Gujarat | ಗಡ್ಡ, ನಿಖಾಬ್, ಸಿಗ್ನಲ್ ಆ್ಯಪ್ ಬಳಸುವುದು 'ತೀವ್ರಗಾಮಿ ಚಿಂತನೆ'ಯ ಸೂಚಕ?

Photo Credit : PTI
ಗಡ್ಡ ಬೆಳೆಸುವುದು, ನಿಖಾಬ್ ಧರಿಸುವುದು, ಅರೇಬಿಕ್ ಪದಗಳನ್ನು ಹೆಚ್ಚಾಗಿ ಬಳಸುವುದು, ಸಿಗ್ನಲ್ ಅಥವಾ ಎಲಿಮೆಂಟ್ ನಂತಹ ಎನ್ಕ್ರಿಪ್ಟ್ ಸಂದೇಶ ವಿನಿಮಯ ಆ್ಯಪ್ ಗಳನ್ನು ಬಳಸುವುದು, ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸುವುದು ಸೇರಿದಂತೆ ಹಲವು ಅಂಶಗಳನ್ನು 'ತೀವ್ರಗಾಮಿ ಚಿಂತನೆ'ಯ ಸೂಚಕಗಳಾಗಿ ಪರಿಗಣಿಸಿರುವ ಗುಜರಾತ್ ಪೊಲೀಸರ ಹೊಸ ತೀವ್ರಗಾಮಿ ಚಿಂತನೆ ತಡೆ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಮಾರ್ಗಸೂಚಿಯು ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡಿದ್ದು, ಸ್ವಯಂ ಘೋಷಿತ ಗೋ ರಕ್ಷಕ ಗುಂಪುಗಳ ಹಿಂಸಾಚಾರ ಅಥವಾ ಹಿಂದೂ ಮೂಲಭೂತವಾದದ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
"ನಾವು ಗಡ್ಡ ಬೋಳಿಸಿಕೊಳ್ಳಬೇಕೇ? ಮುಸ್ಲಿಮರಾಗಿ ಹುಟ್ಟಿದ್ದಕ್ಕಾಗಿ ಶಿಕ್ಷೆ ಅನುಭವಿಸಬೇಕೇ?" ಎಂದು ಸೂರತ್ ನ ಯುವ ಪದವೀಧರ ಫಿರೂಜ್ ಖಾನ್ ಪ್ರಶ್ನಿಸಿದ್ದಾರೆ. SOP ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಗುಜರಾತ್ ರಾಜ್ಯ ಪೊಲೀಸ್ ಸೇವೆಯ (SPS) ಪೊಲೀಸ್ ವರಿಷ್ಠಾಧಿಕಾರಿ (ಗುಪ್ತಚರ) ಪ್ರಫುಲ್ ವನಿಯಾ ಅವರು ಜೂನ್ 15ರಂದು ಹೊರಡಿಸಿದ ಆದೇಶದಲ್ಲಿ ಹೊಸ ತೀವ್ರಗಾಮಿ ಚಿಂತನೆ ತಡೆ ಕೋಶ (ARC) ಸ್ಥಾಪನೆಯನ್ನೂ, ಅದರ ಕಾರ್ಯವಿಧಾನವನ್ನೂ ಪ್ರಕಟಿಸಿದ್ದಾರೆ. ಜಿಲ್ಲೆ ಹಾಗೂ ಕಮಿಷನರೇಟ್ ಪೊಲೀಸ್ ಘಟಕಗಳಿಗೆ ರವಾನಿಸಿರುವ SOPಯಲ್ಲಿ ತೀವ್ರಗಾಮಿ ಚಿಂತನೆಯ ಗುರುತಿಸುವಿಕೆ, ತಡೆ, ಮೇಲ್ವಿಚಾರಣೆ, ಹಸ್ತಕ್ಷೇಪ ಹಾಗೂ ಪುನರ್ಸಂಯೋಜನೆಗೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ.
SOP ಪ್ರಕಾರ, ತೀವ್ರಗಾಮಿ ಸಿದ್ಧಾಂತಗಳಿಂದ ಪ್ರೇರಿತರಾಗಿ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗುವ, ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ, ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವ ಹಾಗೂ ಧರ್ಮಾಂತರಕ್ಕೆ ಪ್ರೇರೇಪಿಸುವ ವ್ಯಕ್ತಿಯನ್ನು 'ತೀವ್ರಗಾಮಿ ವ್ಯಕ್ತಿ' ಎಂದು ವ್ಯಾಖ್ಯಾನಿಸಲಾಗಿದೆ. ಆದರೆ, ಅದರ ಗುರುತಿಸುವಿಕೆಗೆ ನೀಡಿರುವ ಮಾನದಂಡಗಳು ಬಹುತೇಕ ಮುಸ್ಲಿಮರ ಧಾರ್ಮಿಕ ಆಚರಣೆಗಳು ಹಾಗೂ ಜೀವನಶೈಲಿಯನ್ನೇ ಗುರಿಯಾಗಿಸಿವೆ ಎಂಬ ಟೀಕೆ ವ್ಯಕ್ತವಾಗಿದೆ.
SOPಯಲ್ಲಿ ಇದ್ದಕ್ಕಿದ್ದಂತೆ ಗಡ್ಡ ಬೆಳೆಸುವುದು, ನಿಖಾಬ್ ಧರಿಸುವುದು, ಅರೇಬಿಕ್ ಪದಗಳನ್ನು ಹೆಚ್ಚಾಗಿ ಬಳಸುವುದು, ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಂಪರ್ಕ ಕಡಿಮೆ ಮಾಡುವುದು, ಜಾಗತಿಕ ಮಟ್ಟದಲ್ಲಿ ಮುಸ್ಲಿಮರ ವಿರುದ್ಧ ನಡೆಯುವ ಘಟನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುವುದು, ಭಯೋತ್ಪಾದಕರನ್ನು ಹೊಗಳುವುದು ಹಾಗೂ ಅಫ್ಘಾನಿಸ್ತಾನ ಅಥವಾ ಮಧ್ಯಪ್ರಾಚ್ಯ ಪ್ರವಾಸದ ಬಳಿಕ ವರ್ತನೆಯಲ್ಲಿ ಬದಲಾವಣೆ ಕಾಣಿಸುವುದನ್ನು ಗಮನಿಸಬೇಕಾದ ವರ್ತನಾ ಸೂಚಕಗಳೆಂದು ಉಲ್ಲೇಖಿಸಲಾಗಿದೆ.
ಇದಲ್ಲದೆ, ಪೊಟ್ಯಾಸಿಯಂ ನೈಟ್ರೇಟ್, ಸಲ್ಫರ್ ಅಥವಾ ಅಮೋನಿಯಂ ನೈಟ್ರೇಟ್ ಹೊಂದಿರುವ ರಸಗೊಬ್ಬರಗಳನ್ನು ಖರೀದಿಸುವುದು, ಹೆಚ್ಚಿನ ಸಂಖ್ಯೆಯಲ್ಲಿ ಎಲ್ಪಿಜಿ ಸಿಲಿಂಡರ್ ಪಡೆಯುವುದು, ಅರಣ್ಯ ಪ್ರದೇಶಗಳಿಗೆ ಆಗಾಗ್ಗೆ ಭೇಟಿ ನೀಡುವುದು, ಗಲ್ಫ್ ರಾಷ್ಟ್ರಗಳು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಅಥವಾ ಅಫ್ಘಾನಿಸ್ತಾನದಲ್ಲಿರುವ ವ್ಯಕ್ತಿಗಳೊಂದಿಗೆ ಎನ್ಕ್ರಿಪ್ಟ್ ಆ್ಯಪ್ಗಳ ಮೂಲಕ ಸಂಪರ್ಕದಲ್ಲಿರುವುದು ಹಾಗೂ ದೊಡ್ಡ ಪ್ರಮಾಣದ ಹಣ ಹಿಂಪಡೆಯುವುದನ್ನೂ ಅಧಿಕಾರಿಗಳು ಗಮನಿಸಬೇಕೆಂದು ಸೂಚಿಸಲಾಗಿದೆ.
VPN ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವುದು, ಸಿಗ್ನಲ್ ಅಥವಾ ಎಲಿಮೆಂಟ್ ಮೆಸೆಂಜರ್ ಬಳಸುವುದು, ಉಗ್ರವಾದಿ ಟೆಲಿಗ್ರಾಂ ಗುಂಪುಗಳ ಸದಸ್ಯರಾಗಿರುವುದು, ISIS ಅಥವಾ ಅಲ್ಖೈದಾ ಸಂಬಂಧಿತ ಖಾತೆಗಳನ್ನು ಅನುಸರಿಸುವುದು, ಅವರ ನಿಯತಕಾಲಿಕೆಗಳನ್ನು ಹಂಚಿಕೊಳ್ಳುವುದು ಮತ್ತು ಸ್ಪಷ್ಟ ಆದಾಯದ ಮೂಲವಿಲ್ಲದೆ ಮೊನೆರೊ ಸೇರಿದಂತೆ ಕ್ರಿಪ್ಟೋಕರೆನ್ಸಿ ಬಳಸುವುದನ್ನೂ ಅನುಮಾನಾಸ್ಪದ ಚಟುವಟಿಕೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
SOPಯಲ್ಲಿ ಉಗ್ರ ಜಾಲಗಳು ಅಥವಾ ಅರೇಬಿಕ್ ಕಾಲೇಜುಗಳು ಹಾಗೂ ಮದರಸಾಗಳಿಗೆ ಭೇಟಿ ನೀಡುವವರು, ಯಾವುದೇ ಕಾರ್ಯಾಚರಣೆಗೆ ಮುನ್ನ ಮಸೀದಿಯಲ್ಲಿ ಇತಿಕಾಫ್ ಆಚರಿಸುವವರು, 'ಇಸ್ಲಾಮಿಕ್ ಕರ್ತವ್ಯ' ಉಲ್ಲೇಖಿಸಿ ಇದ್ದಕ್ಕಿದ್ದಂತೆ ಶಿಕ್ಷಣ ಅಥವಾ ಉದ್ಯೋಗ ತೊರೆಯುವವರು ಹಾಗೂ ಜೈಲಿನಿಂದ ಬಿಡುಗಡೆಯಾದ ಬಳಿಕ 'ಕಟ್ಟರ್ವಾದಿ' ನಾಯಕರನ್ನು ಭೇಟಿಯಾಗುವವರನ್ನೂ ಸಂಭಾವ್ಯ ತೀವ್ರಗಾಮಿ ವ್ಯಕ್ತಿಗಳೆಂದು ಗುರುತಿಸಲಾಗಿದೆ.
ಮದರಸಾಗಳಲ್ಲಿ ಬೋಧನೆ ಮಾಡುವ ಮೌಲಾನಾಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಅವರು ಉಗ್ರ ಚಿಂತನೆ ಹೊಂದಿರುವ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಸುನ್ನಿ ಇಸ್ಲಾಂನ ಸಲಫಿ ಹಾಗೂ ವಹಾಬಿ ಚಿಂತನಾ ಪರಂಪರೆಯವರ ಮೇಲೂ ವಿಶೇಷ ನಿಗಾ ವಹಿಸಲು ತಿಳಿಸಲಾಗಿದೆ.
'ಹಸ್ತಕ್ಷೇಪ–ಸಮಾಲೋಚನೆ ಮತ್ತು ಮಾರ್ಗದರ್ಶನ' ಹಂತದಲ್ಲಿ ಸಮುದಾಯದ ಮುಖಂಡರು, ಧಾರ್ಮಿಕ ವಿದ್ವಾಂಸರು, ಎನ್ಜಿಒಗಳು, ಮನೋವೈದ್ಯರು, ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿಗಳನ್ನು ಗುರುತಿಸಿ ಅವರ ಸಹಕಾರ ಪಡೆಯಲು ಸೂಚಿಸಲಾಗಿದೆ. ಸಮಾಲೋಚನೆಗೆ ಒಳಗಾಗುವವರ ಗುರುತು ಗೌಪ್ಯವಾಗಿರಬೇಕು. ಕುಟುಂಬ ಸದಸ್ಯರು ಹಾಗೂ ಧಾರ್ಮಿಕ ತಜ್ಞರ ಸಹಾಯದಿಂದ ಅವರನ್ನು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪುನರ್ಸಂಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.
ಆದರೆ ಸಮಾಲೋಚನೆಯ ನಂತರವೂ ವ್ಯಕ್ತಿ ಅಪರಾಧ ಎಸಗಿದರೆ ಅಥವಾ ಅಂತಹ ಸಿದ್ಧತೆ ನಡೆಸಿದರೆ ಭಾರತೀಯ ನ್ಯಾಯ ಸಂಹಿತೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ಕ್ರಮ ಕೈಗೊಂಡು ರಾಜ್ಯ ಪ್ರಧಾನ ಕಚೇರಿಗೆ ವರದಿ ಸಲ್ಲಿಸಬೇಕು ಎಂದು SOP ತಿಳಿಸಿದೆ.
ARC ಹಿನ್ನೆಲೆ
ಗುಜರಾತ್ನಲ್ಲಿ ARC ಈ ವರ್ಷ ಅಧಿಕೃತವಾಗಿ ಕಾರ್ಯಾರಂಭ ಮಾಡಿದರೂ ಅದರ ಪರಿಕಲ್ಪನೆ 2015ರಲ್ಲಿ ರನ್ ಆಫ್ ಕಚ್ನಲ್ಲಿ ನಡೆದ ಡಿಜಿಪಿ ಹಾಗೂ ಐಜಿಪಿಗಳ ಸಮ್ಮೇಳನದಲ್ಲಿ ರೂಪುಗೊಂಡಿತ್ತು. ಆ ಸಂದರ್ಭದಲ್ಲಿ ತೆಲಂಗಾಣ ಪೊಲೀಸರ ತೀವ್ರಗಾಮಿ ಚಿಂತನೆ ತಡೆ ಮಾದರಿಯನ್ನು ಇತರ ರಾಜ್ಯಗಳಿಗೆ ಪರಿಚಯಿಸಲಾಗಿತ್ತು.
2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾರ್ಷಿಕ ಡಿಜಿಪಿ–ಐಜಿಪಿ ಸಮ್ಮೇಳನದಲ್ಲಿ ಇಂತಹ ಕೋಶಗಳ ಅಗತ್ಯವನ್ನು ಪ್ರಸ್ತಾಪಿಸಿದ್ದರು. ಬಳಿಕ ಬಿಜೆಪಿ ತನ್ನ 2022ರ ಗುಜರಾತ್ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ARC ಸ್ಥಾಪಿಸುವ ಭರವಸೆ ನೀಡಿತ್ತು.
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ, ರಾಜ್ಯ ಭಯೋತ್ಪಾದನಾ ನಿಗ್ರಹ ದಳ, ಅಪರಾಧ ಶಾಖೆ ಹಾಗೂ ಅಹಮದಾಬಾದ್ ಕೇಂದ್ರ ಕಾರಾಗೃಹದ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದ್ದರೂ, ನಿಧಿಯ ಕೊರತೆಯಿಂದ ಯೋಜನೆ ವಿಳಂಬವಾಗಿತ್ತು. 2023ರಲ್ಲಿ ಅನುಷ್ಠಾನ ಪ್ರಕ್ರಿಯೆ ಆರಂಭಗೊಂಡಿದ್ದು, 2026ರ ಏಪ್ರಿಲ್ ನಲ್ಲಿ 139 ಹೊಸ ಹುದ್ದೆಗಳ ಸೃಷ್ಟಿಗೆ ಗುಜರಾತ್ ಗೃಹ ಇಲಾಖೆ ಅನುಮೋದನೆ ನೀಡಿದೆ. ಜೂನ್ 15ರಂದು SOPಯನ್ನು ಜಿಲ್ಲೆ ಹಾಗೂ ಕಮಿಷನರೇಟ್ ಕಚೇರಿಗಳಿಗೆ ರವಾನಿಸಲಾಗಿದೆ. ಜಿಲ್ಲಾ ಪೊಲೀಸ್, ವಿಶೇಷ ಕಾರ್ಯಾಚರಣೆ ಗುಂಪು (ಎಸ್ಒಜಿ), ಜೈಲು ಅಧಿಕಾರಿಗಳು ಹಾಗೂ ರಾಜ್ಯ ಗುಪ್ತಚರ ವಿಭಾಗದೊಂದಿಗೆ ಸಮನ್ವಯದಲ್ಲಿ ARC ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.
►ಸಂವಿಧಾನಬಾಹಿರ: ಕಾನೂನು ತಜ್ಞರ ಆರೋಪ
ಈ SOP ಸಂವಿಧಾನದ 14, 19, 21 ಹಾಗೂ 25ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ವಕೀಲ ಆರಿಫ್ ಅನ್ಸಾರಿ ಆರೋಪಿಸಿದ್ದಾರೆ.
"ಇದು ಮುಸ್ಲಿಮರನ್ನು ಗುರಿಯಾಗಿಸಿಕೊಂಡ ರಾಜ್ಯ ಪ್ರಾಯೋಜಿತ ಪೂರ್ವಗ್ರಹಪೀಡಿತ ವರ್ಗೀಕರಣ. ಚುನಾವಣಾ ಲಾಭಕ್ಕಾಗಿ ರೂಪಿಸಿರುವ ಕ್ರಮದಂತಿದೆ. ಎಲ್ಲ ಧರ್ಮಗಳಿಗೆ ಸಮಾನ ಗೌರವ ಮತ್ತು ಹಕ್ಕುಗಳನ್ನು ಖಾತರಿಪಡಿಸಿರುವ ಸಂವಿಧಾನದ ಆಶಯಕ್ಕೆ ಇದು ವಿರುದ್ಧ" ಎಂದು ಅವರು ಹೇಳಿದ್ದಾರೆ.
►'ಗುಜರಾತ್ ಕೋಮು ರಾಜಕೀಯದ ಪ್ರಯೋಗಾಲಯ'
ಸಾಮಾಜಿಕ ಕಾರ್ಯಕರ್ತ ಹಿರೇನ್ ಗಾಂಧಿ, "1980ರ ದಶಕದಿಂದ ಗುಜರಾತ್ ಕೋಮು ರಾಜಕೀಯದ ಪ್ರಯೋಗಾಲಯವಾಗಿದೆ. ಕೋವಿಡ್ ಸಂದರ್ಭದಲ್ಲಿ ತಬ್ಲಿಘಿ ಜಮಾಅತ್ ವಿರುದ್ಧ ಇದೇ ರೀತಿಯ ಪ್ರಚಾರ ನಡೆಸಲಾಗಿತ್ತು. ಇದು ಹೊಸ ಬೆಳವಣಿಗೆಯಲ್ಲ. ಇಂತಹ ಕ್ರಮಗಳು ಪ್ರಜಾಪ್ರಭುತ್ವದ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ" ಎಂದು ಟೀಕಿಸಿದ್ದಾರೆ.
►ಜಾರಿ ಸ್ಥಗಿತಕ್ಕೆ ಬ್ರಿಟ್ಟಾಸ್ ಆಗ್ರಹ
ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಜುಲೈ 14ರಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಪತ್ರ ಬರೆದು, ಸ್ವತಂತ್ರ ಪರಿಶೀಲನೆ ಪೂರ್ಣಗೊಳ್ಳುವವರೆಗೆ SOP ಜಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಧರ್ಮ, ಉಡುಗೆ, ಭಾಷೆ ಅಥವಾ ಧಾರ್ಮಿಕ ಆಚರಣೆಯ ಆಧಾರದ ಮೇಲೆ ಕಣ್ಗಾವಲು ಅಥವಾ ಪ್ರೊಫೈಲಿಂಗ್ ನಡೆಸುವುದು ಸಂವಿಧಾನದ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಘನತೆ ಹಾಗೂ ಗೌಪ್ಯತೆಯ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಕಾನೂನುಬಾಹಿರ ಚಟುವಟಿಕೆಗಳ ವಿಶ್ವಾಸಾರ್ಹ ಪುರಾವೆಗಳ ಆಧಾರದ ಮೇಲೆ ಮಾತ್ರ ತನಿಖೆ ನಡೆಯಬೇಕು. ನಿರ್ದಿಷ್ಟ ಸಮುದಾಯವನ್ನು ಅನುಮಾನದ ದೃಷ್ಟಿಯಿಂದ ನೋಡುವ ಯಾವುದೇ ವ್ಯವಸ್ಥೆ ಕಾನೂನಿನ ಸಮಾನ ರಕ್ಷಣೆಯ ತತ್ವಕ್ಕೆ ಹೊಂದಿಕೆಯಾಗುವುದಿಲ್ಲ. ಇಂತಹ ನೀತಿಗಳು ನಾಗರಿಕರು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವಿನ ವಿಶ್ವಾಸವನ್ನು ಕುಂದಿಸುತ್ತವೆ" ಎಂದು ಅವರು ಹೇಳಿದ್ದಾರೆ.
►'ಹಿಂದೂ ಮೂಲಭೂತವಾದದ ಬಗ್ಗೆ ಮೌನ ಏಕೆ?'
ಮಾನವ ಹಕ್ಕುಗಳ ಹೋರಾಟಗಾರ್ತಿ ಶಬ್ನಮ್ ಹಶ್ಮಿ, "ತೀವ್ರಗಾಮಿ ಚಿಂತನೆ ಎಲ್ಲ ಸಮುದಾಯಗಳಲ್ಲೂ ಇರಬಹುದು. ಆದರೆ ಈ SOP ಮುಸ್ಲಿಮರನ್ನಷ್ಟೇ ಗುರಿಯಾಗಿಸುತ್ತದೆ. ಧರ್ಮ ಸಂಸತ್ ಗಳಲ್ಲಿ ಮುಸ್ಲಿಮರ ವಿರುದ್ಧ ಬಹಿರಂಗವಾಗಿ ಹಿಂಸೆಗೆ ಕರೆ ನೀಡುವುದು, ಹಿಂದೂ ಮೂಲಭೂತವಾದ, ಗೋ ರಕ್ಷಕ ಗುಂಪುಗಳ ಹಿಂಸಾಚಾರ ಇವೆಲ್ಲವೂ ತೀವ್ರಗಾಮಿ ಚಿಂತನೆಯಲ್ಲವೇ? ಅವುಗಳ ಬಗ್ಗೆ SOPಯಲ್ಲಿ ಏಕೆ ಯಾವುದೇ ಉಲ್ಲೇಖ ಇಲ್ಲ?" ಎಂದು ಪ್ರಶ್ನಿಸಿದ್ದಾರೆ.
"ಇಂದು ಮುಸ್ಲಿಮರನ್ನು ಗುರಿಯಾಗಿಸಿದರೆ, ನಾಳೆ ದಲಿತರು, ಆದಿವಾಸಿಗಳು ಅಥವಾ ಕ್ರೈಸ್ತರನ್ನೂ ಇದೇ ರೀತಿಯಲ್ಲಿ ಗುರಿಯಾಗಿಸುವ ಸಾಧ್ಯತೆ ಇದೆ" ಎಂದೂ ಅವರು ಎಚ್ಚರಿಸಿದ್ದಾರೆ.
ಛತ್ತೀಸ್ಗಢದ ಮಾಜಿ ವಿಶೇಷ ಡಿಜಿಪಿ ಆರ್.ಕೆ. ವಿಜ್, "SOPಯಲ್ಲಿ ತೀವ್ರಗಾಮಿ ಚಿಂತನೆಯನ್ನು ವ್ಯಾಪಕವಾಗಿ ವ್ಯಾಖ್ಯಾನಿಸಲಾಗಿದ್ದರೂ, ಅದರ ಉಪವಿಭಾಗಗಳು ಒಂದು ಸಮುದಾಯದ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುವಂತೆ ಕಾಣುತ್ತವೆ. ಆದರೆ ಗುಜರಾತ್ ಪೊಲೀಸರ ಹಿಂದಿನ ಅನುಭವವನ್ನೂ ಪರಿಗಣಿಸಬೇಕಾಗಿದೆ" ಎಂದು ಹೇಳಿದ್ದಾರೆ.
SOPಯ ಪದಪ್ರಯೋಗ ಹಾಗೂ ಅದು ಕೋಮು ಪ್ರೇರಿತವಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯೆ ಪಡೆಯಲು ಗುಜರಾತ್ ಪೊಲೀಸ್ ಉಪ ಮಹಾನಿರ್ದೇಶಕ ಡಾ. ಸುಧೀರ್ಕುಮಾರ್ ಜೆ. ದೇಸಾಯಿ ಅವರನ್ನು ಸಂಪರ್ಕಿಸಲಾಗಿದೆ. ಅವರ ಪ್ರತಿಕ್ರಿಯೆ ಬಂದ ಬಳಿಕ ಮಾಹಿತಿ ನವೀಕರಿಸಲಾಗುವುದು ಎಂದು thewire.in ವರದಿಯಲ್ಲಿ ಉಲ್ಲೇಖಿಸಿದೆ.
ಸೌಜನ್ಯ: thewire.in






