ಚುನಾವಣಾ ಆಯೋಗದ 9 ಹೊಸ ನಿರ್ಧಾರಗಳು: ಯಾವುದು ಬದಲಾಗುತ್ತದೆ, ಯಾವುದು ಬದಲಾಗುವುದಿಲ್ಲ?
►ರಿತಿಕಾ ಚೋಪ್ರಾ - indianexpress.com ವರದಿ

Photo Credit : X/@ECISVEEP
ಮೂರು ದಿನಗಳ ಹಿಂದೆ, ಮೂವರು ಸದಸ್ಯರನ್ನೊಳಗೊಂಡ ಚುನಾವಣಾ ಆಯೋಗವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಕುರಿತು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ತನಿಖೆಗೆ ಭಾರತೀಯ ಚುನಾವಣಾ ಆಯೋಗವು ಸ್ಪಷ್ಟ ಉತ್ತರವನ್ನು ಹೊಂದಿತ್ತು.
ಆಯೋಗದ ಪ್ರಮುಖ ನಿರ್ಧಾರಗಳ ಕುರಿತು ಅದರ ಇಬ್ಬರು ಸದಸ್ಯರು ಕನಿಷ್ಠ 14 ಬಾರಿ ಆಕ್ಷೇಪಣೆಗಳನ್ನು ದಾಖಲಿಸಿದ್ದರು. ಮತದಾರರಾಗಿ ಯಾರನ್ನು ನೋಂದಾಯಿಸಬೇಕು, ಯಾರನ್ನು ಕೈಬಿಡಬೇಕು ಮತ್ತು ಮರುಸ್ಥಾಪಿಸಬೇಕು, ಆ ಮರುಸ್ಥಾಪನೆಗಳ ವಿರುದ್ಧ ಯಾರು ಮೇಲ್ಮನವಿ ಸಲ್ಲಿಸಬೇಕು ಮತ್ತು ಮತದಾರರ ಪಟ್ಟಿಯನ್ನು ನಿರ್ವಹಿಸುವ ವ್ಯವಸ್ಥೆಗಳ ಮೇಲೆ ಯಾರು ನಿಯಂತ್ರಣ ಹೊಂದಿರಬೇಕು ಎಂಬ ವಿಷಯಗಳ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗಿದ್ದವು.
ಆ ಟಿಪ್ಪಣಿಗಳನ್ನು ‘ಸಲಹೆಗಳು’ ಮತ್ತು ‘ಅಭಿಪ್ರಾಯಗಳು’ ಎಂದು ಕರೆದ ಆಯೋಗ, ಇದು ಸಾಮಾನ್ಯ ಚರ್ಚೆಯ ಭಾಗವಾಗಿದೆ ಎಂದು ತಿಳಿಸಿತ್ತು.
ಕಳೆದ ವರ್ಷದ ಪ್ರಮುಖ ನಿರ್ಧಾರಗಳು ಪೂರ್ಣ ಆಯೋಗದ ‘ಸರ್ವಾನುಮತದ’ ಅನುಮೋದನೆಯನ್ನು ಪಡೆದಿವೆ ಎಂದು ಅದು ಒತ್ತಿಹೇಳಿತ್ತು.
ಶನಿವಾರ ಆಯೋಗವು ಮತ್ತೊಮ್ಮೆ ಸಭೆ ಸೇರಿತು. ಬಳಿಕ ನಡೆದ ಬೆಳವಣಿಗೆಯು ಗಮನಾರ್ಹವಾಗಿತ್ತು. ಸಭೆಯ ನಂತರ ಬಿಡುಗಡೆಯಾದ ನಾಲ್ಕು ಪುಟಗಳ ಟಿಪ್ಪಣಿಯಲ್ಲಿ, ಇಬ್ಬರು ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ದಾಖಲಿಸಿದ್ದ ಹಲವು ಕಳವಳಗಳಿಗೆ ಸ್ಪಷ್ಟನೆ ನೀಡುವ 9 ನಿರ್ಧಾರಗಳನ್ನು ಘೋಷಿಸಲಾಯಿತು.
►ಚುನಾವಣಾ ಆಯೋಗದ ಹೊಸ ನಿರ್ಧಾರಗಳು ಯಾವುವು?
ಇನ್ನು ಮುಂದೆ ಪ್ರತಿ ಆಯೋಗದ ಸಭೆಯ ಮೊದಲು ಅಜೆಂಡಾ ಹಂಚಿಕೊಳ್ಳಲಾಗುತ್ತದೆ ಮತ್ತು ಸಭೆಯ ನಂತರ ನಡಾವಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಧಿಕಾರಿಗಳ ವಿದೇಶಿ ಪ್ರವಾಸಗಳಿಗೆ ಆಯೋಗದ ಅನುಮೋದನೆ ಕಡ್ಡಾಯವಾಗಿದೆ. ಯಾವುದೇ ಹೊಸ ಐಟಿ ಮಾಡ್ಯೂಲ್ಗಳು ಮತ್ತು ಪೋರ್ಟಲ್ಗಳು ಆಯೋಗದ ಮುಂದೆ ಬರುವ ಮೊದಲು ಅಧಿಕಾರಿಗಳ ಸಮಿತಿಯ ಪರಿಶೀಲನೆಗೆ ಒಳಪಡಲಿವೆ. ಹಿರಿಯ ಉಪ ಚುನಾವಣಾ ಆಯುಕ್ತರ ನೇತೃತ್ವದ ಮತ್ತು ಐಐಟಿ ಅಥವಾ ಐಐಟಿಯ ಸ್ವತಂತ್ರ ತಜ್ಞರನ್ನು ಒಳಗೊಂಡ ಸಮಿತಿಯು ECINet ವ್ಯವಸ್ಥೆಯನ್ನು ಪರಿಶೀಲಿಸಲಿದೆ. ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯದ ಅಗತ್ಯವಿದ್ದರೆ ಅದನ್ನು ಒದಗಿಸಲಾಗುತ್ತದೆ. ಹಾಗೂ ಆಯುಕ್ತರು ಅಧಿಕಾರಿಗಳಿಗೆ ನೀಡುವ ನಿರ್ದೇಶನಗಳನ್ನು ‘ನಿಖರವಾಗಿ ಪಾಲಿಸಲಾಗುತ್ತದೆ’.
ಈ ನಿರ್ಧಾರಗಳು ಕಳೆದ 10 ತಿಂಗಳಿಂದ ಇಬ್ಬರು ಆಯುಕ್ತರು ದಾಖಲಿಸಿದ್ದ ಕಳವಳಗಳಿಗೆ ಬಹುತೇಕ ಒಂದೊಂದಾಗಿ ಸರಿಯಾಗಿ ಹೊಂದಿಕೊಳ್ಳುತ್ತವೆ. ಕಾರ್ಯಸೂಚಿಗಳನ್ನು ಹಂಚಿಕೊಳ್ಳುತ್ತಿಲ್ಲ ಮತ್ತು ನಡಾವಳಿಗಳನ್ನು ಬಿಡುಗಡೆ ಮಾಡುತ್ತಿಲ್ಲ, ಆಯೋಗದ ಅನುಮೋದನೆಯಿಲ್ಲದೆ ಅಧಿಕಾರಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ, ಆಯೋಗಕ್ಕೆ ತಿಳಿಯದೆ ಹೊಸ ಐಟಿ ಮಾಡ್ಯೂಲ್ಗಳನ್ನು ನಿರ್ಮಿಸಲಾಗಿದೆ, ಮತದಾರರ ಪಟ್ಟಿ ಡೇಟಾಬೇಸ್ ಗೆ ಸ್ವತಂತ್ರ ತಜ್ಞರಿಂದ ಪರಿಶೋಧನೆ ಅಗತ್ಯವಿದೆ, ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ERONet ವ್ಯವಸ್ಥೆಗೆ ಸರಿಯಾದ ಮತ್ತು ಸಂಪೂರ್ಣ ಪ್ರವೇಶವಿಲ್ಲ, ಮತ್ತು ಆಡಳಿತಾತ್ಮಕ ಆದೇಶವೊಂದು ತಮ್ಮ ಗಮನಕ್ಕೆ ಬಾರದೆ ಐಟಿ ವಿಭಾಗದ ಕೆಲಸದ ಹಂಚಿಕೆಯನ್ನು ಬದಲಾಯಿಸಿದೆ ಎಂಬುದು ಅವರ ಕಳವಳಗಳಾಗಿದ್ದವು.
ಸ್ಥಳೀಯ ಅಧಿಕಾರಿಗಳು ಅನುಮೋದಿಸಿದ 97 ಮತದಾರರು ಅಂತಿಮ ಪಟ್ಟಿಯಿಂದ ಇನ್ನೂ ಕಾಣೆಯಾಗಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಗೋವಾದಲ್ಲಿ ಪತ್ತೆಹಚ್ಚಿದ ನಂತರ, ಈ ಪೈಕಿ 81 ಮಂದಿ ಈಗ ಫಾರ್ಮ್ 6 ಭರ್ತಿ ಮಾಡಿದ್ದಾರೆ ಮತ್ತು ಅವರ ಹೆಸರನ್ನು ಸೇರ್ಪಡೆಗೊಳಿಸಲು ಅನುಕೂಲ ಮಾಡಿಕೊಡುವಂತೆ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಈ ತೀವ್ರ ಬದಲಾವಣೆಯು ಆಯೋಗದ ಒಳಗಡೆ ಅಸಮಾಧಾನ ಎಷ್ಟು ಆಳವಾಗಿತ್ತು ಎಂಬುದನ್ನು ಮತ್ತು ಶುಕ್ರವಾರದ ವೇಳೆಗೆ SIR ಪಟ್ಟಿಯ ಮೇಲಿನ ಚುನಾವಣೆಗಳನ್ನು ರದ್ದುಗೊಳಿಸುವಂತೆ ವಿರೋಧ ಪಕ್ಷಗಳು ಒತ್ತಾಯಿಸುವ ಮೂಲಕ ಈ ವಿಷಯವು ಹೊರಗೆ ಎಷ್ಟು ದೂರ ಹಬ್ಬಿದೆ ಎಂಬುದನ್ನು ಸೂಚಿಸುತ್ತದೆ.
►ಫಾರ್ಮ್ 6 ಬಗ್ಗೆ ಏನು ಹೇಳುತ್ತದೆ?
ಆದರೆ ಈ ರಿಯಾಯಿತಿಗಳಿಗೆ ಮಿತಿಗಳಿವೆ, ಮತ್ತು ಫಾರ್ಮ್ 6ರ ವಿಷಯದಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕುರಿತ ಟಿಪ್ಪಣಿಯು ರಿಯಾಯಿತಿಯಂತೆ ಕಂಡರೂ ವಾಸ್ತವವಾಗಿ ಅದು ರಿಯಾಯಿತಿಯಲ್ಲ. ಎಸ್ಐಆರ್ ಅವಧಿಯ ಹೊರಗೆ ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿದ ಫಾರ್ಮ್ ಅನ್ವಯಿಸುತ್ತದೆ ಎಂದು ಅದು ಹೇಳುತ್ತದೆ. ಇದು ಮೇ ತಿಂಗಳಲ್ಲಿ ಜೋಶಿ ವ್ಯಕ್ತಪಡಿಸಿದ್ದ ಆಕ್ಷೇಪಣೆಯ ಸಾರಾಂಶವಾಗಿದೆ.
ಆದರೆ ಈ ಆಕ್ಷೇಪಣೆಯು ECINet ಆನ್ಲೈನ್ ಫಾರ್ಮ್ ಕುರಿತಾಗಿದ್ದು, ಅಲ್ಲಿ ಜೆ ಮತ್ತು ಕೆ ವಿಭಾಗಗಳ ನಡುವೆ ಅರ್ಜಿದಾರರ ಪೋಷಕರ ಕುರಿತಾದ ಪ್ರಶ್ನೆಯನ್ನು ಸೇರಿಸಲಾಗಿತ್ತು ಮತ್ತು ಅದಕ್ಕೆ ಉತ್ತರಿಸದೆ ಅರ್ಜಿದಾರರು ಮುಂದಿನ ಹಂತಕ್ಕೆ ಹೋಗಲು ಸಾಧ್ಯವಿರಲಿಲ್ಲ. ಆದರೆ ಆನ್ಲೈನ್ ಫಾರ್ಮ್ ಅಥವಾ ಆ ಪ್ರಶ್ನೆಯ ಬಗ್ಗೆ ಅಥವಾ ಅದನ್ನು ತೆಗೆದುಹಾಕಲಾಗಿದೆಯೇ ಎಂಬುದರ ಕುರಿತು ಟಿಪ್ಪಣಿಯಲ್ಲಿ ಯಾವುದೇ ಉಲ್ಲೇಖವಿಲ್ಲ.
ಸುಪ್ರೀಂ ಕೋರ್ಟ್ ಈ ಘೋಷಣೆಯನ್ನು ‘ಎತ್ತಿಹಿಡಿದಿದೆ’ ಎಂದು ಅದು ಹೇಳುತ್ತದೆ, ಆದರೆ ಎಸ್ಐಆರ್ (SIR) ಕುರಿತ ನ್ಯಾಯಾಲಯದ ಮೇ 27ರ ಆದೇಶವು ಆ ರೀತಿಯಲ್ಲಿ ತೋರುವುದಿಲ್ಲ. ಆಗಸ್ಟ್ 13ರಂದು ಸಂಧು ಅವರು ಇದನ್ನು ‘ಅಧಿಕೃತವಲ್ಲದ/ಕಾನೂನುಬಾಹಿರ’ ಎಂದು ಕರೆದ ನಂತರ ಜುಲೈನಲ್ಲಿ ಆ ಪ್ರಶ್ನೆಯನ್ನು ಅಲ್ಲಿಟ್ಟವರು ಯಾರು ಅಥವಾ ಅದು ಯಾಕೆ ಹಾಗೇ ಉಳಿಯಿತು ಎಂಬುದನ್ನು ಅದು ಹೇಳುವುದಿಲ್ಲ.
►ಉತ್ತರ ಸಿಗದ ಇತರ ಪ್ರಶ್ನೆಗಳು
ಇತರ ಪ್ರಶ್ನೆಗಳೂ ಸಹ ಉತ್ತರ ಸಿಗದೆ ಉಳಿದಿವೆ.
ನ್ಯಾಯಾಂಗ ಅಧಿಕಾರಿಗಳ ಆದೇಶದ ಮೇರೆಗೆ ಮತದಾರರ ಪಟ್ಟಿಗೆ ಸೇರ್ಪಡೆಗೊಂಡವರ ವಿರುದ್ಧ ದಾಖಲಿಸಲಾದ ಮೇಲ್ಮನವಿಗಳಿಗೆ ಅಧಿಕಾರ ನೀಡಿದವರು ಯಾರು, ಅವುಗಳನ್ನು ಚುನಾವಣಾ ಆಯೋಗದ ಪರವಾಗಿ ದಾಖಲಿಸಲಾಗಿದೆಯೇ, ಮತ್ತು ಹೌದಾದರೆ, ಅದಕ್ಕೆ ಅನುಮತಿ ನೀಡಿದವರು ಯಾರು? ಎಂಬ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿದ ಈ ಪ್ರಮುಖ ಪ್ರಶ್ನೆಯ ಬಗ್ಗೆ ಟಿಪ್ಪಣಿಯು ಏನೂ ಹೇಳುವುದಿಲ್ಲ.
ಮತದಾರರ ಹೆಸರುಗಳನ್ನು ಮರುಸ್ಥಾಪಿಸಲು ಗೋವಾ ನೀಡಿದ್ದ ಸಾಫ್ಟ್ವೇರ್ ಸೌಲಭ್ಯವನ್ನು ಏಕೆ ಎಂದಿಗೂ ಸಕ್ರಿಯಗೊಳಿಸಲಾಗಿಲ್ಲ ಎಂಬುದನ್ನು ಇದು ವಿವರಿಸುವುದಿಲ್ಲ.
ಕಾರ್ಯವೈಖರಿಯು ವಿವಾದಕ್ಕೆ ಕಾರಣವಾಗಿದ್ದ ಮಹಾನಿರ್ದೇಶಕಿ (ಐಟಿ) ಸೀಮಾ ಖನ್ನಾ ಹಾಗೂ ಇಬ್ಬರೂ ಆಯುಕ್ತರು ಕ್ರಮಕ್ಕೆ ಆಗ್ರಹಿಸಿದ್ದ ಹಿರಿಯ ಉಪ ಚುನಾವಣಾ ಆಯುಕ್ತ ಮನೀಶ್ ಗಾರ್ಗ್ ಅವರು ಹುದ್ದೆಯಲ್ಲಿ ಮುಂದುವರಿಯುತ್ತಾರೆಯೇ ಎಂಬುದನ್ನು ಇದು ಹೇಳುವುದಿಲ್ಲ.
ಹಾಗೆಯೇ ಇದು ದೊಡ್ಡ ಪ್ರಶ್ನೆಯೊಂದನ್ನು ಹಾಗೆಯೇ ಉಳಿಸಿದೆ. ಆಯೋಗದೊಳಗಿನ ಹೊಸ ಪರಿಸ್ಥಿತಿ ಹೇಗಿರಲಿದೆ? ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಜ್ಞಾನೇಶ್ ಕುಮಾರ್ ಅವರು ಈಗ ಸಂಧು ಮತ್ತು ಜೋಶಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆಯೇ, ಮತ್ತು ತಮ್ಮ ಆಕ್ಷೇಪಣೆಗಳನ್ನು ಅಧಿಕೃತವಾಗಿ ದಾಖಲಿಸಿರುವ ಈ ಇಬ್ಬರು ಆಯುಕ್ತರಿಗೆ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾತ್ರವಿರಲಿದೆಯೇ ಎಂಬುದು ಕಾದು ನೋಡಬೇಕಿದೆ.
ಸೌಜನ್ಯ: indianexpress.com






