ಪಾಲಕ್ಕಾಡ್ನಿಂದ ಬಾಹ್ಯಾಕಾಶಕ್ಕೆ: ಮೂವರು ಗಗನಯಾತ್ರಿಗಳ ಅಪರೂಪದ ಕಥೆ

Photo Credit: ndtv
ಭಾರತೀಯ ಮೂಲದ ನಾಸಾ (NASA) ಗಗನಯಾತ್ರಿ ಡಾ. ಅನಿಲ್ ಮೆನನ್ ಅವರು ಸೋಯುಜ್ MS-29 ಗಗನನೌಕೆಯ ಮೂಲಕ ಬುಧವಾರ (15 ಜುಲೈ 2026) ಮುಂಜಾನೆ ಅಂತರರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣವನ್ನು (ISS) ತಲುಪಿದ್ದಾರೆ. ಈ ಮೂಲಕ ಅವರು ತಮ್ಮ ಚೊಚ್ಚಲ 8 ತಿಂಗಳ ಬಾಹ್ಯಾಕಾಶ ಪ್ರಯಾಣವನ್ನು ಆರಂಭಿಸಿದ್ದಾರೆ. ಡಾ. ಮೆನನ್ ಮತ್ತು ರಷ್ಯಾದ ಗಗನಯಾತ್ರಿಗಳಾದ ಪಯೋಟರ್ ಡುಬ್ರೊವ್ ಹಾಗೂ ಅನ್ನಾ ಕಿಕಿನಾ ಅವರನ್ನು ಹೊತ್ತ ರಷ್ಯಾದ ಬಾಹ್ಯಾಕಾಶ ನೌಕೆಯು ಮಂಗಳವಾರ (14 ಜುಲೈ) ರಾತ್ರಿ 8:17 ಕ್ಕೆ (IST) ಬೈಕನೂರಿನಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು. ಅಲ್ಲಿ ಅವರು 2027 ರಲ್ಲಿ ಭೂಮಿಗೆ ಮರಳುವ ಮುನ್ನ ಸುಮಾರು 8 ತಿಂಗಳುಗಳ ಕಾಲ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳನ್ನು ನಡೆಸಲಿದ್ದಾರೆ. ಇದು ಅನಿಲ್ ಮೆನನ್ ಅವರ ಚೊಚ್ಚಲ ಬಾಹ್ಯಾಕಾಶ ಪ್ರಯಾಣವಾಗಿದೆ.
ಡಾ.ಅನಿಲ್ ಮೆನನ್ ಪಾಲಕ್ಕಾಡ್ ನವರು. ಅಂದಹಾಗೆ ಕೇರಳಂನ 'ಪಾಲಕ್ಕಾಡ್' ಜಿಲ್ಲೆ ಈಗ ಮೂವರು ಗಗನಯಾತ್ರಿಗಳೊಂದಿಗೆ ನಂಟು ಹೊಂದಿದೆ. ಅವರಲ್ಲಿ ಒಬ್ಬರು ಐತಿಹಾಸಿಕ 'ಪೋಲಾರಿಸ್ ಡಾನ್' ಮಿಷನ್ ಮೂಲಕ ಯಶಸ್ವಿಯಾಗಿ ಪ್ರಯಾಣ ಬೆಳೆಸಿದ ಖಾಸಗಿ ಗಗನಯಾತ್ರಿ ಅನ್ನಾ ಮೆನನ್. ಎರಡನೆಯವರು ಬಾಹ್ಯಾಕಾಶಕ್ಕೆ ತಮ್ಮ ಚೊಚ್ಚಲ ಪ್ರಯಾಣ ಬೆಳೆಸಿರುವ ಡಾ. ಅನಿಲ್ ಮೆನನ್. ಇನ್ನು ಮೂರನೆಯವರು ಏರ್ ಕಮೋಡೋರ್ ಪ್ರಶಾಂತ್ ಬಾಲಕೃಷ್ಣನ್ ನಾಯರ್. ಇವರು ಭಾರತದ ಮಹತ್ವಾಕಾಂಕ್ಷೆಯ 'ಗಗನಯಾನ್' ಯೋಜನೆಯ ಗಗನಯಾತ್ರಿಗಳಲ್ಲೊಬ್ಬರಾಗಿದ್ದು, ಮೂಲತಃ ಆಕ್ಸಿಯಂ-4 (Axiom-4) ಮಿಷನ್ನ ಸಿದ್ಧತೆಗಳ ಭಾಗವಾಗಿದ್ದರು ಮತ್ತು ಭಾರತದ ಅತ್ಯಂತ ಭರವಸೆಯ ಗಗನಯಾತ್ರಿಗಳಲ್ಲಿ ಒಬ್ಬರೆನಿಸಿದ್ದಾರೆ.
ಮಾನವನ ಬಾಹ್ಯಾಕಾಶ ಯಾನದ ಇತಿಹಾಸಕ್ಕೆ ಕೇರಳ, ಅದರಲ್ಲೂ ವಿಶೇಷವಾಗಿ ಪಾಲಕ್ಕಾಡ್ ಜಿಲ್ಲೆ ನೀಡಿರುವ ಕೊಡುಗೆ ನಿಜಕ್ಕೂ ಅಸಾಧಾರಣವಾದುದು. ಮಲಯಾಳಿಗಳು ಈ ಸಂಭ್ರಮವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಜೊತೆಗೆ ಇಸ್ರೋ (ISRO) ಸಂಸ್ಥೆಯು ಕೂಡ ಕೇರಳದ 'ತುಂಬಾ' ಎಂಬ ಮೀನುಗಾರಿಕಾ ಹಳ್ಳಿಯಲ್ಲೇ ಜನ್ಮತಾಳಿತು ಎಂಬುದನ್ನು ಇಲ್ಲಿ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿದ್ದಾರೆ.
ಏರ್ ಕಮೋಡೋರ್ ಪ್ರಶಾಂತ್ ನಾಯರ್ ಅವರಿಗೆ ಅನಿಲ್ ಮೆನನ್ ಅವರ ಈ ಬಾಹ್ಯಾಕಾಶ ಯಾನವು ವೈಯಕ್ತಿಕವಾಗಿ ಮತ್ತು ಭಾವನಾತ್ಮಕವಾಗಿ ಅತ್ಯಂತ ಮಹತ್ವದ್ದಾಗಿದೆ. ಇವರಿಬ್ಬರು ಹೂಸ್ಟನ್ನಲ್ಲಿ ತರಬೇತಿ ಪಡೆಯುತ್ತಿದ್ದ ಅವಧಿಯಲ್ಲಿ ಒಟ್ಟಿಗೆ ಸಮಯ ಕಳೆದಿದ್ದು, ಆ ಸಮಯದಲ್ಲಿ ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆದಿತ್ತು.
ಅನಿಲ್ ಅವರ ಬಾಹ್ಯಾಕಾಶ ಯಾನದ ಉಡಾವಣೆಗೆ ಮುನ್ನ ಎನ್ಡಿಟಿವಿ ಜೊತೆಗೆ ಹಂಚಿಕೊಂಡ ಆತ್ಮೀಯ ಸಂದೇಶದಲ್ಲಿ ಪ್ರಶಾಂತ್ ನಾಯರ್ ಹೀಗೆ ಬರೆದಿದ್ದಾರೆ: "ಪ್ರೀತಿಯ ಸಹೋದರ ಅನಿಲ್ ಮತ್ತು ಪ್ರೀತಿಯ ಅನ್ನಾ... ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವುದು ನನಗೂ ಮತ್ತು ನನ್ನ ಪತ್ನಿ ಲೀನಾಗೂ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಭಾರತ ದೇಶದೊಂದಿಗೆ ಮತ್ತು ಕೇರಳದೊಂದಿಗೆ ನಿಮಗಿರುವ ನಂಟು ಸದಾ ನೆನಪಿನಲ್ಲಿ ಉಳಿಯುತ್ತದೆ. ನಾವೆಲ್ಲರೂ ಇಲ್ಲಿಂದ ನಿಮಗಾಗಿ ಹಾರೈಸುತ್ತಿದ್ದೇವೆ. ಕಳೆದ ವರ್ಷ ಹೂಸ್ಟನ್ನಲ್ಲಿ ನಮ್ಮ ತರಬೇತಿಯ ಸಮಯದಲ್ಲಿ ನಿಮ್ಮಿಬ್ಬರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಸೌಭಾಗ್ಯ ನಮಗೆ ಸಿಕ್ಕಿತ್ತು. ಈ ಉಡಾವಣೆಯೊಂದಿಗೆ, ನೀವಿಬ್ಬರೂ (ಅನಿಲ್ ಮತ್ತು ಅವರ ಗಗನಯಾತ್ರಿ ಪತ್ನಿ ಅನ್ನಾ ಮೆನನ್) ನಿಜಕ್ಕೂ ಒಂದು ಪರಿಪೂರ್ಣ ಗಗನಯಾತ್ರಿ ದಂಪತಿಯಾಗಿದ್ದೀರಿ."
ಈ ಸಂದೇಶವು ಕೇವಲ ಸ್ನೇಹವನ್ನು ಮಾತ್ರವಲ್ಲದೆ, ತರಬೇತಿ, ಪರಿಶೋಧನೆ ಮತ್ತು ಬಾಹ್ಯಾಕಾಶದ ಮೇಲಿನ ಹಂಚಿಕೊಂಡ ಉತ್ಸಾಹದಿಂದ ಒಂದಾದ ಹೊಸ ಪೀಳಿಗೆಯ ಗಗನಯಾತ್ರಿಗಳ ನಡುವೆ ಬೆಳೆಯುತ್ತಿರುವ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.
ಭಾರತೀಯರಿಗೆ ಪ್ರಶಾಂತ್ ನಾಯರ್ ಅವರ ಈ ಸಂದೇಶವು ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ ಅವರು ಸ್ವತಃ 'ಗಗನಯಾನ್' ಕಾರ್ಯಕ್ರಮದ ಮೂಲಕ ಭಾರತದ ಭವಿಷ್ಯದ ಮಾನವ ಬಾಹ್ಯಾಕಾಶ ಯಾನದ ಮಹತ್ವಾಕಾಂಕ್ಷೆಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಅನಿಲ್ ಮೆನನ್ ಅವರ ತಂದೆ ಭಾರತೀಯ ಮತ್ತು ತಾಯಿ ಉಕ್ರೇನ್ನವರು. ಬೆಳೆದದ್ದು ಅಮೆರಿಕದಲ್ಲಿ. ಡಾ. ಮೆನನ್ ಅವರ ಕುಟುಂಬದ ಬೇರುಗಳು ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಟ್ಟಪಾಲಂಗೆ ಸೇರಿವೆ. ಅವರ ತಂದೆ ಕೆ. ಪಿ. ಶಂಕರನ್ ಮೆನನ್ ಒಟ್ಟಪಾಲಂ ಮೂಲದವರಾಗಿದ್ದಾರೆ. ಬ್ರಿಟಿಷ್ ರಾಜ್ ಅವಧಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಪ್ರಸಿದ್ಧ ವಕೀಲ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸರ್ ಚೇತೂರ್ ಶಂಕರನ್ ನಾಯರ್ ಅವರು ಅನಿಲ್ ಮೆನನ್ ಅವರ ಮುತ್ತಾತ. ಇನ್ನು ಅನಿಲ್ ಅವರ ತಾಯಿ ಎಲಿಜಬೆತ್, ಉಕ್ರೇನ್ನಿಂದ ಅಮೆರಿಕಾಗೆ ವಲಸೆ ಬಂದವರಾಗಿದ್ದಾರೆ.
ಭಾರತದೊಂದಿಗಿನ ಅವರ ಸಂಬಂಧವು ಕೇವಲ ಪೂರ್ವಜರಿಗೆ ಮಾತ್ರ ಸೀಮಿತವಾಗಿಲ್ಲ. ಗಗನಯಾತ್ರಿಯಾಗುವ ಮೊದಲು, ಮೆನನ್ ಅವರು ರೋಟರಿ ಅಂಬಾಸಿಡೋರಿಯಲ್ ಸ್ಕಾಲರ್ ಆಗಿ ಪೋಲಿಯೊ ಲಸಿಕೆ ಅಭಿಯಾನಕ್ಕೆ ಬೆಂಬಲ ನೀಡಲು ಭಾರತದಲ್ಲಿ ಸಮಯ ಕಳೆದಿದ್ದರು. ನಾಸಾ ಪ್ರಕಾರ, ಅವರು ವಿಶ್ವದ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸಾಧನೆಗಳಲ್ಲಿ ಒಂದಾದ ಭಾರತದ ಪೋಲಿಯೊ ನಿರ್ಮೂಲನಾ ಅಭಿಯಾನವನ್ನು ಅಧ್ಯಯನ ಮಾಡಲು ಮತ್ತು ಅದಕ್ಕೆ ಬೆಂಬಲ ನೀಡಲು ಭಾರತದಲ್ಲಿ 1 ವರ್ಷ ಕಳೆದಿದ್ದರು. ಆ ಅವಧಿಯಲ್ಲಿ ಅವರು ಹೊಸದಿಲ್ಲಿಯಲ್ಲಿದ್ದುಕೊಂಡು ಆರೋಗ್ಯ ಸಂಬಂಧಿತ ಉಪಕ್ರಮಗಳಲ್ಲಿ ಕೆಲಸ ಮಾಡಿದ್ದರು. ಇದು ನಂತರ ವೈದ್ಯರಾಗಿ ಮತ್ತು ಮಾನವತಾವಾದಿಯಾಗಿ ಅವರ ವೃತ್ತಿಜೀವನವನ್ನು ರೂಪಿಸಲು ಸಹಾಯ ಮಾಡಿತು ಎಂದು ʼNDTV ವರ್ಲ್ಡ್ʼ ಜತೆ ಮಾತನಾಡಿದ ಅನಿಲ್ ಹೇಳಿದ್ದಾರೆ.
ಅನಿಲ್ ಮೆನನ್ ಸಾಮಾನ್ಯ ಗಗನಯಾತ್ರಿಯಲ್ಲ. ಅವರು ವೈದ್ಯ, ಮೆಕ್ಯಾನಿಕಲ್ ಇಂಜಿನಿಯರ್, ಏರೋಸ್ಪೇಸ್ ಮೆಡಿಸಿನ್ ತಜ್ಞರು, ಫ್ಲೈಟ್ ಸರ್ಜನ್, ಮಿಲಿಟರಿ ಅಧಿಕಾರಿ, ಪೈಲಟ್ ಮತ್ತು ಸಂಶೋಧಕ - ಹೀಗೆ ಎಲ್ಲವೂ ಒಂದೇ ರೂಪದಲ್ಲಿ ಮೇಳೈಸಿದ ವ್ಯಕ್ತಿತ್ವ. ನಾಸಾ ಅವರನ್ನು ತುರ್ತು ಚಿಕಿತ್ಸಾ ವೈದ್ಯರು, ಯುನೈಟೆಡ್ ಸ್ಟೇಟ್ಸ್ ಸ್ಪೇಸ್ ಫೋರ್ಸ್ನ ಕರ್ನಲ್ ಮತ್ತು ಮಾಜಿ ನಾಸಾ ಫ್ಲೈಟ್ ಸರ್ಜನ್ ಎಂದು ವಿವರಿಸುತ್ತದೆ. ಅವರು ಸ್ವತಃ ಗಗನಯಾತ್ರಿಯಾಗುವ ಮುನ್ನವೇ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳಿಗೆ ವೈದ್ಯಕೀಯ ಸೇವೆ ಒದಗಿಸಿದ್ದರು.
ಅನಿಲ್ ಮೆನನ್ ಅವರಿಗೆ ಈ ಮಿಷನ್ ವಿಶೇಷವಾಗಿ ಮಹತ್ವದ್ದಾಗಿದೆ. ಏಕೆಂದರೆ ಮೆನನ್ ಅವರು ಈಗಾಗಲೇ ಗಗನಯಾತ್ರಿಗಳ ಆರೋಗ್ಯ ರಕ್ಷಣೆಗಾಗಿ ಭೂಮಿಯ ಮೇಲಿದ್ದುಕೊಂಡೇ ವರ್ಷಗಟ್ಟಲೆ ಕೆಲಸ ಮಾಡಿದ್ದಾರೆ. ಅವರು ಫ್ಲೈಟ್ ಸರ್ಜನ್ ಆಗಿ ಅಂತರರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣದ ಹಲವು ತಂಡಗಳಿಗೆ ವೈದ್ಯಕೀಯ ಸೇವೆ ನೀಡಿದ್ದಾರೆ ಮತ್ತು ರಷ್ಯಾದ ಸ್ಟಾರ್ ಸಿಟಿಯಲ್ಲಿ 6 ತಿಂಗಳಿಗಿಂತ ಹೆಚ್ಚು ಕಾಲ ವಾಸಿಸಿ ಕೆಲಸ ಮಾಡಿದ್ದಾರೆ ಎಂದು ನಾಸಾ ತಿಳಿಸಿದೆ.
ಇತರರು ಬಾಹ್ಯಾಕಾಶ ತಲುಪಲು ಸಹಾಯ ಮಾಡಿದ ಅವರು, ಈಗ ಸ್ವತಃ ಅದನ್ನು ಅನುಭವಿಸಲಿದ್ದಾರೆ.
ತಮ್ಮ ಈ ಬಾಹ್ಯಾಕಾಶ ಪ್ರಯಾಣದ ಅವಧಿಯಲ್ಲಿ, ಮೆನನ್ ಅವರು ಮಾನವನ ದೇಹವು ಬಾಹ್ಯಾಕಾಶಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೆಲವು ಪ್ರಮುಖ ಪ್ರಯೋಗಗಳಲ್ಲಿ ಭಾಗವಹಿಸಲಿದ್ದಾರೆ. ಸಂಶೋಧಕರು ಶೂನ್ಯ ಗುರುತ್ವಾಕರ್ಷಣೆಯಲ್ಲಿ ರಕ್ತ ಪರಿಚಲನೆ, ರಕ್ತನಾಳಗಳ ರಚನೆ ಮತ್ತು ರಕ್ತದ ಸಂಯೋಜನೆಯನ್ನು ಅಧ್ಯಯನ ಮಾಡಲಿದ್ದಾರೆ. ಭವಿಷ್ಯದ ಸುದೀರ್ಘ ಚಂದ್ರ ಮತ್ತು ಮಂಗಳ ಗ್ರಹಗಳ ಕಾರ್ಯಾಚರಣೆಗೆ ಅತ್ಯಂತ ಪ್ರಮುಖವಾಗಬಹುದಾದ, ಬಾಹ್ಯಾಕಾಶ ನಿಲ್ದಾಣದ ಕುಡಿಯುವ ನೀರನ್ನು ಬಳಸಿ ಐವಿ (intravenous) ದ್ರವಗಳನ್ನು ಉತ್ಪಾದಿಸುವ ತಂತ್ರಜ್ಞಾನವನ್ನು ಪರೀಕ್ಷಿಸಲು ಕೂಡ ಅವರು ಸಹಾಯ ಮಾಡಲಿದ್ದಾರೆ.
ಭವಿಷ್ಯದ ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ಸಮಯದಲ್ಲಿ ಗಗನಯಾತ್ರಿಗಳಿಗೆ ನೆರವಾಗಲು ಆಗ್ಮೆಂಟೆಡ್ ರಿಯಾಲಿಟಿ (AR) ಮತ್ತು ಕೃತಕ ಬುದ್ಧಿಮತ್ತೆಯನ್ನು (AI) ಬಳಸುವ ಅಲ್ಟ್ರಾಸೌಂಡ್ ಪ್ರಕ್ರಿಯೆಗಳು ಸೇರಿದಂತೆ, ಸುಧಾರಿತ ವೈದ್ಯಕೀಯ ಮತ್ತು ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ನಾಸಾ ಹೇಳಿದೆ.
ಅನಿಲ್ ಮೆನನ್ ಅವರ ಪತ್ನಿ ಅನ್ನಾ ಮೆನನ್ ಈಗಾಗಲೇ ಸ್ವತಃ ಒಬ್ಬ ಪ್ರಸಿದ್ಧ ಗಗನಯಾತ್ರಿಯಾಗಿದ್ದಾರೆ. ಅನ್ನಾ ಮೆನನ್ ಅವರು ಸೆಪ್ಟೆಂಬರ್ 2024 ರಲ್ಲಿ ಸ್ಪೇಸ್ಎಕ್ಸ್ನ (SpaceX) 'ಪೋಲಾರಿಸ್ ಡಾನ್' ಮಿಷನ್ ಮೂಲಕ ಮೊದಲ ಬಾರಿಗೆ ಜಾಗತಿಕ ಗಮನ ಸೆಳೆದಿದ್ದರು. 2025 ರಲ್ಲಿ ನಾಸಾದ ಗಗನಯಾತ್ರಿಗಳ ತಂಡವನ್ನು ಸೇರುವ ಮೊದಲು, ಅವರು ಸ್ಪೇಸ್ಎಕ್ಸ್ನಲ್ಲಿ ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಗಳ ಇಂಜಿನಿಯರ್ ಮತ್ತು ಮಿಷನ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.
ಪೋಲಾರಿಸ್ ಡಾನ್ ಇದುವರೆಗೆ ನಡೆದ ಅತ್ಯಂತ ಮಹತ್ವಾಕಾಂಕ್ಷೆಯ ಖಾಸಗಿ ಮಾನವ ಬಾಹ್ಯಾಕಾಶ ಯಾನಗಳಲ್ಲಿ ಒಂದಾಗಿದೆ. ಪ್ರಸ್ತುತ ನಾಸಾ ಮುಖ್ಯಸ್ಥರಾಗಿರುವ ಉದ್ಯಮಿ ಜ್ಯಾರೆಡ್ ಐಸಾಕ್ಮನ್ ನೇತೃತ್ವದಲ್ಲಿ ನಡೆದ ಈ ಮಿಷನ್, ಖಾಸಗಿ ಬಾಹ್ಯಾಕಾಶ ಪರಿಶೋಧನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿತ್ತು. ಅನ್ನಾ ಮೆನನ್ ಅವರು ಈ ಮಿಷನ್ನ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು ನೌಕೆಯ ಒಳಗಿನ ವಿವಿಧ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಮಿಷನ್ ವಿಶ್ವದ ಮೊದಲ ವಾಣಿಜ್ಯ ಬಾಹ್ಯಾಕಾಶ ನಡಿಗೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಇತಿಹಾಸ ನಿರ್ಮಿಸಿತು. ಇದು ಖಾಸಗಿ ಬಾಹ್ಯಾಕಾಶ ಯಾನದಲ್ಲಿ ಸಂಪೂರ್ಣ ಹೊಸ ಅಧ್ಯಾಯವನ್ನು ತೆರೆಯಿತು.
ಅನ್ನಾ ಮೆನನ್ ಮತ್ತು ಅವರ ಸಹ ಗಗನಯಾತ್ರಿ ಸಾರಾ ಗಿಲ್ಲಿಸ್ ಅವರು ಈ ಹಿಂದೆ ಯಾವುದೇ ಮಹಿಳೆ ತಲುಪದಷ್ಟು ದೂರಕ್ಕೆ ಭೂಮಿಯಿಂದ ಬಾಹ್ಯಾಕಾಶದಲ್ಲಿ ಪ್ರಯಾಣಿಸುವ ಮೂಲಕ ಜಾಗತಿಕ ದಾಖಲೆ ಬರೆದಿದ್ದಾರೆ. ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದ ಅತ್ಯಂತ ಸಂಕೀರ್ಣ ಕಾರ್ಯಾಚರಣೆಗಳನ್ನು ಖಾಸಗಿ ಮಿಷನ್ಗಳು ಕೂಡ ಯಶಸ್ವಿಯಾಗಿ ನಿರ್ವಹಿಸಬಲ್ಲವು ಎಂಬುದನ್ನು ಅನ್ನಾ ಮೆನನ್ ಅವರ ಪಾತ್ರವು ಜಗತ್ತಿಗೆ ತೋರಿಸಿಕೊಟ್ಟಿದೆ.
ಇಂದು ಅನ್ನಾ ಮೆನನ್ ಅವರು ನಾಸಾ ಗಗನಯಾತ್ರಿ ಅಭ್ಯರ್ಥಿಯಾಗಿ ತರಬೇತಿ ಪಡೆಯುತ್ತಿದ್ದರೆ, ಅವರ ಪತಿ ತಮ್ಮ ಚೊಚ್ಚಲ ಬಾಹ್ಯಾಕಾಶ ಯಾನಕ್ಕೆ ಸಜ್ಜಾಗುತ್ತಿದ್ದಾರೆ. ಇವರಿಬ್ಬರೂ ಒಟ್ಟಾಗಿ ವಿಶ್ವದ ಅತ್ಯಂತ ಅಪರೂಪದ ಗಗನಯಾತ್ರಿ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ.ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ .
ಪ್ರಶಾಂತ್ ನಾಯರ್ ಮತ್ತು ಅನಿಲ್ ಮೆನನ್ ನಡುವಿನ ನಂಟು ಗಗನಯಾತ್ರಿಗಳ ತರಬೇತಿ ಮತ್ತು ಸಹಕಾರವು ಜಾಗತಿಕ ಮಟ್ಟದಲ್ಲಿ ಹೇಗೆ ವಿಸ್ತರಿಸುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ನಾಸಾ, ರಾಸ್ಕಾಸ್ಮಾಸ್, ಸ್ಪೇಸ್ಎಕ್ಸ್, ಇಸ್ರೋ ಅಥವಾ ಭಾರತದ ಭವಿಷ್ಯದ ಮಿಷನ್ಗಳ ಅಡಿಯಲ್ಲಿ ಯಾನ ಕೈಗೊಳ್ಳುವ ಗಗನಯಾತ್ರಿಗಳು ಇಂದು ಒಟ್ಟಿಗೆ ತರಬೇತಿ ಪಡೆಯುತ್ತಾರೆ, ಒಟ್ಟಿಗೆ ಕಲಿಯುತ್ತಾರೆ ಮತ್ತು ಪರಸ್ಪರ ಉತ್ತಮ ಸ್ನೇಹವನ್ನು ಬೆಳೆಸಿಕೊಳ್ಳುತ್ತಾರೆ.
ಇದೇ ವೇಳೆ, ಕೇರಳಕ್ಕೆ ಈ ಸಂಭ್ರಮವನ್ನು ಆಚರಿಸಲು ಸಾಕಷ್ಟು ಕಾರಣಗಳಿವೆ.
ಅನ್ನಾ ಮೆನನ್ ಅವರು ಖಾಸಗಿ ಗಗನಯಾತ್ರಿ ಮಿಷನ್ಗಳ ಆಧುನಿಕ ಯುಗಕ್ಕೆ ಮುನ್ನುಡಿ ಬರೆದಿದ್ದಾರೆ ಮತ್ತು ವಿಶ್ವದ ಮೊದಲ ವಾಣಿಜ್ಯ ಬಾಹ್ಯಾಕಾಶ ನಡಿಗೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅನಿಲ್ ಮೆನನ್ ಅವರು ನಾಸಾ ಗಗನಯಾತ್ರಿ, ವೈದ್ಯ ಹಾಗೂ ಸಂಶೋಧಕರಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲು ಸಿದ್ಧರಾಗಿದ್ದಾರೆ.
ಇನ್ನು ಪ್ರಶಾಂತ್ ನಾಯರ್ ಅವರು ಭಾರತದ ಭವಿಷ್ಯದ ಮಾನವ ಬಾಹ್ಯಾಕಾಶ ಯಾನದ ಅತ್ಯಂತ ಪ್ರಮುಖ ಮುಖಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಅಮೆರಿಕ ಮತ್ತು ರಷ್ಯಾವನ್ನು ಹೊರತುಪಡಿಸಿದರೆ, ಜಗತ್ತಿನ ಬೇರೆ ಯಾವುದೇ ಪ್ರದೇಶದಲ್ಲೂ ಇಷ್ಟು ಕಡಿಮೆ ವ್ಯಾಪ್ತಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಗಗನಯಾತ್ರಿಗಳ ಪ್ರತಿಭೆ ಮತ್ತು ಸಾಧನೆ ಒಟ್ಟಿಗೆ ಕಂಡುಬಂದಿಲ್ಲ.
ಕೃಪೆ: ndtv.com






