ಸಾವಯವ ಕೃಷಿ ಪದ್ಧತಿಯಿಂದ ಬರಡು ಭೂಮಿಯಲ್ಲಿ ನಿಂಬೆ ಬೆಳೆದು ಯಶಸ್ಸು ಕಂಡ ರೈತ

ಬೀದರ್ : ತಾಲೂಕಿನ ಚೌಳಿ ಗ್ರಾಮದ ರೈತ ಶಿವಶರಣಪ್ಪ ಬೋರಾಂಚೆ ಅವರು, ಬರೀ ಸಣ್ಣ ಸಣ್ಣ ಕಲ್ಲುಗಳಿಂದ ಕೂಡಿದ ಭೂಮಿಯಲ್ಲಿ ಯಾವ ಬೆಳೆಯೂ ಬಾರದೆ ಬರಡು ಭೂಮಿಯಾಗಿದ್ದ ತಮ್ಮ ಎರಡು ಎಕರೆ ಭೂಮಿಯಲ್ಲಿ, ನಿಂಬೆ ಹಣ್ಣಿನ ಗಿಡಗಳು ನೆಟ್ಟು ಯಶಸ್ಸು ಕಂಡಿದ್ದಾರೆ.
ಶಿವಶರಣಪ್ಪ ಬೋರಾಂಚೆ ಅವರು ವೃತ್ತಿಯಲ್ಲಿ ವಕೀಲರಾದರು ಕೂಡ, ಈ ನಿಂಬೆ ಹಣ್ಣಿನ ಫಸಲು ತಂದುಕೊಟ್ಟ ಆದಾಯ ನೋಡಿ ಕೃಷಿಯನ್ನೇ ತಮ್ಮ ಆದಾಯವಾಗಿ ಮಾಡಿಕೊಂಡಿದ್ದಾರೆ. ಇವರಿಗೆ ಸುಮಾರು 8 ಎಕರೆ ಕೃಷಿ ಜಮೀನಿದೆ. ಇವರ ಎರಡು ಎಕರೆ ಜಮೀನು ಸಂಪೂರ್ಣವಾಗಿ ಕಲ್ಲುಗಳಿಂದ ತುಂಬಿತ್ತು. ಆ ಭೂಮಿಯಲ್ಲಿನ ಮಣ್ಣು ಫಲವತ್ತತೆಯನ್ನು ಕಳೆದುಕೊಂಡು ಯಾವುದೇ ರೀತಿಯ ಬೆಳೆಗಳು ಬೇಳೆಯುತ್ತಿರಲಿಲ್ಲ. ಇದರಿಂದಾಗಿ ಆ ಭೂಮಿಯೂ ಬರಡಾಗಿ ಬಿದ್ದಿತ್ತು. ಹೀಗಾಗಿ ಶಿವಶರಣಪ್ಪ ಅವರಿಗೆ ದಿಕ್ಕು ತೋಚದೆ ಹೊಲದಲ್ಲಿನ ಕಲ್ಲುಗಳನ್ನು ಆಯ್ದು 2019ರಲ್ಲಿ ನಿಂಬೆ ಗಿಡಗಳು ನೆಟ್ಟಿದ್ದರು.
ಶಿವಶರಣಪ್ಪ ಅವರೇ ಹೇಳುವ ಪ್ರಕಾರ, ಮಣ್ಣಿನ ಫಲವತ್ತತೆ ಇಲ್ಲದೆ ನಾನು ಎರಡು ಎಕರೆಯಲ್ಲಿ ನೆಟ್ಟಿದ ನಿಂಬೆ ಗಿಡಗಳು ಒಣಗಲಾರಂಭಿಸಿದವು. ಎಲೆಗಳು ಉದುರತೊಡಗಿದವು. ಈ ನಿಂಬೆ ಗಿಡಗಳು ಫಸಲು ನೀಡದೆ ನಷ್ಟ ಉಂಟು ಮಾಡಿದವು ಎಂದು ಯೋಚನೆ ಮಾಡಿ ಆ ಗಿಡಗಳನ್ನೆಲ್ಲ ಕಿತ್ತು ಹಾಕಬೇಕು ಎಂದುಕೊಂಡಿದ್ದೆ. ಅಷ್ಟರಲ್ಲಿ ತೋಟಗಾರಿಕೆ ಜೈವಿಕ ಕೇಂದ್ರದ ಸಹಾಯಕ ನಿರ್ದೇಶಕ ನಿಲಂಜನ್ ಅವರು ನನ್ನನ್ನು ತಡೆದು, ಜೈವಿಕ ಕೃಷಿ ಬಗ್ಗೆ ಸಲಹೆ ನೀಡಿದರು. ಆವಾಗಿನಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ, ನಿಂಬೆ ಗಿಡಗಳು ಚಿಗುರುಲಾರಾಂಭಿಸಿದವು.
ನಿಲಂಜನ ಅವರು ನಮ್ಮ ಹೊಲದಲ್ಲಿನ ಮಣ್ಣು ಪರೀಕ್ಷೆ ಮಾಡಿದಾಗ ಮಣ್ಣಿನಲ್ಲಿ ಫಲವತ್ತತೆ ಕಡಿಮೆ ಇರುವುದು ಕಂಡು ಬಂತು. ನಂತರ ಅವರು ಸಾವಯವ ಪದ್ಧತಿಯಾದ ಜಿಪ್ಸಂ, ಟ್ರೈಕೊಡರ್ಮಾ, ಸೋಡೊನೊಮೋಸ್ ಜೊತೆಗೆ ಬೆಲ್ಲ, ಕೋಳಿ ಮೊಟ್ಟೆ, ಸಿಹಿ ಎಣ್ಣೆ ಹಾಗೂ ಗೋವಿನ ಮೂತ್ರವನ್ನು ಹಾಕಲು ಸಲಹೆ ನೀಡಿದರು. ಅವರ ಸಲಹೆಯಂತೆ ನಾನು ಕೆಲಸ ಮಾಡಿದಾಗ ನಿಂಬೆ ಗಿಡಗಳಲ್ಲಿ ಚಿಗುರು ಕಂಡು, ಹೂವಾಗಿ ನಿಂಬೆಹಣ್ಣು ಬಿಟ್ಟಿದ್ದವು. ಈ ಕೃಷಿಯಲ್ಲಿ ನಾನು ಯಶಸ್ಸು ಕಂಡಿದ್ದೇನೆ ಎಂದು ಅವರು ಹೇಳುತ್ತಾರೆ.
ನನಗೆ ಮೊಟ್ಟ ಮೊದಲ ಇಳುವರಿ 2024ರಲ್ಲಿ ಬಂದಿತ್ತು. ಆ ವರ್ಷದ ಎಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿಯೇ ಸುಮಾರು 2 ಲಕ್ಷ ರೂ. ಆದಾಯ ಬಂದಿದೆ. ಇವಾಗ ದಿನಾಲೂ 10 ರಿಂದ 15 ಕೆ.ಜಿ ನಿಂಬೆಹಣ್ಣಿನ ಇಳುವರಿ ಬರುತ್ತದೆ. ಇದರಿಂದಾಗಿ ನಾನು ವಕೀಲ ವೃತ್ತಿ ಬಿಟ್ಟು ಕೃಷಿಯಲ್ಲಿಯೇ ಖುಷಿಯಾಗಿದ್ದೇನೆ ಎಂದು ಅವರು ಹರ್ಷ ವ್ಯಕ್ತಪಡಿಸುತ್ತಾರೆ.
ಇನ್ನುಳಿದ ಜಮೀನಿನಲ್ಲೂ ನಿಂಬೆಹಣ್ಣು, ಇನ್ನಿತರ ಬೆಳೆ ಬೆಳೆಯಲು ಯೋಚನೆ: ಶಿವಶರಣಪ್ಪ ಬೋರಾಂಚೆ ಅವರು ಈ ಸಾವಯವ ಕೃಷಿ ಪದ್ಧತಿಯಿಂದ ನಿಂಬೆಹಣ್ಣು ಬೆಳೆದು ಆದಾಯ ಗಳಿಸಲು ಸಫಲರಾಗಿದ್ದರಿಂದ, ಇನ್ನುಳಿದ ಜಮೀನಿನಲ್ಲೂ ಕೂಡ ಇದೇ ರೀತಿಯ ಜೈವಿಕ ಕೃಷಿಯಿಂದ ನಿಂಬೆಹಣ್ಣು ಹಾಗೂ ಇನ್ನಿತರ ಹಣ್ಣುಗಳ ಗಿಡಗಳು ನೆಡಲು ಅವರು ಮುಂದಾಗಿದ್ದಾರೆ.
ನಿಂಬೆಹಣ್ಣಿನ ಗಿಡಗಳು ಕೂಡ ಫಸಲು ನೀಡುವುದಿಲ್ಲ ಎಂದು ನಿರಾಸೆಯಾಗಿತ್ತು. ಅಷ್ಟರಲ್ಲಿ ನಿಲಂಜನ್ ಅವರಿಂದ ಜೈವಿಕ ಕೃಷಿ ಪದ್ಧತಿಯ ಸಲಹೆ ಪಡೆದು, ನಿಂಬೆಹಣ್ಣಿನ ಕೃಷಿಯಲ್ಲಿ ಯಶಸ್ಸು ಕಂಡಿದ್ದೇನೆ. ಈ ವರ್ಷದಿಂದ ನನ್ನ ಬಹುತೇಕ ಎಲ್ಲ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುತ್ತೇನೆ.
- ಶಿವಶರಣಪ್ಪ ಬೋರಾಂಚೆ, ನಿಂಬೆ ಬೆಳೆದ ರೈತ
ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿರುವ ಜೀವಸತ್ವಗಳು ನಾಶವಾಗುತ್ತಿವೆ. ಇದರಿಂದಾಗಿ ಮಣ್ಣಿನಲ್ಲಿರುವ ಫಲವತ್ತತೆ ಕಡಿಮೆಯಾಗಿ, ಇಳುವರಿ ಕಡಿಮೆಯಾಗುತ್ತಿದೆ. ಜೈವಿಕ ಪದ್ಧತಿ ಅಳವಡಿಕೆಯಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗಿ ಇಳುವರಿ ಕೂಡ ಹೆಚ್ಚಾಗುತ್ತದೆ. ಇದರಿಂದಾಗಿ ಮನುಷ್ಯನಿಗೆ ಒಳ್ಳೆ ಆಹಾರ ಸಿಗುತ್ತದೆ. ಹಾಗಾಗಿ ರೈತರು ಸಾವಯವ ಕೃಷಿ ಪದ್ದ ತಿ ಅಳವಡಿಸಿಕೊಳ್ಳಬೇಕು.
- ನಿಲಂಜನ್, ಸಹಾಯಕ ನಿರ್ದೇಶಕ, ತೋಟಗಾರಿಕೆಯ ಜೈವಿಕ ಕೇಂದ್ರ







