ಸಾವಯವ ಕೃಷಿಗೆ ಒತ್ತು, ರಾಸಾಯನಿಕ ಕೃಷಿಯಿಂದ ಮುಕ್ತಿ!

ಬ್ರಹ್ಮಾವರ, ನ.16: ನೈಸರ್ಗಿಕ, ಸಾವಯವ ಕೃಷಿಗೆ ಒತ್ತು ನೀಡಿ, ವಿಷಮುಕ್ತವಾದ, ಗುಣಾತ್ಮಕ ಆಹಾರ ಉತ್ಪಾದನೆಯ ಸಲುವಾಗಿ ನೈಸರ್ಗಿಕ ಕೃಷಿ ಮಿಷನ್ ಯೋಜನೆಯನ್ನು ಭಾರತ ಸರಕಾರ ಹಮ್ಮಿಕೊಂಡಿದ್ದು, ಈ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 15 ಗುಚ್ಛ ಗ್ರಾಮಗಳನ್ನು ಆಯ್ಕೆ ಮಾಡಿ ಅಲ್ಲಿಂದ ಆಯ್ಕೆ ಮಾಡಲಾದ ಕೃಷಿ ಸಖಿಯರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಐದು ದಿನಗಳ ತರಬೇತಿ ಕಾರ್ಯಾಗಾರವನ್ನು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ನಿಟ್ಟಿನಲ್ಲಿ ಕೃಷಿ ಇಲಾಖೆ, ಜಿಲ್ಲೆಯಲ್ಲಿ 15 ಗುಚ್ಛ ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಈ ಗ್ರಾಮಗಳಲ್ಲಿ ರಾಸಾಯನಿಕ ರಹಿತ, ಪ್ರಕೃತಿ ಸ್ನೇಹಿ ಕೃಷಿ ವಿಧಾನಗಳನ್ನು ಉತ್ತೇಜಿಸುವುದು ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡುತ್ತಾ ರೈತರ ಖರ್ಚು ಕಡಿಮೆ ಮಾಡುವುದೇ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹೊಸದಿಲ್ಲಿ ಹಾಗೂ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಉಡುಪಿ ಜಿಲ್ಲಾ ಕೃಷಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ನೈಸರ್ಗಿಕ ಮಿಷನ್ ಯೋಜನೆಯ 5 ದಿನಗಳ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಯ ಕೃಷಿ ಸಖಿಯರು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಹಮ್ಮಿ ಕೊಳ್ಳಲಾಗಿತ್ತು. ಸುಮಾರು 30 ಮಂದಿ ತರಬೇತಿ ಪಡೆದಿದ್ದಾರೆ.
ಉದ್ದೇಶವೇನು? :
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 15 ಗುಚ್ಛ ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಅಲ್ಲಿನ ನೈಸರ್ಗಿಕ ಕೃಷಿಯವರು, ಕೃಷಿ ಸಖಿಯರು (ವಿಸ್ತರಣಾ ಕಾರ್ಯಕರ್ತರು), ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಿ ಅವರ ಮೂಲಕ, ಮುಂದಿನ ದಿನಗಳಲ್ಲಿ ಪ್ರತಿ ಗುಚ್ಛ ಗ್ರಾಮಕ್ಕೆ ತಲಾ 125 ಎಕರೆಯಂತೆ ಒಟ್ಟು 2,000 ಎಕರೆ ಪ್ರದೇಶಗಳ ವಿವಿಧ ಬೆಳೆಗಳಲ್ಲಿ ನೈಸರ್ಗಿಕ ಕೃಷಿಯನ್ನು ರೈತರ ಕ್ಷೇತ್ರಗಳಲ್ಲಿ ಅಳವಡಿಕೆ ಮಾಡುವುದು ಈ ಮಿಷನ್ ಮೂಲ ಉದ್ದೇಶ.
ರೈತರಿಗೆ ಈ ಬಗ್ಗೆ ಮಾಹಿತಿ ತಲುಪಿಸುವ ಘಟ್ಟದಲ್ಲಿ ಕಾರ್ಯನಿರ್ವಹಿಸುವ ಸಖಿಯರಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. ನೈಸರ್ಗಿಕ ಕೃಷಿಯನ್ನು ರೈತರು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಬಗೆಯನ್ನು ಅವರಿಗೆ ಕಲಿಸಲಾಗಿದೆ.
ಉದ್ಘಾಟನೆ :
ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಅವರ ಮಾರ್ಗದರ್ಶನದಲ್ಲಿ ಪೂಜಾ ನಾಯಕ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ್ ಅಧ್ಯಕ್ಷತೆ ವಹಿಸಿದ್ದು, ತರಬೇತಿಯ ನೋಡಲ್ ಅಧಿಕಾರಿಯಾಗಿ ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ನವೀನ್ ಎನ್.ಇ., ರಾಷ್ಟ್ರೀಯ ನೈಸ
ರ್ಗಿಕ ಕೃಷಿ ಇಲಾಖೆ ಜಿಲ್ಲಾ ನೋಡಲ್ ಅಧಿಕಾರಿ ಶ್ರೀರಾಮ್ ಹೆಗ್ಡೆ ಉಪಸ್ಥಿತರಿದ್ದರು.
ತರಬೇತಿ ಏನೇನು? :
5 ದಿನಗಳ ತರಬೇತಿಯಲ್ಲಿ ಕೃಷಿ ಇಲಾಖೆ ಪರವಾಗಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಯೋಜನೆಯ ಅವಲೋಕನ, ರೈತರ ಕ್ಷೇತ್ರಗಳಲ್ಲಿ ಕೃಷಿ ಸಖಿಯರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಪಾತ್ರ ಹಾಗೂ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು. ನೈಸರ್ಗಿಕ ಕೃಷಿಯ ತತ್ವಗಳು, ಹವಾಮಾನ ಬದಲಾವಣೆಯಿಂದ ನೈಸರ್ಗಿಕ ಕೃಷಿ ಮೇಲಾಗುವ ಪರಿಣಾಮಗಳು, ಜೈವಿಕ ಪರಿಕರಗಳ ಮಹತ್ವ, ಮಣ್ಣಿನ ಫಲವತ್ತತೆ, ಪೋಷಕಾಂಶಗಳು, ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು, ಹಣ್ಣು-ತರಕಾರಿ ಬೆಳೆಗಳಲ್ಲಿ ನೈಸರ್ಗಿಕ ಕೃಷಿಯ ಮಹತ್ವ, ನೈಸರ್ಗಿಕ ಕೃಷಿಯಲ್ಲಿ ಕೀಟ ಗುರುತಿಸುವಿಕೆ ಮತ್ತು ನಿರ್ವಹಣೆ, ರೋಗ ಗುರುತಿಸುವಿಕೆ-ನಿರ್ವಹಣೆ, ಕೃಷಿ ವಿಸ್ತರಣೆಯ ಪದ್ಧತಿ ಮತ್ತು ವಿಧಾನಗಳು, ಬೇಸಾಯ ವ್ಯವಸ್ಥೆಗಳ ಮತ್ತು ಬೀಜಗಳ ಬಗ್ಗೆ, ಆರೋಗ್ಯ ಮತ್ತು ಪೋಷಣೆ, ನೈಸರ್ಗಿಕ ಉತ್ಪನ್ನಗಳ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಸೇರಿದಂತೆ ಒಟ್ಟು 20 ಬೋಧನಾ ಪಠ್ಯಗಳನ್ನು ಬೋಧಿಸಲಾಗಿತ್ತು.
ಅಲ್ಲದೆ ಪ್ರಾಯೋಗಿಕವಾಗಿ ನೈಸರ್ಗಿಕ ಕೃಷಿಯಲ್ಲಿ ಮೂಲಭೂತ ತತ್ವಗಳಾದ ಬೆಳೆಗಳ ಉತ್ಪಾದನೆ, ಮಣ್ಣಿನ ಫಲವತ್ತತೆಗಳ ಅರಿವಿಗಾಗಿ ಪೋಷಕಾಂಶದ ಮೂಲರೂಪಗಳಾದ ಬೀಜಾಮೃತ ತಯಾರಿ, ಜೀವಾಮೃತ ತಯಾರಿ, ಘನ, ದ್ರವ ಜೀವಾಮೃತ ತಯಾರಿಗಳನ್ನು ಪದ್ದತಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗಿತ್ತು. ಬೆಳೆಗಳಿಗೆ ಬರುವ ಕೀಟ, ರೋಗಗಳನ್ನು ನಿರ್ವಹಣೆ ಮಾಡುವ ಬಗ್ಗೆ ಅವುಗಳಿಗೆ ಆಧಾರವಾದ ಬ್ರಹ್ಮಾಸ್ತ್ರ, ನಿಮಾಸ್ತ್ರ ಅಜ್ಞಸ್ತ್ರ ತಯಾರಿಕೆ ಬಗ್ಗೆ ಹಾಗೂ ಗೋಮೂತ್ರದ ಬಳಕೆ, ಹುಳಿ ಮಜ್ಜಿಗೆ, ದಶಪರಿಣಿ ಸಾರ, ಶುಂಠಿ ಕಶಾಯ ಸಹಿತ ವಿವಿಧ ಸೂತ್ರೀಕರಣ ಮೂಲಗಳ ತಯಾರಿ ವಿಧಾನಗಳ ಬಗ್ಗೆಯೂ ಕಲಿಸಲಾಗಿತ್ತು.
ತರಬೇತಿಗೆ ಆಯ್ಕೆಯಾದ 15 ಗುಚ್ಛ ಗ್ರಾಮಗಳು
ಉಡುಪಿ ಜಿಲ್ಲೆಯಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಯೋಜನೆಯಡಿ ಜಪ್ತಿ, ಆಜ್ರಿ, ಕೊಡ್ಲಾಡಿ, ಯಳಜಿತ್, ಗೋಳಿಹೊಳೆ, ನಿಟ್ಟೆ, ಕೌಡೂರು, ಶಿವಪುರ, ಹಿರ್ಗಾನ, ಚೇರ್ಕಾಡಿ, ಹೆಗ್ಗುಂಜೆ, ಕೊಕ್ಕರ್ಣೆ, ಉದ್ಯಾವರ, ಬೈರಂಪಳ್ಳಿ, ಶಿರ್ವ ಗ್ರಾಮಗಳು ತರಬೇತಿಗೆ ಗುಚ್ಛ ಗ್ರಾಮಗಳಾಗಿ ಆಯ್ಕೆಯಾಗಿವೆ.
ರಾಸಾಯನಿಕ ಮುಕ್ತ ಭೂಮಿ, ರಾಸಾಯನಿಕ ಮುಕ್ತ ಬೆಳೆಗಳು-ಮಣ್ಣು, ರಾಸಾಯನಿಕ ಮುಕ್ತ ಪರಿಸರ ನಿರ್ಮಾಣದ ಜೊತೆ ಜನರ ಆರೋಗ್ಯ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆ ತರಲು ನೈಸರ್ಗಿಕ ಕೃಷಿಯಿಂದ ಸಾಧ್ಯ ಎಂಬುದನ್ನು ಅರಿವು ಮೂಡಿಸಲು ಈ ಮಿಷನ್ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ನೈಸರ್ಗಿಕ ಕೃಷಿಗೆ ಹೆಚ್ಚು ಉತ್ತೇಜನ ಸಿಗಬೇಕು ಎಂಬುದು ತರಬೇತಿಯ ಮೂಲ ಉದ್ದೇಶ. ಗುಣಾತ್ಮಕ ಆಹಾರ ಉತ್ಪಾದನೆಗೆ ಹೆಚ್ಚು ಒತ್ತು ಸಿಗಬೇಕು. ದೇಶದಲ್ಲಿ ಒಟ್ಟು 14 ರಾಷ್ಟ್ರೀಯ ತರಬೇತಿ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯವೂ ಒಂದು. ಉಡುಪಿ ಜಿಲ್ಲೆಯಿಂದ ಮಾಸ್ಟರ್ ಟ್ರೇನರ್ ಆಗಿ ಇದರಲ್ಲಿ ಭಾಗವಹಿಸಲಾಗಿತ್ತು.
-ಡಾ.ನವೀನ್ ಎನ್.ಇ., ವಿಜ್ಞಾನಿ, ಬೇಸಾಯ ಶಾಸ್ತ್ರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ
ಸಾವಯವ ಕೃಷಿಯಲ್ಲಿ ಹೆಚ್ಚಿನ ಅರಿವಿಲ್ಲದ ಕಾರಣ ಈ ಹಿಂದೆ ನೈಸರ್ಗಿಕ ಕೃಷಿಯಲ್ಲಿ ಸಿಆರ್‌ಪಿ ಆಗಿ ಆಯ್ಕೆಯಾದಾಗ ಸ್ವಲ್ಪ ಅಂಜಿಕೆಯಿತ್ತು. ತರಬೇತಿ ಪಡೆದ ಬಳಿಕ ರೈತರು ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ಬಗ್ಗೆ ಮನವೊಲಿಸಲು ಸಮರ್ಥನೆ ಸಿಕ್ಕಿದೆ. ಪೂರ್ವಿಕರು ನೈಸರ್ಗಿಕ ಕೃಷಿಗೆ ಒತ್ತು ನೀಡಿದ್ದರಿಂದ ಆರೋಗ್ಯಕರ ಜೀವನಶೈಲಿ ಸಾಗಿಸುತ್ತಿದ್ದರು. ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು.
-ಸಂಗೀತಾ ದೇವಾಡಿಗ, ಕೃಷಿ ಸಖಿ, ತೆಕ್ಕಟ್ಟೆ ಗ್ರಾಪಂ
ಹೆಬ್ರಿ ತಾಲೂಕಿನ ಶಿವಪುರ ಗ್ರಾಮವು ರಾಷ್ಟ್ರೀಯ ನೈಸರ್ಗಿಕ ಕೃಷಿ ಗ್ರಾಮ ವಾಗಿ ಘೋಷಣೆಯಾಗಿದೆ. ರಾಸಾಯನಿಕ ಕೃಷಿಯನ್ನು ಅವಲಂಭಿಸದೆ ಸಾವಯವ ಕೃಷಿಗೆ ಒತ್ತು ನೀಡಬೇಕು. ಕೇಂದ್ರ ಸರಕಾರದ ಈ ಯೋಜನೆಗೆ ಉಡುಪಿ ಜಿಲ್ಲೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. 5 ದಿನಗಳ ತರಬೇತಿ ಉಪಯುಕ್ತವಾಗಿತ್ತು.
-ಸುಗಂಧಿ, ಕೃಷಿ ಸಖಿ, ಶಿವಪುರ ಗ್ರಾಪಂ







