ಕಳೆದ ಐದು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ 800 ರೈತರ ಆತ್ಮಹತ್ಯೆ

ಕಲಬುರಗಿ, ಡಿ.19: ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಲಬಾಧೆಯಿಂದ ಸುಮಾರು 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ಕೃಷಿ ಇಲಾಖೆ ಹಾಗೂ ರೈತ ಸಂಘಟನೆಗಳ ದಾಖಲೆಗಳು ಈ ಅಂಶವನ್ನು ಬಹಿರಂಗಪಡಿಸಿವೆ.
ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು 800 ರೈತರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಕೃಷಿ ಇಲಾಖೆಯಲ್ಲಿ ದಾಖಲಾದ ಎಲ್ಲ ರೈತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ನಂತೆ ಪರಿಹಾರ ಲಭಿಸಿದೆ. ಆದರೆ ರೈತ ಸಂಘಟನೆಗಳ ಪ್ರಕಾರ ಆತ್ಮಹತ್ಯೆಗೆ ಶರಣಾದ ಇನ್ನೂ ಹಲವು ರೈತರ ಕುಟುಂಬಗಳ ಕೈಗೆ ಪರಿಹಾರ ತಲುಪಿಲ್ಲ.
ಕಳೆದ ಐದು ವರ್ಷಗಳಲ್ಲಿ (2020ರಿಂದ 2025) ಬೀದರ್ ಜಿಲ್ಲೆಯಲ್ಲಿ 159, ಕಲಬುರಗಿಯಲ್ಲಿ 483, ಯಾದಗಿರಿಯಲ್ಲಿ 64 ಹಾಗೂ ರಾಯಚೂರು ಜಿಲ್ಲೆಯಲ್ಲಿ 50 ಪ್ರಕರಣಗಳು ದಾಖಲಾಗಿವೆ. ಒಟ್ಟು ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ 756 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತರ ಆತ್ಮಹತ್ಯೆಯಲ್ಲಿ ಕಲಬುರಗಿ ಜಿಲ್ಲೆ ಮುಂಚೂಣಿಯಲ್ಲಿದೆ. ಆತ್ಮಹತ್ಯೆ ಮಾಡಿದ ರೈತರಲ್ಲಿ ಅತೀ ಹೆಚ್ಚು ಜನ ವಿಷ ಸೇವಿಸಿ ಮೃತಪಟ್ಟಿದ್ದಾರೆ. ರೈತರಿಗೆ ಕೃಷಿಗೆ ಬಳಸುವ ರಾಸಾಯನಿಕ ಪದಾರ್ಥಗಳು ಸುಲಭವಾಗಿ ಲಭಿಸುವುದರಿಂದ ತಮ್ಮ ಸಾವಿಗೆ ಅದನ್ನೇ ಉಪಯೋಗಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇನ್ನು ಕೆಲವು ರೈತರು ಸಾಲದ ಹೊರೆ ಹೊತ್ತು ಖಿನ್ನತೆಗೆ ಒಳಗಾಗಿ ವಿಪರೀತ ಮದ್ಯ ಕುಡಿದು ಸಾವಿಗೆ ಶರಣಾಗುತ್ತಾರೆ ಎಂಬ ವಿಚಾರವನ್ನು ರೈತರ ಕುಟುಂಬಸ್ಥರು ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ. ಇವಿಷ್ಟು ಕೃಷಿ ಇಲಾಖೆಯಿಂದ ಪರಿಹಾರ ಪಡೆದ ರೈತ ಕುಟುಂಬಗಳ ದಾಖಲೆ. ಆದರೆ ಪರಿಹಾರ ತಲುಪದವರೂ ಇದ್ದಾರೆ ಎಂಬುದು ರೈತ ಸಂಘಟನೆಗಳ ಆರೋಪ.
ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ಹಾಗೂ ಅತಿ ಹೆಚ್ಚು ಗುಳೆ ಹೋಗುವ ಜಿಲ್ಲೆಗಳೆಂದರೆ ಅದು ಕಲ್ಯಾಣ ಕರ್ನಾಟಕ ಜಿಲ್ಲೆಗಳು. ಸಮರ್ಪಕ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಈ ಜಿಲ್ಲೆಗಳು ಶೈಕ್ಷಣಿಕವಾಗಿ ಹಾಗೂ ಅಭಿವೃದ್ಧಿ ಸೂಚ್ಯಂಕದಲ್ಲಿ ಬಹಳ ಹಿಂದಿವೆ. ಸ್ಥಳೀಯವಾಗಿ ಉದ್ಯೋಗಗಳು ಸಿಗದೆ ಇರುವುದು ಹಾಗೂ ಸಕಾಲಿಕ ಮಳೆ ಸುರಿಯದೇ ಇರುವುದೂ ಇಲ್ಲಿನ ಗುಳೆ ಸಮಸ್ಯೆಗೆ ಕಾರಣ. ಇಲ್ಲಿನ ಜನ ಉದ್ಯೋಗ ಸಿಗಲಾರದೆ ನೆರೆಯ ರಾಜ್ಯಗಳಿಗೆ ಹಾಗೂ ರಾಜ್ಯದ ಬೇರೆ ಬೇರೆ ಪಟ್ಟಣಗಳಿಗೆ ಉದ್ಯೋಗ ಅರಸುತ್ತಾ ಗುಳೆ ಹೋದರೆ, ಅಲ್ಪಸ್ವಲ್ಪ ಜಮೀನುಗಳಿದ್ದ ರೈತರು ಸಾಲ ಮಾಡಿ ವ್ಯವಸಾಯ ಮಾಡಲು ಮುಂದಾಗುತ್ತಾರೆ. ಬೆಳೆ ಚೆನ್ನಾಗಿ ಕೈ ಹಿಡಿಯಲಿಲ್ಲ ಎಂದಾದರೆ ಕೆಲವು ರೈತರು ಮಾಡಿದ ಸಾಲ ತೀರಿಸಲು ಪಟ್ಟಣಗಳಿಗೆ ಗುಳೆ ಹೋದರೆ, ಹಲವು ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ.
ಈ ಭಾಗದ ರೈತರು ಹೇಳುವ ಪ್ರಕಾರ ವರ್ಷದಲ್ಲಿ 40ಕ್ಕಿಂತ ಅಧಿಕ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತವೆ. ಕಳೆದ 15 ವರ್ಷಗಳಿಂದ ತೊಗರಿ ಬೆಳೆ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳು ಸಬ್ಸಿಡಿ ರೀತಿಯಲ್ಲಿ ದೊರೆಯುತ್ತಿಲ್ಲ. ಟ್ರ್ಯಾಕ್ಟರ್ ಹಾಗೂ ಇನ್ನಿತರ ಕೃಷಿ ಉಪಕರಣಗಳ ಬೆಲೆ ದುಬಾರಿಯಾಗುತ್ತಿವೆ. ಉಪಕರಣಗಳ ಖರೀದಿಗೆ ನೀಡುವ ಸಾಲಕ್ಕೆ ಬಡ್ಡಿದರ ಹೆಚ್ಚಾಗುತ್ತಿವೆ. ಗ್ರಾಮೀಣ ಬ್ಯಾಂಕುಗಳಲ್ಲಿ ರೈತರಿಗೆ ಬೇಕಾದಾಗ ಸಾಲಗಳು ಸಿಗುವುದಿಲ್ಲ. ಸಿಕ್ಕ ಸಾಲಕ್ಕೆ ವರ್ಷಕ್ಕೆ ನವೀಕರಣ ಮಾಡಿಸಬೇಕಾಗುತ್ತದೆ. ನವೀಕರಣ ಮಾಡಿಸದ ಸಾಲಗಳಿಗೆ ಶೇ. 14 ಬಡ್ಡಿದರ ಹಾಗೂ ನವೀಕರಿಸಿದ ಸಾಲಕ್ಕೆ ಶೇ. 4 ಬಡ್ಡಿದರ ಪಾವತಿಸಬೇಕು. ಹೀಗಿರುವಾಗ ಸುಲಭವಾಗಿ ರೈತರು ಮೈಕ್ರೋ ಫೈನಾನ್ಸ್‌ನಂತಹ ಖಾಸಗಿ ಫೈನಾನ್ಸ್ ಕಂಪೆನಿಗಳ ಮೊರೆ ಹೋಗಬೇಕಾಗುತ್ತದೆ. ಸಾಲ ಪಡೆದ ಬಳಿಕ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾದಂತೆ ರೈತ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ. ಇಲ್ಲಿನ ರೈತರ ಆತ್ಮಹತ್ಯೆಗಳಿಗೆ ಮೂಲ ಕಾರಣಗಳನ್ನು ಹುಡುಕಿದಾಗ ಇವಿಷ್ಟು ಮುಖ್ಯ ಅಂಶಗಳು ತಿಳಿದುಬಂದಿವೆ.
ಗ್ರಾಮೀಣ ಬ್ಯಾಂಕುಗಳಲ್ಲಿ 8ರಿಂದ 10 ಎಕರೆ ಕೃಷಿ ಜಮೀನು ಹೊಂದಿರುವ ರೈತರಿಗೆ ವ್ಯವಸಾಯಕ್ಕಾಗಿ 5 ಸಾವಿರದಿಂದ 5 ಲಕ್ಷ ರೂ.ಗಳವರೆಗೆ ಸಾಲ ನೀಡಲಾಗುತ್ತದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಎಕರೆಗೆ 25ರಿಂದ 35 ಲಕ್ಷ ರೂ. ಉತ್ಪಾದನೆ ಬರುತ್ತದೆ. ಹಾಗಾಗಿ ಆ ಭಾಗಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿಲ್ಲ, ನಡೆದರೂ ತೀರಾ ಅಪರೂಪ. ಸುರಿಯುವ ಅಕಾಲಿಕ ಮಳೆ ಹಾಗೂ ತಮ್ಮ ಭೂಮಿಯಲ್ಲಿ ಯಾವ ಕಾಲಕ್ಕೆ ಯಾವ ಬೆಳೆ ಬೆಳೆಯಬೇಕು ಎಂಬ ಮಾಹಿತಿಯ ಕೊರತೆಯಿಂದ ರೈತ ವ್ಯವಸಾಯದಲ್ಲಿ ಇಳುವರಿ ಪಡೆಯಲು ಎಡವುತ್ತಿದ್ದಾನೆ ಎಂಬುವುದು ಇಲ್ಲಿನ ರೈತ ಮುಖಂಡರ ಅಭಿಪ್ರಾಯ.
ರೈತರ ಅತ್ಮಹತ್ಯೆಗಳಿಗೆ ಸಾಲದ ಹೊರೆಯೇ ನೇರಕಾರಣ ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಮಾಡಿದ ರೈತರಿಗೆ ಸರಕಾರದಿಂದ ತಲಾ 5 ಲಕ್ಷ ರೂ. ನಂತೆ ಪರಿಹಾರ ಸಿಕ್ಕಿವೆ. ಆತ್ಮಹತ್ಯೆ ಮಾಡಿದ ರೈತನ ಹೆಸರಿನಲ್ಲಿ ಹೊಲ ಹಾಗೂ ಸಾಲ ಇದ್ದರೆ ಅಂತಹವರ ಖಾತೆಗೆ ಪರಿಹಾರ ಮೊತ್ತ ಜಮೆ ಆಗಿವೆ.
ಸಮದ್ ಪಟೇಲ್, ಜಂಟಿ ನಿರ್ದೇಶಕರು,
ಕೃಷಿ ಇಲಾಖೆ, ಕಲಬುರಗಿ
ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತರ ಆರ್ಥಿಕ ಅಪರಿಸ್ಥಿತಿ ಕುಸಿಯುತ್ತಿದೆ. ಸಾಲದ ಬಾಧೆ ತಾಳಲಾರದೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಸಾಲ ಋಣ ಮುಕ್ತ ಕಾಯ್ದೆ ಜಾರಿಗೆ ತರಬೇಕು. ಅಲ್ಲದೆ ಕೇಂದ್ರ ಸರಕಾರ ವಿಶೇಷ ಮುತುವರ್ಜಿ ವಹಿಸಿ 2+15 ಶೇ. ಸೇರಿಸಿ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ಬರುವಂತೆ ಮಾಡಬೇಕು.
ಶರಣ ಬಸಪ್ಪ ಮಮಶೆಟ್ಟಿ,
ರಾಜ್ಯ ಉಪಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ
ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ರೈತರಿಗೆ ಪೂರಕವಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಇದ್ದೇವೆ. ರೈತರಿಗೆ ಬೇಕಾದ ವಿಮೆ ಸೌಲಭ್ಯಗಳನ್ನೂ ಮಾಡುತ್ತಿದ್ದೇವೆ. ರೈತರಿಗೆ ಆತ್ಮಹತ್ಯೆ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಗೆ ಮಾನಸಿಕ ಆರೋಗ್ಯದ ಬಗೆಗೂ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ರೈತರಿಗಾಗಿ ಪರಿಹಾರ, ಅನುದಾನ ಸೇರಿದಂತೆ ಸುಮಾರು 3 ಸಾವಿರ ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.
ಬಿ. ಫೌಝಿಯಾ ತರನ್ನುಮ್
ಜಿಲ್ಲಾಧಿಕಾರಿ, ಕಲಬುರಗಿ
ಮೈಕ್ರೋ ಫೈನಾನ್ಸ್ ಹಾವಳಿ
1992ರಿಂದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸಬ್ಸಿಡಿ ಆಧಾರದಲ್ಲಿ ಸಾಲ ನೀಡಬೇಕೆಂದು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಇನ್ನೂ ಅದಕ್ಕೆ ಸ್ಪಂದನ ಸಿಕ್ಕಿಲ್ಲ. ಇಡೀ ಕಲ್ಯಾಣ ಕರ್ನಾಟಕದಲ್ಲಿ ವರ್ಷಕ್ಕೆ 500ಕ್ಕಿಂತಲೂ ಅಧಿಕ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಮೈಕ್ರೋಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿರುವುದು ಕಾರಣ ಎಂದೇ ಹೇಳಬಹುದು.
ಕೆಲವು ರೈತರು ಸಂಬಂಧಿಕರ ಅಥವಾ ಪರಿಚಯಸ್ಥರ ಜತೆ ಕೈ ಸಾಲ ಮಾಡಿ ವ್ಯವಸಾಯ ಮಾಡಿರುತ್ತಾರೆ. ಆ ಸಂದರ್ಭದಲ್ಲಿ ಆ ರೈತ ಆತ್ಮಹತ್ಯೆ ಮಾಡಿಕೊಂಡರೆ ಅಂಥವರಿಗೆ ಸರಕಾರದಿಂದ ಪರಿಹಾರ ಮೊತ್ತ ಸಿಗಲ್ಲ. ಇದರಿಂದ ರೈತರ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುತ್ತವೆೆ.
ಮಳೆ ಹೆಚ್ಚಾಗಿ ಸುರಿದರೂ, ಸುರಿಯದೆ ಇದ್ದರೂ ಮಳೆಗೆ ಹಾನಿಯಾಗದಂತಹ ಬೆಳೆ ಬೆಳೆಸುವ ಬಗ್ಗೆ ತರಬೇತಿ ನೀಡಬೇಕು. ಮಾವು, ಹಲಸು, ಸೀತಾಫಲದಂತಹ ಕೃಷಿಗಳಿಗೆ ಹೆಚ್ಚಿನ ಮಹತ್ವ ನೀಡಬೇಕು.
ಸಾಮಾಜಿಕ ವಿಭಾಗೀಯ ಅರಣ್ಯ ಇಲಾಖೆಯಲ್ಲಿ ಬೀಜಗಳನ್ನು ನೆಟ್ಟು ಸಸಿಗಳಾಗಿ ಬೆಳೆಸಿ ಅದನ್ನು ರೈತರಿಗೆ ನೀಡಿದರೆ ಬಿತ್ತನೆ ಸಮಯದಲ್ಲಿ ರೈತ ಎದುರಿಸುವ ಸಂಕಷ್ಟಗಳನ್ನು ತಡೆಯಬಹುದು.
ಮೌಲಾ ಮುಲ್ಲಾ
ರಾಜ್ಯಾಧ್ಯಕ್ಷರು, ಅಖಿಲ ಭಾರತ ಕಿಸಾನ್ ಸಭಾ







