ಹೆಣ್ಣು ಭ್ರೂಣ ಹತ್ಯೆ: ಮನಸ್ಥಿತಿ ಬದಲಾಗದ ಹೊರತು ಕೃತ್ಯ ನಿಲ್ಲದು

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯಲ್ಲಿ ಭಾರತವು ವಿಶ್ವದ 166 ಸದಸ್ಯ ರಾಷ್ಟ್ರಗಳ ಸಾಲಿನಲ್ಲಿ 112ನೇ ಶ್ರೇಯಾಂಕಕ್ಕೆ ತೃಪ್ತಿಪಡಬೇಕಿದೆ. 2015ರಲ್ಲಿ ರೂಪಿಸಿದ್ದ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಶ್ರೇಯಾಂಕದಲ್ಲಿ 112ನೇ ಸ್ಥಾನದಲ್ಲಿರಲು ಕಾರಣಗಳನ್ನು ಪಟ್ಟಿ ಮಾಡಿದರೆ ಅವುಗಳಲ್ಲಿ ಪ್ರಮುಖವಾಗಿ ಹಸಿವು ಕೊನೆಗೊಳಿಸುವುದು ಮತ್ತು ಆಹಾರ ಭದ್ರತೆ ಸಾಧಿಸುವುದು, ಲಿಂಗಸಮಾನತೆ ಸಾಧಿಸುವುದು ಮೂಲಸೌಕರ್ಯ, ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಗುರಿಗಳು ದೇಶಕ್ಕೆ ಸವಾಲಾಗಿ ಪರಿಣಮಿಸಿದೆ, 2023ರ ಆಗಸ್ಟ್‌ನಲ್ಲಿ ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯ ಅನುಸಾರ 2030ಕ್ಕೆ ಗುರಿ ನಿಗದಿಪಡಿಸಿಕೊಂಡು ರೂಪಿಸಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯಲ್ಲಿ ಭಾರತವು 100ಕ್ಕೆ 63.5 ಅಂಕಗಳನ್ನು ಗಳಿಸಿದೆ. ಅದರಲ್ಲೂ ಲಿಂಗ ಸಮಾನತೆ ಸಾಧಿಸುವಲ್ಲಿ ಸುಧಾರಿಸಿಕೊಳ್ಳಬೇಕಾದ ಅಂಶಗಳನ್ನು ಪಟ್ಟಿ ಮಾಡಿದಾಗ ಭಾರತದಲ್ಲಿ ಮಹಿಳೆಯರ ಮೇಲೆ ಎಸಗಲಾಗುತ್ತಿರುವ ಕೃತ್ಯಗಳ ಪ್ರಮಾಣದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆ ಸಾಧ್ಯವಾಗದಿರುವುದು, ಹೆಣ್ಣು ಮಕ್ಕಳ ಮೇಲೆ ಎಸಗಲಾದ ಅಪರಾಧ ಪ್ರಕರಣಗಳ ಪ್ರಮಾಣದಲ್ಲಿ ಏರಿಕೆಯಾಗಿರುವುದು, ಲಿಂಗಾನುಪಾತದಲ್ಲಿ ರಾಜ್ಯವಾರು ಇರುವ ವ್ಯತ್ಯಾಸ, ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ರೂಪಿಸಿರುವ ಕಾಯ್ದೆ ಕಾನೂನುಗಳ ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿರುವುದು ಕಡಿಮೆ ಶ್ರೇಯಾಂಕ ಗಳಿಸಿರುವುದಕ್ಕೆ ಪ್ರಮುಖ ಕಾರಣವಾಗಿರುವುದು ಕಳವಳಕಾರಿಯಾದ ಅಂಶ.
ಸಾಮಾನ್ಯವಾಗಿ ಲಿಂಗಾನುಪಾತವು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ವಾಸವಾಗಿರುವ ಪ್ರತೀ 1,000 ಪುರುಷರಿಗೆ ಹೋಲಿಸಿದರೆ ಎಷ್ಟು ಮಹಿಳೆಯರಿದ್ದಾರೆ ಎಂಬುದನ್ನು ತಿಳಿಸುತ್ತದೆ. ಆದರೆ ಇದನ್ನು ಎಲ್ಲಾ ಕಾಲಕ್ಕೂ ಎಲ್ಲಾ ಪ್ರದೇಶಗಳಿಗೂ ಸಾಮಾನ್ಯೀಕರಿಸಲು ಸಾಧ್ಯವಾಗುವುದಿಲ್ಲ, ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಲಿಂಗಾನುಪಾತವು ಪ್ರತೀ 1,000 ಪುರುಷರಿಗೆ; 1,020 ಮಹಿಳೆಯರಿದ್ದಾರೆ ಎಂದು ತೋರಿಸುತ್ತದೆ, ಇದು ಭಾರತದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿದ್ದಾರೆ ಎಂಬುದನ್ನು ವಿವರಿಸುತ್ತದೆ, ಆದರೆ ಕಳೆದ ಐದು ವರ್ಷಗಳಲ್ಲಿ ಜನಿಸಿದವರ ಲಿಂಗಾನುಪಾತವು ಪ್ರತೀ 1,000 ಗಂಡು ಮಕ್ಕಳಿಗೆ 943 ಹೆಣ್ಣು ಮಕ್ಕಳಿದ್ದು, ಇದು ಲಿಂಗಾನುಪಾತದಲ್ಲಿ ಸಮಾನತೆ ಸಾಧಿಸಿಲ್ಲವೆಂಬುದನ್ನು ಸೂಚಿಸುತ್ತದೆ. ಇನ್ನ್ನು ಕರ್ನಾಟಕದ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ಪ್ರತೀ 1,000 ಪುರುಷರಿಗೆ 1,034 ಮಹಿಳೆಯರಿದ್ದಾರೆ. ಆದರೆ ಕಳೆದ 2019-2023 ನಡುವಣ ಐದು ವರ್ಷಗಳಲ್ಲಿ ಜನಿಸಿದವರ ಲಿಂಗಾನುಪಾತವು ಪ್ರತೀ 1,000 ಗಂಡುಮಕ್ಕಳಿಗೆ 978 ಹೆಣ್ಣು ಮಕ್ಕಳಿದ್ದಾರೆ ಎಂಬುದನ್ನು ವಿವರಿಸುತ್ತದೆ, ಒಟ್ಟಾರೆ ಕಳೆದ ಐದು ವರ್ಷಗಳಲ್ಲಿ ಜನಿಸಿದ ಒಟ್ಟು ಮಕ್ಕಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಲೆಕ್ಕ ಹಾಕುವುದಾದರೆ ಲಿಂಗ ಅಸಮಾನತೆ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಸರಕಾರಗಳು ಎಷ್ಟೆಲ್ಲಾ ಕಾಯ್ದೆ-ಕಾನೂನುಗಳನ್ನು ರೂಪಿಸಿದ್ದರೂ, ಲಿಂಗತಾರತಮ್ಯವನ್ನು ನಿವಾರಿಸಲು ಎಷ್ಟೆಲ್ಲ ಜಾಗೃತಿ ಅಭಿಯಾನಗಳನ್ನು ಕೈಗೊಂಡರೂ ಹೆಣ್ಣು ಭ್ರೂಣ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣವೆಂಬುದು ತಿಳಿಯುತ್ತಿದ್ದಂತೆ ಭ್ರೂಣ ಹತ್ಯೆಯಂತಹ ಕೃತ್ಯಗಳು ನಿರ್ದಯವಾಗಿ ನಡೆಯುತ್ತಿರುವುದು ನಾಗರಿಕ ಸಮಾಜವನ್ನು ನಾಚಿ ತಲೆ ತಗ್ಗಿಸುವಂತೆ ಮಾಡುತ್ತಿದೆ. ಈ ನೀಚ ಕೃತ್ಯಕ್ಕೆ ವೈದ್ಯಕೀಯ ಲೋಕದಲ್ಲಿ ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಇರುವ ರೋಗವನ್ನು ಪತ್ತೆ ಹಚ್ಚಲು ಆವಿಷ್ಕಾರಗೊಂಡಿರುವ ಒಂದು ವೈಜ್ಞಾನಿಕ ತಂತ್ರಜ್ಞಾನವನ್ನೇ ಮಗುವಿನ ಲಿಂಗಪತ್ತೆಗೆ ಆಯುಧವನ್ನಾಗಿ ಬಳಸಿಕೊಂಡಿರುವುದು ದುರದೃಷ್ಟಕರ. ಇತ್ತೀಚೆಗೆ ಇದೊಂದು ದೊಡ್ಡ ಜಾಲವಾಗಿ ಸಕ್ರಿಯವಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರದಿಯಾಗಿರುವ ಹೆಣ್ಣು ಭ್ರೂಣ ಪತ್ತೆ ಮಾಡುವ ಜಾಲಗಳು, ನವಜಾತ ಶಿಶುಗಳ ಸಾಗಣೆ ಜಾಲಗಳು ಸರಕಾರ ರೂಪಿಸಿರುವ ಕಾಯ್ದೆ-ಕಾನೂನುಗಳ ಬಗ್ಗೆ ತಿಳಿದಿದ್ದರೂ ಈ ಜಾಲಗಳು ಸಕ್ರಿಯವಾಗಿರುವುದನ್ನು ಸರಕಾರ ಗಂಭೀರವಾಗಿ ಚಿಂತಿಸಬೇಕಾದ ಅವಶ್ಯಕತೆ ಇದೆ.
ಲಿಂಗ ಸಮಾನತೆ ಸಾಧಿಸಲು ಇರುವ ಮಾರ್ಗ
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ರೋಗಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಕಾಯ್ದೆ-1994ರ ಜಾರಿಯಲ್ಲಿದ್ದು ಕಾಯ್ದೆಯ ಅನುಸಾರ ಭ್ರೂಣಲಿಂಗ ಪತ್ತೆ ಹಚ್ಚುವುದು ಕಾನೂನು ಬಾಹಿರ ಚಟುವಟಿಕೆ ಮತ್ತು ಕಾನೂನಿನ ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಮಗು ಗರ್ಭದಲ್ಲಿರುವಾಗಲೇ ಅದಕ್ಕಿರುವ ರೋಗವನ್ನು ಪತ್ತೆಹಚ್ಚಲು ಅಂದರೆ ಕೆಲವೊಂದು ವರ್ಣತಂತುಗಳ ವ್ಯತ್ಯಾಸದಿಂದ ಉಂಟಾಗುವ ನ್ಯೂನತೆಗಳನ್ನು, ಆನುವಂಶೀಯ ಹಾಗೂ ಲೈಂಗಿಕ ಸಂಬಂಧಿ ನ್ಯೂನತೆಗಳನ್ನು ಪತ್ತೆಹಚ್ಚಲು ಹಾಗೂ ಮಗುವಿನ ಬೆಳವಣಿಗೆಯಲ್ಲಿರುವ ಅಪಾಯದ ಚಿಹ್ನೆಗಳನ್ನು ಗುರುತಿಸಿ ವೈಜ್ಞಾನಿಕವಾಗಿ ಚಿಕಿತ್ಸೆ ನೀಡಲು, ಅಪಾಯದ ಅಂಚಿನಲ್ಲಿರುವ ತಾಯಿ ಮಗುವಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಿ ತಾಯಿ ಮರಣ ಹಾಗೂ ನವಜಾತ ಶಿಶುಮರಣವನ್ನು ತಡೆಗಟ್ಟುವ ಉದ್ದೇಶದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಈ ತಂತ್ರಜ್ಞಾನವನ್ನು ಬಳಸಲು ಕಾನೂನಿನಲ್ಲಿ ಅವಕಾಶ ಮಾಡಿಕೊಟ್ಟಿದೆ. ಆದರೆ ದೇಶದಲ್ಲಿ ತಾಯಿ-ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಒಬ್ಬ ಗರ್ಭಿಣಿಗೆ 24 ವಾರಗಳು ತುಂಬುವವರೆಗೂ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಅಪಾಯವಾಗುವಂತಹ ಚಿಹ್ನೆಗಳಿದ್ದರೆ ಸಂಬಂಧಪಟ್ಟ ತಜ್ಞವೈದ್ಯರ ಅಥವಾ ಪ್ರಾಧಿಕಾರದ ಸಲಹೆಯಂತೆ ಗರ್ಭಪಾತ ಮಾಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಕಾನೂನಿನಲ್ಲಿರುವ ಈ ಅವಕಾಶವೂ ತಾಯಿಯ ಭ್ರೂಣಕ್ಕೆ 10-12 ವಾರಗಳು ತುಂಬಿದ ಕೂಡಲೇ ಮಗುವಿನ ಭ್ರೂಣ ಪತ್ತೆ ಹಚ್ಚಿ ಅದು ಹೆಣ್ಣು ಶಿಶು ಎಂಬುದು ದೃಢಪಟ್ಟರೆ ಬೆಳೆಯುವ ಪೈರನ್ನು ಮೊಳಕೆಯಲ್ಲೇ ಚಿವುಟುವಂತಹ ಶೋಚನೀಯ ಸ್ಥಿತಿಗೆ ಅವಕಾಶ ಮಾಡಿಕೊಟ್ಟಿರುವುದು ನಮ್ಮ ನಡುವೆ ನಡೆದಿರುವ ಪ್ರಚಲಿತ ವಿದ್ಯಮಾನಗಳೇ ಸಾಕ್ಷಿಯಾಗಿದೆ. ಹಾಗಂತ ಈ ಕಾಯ್ದೆಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲು ಸರಕಾರ ಅವಕಾಶ ಮಾಡಿಕೊಡಬಾರದು. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕಿದೆ. ಈ ಬಗ್ಗೆ ಜನಸಮುದಾಯದಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ. ಈಗಾಗಲೇ ಕಾಯ್ದೆ ಅನುಷ್ಠಾನಗೊಂಡ ನಂತರ ಕಾಯ್ದೆಯ ಕುರಿತು ಜಾಗೃತಿ ಮೂಡಿದಂತೆ ಭ್ರೂಣಹತ್ಯೆ ಹಾಗೂ ಲಿಂಗತಾರತಮ್ಯದಂತಹ ನೀಚಕೃತ್ಯಗಳು ನಿವಾರಣೆಯಾಗುತ್ತಾ ಹೋಗಬೇಕಿತ್ತು, ಆದರೆ ಇತ್ತೀಚಿನ ಬೆಳವಣಿಗೆಗಳು ತದ್ವಿರುದ್ಧವಾಗಿವೆ.
ಹೆಣ್ಣು ಕುಟುಂಬಕ್ಕೆ ಹೊರೆ ಎಂದು ಭಾವಿಸುವ ಪೋಷಕರ ಮನಸ್ಥಿತಿ
ಹೆಣ್ಣು ಮಗು ಬೇಡ ಕುಟುಂಬಕ್ಕೆ ಹೊರೆ ಎಂಬುದಕ್ಕೆ ಅನೇಕ ಕಾರಣಗಳಿವೆ. ಹೆಣ್ಣು ಮಗು ಜನನವಾದರೆ ಅವಳ ವಿವಾಹ ಮಾಡಲು ಅತಿ ಹೆಚ್ಚು ವೆಚ್ಚವಾಗುತ್ತದೆ, ಮದುವೆ ಮಾಡಲು ವರದಕ್ಷಿಣೆ ಹೊಂದಿಸಬೇಕಾಗುತ್ತದೆ ಎಂಬ ಸಾಮಾಜಿಕ ಕಾರಣಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ಗಂಡು ಮಗುವಾದರೆ ವಂಶಾಭಿವೃದ್ಧಿಯಾಗುತ್ತದೆ ನಮ್ಮ ಪೂರ್ವಜರಿಗೆ ಮೋಕ್ಷ ಸಿಕ್ಕಿದಂತಾಗುತ್ತದೆ, ಗಂಡು ಮಕ್ಕಳಾದರೆ ಆಸ್ತಿಗೆ ವಾರಸುದಾರರಾಗುತ್ತಾರೆ ಎಂಬ ಪುತ್ರ ವ್ಯಾಮೋಹ. ತಾನು ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ನನ್ನ ಮಗಳು ಅನುಭವಿಸುವುದು ಬೇಡ ಎಂಬ ತಾಯಿಯ ಯೋಚನೆ ಸಹ ಹೆಣ್ಣು ಮಗುವನ್ನು ಅದರ ಭ್ರೂಣದಲ್ಲಿಯೇ ಹಿಸುಕಿ ಹಾಕಲು ಕಾರಣವಾಗುತ್ತಿವೆ. ಈ ಪ್ರವೃತ್ತಿಯೇ ಹೆಣ್ಣಿನ ಮೇಲೆ ನಿರಂತರವಾಗಿ ನಡೆಯುವ ಶೋಷಣೆ, ಗಂಡು-ಹೆಣ್ಣು ಎಂಬ ಅಸಮಾನತೆ ಹಾಗೂ ಸಮಾಜದಲ್ಲಿ ಲಿಂಗ-ತಾರತಮ್ಯ ಉಲ್ಬಣಗೊಂಡು ರಾಷ್ಟ್ರದ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಅಡ್ಡಿಯುಂಟಾಗಿದೆ.
ಕಾಯ್ದೆಯ ಉಲ್ಲಂಘನೆ ಶಿಕ್ಷಾರ್ಹ ಅಪರಾಧ
ಕಾಯ್ದೆಯ ಅನುಸಾರ ಭ್ರೂಣಲಿಂಗ ಪತ್ತೆ, ಭ್ರೂಣಲಿಂಗ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜಾಹೀರಾತುಗಳನ್ನು ನೀಡುವಂತಿಲ್ಲ, ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿದ್ದಲ್ಲಿ ಮೂರು ವರ್ಷಗಳಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ ರೂ. 10,000ದಿಂದ 50,000ವರೆಗೆ ದಂಡ ವಿಧಿಸಲಾಗುತ್ತದೆ ಹಾಗೂ ಇಲಾಖೆಯಿಂದ ನೀಡಿರುವ ನೋಂದಣಿಯ ಮಾನ್ಯತೆಯನ್ನು ನ್ಯಾಯಾಲಯದಲ್ಲಿ ಅಪರಾಧ ನಿರ್ಣಯವಾಗುವವರೆಗೂ ತಡೆಹಿಡಿಯಲಾಗುವುದು. ಅಪರಾಧ ದೃಢಪಟ್ಟಲ್ಲಿ ರಾಜ್ಯ ವೈದ್ಯಕೀಯ ಮಂಡಳಿಯಿಂದ ಸಂಬಂಧಪಟ್ಟ ವೈದ್ಯರು ವೃತ್ತಿ ನಡೆಸದಂತೆ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಗರ್ಭಿಣಿ ಅಥವಾ ಆಕೆಯ ಪತಿ ಅಥವಾ ಕುಟುಂಬಸ್ಥರು ಭ್ರೂಣಲಿಂಗ ಪತ್ತೆಗೆ ಒತ್ತಾಯಿಸಿದ್ದಲ್ಲಿ ಅಂತಹವರೂ ಈ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ. ಯಾವುದೇ ಪ್ರಕಾರದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಗಳು ಆರೋಗ್ಯ ಇಲ್ಲಾಖೆಯ ಸಂಬಂಧಪಟ್ಟ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ತಪ್ಪಿದ್ದಲ್ಲಿ ಕಾನೂನಿನಡಿ ಶಿಕ್ಷಾರ್ಹ ಅಪರಾಧಕ್ಕೊಳಗಾಗುವರು.
ಜಾಗೃತಿ ಬೇಕು
ಪ್ರಸವ ಪೂರ್ವ ಲಿಂಗಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಕಾಯ್ದೆಯ ಕುರಿತು ಪೋಷಕರಿಗೆ ಜಾಗೃತಿ ಮೂಡಿಸಬೇಕಿದೆ. ಈಗಾಗಲೇ ಪೋಷಕರಲ್ಲಿ ಹೆಣ್ಣುಮಕ್ಕಳ ಜನನದ ನಿರ್ಲಕ್ಷ್ಯದ ಬಗ್ಗೆ ಇರುವ ಸಾಮಾಜಿಕ ನಡವಳಿಕೆ ಮತ್ತು ಪೂರ್ವಾಗ್ರಹ ಪೀಡಿತ ಮನೋಭಾವನೆಯನ್ನು ಬದಲಾಯಿಸಬೇಕಿದೆ. ಈ ಕುರಿತು ವಿವಿಧ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಆಕಾಶವಾಣಿ, ದೂರದರ್ಶನ, ಬೀದಿ ನಾಟಕ, ವಿಚಾರ ಸಂಕೀರಣ ಹಾಗೂ ವಿಚಾರಾಂದೋಲನಗಳ ಮೂಲಕ ಹಮ್ಮಿಕೊಳ್ಳಬೇಕಿದೆ, ಪ್ರಸಕ್ತ ಜನರು ಚಲನಚಿತ್ರ ಹಾಗೂ ದೃಶ್ಯಮಾಧ್ಯಮಗಳಿಗೆ ಹೆಚ್ಚು ಆಕರ್ಷಿತರಾಗಿರುವುದರಿಂದ ಹೆಣ್ಣು ಭ್ರೂಣ ಹತ್ಯೆಯಿಂದ ಉಂಟಾಗುವ ಸಾಮಾಜಿಕ ಲಿಂಗ ಅಸಮತೋಲನದ ಕುರಿತು ಕಿರು ಚಿತ್ರಗಳ ಮೂಲಕ ಅರಿವು ಮೂಡಿಸಬೇಕಾದ ಅಗತ್ಯವಿದೆ. ಆ ಮುಖೇನ ಪ್ರಸಕ್ತ ಇರುವ ಸಾಮಾಜಿಕ ವಾತಾವರಣವನ್ನು ಪರಿವರ್ತಿಸಲು ಸಮಾಜದ ಎಲ್ಲಾ ವಿಭಾಗಗಳನ್ನು ಪಾಲ್ಗೊಳ್ಳುವಂತೆ ಮಾಡಿಕೊಂಡು ಸಮತೋಲಿತ ಲಿಂಗ ಅನುಪಾತವನ್ನು ಸಾಧಿಸಲು ಪ್ರಯತ್ನಿಸಬೇಕಿದೆ. ಜನರ ಮನಸ್ಥಿತಿಯನ್ನು ಬದಲಾಯಿಸದ ಹೊರತು, ಲಿಂಗ ಆಧಾರಿತ ಪೂರ್ವಾಗ್ರಹ ಮನೋಭಾವನೆಯನ್ನು ತೊಡೆದುಹಾಕದ ಹೊರತು ಈ ಜ್ವಲಂತ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ.
ಹೆಣ್ಣು ಭ್ರೂಣಹತ್ಯೆ ತಡೆಯಲು ಹಾಗೂ ಮಹಿಳೆಯರ ಬಗೆಗಿನ ಸಾಮಾಜಿಕ ದೃಷ್ಟಿಕೋನವನ್ನು ಬದಲಾಯಿಸಲು ಮತ್ತು ಸುಧಾರಿಸಲು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಕಲ್ಯಾಣ ಯೋಜನೆಗಳನ್ನು ಪರಿಚಯಿಸಿವೆ. ಬಾಲಿಕ ಸಮೃದ್ಧಿಯಂತಹ ಹೆಣ್ಣು ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಯನ್ನು ಉನ್ನತೀಕರಿಸಲು ರೂಪಿಸಿರುವ ವಿದ್ಯಾರ್ಥಿ ವೇತನ ಯೋಜನೆ, ಹೆಣ್ಣು ಮಕ್ಕಳ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರೂಪಿಸಿರುವ ಜನನಿ ಸುರಕ್ಷಾ ಕಾರ್ಯಕ್ರಮ, ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮ, ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ, ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಹಾಗೂ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ತಾಯಿ ಮತ್ತು ಮಗುವಿನ ಸಮಗ್ರ ಆರೋಗ್ಯ ಸುಧಾರಣೆಗೆ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಅಲ್ಲದೇ ದೇಶಾದ್ಯಂತ ಹೆಣ್ಣು ಮಕ್ಕಳ ಶಿಕ್ಷಣದ ಸುಧಾರಣೆಗಾಗಿ ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲು ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆ ಮುಖ್ಯವಾಗಿ ಕಡಿಮೆ ಲಿಂಗ ಅನುಪಾತ ಹೊಂದಿರುವ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಅನುಷ್ಠಾನಗೊಳಿಸಲಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಪ್ರತ್ಯೇಕವಾಗಿ ಲಿಂಗಾಧಾರಿತ ಆಯವ್ಯಯವನ್ನು ರೂಪಿಸಿ ಮಹಿಳೆಯರ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಸ್ತ್ರೀಶಕ್ತಿ, ಪೋಷಣ್ ಅಭಿಯಾನ, ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಉದ್ಯೋಗಿನಿ, ಶಕ್ತಿಯಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಿ ಪ್ರತೀ ಬಾರಿ ಮಂಡಿಸುವ ಬಜೆಟ್‌ನಲ್ಲಿ ಮಹಿಳಾ ಕೇಂದ್ರಿತ ಯೋಜನೆಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಇಷ್ಟೆಲ್ಲಾ ಯೋಜನೆಗಳ ಗುರಿ ಮತ್ತು ಉದ್ದೇಶ ಒಂದೇ: ಅದು ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಪುರುಷರಂತೆ ಮಹಿಳೆಯರು ಸಮಾನ ಅವಕಾಶಗಳನ್ನು ಪಡೆದು ಲಿಂಗಸಮಾನತೆಯನ್ನು ಸಾಧಿಸುವುದು. ಆ ನಿಟ್ಟಿನಲ್ಲಿ ಪುರುಷರಂತೆ ಹೆಣ್ಣು ಕೂಡ ರಾಷ್ಟ್ರದ ಮತ್ತೊಂದು ಚಕ್ರ ಎಂಬ ಸತ್ಯವನ್ನು ಸಮಾಜಕ್ಕೆ ಅರ್ಥ ಮಾಡಿಸಬೇಕಾದ ಅವಶ್ಯಕತೆ ಇದೆ. ಸಮಾಜದಲ್ಲಿ ಹೆಣ್ಣು ಭ್ರೂಣಹತ್ಯೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುವ ಹೊಣೆ ನಮ್ಮೆಲ್ಲರ ಮೇಲಿದೆ.







