ದಿನಕ್ಕೆ 3,400 ಮೃತ್ಯು | ಭಾರತದಲ್ಲಿ ತೀವ್ರ ಶಾಖದ ದಿನಗಳು ಊಹಿಸಿದಕ್ಕಿಂತಲೂ ಗಂಭೀರ; ಅಧ್ಯಯನ ವರದಿ ಹೇಳುತ್ತಿರುವುದೇನು?

ಸಾಂದರ್ಭಿಕ ಚಿತ್ರ
2026ರ ಪ್ರಸ್ತುತ ಬೇಸಿಗೆಯಲ್ಲಿ ಭಾರತದ ಹಲವು ಭಾಗಗಳಲ್ಲಿ ತಾಪಮಾನವು ಈಗಾಗಲೇ 45 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಪ್ರತಿ ವರ್ಷವೂ ತೀವ್ರಗೊಳ್ಳುತ್ತಿರುವ ಮತ್ತು ಸಾಧಾರಣ ಎಂಬಂತೆ ಭಾಸವಾಗುತ್ತಿರುವ ಈ ಬಿಸಿಲಿನ ತಾಪದ ಗಂಭೀರ ಸಮಸ್ಯೆಯತ್ತ ಈ ಬೆಳವಣಿಗೆಯು ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ.
ತೀವ್ರವಾಗಿ ಹೆಚ್ಚುತ್ತಿರುವ ಈ ಬಿಸಿಲು ಏಕೆ ಇಷ್ಟೊಂದು ಆತಂಕಕಾರಿ ವಿಷಯ ಎಂಬುದನ್ನು ಹೊಸ ಅಧ್ಯಯನವೊಂದು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಅತಿಯಾದ ತಾಪಮಾನವು ಯಾವ ಮಟ್ಟಕ್ಕೆ ಜೀವಗಳನ್ನು ಬಲಿಪಡೆಯಬಹುದು ಎಂಬ ಕಳವಳಕಾರಿ ಚಿತ್ರಣವನ್ನು ಈ ವರದಿ ಕಟ್ಟಿಕೊಟ್ಟಿದೆ. ಸಂಶೋಧಕರ ತಂಡವು ಭಾರತದ 10 ಪ್ರಮುಖ ನಗರಗಳ ಹಳೆಯ ಡೇಟಾವನ್ನು ಆಧರಿಸಿ, ಅದನ್ನು ದೇಶದಾದ್ಯಂತದ ಎಲ್ಲಾ ಜಿಲ್ಲೆಗಳಿಗೆ ಅನ್ವಯಿಸಿ ಈ ಮಹತ್ವದ ಅಧ್ಯಯನ ನಡೆಸಿದೆ.
ಈ ಸಂಶೋಧನೆಯ ಪ್ರಕಾರ, ದೇಶದಾದ್ಯಂತ ಕೇವಲ ಒಂದು ದಿನ ತೀವ್ರ ಸ್ವರೂಪದ ಬಿಸಿಲು ಕಾಣಿಸಿಕೊಂಡರೆ, ಅದರಿಂದ ಸಾಧಾರಣ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಸುಮಾರು 3,400 ಮಂದಿ ಸಾವಿಗೀಡಾಗುವ ಸಾಧ್ಯತೆಯಿದೆ. ಅದೇ ರೀತಿ, ಸತತ ಐದು ದಿನಗಳ ಕಾಲ ಬಿಸಿಗಾಳಿ ಮುಂದುವರಿದರೆ ಈ ಸಾವುಗಳ ಸಂಖ್ಯೆ ಬರೋಬ್ಬರಿ 30,000 ತಲುಪಬಹುದು ಎಂದು ಅಂದಾಜಿಸಲಾಗಿದೆ.
2026ರಲ್ಲಿ ಇದುವರೆಗೆ ದೇಶ ಎದುರಿಸಿರುವ ಬಿಸಿಲಿನ ತೀವ್ರತೆಯ ಹಿನ್ನೆಲೆಯಲ್ಲಿ ಈ ಅಂಕಿ-ಅಂಶಗಳನ್ನು ಮತ್ತೊಮ್ಮೆ ಗಮನಿಸಿದರೆ, ಈ ಆಘಾತಕಾರಿ ಸಾವುಗಳ ಲೆಕ್ಕಾಚಾರ ಎಷ್ಟು ವೇಗವಾಗಿ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಭಾರತದಲ್ಲಿ ಶಾಖದ ಅಲೆಗೆ ಸಂಬಂಧಿಸಿದ ಮರಣಗಳ ಬಗ್ಗೆ ಜಿಲ್ಲಾವಾರು ಮಾಹಿತಿ ಸುಲಭವಾಗಿ ಸಿಗದಿರುವುದನ್ನು ಪರಿಹರಿಸುವ ಉದ್ದೇಶದಿಂದ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಬರ್ಕ್ಲಿಯ ‘ಇಂಡಿಯಾ ಎನರ್ಜಿ ಅಂಡ್ ಕ್ಲೈಮೇಟ್ ಸೆಂಟರ್’ನ ಪಿಯೂಷ್ ನಾರಂಗ್ ಮತ್ತು ಅಶೋಕ್ ಗಾಡ್ಗೀಳ್ ಅವರು ಈ ಸಂಶೋಧನೆಯನ್ನು ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
►ದೇಶದಾದ್ಯಂತ ಒಂದೇ ದಿನದಲ್ಲಿ 3,400 ಹಾಗೂ ಐದು ದಿನಗಳಲ್ಲಿ 30,000 ಮೃತ್ಯು!
“ದೇಶದಾದ್ಯಂತ ಕೇವಲ ಒಂದು ದಿನ ತೀವ್ರ ಸ್ವರೂಪದ ಬಿಸಿಲು ಕಾಣಿಸಿಕೊಂಡರೆ ಅದರಿಂದ ಅಂದಾಜು 3,400 ಹೆಚ್ಚುವರಿ ಸಾವುಗಳು ಸಂಭವಿಸುತ್ತವೆ. ಅದೇ ಬಿಸಿಗಾಳಿಯು ಸತತ ಐದು ದಿನಗಳ ಕಾಲ ಮುಂದುವರಿದರೆ ಸಾವುಗಳ ಸಂಖ್ಯೆ ಸರಿಸುಮಾರು 30,000 ತಲುಪುತ್ತದೆ ಎಂದು ನಾವು ಅಂದಾಜಿಸಿದ್ದೇವೆ” ಎಂದು ಅಧ್ಯಯನ ವರದಿಯಲ್ಲಿ ಲೇಖಕರು ಹೇಳಿದ್ದಾರೆ.
ಉತ್ತರ, ಕೇಂದ್ರ ಮತ್ತು ಪೂರ್ವ ಭಾರತದಾದ್ಯಂತ ತೀವ್ರದಿಂದ ಅತ್ಯಂತ ತೀವ್ರ ಸ್ವರೂಪದ ಬಿಸಿಗಾಳಿಯ ಪರಿಸ್ಥಿತಿ ಮುಂದುವರಿದಿರುವ ಬೆನ್ನಲ್ಲೇ ಈ ಆಘಾತಕಾರಿ ಸಂಶೋಧನಾ ವರದಿ ಹೊರಬಿದ್ದಿದೆ.
ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹರಿಯಾಣದ ಹಲವು ಭಾಗಗಳಲ್ಲಿ ತಾಪಮಾನವು ನಿರಂತರವಾಗಿ 45 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಾಗಿದೆ.
►ಬಹು-ನಗರಗಳ ಅಧ್ಯಯನ ಮತ್ತು ಬಿಸಿಲಿನಿಂದಾದ ಮೃತ್ಯುಗಳು
ದೇಶದಾದ್ಯಂತ ಈ ತಾಪಮಾನದ ಪ್ರಭಾವ ಎಷ್ಟಿದೆ ಎಂದು ಅಂದಾಜಿಸಲು, ಸಂಶೋಧಕರು ಭಾರತದ 10 ಪ್ರಮುಖ ನಗರಗಳಲ್ಲಿ ಬಿಸಿಲಿನಿಂದ ಸಂಭವಿಸಿದ ಸಾವುಗಳ ಕುರಿತು ನಡೆದಿದ್ದ ಬಹು-ನಗರಗಳ ಅಧ್ಯಯನದ ವರದಿಗಳನ್ನು ಬಳಸಿಕೊಂಡಿದ್ದಾರೆ. ಆ ಡೇಟಾಗಳನ್ನು ದೇಶದಾದ್ಯಂತದ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸಿ ಈ ತೀರ್ಮಾನಕ್ಕೆ ಬರಲಾಗಿದೆ.
ಇಲ್ಲಿ ‘ಹೆಚ್ಚುವರಿ ಸಾವುಗಳು’ ಎಂದರೆ, ಹಿಂದಿನ ವರ್ಷಗಳ ಅಂಕಿ-ಅಂಶಗಳ ಆಧಾರದ ಮೇಲೆ ಸಾಮಾನ್ಯ ಪರಿಸ್ಥಿತಿಯಲ್ಲಿ ಸಂಭವಿಸಬಹುದಾದ ಸಾವುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವ ಸಾವು ಎಂದರ್ಥ.
‘ಫ್ರಾಂಟಿಯರ್ಸ್ ಇನ್ ಎನ್ವಿರಾನ್ಮೆಂಟಲ್ ಹೆಲ್ತ್’ ಎಂಬ ಜರ್ನಲ್ನಲ್ಲಿ ಪ್ರಕಟವಾಗಿರುವ ಈ ಅಧ್ಯಯನಕ್ಕಾಗಿ, ನಾಗರಿಕ ನೋಂದಣಿ ವ್ಯವಸ್ಥೆಯಿಂದ ಜಿಲ್ಲಾವಾರು ಮರಣಗಳ ಡೇಟಾವನ್ನು ಪಡೆಯಲಾಗಿದೆ. ಇದನ್ನು 2024ರ ಜನಸಂಖ್ಯೆಯ ಮುನ್ಸೂಚನೆಗಳೊಂದಿಗೆ ಸಂಯೋಜಿಸಿ, ಒಂದು ದಿನದ ಮತ್ತು ಐದು ದಿನಗಳ ಬಿಸಿಗಾಳಿಯ ಅವಧಿಯಲ್ಲಿ ಸಂಭವಿಸಬಹುದಾದ ಸಾವುಗಳನ್ನು ಲೆಕ್ಕಹಾಕಲಾಗಿದೆ.
►ಅತಿ ಹೆಚ್ಚು ಬಾಧಿತ ಪ್ರದೇಶಗಳು ಯಾವುವು?
ಈ ವಿಶ್ಲೇಷಣೆಯ ಪ್ರಕಾರ, ಸತತ ಐದು ದಿನಗಳ ಕಾಲ ಬಿಸಿಗಾಳಿ ಬೀಸಿದರೆ ಕೇವಲ ಉತ್ತರ ಪ್ರದೇಶವೊಂದರಲ್ಲೇ ಸುಮಾರು 8,100 ಹೆಚ್ಚುವರಿ ಸಾವುಗಳು ಸಂಭವಿಸಬಹುದು. ಅಹಮದಾಬಾದ್, ಜೈಪುರ ಮತ್ತು ಸೂರತ್ನಂತಹ ಜಿಲ್ಲೆಗಳಲ್ಲಿ ಕೇವಲ ಒಂದೇ ಒಂದು ಬಿಸಿಗಾಳಿಯ ಸಂದರ್ಭದಲ್ಲಿ ತಲಾ 250ಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.
ಸಂಶೋಧಕರು ಬಿಸಿಲಿನಿಂದಾಗುವ ಸಾವಿನ ಪ್ರಮಾಣ ಮತ್ತು ಆಯಾ ರಾಜ್ಯಗಳ ಆರ್ಥಿಕ ಸಾಮರ್ಥ್ಯದ ನಡುವೆ ಇರುವ ದೊಡ್ಡ ಕಂದಕವನ್ನೂ ಗುರುತಿಸಿದ್ದಾರೆ. ಭಾರತದ ಒಟ್ಟು ಜಿಡಿಪಿಗೆ ಕೇವಲ ಶೇಕಡಾ 29ರಷ್ಟು ಮಾತ್ರ ಕೊಡುಗೆ ನೀಡುವ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳು, ಐದು ದಿನಗಳ ಬಿಸಿಗಾಳಿಯ ಅವಧಿಯಲ್ಲಿ ದೇಶದಲ್ಲಿ ಸಂಭವಿಸಬಹುದಾದ ಒಟ್ಟು ಹೆಚ್ಚುವರಿ ಸಾವುಗಳಲ್ಲಿ ಬರೋಬ್ಬರಿ ಶೇಕಡಾ 66ರಷ್ಟು ಪಾಲನ್ನು ಹೊಂದಿವೆ.
ಭಾರತದ ಬಿಸಿಲು ನಿರೋಧಕ ಯೋಜನೆ ಮತ್ತು ಹವಾಮಾನ ವೈಪರೀತ್ಯ ಎದುರಿಸುವ ಸಿದ್ಧತೆಗಳ ಮೇಲೆ ಈ ಸಂಶೋಧನಾ ವರದಿ ಭಾರಿ ಪ್ರಭಾವ ಬೀರಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
“ಇಲ್ಲಿ ದಾಖಲಾಗಿರುವ ಜಿಡಿಪಿಯ 2.3 ಪಟ್ಟು ಅಸಮತೋಲನವು ಒಂದು ಪ್ರಮುಖ ಆಧಾರವನ್ನು ಒದಗಿಸುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಸಿಗುವ ಕೇಂದ್ರ ಸರ್ಕಾರದ ನೆರವು ಹಾಗೂ ಹೂಡಿಕೆಯನ್ನು ಕೇವಲ ಜನಸಂಖ್ಯೆ ಅಥವಾ ಆಡಳಿತಾತ್ಮಕ ಸಾಮರ್ಥ್ಯದ ಆಧಾರದ ಮೇಲೆ ಹಂಚಬಾರದು. ಬದಲಿಗೆ, ಆರ್ಥಿಕವಾಗಿ ಹಿಂದುಳಿದ ಹಾಗೂ ಬಿಸಿಲಿನ ಹೊಡೆತಕ್ಕೆ ಅತಿ ಹೆಚ್ಚು ತುತ್ತಾಗುತ್ತಿರುವ ಬಡ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಹಂಚಿಕೆ ಮಾಡಬೇಕು” ಎಂದು ವರದಿ ಹೇಳಿದೆ.
►ಅತ್ಯಂತ ಅಪಾಯದಲ್ಲಿರುವ 100 ಜಿಲ್ಲೆಗಳು
ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನ ವಾಸಿಸುವ, ದೇಶದ ಅತ್ಯಂತ ಹೆಚ್ಚು ಅಪಾಯದ ಅಂಚಿನಲ್ಲಿರುವ 100 ಜಿಲ್ಲೆಗಳು, ಐದು ದಿನಗಳ ಬಿಸಿಗಾಳಿಯ ಅವಧಿಯಲ್ಲಿ ಸಂಭವಿಸುವ ಒಟ್ಟು ಹೆಚ್ಚುವರಿ ಸಾವುಗಳಲ್ಲಿ ಶೇಕಡಾ 44ರಷ್ಟು ಪಾಲನ್ನು ಹೊಂದಿವೆ ಎಂದು ಅಧ್ಯಯನವು ಪತ್ತೆಹಚ್ಚಿದೆ.
ಅಲ್ಲದೆ, “ಬಿಸಿಗಾಳಿಯಿಂದ ಸಂಭವಿಸುವ ಸಾವಿನ ಅಪಾಯವು ಕೇವಲ ಜನಸಂಖ್ಯೆಯ ಗಾತ್ರದ ಮೇಲೆ ನಿರ್ಧಾರವಾಗುವುದಿಲ್ಲ. ಬದಲಿಗೆ, ಅದು ಕಡಿಮೆ ಆರ್ಥಿಕ ಆದಾಯ ಹೊಂದಿರುವ ರಾಜ್ಯಗಳಲ್ಲಿ ರಚನಾತ್ಮಕವಾಗಿ ಕೇಂದ್ರೀಕೃತವಾಗಿದೆ. ದುರದೃಷ್ಟವಶಾತ್, ಹವಾಮಾನ ವೈಪರೀತ್ಯ ಎದುರಿಸಲು ಹೂಡಿಕೆ ಮಾಡಲು ಈ ರಾಜ್ಯಗಳ ಬಳಿ ಆರ್ಥಿಕ ಸಾಮರ್ಥ್ಯವೇ ಇಲ್ಲ” ಎಂದು ಲೇಖಕರು ಕಳವಳ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಏಷ್ಯಾ, ಅದರಲ್ಲೂ ವಿಶೇಷವಾಗಿ ಭಾರತವು ಬಿಸಿಲಿನ ಸಾವುಗಳಿಗೆ ಅತಿ ಹೆಚ್ಚು ತುತ್ತಾಗುವ ಅಪಾಯ ಎದುರಿಸುತ್ತಿದೆ ಎಂಬುದಕ್ಕೆ ದಿನೇದಿನೇ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಶಾಸ್ತ್ರೀಯ ಮತ್ತು ಮಾದರಿ ಆಧಾರಿತ ಪುರಾವೆಗಳೇ ಸಾಕ್ಷಿ ಎಂದು ಸಂಶೋಧಕರು ಒಪ್ಪಿಕೊಂಡಿದ್ದಾರೆ.
►ಭಾರತದಲ್ಲಿ ಸುಡು ಬಿಸಿಲು
ಭಾರತಕ್ಕೆ ಹೀಗೆ ಸುಡುವ ಬೇಸಿಗೆ ಹೊಸದೇನಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಸಿಗಾಳಿಯ ಅವಧಿ ಮತ್ತು ಅದರ ತೀವ್ರತೆ ಗಣನೀಯವಾಗಿ ಹೆಚ್ಚುತ್ತಲೇ ಸಾಗಿದೆ.
ಕಳೆದ 2024ರಲ್ಲಿ ರಾಜಸ್ಥಾನದ ಕೆಲವು ಭಾಗಗಳಲ್ಲಿ ತಾಪಮಾನವು ಬರೋಬ್ಬರಿ 50.5 ಡಿಗ್ರಿ ಸೆಲ್ಸಿಯಸ್ ಮುಟ್ಟುವ ಮೂಲಕ ದಾಖಲೆ ಬರೆದಿತ್ತು. ಅದೇ ಸಮಯದಲ್ಲಿ ದಿಲ್ಲಿಯಂಥ ನಗರಗಳಲ್ಲಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಗರಿಷ್ಠ ತಾಪಮಾನದ ರಾತ್ರಿಗಳು ದಾಖಲಾಗಿದ್ದವು.
ಪ್ರಸ್ತುತ ಸಾಲಿನಲ್ಲಿ ದಿಲ್ಲಿ-ಎನ್ಸಿಆರ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ, ಕೇಂದ್ರ ಹಾಗೂ ಪಶ್ಚಿಮ ಭಾರತದ ರಾಜ್ಯಗಳು ಇಂತಹದ್ದೇ ಭೀಕರ ಬಿಸಿಲಿನ ಸುಳಿಗೆ ಸಿಲುಕಿವೆ. ಈ ಭಾಗಗಳಲ್ಲಿ ಈಗಾಗಲೇ ತೀವ್ರ ಬಿಸಿಗಾಳಿಯ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
ಇದರೊಂದಿಗೆ, ಈ ವರ್ಷ ಮತ್ತೊಂದು ಪ್ರಮುಖ ಸಮಸ್ಯೆಯೂ ಮುಂಚೂಣಿಗೆ ಬಂದಿದೆ. ಅದೇನೆಂದರೆ, ರಾತ್ರಿಯ ವೇಳೆಯೂ ತಾಪಮಾನ ತಗ್ಗದೆ ಇರುವುದು. ಇದು ಹಗಲಿಡೀ ಬೆಂದ ಜನರಿಗೆ ಕೊಂಚ ನಿರಾಳತೆ ಪಡೆಯುವ ಅವಕಾಶವನ್ನೂ ಕಸಿದುಕೊಳ್ಳುತ್ತಿದೆ.
ನಗರ ಪ್ರದೇಶಗಳಲ್ಲಿ ತಲೆಎತ್ತಿರುವ ಕಾಂಕ್ರೀಟ್ ಕಟ್ಟಡಗಳ ಕಾಡು, ಸೂರ್ಯ ಮುಳುಗಿದ ಮೇಲೂ ವಾತಾವರಣವನ್ನು ಬಿಸಿಯಾಗಿಯೇ ಇಡುತ್ತದೆ. ಹೀಗಾಗಿ, ಕೋಟ್ಯಂತರ ಜನರಿಗೆ ಬಿಸಿಲಿನಿಂದ ಕ್ಷಣಿಕ ಮುಕ್ತಿಯೂ ಸಿಗದಂತಾಗಿದೆ. ಇವೆಲ್ಲದರ ನಡುವೆ, ಈ ತಾಪಮಾನದ ಹೊಡೆತವು ಎಲ್ಲರ ಮೇಲೂ ಒಂದೇ ರೀತಿ ಬೀಳುತ್ತಿಲ್ಲ. ಇದು ಸಮಾಜದ ಒಂದು ವರ್ಗವನ್ನು ಅತ್ಯಂತ ಭೀಕರವಾಗಿ ಬಾಧಿಸುತ್ತಿದೆ.
ರೈತರು, ಹೊರಾಂಗಣದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಮತ್ತು ವೃದ್ಧರು ಬಿಸಿಲಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ, ಹೆಚ್ಚುತ್ತಿರುವ ತಾಪಮಾನದ ಭೀಕರತೆಗೆ ಇವರೇ ಅತಿ ಹೆಚ್ಚು ಬಲಿಯಾಗುತ್ತಿದ್ದಾರೆ.
►ಸಾವು-ನೋವುಗಳು
ಈ ಸಂಶೋಧನೆಯು ಬಹಿರಂಗಪಡಿಸಿರುವ ಅಂಕಿ-ಅಂಶಗಳು ಮತ್ತಷ್ಟು ಆತಂಕ ಮೂಡಿಸಲು ಮುಖ್ಯ ಕಾರಣವೆಂದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಭವಿಸುತ್ತಿರುವ ಸಾವುಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಗುತ್ತಿಲ್ಲದೇ ಇರುವುದು.
ಅಧಿಕೃತ ದಾಖಲೆಗಳಲ್ಲಿ ದಾಖಲಾಗುವ “ಬಿಸಿಲ ಬೇಗೆಯಿಂದಾಗುವ ಸಾವುಗಳ” ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಭೀಕರ ಬೇಸಿಗೆಯ ದಿನಗಳಲ್ಲೂ ಈ ಸಂಖ್ಯೆ ಕೇವಲ ಕೆಲವು ನೂರರ ಆಸುಪಾಸಿನಲ್ಲಷ್ಟೇ ಇರುತ್ತದೆ. ಏಕೆಂದರೆ, ಬಿಸಿಲಿನಿಂದಾಗಿ ಸಂಭವಿಸುವ ಬಹುತೇಕ ಸಾವುಗಳು ಆ ಹೆಸರಿನಲ್ಲಿ ನೋಂದಣಿಯಾಗುವುದೇ ಇಲ್ಲ.
ಬದಲಿಗೆ, ಇವು ಹೃದಯಾಘಾತ, ಉಸಿರಾಟದ ತೊಂದರೆ ಅಥವಾ ಇತರ ಆರೋಗ್ಯ ಸಮಸ್ಯೆಗಳ ಕಾರಣದಿಂದ ಸಂಭವಿಸಿದ ಸಾವುಗಳೆಂದು ದಾಖಲಾಗುತ್ತವೆ. ವಿಶೇಷವಾಗಿ ವೃದ್ಧರು ಮತ್ತು ಅನಾರೋಗ್ಯ ಪೀಡಿತರಲ್ಲಿ ಈ ತರಹದ ಸಾವುಗಳು ಹೆಚ್ಚು. ಬಿಸಿಲಿನಿಂದ ಸಂಭವಿಸುವ ಇಂತಹ ಮರಣಗಳ ಕುರಿತು ನಿಖರವಾದ ಮತ್ತು ಸಮಗ್ರವಾದ ಡೇಟಾ ಕೊರತೆಯಿರುವುದರಿಂದ, ಈ ಸಮಸ್ಯೆಯ ಭೀಕರತೆ ಮತ್ತು ವ್ಯಾಪ್ತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಆಡಳಿತ ವ್ಯವಸ್ಥೆಗೆ ಹಾಗೂ ಸಾರ್ವಜನಿಕರಿಗೆ ದೀರ್ಘಕಾಲದಿಂದ ಸಾಧ್ಯವಾಗುತ್ತಿಲ್ಲ.
ಪಿಯೂಷ್ ನಾರಂಗ್ ಮತ್ತು ಅಶೋಕ್ ಗಾಡ್ಗೀಳ್ ನಡೆಸಿರುವ ಈ ಹೊಸ ಅಧ್ಯಯನವು ಇದೇ ಕೊರತೆಯನ್ನು ನೀಗಿಸಲು ಯತ್ನಿಸಿದೆ.
ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಂಕಿ-ಅಂಶಗಳನ್ನು ಅತ್ಯಂತ ಜಾಗರೂಕತೆಯಿಂದ ಲೆಕ್ಕಹಾಕಲಾದ ಕನಿಷ್ಠ ಪ್ರಮಾಣದ ಅಂದಾಜು ಎಂದು ವಿವರಿಸಲಾಗಿದೆ. ಅಂದರೆ, ನೈಜ ಪರಿಸ್ಥಿತಿಯಲ್ಲಿ ಸಾವಿನ ಸಂಖ್ಯೆ ಇದಕ್ಕಿಂತಲೂ ಹೆಚ್ಚಿರುವ ಸಾಧ್ಯತೆಯಿದೆ. ಅದರಲ್ಲೂ ಮುಖ್ಯವಾಗಿ ಬಿಸಿಲು ಮತ್ತು ಸೂರ್ಯನ ತಾಪದಿಂದ ರಕ್ಷಿಸಿಕೊಳ್ಳಲು ಸೂಕ್ತ ಸೌಲಭ್ಯಗಳಿಲ್ಲದ ಗ್ರಾಮೀಣ ಭಾಗಗಳಲ್ಲಿ ಇದರ ತೀವ್ರತೆ ಇನ್ನೂ ಭೀಕರವಾಗಿರುತ್ತದೆ.
ಈ ವರದಿಯಲ್ಲಿ ಉತ್ತರ ಪ್ರದೇಶದ ಸ್ಥಿತಿ ಅತ್ಯಂತ ಕಳವಳಕಾರಿಯಾಗಿ ಬಿಂಬಿತವಾಗಿದ್ದು, ಅಲ್ಲಿ ಸತತ ಐದು ದಿನಗಳ ಬಿಸಿಗಾಳಿ ಮುಂದುವರಿದರೆ ಹೆಚ್ಚುವರಿಯಾಗಿ 8,000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗುವ ಸಾಧ್ಯತೆಯಿದೆ.
ಅಹಮದಾಬಾದ್, ಜೈಪುರ ಮತ್ತು ಸೂರತ್ನಂತಹ ನಗರಗಳ ಜಿಲ್ಲೆಗಳಲ್ಲಿ ಕೇವಲ ಒಂದು ದಿನದ ತೀವ್ರ ಬಿಸಿಲಿನ ತಾಪಕ್ಕೆ ತಲಾ 250ಕ್ಕೂ ಹೆಚ್ಚು ಜನರು ಬಲಿಯಾಗಬಹುದು ಎಂದು ಅಂದಾಜಿಸಲಾಗಿದೆ.
ಕಡಿಮೆ ಜಿಡಿಪಿ ಹೊಂದಿರುವ ಬಡ ರಾಜ್ಯಗಳು ತಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳ ಕಾರಣದಿಂದಾಗಿ ಈ ಬಿಸಿಲಿನ ಹೊಡೆತಕ್ಕೆ ಅತಿ ಹೆಚ್ಚು ನಲುಗುತ್ತಿವೆ ಎಂದು ಅಧ್ಯಯನ ತೋರಿಸುತ್ತಿದೆ. ಇದು ಪೀಡಿತ ಪ್ರದೇಶಗಳಿಗೆ ಸಿಗಬೇಕಾದ ನ್ಯಾಯಯುತ ನೆರವು ಹಾಗೂ ತುರ್ತು ಯೋಜನೆಯ ಅಗತ್ಯತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ.
ಭೂಮಿಯ ತಾಪಮಾನ ಏರುತ್ತಿದ್ದಂತೆ ಇಂತಹ ಬಿಸಿಗಾಳಿಯ ದಿನಗಳು ಇನ್ನು ಮುಂದೆ ಪದೇಪದೆ ಎದುರಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಈಗ ತಳಮಟ್ಟದ ಮುನ್ಸೂಚನಾ ವ್ಯವಸ್ಥೆ, ಬಿಸಿಲಿನ ದಿನಗಳಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆಯ ಸನ್ನದ್ಧತೆ ಹಾಗೂ ಅತಿ ಹೆಚ್ಚು ಅಪಾಯದಲ್ಲಿರುವ ಪ್ರದೇಶಗಳಿಗೆ ನಿಖರವಾದ ನೆರವು ತಲುಪಿಸುವ ತುರ್ತು ಅಗತ್ಯವಿದೆ.
ತೀವ್ರ ಸ್ವರೂಪದ ಬಿಸಿಲು ಎನ್ನುವುದು ಕೇವಲ ತಾತ್ಕಾಲಿಕ ಅಸ್ವಸ್ಥತೆ ಉಂಟುಮಾಡುವ ವಿಷಯವಲ್ಲ. ಬದಲಿಗೆ, ಅದು ದೇಶದ ಆರೋಗ್ಯ ವಲಯದ ಮುಂದಿರುವ ಗಂಭೀರ ತುರ್ತು ಪರಿಸ್ಥಿತಿಯಾಗಿದೆ ಎಂಬುದನ್ನು ಈ ಸಂಶೋಧನೆಯು ಸ್ಪಷ್ಟಪಡಿಸಿದೆ.






