ಜಾರ್ಖಂಡ್ನಲ್ಲಿ ಫಾರಂ 7 ಮತ್ತು ಮತದಾರರ ಹೆಸರು ಡಿಲೀಟ್ ಪ್ರಕರಣ: ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಇರುವ ಕಾನೂನು ನಿಯಮಗಳೇನು?

ಸಾಂದರ್ಭಿಕ ಚಿತ್ರ (PTI)
ಜಾರ್ಖಂಡ್ನ ಗೋಡ್ಡಾ ಜಿಲ್ಲೆಯ ಕನಿಷ್ಠ ನಾಲ್ಕು ಮತಗಟ್ಟೆಗಳಲ್ಲಿ ಹಲವಾರು ಮತದಾರರ ಹೆಸರುಗಳನ್ನು ತೆಗೆದುಹಾಕಲು ಕೋರಿ ಬಿಜೆಪಿ ಕಾರ್ಯಕರ್ತರು 'ಫಾರಂ 7' ಸಲ್ಲಿಸಿದ್ದಾರೆ ಎಂದು ಮತಗಟ್ಟೆ ಮಟ್ಟದ ಅಧಿಕಾರಿಗಳು (BLO)ಹೇಳಿದ್ದಾರೆ. ಈ ಅರ್ಜಿಗಳು ನಿಗದಿತ ಮಾದರಿಯಲ್ಲಿ ಇಲ್ಲದ ಕಾರಣ, ಬ್ಲಾಕ್ ಅಭಿವೃದ್ಧಿ ಅಧಿಕಾರಿ (BDO) ಶ್ರೀಮಾನ್ ಮರಾಂಡಿ ಅವರ ಸೂಚನೆಯಂತೆ ಅವುಗಳಲ್ಲಿ ಹೆಚ್ಚಿನವುಗಳನ್ನು ತಿರಸ್ಕರಿಸಲಾಗಿದೆ.
ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಇರುವ ಕಾನೂನು ನಿಯಮಗಳೇನು?
1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 22ರ ಪ್ರಕಾರ, ಮತದಾರರ ಪಟ್ಟಿಯಲ್ಲಿರುವ ತಿದ್ದುಪಡಿ ಅಥವಾ ಹೆಸರು ತೆಗೆದುಹಾಕುವ ಅಧಿಕಾರ ಚುನಾವಣಾ ನೋಂದಣಿ ಅಧಿಕಾರಿಗಳಿಗೆ (EROs) ಇದೆ. ಸಾರ್ವಜನಿಕರ ಅರ್ಜಿಗಳ ಆಧಾರದ ಮೇಲೆ ಅಥವಾ ಸ್ವತಃ ಅಧಿಕಾರಿಗಳೇ ಪರಿಶೀಲಿಸಿ ಈ ಕ್ರಮ ಕೈಗೊಳ್ಳಬಹುದು. ಆದರೆ ಹೆಸರು ತೆಗೆಯುವ ಮುನ್ನ ಅಧಿಕಾರಿಗಳು ಸೂಕ್ತ ವಿಚಾರಣೆ ನಡೆಸಬೇಕು ಮತ್ತು ಸಂಬಂಧಪಟ್ಟ ಮತದಾರರಿಗೆ ಸ್ಪಷ್ಟನೆ ನೀಡಲು ಕಾಲಾವಕಾಶ ನೀಡಿ, ನಂತರವೇ ಅಂತಿಮ ಆದೇಶ ಹೊರಡಿಸಬೇಕು.
ಯಾರಾದರೂ ಮೃತಪಟ್ಟಿದ್ದರೆ, ಆ ಕ್ಷೇತ್ರದಲ್ಲಿ ವಾಸವಾಗಿಲ್ಲದಿದ್ದರೆ ಅಥವಾ ಮತದಾನಕ್ಕೆ ಅನರ್ಹರಾಗಿದ್ದರೆ (ಭಾರತದ ಪೌರತ್ವ ಇಲ್ಲದಿರುವುದು ಅಥವಾ 18 ವರ್ಷಕ್ಕಿಂತ ಕಡಿಮೆ ವಯಸ್ಸಾಗಿರುವುದು) ಮಾತ್ರ ಇಆರ್ಒ ಅವರು ಅಂತಹವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬಹುದು.
ಮತದಾರರ ಹೆಸರು ತೆಗೆದುಹಾಕಲು ಅರ್ಜಿ ಸಲ್ಲಿಸುವುದು ಹೇಗೆ?
1960ರ ಮತದಾರರ ನೋಂದಣಿ ನಿಯಮಗಳ ಪ್ರಕಾರ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಯಾರಾದರೂ ಸೇರ್ಪಡೆಗೊಳಿಸುವುದಕ್ಕೆ ಆಕ್ಷೇಪಣೆ ಎತ್ತಲು 'ಫಾರಂ 7' ಅನ್ನು ಬಳಸಬೇಕು. ಮತದಾರರು ತಮ್ಮದೇ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಅಥವಾ ತಮ್ಮ ಕ್ಷೇತ್ರದ ಇತರ ಮತದಾರರ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಈ ಫಾರಂ 7 ಅನ್ನು ಬಳಸಬಹುದು.
ಈ ಅರ್ಜಿಯನ್ನು ಚುನಾವಣಾ ಆಯೋಗದ 'ವೋಟರ್ ಪೋರ್ಟಲ್' (voters.eci.gov.in) ಮೂಲಕ ಡೌನ್ಲೋಡ್ ಮಾಡಿ ಸಂಬಂಧಪಟ್ಟ ಬಿಎಲ್ಒಗೆ ನೀಡಬಹುದು ಅಥವಾ ಆನ್ಲೈನ್ನಲ್ಲಿ ಸಲ್ಲಿಸಬಹುದು. ಆನ್ಲೈನ್ ಅರ್ಜಿಗೆ 'ಇಸಿಐನೆಟ್' (ECINet) ಆ್ಯಪ್ ಕೂಡ ಬಳಸಬಹುದು.
ಆನ್ಲೈನ್ನಲ್ಲಿ ಫಾರಂ 7 ಸಲ್ಲಿಸುವುದು ಹೇಗೆ?
ಆನ್ಲೈನ್ನಲ್ಲಿ ಫಾರಂ 7 ಸಲ್ಲಿಸಲು, ಮೊದಲು ವೋಟರ್ ಪೋರ್ಟಲ್ ಅಥವಾ ಆ್ಯಪ್ನಲ್ಲಿ ಖಾತೆ ತೆರೆದು, ತಮ್ಮ ಮೊಬೈಲ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿ (EPIC) ಸಂಖ್ಯೆಗೆ ಲಿಂಕ್ ಮಾಡಬೇಕು. ಒಂದೇ ಕ್ಷೇತ್ರದ ಮತದಾರರು ಮಾತ್ರ ಅದೇ ಕ್ಷೇತ್ರದ ಮತ್ತೊಬ್ಬರ ಹೆಸರು ತೆಗೆದುಹಾಕಲು ಆನ್ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.
ಫಾರಂ 7ರಲ್ಲಿ ಅರ್ಜಿ ಸಲ್ಲಿಸುವವರು ತಮ್ಮ ಹೆಸರು, ಇಪಿಐಸಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಜೊತೆಗೆ ಯಾರ ವಿರುದ್ಧ ಆಕ್ಷೇಪಣೆ ಇದೆಯೋ ಅವರ ಹೆಸರು, ಇಪಿಐಸಿ ಸಂಖ್ಯೆ (ಲಭ್ಯವಿದ್ದರೆ) ಮತ್ತು ವಿಳಾಸವನ್ನು ನೀಡಬೇಕಾಗುತ್ತದೆ.
ಆಕ್ಷೇಪಣೆ ಸಲ್ಲಿಸಲು ನೀಡಲಾದ 5 ಕಾರಣಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು:
- ವ್ಯಕ್ತಿ ಮೃತಪಟ್ಟಿರುವುದು
- ನಿಗದಿತ ವಯಸ್ಸಾಗಿಲ್ಲದಿರುವುದು
- ಕ್ಷೇತ್ರದಲ್ಲಿ ಇಲ್ಲದಿರುವುದು ಅಥವಾ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವುದು
- ಈಗಾಗಲೇ ಬೇರೆಡೆಯೂ ನೋಂದಣಿಯಾಗಿರುವುದು
- ಭಾರತದ ಪೌರನಲ್ಲದಿರುವುದು
ಈ ಅರ್ಜಿ ಜೊತೆಗೆ ಯಾವುದೇ ಸಾಕ್ಷ್ಯಾಧಾರಗಳನ್ನು ಲಗತ್ತಿಸುವ ಅಗತ್ಯವಿಲ್ಲ. ಆದರೆ, "ನಾನು ನೀಡುತ್ತಿರುವ ಮಾಹಿತಿ ನನಗೆ ತಿಳಿದ ಮಟ್ಟಿಗೆ ಸಂಪೂರ್ಣ ಸತ್ಯ. ಸುಳ್ಳು ಘೋಷಣೆ ಅಥವಾ ಮಾಹಿತಿ ನೀಡುವುದು ಶಿಕ್ಷಾರ್ಹ ಅಪರಾಧ ಎಂಬುದು ನನಗೆ ತಿಳಿದಿದೆ" ಎಂಬ ಸ್ವಯಂ ಘೋಷಣೆಗೆ ಅರ್ಜಿದಾರರು ಸಹಿ ಹಾಕಬೇಕಾಗುತ್ತದೆ.
ಫಾರಂ ಭರ್ತಿ ಮಾಡಿದ ನಂತರ, ಅದನ್ನು ಪ್ರಿಂಟ್ ತೆಗೆದುಕೊಂಡು ಬಿಎಲ್ಒಗೆ ನೀಡಬಹುದು ಅಥವಾ ನೇರವಾಗಿ ಆನ್ಲೈನ್ನಲ್ಲೇ ಸಲ್ಲಿಸಬಹುದು.
ಅರ್ಜಿಗಳ ಪರಿಶೀಲನೆ ಹೇಗೆ ನಡೆಯುತ್ತದೆ?:
2018ರಿಂದ ದೇಶದ್ಯಂತ ಚುನಾವಣಾ ನೋಂದಣಿ ಅಧಿಕಾರಿಗಳಿಗಾಗಿ 'ಇಆರ್ಒನೆಟ್' (ERONet) ಎಂಬ ಕೇಂದ್ರೀಕೃತ ವ್ಯವಸ್ಥೆಯನ್ನು ಚುನಾವಣಾ ಆಯೋಗ ಜಾರಿಗೆ ತಂದಿದೆ. ಇದಕ್ಕೂ ಮೊದಲು ಆಯಾ ರಾಜ್ಯಗಳು ಅರ್ಜಿ ವಿಲೇವಾರಿಗೆ ಪ್ರತ್ಯೇಕ ಆ್ಯಪ್ಗಳನ್ನು ಬಳಸುತ್ತಿದ್ದವು.
ಇಆರ್ಒನೆಟ್ ಬಂದ ನಂತರ ಪರಿಶೀಲನೆ ಪ್ರಕ್ರಿಯೆಯಲ್ಲಿ ಏಕರೂಪತೆ ಬಂದಿದೆ. ಪ್ರತಿಯೊಂದು ಅರ್ಜಿಯನ್ನು ಕೇಂದ್ರ ಮಟ್ಟದಲ್ಲಿ ವಿಲೇವಾರಿ ಮಾಡದೆ, ಸಂಬಂಧಪಟ್ಟ ಇಆರ್ಒ ಹಂತದಲ್ಲೇ ಪರಿಶೀಲಿಸಲಾಗುತ್ತದೆ.
2025ರಲ್ಲಿ ಚುನಾವಣಾ ಆಯೋಗವು ಈ ಪೋರ್ಟಲ್ನ ಹೊಸ ಆವೃತ್ತಿಯನ್ನು ತಂದಿದ್ದು, ಮತದಾರರು ಮತ್ತು ಅಧಿಕಾರಿಗಳಿಗಾಗಿ ಇದ್ದ ಸುಮಾರು 40 ಆ್ಯಪ್ ಹಾಗೂ ವೆಬ್ಸೈಟ್ಗಳನ್ನು ಒಂದೇ ಕಡೆ ಜೋಡಿಸಿದೆ. ಈಗ ಮತದಾರರಾಗಲಿ ಅಥವಾ ಅಧಿಕಾರಿಗಳಾಗಲಿ ಲಾಗಿನ್ ಆದಾಗ ಅವರೆಲ್ಲರೂ ಹೊಸ 'ಇಸಿಐನೆಟ್' (ECINet) ಪೋರ್ಟಲ್ಗೆ ಮರುನಿರ್ದೇಶನಗೊಳ್ಳುತ್ತಾರೆ.
ಅರ್ಜಿಗಳನ್ನು ಆಯಾ ಕ್ಷೇತ್ರದ ಇಆರ್ಒ ಮತ್ತು ಸಹಾಯಕ ಇಆರ್ಒಗಳು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಅರ್ಜಿ ಬಂದ ನಂತರ, ಯಾರ ವಿರುದ್ಧ ಆಕ್ಷೇಪಣೆ ಬಂದಿದೆಯೋ ಆ ಮತದಾರರಿಗೆ ಇಆರ್ಒ ನೋಟಿಸ್ ನೀಡಬೇಕು. ಉತ್ತರಿಸಲು 7 ದಿನಗಳ ಕಾಲಾವಕಾಶ ನೀಡಿ, ವಿಚಾರಣೆ ನಡೆಸಿ ಆದೇಶ ಹೊರಡಿಸಬೇಕು. ಇದರ ಜೊತೆಗೆ ಸ್ಥಳಕ್ಕೆ ತೆರಳಿ ಸತ್ಯಾಸತ್ಯತೆ ಪರಿಶೀಲಿಸುವ ಹೊಣೆ ಬಿಎಲ್ಒಗಳ ಮೇಲಿರುತ್ತದೆ.
ಆನ್ಲೈನ್ ವ್ಯವಸ್ಥೆಯಲ್ಲಿ ಲೋಪಗಳಿವೆಯೇ?
ಹೆಸರು ತೆಗೆದುಹಾಕಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಯಾವುದೇ ಸಾಕ್ಷ್ಯಾಧಾರಗಳನ್ನು ಲಗತ್ತಿಸುವುದು ಕಡ್ಡಾಯವಲ್ಲ. ಅರ್ಜಿ ಸಲ್ಲಿಸುವವರ ಇಪಿಐಸಿ ಮತ್ತು ಮೊಬೈಲ್ ಸಂಖ್ಯೆ ನಿಜವಾಗಿಯೂ ಅವರದ್ದೇ ಹೌದೇ ಎಂಬುದನ್ನು ತಕ್ಷಣವೇ ಪರಿಶೀಲಿಸುವ ವ್ಯವಸ್ಥೆಯೂ ಇಲ್ಲ.
ಜನಪ್ರತಿನಿಧಿ ಕಾಯ್ದೆ ಮತ್ತು ಮತದಾರರ ನೋಂದಣಿ ನಿಯಮಗಳಲ್ಲೇ ಸೂಕ್ತ ಭದ್ರತಾ ಕ್ರಮಗಳಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯಾದರೂ, ಇಆರ್ಒ ಮತ್ತು ಬಿಎಲ್ಒಗಳು ಸ್ಥಳದಲ್ಲೇ ಕೂಲಂಕುಷ ತನಿಖೆ ನಡೆಸಿದ ನಂತರವಷ್ಟೇ ಹೆಸರು ತೆಗೆದುಹಾಕಲು ಸಾಧ್ಯ.
ಕೃಪೆ: indianexpress.com






