ಕಾನೂನುಬಾಹಿರ ವಿಷಯಗಳನ್ನು ತಯಾರಿಸಲು Grok AI ಬಳಕೆ; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಎಲಾನ್ ಮಸ್ಕ್

ಎಲಾನ್ ಮಸ್ಕ್ | Photo Credit : PTI
ಗ್ರೋಕ್ ಎಐ ಸಾಧನವನ್ನು ಕಾನೂನು ಬಾಹಿರ ವಿಷಯಗಳನ್ನು ತಯಾರಿಸಲು ಬಳಸಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಲಾನ್ ಮಸ್ಕ್ ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನ ಕೃತಕಬುದ್ಧಿಮತ್ತೆ (AI) ಸಾಧನವಾದ ಗ್ರೋಕ್ ಅನ್ನು ದುರುಪಯೋಗಪಡಿಸಿಕೊಂಡ ಬಳಕೆದಾರರರು ಪರಿಣಾಮ ಎದುರಿಸಲಿದ್ದಾರೆ ಎಂದು ಉದ್ಯಮಿ ಎಲಾನ್ ಮಸ್ಕ್ ಹೇಳಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಾನೂನುಬಾಹಿರ ವಿಷಯಗಳನ್ನು ಅಪ್ಲೋಡ್ ಮಾಡುವವರು ಕಾನೂನು ಪರಿಣಾಮಗಳನ್ನು ಎದುರಿಸಲಿದ್ದಾರೆ ಎಂದು ‘ಎಕ್ಸ್’ ಮಾಲಕರಾದ ಮಸ್ಕ್ ಹೇಳಿದ್ದಾರೆ.
‘ಎಕ್ಸ್’ ಸಾಮಾಜಿಕ ಜಾಲತಾಣದಿಂದ ಅಸಭ್ಯ, ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯಗಳನ್ನು ತೆಗೆಯುವಂತೆ ಭಾರತದ ತಾಂತ್ರಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶಿಸಿದ ಸಂದರ್ಭದಲ್ಲಿ ಮಸ್ಕ್ ಅವರ ಹೇಳಿಕೆ ಬಂದಿದೆ. ಮುಖ್ಯವಾಗಿ ಗ್ರೋಕ್ (Grok) ಮೂಲಕ ಉತ್ಪಾದಿಸಲಾಗುತ್ತಿರುವ ವಿಷಯಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿತ್ತು ಮತ್ತು ತಪ್ಪಿದಲ್ಲಿ ಭಾರತೀಯ ಕಾನೂನಿನ ಪ್ರಕಾರ ಸೂಕ್ತ ಕ್ರಮವನ್ನು ಜರುಗಿಸಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿತ್ತು.
ಅನುಚಿತ ಚಿತ್ರಗಳು ಪ್ರಸಾರವಾಗುತ್ತಿರುವ ಬಗ್ಗೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, “ಗ್ರೋಕ್ ಅನ್ನು ಕಾನೂನುಬಾಹಿರ ವಿಷಯಗಳನ್ನು ತಯಾರಿಸಲು ಬಳಸುವ ಯಾರೇ ಆದರೂ, ತಾಣಕ್ಕೆ ಕಾನೂನುಬಾಹಿರ ವಿಷಯ ಅಪ್ಲೋಡ್ ಮಾಡುವವರ ರೀತಿಯ ಕಾನೂನು ಕ್ರಮವನ್ನು ಎದುರಿಸಲಿದ್ದಾರೆ” ಎಂದು ಅವರು ಹೇಳಿದ್ದಾರೆ. ತಂತ್ರಜ್ಞಾನ ಮತ್ತು ವ್ಯಕ್ತಿಗತವಾಗಿ ಜನರು ಅದನ್ನು ಹೇಗೆ ಬಳಸಲು ಆರಿಸಿಕೊಳ್ಳುತ್ತಾರೆ ಎನ್ನುವುದರ ನಡುವೆ ದೃಢವಾದ ವ್ಯತ್ಯಾಸವನ್ನು ಅವರು ಮುಂದಿಟ್ಟಿದ್ದಾರೆ. ಹೊಣೆಗಾರಿಕೆ ಬಳಕೆದಾರರ ಮೇಲಿದೆಯೇ ವಿನಾ ತಂತ್ರಜ್ಞಾನ ಸಾಧನದ ಮೇಲಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ ಪೋಸ್ಟ್ ಗ್ರೋಕ್ ಅನ್ನು ಪೆನ್ನಿಗೆ ಉದಾಹರಿಸಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿತ್ತು. ಬಳಕೆದಾರರು ಬರೆಯುವುದನ್ನು ಕಂಡು ಪೆನ್ ತಪ್ಪು ಎಂದು ಹೇಳಲಾಗದು ಎಂದು ಪೋಸ್ಟ್ನಲ್ಲಿ ತಿಳಿಸಲಾಗಿತ್ತು. ಪೋಸ್ಟ್ ಪ್ರಕಾರ, “ಗ್ರೋಕ್ ಒಳನೋಟಗಳಿಗೆ ಪ್ರತಿಕ್ರಿಯಿಸುತ್ತದೆಯೇ ವಿನಾ ಸ್ವತಂತ್ರವಾಗಿ ಹಾನಿಕರ ವಸ್ತು ಯಾವುದು ಎಂದು ಪ್ರತ್ಯೇಕಿಸುವುದಿಲ್ಲ”! ಎಲಾನ್ ಮಸ್ಕ್ ಅವರ ಪ್ರತಿಕ್ರಿಯೆಯೂ ಅದೇ ದಾಟಿಯಲ್ಲಿತ್ತು.
ಎಐ ಸಾಧನಗಳನ್ನು ಬಳಸಿ ಅಶ್ಲೀಲ ಮತ್ತು ಅವಹೇಳನಕಾರಿ ವಿಷಯಗಳನ್ನು ತಯಾರಿಸಲಾಗುತ್ತಿದೆ ಮತ್ತು ಮುಖ್ಯವಾಗಿ ಮಹಿಳೆಯರನ್ನು ಗುರಿ ಮಾಡಲಾಗುತ್ತಿದೆ ಎನ್ನುವ ಕುರಿತ ಕಳವಳದ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ನಿರ್ದೇಶನ ಬಂದಿತ್ತು. ಸಚಿವಾಲಯ ಅಮೆರಿಕ ಮೂಲದ ಸಾಮಾಜಿಕ ಜಾಲತಾಣ ವೇದಿಕೆಗೆ ಕೈಗೊಂಡ ಕ್ರಮಗಳ ಕುರಿತು 72 ಗಂಟೆಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ. ಅಂತಹ ವಿಷಯಗಳನ್ನು ತೆಗೆದುಹಾಕಲು ಮತ್ತು ಅಂತಹ ಬಳಕೆದಾರರ ವಿರುದ್ಧ ಕೈಗೊಂಡ ಕ್ರಮಗಳನ್ನು ತಿಳಿಸುವಂತೆ ಸೂಚಿಸಲಾಗಿದೆ.
“ಪದೇಪದೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ದೂರುಗಳನ್ನು ಸ್ವೀಕರಿಸಲಾಗಿದೆ. ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆಯಾಗುತ್ತಿದೆ, ಸಂಸದೀಯ ಪ್ರತಿನಿಧಿಗಳು ದೂರು ಸಲ್ಲಿಸಿ ಎಕ್ಸ್ ಜಾಲತಾಣದಲ್ಲಿರುವ ವಿಷಯಗಳು ಸಭ್ಯತೆ ಮತ್ತು ಅಶ್ಲೀಲತೆ ಸಂಬಂಧಿತ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ಈಗಿರುವ ನಿಯಮಗಳ ಹೊರತಾಗಿಯೂ ನಿರ್ದಿಷ್ಟ ವರ್ಗದ ಕಾನೂನುಬಾಹಿರ ವಿಷಯಗಳು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ಗೆ ಪತ್ರ ಬರೆದು ದೂರು ಸಲ್ಲಿಸಿದ ನಂತರ ಈ ವಿಚಾರದತ್ತ ರಾಜಕೀಯ ಗಮನ ಹರಿದಿತ್ತು. ಆಕೆ ತಮ್ಮ ಪತ್ರದಲ್ಲಿ, “ಗ್ರೋಕ್ ಅನ್ನು ದುರ್ಬಳಕೆ ಮಾಡಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ತಯಾರಿಸಲಾಗುತ್ತಿದೆ ಮತ್ತು ಆನ್ಲೈನ್ನಲ್ಲಿ ಹಂಚಿ ಅವರ ವರ್ಚಸ್ಸಿಗೆ ಧಕ್ಕೆ ತರಲಾಗುತ್ತಿದೆ” ಎಂದು ಬರೆದಿದ್ದರು.







