Chennai | 100 ಕೋಟಿ ರೂ. ಕ್ಲಬ್ ಗೆ ಎಂಟ್ರಿ: ‘ಮಂಡಾಡಿ’ಯಿಂದ ಸೂರಿಗೆ ಸ್ಟಾರ್ ಪಟ್ಟ
50 ಪರೋಟಾ ತಿನ್ನುವ ಹಾಸ್ಯ ಪಾತ್ರದಿಂದ ಖ್ಯಾತನಾಗಿದ್ದ ನಟ

Photo credit : X@sooriofficial
ಚೆನ್ನೈ: ಒಂದು ಕಾಲದಲ್ಲಿ ತಮಿಳು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಿಗೆ ಸೀಮಿತವಾಗಿದ್ದ ನಟ ಸೂರಿ, ಇದೀಗ ನಾಯಕನಾಗಿ ಬಾಕ್ಸ್ ಆಫೀಸ್ ನಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಸೆ. 10ರಂದು ಬಿಡುಗಡೆಯಾದ ‘ಮಂಡಾಡಿ’ ಸಿನಿಮಾ ವಿಶ್ವದಾದ್ಯಂತ 100 ಕೋಟಿ ರೂ. ಗಳಿಕೆ ಕಂಡಿದ್ದು, ಸೂರಿ ಅವರ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
ಮತಿಮಾರನ್ ಪುಗಳೇಂಧಿ ನಿರ್ದೇಶನದ ಸ್ಪೋರ್ಟ್ಸ್ ಆ್ಯಕ್ಷನ್-ಡ್ರಾಮಾ ‘ಮಂಡಾಡಿ’, ಕಾರ್ತಿ ಅಭಿನಯದ ‘ಸರ್ದಾರ್ 2’ ಚಿತ್ರದೊಂದಿಗೆ ಚಿತ್ರಮಂದಿರಕ್ಕೆ ಬಿಡುಗಡೆಯಾಗಿತ್ತು. ದೊಡ್ಡ ಬಜೆಟ್ ನ ‘ಸರ್ದಾರ್ 2’ ನಿರೀಕ್ಷಿತ ಯಶಸ್ಸು ಕಾಣದಿರುವ ನಡುವೆಯೇ, ‘ಮಂಡಾಡಿ’ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಬಾಕ್ಸ್ ಆಫೀಸ್ನಲ್ಲಿ ಮುನ್ನಡೆದಿದೆ.
ಹಿನ್ನೆಲೆ ಕಲಾವಿದನಿಂದ ನಾಯಕ ನಟನ ತನಕ ಸೂರಿಯ ಸಿನಿಪಯಣ :
ತಮಿಳು ಚಿತ್ರರಂಗದಲ್ಲಿ ಸೂರಿ ಅವರ ಪಯಣ ಸುಲಭದ್ದಾಗಿರಲಿಲ್ಲ. 1990ರ ದಶಕದ ಅಂತ್ಯದಲ್ಲಿ ಹಿನ್ನೆಲೆ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ ಅವರು, ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ‘ಮರುಮಲರ್ಚಿ’ (1998), ‘ಸಂಗಮಂ’ (1999), ‘ಜೇಮ್ಸ್ ಪಾಂಡು’ (2000), ‘ಕಣ್ಣನ್ ವರುವಾನ್’ (2000), ‘ವಿನ್ನರ್’ (2003) ಹಾಗೂ ‘ಕಾದಲ್’ (2004) ಸೇರಿದಂತೆ ಹಲವು ಚಿತ್ರಗಳಲ್ಲಿ ಹಿನ್ನೆಲೆ ಕಲಾವಿದನಾಗಿ ಕೆಲಸ ಮಾಡಿದರು.
ಸೂರಿ ಅವರಿಗೆ ದೊಡ್ಡ ಮಟ್ಟದ ಗುರುತನ್ನು ತಂದುಕೊಟ್ಟ ಚಿತ್ರ ‘ವೆನ್ನಿಲಾ ಕಬಡ್ಡಿ ಕೂಳು’ (2009). ಈ ಚಿತ್ರದಲ್ಲಿನ ಪರೋಟಾ ತಿನ್ನುವ ಸ್ಪರ್ಧೆಯ ದೃಶ್ಯದಲ್ಲಿ ಸೂರಿ ಅಭಿನಯಿಸಿದ ಹಾಸ್ಯ ಸನ್ನಿವೇಶ ಪ್ರೇಕ್ಷಕರ ಗಮನ ಸೆಳೆಯಿತು. ಚಿತ್ರದ ಈ ಪರೋಟಾ ತಿನ್ನುವ ದೃಶ್ಯ ಭಾರಿ ಜನಪ್ರಿಯತೆ ಪಡೆದಿದ್ದು, ಇದೇ ಕಾರಣಕ್ಕೆ ಸೂರಿ ಅವರಿಗೆ ‘ಪರೋಟಾ ಸೂರಿ’ ಎಂಬ ಹೆಸರು ಜನಪ್ರಿಯವಾಯಿತು.
ನಂತರ ನಿಧಾನವಾಗಿ ಪೋಷಕ ಹಾಗೂ ಹಾಸ್ಯ ಪಾತ್ರಗಳತ್ತ ಸೂರಿ ಹೆಜ್ಜೆ ಹಾಕಿದರು. ಸಾಮಾನ್ಯವಾಗಿ ನಾಯಕ ನಟನ ಸ್ನೇಹಿತ, ಗ್ರಾಮೀಣ ಹಿನ್ನೆಲೆಯ ಯುವಕ ಅಥವಾ ಕಾಮಿಡಿ ಟ್ರ್ಯಾಕ್ನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ತಮ್ಮದೇ ಹಾಸ್ಯ ಶೈಲಿ ಮತ್ತು ಟೈಮಿಂಗ್ ನಿಂದ ಪ್ರೇಕ್ಷಕರ ಗಮನ ಸೆಳೆದರು.
‘ಪೋರಾಳಿ’ (2011), ‘ಸುಂದರಪಾಂಡಿಯನ್’ (2012), ‘ವರುತ್ತಪಡಾದ ವಾಲಿಬರ್ ಸಂಘಂ’ (2013), ‘ಜಿಲ್ಲಾ’ (2014), ‘ರಜನಿಕಾಂತ್ ಮುರುಗನ್’ (2016) ಹಾಗೂ ‘ಸಂಗಿಲಿ ಬಂಗಿಲಿ ಕದವ ತೊರೈ’ (2017) ಸೇರಿದಂತೆ ಹಲವು ಚಿತ್ರಗಳು ಸೂರಿ ಅವರ ಕಾಮಿಡಿ ನಟನಾಗಿ ಜನಪ್ರಿಯತೆಯನ್ನು ಹೆಚ್ಚಿಸಿದವು. ಸುಮಾರು ಎರಡು ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಸೂರಿ, ಬಹುತೇಕ ಚಿತ್ರಗಳಲ್ಲಿ ನಾಯಕನ ಪಕ್ಕದ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದರು.
ಆದರೆ 2023ರಲ್ಲಿ ಅವರ ವೃತ್ತಿಜೀವನದ ದಿಕ್ಕೇ ಬದಲಾಯಿತು. ನಿರ್ದೇಶಕ ವೆಟ್ರಿಮಾರನ್ ಅವರ ‘ವಿಡುತಲೈ ಪಾರ್ಟ್ 1’ ಚಿತ್ರದಲ್ಲಿ ಸೂರಿ ಮೊದಲ ಬಾರಿಗೆ ಪ್ರಮುಖ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡರು. ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿನ ಅವರ ಅಭಿನಯ ಪ್ರೇಕ್ಷಕರು ಹಾಗೂ ವಿಮರ್ಶಕರ ಗಮನ ಸೆಳೆಯಿತು. ಹಾಸ್ಯ ನಟನ ಇಮೇಜ್ ನಿಂದ ಹೊರಬಂದು ಗಂಭೀರ ಪಾತ್ರವನ್ನು ನಿರ್ವಹಿಸುವ ಸಾಮರ್ಥ್ಯವನ್ನೂ ಅವರು ಪ್ರದರ್ಶಿಸಿದರು.
ಇದಾದ ಬಳಿಕ ‘ಗರುಡನ್’ (2024), ‘ವಿಡುತಲೈ ಪಾರ್ಟ್ 2’ (2024) ಹಾಗೂ ‘ಮಾಮನ್’ (2025) ಚಿತ್ರಗಳ ಮೂಲಕ ನಾಯಕ ನಟನಾಗಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು.
ಇದೀಗ 2026ರಲ್ಲಿ ಬಿಡುಗಡೆಯಾದ ‘ಮಂಡಾಡಿ’ ಸೂರಿ ಅವರನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಮತಿಮಾರನ್ ಪುಗಳೇಂಧಿ ನಿರ್ದೇಶನದ ಈ ಸ್ಪೋರ್ಟ್ಸ್ ಆ್ಯಕ್ಷನ್-ಡ್ರಾಮಾ ಮೂಲಕ ಸೂರಿ ಬಾಕ್ಸ್ ಆಫೀಸ್ನಲ್ಲೂ ದೊಡ್ಡ ಮಟ್ಟದ ಯಶಸ್ಸು ದಾಖಲಿಸಿದ್ದಾರೆ. ಬಿಡುಗಡೆಯಾದ 11ನೇ ದಿನಕ್ಕೆ ಚಿತ್ರ ವಿಶ್ವದಾದ್ಯಂತ 100 ಕೋಟಿ ರೂ. ಗಳಿಕೆ ದಾಖಲಿಸಿದೆ ಎಂದು ವರದಿಯಾಗಿದೆ. ಚಿತ್ರವು ಭಾರತದಲ್ಲಿ 75.55 ಕೋಟಿ ರೂ. ಗಳಿಸಿದ್ದು, ತಮಿಳು ಆವೃತ್ತಿಯಿಂದ 63.15 ಕೋಟಿ ರೂ. ಹಾಗೂ ತೆಲುಗು ಆವೃತ್ತಿಯಿಂದ 12.40 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.
ಸೂರಿ ಅವರ ಸಿನಿಪಯಣವು ಸಣ್ಣಪುಟ್ಟ ಹಿನ್ನೆಲೆ ಪಾತ್ರಗಳಿಂದ ಆರಂಭಿಸಿ, ಸುಮಾರು ಎರಡು ದಶಕಗಳ ಕಾಲ ಹಾಸ್ಯ ನಟನಾಗಿ ಗುರುತಿಸಿಕೊಂಡು, ನಂತರ ಗಂಭೀರ ನಾಯಕ ಪಾತ್ರಗಳತ್ತ ತಿರುಗಿ, ಇದೀಗ 100 ಕೋಟಿ ರೂ. ಗಳಿಕೆಯ ಚಿತ್ರದ ನಾಯಕನಾಗಿರುವ ಅವರ ಪಯಣ ತಮಿಳು ಚಿತ್ರರಂಗದ ಗಮನಾರ್ಹ ಬೆಳವಣಿಗೆಗಳಲ್ಲಿ ಒಂದಾಗಿದೆ. ಈ ಬೆಳವಣಿಗೆಯನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡುತ್ತಿದ್ದಾರೆ.






