ಮಹಿಳಾ ಸ್ವೀಕಾರ ಕೇಂದ್ರದ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆಗಳಿಗೆ ಬಳಕೆ : ರಾಜ್ಯ ಸರ್ವ ಶಕ್ತಿ ಸಮಿತಿಯಿಂದ ಲೋಕಾಯುಕ್ತಕ್ಕೆ ದೂರು

ಬೆಂಗಳೂರು : ಬೆಂಗಳೂರು ನಗರದಲ್ಲಿರುವ ಮಹಿಳಾ ಸ್ವೀಕಾರ ಕೇಂದ್ರದ 1,776 ಅನಾಥ, ನಿರ್ಗತಿಕ ಮಹಿಳೆಯರು, ಹೆಣ್ಣು ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿದೆ. ಹಲವರಿಗೆ ಗರ್ಭಪಾತ ಮಾಡಿಸಿ ಅನೈತಿಕ ಚಟುವಟಿಕೆಗಳಿಗೆ ಮಾರಾಟ ಮಾಡಲಾಗಿದೆ. ಕೆಲವರನ್ನು ಸಾಯಿಸಿ, ವಿದ್ಯುತ್ ಚಿತಾಗಾರದಲ್ಲಿ ಸುಟ್ಟು ಬೂದಿ ಮಾಡಲಾಗಿದೆ ಎಂಬ ಆಘಾತಕಾರಿ, ಕಳವಳಕಾರಿ ಘಟನೆಗಳನ್ನು ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಲೋಕಾಯುಕ್ತರ ಗಮನಕ್ಕೆ ತಂದಿದೆ.
ಅಲ್ಲದೆ ಈ ಸ್ವೀಕಾರ ಕೇಂದ್ರದಲ್ಲಿನ ಹಲವು ಹೆಣ್ಣು ಮಕ್ಕಳನ್ನು ಮನೆ ಕೆಲಸದ ನೆಪದಲ್ಲಿ ಐಎಎಸ್ ಅಧಿಕಾರಿಗಳ ಮನೆಗೂ ಕಳಿಸಿರುವುದು ದಾಖಲೆಗಳಲ್ಲಿ ರುಜುವಾತಾಗಿದೆ ಎಂದು ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಗುರುತರವಾಗಿ ಆಪಾದಿಸಿದೆ. ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿರುವ ಅಧಿಕಾರಿ, ಸಿಬ್ಬಂದಿಯ ಪಟ್ಟಿಯನ್ನೂ ಸಹ ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಲೋಕಾಯುಕ್ತರಿಗೆ ಒದಗಿಸಿದೆ.
ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನ ಪ್ರತಿಯು ‘the-file.in’ ಲಭ್ಯವಾಗಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಒಟ್ಟು 33 ದಾಖಲೆಗಳನ್ನು ಲೋಕಾಯುಕ್ತರಿಗೆ ದೂರಿನಲ್ಲಿ ಒದಗಿಸಿದೆ. ಸ್ವೀಕಾರ ಕೇಂದ್ರದಿಂದ ಹಲವು ದಾಖಲೆಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೊರಡಿಸಿರುವ ಆದೇಶಗಳು, ನಿವಾಸಿ ನಾಪತ್ತೆ, ಗೃಹ ತನಿಖೆ, ಅಂತ್ಯಕ್ರಿಯೆ, ನಿವಾಸಿ ವರ್ಗಾವಣೆ ಸೇರಿದಂತೆ ಇನ್ನಿತರ ಆದೇಶಗಳ ಪ್ರತಿಗಳನ್ನೂ ಸಹ ದೂರಿನಲ್ಲಿ ಒದಗಿಸಿರುವುದು ಗೊತ್ತಾಗಿದೆ.
ಈ ದೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ಕೆಎಎಸ್ ಅಧಿಕಾರಿ ಮಹೇಶ್ ಬಾಬು ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ.
ಈ ದೂರನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತ ಸಂಸ್ಥೆಯು ಇದರ ವಿಚಾರಣೆಯನ್ನು 2026ರ ಸೆ.10ರಂದು ನಡೆಸಲಿದೆ.
ದೂರಿನಲ್ಲೇನಿದೆ?: 2000ರಿಂದ 2018ರವರೆಗೆ 1,776 ನಿವಾಸಿಗಳನ್ನು ದಾಖಲೆ ಮಾಡಿಕೊಂಡ ಹಾಗೆಯೇ ಅವರ ಕಡತಗಳಲ್ಲಿ ಬರೆದಿರುವಂತೆ ಸ್ವೀಕಾರ ಕೇಂದ್ರದಲ್ಲಿ ದಾಖಲಾಗಿರುವುದು ಸತ್ಯವಾಗಿದೆ. ವರ ವೈಯಕ್ತಿಕ ಕಡತಗಳು ಮತ್ತು ಅವರ ಚಲನವಲನದ ಜವಾಬ್ದಾರಿ ಹೊತ್ತಿದ್ದ ಸ್ವೀಕಾರ ಕೇಂದ್ರದ ಸಿಬ್ಬಂದಿ ಹೆಣ್ಣು ಮಕ್ಕಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅವರ ದಾಖಲೆಗಳನ್ನು ನಾಶ ಮಾಡಿರುವುದು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಕೋರಿದ್ದರೂ ಆ ಕಡತಗಳು ಇರುವುದಿಲ್ಲ ಎಂದು ಷರಾ ಬರೆದಿದ್ದಾರೆ ಎಂದು ಲೋಕಾಯುಕ್ತರ ಗಮನಕ್ಕೆ ತಂದಿರುವುದು ಗೊತ್ತಾಗಿದೆ.
ಸ್ವೀಕಾರ ಕೇಂದ್ರದಲ್ಲಿ ನಿವಾಸಿಗಳು ತಂದೆ ತಾಯಿ ಇಲ್ಲದೆ ಅವರಿಂದ ದೂರವಾಗಿ ಅವರು ಬೇರೆ ದಾರಿ ಇಲ್ಲದೇ ಪೊಲೀಸರಿಂದ ಹಾಗೂ ವೈಯಕ್ತಿಕವಾಗಿ ಸಹಾಯ ಪಡೆಯಲು ದಾಖಲಾಗಿದ್ದಾರೆ. ಇಂತಹ ಹೆಣ್ಣು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮನೆ ಕೆಲಸದ ನೆಪದಲ್ಲಿ ಐಎಎಸ್ ಅಧಿಕಾರಿಗಳ ಮನೆಗಳಿಗೆ ಕಳಿಸಿರುವುದು ದಾಖಲೆಗಳಲ್ಲಿ ರುಜುವಾತಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಐಎಎಸ್ ಅಧಿಕಾರಿಗಳ ಮನೆಗಳಿಗೆ ಹೋದ ನಿವಾಸಿಗಳು ಮತ್ತು ಸಂಸ್ಥೆಗೆ ವಾಪಸ್ ಬಂದಿರುವುದಕ್ಕೆ ಯಾವುದೇ ದಾಖಲೆಗಳು ಇರುವುದಿಲ್ಲ. ಹಾಗೆಯೇ ಅವರು ಕೆಲಸದ ಅವಧಿಯಲ್ಲಿ ದುಡಿದ ಸಂಬಳ ಸಹ ಅವರ ಅಕೌಂಟ್‌ಗೆ ಜಮಾ ಆಗಿಲ್ಲ. ಈ ನಿವಾಸಿಗಳಿಗೆ ಬ್ಯಾಂಕ್ ಖಾತೆ ತೆರೆದು ಬಿಡುಗಡೆ ಆಗುವಾಗ ಅವರು ದುಡಿದಿರುವ ಹಣವನ್ನು ಅವರಿಗೆ ನೀಡಬೇಕು. ಇದು ಇಲಾಖೆಯ ನಿಯಮ. ಆದರೆ ಇವರುಗಳು ಮನೆ ಕೆಲಸಕ್ಕೆ ನೇಮಿಸಿರುವುದು, ನಿವಾಸಿಗಳಿಗೆ ವೇಶ್ಯಾವಾಟಿಕೆ ಮಾಡಿಸಿ ಗರ್ಭಪಾತ ಮಾಡಿಸಿ ಸಾಯಿಸಿರುವುದು, ಕೊನೆಗೆ ವಿದ್ಯುತ್ ಚಿತಾಗಾರಗಳಿಗೆ ಹಾಕಿರುವುದು ಮತ್ತು ದಾಖಲೆಗಳನ್ನು ನಾಶ ಮಾಡಿರುವುದಾಗಿ ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಗುರುತರವಾಗಿ ಆರೋಪಿಸಿರುವುದು ದೂರಿನಿಂದ ಗೊತ್ತಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ 2018ರಿಂದಲೂ ದಾಖಲೆಗಳನ್ನು ಪಡೆಯಲಾಗಿದೆ. ಅವುಗಳನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮತ್ತು ಕರ್ನಾಟಕ ಸರಕಾರಕ್ಕೆ ದೂರು ನೀಡಲಾಗಿದೆ. ಆದರೆ ಇದುವರೆಗೂ ಯಾವುದೇ ಅಧಿಕಾರಿ, ಸಿಬ್ಬಂದಿಯನ್ನು ತನಿಖೆ ಮಾಡಿಲ್ಲ. ಶಿಕ್ಷೆಗೂ ಒಳಪಡಿಸಿಲ್ಲ ಎಂದು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವಾಲಯದ ಸಿಬ್ಬಂದಿ, ನಿರ್ದೇಶನಾಲಯದ ಸಿಬ್ಬಂದಿ, ಅಧಿಕಾರಿಗಳು, ಬೆಂಗಳೂರು ನಗರದ ಉಪ ನಿರ್ದೇಶಕರ ಕಚೇರಿ, ಅಧಿಕಾರಿ, ಸಿಬ್ಬಂದಿ, ಇಂತಹ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ ಮಾಹಿತಿ ಕೋರಿದವರಿಗೆ ಯಾವುದೇ ಹಿಂಬರಹ ನೀಡುತ್ತಿಲ್ಲ. ಸಚಿವಾಲಯದ ಸಿಬ್ಬಂದಿ ಕಡತವನ್ನು ಮುಕ್ತಾಯಗೊಳಿಸಿದ್ದೇವೆ ಎಂದು ದಾಖಲೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವುದು ಗೊತ್ತಾಗಿದೆ.
ಈ ಸಂಬಂಧ ಇಲಾಖೆಯ ಬೆಂಗಳೂರು ನೋಡಲ್ ಅಧಿಕಾರಿಯನ್ನು ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಸಂಪರ್ಕಿಸಿತ್ತು. ಈ ಪ್ರಕರಣಗಳ ಕುರಿತು ಗಮನಸೆಳೆದಿತ್ತು.
ಈ ಕುರಿತು ಇಲಾಖೆಯ ಹಿಂದಿನ ನಿರ್ದೇಶಕ ಡಾ. ಮಹೇಶ್ ಬಾಬು ಅವರು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೂರುದಾರರ ಅರ್ಜಿಯ ಬಗ್ಗೆ ಸರಕಾರದ ಕಾನೂನು ಇಲಾಖೆಯಿಂದ ಅಭಿಪ್ರಾಯವನ್ನು ಪಡೆದು ಕಾನೂನು ಇಲಾಖೆಯ ಅಭಿಪ್ರಾಯದಂತೆ ನಿಯಮಾನುಸಾರ ಸೂಕ್ತ ಹಿಂಬರಹ ನೀಡಲಾಗಿದೆ ಎಂದಷ್ಟೇ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಸೇರಿದಂತೆ ಹಲವರ ಹೆಸರನ್ನೂ ದೂರಿನಲ್ಲಿ ಹೆಸರಿಸಿದೆ. ಇಲಾಖೆಯ ನಿರ್ದೇಶಕರಾಗಿದ್ದ ಅರುಂಧತಿ ಚಂದ್ರಶೇಖರ್, ಮಹೇಶ್ ಬಾಬು, ಉಪ ನಿರ್ದೇಶಕರಾಗಿದ್ದ ಸುಮಂಗಲ ಮಾಲಾಪುರ್, ಜಂಟಿ ನಿರ್ದೇಶಕರಾದ ಪುಷ್ಪ ರಾಯರ್, ಗೀತಾ ಲಕ್ಷ್ಮಿ, ರಾಜಣ್ಣ, ಕಲ್ಪನಾ, ರೇವತಿ, ಅಧೀನ ಕಾರ್ಯದರ್ಶಿ ರಶ್ಮಿ ಎಂ. ಎಸ್., ವನಿತಾ, ಜಯಶ್ರೀ, ಮೋಹನ್ ಕುಮಾರ್, ಸರ್ವಮಂಗಳ, ಪ್ರಸನ್ನ ಪಾರ್ವತಿ ಸೇರಿದಂತೆ ಹಲವರ ಹೆಸರುಗಳನ್ನು ದೂರಿನಲ್ಲಿ ಹೆಸರಿಸಿರುವುದು ಗೊತ್ತಾಗಿದೆ.






