Digital Arrest Scam ಗಾಗಿರುವ ಕೊಠಡಿಯೊಳಗೆ ನಕಲಿ ಪೊಲೀಸ್ ಠಾಣೆ, ಗಾಂಧಿ–ಅಂಬೇಡ್ಕರ್ ಫೋಟೋ; ಕಾಂಬೋಡಿಯಾದಲ್ಲಿನ ಹಗರಣ ಕೇಂದ್ರಗಳಲ್ಲಿ ಕಂಡಿದ್ದೇನು?

Photo Credit : NDTV
ಅಂತರರಾಷ್ಟ್ರೀಯ ವಂಚನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಇತ್ತೀಚಿನ ವಾರಗಳಲ್ಲಿ ಕಾಂಬೋಡಿಯಾ ಸುಮಾರು 200 ಸ್ಕ್ಯಾಮ್ ಸೆಂಟರ್ಗಳನ್ನು ಮುಚ್ಚಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಾವು ಈಗ ಸುಮಾರು 190 ಕೇಂದ್ರಗಳನ್ನು ಮುಚ್ಚಿದ್ದೇವೆ” ಎಂದು ಹಿರಿಯ ಸಚಿವ ಹಾಗೂ ಕಾಂಬೋಡಿಯಾದ ಆನ್ಲೈನ್ ಹಗರಣಗಳ ವಿರುದ್ಧದ ಆಯೋಗದ ಅಧ್ಯಕ್ಷೆ ಚೈ ಸಿನಾರಿತ್ ಅವರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಪ್ರಾರಂಭವಾದ ಬೃಹತ್ ಕಾರ್ಯಾಚರಣೆಯ ವೇಳೆ ಅಧಿಕಾರಿಗಳು 173 ಹಿರಿಯ ಅಪರಾಧಿಗಳನ್ನು ಬಂಧಿಸಿದ್ದು, 11,000 ಮಂದಿಯನ್ನು ಗಡಿಪಾರು ಮಾಡಿದ್ದಾರೆ. ಚೀನಾ ಮೂಲದ ಹಗರಣದ ಕಿಂಗ್ಪಿನ್ನನ್ನು ಅಮೆರಿಕ ದೋಷಾರೋಪಣೆ ಮಾಡಿದ ನಂತರ ಚೀನಾ ಗಡಿಪಾರು ಮಾಡಿತು ಎಂದು ಚೈ ತಿಳಿಸಿದ್ದಾರೆ.
ಸಾವಿರಾರು ಕಾರ್ಮಿಕರು ತಮ್ಮ ತಾಯ್ನಾಡಿಗೆ ಮರಳಲು ಈ ಕಾಂಪೌಂಡ್ಗಳಿಂದ ಓಡಿಹೋಗುತ್ತಿದ್ದಾರೆ. ಇವರಲ್ಲಿ ಹಲವರು ಅಪರಾಧಿಗಳಲ್ಲ; ಅವರು ಮಾನವ ಕಳ್ಳಸಾಗಣೆಗೆ ಒಳಗಾದವರು. ತಮ್ಮ ಇಚ್ಛೆಗೆ ವಿರುದ್ಧವಾಗಿ ಬಂಧಿಸಲ್ಪಟ್ಟು, ಭಯಾನಕ ಹಾಗೂ ಹಿಂಸಾತ್ಮಕ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲ್ಪಟ್ಟಿದ್ದರು. ಅನೇಕರು ಹಣವಿಲ್ಲದೆ ಹಾಗೂ ಯಾವುದೇ ದಾಖಲೆಗಳಿಲ್ಲದೆ ಪಲಾಯನ ಮಾಡುತ್ತಿರುವುದರಿಂದ ಅಮ್ನೆಸ್ಟಿ ಇಂಟರ್ನ್ಯಾಷನಲ್ ಈ ಪರಿಸ್ಥಿತಿಯನ್ನು “ಮಾನವೀಯ ಬಿಕ್ಕಟ್ಟು” ಎಂದು ವರ್ಣಿಸಿದೆ.
ದಕ್ಷಿಣ ಕಾಂಬೋಡಿಯಾದ ಕಂಪೋಟ್ ಪ್ರಾಂತ್ಯದಲ್ಲಿ ಅಪರಾಧಿಗಳು ಜನರನ್ನು ವಂಚಿಸಲು ಬಳಸುತ್ತಿದ್ದ ದೊಡ್ಡ ಕೊಠಡಿಗಳನ್ನು ವರದಿಗಾರರಿಗೆ ತೋರಿಸಲಾಯಿತು. ಅದರಲ್ಲಿ ಕಂಪ್ಯೂಟರ್ ಸ್ಟೇಷನ್ಗಳು ಮತ್ತು ಜನರನ್ನು ಹೇಗೆ ವಂಚಿಸುವುದು ಎಂಬುದನ್ನು ಸೂಚಿಸುವ ದಾಖಲೆಗಳು ತುಂಬಿದ್ದವು. ಫೋನ್ ಕರೆಗಳಿಗಾಗಿ ಸ್ಟುಡಿಯೋ ಬೂತ್ಗಳು ಹಾಗೂ ನಕಲಿ ಭಾರತೀಯ ಪೊಲೀಸ್ ಠಾಣೆಗಳೂ ಇದ್ದವು. ಒಂದು ಕೇಂದ್ರದಲ್ಲಿ ಮಹಾತ್ಮ ಗಾಂಧಿ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಫೋಟೋಗಳು, ಕೇಂದ್ರ ತನಿಖಾ ದಳ (CBI) ಲಾಂಛನ ಹೊಂದಿರುವ ಫಲಕಗಳು, ಗ್ರೇಟರ್ ಮುಂಬೈ ಪೊಲೀಸರ ಪೋಸ್ಟರ್ಗಳೂ ಕಂಡುಬಂದವು. ಇವೆಲ್ಲವನ್ನೂ “ಡಿಜಿಟಲ್ ಬಂಧನ” ಹಗರಣಗಳ ಮೂಲಕ ಭಾರತೀಯರನ್ನು ವಂಚಿಸಲು ಬಳಸಲಾಗುತ್ತಿತ್ತು.
ಆದಾಗ್ಯೂ, ನೋಮ್ ಪೆನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ವಿಷಯದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
“ಮೈ ಕ್ಯಾಸಿನೊ” ಎಂದು ಕರೆಯಲ್ಪಡುವ ಕಂಪೋಟ್ ಕ್ಯಾಸಿನೊ ಸಂಕೀರ್ಣದೊಳಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಪಾದಿತ ಬಾಸ್ ಹಾಗೂ ಉದ್ಯಮಿ ಲೈ ಕುವಾಂಗ್ ಬಂಧನದ ನಂತರ ಕಾರ್ಮಿಕರು ಓಡಿಹೋದರು. ಓಡಿಹೋದವರನ್ನು ಬಂಧಿಸಲು ಸಾಕಷ್ಟು ಪೊಲೀಸರು ಇರಲಿಲ್ಲ ಎನ್ನಲಾಗಿದೆ. ಬಂಧನದಲ್ಲಿರುವ ಲೈ ಕುವಾಂಗ್ ಅವರ ಪ್ರತಿನಿಧಿಗಳ ಸಂಪರ್ಕ ವಿವರಗಳು ತಕ್ಷಣ ಲಭ್ಯವಾಗಿಲ್ಲ.
“ಇಡೀ ಪ್ರಾಂತ್ಯದಲ್ಲಿ ನಮಗೆ ಕೇವಲ 1,000 ಪೊಲೀಸರು ಇದ್ದಾರೆ. ಸುಮಾರು 300 ಮಿಲಿಟರಿ ಪೊಲೀಸರು ಇದ್ದಾರೆ,” ಎಂದು ಕಂಪೋಟ್ ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಮಾವೋ ಚನ್ಮೋಥುರಿತ್ ಹೇಳಿದ್ದಾರೆ. “ಎರಡೂ ಪಡೆಗಳನ್ನು ಒಟ್ಟುಗೂಡಿಸಿದರೂ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ. ಅವರು ಸ್ಥಳ ತೊರೆದಾಗ ಸುಮಾರು 6,000–7,000 ಜನರಿದ್ದರು” ಎಂದಿದ್ದಾರೆ.
ಡಿಸೆಂಬರ್ನಲ್ಲಿ ಗಡಿ ಸಂಘರ್ಷದ ವೇಳೆ ಥಾಯ್ ಪಡೆಗಳು ಬಾಂಬ್ ದಾಳಿ ನಡೆಸಿ ಆಕ್ರಮಿಸಿಕೊಂಡ ಕಾಂಬೋಡಿಯನ್ ಪ್ರದೇಶದಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ನೋಡಲು ಥಾಯ್ ಅಧಿಕಾರಿಗಳು ಮಾಧ್ಯಮ ಹಾಗೂ ವಿದೇಶಿ ಪ್ರತಿನಿಧಿಗಳನ್ನು ಕರೆದೊಯ್ದಿದ್ದರು. ಅಲ್ಲಿ ಭೇಟಿ ನೀಡಿದ ರಾಯಿಟರ್ಸ್ ವರದಿಗಾರರು ಅನೇಕ ದೇಶಗಳ ನಕಲಿ ಪೊಲೀಸ್ ಠಾಣೆಗಳು ಮತ್ತು ದಾಖಲೆಗಳ ಸಂಗ್ರಹ ಸೇರಿದಂತೆ ಇದೇ ರೀತಿಯ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ.
ಕಾಂಬೋಡಿಯಾದಲ್ಲಿ ಸ್ಕ್ಯಾಮ್ ಫ್ಯಾಕ್ಟರಿಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದರೂ ಅವುಗಳ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿಲ್ಲ. ಇತ್ತೀಚಿನ ಅಭಿಯಾನವು ವಿಶಾಲ ವ್ಯಾಪ್ತಿಯಲ್ಲಿದ್ದು, ಇಂಥ ಸ್ಥಳಗಳನ್ನು ಮುಚ್ಚುವುದು ಮತ್ತು ಹಗರಣದಲ್ಲಿ ಭಾಗಿಯಾದವರನ್ನು ಬಂಧಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆಗಳ ಪುರಾವೆ ವಶಪಡಿಸಿದ ಥಾಯ್ ಸೇನೆ
ಥೈಲ್ಯಾಂಡ್ ಸೇನೆ ಫೆಬ್ರವರಿ 2ರಂದು ಕಾಂಬೋಡಿಯನ್ ಹಗರಣ ಸಂಕೀರ್ಣದಿಂದ ವಂಚನೆಗಳ ಪುರಾವೆಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಿದೆ. ವಿವಾದಿತ ಕಾಂಬೋಡಿಯಾ–ಥೈಲ್ಯಾಂಡ್ ಗಡಿಯಲ್ಲಿರುವ O’Smach ಸಂಕೀರ್ಣವನ್ನು ಕಳೆದ ವರ್ಷ ಉಭಯ ದೇಶಗಳ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಥಾಯ್ ಪಡೆಗಳು ವಶಪಡಿಸಿಕೊಂಡಿದ್ದವು. ಈ ಸಂಕೀರ್ಣದಲ್ಲಿ ಸಾವಿರಾರು ಜನರಿದ್ದು, ಅವರಲ್ಲಿ ಹಲವರು ಮಾನವ ಕಳ್ಳಸಾಗಣೆಯ ಸಂತ್ರಸ್ತರಾಗಿದ್ದರು. ಅಪರಿಚಿತರನ್ನು ವಂಚಿಸಲು ಇವರನ್ನು ಬಳಸಲಾಗುತ್ತಿತ್ತು ಎಂದು ಥಾಯ್ ಮಿಲಿಟರಿ ಹೇಳಿದೆ.
ಒಂದು ಕಟ್ಟಡದಲ್ಲಿ ಟಾರ್ಗೆಟ್ ಲಿಸ್ಟ್ಗಳು, ಸಂಪರ್ಕ ವಿವರಗಳು ಹಾಗೂ ಹಗರಣ ಸಂವಾದಗಳ ಸ್ಕ್ರಿಪ್ಟ್ಗಳನ್ನು ಒಳಗೊಂಡ ದಾಖಲೆಗಳು ಎಲ್ಲೆಡೆ ಹರಡಿಕೊಂಡಿದ್ದವು. ಸಿಂಗಾಪುರ, ಚೀನಾ, ಭಾರತ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಕನಿಷ್ಠ ಏಳು ದೇಶಗಳ ಪೊಲೀಸ್ ಕಚೇರಿಯಂತೆ ಕಾಣುವ ಕೊಠಡಿಗಳನ್ನೂ ಸ್ಥಾಪಿಸಲಾಗಿತ್ತು.
“ವಂಚಕರು ಉತ್ತಮವಾಗಿ ಸಂಘಟಿತರಾಗಿದ್ದಾರೆ. ಉತ್ತಮ ಮೂಲಸೌಕರ್ಯ ಮತ್ತು ವ್ಯವಸ್ಥೆಗಳನ್ನು ಹೊಂದಿದ್ದಾರೆ. ಜೊತೆಗೆ ಕೆಲಸದ ಹರಿವು ಮತ್ತು ವಂಚನೆಗಳಿಗೆ ಹಲವು ತಂತ್ರಗಳನ್ನು ಬಳಸುತ್ತಿದ್ದಾರೆ,” ಎಂದು ಥಾಯ್ ಸೇನೆಯ ಗುಪ್ತಚರ ಘಟಕದ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ತೀರನನ್ ನಂದಕ್ವಾಂಗ್ ಹೇಳಿದ್ದಾರೆ.
ಸಂಕೀರ್ಣದಲ್ಲಿನ ಒಂದು ಕೋಣೆಯಲ್ಲಿ ವಿಯೆಟ್ನಾಂ ಬ್ಯಾಂಕ್ ಶಾಖೆಯಂತೆ ಕಾಣುವ ಪ್ರತಿಕೃತಿ ಇತ್ತು. ಸೇವಾ ಕೌಂಟರ್ಗಳು, ಬ್ಯಾನರ್ಗಳು ಮತ್ತು ಕಾಯುವ ಪ್ರದೇಶವನ್ನೂ ಹೊಂದಿತ್ತು. ಈ ಸೆಟಪ್ ಗಳು ಹಗರಣದ ಅಗತ್ಯ ಅಂಶಗಳಾಗಿದ್ದವು. ಅಧಿಕಾರಿಗಳಂತೆ ಅಥವಾ ಕಾನೂನು ಜಾರಿ ಸಂಸ್ಥೆಗಳ ಪ್ರತಿನಿಧಿಗಳಂತೆ ನಟಿಸುವ ವಂಚಕರು ಮುಗ್ಧ ಜನರನ್ನು ಗುರಿಯಾಗಿಸಿಕೊಂಡು, ಸೂಚನೆ ಪಾಲಿಸದಿದ್ದರೆ ಬಂಧನ ಅಥವಾ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಬೆದರಿಸುತ್ತಿದ್ದರು.
ಕಾಂಬೋಡಿಯಾ ಮತ್ತು ಇತರೆಡೆಗಳಲ್ಲಿ ಇಂತಹ ವಂಚನಾ ಕಾರ್ಯಾಚರಣೆಗಳು ಪ್ರಪಂಚದಾದ್ಯಂತದ ಜನರಿಂದ ಶತಕೋಟಿ ಡಾಲರ್ಗಳನ್ನು ವಂಚಿಸಿವೆ. ಅನೇಕ ದೇಶಗಳ ಜನರನ್ನು ಗುಲಾಮರಂತಿರುವ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಬಲವಂತಪಡಿಸಿರುವುದಾಗಿ ತಜ್ಞರು ತಿಳಿಸಿದ್ದಾರೆ.
ಡಿಜಿಟಲ್ ಬಂಧನ ಹಗರಣಗಳ ವಿರುದ್ಧ ಭಾರತದ ಹೋರಾಟಕ್ಕೆ ಇದು ಏಕೆ ಮುಖ್ಯ?
ಭಾರತವು ಹೆಚ್ಚುತ್ತಿರುವ ಸೈಬರ್ ವಂಚನೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ವಿಶೇಷವಾಗಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡ “ಡಿಜಿಟಲ್ ಬಂಧನ” ಹಗರಣಗಳಿಗೆ ಕಡಿವಾಣ ಹಾಕುವುದು ಅತ್ಯಂತ ಮುಖ್ಯವಾಗಿದೆ. ಕೇಂದ್ರ ಗೃಹ ಸಚಿವಾಲಯದ ವಿಭಾಗವಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ವರದಿಯ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಭಾರತೀಯರು ವಿವಿಧ ವಂಚನೆ ಪ್ರಕರಣಗಳಲ್ಲಿ ₹52,976 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.
ಡಿಜಿಟಲ್ ಅರೆಸ್ಟ್ ಹಗರಣಗಳ ತನಿಖೆಯನ್ನು ವಹಿಸಿಕೊಳ್ಳಲು ಭಾರತದ ಸುಪ್ರೀಂ ಕೋರ್ಟ್ ಕೇಂದ್ರ ತನಿಖಾ ದಳಕ್ಕೆ ಸೂಚಿಸಿದ್ದು, ಈ ಸಮಸ್ಯೆಯನ್ನು “ತಕ್ಷಣದ ಗಮನ ಅಗತ್ಯವಿರುವ ವಿಷಯ” ಎಂದು ಕರೆದಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬ್ಯಾಂಕರ್ಗಳ ಪಾತ್ರ ಪರಿಶೀಲಿಸಲು ಸಿಬಿಐಗೆ ಮುಕ್ತ ಹಸ್ತ ನೀಡಲಾಗಿದೆ. ವಂಚನೆ ಖಾತೆಗಳು — ‘ಮ್ಯೂಲ್ ಖಾತೆಗಳು’ — ಮೂಲಕ ಹಣವನ್ನು ವೇಗವಾಗಿ ವರ್ಗಾಯಿಸಲಾಗುತ್ತದೆ. ಅನುಮಾನಾಸ್ಪದ ಖಾತೆಗಳನ್ನು ಪತ್ತೆಹಚ್ಚಲು ಹಾಗೂ ಅಪರಾಧದ ಆದಾಯವನ್ನು ತಕ್ಷಣ ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆ (AI) ಅಥವಾ ಯಂತ್ರ ಕಲಿಕೆ (ML) ವ್ಯವಸ್ಥೆಗಳನ್ನು ಬಳಸುವ ಸಾಧ್ಯತೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರಿಶೀಲಿಸಲು ಸೂಚಿಸಲಾಗಿದೆ.
ಹೆಚ್ಚಿನ ಡಿಜಿಟಲ್ ವಂಚನೆಗಳು ಕರೆ ಮಾಡುವವರಿಂದ ಹಿಡಿದು ಭ್ರಷ್ಟ ಬ್ಯಾಂಕರ್ಗಳು, ಮ್ಯೂಲ್ ಖಾತೆಗಳವರೆಗೆ ಇಡೀ ಪರಿಸರ ವ್ಯವಸ್ಥೆಯನ್ನು ಒಳಗೊಂಡ ಅತ್ಯಾಧುನಿಕ ಅಂತರರಾಷ್ಟ್ರೀಯ ನೆಟ್ವರ್ಕ್ಗಳಿಂದ ನಡೆಯುತ್ತಿವೆ. ಉದಾಹರಣೆಗೆ, ದೆಹಲಿ ಪೊಲೀಸರು ಕಳೆದ ತಿಂಗಳು ತೈವಾನ್ ಸಂಪರ್ಕ ಹೊಂದಿದ ಅಂತರರಾಷ್ಟ್ರೀಯ ಸೈಬರ್ ಅಪರಾಧ ಸಿಂಡಿಕೇಟ್ ಅನ್ನು ಭೇದಿಸಿದ್ದು, ಭಯೋತ್ಪಾದನಾ ವಿರೋಧಿ ಮತ್ತು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಭಾರತದಾದ್ಯಂತ ಸುಮಾರು ₹100 ಕೋಟಿ ವಂಚಿಸಿರುವ ಆರೋಪವಿದೆ.
ಆರೋಪಿಗಳಲ್ಲಿ ಹಲವರು ಈ ಹಿಂದೆ ಕಾಂಬೋಡಿಯಾದ ಹಗರಣ ಕೇಂದ್ರಗಳಲ್ಲಿ ಕೆಲಸ ಮಾಡಿದ್ದರು. ಪಾಕಿಸ್ತಾನ ಮೂಲದ ಹ್ಯಾಂಡ್ಲರ್ನಿಂದ ನೇಮಕಗೊಂಡು ಹಣಕಾಸು ಪಡೆಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದ ವಕೀಲರೊಬ್ಬರು ದೂರದಿಂದ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರೆಂಬ ಶಂಕೆಯೂ ವ್ಯಕ್ತವಾಗಿದೆ.
ಅದೇ ರೀತಿ, The Indian Express ವರದಿ ಪ್ರಕಾರ, ದೆಹಲಿ ಪೊಲೀಸರು ವೃದ್ಧ ದಂಪತಿಗೆ ₹14.85 ಕೋಟಿ ವಂಚಿಸಿದ ಆರೋಪದಲ್ಲಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಮೂರು ರಾಜ್ಯಗಳಲ್ಲಿ ಸರ್ಕಾರೇತರ ಸಂಸ್ಥೆಗಳು (NGO), ಅಂತರರಾಷ್ಟ್ರೀಯ ಸೈಬರ್ ಅಪರಾಧ ಸಿಂಡಿಕೇಟ್ ಹಾಗೂ ಮ್ಯೂಲ್ ಖಾತೆಗಳನ್ನು ಒಳಗೊಂಡ ಸಂಕೀರ್ಣ “ಡಿಜಿಟಲ್ ಅರೆಸ್ಟ್” ಮೂಲಕ ಈ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಅಂತರರಾಷ್ಟ್ರೀಯ ಸಿಂಡಿಕೇಟ್ನಲ್ಲಿ ಕಾಂಬೋಡಿಯಾ ಮತ್ತು ನೇಪಾಳ ಮೂಲದ ವಂಚಕರು ಸೇರಿದ್ದಾರೆ. ವಾಸ್ತವವಾಗಿ, ಕಾಂಬೋಡಿಯಾ, ವಿಯೆಟ್ನಾಂ ಹಾಗೂ ಮ್ಯಾನ್ಮಾರ್ ದೇಶಗಳು ಡಿಜಿಟಲ್ ಅರೆಸ್ಟ್ ಸೇರಿದಂತೆ ಜಾಗತಿಕ ಡಿಜಿಟಲ್ ಹಗರಣಗಳ ಪ್ರಮುಖ ಕೇಂದ್ರಗಳಾಗಿವೆ.






