ಬೀದಿಬದಿಯ ಆಹಾರ ತಟ್ಟೆಯಾದ ಬ್ಯಾಂಕ್ ಗ್ರಾಹಕರ ವಿವರಗಳು!

Photo Credit : @moronhumor/X
ಭಾರತದಲ್ಲಿ ಬ್ಯಾಂಕ್ ದಾಖಲೆಗಳು ರಸ್ತೆಬದಿಯ ಆಹಾರ ತಟ್ಟೆಗಳಾಗಿ ಮರುಬಳಕೆ ಮಾಡುತ್ತಿರುವ ಚಿತ್ರವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಬಳಕೆದಾರರ ನಡುವೆ ಗೌಪ್ಯತೆ ಮತ್ತು ಕಾಗದ ವಿಲೇವಾರಿ ಕುರಿತ ಚರ್ಚಗೆ ಕಾರಣವಾಗಿದೆ
ರಸ್ತೆಬದಿಯಲ್ಲಿ ಆಹಾರ ನೀಡಿದ ತಟ್ಟೆಯಲ್ಲಿ ಬ್ಯಾಂಕ್ ಗ್ರಾಹಕರ ವಿವರಗಳಿರುವುದನ್ನು ಫೋಟೋ ಸಮೇತ ತೋರಿಸಿರುವ ಪೋಸ್ಟ್ ಒಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದ ಬಳಕೆದಾರರು ಭಾರತದಲ್ಲಿ ಡೇಟಾ ಗೌಪ್ಯತೆ ಬಗ್ಗೆ ಕಳವಳ ವ್ಯಕ್ತಪಡಿಸಲು ಕಾರಣವಾಗಿದೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ @moronhumor ಎಂದು ಪ್ರೊಫೈಲ್ ಹೊಂದಿರುವ ವ್ಯಕ್ತಿ ಈ ವೈರಲ್ ಪೋಸ್ಟ್ ಮಾಡಿದ್ದಾರೆ. “ಭಾರತದಲ್ಲಿ ನಿಮ್ಮ ಖಾಸಗಿ ಮಾಹಿತಿಗಳ ಗೌಪ್ಯತೆ ನಿಮ್ಮದೇ ಕೈಯಲ್ಲಿದೆ” ಎಂದು ಅವರು ಫೋಟೋ ಸಮೇತ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಪೋಸ್ಟ್ ನಲ್ಲಿರುವ ಫೋಟೋದಲ್ಲಿರುವ ಪೇಪರ್ ಪ್ಲೇಟ್ ಅನ್ನು ಬ್ಯಾಂಕ್ ನ ಗ್ರಾಹಕರ ವಿವರಗಳಿರುವ ಕಾಗದದಿಂದ ತಯಾರಿಸಲಾಗಿತ್ತು! ಈ ಫೋಸ್ಟ್ ನಲ್ಲಿರುವ ಮಾಹಿತಿ ಬ್ಯಾಂಕ್ ಒಂದರ ಗ್ರಾಹಕರಿಗೆ ಸೇರಿದೆ. ಅನೇಕ ಬಳಕೆದಾರರು ಬ್ಯಾಂಕ್ ನ ಅಧಿಕೃತ ಇಮೇಲ್ ಐಡಿಗೆ ಟ್ಯಾಗ್ ಮಾಡಿ ಈ ಬಗ್ಗೆ ಮಾಹಿತಿ ಯಾಚಿಸಿದ್ದಾರೆ. ಆದರೆ ಬ್ಯಾಂಕ್ ಟ್ವಿಟರ್ ಮೂಲಕ ಯಾವುದೇ ಪ್ರತಿಸ್ಪಂದನೆ ನೀಡಿಲ್ಲ.
ಬಳಕೆದಾರರೊಬ್ಬರು “ಬ್ಯಾಂಕ್ ಇದಕ್ಕೆ ಉತ್ತರ ಕೊಡಬೇಕು ಮತ್ತು ಗ್ರಾಹಕರ ವಿವರಗಳಿರುವ ಕಾಗದಗಳನ್ನು ನವೀಕೃತ ಕಾಗದವಾಗಿ ಬಳಸಲು ರಸ್ತೆಬದಿಯ ಆಹಾರ ವ್ಯಾಪಾರಿಗಳಿಗೆ ನೀಡಿರುವುದು ಏಕೆ? ಇಷ್ಟು ದೊಡ್ಡ ಸಂಸ್ಥೆಗೆ ಅಂತಹ ಕಾಗದಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಇಲ್ಲವೆ?” ಎಂದು ಪ್ರಶ್ನಿಸಿದ್ದಾರೆ.
ಫೋಟೋದಲ್ಲಿ ತೋರಿಸಲಾದ ತಟ್ಟೆಯಲ್ಲಿ ಸ್ಪಷ್ಟವಾಗಿ ಬ್ಯಾಂಕ್ ಗ್ರಾಹಕರ ಹೆಸರು, ಸ್ಥಳ ಮತ್ತು ಪಾವತಿ ವಿವರಗಳು ಇವೆ. ಕೆಲವು ಮಾಹಿತಿ ಬಾಗಶಃ ಕಾಣಿಸುತ್ತಿದ್ದರೂ ಸ್ಪಷ್ಟವಾಗಿ ಗುರುತಿಸುವ ರೀತಿಯಲ್ಲಿದೆ. ಈ ಫೋಟೋವನ್ನು ಜನಜಂಗುಳಿ ಇರುವ ರಸ್ತೆಬದಿಯಲ್ಲಿ ತೆಗೆದ ಹಾಗಿದೆ. ರೈಲ್ವೇ ನಿಲ್ದಾಣ, ಮೆಟ್ರೋ ಮೆಟ್ಟಿಲುಗಳ ಬಳಿ ತೆಗೆದ ಫೋಟೋ ರೀತಿಯಲ್ಲಿ ಕಾಣಿಸುತ್ತಿದೆ. ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಗಮನಿಸಬಹುದಾಗಿದೆ. ಪ್ಲೇಟ್ ಆಹಾರದಿಂದ ಕೊಳಕಾದರೂ ಗ್ರಾಹಕರ ಅತಿ ಮುಖ್ಯ ಮಾಹಿತಿಯನ್ನು ಹೊಂದಿದೆ.
ಆನ್ಲೈನ್ ನಲ್ಲಿ ಪೋಸ್ಟ್ ಗೆ ಬಹಳ ಮಂದಿ ಕಮೆಂಟ್ ಮಾಡಿದ್ದಾರೆ. ಅನೇಕರು ಬ್ಯಾಂಕ್ ಗೆ ಟ್ಯಾಗ್ ಮಾಡಿ ಉತ್ತರಿಸುವಂತೆ ಕೇಳಿದ್ದಾರೆ. ಕಮೆಂಟ್ ಗಳಲ್ಲಿ ಬ್ಯಾಂಕ್ ನ ಬದ್ಧತೆಯನ್ನು ಪ್ರಶ್ನಿಸಲಾಗಿದೆ.
ಪ್ರಿಯಾಂಕ ಎನ್ನುವವರು ಇದು ಬಹಳ ಭಯಾನಕ ದೃಶ್ಯ ಎಂದು ಹೇಳಿದ್ದಾರೆ. “ಇದು ಭಯಾನಕ. ಇಂತಹ ಕಾಗದಗಳನ್ನು ಚೂರು ಮಾಡಿ ಬೇರೆ ರೀತಿಯಲ್ಲಿ ಮರುಬಳಕೆ ಮಾಡಬೇಕು. ಬ್ಯಾಂಕ್ ಗೌಪ್ಯತೆ ಮತ್ತು ಭದ್ರತೆಯನ್ನು ಅರ್ಥಮಾಡಿಕೊಳ್ಳದೆ ಇರುವುದು ನಿಜಕ್ಕೂ ಚಿಂತಾಜನಕ” ಎಂದು ಅಭಿಪ್ರಾಯಪಟ್ಟಿದ್ದಾರೆ.
ದೃಷ್ಟದ್ಯುಮ್ನ ಎನ್ನುವವರು ಅಭಿಪ್ರಾಯ ವ್ಯಕ್ತಪಡಿಸಿ, “ಇದು ತುಂಬಾ ಅಪಾಯಕಾರಿ ಮತ್ತು ಭಯಾನಕ” ಎಂದು ಹೇಳಿದ್ದಾರೆ. ಅವರ ಪ್ರಕಾರ, “ಈ ಪೇಪರ್ ಪ್ಲೇಟ್ ನಲ್ಲಿರುವ ಅತ್ಯಂತ ಅಮೂಲ್ಯ ಮಾಹಿತಿಯನ್ನು ಯಾರಾದರೂ ಬಳಸಿ ಅವರ ಉಳಿತಾಯ, ಮನೆ, ವಾಹನಗಳು ಮತ್ತು ಕುಟುಂಬ ಸೇರಿದಂತೆ ಅವರ ಆಸ್ತಿಗಳನ್ನು ಕದಿಯುತ್ತಿದ್ದರೆ?” ಬಹಳ ಭಯಾನಕ ಸ್ಥಿತಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಸಂತ್ ಪ್ರಭು ಎನ್ನುವವರು ಅಭಿಪ್ರಾಯ ವ್ಯಕ್ತಪಡಿಸಿ, “ಬ್ಯಾಂಕ್ ನಿಮ್ಮ ಒಟಿಪಿ ಯಾರಿಗೂ ಹಂಚಬೇಡಿ ಎಂದು ಹೇಳುತ್ತದೆ. ಆದರೆ ಇಲ್ಲಿ ಬೀದಿ ವ್ಯಾಪಾರಿ ಬಳಿ ಗ್ರಾಹಕರ ವಹಿವಾಟಿನ ವಿವರಗಳಿವೆ” ಎಂದು ವ್ಯಂಗ್ಯವಾಡಿದ್ದಾರೆ.
ಅನೇಕ ಬಳಕೆದಾರರು ದಾಖಲೆ ಹೇಗೆ ಬೀದಿಬದಿಯ ವ್ಯಾಪಾರಿ ಬಳಿ ಹೇಗೆ ತಲುಪಿದೆ ಎನ್ನುವ ಬಗ್ಗೆ ಚರ್ಚೆ ಮಾಡಿದ್ದಾರೆ. ಚರ್ಚೆಯಲ್ಲಿ ಸಿಬ್ಬಂದಿಗಳು ಹೇಗೆ ಕಾಗದಗಳನ್ನು ಚೂರು ಮಾಡುವ ಬದಲು ಬೇರೆ ರೀತಿಯಲ್ಲಿ ವಿಲೇವಾರಿ ಮಾಡುತ್ತಾರೆ ಎನ್ನುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಮಾಹಿತಿಗಳನ್ನು ಹೀಗೆ ಅಜಾಗರೂಕತೆಯಿಂದ ನಿಭಾಯಿಸುತ್ತಿರುವ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.







