FIFA World Cup 2026 | ಮತ್ತೊಂದು ವಿವಾದಕ್ಕೆ ಸಿಲುಕಿದ FIFA; ನೇರ ಪ್ರಸಾರದ ಪಂದ್ಯದ ವೇಳೆ ವೀಡಿಯೊ ಸಿಬ್ಬಂದಿಯಿಂದ ‘ಒಕೆ’ ಚಿಹ್ನೆಯ ಪ್ರದರ್ಶನ

Screengrab : X
2026ರ ವಿಶ್ವಕಪ್ ವೇಳೆ ವೀಡಿಯೊ ಅಸಿಸ್ಟಂಟ್ ರೆಫ್ರಿಯೊಬ್ಬರು (VAR) ಬಿಳಿಯರ ಪ್ರಾಬಲ್ಯವಾದಿ ಚಳವಳಿಗೆ ಸಂಬಂಧಿಸಿದ ಸನ್ನೆ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಗಳು ವ್ಯಕ್ತವಾದ ಬೆನ್ನಲ್ಲೇ FIFA ಮತ್ತೊಂದು ವಿವಾದಕ್ಕೆ ಸಿಲುಕಿದೆ.
ಜೂನ್ 15ರಂದು ನಡೆದ ಜರ್ಮನಿ ಮತ್ತು ಕ್ಯುರಾಕೊ ನಡುವಿನ ಗ್ರೂಪ್ E ಪಂದ್ಯದ ಕಿಕ್ಆಫ್ ಗೆ ಮೊದಲು ಅಧಿಕಾರಿಗಳನ್ನು ಪರಿಚಯಿಸುವ ವೇಳೆ ಆಸ್ಟ್ರೇಲಿಯದ ರೆಫ್ರಿ ಶಾನ್ ಇವಾನ್ಸ್ ಕ್ಯಾಮೆರಾದ ಕಡೆಗೆ ನೋಡುತ್ತಾ ರಿವರ್ಸ್ ‘ಒಕೆ’ ಕೈ ಚಿಹ್ನೆ ಮಾಡಿರುವುದು ವೈರಲ್ ಆಗಿದೆ.
ನೇರ ಪ್ರಸಾರದ ವೇಳೆ ಅವರು ತೋರಿಸಿದ ಈ ಚಿಹ್ನೆ, ಇತ್ತೀಚೆಗೆ ಕೆಲ ಬಿಳಿಯ ಪ್ರಾಬಲ್ಯವಾದಿ ಗುಂಪುಗಳು ಬಳಸುವ ಸಂಕೇತವನ್ನು ಹೋಲುತ್ತದೆ ಎಂದು ಆನ್ ಲೈನ್ ನಲ್ಲಿ ಚರ್ಚೆಗಳು ನಡೆದಿವೆ.
ಪಂದ್ಯಾವಳಿಯಾದ್ಯಂತ ತಾರತಮ್ಯ ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ FIFA ಒತ್ತಿ ಹೇಳುತ್ತಿರುವ ಸಂದರ್ಭದಲ್ಲೇ ಈ ವಿವಾದ ಸೃಷ್ಟಿಯಾಗಿದೆ. FIFA ಆಡಳಿತ ಮಂಡಳಿ ಫುಟ್ಬಾಲ್ನಲ್ಲಿ ಜನಾಂಗೀಯತೆ, ದ್ವೇಷ ಭಾಷಣ ಮತ್ತು ಉಗ್ರವಾದವನ್ನು ವಿರೋಧಿಸುವುದಾಗಿ ಪದೇಪದೇ ಪ್ರತಿಜ್ಞೆ ಮಾಡುತ್ತಾ ಬಂದಿದೆ. ಆದರೆ ಇದೀಗ ರೆಫ್ರಿಯಿಂದ ಪ್ರದರ್ಶಿಸಲಾದ ‘ಒಕೆ’ ಚಿಹ್ನೆ ಹೊಸ ವಿವಾದಕ್ಕೆ ಕಾರಣವಾಗಿದೆ.
Australian Shaun Evans just pulled the move of all moves from the VAR room at the World Cup pic.twitter.com/0HK0dWrE11
— Matt Vandenberg (@M1D3V) June 15, 2026
“ನಾನು ಸಾಮಾನ್ಯವಾಗಿ ವಿವಾದಾತ್ಮಕ ವಿಷಯಗಳನ್ನು ಪೋಸ್ಟ್ ಮಾಡುವುದಿಲ್ಲ. ಆದರೆ ಇದು ಸ್ವೀಕಾರಾರ್ಹವಲ್ಲ” ಎಂದು ಒಬ್ಬ ಬಳಕೆದಾರ FIFAಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಆದರೆ ಎಲ್ಲರೂ ಇದನ್ನು ಬಿಳಿಯರ ಪ್ರಾಬಲ್ಯದ ಸಂಕೇತ ಎಂದು ಒಪ್ಪಿಲ್ಲ. ಆಸ್ಟ್ರೇಲಿಯದ ಸಾಮಾಜಿಕ ಮಾಧ್ಯಮ ಬಳಕೆದಾರರ ಪ್ರಕಾರ ಈ ಚಿಹ್ನೆ ‘ಸರ್ಕಲ್ ಗೇಮ್’ ಎಂಬ ಜನಪ್ರಿಯ ತಮಾಷೆಯ ಆಟವನ್ನು ಹೋಲುತ್ತದೆ. ಶಾಲೆಗಳಲ್ಲಿ ಆರಂಭವಾದ ಈ ಸಂಕೇತ ನಂತರ ಮುಖ್ಯವಾಹಿನಿಯ ಸಂಸ್ಕೃತಿಯಲ್ಲಿಯೂ ಜನಪ್ರಿಯವಾಗಿದೆ. ಈ ಆಟದಲ್ಲಿ ವ್ಯಕ್ತಿಯೊಬ್ಬರು ಬೆರಳುಗಳಿಂದ ವೃತ್ತಾಕಾರ ರೂಪಿಸಿ ಅದನ್ನು ಸೊಂಟದ ಕೆಳಭಾಗದಲ್ಲಿ ಹಿಡಿದು ತೋರಿಸುತ್ತಾರೆ. ಯಾರಾದರೂ ಅದನ್ನು ನೋಡಿದರೆ ತಮಾಷೆಗೆ ಗುರಿಯಾಗುತ್ತಾರೆ.
ಆದರೆ ತಾರತಮ್ಯ ವಿರೋಧಿ ಸಂಘಟನೆ ಫೇರ್ ನೆಟ್ವರ್ಕ್ ಮಾತ್ರ ಇವಾನ್ಸ್ ಅವರನ್ನು ವಿಶ್ವಕಪ್ ಸಿಬ್ಬಂದಿಗಳ ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದೆ.
“ಇದು ಬಿಳಿಯರ ಶಕ್ತಿಯ ಸಂಕೇತ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ವೀಡಿಯೊ ರೆಫ್ರಿ ಯಾಕೆ ಈ ಸಂಕೇತ ತೋರಿಸಬೇಕು? ಇದು ನಿಯೋ-ನಾಜಿ ಚಿಹ್ನೆಯನ್ನು ಪ್ರಚಾರ ಮಾಡುವಂತೆಯೇ ಆಗಿದೆ” ಎಂದು ಸಂಘಟನೆ ಹೇಳಿದೆ.
ಈ ವಿವಾದದ ಕುರಿತು FIFA ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.






