ಹೋಂ ವರ್ಕ್ ಬೇಗ ಆಗುತ್ತದೆ, ಆದರೆ ಪರೀಕ್ಷೆಯಲ್ಲಿ ಕಡಿಮೆ ಅಂಕ: AI ಬಳಕೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಹೊಡೆತ?
► ಸಂಶೋಧನಾ ವರದಿ ಹೇಳಿದ್ದೇನು? ✍️ ಮೊಹಮ್ಮದ್ ಹುಸೇನ್ – Aljazeera. com ವರದಿ

ಸಾಂದರ್ಭಿಕ ಚಿತ್ರ | Photo Credit : magnific.com
ಈ ತಿಂಗಳಿನಲ್ಲಿ ಜಾಗತಿಕವಾಗಿ ಲಕ್ಷಾಂತರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಹೊಸ ಶೈಕ್ಷಣಿಕ ವರ್ಷಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಆದರೆ, ಕೃತಕ ಬುದ್ಧಿಮತ್ತೆಯ (AI) ಆಗಮನವು ವಿದ್ಯಾರ್ಥಿಗಳ ಕಲಿಕೆಯ ವಿಧಾನವನ್ನೇ ಬದಲಾಯಿಸುತ್ತಿದೆ. AI ಚಾಟ್ ಬಾಟ್ ಗಳು ಕೆಲವೇ ಸೆಕೆಂಡುಗಳಲ್ಲಿ ಹೋಮ್ ವರ್ಕ್ ಪೂರ್ಣಗೊಳಿಸುತ್ತಿರುವಾಗ, ಮನೆಗೆಲಸ ನೀಡುವ ಮೂಲ ಉದ್ದೇಶವೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಕಾಡುತ್ತಿದೆ.
ಕೆಲವು ದೇಶಗಳು AI ಬಳಕೆಯನ್ನು ವೇಗವಾಗಿ ಅಳವಡಿಸಿಕೊಂಡಿವೆ. ಚೀನಾದ ಬೀಜಿಂಗ್ ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವರ್ಷಕ್ಕೆ ಕನಿಷ್ಠ ಎಂಟು ಗಂಟೆಗಳ AI ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಇತ್ತ ಗಲ್ಫ್ ರಾಷ್ಟ್ರಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಮತ್ತು ಖತರ್ ದೇಶಗಳು ತಮ್ಮ ಪಠ್ಯಕ್ರಮದಲ್ಲಿ AI ಅನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿವೆ.
AI ಚಾಟ್ ಬಾಟ್ ಗಳು ಕಲಿಕೆಯನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಬಲ್ಲವು. ಆದರೆ, ವಿದ್ಯಾರ್ಥಿಗಳು ಈ ತಂತ್ರಜ್ಞಾನವನ್ನು ಬದಿಗಿಟ್ಟಾಗ ಏನಾಗುತ್ತದೆ? ಕಲಿಕೆಯಲ್ಲಿ ವಿದ್ಯಾರ್ಥಿಗಳ ಸ್ವಂತ ಶ್ರಮ ಎಷ್ಟಿತ್ತು ಮತ್ತು ಯಂತ್ರದ ಸಹಾಯ ಎಷ್ಟಿತ್ತು ಎಂಬುದೇ ಈಗಿನ ಪ್ರಮುಖ ಪ್ರಶ್ನೆ.
►ಹೋಮ್ ವರ್ಕ್ ಬೇಗನೇ ಆಗುತ್ತದೆ, ಆದರೆ ಪರೀಕ್ಷಾ ಫಲಿತಾಂಶ?
ಈ ಕುರಿತು ಅಧ್ಯಯನ ನಡೆಸಲು ಸ್ಟಾಕ್ ಹೋಮ್ ವಿಶ್ವವಿದ್ಯಾಲಯದ ಡೇವಿಡ್ ಸ್ಟ್ರೋಂಬರ್ಗ್, ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ವಿಕ್ಟರ್ ಲೈ ಮತ್ತು ಯಾನ್ ಹುಯಿ ವೂ ಅವರು ಚೀನಾದ 12ರಿಂದ 18 ವರ್ಷ ವಯಸ್ಸಿನ 26,811 ವಿದ್ಯಾರ್ಥಿಗಳನ್ನು 30 ತಿಂಗಳ ಕಾಲ ಗಮನಿಸಿ ಬೃಹತ್ ಸಂಶೋಧನೆಯೊಂದನ್ನು ನಡೆಸಿದ್ದಾರೆ.
ಅವರ ಸಂಶೋಧನಾ ಪ್ರಬಂಧವು ಒಂಬತ್ತು ವಿಷಯಗಳಿಗೆ ಸಂಬಂಧಿಸಿದ ಹೋಮ್ ವರ್ಕ್, ಮಾಸಿಕ ಪರೀಕ್ಷೆಗಳು ಮತ್ತು ಪ್ರಮುಖ ಪ್ರವೇಶ ಪರೀಕ್ಷೆಗಳ ಡೇಟಾಗಳನ್ನು ಒಳಗೊಂಡಿದೆ.
ಈ ಸಂಶೋಧನೆಯ ಫಲಿತಾಂಶಗಳು ಹೋಮ್ ವರ್ಕ್ ಮಾಡುವುದು ಮತ್ತು ಅದರಿಂದ ಕಲಿಯುವುದರ ನಡುವೆ ಇರುವ ದೊಡ್ಡ ವ್ಯತ್ಯಾಸವನ್ನು ಬಹಿರಂಗಪಡಿಸಿವೆ.
ಜನರೇಟಿವ್ AI ಬಳಸಲು ಪ್ರಾರಂಭಿಸಿದ ನಂತರ ವಿದ್ಯಾರ್ಥಿಗಳ ಹೋಮ್ ವರ್ಕ್ ಅಂಕಗಳು ಶೇಕಡಾ 18ರಷ್ಟು ಹೆಚ್ಚಾಗಿವೆ. ಅದೇ ಸಮಯದಲ್ಲಿ ಪ್ರತಿಯೊಂದು ಹೋಮ್ ವರ್ಕ್ ಗೆ ತಗಲುವ ಸರಾಸರಿ ಸಮಯವು 64 ನಿಮಿಷಗಳಿಂದ 45 ನಿಮಿಷಗಳಿಗೆ, ಅಂದರೆ ಶೇಕಡಾ 30ರಷ್ಟು ಕಡಿಮೆಯಾಗಿದೆ.
ಆದರೆ, ಅದೇ ವಿದ್ಯಾರ್ಥಿಗಳು AI ಸಹಾಯವಿಲ್ಲದೆ ಮಾಸಿಕ ಪರೀಕ್ಷೆಗಳನ್ನು ಬರೆದಾಗ, ಆರು ತಿಂಗಳಲ್ಲೇ ಅವರ ಅಂಕಗಳು ಶೇಕಡಾ 20ರಷ್ಟು ಕುಸಿದವು. ಪ್ರಮುಖ ಪ್ರವೇಶ ಪರೀಕ್ಷೆಗಳಲ್ಲಿಯೂ ಅವರ ಸಾಧನೆ ಕಡಿಮೆಯಾಗಿದ್ದು, ಇದರ ಪೂರ್ಣ ಪ್ರಭಾವ ದೀರ್ಘಾವಧಿಯಲ್ಲಿ ಹೊರಬಿದ್ದಿದೆ.
ಎರಡು ವರ್ಷಕ್ಕೂ ಹೆಚ್ಚು ಕಾಲ AI ಬಳಸಿ ಹೋಂ ವರ್ಕ್ ಮಾಡಿದ ವಿದ್ಯಾರ್ಥಿಗಳಲ್ಲಿ ಪ್ರೌಢಶಾಲಾ ಪ್ರವೇಶ ಪರೀಕ್ಷೆಯಾದ ‘ಝೋಂಗ್ಕಾವೊ’ (Zhongkao) ಅಂಕಗಳು ಶೇಕಡಾ 24ರಷ್ಟು ಮತ್ತು ಕಾಲೇಜು ಪ್ರವೇಶ ಪರೀಕ್ಷೆಯಾದ ‘ಗಾವ್ಕಾವೊ’ (Gaokao) ಅಂಕಗಳು ಶೇಕಡಾ 18ರಷ್ಟು ಕಡಿಮೆಯಾಗಿದ್ದವು.
ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯು (OECD) ತನ್ನ 'ಡಿಜಿಟಲ್ ಶಿಕ್ಷಣ ದೃಷ್ಟಿಕೋನ 2026' ವರದಿಯಲ್ಲಿ ಇದೇ ರೀತಿಯ ತೀರ್ಮಾನಕ್ಕೆ ಬಂದಿದೆ. ಜನರೇಟಿವ್ AI ಅನ್ನು ಸ್ಪಷ್ಟವಾದ ಬೋಧನಾ ಉದ್ದೇಶವಿಲ್ಲದೆ ಅಥವಾ ಸೂಕ್ತ ಮಾರ್ಗದರ್ಶನವಿಲ್ಲದೆ ಬಳಸಿದಾಗ, ಕೆಲಸಗಳನ್ನು AIಗೆ ವಹಿಸಿಕೊಡುವುದರಿಂದ ಕೆಲಸದ ವೇಗ ಹೆಚ್ಚಾಗಬಹುದೇ ಹೊರತು ಯಾವುದೇ ನೈಜ ಕಲಿಕೆ ಸಾಧ್ಯವಾಗುವುದಿಲ್ಲ ಎಂದು ವರದಿ ತಿಳಿಸಿದೆ.
AIಗೆ ಹೆಚ್ಚಿನ ಪ್ರಮಾಣದಲ್ಲಿ ಬೌದ್ಧಿಕ ಕೆಲಸವನ್ನು ವಹಿಸಿಕೊಟ್ಟಾಗ ಉಂಟಾಗುವ ಈ ರೀತಿಯ ಪರಿಣಾಮವನ್ನು OECD ವರದಿಯಲ್ಲಿ “metacognitive laziness” (ವಿಚಾರಣಾ ಶಕ್ತಿಯ ಸೋಮಾರಿತನ) ಎಂದು ವಿವರಿಸಲಾಗಿದೆ. OECD ಉಲ್ಲೇಖಿಸಿರುವ ಡ್ರಾಗನ್ ಗಾಸೆವಿಕ್ ಅವರ ವಿಶ್ಲೇಷಣೆಯ ಪ್ರಕಾರ, AIಗೆ ಹೆಚ್ಚು ಬೌದ್ಧಿಕ ಕೆಲಸವನ್ನು ವಹಿಸಿಕೊಟ್ಟಾಗ ವಿದ್ಯಾರ್ಥಿಗಳು ತಮ್ಮದೇ ಆಲೋಚನಾ ಪ್ರಕ್ರಿಯೆಯ ಬಗ್ಗೆ ಕಡಿಮೆ ಚಿಂತಿಸುವ ಅಪಾಯವಿದೆ.
►ಶಾಲಾ ಕಲಿಕೆಗೆ ವಿದ್ಯಾರ್ಥಿಗಳು AI ಅನ್ನು ಹೇಗೆ ಬಳಸುತ್ತಿದ್ದಾರೆ?
ವಿದ್ಯಾರ್ಥಿಗಳು AI ತಂತ್ರಜ್ಞಾನವನ್ನು ಬಳಸುತ್ತಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದಕ್ಕಿಂತ, ಅದನ್ನು ಹೇಗೆ ಬಳಸುತ್ತಿದ್ದಾರೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ.
ವೊಡಾಫೋನ್ ಫೌಂಡೇಶನ್ ಗಾಗಿ ಇಪ್ಸೋಸ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಏಳು ಯುರೋಪಿಯನ್ ದೇಶಗಳ 12ರಿಂದ 17 ವರ್ಷ ವಯಸ್ಸಿನ 7,000 ವಿದ್ಯಾರ್ಥಿಗಳನ್ನು ಶಾಲೆಯ ಹೊರಗೆ ಮತ್ತು ಶಿಕ್ಷಕರ ಮಾರ್ಗದರ್ಶನವಿಲ್ಲದೆ ಅವರು AI ಅನ್ನು ಹೇಗೆ ಬಳಸುತ್ತಾರೆ ಎಂದು ಕೇಳಲಾಗಿತ್ತು.
ಇದರಲ್ಲಿ ಶೇಕಡಾ 56ರಷ್ಟು ವಿದ್ಯಾರ್ಥಿಗಳು ಮಾಹಿತಿ ಪಡೆಯಲು AI ಬಳಸುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಶೇಕಡಾ 45ರಷ್ಟು ವಿದ್ಯಾರ್ಥಿಗಳು ಪದಗಳು ಮತ್ತು ವಿಷಯಗಳ ವಿವರಣೆ ಪಡೆಯಲು ಇದನ್ನು ಬಳಸಿದ್ದಾರೆ. ಆದರೆ ಶೇಕಡಾ 31ರಷ್ಟು ವಿದ್ಯಾರ್ಥಿಗಳು ಹೋಮ್ ವರ್ಕ್ ಮತ್ತು ಕೆಲಸಗಳ ಸಂಪೂರ್ಣ ಉತ್ತರ ಪಡೆಯಲು AI ಬಳಸುತ್ತಿರುವುದಾಗಿ ಹೇಳಿದ್ದಾರೆ.
ಸ್ವತಂತ್ರ ಕಲಿಕೆಗೆ ನೇರವಾಗಿ ಬೆಂಬಲ ನೀಡುವ ರೀತಿಯಲ್ಲಿ AI ಬಳಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಶೇಕಡಾ 29ರಷ್ಟು ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಮಾರ್ಗದರ್ಶನ ಪಡೆಯಲು ಸಂವಾದಾತ್ಮಕ ವಿಷಯಗಳನ್ನು ಬಳಸಿದರೆ, ಕೇವಲ ಶೇಕಡಾ 20ರಷ್ಟು ವಿದ್ಯಾರ್ಥಿಗಳು ವೈಯಕ್ತಿಕ ಕಲಿಕಾ ಯೋಜನೆಗಳನ್ನು ರೂಪಿಸಲು ಮತ್ತು ತಮ್ಮ ಪ್ರಗತಿಯನ್ನು ಗಮನಿಸಲು AI ಬಳಸಿದ್ದಾರೆ.
►ವಿದ್ಯಾರ್ಥಿಗಳ ಜೀವನದ ಮೇಲಾಗುತ್ತಿರುವ AI ಪ್ರಭಾವ
ವಿದ್ಯಾರ್ಥಿಗಳಿಗೆ AI ಕೇವಲ ಶಾಲೆಯ ಕೆಲಸಗಳನ್ನು ಪೂರ್ಣಗೊಳಿಸುವ ಸಾಧನವಾಗಿ ಉಳಿದಿಲ್ಲ. ತಕ್ಷಣದ ನೆರವು ಪಡೆಯುವುದರಿಂದ ಹಿಡಿದು ಮಾತನಾಡಲು ಯಾರನ್ನಾದರೂ ಕಂಡುಕೊಳ್ಳುವವರೆಗೆ, ಇದು ವಿದ್ಯಾರ್ಥಿಗಳ ದಿನನಿತ್ಯದ ಅನುಭವದ ಭಾಗವಾಗುತ್ತಿದೆ.
ಯುಕೆನಲ್ಲಿನ 1,054 ಪೂರ್ಣಾವಧಿ ಪದವಿ ವಿದ್ಯಾರ್ಥಿಗಳನ್ನು ಒಳಗೊಂಡ ಹೆಚ್ಇಪಿಐ/ಕಾರ್ಟೆಕ್ಸ್ ವಿದ್ಯಾರ್ಥಿ ಜನರೇಟಿವ್ AI ಸಮೀಕ್ಷೆ 2026ರ ಪ್ರಕಾರ, ಶೇಕಡಾ 49ರಷ್ಟು ವಿದ್ಯಾರ್ಥಿಗಳು AI ತಮ್ಮ ಶೈಕ್ಷಣಿಕ ಅನುಭವವನ್ನು ಉತ್ತಮಗೊಳಿಸಿದೆ ಎಂದು ನಂಬಿದ್ದಾರೆ. ಸಮಯದ ಉಳಿತಾಯ, ವಿಷಯಗಳ ಉತ್ತಮ ಅರ್ಥೈಸಿಕೊಳ್ಳುವಿಕೆ ಮತ್ತು ತಕ್ಷಣದ ವೈಯಕ್ತಿಕ ಬೆಂಬಲ ಸಿಗುತ್ತಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ಈ ಪ್ರಭಾವವು ಕೇವಲ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಒಂಟಿತನದ ಬಗ್ಗೆ ಕೇಳಲಾಗಿತ್ತು. ಶೇಕಡಾ 59ರಷ್ಟು ವಿದ್ಯಾರ್ಥಿಗಳು AIನಿಂದ ತಮ್ಮ ಒಂಟಿತನದ ಮೇಲೆ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಹೇಳಿದ್ದಾರೆ. ಇನ್ನುಳಿದವರಲ್ಲಿ ಶೇಕಡಾ 21ರಷ್ಟು ವಿದ್ಯಾರ್ಥಿಗಳಿಗೆ ಒಂಟಿತನ ಕಡಿಮೆಯಾದಂತೆ ಅನಿಸಿದರೆ, ಶೇಕಡಾ 20ರಷ್ಟು ವಿದ್ಯಾರ್ಥಿಗಳು AI ಬಳಕೆಯಿಂದ ತಮಗೆ ಒಂಟಿತನ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಸೌಜನ್ಯ: Aljazeera.com






