ಮುಕ್ತ ವ್ಯಾಪಾರ ಒಪ್ಪಂದ ಕಡಿವಾಣಕ್ಕೆ ರೈತರ ಹೋರಾಟ; 10 ಲಕ್ಷ ಸ್ವಯಂಸೇವಕರ ಸಜ್ಜು

ಸಾಂದರ್ಭಿಕ ಚಿತ್ರ | PTI
ಎಲ್ಲಾ FTA ಗಳನ್ನು ರದ್ದುಗೊಳಿಸುವುದು ಸೇರಿದಂತೆ ತಮ್ಮ ಬೇಡಿಕೆಗಳ ಸನ್ನದುಗಳೊಂದಿಗೆ ದೇಶಾದ್ಯಂತ 100ಕ್ಕೂ ಹೆಚ್ಚು ಸಚಿವರು, ಸಂಸದರು ಮತ್ತು ಶಾಸಕರನ್ನು ರೈತ ನಿಯೋಗಗಳು ಭೇಟಿಯಾಗಿವೆ.
500ಕ್ಕೂ ಅಧಿಕ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (SKM) ಭಾರತ ಇತರ ದೇಶಗಳ ಜೊತೆಗೆ ಸಹಿ ಮಾಡಿರುವ ಮತ್ತು ಸಹಿ ಮಾಡಲು ಪ್ರಸ್ತಾಪಿಸಿರುವ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವ್ಯಾಪಾರ ಒಪ್ಪಂದಗಳನ್ನು ವಿರೋಧಿಸಲು ಒಂದು ಮಿಲಿಯನ್ ಯುವ ಕಿಸಾನ್ ಸ್ವಯಂಸೇವಕರನ್ನು (ರೈತ ಸ್ವಯಂಸೇವಕರು) ಸೇರಿಸಿಕೊಳ್ಳಲು ನಿರ್ಧರಿಸಿದೆ. ಅಂತಹ ಮುಕ್ತ ವ್ಯಾಪಾರ ಒಪ್ಪಂದಗಳ (FTA) ವಿರುದ್ಧ ರೈತರನ್ನು ಜೊತೆಗೂಡಿಸಲು ಸಂಘಟನೆಯು ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಒಂದು ಲಕ್ಷ ಹಳ್ಳಿಗಳಲ್ಲಿ ಕಿಸಾನ್ ಪಂಚಾಯತ್ಗಳನ್ನು ನಡೆಸಲಿದೆ.
ಈ ಬಗ್ಗೆ ಮಾಧ್ಯಮಗಳಿಗೆ ವಿಷಯ ತಿಳಿಸಿರುವ SKM ನಾಯಕರು, ಎಲ್ಲಾ FTA ಗಳನ್ನು ರದ್ದುಗೊಳಿಸುವುದು ಸೇರಿದಂತೆ ತಮ್ಮ ಬೇಡಿಕೆಗಳ ಸನ್ನದುಗಳೊಂದಿಗೆ (charter) ದೇಶಾದ್ಯಂತ 100ಕ್ಕೂ ಹೆಚ್ಚು ಸಚಿವರು, ಸಂಸದರು ಮತ್ತು ಶಾಸಕರನ್ನು ತಮ್ಮ ನಿಯೋಗಗಳು ಭೇಟಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸಭೆ ಕರೆಯುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
“ಪ್ರಧಾನ ಮಂತ್ರಿಗಳ ಕಚೇರಿ ನಮ್ಮ ಪತ್ರವನ್ನು ಸ್ವೀಕರಿಸಿದೆ. ಆದರೆ ಇನ್ನೂ ಅಪಾಯಿಂಟ್ಮೆಂಟ್ ನೀಡಿಲ್ಲ. ಭಾರತದ ಜನಸಂಖ್ಯೆಯ ಶೇ 65ರಷ್ಟು ಇರುವ ರೈತ ಸಮುದಾಯಕ್ಕೆ ಪ್ರಧಾನಿಯವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಭಾರತದ ದೊಡ್ಡ ಸಮುದಾಯದ ಜನರ ಪ್ರತಿನಿಧಿಗಳನ್ನು ಭೇಟಿಯಾಗಲು ಪ್ರಧಾನಿ ಆಸಕ್ತಿ ತೋರಿಸದೆ ಇರುವುದು ಆಘಾತಕಾರಿ. ಆರ್ಎಸ್ಎಸ್-ಬಿಜೆಪಿ ಒಕ್ಕೂಟಕ್ಕೆ ರೈತರ ಕುರಿ ಕಾಳಜಿ ಇಲ್ಲದೆ ಇರುವುದನ್ನು ಇದು ತೋರಿಸುತ್ತದೆ” ಎಂದು SKM ನಾಯಕರು ಅಭಿಪ್ರಾಯಪಟ್ಟಿದ್ದಾರೆ.
“2021ರಲ್ಲಿ ವರ್ಷಪೂರ್ತಿ ನಡೆದ ರೈತರ ಪ್ರತಿಭಟನೆ ಹಿಂತೆಗೆದುಕೊಂಡಾಗ SKM ಗೆ ಲಿಖಿತ ಭರವಸೆ ನೀಡಲಾಗಿತ್ತು. ಆದರೆ ಕೃಷಿ ಸಾಲ ಮನ್ನಾ ಮತ್ತು ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಯಾವುದೂ ಈಡೇರಲಿಲ್ಲ. SKM ಲಖಿಂಪುರ ಖೇರಿ ಹುತಾತ್ಮಕರ ದಿನದಂದು 2026 ಅಕ್ಟೋಬರ್ 3ರಂದು ಒಂದು ಲಕ್ಷ ಹಳ್ಳಿಗಳಲ್ಲಿ ಮಹಾ ಪಂಚಾಯತ್ ನಡೆಸಲಿದೆ. ನಂತರ 2.5 ಲಕ್ಷ ಮಹಿಳಾ ರೈತರು ಸೇರಿದಮತೆ 10 ಲಕ್ಷ ರೈತ ಸ್ವಯಂಸೇವಕರ ಪಟ್ಟಿಯನ್ನು 2026ರ ನವೆಂಬರ್ 26ರಿಂದ ರೈತರ ಹೋರಾಟ ಪುನರಾರಂಭಿಸಲು ನೀಡಲಾಗುವುದು” ಎಂದು ಅವರು ಹೇಳಿದರು.
“SKMನ ರಾಷ್ಟ್ರೀಯ ಮಂಡಳಿ ಮತ್ತು ಸಾಮಾನ್ಯ ಸಭೆ ಅಕ್ಟೋಬರ್ 12ರಂದು ಹರಿಯಾಣದ ಕರ್ನಾಲ್ನಲ್ಲಿ ಸಭೆ ಸೇರಲಿದ್ದು, ಬಿಜೆಪಿ ಆಡಳಿತವು ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದರೆ ನವೆಂಬರ್ 26ರಿಂದ ರೈತರ ಹೋರಾಟವನ್ನು ಪುನರಾರಂಭಿಸುವ ಬಗ್ಗೆ ವಿವರಗಳನ್ನು ರೂಪಿಸಲಿದೆ” ಎಂದು ಅವರು ಹೇಳಿದರು.






