ಜಗತ್ತಿನ ಸಂತುಷ್ಟ ದೇಶ ಫಿನ್ಲ್ಯಾಂಡ್ಗೆ ಉಚಿತ ಬೇಸಗೆ ಪ್ರವಾಸ; ಷರತ್ತುಗಳೇನು?

Image source: @ourfinland/Instagram
ಫಿನ್ಲ್ಯಾಂಡ್ ದೇಶದ ಅಧಿಕೃತ ಪ್ರವಾಸೋದ್ಯಮ ವೆಬ್ಸೈಟ್ ಪ್ರವಾಸಿಗರನ್ನು ಫಿನ್ಲ್ಯಾಂಡ್ನ ಜೀವನಶೈಲಿಯ ಅನುಭವ ಪಡೆಯಲು ಆಹ್ವಾನಿಸುತ್ತಿದೆ.
ಜಗತ್ತಿನ ಬಹಳ ಸಂತುಷ್ಟ ರಾಷ್ಟ್ರವಾದ ಫಿನ್ಲ್ಯಾಂಡ್ಗೆ ಹೋಗುವುದು ಕನಸಿಗಿಂತ ಕಡಿಮೆಯೇನೂ ಇಲ್ಲ. ಸಾಂತಾ ಕ್ಲಾಸ್ ಗ್ರಾಮದ ಹಿಮ ತುಂಬಿದ ಭೂ ಪ್ರದೇಶದಿಂದ ಆರಂಭಿಸಿ ಉತ್ತರದ ಲೇಕ್ಲ್ಯಾಂಡ್ ಪ್ರದೇಶದ ಬೆಳಕಿನ ವೈಭವಗಳು ಸೇರಿದಂತೆ ದೇಶದಲ್ಲಿ ಪ್ರವಾಸೋದ್ಯಮಕ್ಕೆ ವ್ಯಾಪಕ ಅವಕಾಶಗಳಿವೆ.
ಇದೀಗ ಫಿನ್ಲ್ಯಾಂಡ್ ತನ್ನ ಪ್ರಾಕೃತಿಕ ಸೌಂದರ್ಯದ ಹೆಮ್ಮೆಯನ್ನು ಆಚರಿಸಲು “ಫಿನ್ಲ್ಯಾಂಡ್ಗೆ ಭೇಟಿ ಕೊಡಿ” ಮತ್ತು ಫಿನ್ ಜನರಂತೆ ಚಿಲ್ ಮಾಡಿ (ಸಂತುಷ್ಟರಾಗಿರಿ) ಎಂದು ತೋರಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ದೇಶದ ಅಧಿಕೃತ ಪ್ರವಾಸೋದ್ಯಮ ವೆಬ್ಸೈಟ್ ಜನರನ್ನು ಫಿನ್ಲ್ಯಾಂಡ್ನ ಜೀವನಶೈಲಿಯ ಅನುಭವ ಪಡೆಯಲು ಆಹ್ವಾನಿಸುತ್ತಿದೆ. ಏಳು ದಿನಗಳ ರಜಾ ಸಮಯವನ್ನು ಫಿನ್ಲ್ಯಾಂಡ್ನಲ್ಲಿ ಉಚಿತವಾಗಿ ಸಂಭ್ರಮಿಸಬಹುದು. ಅದಕ್ಕಾಗಿ ಕೆಲವು ಷರತ್ತುಗಳನ್ನು ಪೂರೈಸಬೇಕಿದೆ.
“ಜಗತ್ತಿನ ಸಂತುಷ್ಟ ದೇಶಕ್ಕೆ ಪ್ರವಾಸ ಮಾಡಿ. ಜಗತ್ತಿನ ಅತಿ ತಂಪಾದ ಸರೋವರವಾದ ಫಿನಿಶ್ ಲೇಕ್ಲ್ಯಾಂಡ್ಗೆ ಆಗಮಿಸಿ ಜೂನ್ನಲ್ಲಿ ನಿಮ್ಮ ಸಂತೋಷವನ್ನು ಕಂಡುಕೊಳ್ಳಿ. ಯುರೋಪ್ನ ಅತಿ ದೊಡ್ಡ ಸರೋವರ ಜಿಲ್ಲೆ ಫಿನಿಶ್ ಲೇಕ್ಲ್ಯಾಂಡ್” ಎಂದು ವೆಬ್ಸೈಟ್ ಹೇಳಿದೆ.
ಈ ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಆಯ್ದ ಗುಂಪನ್ನು ಫಿನಿಶ್ ಲೇಕ್ಲ್ಯಾಂಡ್ನಲ್ಲಿ ಒಂದು ವಾರ ಕಳೆಯಲು ಆಹ್ವಾನಿಸಲಾಗಿದೆ. ಫಿನಿಶ್ ಲೇಕ್ಲ್ಯಾಂಡ್ ವಿಶಾಲವಾದ ದೃಶ್ಯ ಸೌಂದರ್ಯಕ್ಕೆ ಹೆಸರಾದ ಪ್ರದೇಶ. ಹೊಳೆಯುವ ಸರೋವರಗಳು, ದಟ್ಟ ಕಾಡುಗಳು ಮತ್ತು ಭೂ ದೃಶ್ಯದಾದ್ಯಂತ ಅಂತ್ಯವಿಲ್ಲದೆ ಹರಡಿರುವ ಬೆಟ್ಟಗಳು!
“ಸಂತೋಷದ ರಹಸ್ಯವನ್ನು ಹುಡುಕುತ್ತಾ ಫಿನ್ಲ್ಯಾಂಡ್ಗೆ ಅಂತಾರಾಷ್ಟ್ರೀಯ ಪ್ರವಾಸಿಗರು ಹೆಚ್ಚು ಆಗಮಿಸುತ್ತಿದ್ದಾರೆ. ಆದರೆ ಲೇಕ್ಲ್ಯಾಂಡ್ ಇನ್ನೂ ಅನೇಕರು ಪ್ರಯಾಣಿಸದೆ ಇರುವ ರತ್ನ. ಫಿನ್ಲ್ಯಾಂಡ್ ಜನರು ನಿಜವಾದ ವಿಶ್ರಾಂತಿ ಬಯಸಿದಾಗ ಹೋಗುವ ಪ್ರದೇಶವಿದು. ದೈನಂದಿನ ಗದ್ದಲದಿಂದ ದೂರವಿರಲು ಬಯಸುವ ಯಾರಿಗೇ ಆದರೂ ಸೂಕ್ತ ತಾಣ” ಎಂದು ಫಿನ್ಲ್ಯಾಂಡ್ನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಭಿಯಾನದಲ್ಲಿ ಫಿನ್ಲ್ಯಾಂಡ್ನ ಬೇಸಗೆಯ ಸಾರವನ್ನು ಸೆರೆಹಿಡಿಯುವ ವೀಡಿಯೋ ಕೂಡ ನೀಡಲಾಗಿದೆ. ಸ್ಥಳೀಯರು ಬೇಸಗೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ವೀಡಿಯೋ ವಿವರಿಸುತ್ತದೆ. “ಫಿನ್ಲ್ಯಾಂಡ್ ವಿಶ್ವದ ಸಂತುಷ್ಟ ದೇಶ. ನಮಗೆ ನಾಲ್ಕು ಋತುಗಳಿವೆ. ಅವೆಲ್ಲವನ್ನೂ ನಾವು ಪ್ರೀತಿಸುತ್ತೇವೆ. ಆದರೆ ಅತಿ ಪ್ರಿಯವಾದುದು ಬೇಸಿಗೆ. ಏಕೆಂದರೆ ಬೇಸಗೆ ರಜೆಯನ್ನು ಹೊಂದಿರುವ ಅತ್ಯುತ್ತಮ ಸಮಯ. ಬೇಸಗೆ ಆರಂಭವಾಗುತ್ತಿದ್ದಂತೆ ಸಂತೋಷ ಮತ್ತು ನೈಸರ್ಗಿಕ ಹರಿವನ್ನು ಕಾಣುತ್ತೇವೆ. ತಡವಾಗಿ ಏಳುತ್ತೇವೆ ಮತ್ತು ಬೈಕ್ ಅಥವಾ ಚಾರಣಕ್ಕೆ ಹೊರ ಹೋಗುತ್ತೇವೆ. ಸ್ನೇಹಿತರ ಮನೆಗೆ ಭೇಟಿ ನೀಡುತ್ತೇವೆ. ಗ್ರಿಲ್ ಮಾಡುತ್ತೇವೆ ಮತ್ತು ಸೋನಾ ಮತ್ತು ಸರೋವರದ ಭೇಟಿಯ ನಂತರ ವಿಶ್ರಾಂತಿ ಪಡೆಯುತ್ತೇವೆ” ಎಂದು ವೆಬ್ಸೈಟ್ನ ಜಾಹೀರಾತು ಹೇಳಿದೆ.
ಫಿನ್ಲ್ಯಾಂಡ್ನ ಉಚಿತ ವಾರದ ಪ್ರವಾಸಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?
ಜಾಗತಿಕವಾಗಿ ಎಲ್ಲರಿಗೂ 7 ದಿನಗಳ ಜೂನ್ ಸವಾಲು ಅನ್ವಯಿಸುತ್ತದೆ. ಆಸಕ್ತ ಭಾಗವಹಿಸುವವರು ಎರಡು ಹಂತಗಳನ್ನು ಪೂರೈಸಬೇಕು. ಮೊದಲನೆಯದು ಇನ್ಸ್ಟಾಗ್ರಾಂ ಅಥವಾ ಟಿಕ್ ಟಾಕ್ ನಲ್ಲಿ ಅರ್ಜಿದಾರರು ತಮ್ಮ ಸಂಗಾತಿ ಜೊತೆಗೆ “ಲೇಕ್ಲ್ಯಾಂಡ್ನಲ್ಲಿ ಫಿನಿಶ್ ಬೇಸಗೆಯ ರಜಾವನ್ನು ಹೇಗೆ ಕಲ್ಪಿಸಿಕೊಳ್ಳುತ್ತೀರಿ” ಎಂದು ವೀಡಿಯೋ ಮಾಡಬೇಕು. ಎರಡನೆಯದಾಗಿ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಅರ್ಜಿಯನ್ನು ಪೂರ್ಣಗೊಳಿಸಬೇಕು. ಲಿಂಕ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕು.
ಅರ್ಜಿದಾರರು ಯಾರನ್ನು ಬೇಕಾದರೂ ಜೊತೆಗಾರರಾಗಿ ಆರಿಸಬಹುದು. ಸ್ನೇಹಿತರು, ಕುಟುಂಬದ ಸದಸ್ಯ ಅಥವಾ ನೆರೆಹೊರೆಯವರು ಹೀಗೆ ಆರಿಸಿಕೊಳ್ಳಬಹುದು. 18 ವರ್ಷದ ಮೇಲಿನವರಿಗೆ ಮಾತ್ರ ಅವಕಾಶ. 2026 ಮಾರ್ಚ್ 29ರ ಮಧ್ಯಾಹ್ನ 12 ಗಂಟೆಯ ಒಳಗೆ ಪೋಸ್ಟ್ ಮಾಡಿರಬೇಕು.







