ಚುನಾವಣಾ ಟ್ರಸ್ಟ್‌ಗಳಿಂದ ಪಾರದರ್ಶಕತೆ ಸಾಧ್ಯವೇ?

2024ರಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನಬಾಹಿರ ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದಾಗ, ಇನ್ನು ಎಲ್ಲವೂ ಸರಿಹೋಗಬಹುದು ಎನ್ನುವ ಸಣ್ಣ ಭರವಸೆ ಮೂಡಿತ್ತು. ಆ ತೀರ್ಪು ಬಂದಾಗ, ರಾಜಕೀಯ ಪಕ್ಷಗಳಿಗೆ ಹರಿದು ಬರುವ ಹಣದ ಮೂಲ ತಿಳಿದುಕೊಳ್ಳಲು ಜನರಿಗೆ ಹಕ್ಕು ಇದೆ ಎನ್ನಲಾಯಿತು. ಆ ತೀರ್ಪಿನಲ್ಲಿ ಪಾರದರ್ಶಕತೆಯ ಭರವಸೆ ಸಿಕ್ಕಿತ್ತು.
ಆದರೆ 2024-25ರಲ್ಲಿ ಆದದ್ದೇನು?
ಬೃಹತ್ ಕಾರ್ಪೊರೇಟ್ ಬಂಡವಾಳ ಮತ್ತು ರಾಜಕೀಯ ಶಕ್ತಿಯ ನಡುವಿನ ಸಂಬಂಧ ಮುಗಿದೇ ಹೋಗಬಹುದು ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಸುಳ್ಳಾಗಿದೆ. ಚುನಾವಣಾ ಟ್ರಸ್ಟ್ ಮೂಲಕ ಜಾಸ್ತಿಯೇ ಹಣ ಬಿಜೆಪಿಯಂಥ ಪಕ್ಷಕ್ಕೆ ಹರಿದುಬಂದಿರುವಾಗ, ಚುನಾವಣಾ ಬಾಂಡ್ ರದ್ದಾದರೂ, ಕಾರ್ಪೊರೇಟ್ ದುಡ್ಡಿಗೆ ಪ್ರತಿಯಾಗಿ ಗುತ್ತಿಗೆ ನೀಡುವ ಸರಕಾರದ ಚಾಳಿ ಮುಂದುವರಿಸಿರುವುದು ಸ್ಪಷ್ಟವಾಗಿದೆ.
ಈಗ ಚುನಾವಣಾ ಟ್ರಸ್ಟ್ ಒಂದು ವೈಭವೀಕರಿಸಿದ ಹಣ ವರ್ಗಾವಣೆ ಯಂತ್ರವಾಗಿದೆ.
ಅಲ್ಲಿಯೂ ಮೂಲಗಳನ್ನು ಮರೆಮಾಚಲಾಗಿದೆ. ಹಣ ಎಲ್ಲಿಗೆ ಹೋಗಬೇಕೆನ್ನುವುದು ಮೊದಲೇ ನಿರ್ಧಾರವಾಗಿರುತ್ತದೆ ಮತ್ತದು ಸಮನಾದ ಆಟದ ಮೈದಾನದ ಪರಿಕಲ್ಪನೆಯನ್ನೇ ಅಣಕಿಸುತ್ತದೆ. ಅಲ್ಲಿಗೆ, ಪ್ರಜಾಪ್ರಭುತ್ವ ಎಂಬುದು ಎಲ್ಲಿ ಉಳಿದಿದೆ ಎಂದು ಕೇಳಿಕೊಳ್ಳಬೇಕಾಗುತ್ತದೆ, ಅಷ್ಟೆ.
ಈ ವಂಚನೆ ಯಾವ ಮಟ್ಟದ್ದೆಂದು ತಿಳಿಯಲು ಚುನಾವಣಾ ಟ್ರಸ್ಟ್‌ಗಳು ಪಾರದರ್ಶಕ ಎಂಬ ಸುಳ್ಳನ್ನು ಮೊದಲು ಗ್ರಹಿಸಬೇಕಾಗುತ್ತದೆ. ಕಾಗದದ ಮೇಲಷ್ಟೇ ಅವುಗಳ ಪಾರದರ್ಶಕತೆ ಎನ್ನುವುದು ತೀರಾ ರಹಸ್ಯವೇನಲ್ಲ.
ಕಂಪೆನಿಗಳು ಟ್ರಸ್ಟ್‌ಗೆ ದೇಣಿಗೆ ನೀಡುತ್ತವೆ ಮತ್ತು ಟ್ರಸ್ಟ್ ಪಕ್ಷಗಳಿಗೆ ದೇಣಿಗೆ ನೀಡುತ್ತದೆ. ಎಲ್ಲವೂ ದಾಖಲಾಗಿದೆ ಮತ್ತು ಚುನಾವಣಾ ಆಯೋಗಕ್ಕೆ ವರದಿ ಮಾಡಲಾಗಿದೆ. ಆದರೆ ಇಲ್ಲೊಂದು ಗಂಭೀರ ಲೋಪವಿದೆ; ಈ ಹಿಂದೆ ಕಂಪೆನಿಗಳು ತಮ್ಮ ಲಾಭದ ಶೇ. 7.5ರಷ್ಟು ಮಾತ್ರ ದೇಣಿಗೆ ನೀಡಬಹುದಿತ್ತು. ಆದರೆ ಮೋದಿ ಸರಕಾರ ಆ ಮಿತಿಯನ್ನು ತೆಗೆದುಹಾಕಿರುವುದರಿಂದ, ಈಗ ನಷ್ಟದಲ್ಲಿರುವ ಅಥವಾ ಶೆಲ್ ಕಂಪೆನಿಗಳೂ ಬೇಕಾಬಿಟ್ಟಿ ಹಣ ಸುರಿಯಲು ಹಾದಿ ಮಾಡಿಕೊಟ್ಟಂತಾಗಿದೆ. ಇದು ಕಪ್ಪುಹಣ ಬಿಳಿಯಾಗುವ ನೇರ ಮಾರ್ಗವಲ್ಲವೇ?
ಚುನಾವಣಾ ಟ್ರಸ್ಟ್‌ಗೆ ವಿವಿಧ ಕಂಪೆನಿಗಳು ಕೋಟಿಗಟ್ಟಲೆ ಲೆಕ್ಕದಲ್ಲಿ ಹಣ ಕೊಡುತ್ತವೆ. ಅದೆಲ್ಲವೂ ಒಟ್ಟಿಗೆ ಸೇರುತ್ತದೆ ಮತ್ತು ಅದರಿಂದ ಟ್ರಸ್ಟ್ ವಿವಿಧ ಪಕ್ಷಗಳಿಗೆ ಇಷ್ಟಿಷ್ಟು ಎಂದು ಕೊಡುತ್ತದೆ.
ಟ್ರಸ್ಟ್ ಯಾವ ಪಕ್ಷಕ್ಕೆ ಹಣ ಕೊಟ್ಟಿದೆ ಎಂಬುದು ತನಗೆ ಗೊತ್ತಿಲ್ಲ ಅಥವಾ ಅದರ ಮೇಲೆ ತನಗೆ ಹಿಡಿತವಿಲ್ಲ ಎಂದು ಹಣ ಕೊಟ್ಟ ಕಂಪೆನಿ ಹೇಳಬಹುದು. ಆದರೆ ಅದು ಸತ್ಯವೆ?
ಅಂದರೆ, ಕಾನೂನಾತ್ಮಕ ಪ್ರಶ್ನೆಗಳು ಎದ್ದಾಗ ಅಥವಾ ಅಗತ್ಯ ಬಿದ್ದಾಗ ತಾಂತ್ರಿಕವಾಗಿ ಉತ್ತರಿಸಲು ಅಥವಾ ನುಣಚಿಕೊಳ್ಳಲು ಇದೊಂದು ಪೂರ್ವನಿಯೋಜಿತ ವ್ಯವಸ್ಥೆಯಾಗಿದೆ.
ಒಂದು ನಿರ್ದಿಷ್ಟ ಕಂಪೆನಿ ನಿರ್ದಿಷ್ಟ ಮೊತ್ತವನ್ನು ನಿರ್ದಿಷ್ಟ ಪಕ್ಷಕ್ಕೆಂದೇ ಹಾಕುತ್ತದೆ ಎಂಬ ಸತ್ಯವನ್ನು ನಿರಾಕರಿಸಲು ಇದೊಂದು ವ್ಯವಸ್ಥೆ.
ಚುನಾವಣಾ ಟ್ರಸ್ಟ್ ಫೈರ್‌ವಾಲ್ ಆಗಿ ಕೆಲಸ ಮಾಡುತ್ತದೆ. ಅದು ನೇರ ವಹಿವಾಟಿನ ಸ್ವರೂಪವನ್ನು ರಕ್ಷಿಸುತ್ತ, ಹಣ ಅಧಿಕಾರಸ್ಥರಿಗೇ ಹೋಗುವುದನ್ನು ಖಚಿತಪಡಿಸುತ್ತದೆ. ನೋಡುವುದಕ್ಕೆ ಪಾರದರ್ಶಕ. ಆದರೆ ಆಟ ಹೊರಗಿನಿಂದ ನೋಡುವವರಿಗೆ ಕಾಣದಷ್ಟು ಅಸ್ಪಷ್ಟ.
ರಾಜಕೀಯದಲ್ಲಿ ಹಣವೇ ಜೀವಾಳ ಎನ್ನುವಾಗ, ಭಾರತದಲ್ಲಿ ಕಾರ್ಪೊರೇಟ್ ಹಣವೆಲ್ಲ ಅಧಿಕಾರಸ್ಥರ ಬಳಿ ಹರಿಯುತ್ತದೆ ಮತ್ತು ವಿರೋಧ ಪಕ್ಷಗಳನ್ನು ಬರಿಗೈಯಾಗಿಸಿ ನಿಲ್ಲಿಸಲಾಗುತ್ತಿದೆ.
ಆಡಳಿತಾರೂಢ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬಲಪಡಿಸಲಾಗುತ್ತಿದ್ದು, 2024-25ರಲ್ಲೂ ಅದು ನಡೆದಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯ ಪ್ರಕಾರ, ಈ ವರ್ಷ ಪಕ್ಷಗಳಿಗೆ ನೀಡಲಾದ ಎಲ್ಲಾ ರಾಜಕೀಯ ದೇಣಿಗೆಗಳಲ್ಲಿ ಬಿಜೆಪಿ ಶೇ. 85 ರಷ್ಟನ್ನು ಪಡೆದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಅದರ ನಿಧಿ ರೂ. 6,000 ಕೋಟಿಗೂ ಹೆಚ್ಚು ಬೆಳೆದಿದೆ. 2023-24ರಲ್ಲಿ ಪಡೆದಿರುವುದಕ್ಕಿಂತ ಶೇ. 50 ಹೆಚ್ಚಾಗಿದೆ.
ಇದಕ್ಕೆ ತದ್ವಿರುದ್ಧವಾಗಿ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನಿಧಿಯಲ್ಲಿ ಅರ್ಧದಷ್ಟು ಕಡಿತವಾಗಿದೆ.
ರೂ. 522 ಕೋಟಿ ಒಟ್ಟುಗೂಡಿಸಲು ಅದು ಹೈರಾಣಾಗಿಬಿಟ್ಟಿದೆ ಮತ್ತು ಬಿಜೆಪಿಯ ಗಳಿಕೆ ಈಗ ಕಾಂಗ್ರೆಸ್‌ಗಿಂತ 12 ಪಟ್ಟು ಹೆಚ್ಚಾಗಿದೆ.
ಹೀಗೆ ಒಂದಿಡೀ ವ್ಯವಸ್ಥೆಯನ್ನೇ ಆಡಳಿತಾರೂಢ ಪಕ್ಷ ಹೇಗೆ ಕಬ್ಜಾ ಮಾಡಿಕೊಂಡಿದೆ ಎಂಬುದನ್ನು ನೋಡಬಹುದು.
ಹೀಗಿರುವಾಗ, ಮುಕ್ತ ಮತ್ತು ನ್ಯಾಯಯುತ ಚುನಾವಣೆ ಎಂಬುದು ಲೊಳಲೊಟ್ಟೆ ಮಾತ್ರ.
ಈ ಹಣಬಲದಿಂದ ಅದು ಜಾಹೀರಾತು ಪ್ರಾಬಲ್ಯವನ್ನು ಖರೀದಿಸುತ್ತದೆ, ಡೇಟಾ ವಿಶ್ಲೇಷಣೆಯನ್ನು ಖರೀದಿಸುತ್ತದೆ, ಲಾಜಿಸ್ಟಿಕಲ್ ಬಲವನ್ನು ಖರೀದಿಸುತ್ತದೆ ಮತ್ತು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮುಳುಗಿಸುವ ವ್ಯವಸ್ಥೆಯೊಂದನ್ನು ಸೃಷ್ಟಿಸುತ್ತದೆ.
ಕಾರ್ಪೊರೇಟ್ ವಲಯ ಪ್ರಜಾಪ್ರಭುತ್ವದಲ್ಲಿ ಹೂಡಿಕೆ ಮಾಡದೆ, ತನಗಾಗಿ ಏನು ಬೇಕೋ ಅದನ್ನು ಪಡೆಯುವುದಕ್ಕಾಗಿ ಹೂಡಿಕೆ ಮಾಡುತ್ತಿದೆ ಎನ್ನುವುದು ಸ್ಪಷ್ಟ.
ಚುನಾವಣಾ ಬಾಂಡ್ ಹೋದರೂ, ಈಗ ಚುನಾವಣಾ ಟ್ರಸ್ಟ್ ಮೂಲಕ ಪೇ-ಟು-ಪ್ಲೇ ಅಥವಾ ‘ಕ್ವಿಡ್ ಪ್ರೊ ಕೋ’ ಸಂಸ್ಕೃತಿ ಮುಂದುವರಿದಿದೆ. ಮತ್ತದು ಇನ್ನೂ ವ್ಯವಸ್ಥಿತಗೊಂಡಿದೆ.
ಲಾರ್ಸೆನ್ ಆಂಡ್ ಟೂಬ್ರೊ (ಎಲ್ ಆಂಡ್ ಟಿ) ಅನ್ನೇ ಗಮನಿ ಸಿದರೆ, ಅದಕ್ಕೆ ಸಂಬಂಧಿಸಿದ ಎಲಿವೇಟೆಡ್ ಅವೆನ್ಯೂ ರಿಯಾಲ್ಟಿ ಎಂಬ ರಿಯಲ್ ಎಸ್ಟೇಟ್ ಸಂಸ್ಥೆ ಪ್ರುಡೆಂಟ್ ಟ್ರಸ್ಟ್‌ಗೆ ಏಕೈಕ ಅತಿದೊಡ್ಡ ದೇಣಿಗೆದಾರ ಕಂಪೆನಿಯಾಗಿದ್ದು, 500 ಕೋಟಿ ರೂ. ನೀಡಿದೆ. ಅದು ಬಿಜೆಪಿಯ ಅತಿದೊಡ್ಡ ಫಲಾನುಭವಿಯಾಗಿದ್ದು, ಈ ವ್ಯವಸ್ಥೆಯಲ್ಲಿ ಎಲ್ ಆಂಡ್ ಟಿ ಪಡೆದುಕೊಂಡಿರುವುದರ ಪಟ್ಟಿ ದೊಡ್ಡದಿದೆ.
MMRDA ಪ್ರತಿಷ್ಠಿತ ಕೇಂದ್ರ ಸಚಿವಾಲಯ ಕಟ್ಟಡಗಳು, ಕೆ9 ವಜ್ರ ಗನ್ ರಕ್ಷಣಾ ಒಪ್ಪಂದ, ತೆಲಂಗಾಣದಲ್ಲಿ ಬೃಹತ್ ನೀರಾವರಿ ಯೋಜನೆಗಳು, ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಹಳಿ ಕೆಲಸ ಮತ್ತು ಹಿಂದೆ ರದ್ದಾದ 14,000 ಕೋಟಿ ರೂ. ಸುರಂಗ ಟೆಂಡರ್ ಅದರ ಪಾಲಾಗಿದೆ.
ಇನ್ನು ಟಾಟಾ ಗ್ರೂಪ್ ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್ ಅನ್ನು ನಿಯಂತ್ರಿಸುತ್ತದೆ. ಅದು ಬಿಜೆಪಿಗೆ 757 ಕೋಟಿ ಮತ್ತು ಕಾಂಗ್ರೆಸ್‌ಗೆ 77 ಕೋಟಿ ರೂ. ದೇಣಿಗೆ ನೀಡಿದೆ.
ಟಾಟಾ ಗ್ರೂಪ್ ಗುಜರಾತ್ ಮತ್ತು ಅಸ್ಸಾಮಿನಲ್ಲಿನ ಸೆಮಿಕಂಡಕ್ಟರ್ ಸ್ಥಾವರಗಳಿಗಾಗಿ ಭಾರೀ ರಾಜ್ಯ ಸಬ್ಸಿಡಿ ಪಡೆದಿದೆ.
ಏರ್ ಇಂಡಿಯಾ ಸ್ವಾಧೀನ ಮತ್ತು ಆಧುನೀಕರಣ ಒಪ್ಪಂದಗಳು, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ಗಾಗಿ ರಕ್ಷಣಾ ಉತ್ಪಾದನಾ ಆದೇಶಗಳು, ಪಾಸ್‌ಪೋರ್ಟ್ ಸೇವೆ ಮತ್ತು ಜಿಎಸ್‌ಟಿ ವ್ಯವಸ್ಥೆಯಂತಹ ಐಟಿ ಯೋಜನೆಗಳು ಟಾಟಾ ಪಾಲಾಗಿವೆ.
ಸರಕಾರ ಸಾರ್ವಜನಿಕ ಆಸ್ತಿಗಳು ಮತ್ತು ಸಬ್ಸಿಡಿಗಳನ್ನು ಕೊಟ್ಟರೆ, ಅದಕ್ಕೆ ಪ್ರತಿಯಾಗಿ ಅದು ನೂರಾರು ಕೋಟಿ ರೂ.ಗಳನ್ನು ಟ್ರಸ್ಟ್ ಮೂಲಕ ಬಿಜೆಪಿಗೆ ಮುಟ್ಟಿಸುತ್ತದೆ.
ಆದಿತ್ಯ ಬಿರ್ಲಾ ಗ್ರೂಪ್ ಎಬಿ ಜನರಲ್ ಟ್ರಸ್ಟ್ ಮೂಲಕ ಬಿಜೆಪಿಗೆ ರೂ. 606 ಕೋಟಿಗಳನ್ನು ಒದಗಿಸಿದೆ.
ಅದಕ್ಕೆ ಪ್ರತಿಯಾಗಿ, ಒಡಿಶಾದಲ್ಲಿ ಹಿಂಡಾಲ್ಕೊದ ಬೃಹತ್ ವಿಸ್ತರಣೆ, ಗಣಿಗಾರಿಕೆ ಮತ್ತು ಸಂಸ್ಕರಣಾಗಾರ ಕ್ಲಿಯರೆನ್ಸ್, ಅಲ್ಟ್ರಾಟೆಕ್‌ಗಾಗಿ ಗ್ರೀನ್‌ಫೀಲ್ಡ್ ಮತ್ತು ಬ್ರೌನ್‌ಫೀಲ್ಡ್ ಸಿಮೆಂಟ್ ಸ್ಥಾವರ ಕ್ಲಿಯರೆನ್ಸ್ ಅನ್ನು ಪಡೆದಿದೆ.
ಉದ್ಯಮ ಜಗತ್ತಿನಲ್ಲಿ ಸರಕಾರ ಅಡ್ಡಗಾಲಿಟ್ಟರೆ ಲಾಭ ಇಲ್ಲವಾಗುತ್ತದೆ. ಹಾಗಾಗದಂತೆ ತಪ್ಪಿಸಲು ಕೆಲವು ನೂರು ಕೋಟಿ ರೂ. ಕೊಟ್ಟುಬಿಡುವುದು ಸುರಕ್ಷಿತ ಎಂದೇ ಭಾವಿಸಲಾಗುತ್ತದೆ.
ಹಣವನ್ನು ಸರಿಯಾದ ಟ್ರಸ್ಟ್‌ಗೆ ನೀಡುವುದು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ತೋರುತ್ತದೆ.
ರಾಷ್ಟ್ರೀಯ ಮಟ್ಟದಲ್ಲಿ ಅಧಿಕಾರದ ಕ್ರೋಡೀಕರಣ ಕಂಡರೆ, ಪ್ರಾದೇಶಿಕ ಮಟ್ಟದಲ್ಲಿ ಕಾರ್ಪೊರೇಟ್ ಆಟ ಇನ್ನೂ ವಿಚಿತ್ರವಾಗಿದೆ.
ಆಂಧ್ರಪ್ರದೇಶದಲ್ಲಿನ ರಿನ್ಯೂ ಎನರ್ಜಿಯ ವ್ಯವಹಾರ ಇದಕ್ಕೊಂದು ಉದಾಹರಣೆ.
ಹೆಸರಿಗಷ್ಟೇ ಹಸಿರಿನ ಕಾಳಜಿ ತೋರಿಸುವ ರಿನ್ಯೂ ಎನರ್ಜಿ ಕಂಪೆನಿ ಆಡಿರುವುದು ಅತ್ಯಂತ ಕೊಳಕು ಆಟ. ತನ್ನ ಅಂಗಸಂಸ್ಥೆಗಳ ಮೂಲಕ, ಅದು ಟಿಡಿಪಿಗೆ ಸುಮಾರು 3 ಕೋಟಿ ರೂ. ದೇಣಿಗೆ ನೀಡಿತು. ಈ ದೇಣಿಗೆಗಳನ್ನು 2024ರ ಮೇ 16 ಮತ್ತು 17ರಂದು ನೀಡಲಾಗಿದೆ. ಅಂದರೆ ಮತದಾನದ ಮೂರು ದಿನಗಳ ನಂತರ ಮತ್ತು ಜೂನ್ 4ರಂದು ಫಲಿತಾಂಶ ಘೋಷಿಸುವ ವಾರಗಳ ಮೊದಲು ಈ ವ್ಯವಹಾರ ನಡೆದಿದೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗ, ಇದೆಲ್ಲವೂ ನಡೆಯಿತೆಂದರೆ, ಇದಕ್ಕೆ ಕಾರಣ ಕ್ರೋನಿ ಕ್ಯಾಪಿಟಲಿಸಂ.
ಇಲ್ಲಿ ಗೆಲ್ಲುವವರು ಯಾರೆಂಬ ಪ್ರಶ್ನೆಯೇ ಬರುವುದಿಲ್ಲ, ಗೆಲುವನ್ನು ಮೊದಲೇ ಖರೀದಿಸಲಾಗುತ್ತದೆ.
ತಿಂಗಳುಗಳ ನಂತರ, ಹೊಸ ಟಿಡಿಪಿ ಸರಕಾರದೊಂದಿಗೆ 60,000 ಕೋಟಿ ರೂ. ವೌಲ್ಯದ ಒಪ್ಪಂದಗಳಿಗೆ ಸಹಿ ಹಾಕಿತು.
ಈ ಚುನಾವಣಾ ಟ್ರಸ್ಟ್ ವ್ಯವಸ್ಥೆಯ ಮೂಲಕ ಪಕ್ಷಕ್ಕೆ ಅಗತ್ಯವಿದ್ದಾಗ ಹಣ ಹರಿದುಬರುತ್ತದೆ ಮತ್ತು ಗೆಲುವು ಸಿಕ್ಕಾಗ ಕಂಪೆನಿಗೆ ಸಿಗಬೇಕಾದ ಡೀಲ್‌ಗಳು ಸಿಗುತ್ತವೆ.
ಬಹುಶಃ ಎಲೆಕ್ಟೋರಲ್ ಟ್ರಸ್ಟ್‌ನ ಅತ್ಯಂತ ಕಪಟ ಅಂಶವೆಂದರೆ, ಯಾವುದೇ ಕಾರ್ಪೊರೇಟ್ ತನ್ನ ರಾಜಕೀಯ ಸಿದ್ಧಾಂತವನ್ನು ಮರೆಮಾಚಲು ಅವಕಾಶ ನೀಡುತ್ತದೆ ಎಂಬುದು.
ಇದು ಅವರಿಗೆ ನಾವು ತಟಸ್ಥರು ಎಂದು ಹೇಳಲು ಅವಕಾಶ ನೀಡುತ್ತದೆ.
ಇದು ಮಹೀಂದ್ರಾ ಗ್ರೂಪ್ ನ್ಯೂ ಡೆಮಾಕ್ರಟಿಕ್ ಎಲೆಕ್ಟೋರಲ್ ಟ್ರಸ್ಟ್‌ಗೆ ಹಣಕಾಸು ಒದಗಿಸಲು ಅನುವು ಮಾಡಿಕೊಡುತ್ತದೆ ಮತ್ತು ಅದು ನಂತರ ಬಿಜೆಪಿಗೆ 150 ಕೋಟಿ ರೂ.ಗಳನ್ನು ಮುಟ್ಟಿಸಿ, ಉಳಿದ ಪಕ್ಷಗಳಿಗೆ ಚೂರುಪಾರು ಹಂಚುತ್ತದೆ. ಇವೆಲ್ಲವೂ ಕಾರ್ಪೊರೇಟ್ ತಟಸ್ಥತೆಯ ಮುಖವನ್ನು ಉಳಿಸುತ್ತವೆ.
ಇಂಡಿಗೋ ಅಂಥ ಕಂಪೆನಿಗಳು ತಮ್ಮ ವಿಮಾನಯಾನ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿವಾದಗಳ ನಡುವೆಯೇ ಪ್ರುಡೆಂಟ್ ಟ್ರಸ್ಟ್‌ಗೆ 40 ಕೋಟಿ ರೂ. ದೇಣಿಗೆ ನೀಡುವುದು ಸಾಧ್ಯವಾಗುತ್ತದೆ.
ನೇರ ದೇಣಿಗೆಯಿಂದ ಬರುವ ನೇರ ಸಾರ್ವಜನಿಕ ಪರಿಶೀಲನೆಯನ್ನು ಇದು ತಪ್ಪಿಸುತ್ತದೆ.
ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಒಂದೆಡೆಗಾದರೆ, ರಾಜಕೀಯ ಪಕ್ಷಪಾತದ ಅಪಾಯ ಎದುರಿಸಬೇಕಿಲ್ಲ ಎನ್ನುವುದು ಇನ್ನೊಂದೆಡೆಯಿಂದ ಲಾಭದಾಯಕವಾಗಿದೆ.







