ತಾರೆ. ಕ್ಷೇತ್ರದ ಮತಗಟ್ಟೆ ಮಟ್ಟದಲ್ಲಿ ಸಂಗ್ರಹಿಸಲಾದ ಎಲ್ಲಾ ಚುನಾವಣಾ ಮಾಹಿತಿಯು ಈ ವರದಿಗಳಲ್ಲಿ ಒಟ್ಟುಗೂಡಿರುತ್ತದೆ.

ಪ್ರತಿ ಮತಗಟ್ಟೆಯಲ್ಲಿ, ಪ್ರತಿ ಎರಡು ಗಂಟೆಗಳಿಗೊಮ್ಮೆ EVMನಲ್ಲಿ ಚಲಾವಣೆಯಾದ ಮತಗಳು ಮತ್ತು ಮತ ಹಾಕಲು ಮತಗಟ್ಟೆಯೊಳಗೆ ಬಂದ ಮತದಾರರ ಸಂಖ್ಯೆಯನ್ನು ದಾಖಲಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ. EVM ಕಂಟ್ರೋಲ್ ಯೂನಿಟ್ ನಲ್ಲಿರುವ 'ಟೋಟಲ್' (Total) ಬಟನ್ ಒತ್ತುವ ಮೂಲಕ ಚಲಾವಣೆಯಾದ ಒಟ್ಟು ಮತಗಳ ಸಂಖ್ಯೆಯನ್ನು ಸುಲಭವಾಗಿ ಪಡೆಯಬಹುದು. ಮತಗಟ್ಟೆಯ ಪ್ರಿಸೈಡಿಂಗ್ ಆಫೀಸರ್ ಪ್ರತಿ ಎರಡು ಗಂಟೆಗಳಿಗೊಮ್ಮೆ EVMನಲ್ಲಿ ದಾಖಲಾದ ಮತಗಳನ್ನು ಬರೆದಿಟ್ಟುಕೊಳ್ಳುತ್ತಾರೆ.

ಮತ್ತೊಬ್ಬ ಚುನಾವಣಾ ಅಧಿಕಾರಿಯು ಮತಗಟ್ಟೆಯೊಳಗೆ ಪ್ರವೇಶಿಸುವ ಮತದಾರರ ದಾಖಲೆಯನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಪರಿಶೀಲಿಸಿದಾಗ ಈ ಎರಡೂ ಅಂಕಿ-ಅಂಶಗಳು ಒಂದಕ್ಕೊಂದು ತಾಳೆಯಾಗಬೇಕು.

ಈ ಎರಡೂ ಎಣಿಕೆಗಳನ್ನು ಪ್ರತ್ಯೇಕವಾಗಿ ನಡೆಸಿ, ಅವುಗಳನ್ನು ತಾಳೆ ಮಾಡಿ ನೋಡುವುದೇ ನಿಜವಾದ ಲೆಕ್ಕಪರಿಶೋಧನೆ. ದಿನದ ಕೊನೆಯಲ್ಲಿ ಒಂದಕ್ಕೆ ತಕ್ಕಂತೆ ಇನ್ನೊಂದನ್ನು ಸರಿಹೊಂದಿಸುವುದು, ಸಂಭಾವ್ಯ ವಂಚನೆಯನ್ನು ಮರೆಮಾಚಲು ಲೆಕ್ಕದ ಪುಸ್ತಕಗಳನ್ನು ತಿದ್ದಿದಂತೆಯೇ.

ಇದಕ್ಕೆ ಹಣಕಾಸಿನ ಲೆಕ್ಕಪತ್ರ ನಿರ್ವಹಣೆಯಲ್ಲಿ ಉತ್ತಮ ಉದಾಹರಣೆಯನ್ನು ಕಾಣಬಹುದು. ಪ್ರತಿಯೊಂದು ಹಣಕಾಸಿನ ವಹಿವಾಟು ನ್ಯಾಯಸಮ್ಮತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಲೆಕ್ಕಪರಿಶೋಧನೆ. ಆದರೆ, ನಕಲಿ ವಹಿವಾಟುಗಳನ್ನು ಮುಚ್ಚಿಹಾಕಲು ವರ್ಷದ ಕೊನೆಯಲ್ಲಿ ಲೆಕ್ಕದ ಪುಸ್ತಕಗಳಲ್ಲಿ ಸುಳ್ಳು ದಾಖಲೆಗಳನ್ನು ಸೇರಿಸುವುದು ವಂಚನೆಯಾಗುತ್ತದೆ.

"ಮತದಾನದ ದಿನದಂದೇ ಚುನಾವಣೆಯ ಏಕಕಾಲಿಕ ಲೆಕ್ಕಪರಿಶೋಧನೆಯಂತೆ ಕೆಲಸ ಮಾಡಲು ಮತ್ತು ಯಾವುದೇ ಅಕ್ರಮಗಳಿದ್ದರೆ ಚುನಾವಣಾ ಆಯೋಗವನ್ನು ಎಚ್ಚರಿಸಲು ಈ ವರದಿಗಳನ್ನು ರೂಪಿಸಲಾಗಿದೆ. ಘಟನೆ ನಡೆದ ನಂತರ ಈ ವರದಿಗಳನ್ನು ಭರ್ತಿ ಮಾಡುವ ಅಥವಾ ಸರಿಹೊಂದಿಸುವ ಯಾವುದೇ ಪ್ರಯತ್ನವು, ಲೋಪಗಳನ್ನು ಪತ್ತೆಹಚ್ಚುವ ಈ ವ್ಯವಸ್ಥೆಯನ್ನೇ ಹಾಳುಮಾಡುತ್ತದೆ" ಎಂದು ಅಶೋಕ್ ಲವಾಸಾ ಹೇಳಿದ್ದಾರೆ.

ಅದೇ ರೀತಿ, ಸಂಜೆ 5 ಗಂಟೆಯ ನಂತರ ಮತದಾರರನ್ನು ಎಣಿಸುವ ಜಾಗವನ್ನು ಆ ಸಮಯದಲ್ಲಿ ಖಾಲಿ ಬಿಟ್ಟು, ನಂತರ ಚುನಾವಣಾ ಆಯೋಗವು ಸಾರ್ವಜನಿಕವಾಗಿ ಘೋಷಿಸುವ ಒಟ್ಟು ಅಂಕಿ-ಅಂಶಗಳಿಗೆ ಹೊಂದಿಕೆಯಾಗುವಂತೆ ಅದನ್ನು ಭರ್ತಿ ಮಾಡುವುದು, ನಕಲಿ ಮತದಾನವು ಪತ್ತೆಯಾಗದಂತೆ ಮಾಡಲು ದಾರಿ ಮಾಡಿಕೊಡಬಹುದು.

ಉದಾಹರಣೆಗೆ, ಮಹಾರಾಷ್ಟ್ರದ ಕೊಪ್ರಿ-ಪಚ್ಪಖಾಡಿ ವಿಧಾನಸಭಾ ಕ್ಷೇತ್ರವನ್ನೇ ತೆಗೆದುಕೊಳ್ಳಿ. ಇಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಸಂಜೆ 5 ಗಂಟೆಯವರೆಗಿನ ಮತದಾನವನ್ನು ಮಾತ್ರ ದಾಖಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಶಿವಸೇನೆಯ ಏಕನಾಥ್ ಶಿಂಧೆ ಅವರು ಶಿವಸೇನೆಯ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಕೇದಾರ್ ದಿಘೆ ಅವರನ್ನು 1.20 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಇಲ್ಲಿ ಸಂಜೆ 5 ಗಂಟೆಯವರೆಗೆ ಚಲಾವಣೆಯಾದ ಮತಗಳ ಸಂಖ್ಯೆ 1.13 ಲಕ್ಷ ಇತ್ತು. ದಿನದ ಕೊನೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಸಂಖ್ಯೆ 2.03 ಲಕ್ಷಕ್ಕೆ ತಲುಪಿದೆ. ಅಂದರೆ, ಕೇವಲ 366 ಮತಗಟ್ಟೆಗಳಲ್ಲಿ ಕೊನೆಯ ಒಂದು ಗಂಟೆಯಲ್ಲಿ ಬರೋಬ್ಬರಿ 89,878 ಮತಗಳು ಚಲಾವಣೆಯಾಗಿವೆ ಎಂದರ್ಥ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, ಈ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿ ಪ್ರತಿ ನಿಮಿಷಕ್ಕೆ ಸರಾಸರಿ ನಾಲ್ವರು ಮತದಾರರು ಮತ ಚಲಾಯಿಸಿದ್ದಾರೆ. ಆಯೋಗದ ಈ ದಾಖಲೆಯನ್ನು ಯಥಾವತ್ತಾಗಿ ನಂಬುವುದಾದರೆ, ಕೊಪ್ರಿ-ಪಚ್ಪಖಾಡಿಯ ಮತದಾರರೊಬ್ಬರು ಮತಗಟ್ಟೆಯೊಳಗೆ ನಡೆದು ಬಂದು, ತಮ್ಮ ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಿಕೊಂಡು, ರಿಜಿಸ್ಟರ್ ನಲ್ಲಿ ಸಹಿ ಹಾಕಿ, ತೋರುಬೆರಳಿಗೆ ಶಾಯಿ ಹಾಕಿಸಿಕೊಂಡು, ತಮ್ಮ ಸರದಿಗಾಗಿ ಕಾದು, EVMನಲ್ಲಿ ಮತ ಚಲಾಯಿಸಿ ಹೊರಬರುವ ಈ ಎಲ್ಲಾ ಹಂತಗಳನ್ನು ಕೇವಲ 15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿರಬೇಕು.

ಇದು ನಂಬಲಸಾಧ್ಯವಾದ ಮತದಾನದ ವೇಗವಾಗಿದೆ. ಇದು ಚುನಾವಣಾ ಅಧಿಕಾರಿಗಳು ನಿರ್ವಹಿಸುವ ಪ್ರತಿ ಎರಡು ಗಂಟೆಗೊಮ್ಮೆಯ ದಾಖಲೆಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸಂಜೆ 5 ಗಂಟೆಯ ನಂತರದ ದಾಖಲೆಯೇ ಇಲ್ಲದಿರುವುದರಿಂದ, ಆ ಕ್ಷೇತ್ರದಲ್ಲಿ ನಿಜವಾಗಿಯೂ ಏನಾಯಿತು ಎಂಬುದನ್ನು ಕಂಡುಹಿಡಿಯಲು ಆಯೋಗಕ್ಕೆ ಯಾವುದೇ ದಾರಿಯಿಲ್ಲ.

ಸಂಜೆ 5ರಿಂದ 6 ಗಂಟೆಯ ನಡುವಿನ ಮತದಾನದ ದಾಖಲೆಗಳನ್ನು ಅಧಿಕಾರಿಗಳು ಇಡದ 200 ಕ್ಷೇತ್ರಗಳ ಪೈಕಿ, ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದು, ಅಲ್ಲಿ 114 ವಿಧಾನಸಭಾ ಕ್ಷೇತ್ರಗಳ ದಾಖಲೆಗಳಿಲ್ಲ. ಮಹಾರಾಷ್ಟ್ರದ ನಂತರ, ಸಂಜೆ 5ರಿಂದ 6 ಗಂಟೆಯ ನಡುವಿನ ಮತದಾನದ ದಾಖಲೆಗಳು ನಾಪತ್ತೆಯಾಗಿರುವ ಅತಿ ಹೆಚ್ಚು ಕ್ಷೇತ್ರಗಳು ಜಮ್ಮು ಮತ್ತು ಕಾಶ್ಮೀರದಲ್ಲಿವೆ. ಅಲ್ಲಿನ ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ಅರ್ಧದಷ್ಟು, ಅಂದರೆ 44 ಕ್ಷೇತ್ರಗಳಲ್ಲಿ ದಾಖಲೆಗಳನ್ನು ಸಿದ್ಧಪಡಿಸಿಲ್ಲ. ನಂತರದ ಸ್ಥಾನದಲ್ಲಿ ಹರಿಯಾಣವಿದ್ದು, ಅಲ್ಲಿನ 90 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಲ್ಲಿ ದಾಖಲೆಗಳಿಲ್ಲ.

2024ರ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿಯ ಲೋಪ ಮರುಕಳಿಸಿದೆ. ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ, ಹರಿಯಾಣದ 10 ಕ್ಷೇತ್ರಗಳಲ್ಲಿ ಒಂದರಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದ ಐದು ಕ್ಷೇತ್ರಗಳಲ್ಲಿ ಒಂದರಲ್ಲಿ ಮತದಾನದ ಕೊನೆಯ ಗಂಟೆಯಲ್ಲಿ ಚಲಾವಣೆಯಾದ ಮತಗಳ ದಾಖಲೆಗಳು ನಾಪತ್ತೆಯಾಗಿವೆ.

►ಚುನಾವಣಾ ಆಯೋಗವು ಕಾಗದದ ದಾಖಲೆಗಳನ್ನು ಏಕೆ ಇಡುತ್ತದೆ? :

ಚುನಾವಣಾ ಆಯೋಗವು ನಂತರ ಚುನಾವಣೆಗಳ ಲೆಕ್ಕಪರಿಶೋಧನೆ ನಡೆಸಲು ಸಾಧ್ಯವಾಗುವಂತೆ, ಮತದಾನದ ಪ್ರತಿಯೊಂದು ಹಂತದಲ್ಲೂ ಕಾಗದದ ದಾಖಲೆಗಳನ್ನು (Paper Trail) ಇಡುವುದನ್ನು ಚುನಾವಣಾ ನಿಯಮಗಳು ಕಡ್ಡಾಯಗೊಳಿಸಿವೆ. ನಾವು ಮೊದಲ ಭಾಗದಲ್ಲಿ ವರದಿ ಮಾಡಿದಂತೆ, ಕಾನೂನಾತ್ಮಕವಾಗಿ ಮತ್ತು ತಾರ್ಕಿಕವಾಗಿ, ಮತ ಹಾಕಲು ಮತಗಟ್ಟೆಯೊಳಗೆ ಬಂದ ಮತದಾರರ ಸಂಖ್ಯೆಯು EVMನಲ್ಲಿ ದಾಖಲಾದ ಮತಗಳ ಸಂಖ್ಯೆಗೆ ಸಮನಾಗಿರಬೇಕು.

ಈ ಎರಡು ಅಂಕಿ-ಅಂಶಗಳು ಹೊಂದಿಕೆಯಾಗದಿದ್ದರೆ, ಅದು ಸಂಭಾವ್ಯ ಅಕ್ರಮವನ್ನು ಸೂಚಿಸುತ್ತದೆ. ಒಂದು ವೇಳೆ EVMನಲ್ಲಿ ದಾಖಲಾದ ಮತಗಳಿಗಿಂತ ಹೆಚ್ಚಿನ ಮತದಾರರು ಮತಗಟ್ಟೆಯೊಳಗೆ ಬಂದಿದ್ದರೆ, ಅದು ಮತದಾರರ ಹಕ್ಕನ್ನು ಹತ್ತಿಕ್ಕಿರುವುದನ್ನು ಸೂಚಿಸುತ್ತದೆ. ಅದೇ ರೀತಿ, ದಾಖಲಾದ ಮತಗಳಿಗಿಂತ ಕಡಿಮೆ ಮತದಾರರು ಮತಗಟ್ಟೆಯೊಳಗೆ ಬಂದಿದ್ದರೆ, ಅದು ನಕಲಿ ಮತದಾನದ ಪ್ರಕರಣವಾಗಿರಬಹುದು.

ಈ ಎರಡು ಅಂಕಿ-ಅಂಶಗಳು ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ ವ್ಯತ್ಯಾಸವಾಗಲು ಸಾಧ್ಯ: ಒಬ್ಬ ಮತದಾರ ಮತಗಟ್ಟೆಯೊಳಗೆ ಬಂದು ಮತ ಹಾಕಲು ನಿರಾಕರಿಸಿದಾಗ ಅಥವಾ ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಮತಗಟ್ಟೆಯ ಪ್ರಿಸೈಡಿಂಗ್ ಆಫೀಸರ್ ಮತದಾರರನ್ನು ಮತ ಹಾಕದಂತೆ ತಡೆದಾಗ. ನಾವು ಪರಿಶೀಲಿಸಿದ ದಾಖಲೆಗಳ ಪ್ರಕಾರ, ಕ್ಷೇತ್ರ ಮಟ್ಟದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇರುತ್ತದೆ.

ಮತದಾನದ ಮರುದಿನ ರಿಟರ್ನಿಂಗ್ ಆಫೀಸರ್ ಗಳು ಯಾವುದೇ ಲೋಪದೋಷಗಳಿವೆಯೇ ಎಂದು ಈ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ. ಆದರೆ, ಚುನಾವಣಾ ಅಕ್ರಮಗಳನ್ನು ಪತ್ತೆಹಚ್ಚಲು ಮರುದಿನದವರೆಗೆ ಕಾಯುವ ಬದಲು, ಮತದಾನದ ದಿನದಂದೇ ಅವುಗಳನ್ನು ಪತ್ತೆಹಚ್ಚಲು ಚುನಾವಣಾ ಆಯೋಗವು ಮತಗಟ್ಟೆ ಅಧಿಕಾರಿಗಳಿಗೆ ಅಧಿಕಾರ ನೀಡಿದೆ. ಇದೇ ಕಾರಣಕ್ಕೆ, ಮತಗಟ್ಟೆಯ ಉಸ್ತುವಾರಿ ವಹಿಸಿರುವ ಪ್ರಿಸೈಡಿಂಗ್ ಆಫೀಸರ್ ಮತದಾನದ ಸಮಯದಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಈ ಲೆಕ್ಕಗಳನ್ನು ತಾಳೆ ಮಾಡಿ ನೋಡುವುದನ್ನು ನಿಯಮಗಳು ಕಡ್ಡಾಯಗೊಳಿಸಿವೆ.

ಚುನಾವಣಾ ನಡವಳಿಕೆ ನಿಯಮಗಳ ಪ್ರಕಾರ, ಪ್ರತಿಯೊಬ್ಬ ಮತದಾರ ಮತಗಟ್ಟೆಗೆ ಬಂದ ತಕ್ಷಣ ಅವರ ವಿವರವನ್ನು ದಾಖಲಿಸಬೇಕು. ಇದನ್ನು 'ಫಾರ್ಮ್ 17A' ಅಥವಾ ಮತದಾರರ ರಿಜಿಸ್ಟರ್ ನಲ್ಲಿ (Register of Voters) ಬರೆದಿಡಲಾಗುತ್ತದೆ.

ಪ್ರತಿ ಎರಡು ಗಂಟೆಗಳಿಗೊಮ್ಮೆ, ಮತದಾರರ ರಿಜಿಸ್ಟರ್ ನಲ್ಲಿ ದಾಖಲಾದ ಒಟ್ಟು ಸಂಖ್ಯೆಯು EVMನಲ್ಲಿ ದಾಖಲಾದ ಮತಗಳ ಸಂಖ್ಯೆಗೆ ಹೊಂದಿಕೆಯಾಗುತ್ತದೆಯೇ ಎಂದು ಪ್ರಿಸೈಡಿಂಗ್ ಆಫೀಸರ್ ಪರಿಶೀಲಿಸುತ್ತಾರೆ. ಇದಕ್ಕಾಗಿ, ಅಧಿಕಾರಿಯು EVM ಕಂಟ್ರೋಲ್ ಯೂನಿಟ್ ನಲ್ಲಿರುವ 'ಟೋಟಲ್' (Total) ಬಟನ್ ಒತ್ತುತ್ತಾರೆ. ಅದು ಆ ಸಮಯದವರೆಗೆ ಚಲಾವಣೆಯಾದ ಮತಗಳ ಸಂಖ್ಯೆಯನ್ನು ತೋರಿಸುತ್ತದೆ. ಆ ಅಂಕಿಯನ್ನು 'ಪ್ರಿಸೈಡಿಂಗ್ ಆಫೀಸರ್ಸ್ ಡೈರಿ' ಎಂಬ ದಾಖಲೆ ಪುಸ್ತಕದಲ್ಲಿ ಬರೆದಿಡುತ್ತಾರೆ.

ನಿಗದಿತ ಸಮಯ ಮುಗಿದ ನಂತರ ಮತದಾನ ನಡೆಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. 2024ರ ಲೋಕಸಭಾ ಚುನಾವಣೆಯಿಂದ ಈ ಸಮಯವನ್ನು ಸಂಜೆ 6 ಗಂಟೆಗೆ ನಿಗದಿಪಡಿಸಲಾಗಿದೆ. ಆ ಸಮಯಕ್ಕಿಂತ ಮೊದಲೇ ಮತಗಟ್ಟೆಯ ಹೊರಗೆ ಸರತಿ ಸಾಲಿನಲ್ಲಿ ನಿಂತಿರುವ ಮತದಾರರಿಗೆ ಮಾತ್ರ ನಂತರ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ.

ಮತದಾನ ಮುಕ್ತಾಯಗೊಳ್ಳುವ ನಿಗದಿತ ಸಮಯದ ನಂತರ ಯಾರೂ ಹೊಸದಾಗಿ ಸಾಲಿನಲ್ಲಿ ಬಂದು ನಿಲ್ಲದಂತೆ ತಡೆಯಲು, ಈಗಾಗಲೇ ಕಾಯುತ್ತಿರುವ ಪ್ರತಿಯೊಬ್ಬ ಮತದಾರರಿಗೂ ಪ್ರಿಸೈಡಿಂಗ್ ಆಫೀಸರ್ ಕ್ರಮಸಂಖ್ಯೆಯುಳ್ಳ ಸ್ಲಿಪ್ ಗಳನ್ನು ವಿತರಿಸುತ್ತಾರೆ. ಸಾಲಿನ ಕೊನೆಯಲ್ಲಿ ನಿಂತಿರುವ ವ್ಯಕ್ತಿಗೆ 'ಸ್ಲಿಪ್ ನಂಬರ್ 1' ಎಂಬ ಸ್ಲಿಪ್ ನೀಡಲಾಗುತ್ತದೆ ಮತ್ತು ಅಲ್ಲಿಂದ ಸಾಲಿನ ಮುಂದಿರುವವರಿಗೆ ಕ್ರಮವಾಗಿ ಸಂಖ್ಯೆಗಳನ್ನು ನೀಡುತ್ತಾ ಬರಲಾಗುತ್ತದೆ. ಹೀಗೆ ವಿತರಿಸಿದ ಒಟ್ಟು ಚೀಟಿಗಳ ಸಂಖ್ಯೆಯನ್ನೂ ಪ್ರಿಸೈಡಿಂಗ್ ಆಫೀಸರ್ ತಮ್ಮ ಡೈರಿಯಲ್ಲಿ ದಾಖಲಿಸುತ್ತಾರೆ.

ಮತದಾನ ಮುಕ್ತಾಯವಾದ ನಂತರ, ಪ್ರಿಸೈಡಿಂಗ್ ಆಫೀಸರ್ ಈ ಡೈರಿ ಮತ್ತು ಮತದಾರರ ರಿಜಿಸ್ಟರ್ ಅನ್ನು ಚುನಾವಣಾಧಿಕಾರಿಗೆ ಒಪ್ಪಿಸುತ್ತಾರೆ.

ಚುನಾವಣಾಧಿಕಾರಿಯು ಮರುದಿನ ಅವುಗಳನ್ನು ಪರಿಶೀಲಿಸುತ್ತಾರೆ. ಒಂದು ವೇಳೆ ಅವರಿಗೆ ಏನಾದರೂ ಗಂಭೀರ ಲೋಪ ಕಂಡುಬಂದರೆ, ಮರುಮತದಾನ ನಡೆಸುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡುತ್ತಾರೆ.

ವ್ಯವಸ್ಥೆಯು ಈ ರೀತಿಯಾಗಿ ಕೆಲಸ ಮಾಡಬೇಕಿತ್ತು. ಆದರೆ, ನಾವು ಪರಿಶೀಲಿಸಿದ 530 ಕ್ಷೇತ್ರಗಳ ಪೈಕಿ 200 ಕ್ಷೇತ್ರಗಳಲ್ಲಿ ಹಾಗೆ ನಡೆದಿಲ್ಲ. ನಕಲಿ ಮತದಾನ ನಡೆಯುವ ಸಾಧ್ಯತೆ ಅತಿ ಹೆಚ್ಚಿರುವ ಸಂಜೆ 5 ಗಂಟೆಯ ನಂತರದ ಅವಧಿಯಲ್ಲಿ ಎಷ್ಟು ಮತಗಳು ಚಲಾವಣೆಯಾಗಿವೆ ಎಂಬ ದಾಖಲೆಯೇ ಚುನಾವಣಾಧಿಕಾರಿಗಳ ವರದಿಯಲ್ಲಿ ಇರಲಿಲ್ಲ. ಅಲ್ಲದೆ, 23 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಳ್ಳುವ ವೇಳೆಗೆ ಸರತಿ ಸಾಲಿನಲ್ಲಿ ಕಾಯುತ್ತಿದ್ದ ಮತದಾರರಿಗೆ ನೀಡಿದ ಚೀಟಿಗಳ ಸಂಖ್ಯೆಯನ್ನೂ ದಾಖಲಿಸಿರಲಿಲ್ಲ.

ಮತದಾನದ ದಿನದಂದೇ ಅಕ್ರಮಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಚುನಾವಣಾ ಆಯೋಗವೇ ಈ ನಿಯಮಗಳನ್ನು ರೂಪಿಸಿದೆ. ಆದರೆ, ಈ ಕ್ಷೇತ್ರಗಳಲ್ಲಿ ಅಕ್ರಮವನ್ನು ಪತ್ತೆಹಚ್ಚಬಹುದಾಗಿದ್ದ ಆ ದಾಖಲೆಯನ್ನೇ ಇಟ್ಟಿರಲಿಲ್ಲ.

ಈ ವರದಿಯನ್ನು ʼವಾರ್ತಾಭಾರತಿʼಗಾಗಿ ರಶ್ಮಿ ಕಾಸರಗೋಡು ಅನುವಾದಿಸಿದ್ದಾರೆ.

ಇಂತಹ ತನಿಖಾ ವರದಿಗಳ ಮೂಲಕ ಎಲ್ಲರೂ ತಿಳಿದಿರಬೇಕಾದ ಮಹತ್ವದ ಮಾಹಿತಿಗಳನ್ನು ಬಯಲು ಮಾಡುತ್ತಿರುವ The Reporters' Collective ಗೆ ಆರ್ಥಿಕ ನೆರವು ನೀಡಿ ಬೆಂಬಲಿಸಿ. ಈ ಲಿಂಕ್ ಕ್ಲಿಕ್ ಮಾಡಿ.

https://www.reporters-collective.in/support-us

Tags

2024 Lok Sabha ElectionsElection Commission of IndiaVoter Turnout Data 2024ECI Missing Voter DataIndian General Election 2024 ControversyElection Transparency IndiaVoter TurnoutThe Reporters' Collective
share
ಸುಮೇಧಾ ಮಿತ್ತಲ್
ಸುಮೇಧಾ ಮಿತ್ತಲ್
ವೆಂಕಟೇಶ್ ನಾಯಕ್
ವೆಂಕಟೇಶ್ ನಾಯಕ್
Next Story
X