ಕೀಲು ನೋವು ಅಥವಾ ಸಂಧಿವಾತ; ಮೂಳೆ ತಜ್ಞರು ಹಂಚಿಕೊಂಡಿರುವ 5 ಎಚ್ಚರಿಕೆಯ ಚಿಹ್ನೆಗಳು ಯಾವುವು?

ಸಾಂದರ್ಭಿಕ ಚಿತ್ರ (Photo: News18)
ಸಂಧಿವಾತವು ಪದೇಪದೆ ನೋವು ಮತ್ತು ಬಿಗಿತವನ್ನು ಉಂಟುಮಾಡುತ್ತದೆ. ಯಾವ ಚಿಹ್ನೆಗಳನ್ನು ಗಮನಿಸಬೇಕು ಎಂದು ತಿಳಿದುಕೊಳ್ಳುವುದು ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಸಹಾಯವಾಗುತ್ತದೆ.
ಕೆಲವೊಮ್ಮೆ ಕೀಲು ನೋವು ಕಾಣಿಸಿಕೊಳ್ಳುವುದು ಮತ್ತು ಸಂಧಿವಾತದ ಸ್ಥಿತಿಯ ನಡುವೆ ಬಹಳ ವ್ಯತ್ಯಾಸವಿದೆ. ದೈಹಿಕ ಒತ್ತಡದ ನಂತರ ಕೀಲು ನೋವು ಸಂಭವಿಸಬಹುದು. ಅದನ್ನು ವಯಸ್ಸಿಗನುಗುಣವಾದ ಸಾಮಾನ್ಯ ಸ್ಥಿತಿ ಎಂದು ಪರಿಗಣಿಸಬಹುದು. ಆದರೆ, ಅದು ಸಂಧಿವಾತವೂ ಆಗಿರಬಹುದು. ವಾಸ್ತವದಲ್ಲಿ ಸಂಧಿವಾತವೆಂದರೆ ಕೀಲುಗಳ ಮೇಲೆ ಪರಿಣಾಮ ಬೀರುವ ಉರಿಯೂತದ ಸ್ಥಿತಿಗಳ ಗುಂಪು. ಇದು ಪದೇಪದೆ ನೋವು ಮತ್ತು ಬಿಗಿತವನ್ನು ಉಂಟುಮಾಡುತ್ತದೆ. ಯಾವ ಚಿಹ್ನೆಗಳನ್ನು ಗಮನಿಸಬೇಕು ಎಂದು ತಿಳಿದುಕೊಳ್ಳುವುದು ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಸಹಾಯವಾಗುತ್ತದೆ.
ಬೆಂಗಳೂರಿನ ವರ್ತೂರು ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಮೂಳೆ ಶಸ್ತ್ರಚಿಕಿತ್ಸಕ ಸಲಹೆಗಾರರಾಗಿರುವ ಡಾ. ರಾಜೇಶ್ ಶ್ರೀನಿವಾಸನ್ ಅವರು ಮೂಳೆ ನೋವನ್ನು ಸಾಮಾನ್ಯ ನೋವೆಂದು ಅಲಕ್ಷಿಸಲಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಭಾರತೀಯ ಮನೆಗಳಲ್ಲಿ ಕೀಲು ನೋವು ಬಂದ ತಕ್ಷಣ ವಯಸ್ಸಾಗಿದೆ, ಅದು ಸರಿಹೋಗುತ್ತದೆ ಎಂದು ಸುಮ್ಮನಾಗುತ್ತಾರೆ. ಆದರೆ, ಕೆಲವೊಮ್ಮೆ ಸಂಧಿವಾತವನ್ನು ನಿರ್ಲಕ್ಷಿಸುವುದರಿಂದಲೇ ಜೀವನಪರ್ಯಂತ ಕೀಲುಗಳಿಗೆ ಹಾನಿಯಾದಂತಾಗುತ್ತದೆ” ಎನ್ನುತ್ತಾರೆ ರಾಜೇಶ್ ಶ್ರೀನಿವಾಸನ್.
ಎಲ್ಲಕ್ಕಿಂತ ಹೆಚ್ಚಾಗಿ, ತಜ್ಞರು ಹೇಳಿರುವ ಪ್ರಕಾರ, ಸಂಧಿವಾತದ ಸಮಸ್ಯೆ ಭಾರತದಲ್ಲಿ ವ್ಯಾಪಕವಾಗಿದೆ. ಭಾರತದಲ್ಲಿ ಸುಮಾರು ಶೇ. 22ರಿಂದ 39ರಷ್ಟು ಮಂದಿಯಲ್ಲಿ ಅಸ್ಥಿಸಂಧಿವಾತ ವರದಿಯಾಗಿದೆ. ಆದರೆ, ರುಮಟಾಯ್ಡ್ ಸಂಧಿವಾತವು ಜನಸಂಖ್ಯೆಯ ಶೇ. 0.5ರಿಂದ ಶೇ. 1ರಷ್ಟು ಮಂದಿಯ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ, ರುಮಟಾಯ್ಡ್ ಸಂಧಿವಾತದಿಂದ ಮಹಿಳೆಯರು ಹೆಚ್ಚಾಗಿ ಬಾಧಿತರಾಗುತ್ತಾರೆ.
ತಜ್ಞರು ಮುಂದಿಟ್ಟಿರುವ ಈ ಚಿಹ್ನೆಗಳನ್ನು ಅಲಕ್ಷಿಸಬೇಡಿ:
1. ವಾರಗಳವರೆಗೆ ಇದ್ದು ಮರೆಯಾಗದ ನೋವು
ದೀರ್ಘ ನಡಿಗೆಯ ನಂತರ ಕಾಣಿಸಿಕೊಳ್ಳುವ ಸಾಮಾನ್ಯ ನೋವು ಕೆಲವು ದಿನಗಳಲ್ಲಿ ಕಡಿಮೆಯಾಗುತ್ತದೆ. ನಿಮ್ಮ ನೋವು ಮೂರು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದಲ್ಲಿ ಪರೀಕ್ಷಿಸಿಕೊಳ್ಳಬೇಕಾಗುತ್ತದೆ.
2. ಬೆಳಿಗ್ಗೆ ದೀರ್ಘಕಾಲ ಉಳಿಯುವ ಬಿಗಿತ
ನಿಮ್ಮ ಬೆರಳುಗಳು ಅಥವಾ ಮೊಣಕಾಲುಗಳಲ್ಲಿ ಎಚ್ಚರವಾದ ನಂತರ 30 ನಿಮಿಷಗಳಿಗಿಂತ ಹೆಚ್ಚು ಕಾಲ ಬಿಗಿತ ಉಳಿದರೆ, ಅದು ಉರಿಯೂತದ ಸಂಧಿವಾತದ ಸಂಕೇತವಾಗಿರಬಹುದು. ಸಾಮಾನ್ಯ ಬಿಗಿತವು ಕೆಲವು ನಿಮಿಷಗಳಲ್ಲಿ ಕಡಿಮೆಯಾಗುತ್ತದೆ.
3. ಊತ, ಉಷ್ಣ ಅಥವಾ ಕೆಂಪಾಗುವುದು
ಕೀಲು ಊದಿಕೊಂಡಿದ್ದರೆ ಅಥವಾ ಬಿಸಿಯಾಗಿದ್ದರೆ, ಅದಕ್ಕೆ ಕೇವಲ ದಣಿವು ಕಾರಣವಾಗಿರಲಿಕ್ಕಿಲ್ಲ. ಅದು ಉರಿಯೂತದ ಲಕ್ಷಣವಾಗಿರಬಹುದು.
4. ಸಣ್ಣ ಕೀಲುಗಳಲ್ಲಿ ಎರಡೂ ಬದಿಗಳಲ್ಲಿ ನೋವು
ರುಮಟಾಯ್ಡ್ ಸಂಧಿವಾತವು ಸಾಮಾನ್ಯವಾಗಿ ಎರಡೂ ಕೈಗಳ ಅಥವಾ ಎರಡೂ ಪಾದಗಳ ಮುಷ್ಟಿ ಮತ್ತು ಮಣಿಕಟ್ಟುಗಳಂತಹ ಸಣ್ಣ ಕೀಲುಗಳ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತದೆ. ಸರಳವಾದ ಸೆಳೆತವು ಸಾಮಾನ್ಯವಾಗಿ ಒಂದು ಬದಿಯಲ್ಲಿ ಮಾತ್ರ ನೋವನ್ನು ಉಂಟುಮಾಡುತ್ತದೆ.
5. ಆಯಾಸ, ಜ್ವರ ಅಥವಾ ರಾತ್ರಿ ನೋವು
ನಿದ್ರೆ ಕಡಿಮೆಯಾದ ಅನುಭವ, ಅಲ್ಪ ಪ್ರಮಾಣದ ಜ್ವರ ಅಥವಾ ರಾತ್ರಿಯಲ್ಲಿ ಕೀಲು ನೋವಿನಿಂದ ಎಚ್ಚರವಾಗುತ್ತಿದ್ದರೆ, ಸಮಸ್ಯೆ ಕೇವಲ ಕೀಲುಗಳಲ್ಲಿ ಮಾತ್ರವಲ್ಲದೆ ಇಡೀ ದೇಹದ ಮೇಲೂ ಪರಿಣಾಮ ಬೀರುತ್ತಿರಬಹುದು.
ಇಂತಹ ಸಂದರ್ಭದಲ್ಲಿ ತಿಂಗಳುಗಟ್ಟಲೆ ನೋವು ನಿವಾರಕಗಳು, ಎಣ್ಣೆ ಮಸಾಜ್ ಗಳು ಅಥವಾ ಮನೆಮದ್ದುಗಳನ್ನು ಅವಲಂಬಿಸುವ ಬದಲು ವೈದ್ಯರನ್ನು ಭೇಟಿಯಾಗುವಂತೆ ತಜ್ಞರು ಶಿಫಾರಸು ಮಾಡಿದ್ದಾರೆ. ಮೂಳೆ ತಜ್ಞರು ಅಥವಾ ಸಂಧಿವಾತ ತಜ್ಞರು ರೋಗಲಕ್ಷಣಗಳನ್ನು ನಿರ್ಣಯಿಸಬಹುದು. ಅಗತ್ಯವಿದ್ದರೆ, ಕೀಲು ನೋವಿಗೆ ಕಾರಣವನ್ನು ಪತ್ತೆಹಚ್ಚಲು ಎಕ್ಸ್-ರೇ ಮತ್ತು ರಕ್ತ ಪರೀಕ್ಷೆಗಳನ್ನು ಶಿಫಾರಸು ಮಾಡಬಹುದು.






