ಖರೀದಿಯ ಭರಾಟೆ, ಹೊರೆಯಾಗುತ್ತಿರುವ ಹಬ್ಬ; ಸಾಮಾಜಿಕ ಮಾಧ್ಯಮದ ಹುಚ್ಚಾಟಕ್ಕೆ ಮರೆಯಾಗುತ್ತಿದೆಯೇ ಖುಷಿ?

ಸಾಂದರ್ಭಿಕ ಚಿತ್ರ
ಸುಂದರವಾಗಿ ಅಲಂಕರಿಸಿದ ಮನೆಗಳು, ಭವ್ಯವಾದ ಔತಣಗಳು, ದುಬಾರಿ ಉಡುಗೊರೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಯಿಂದ ರೂಪಿಸಿದ ಪೋಸ್ಟ್ ಗಳು... ಹೀಗೆ ಹಬ್ಬಗಳು ಅರ್ಥಪೂರ್ಣ ಬಾಂಧವ್ಯಗಳಿಗಿಂತ ಹೆಚ್ಚಾಗಿ ಕೇವಲ ಹೊರನೋಟವನ್ನು ಪ್ರದರ್ಶಿಸುವ ವಿಷಯಗಳಾಗಿ ಬದಲಾಗುತ್ತಿವೆ. ಈ ಬಗ್ಗೆ ವಿವಿಧ ಜನರ ಅಭಿಪ್ರಾಯವೇನು?
ಹಬ್ಬದ ಆಚರಣೆಗಳು ಜನರನ್ನು ಒಗ್ಗೂಡಿಸುವ ಉದ್ದೇಶವನ್ನು ಹೊಂದಿದ್ದರೂ, ಇತರರ ಮೇಲೆ ಪ್ರಭಾವ ಬೀರುವ, ಹೊರನೋಟವನ್ನು ಕಾಪಾಡಿಕೊಳ್ಳುವ ಮತ್ತು ಸಾಮಾಜಿಕ ನಿರೀಕ್ಷೆಗಳನ್ನು ಪೂರೈಸುವ ಒತ್ತಡವು ಹಬ್ಬದ ಸಂತೋಷವನ್ನೇ ಕಸಿದುಕೊಳ್ಳಬಹುದು. ಸುಂದರವಾಗಿ ಅಲಂಕರಿಸಿದ ಮನೆಗಳು, ಭವ್ಯವಾದ ಔತಣಗಳು, ದುಬಾರಿ ಉಡುಗೊರೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಯಿಂದ ರೂಪಿಸಿದ ಪೋಸ್ಟ್ಗಳು... ಹೀಗೆ ಹಬ್ಬಗಳು ಅರ್ಥಪೂರ್ಣ ಬಾಂಧವ್ಯಗಳಿಗಿಂತ ಹೆಚ್ಚಾಗಿ ಕೇವಲ ಹೊರನೋಟವನ್ನು ಪ್ರದರ್ಶಿಸುವ ವಿಷಯಗಳಾಗಿ ಬದಲಾಗುತ್ತಿವೆ.
ಹಬ್ಬಗಳು ಸಂತೋಷ ಕೊಡಬೇಕು. ಆದರೆ ಇಂದಿನ ಜಗತ್ತಿನಲ್ಲಿ ಸಾಮಾಜಿಕ ಒತ್ತಡ, ವಾಸ್ತವಕ್ಕೆ ದೂರವಾದ ನಿರೀಕ್ಷೆಗಳು ಮತ್ತು ಆರ್ಥಿಕ ಒತ್ತಡಗಳು ಹಬ್ಬದ ಆಚರಣೆಗಳನ್ನು ಕೇವಲ ಒಂದು ಪ್ರದರ್ಶನವನ್ನಾಗಿ ಪರಿವರ್ತಿಸಬಹುದು.
ಗೋಣಿಕೊಪ್ಪದ ನಿವಾಸಿ ಲೀಲಾ ಅವರ ಮನೆಯಲ್ಲಿ ಹಬ್ಬಗಳು ಇದುವರೆಗೆ ಪ್ರದರ್ಶನದ ಚಟುವಟಿಕೆಯಾಗಿಲ್ಲ. ಆದರೆ, “ಸಾಮಾಜಿಕ ಪ್ರತಿಷ್ಠೆಯನ್ನು ಹೆಚ್ಚಿಸಬೇಕೆಂಬ ಜನರ ಪೈಪೋಟಿಯ ನಡುವೆ ಇತ್ತೀಚೆಗೆ ಹಬ್ಬಗಳ ಮೂಲ ಆಶಯ ಮರೆಯಾಗುತ್ತಿದೆ. ಇದರಿಂದ ಹಬ್ಬಗಳು ಬಾಹ್ಯ ಪ್ರದರ್ಶನವಾಗಿ ಪರಿವರ್ತನೆಯಾಗುತ್ತಿವೆ. ಆದರೆ ನಿಜವಾಗಿ ಹಬ್ಬಗಳು ದಿನನಿತ್ಯದ ಒತ್ತಡದ ಬದುಕಿನಿಂದ ವಿರಾಮ ನೀಡಿ ಮನಸ್ಸನ್ನು ಸಂತಸಗೊಳಿಸುತ್ತವೆ. ಇನ್ಸ್ಟಾಗ್ರಾಮ್, ಫೇಸ್ಬುಕ್ನಂತಹ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮನೆ ಅಲಂಕಾರ, ಹಬ್ಬದ ಉಡುಪುಗಳು ಮತ್ತು ರಂಗೋಲಿಗಳ ಫೋಟೊ ಹಾಗೂ ರೀಲ್ಸ್ಗಳನ್ನು ನೋಡಿ, ತಾವೂ ಹಾಗೆಯೇ ಆಚರಿಸಬೇಕೆಂಬ ನಿರೀಕ್ಷೆಗಳು ಜಾಲತಾಣವನ್ನು ಹೆಚ್ಚು ಬಳಸುವವರಲ್ಲಿ ಸಹಜವಾಗಿ ಮೂಡುವ ಸಾಧ್ಯತೆ ಇದೆ. ಹೊಸ ಟ್ರೆಂಡ್ಗಳನ್ನು ತಾವೂ ಅನುಸರಿಸಲೇಬೇಕೆಂಬ ಆಸೆ ಮೂಡುತ್ತದೆ” ಎನ್ನುತ್ತಾರೆ ಲೀಲಾ.
ಒತ್ತಡವೂ ಹೌದು, ಒತ್ತಡ ನಿವಾರಕವೂ ಹೌದು!
ಮಂಗಳೂರು ಮೂಲದ, ಮುಂಬೈ ನಿವಾಸಿ ಹಾಗೂ ವೃತ್ತಿಪರ ಗೃಹಿಣಿಯಾಗಿರುವ ಸುಮಾ ಅವರ ಪ್ರಕಾರ, “ಇತ್ತೀಚೆಗೆ ಕೆಲಸ, ಮನೆ ಮತ್ತು ಹಬ್ಬದ ಸಿದ್ಧತೆಗಳನ್ನು ಜೊತೆಯಲ್ಲಿಯೇ ನಿಭಾಯಿಸುವುದು ಬಹಳ ಒತ್ತಡದ ಕೆಲಸವಾಗಿರುತ್ತದೆ. ಹಾಗಿದ್ದರೂ, ಹಬ್ಬಗಳು ಸಂಭ್ರಮ ತರುತ್ತವೆ. ಆದರೆ ಸಾಮಾಜಿಕ ಜಾಲತಾಣಗಳು ಇತ್ತೀಚೆಗೆ ಅಲಂಕಾರ, ಉತ್ಪನ್ನಗಳು, ಬಟ್ಟೆಗಳು ಮತ್ತು ಸಿಹಿ-ತಿನಿಸುಗಳು ಇತ್ಯಾದಿಗಳ ಮೇಲೆ ಪ್ರಭಾವ ಬೀರುತ್ತಿವೆ.”
ಆದರೆ, ಒಡಿಶಾದ ಸುಚಿಸ್ಮಿತಾ ಅವರಿಗೆ ಭಾರತೀಯ ಹಬ್ಬಗಳೆಂದರೆ ಬಹಳ ಇಷ್ಟ. “ಮುಖ್ಯವಾಗಿ ಮುಂಬೈನಲ್ಲಿ ಹಬ್ಬಗಳನ್ನು ಆಚರಿಸುವುದು ಬಹಳ ಸಂತೋಷ ಕೊಡುತ್ತದೆ. ಒತ್ತಡವನ್ನು ಕಡಿಮೆ ಮಾಡುವ ಸಮಯವಾಗಿರುತ್ತದೆ. ಮನಸ್ಸಿಗೆ ಮುದ ನೀಡುತ್ತದೆ ಮತ್ತು ಮಾನಸಿಕ ಶಾಂತಿ ಒದಗಿಸುತ್ತದೆ” ಎನ್ನುತ್ತಾರೆ ಸುಚಿಸ್ಮಿತಾ.
ಚೆನ್ನೈ ನಿವಾಸಿ ಗೋಮತಿಯವರ ಪ್ರಕಾರ, ವರ್ಷಕ್ಕೊಮ್ಮೆ ಬರುವ ಹಬ್ಬಗಳು ಕೆಲಸದ ಒತ್ತಡದಿಂದ ಹೊರಬಂದು ಸಂತೋಷದಿಂದ ಕಾಲ ಕಳೆಯಲು ಸಿಗುವ ಅವಕಾಶವಾಗಿವೆ.
ಫೋಟೊಗ್ರಫಿಗೆ ಉತ್ತೇಜನ ನೀಡಿರುವ ಸಾಮಾಜಿಕ ಮಾಧ್ಯಮ
“ನಾವು ಹಬ್ಬಗಳನ್ನು ಅದ್ದೂರಿಯಾಗಿಯೇ ಸಂಭ್ರಮಿಸುತ್ತೇವೆ. ನಮ್ಮ ಹಬ್ಬ ಯಾವ ಸಂದರ್ಭದಲ್ಲಿ ಬರುತ್ತದೆ ಎನ್ನುವುದು ತಿಳಿದಿರುತ್ತದೆ. ಹೀಗಾಗಿ ಹಣಕಾಸಿನ ವಿಚಾರದಲ್ಲಿ ಸಿದ್ಧವಾಗಿರುತ್ತೇವೆ. ರಜೆಯ ವಿಚಾರದಲ್ಲೂ ಸದಾ ಸಿದ್ಧವಾಗಿರುತ್ತೇವೆ. ಹೀಗಾಗಿ ಹೆಚ್ಚು ಒತ್ತಡ ಇರುವುದಿಲ್ಲ. ಆದರೆ ಅದೇ ಸಂದರ್ಭದಲ್ಲಿ ಬೇರೆ ಏನಾದರೂ ಖರ್ಚು ಬಂದರೆ ಅಥವಾ ಆದಾಯದಲ್ಲಿ ಕೊರತೆ ಇದ್ದಾಗ ಒತ್ತಡ ಉಂಟಾಗಬಹುದು. ಸಾಧಾರಣವಾಗಿ ಈವರೆಗೂ ದೊಡ್ಡ ಒತ್ತಡವಾಗಿಲ್ಲ. ಅಲ್ಲದೆ, ನಾವು ಹೆಚ್ಚು ಹಣಕಾಸಿನ ಹೊರೆ ಎನಿಸುವಷ್ಟು ಖರ್ಚೂ ಮಾಡುವುದಿಲ್ಲ” ಎನ್ನುತ್ತಾರೆ ಮಂಗಳೂರು ಮೂಲದ, ಮುಂಬೈ ನಿವಾಸಿ ಮೆಲ್ವಿನ್.
ಅವರ ಪ್ರಕಾರ, ಸಾಮಾಜಿಕ ಮಾಧ್ಯಮ ಬಂದ ನಂತರ ಫೋಟೊ ತೆಗೆಯುವ ಅಭ್ಯಾಸ ಹೆಚ್ಚಾದಂತೆ ಬಟ್ಟೆಬರೆಗಳ ಮೇಲೆ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಇಂದು ಧರಿಸಿದ ಬಟ್ಟೆಯನ್ನು ನಾಳೆ ಧರಿಸಲು ಆಗುವುದಿಲ್ಲ. ಮುಖ್ಯವಾಗಿ ಹೊಸ ಬಟ್ಟೆಗಳ ಮೇಲೆ ಹೆಚ್ಚು ವೆಚ್ಚವಾಗುತ್ತಿದೆ. ಒಂದು ದಿನ ಧರಿಸಿದ ಬಟ್ಟೆಯಲ್ಲೇ ಮರುದಿನ ಫೋಟೊ ತೆಗೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬಟ್ಟೆಬರೆಗಳ ಮೇಲಿನ ಖರ್ಚು ಹೆಚ್ಚಾಗಿದೆ. ಫೋಟೊಗ್ರಫಿಯೂ ಹೆಚ್ಚಾಗಿದೆ.
ಆರ್ಥಿಕ ಒತ್ತಡವನ್ನು ತಂದುಕೊಳ್ಳಬಾರದು!
“ಹಬ್ಬಗಳು ಸಂತೋಷಕ್ಕೆ ಸಂಬಂಧಿಸಿರುವುದು ನಿಜ. ಹಾಗೆಯೇ ಇರಬೇಕು. ಕುಟುಂಬದವರು ಜೊತೆಗೂಡಿ ಆಚರಿಸುವುದೇ ಹಬ್ಬ. ವ್ಯಕ್ತಿಗತವಾಗಿ ಹಬ್ಬವನ್ನು ಆಚರಿಸಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಆರ್ಥಿಕ ಒತ್ತಡಕ್ಕೆ ಒಳಗಾಗಲು ಕಾರಣವಿದೆ. ಹಬ್ಬದ ಸಂದರ್ಭದಲ್ಲಿ ತೋರ್ಪಡಿಕೆಗಾಗಿ ಕೆಲವರು ಆಡಂಬರದಿಂದ ಆಚರಿಸುತ್ತಾರೆ. ಹೆಚ್ಚು ಖರ್ಚು ಮಾಡಿ ಉಡುಗೆಗಳನ್ನು ಖರೀದಿಸುತ್ತಾರೆ, ತಿನಿಸುಗಳನ್ನು ತಯಾರಿಸುತ್ತಾರೆ. ಇನ್ನೊಬ್ಬರನ್ನು ಮೀರಿ ಹಬ್ಬ ಆಚರಿಸಲು ಹೋಗುತ್ತಾರೆ. ಆ ರೀತಿ ಇರಬಾರದು. ನಮಗೆ ಸಾಧ್ಯವಾದಷ್ಟು ಹಬ್ಬ ಆಚರಿಸಬೇಕು. ಇನ್ನೊಬ್ಬರನ್ನು ಮೆಚ್ಚಿಸಲು ಹಬ್ಬ ಆಚರಿಸಿದರೆ ಮಾತ್ರ ಆರ್ಥಿಕ ಒತ್ತಡ ಬರುವುದು ಖಚಿತ. ನಮ್ಮ ಖುಷಿಗಾಗಿ ಹಬ್ಬ ಆಚರಿಸಬೇಕು” ಎನ್ನುತ್ತಾರೆ ಬೆಂಗಳೂರಿನ ನಿವಾಸಿ ರಝೀನ ಶಹಜಹಾನ್.
ಇತ್ತೀಚಿನ ದಿನಗಳಲ್ಲಿ ಯಾವುದೇ ಕೌಟುಂಬಿಕ ಕಾರ್ಯಕ್ರಮದಲ್ಲೂ ವೀಡಿಯೊಗ್ರಫಿ ಮತ್ತು ಫೋಟೊಗ್ರಫಿ ಇರುತ್ತವೆ. ಫೋಟೊಗಳು ಮತ್ತು ವೀಡಿಯೊಗಳನ್ನು ಮತ್ತೊಬ್ಬರಿಗೆ ತೋರಿಸುವ ಉದ್ದೇಶಕ್ಕಿಂತ ಹೆಚ್ಚಾಗಿ ನಮ್ಮ ನೆನಪಿಗಾಗಿ ಉಳಿಸಿಕೊಳ್ಳಬೇಕು. ಇನ್ನೊಮ್ಮೆ ನಾವೇ ನೋಡಿ ಖುಷಿಪಡುವ ಉದ್ದೇಶ ಹೊಂದಿರಬೇಕು. ನಮ್ಮ ಯಾವ ವಯಸ್ಸಿನಲ್ಲಿ ಹೇಗಿದ್ದೆವು ಮತ್ತು ಎಷ್ಟು ಸಂತೋಷಪಟ್ಟಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಲು ಅವು ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಹುದು. ಆದರೆ, ಪೋಸ್ಟ್ ಮಾಡಿದ ನಂತರ ಅದು ವೈರಲ್ ಆಗಬೇಕು ಎಂಬ ಉದ್ದೇಶ ಹೊಂದಿರಬಾರದು ಎಂದು ರಝೀನ ಅಭಿಪ್ರಾಯಪಟ್ಟಿದ್ದಾರೆ.
ಹಬ್ಬಗಳು ರೀಲ್ಸ್ ಗಾಗಿ ಆಚರಣೆಯಾಗುತ್ತಿವೆ!
ಗುಜರಾತ್ನ ಪಾರ್ಥ್ ಪಟೇಲ್ ಅವರ ಪ್ರಕಾರ, “ಇತ್ತೀಚೆಗೆ ಹಬ್ಬಗಳು ರೀಲ್ಸ್ಗಾಗಿ ಮತ್ತು ತೋರಿಕೆಗಾಗಿ ಆಚರಣೆಯಾಗುತ್ತಿವೆ. ಹಿಂದೆ ನಾವು ಹಬ್ಬಗಳನ್ನು ಹೆಚ್ಚು ನೈಜವಾಗಿ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸುತ್ತಿದ್ದೆವು. ಆದರೆ ಇತ್ತೀಚೆಗೆ ಹಬ್ಬಗಳು ಪ್ರತಿಷ್ಠೆಯ ಸಂಕೇತವಾಗಿ ಮಾರ್ಪಟ್ಟಿವೆ. ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ಹೆಚ್ಚಿನ ಹಣ ಖರ್ಚು ಮಾಡಬೇಕಾದ ಸ್ಥಿತಿಗತಿಗಳಿಂದಾಗಿ ಜನರ ನಡುವಿನ ಭಾವನೆಗಳು ಕಡಿಮೆಯಾಗುತ್ತಿವೆ ಮತ್ತು ಅವರು ಪರಸ್ಪರ ದೂರವಾಗುತ್ತಿದ್ದಾರೆ. ಹಬ್ಬಗಳ ಮುಖ್ಯ ಉದ್ದೇಶವೇ ಒಟ್ಟಾಗಿರುವುದು. ಆದರೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುವ ಭರದಲ್ಲಿ ಜನರು ಅತಿಯಾಗಿ ತೊಡಗಿಸಿಕೊಂಡಿದ್ದು, ಹಣ ಗಳಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.”
ಬೆಂಗಳೂರಿನ ನೆಲಮಂಗಲದ ನಿವಾಸಿ ಕುಮಾರಸ್ವಾಮಿ ಅವರ ಪ್ರಕಾರ, “ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿದ್ದ ಕಾಲವೊಂದಿತ್ತು. ಭಕ್ತಿಯ ದ್ಯೋತಕವಾಗಿ, ಭಾವನೆಗಳ ಮೂಲಕ ಪ್ರೀತಿ ಹಂಚಿಕೆಯಾಗುತ್ತಿತ್ತು. ಆದರೆ ಇತ್ತೀಚಿನ ಯುವಜನರಿಗೆ ಹಬ್ಬ ಕೇವಲ ತೋರಿಕೆಯಷ್ಟೇ. ಹೊಸ ಬಟ್ಟೆ, ನಾಲ್ಕು ಫೋಟೊ, ಒಂದು ರೀಲ್ಸ್; ನಂತರ ಎಲ್ಲವೂ ನೀರಸವಾಗಿರುತ್ತದೆ.
“ಸಣ್ಣವರಿರುವಾಗ ಇದ್ದ ಖುಷಿ ಮತ್ತು ಹುರುಪು ಈಗ ಮಾಯವಾಗುತ್ತಿರುವುದಕ್ಕೆ ಮೂಲ ಕಾರಣ ಕೈಯಲ್ಲಿರುವ ಮೊಬೈಲ್ನಲ್ಲಿ ಬರುವುದನ್ನೇ ಸತ್ಯ ಎಂದು ಹಿಂದುಮುಂದು ನೋಡದೆ ಒಪ್ಪಿಕೊಳ್ಳುವ ಮನಸ್ಥಿತಿ. ಅದು ನಿಜವೋ ಸುಳ್ಳೋ ಎಂದು ಅರಿಯುವ ಮನಸ್ಸು ಈಗಿನವರಿಗೆ ಇಲ್ಲ. ಅಲ್ಲದೆ, ಈಗಿನ ಪೋಷಕರಲ್ಲೂ ಹಬ್ಬಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಅದಕ್ಕೂ ಮೊಬೈಲ್ ಬಳಕೆಯೇ ಮೂಲ ಕಾರಣ” ಎನ್ನುತ್ತಾರೆ ಕುಮಾರಸ್ವಾಮಿ.






