ಸ್ಟೀವ್ ಜಾಬ್ಸ್ ನಿಂದ ಜೆನ್ಸನ್ ವಾಂಗ್ ವರೆಗೆ: ಅಮೆರಿಕನ್ ಟೆಕ್ ಲೋಕ ಸಂಸ್ಥಾಪಕರನ್ನೇ ನೆಚ್ಚಿಕೊಳ್ಳುತ್ತಿರುವುದೇಕೆ?
ಸೌಮ್ಯರೇಂದ್ರ ಬರಿಕ್- indianexpress. com ವರದಿ

Photo Credit : indianexpress.com
ಶಂಕಿತ ಚೀನೀ ಗುಪ್ತಚರ ಏಜೆಂಟ್ ಸೇರಿದಂತೆ ವಿವಾಹೇತರ ಸಂಬಂಧಗಳ ಕುರಿತಾದ ಆರೋಪಗಳು ಬಹಿರಂಗವಾದ ಬೆನ್ನಲ್ಲೇ Nvidia ಕಂಪೆನಿಯಿಂದ ಕೆಳಗಿಳಿದಿದ್ದ ಜೆನ್ಸನ್ ವಾಂಗ್, ಕೇವಲ ಹನ್ನೊಂದು ದಿನಗಳ ನಂತರ ಕೃತಕ ಬುದ್ಧಿಮತ್ತೆ (AI) ಚಿಪ್ ತಯಾರಕ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಮರಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಪ್ರವೇಶ ಮತ್ತು ಹೂಡಿಕೆದಾರರ ಹೆಚ್ಚುತ್ತಿರುವ ಒತ್ತಡದ ನಂತರ ನಡೆದ ಅವರ ಈ ಮರುನೇಮಕಾತಿಯು, ಇತ್ತೀಚಿನ ಸಿಲಿಕಾನ್ ವ್ಯಾಲಿ ಇತಿಹಾಸದಲ್ಲೇ ಅತ್ಯಂತ ನಾಟಕೀಯ ಪುನರಾಗಮನಗಳಲ್ಲಿ ಒಂದಾಗಿದೆ.
ವಾಂಗ್ ಅವರ ನಿರ್ಗಮನ ಮತ್ತು ನಂತರದ ಮರುಪ್ರವೇಶದ ಸುತ್ತಲಿನ ಸಂದರ್ಭಗಳು ಅಸಾಮಾನ್ಯವಾಗಿದ್ದರೂ, ಅಮೆರಿಕದ ತಂತ್ರಜ್ಞಾನ ಕಂಪೆನಿಗಳು ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಸಂಸ್ಥಾಪಕರ ಮೊರೆ ಹೋಗುವ ಸುದೀರ್ಘ ಇತಿಹಾಸವನ್ನು ಹೊಂದಿವೆ. ಆ್ಯಪಲ್ ನ ಸ್ಟೀವ್ ಜಾಬ್ಸ್ ನಿಂದ ಹಿಡಿದು OpenAIನ ಸ್ಯಾಮ್ ಆಲ್ಟ್ಮನ್ ವರೆಗೆ, ಉದ್ಯಮದ ಕೆಲವು ಪ್ರಮುಖ ಕಾರ್ಯನಿರ್ವಾಹಕರು ತಾವು ಕಟ್ಟಿ ಬೆಳೆಸಿದ ಕಂಪೆನಿಗಳನ್ನು ಮುನ್ನಡೆಸಲು ಮರಳಿದ್ದಾರೆ. ಕೆಲವು ಸಂದರ್ಭಗಳಲ್ಲಿ ಕಂಪೆನಿಯ ಆಡಳಿತ ಮಂಡಳಿಯಿಂದಲೇ ಅವಮಾನಕರವಾಗಿ ಹೊರಹಾಕಲ್ಪಟ್ಟ ನಂತರವೂ ಅವರು ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ.
ಸಿಲಿಕಾನ್ ವ್ಯಾಲಿಯು ತನ್ನ ಸಂಸ್ಥಾಪಕರೊಂದಿಗೆ ಹೊಂದಿರುವ ವಿಶಿಷ್ಟ ಸಂಬಂಧವನ್ನೂ ಈ ಪುನರಾಗಮನಗಳು ಪ್ರತಿಬಿಂಬಿಸುತ್ತವೆ. ಸಂಸ್ಥಾಪಕರ ವೈಯಕ್ತಿಕ ವ್ಯಕ್ತಿತ್ವ, ತಾಂತ್ರಿಕ ದೂರದೃಷ್ಟಿ ಮತ್ತು ಹೂಡಿಕೆದಾರರ ವಿಶ್ವಾಸವನ್ನು ಗಳಿಸುವ ಸಾಮರ್ಥ್ಯವು ಅವರು ನಡೆಸುವ ಕಂಪೆನಿಗಳಿಂದ ಬೇರ್ಪಡಿಸಲಾಗದಷ್ಟು ಬೆಸೆದುಕೊಂಡಿರುತ್ತದೆ.
ವೃತ್ತಿಪರ ವ್ಯವಸ್ಥಾಪಕರಿಗೆ ಸುಲಭವಾಗಿ ಅನುಕರಿಸಲು ಸಾಧ್ಯವಾಗದಂತಹ, ತಮ್ಮ ವ್ಯವಹಾರದ ಕುರಿತಾದ ಸಹಜ ಒಳನೋಟವು ಸಂಸ್ಥಾಪಕರಿಗೆ ಇರುತ್ತದೆ ಎಂಬ ನಂಬಿಕೆ ಸಿಲಿಕಾನ್ ವ್ಯಾಲಿಯಲ್ಲಿ ಬೇರೂರಲು ಸ್ಟೀವ್ ಜಾಬ್ಸ್ ಅವರಂತಹವರ ಯಶಸ್ಸು ಕಾರಣವಾಗಿದೆ. ಆದರೆ, ವಾಂಗ್ ಅವರ ಮರುಪ್ರವೇಶವು ಸ್ವಲ್ಪ ಭಿನ್ನವಾಗಿದೆ. ವ್ಯವಹಾರದ ಸವಾಲುಗಳನ್ನು ಎದುರಿಸುತ್ತಿದ್ದ ಆ್ಯಪಲ್ ಕಂಪೆನಿಗೆ ಮರಳಿದ ಜಾಬ್ಸ್ ಅವರಂತೆ ಅಲ್ಲದೆ, ಸ್ವತಃ ವಾಂಗ್ ಅವರ ನಡವಳಿಕೆಯ ಕುರಿತು ಬಹಿರಂಗವಾದ ವಿಚಾರಗಳಿಂದ ಸೃಷ್ಟಿಯಾದ ಬಿಕ್ಕಟ್ಟಿನ ನಂತರ ಅವರ ಮರುನೇಮಕಾತಿ ನಡೆದಿದೆ.
ತನಿಖೆಗಳು ಇನ್ನೂ ಪ್ರಗತಿಯಲ್ಲಿರುವಾಗಲೇ ವಾಂಗ್ ಅವರ ಮರುಪ್ರವೇಶವಾಗಿರುವುದು, ಕಂಪೆನಿಯ ವಾಣಿಜ್ಯ ಯಶಸ್ಸಿಗೆ ಒಬ್ಬ ಸಂಸ್ಥಾಪಕ ಅನಿವಾರ್ಯವಾದಾಗ ಕಾರ್ಪೊರೇಟ್ ಆಡಳಿತ ಮತ್ತು ಉತ್ತರದಾಯಿತ್ವದ ಸಾಂಪ್ರದಾಯಿಕ ನಿಯಮಗಳನ್ನು ಎಷ್ಟರಮಟ್ಟಿಗೆ ಬದಿಗೊತ್ತಬಹುದು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಾಂಗ್ ಅವರ ಮರುನೇಮಕಾತಿಯ ಸುತ್ತ ರಾಷ್ಟ್ರೀಯ ಭದ್ರತೆ, ಆಡಳಿತ ಮತ್ತು ರಾಜಕೀಯ ಹಸ್ತಕ್ಷೇಪದ ಕುರಿತು ಉತ್ತರವಿಲ್ಲದ ಹಲವಾರು ಪ್ರಶ್ನೆಗಳೂ ಇವೆ.
ಸಿಲಿಕಾನ್ ವ್ಯಾಲಿಯ ಕೆಲವು ಅತ್ಯಂತ ಪ್ರಭಾವಿ ಸಂಸ್ಥಾಪಕರ ಪುನರಾಗಮನ, ಅವರ ಮರಳುವಿಕೆಗೆ ಕಾರಣವಾದ ಸಂದರ್ಭಗಳು ಮತ್ತು ಅವರು ತಮ್ಮ ಕಂಪೆನಿಗಳ ಭವಿಷ್ಯವನ್ನು ಹೇಗೆ ರೂಪಿಸಿದರು ಎಂಬುದರ ಕುರಿತ ವಿವರ ಇಲ್ಲಿದೆ.
►ಸ್ಟೀವ್ ಜಾಬ್ಸ್, ಆ್ಯಪಲ್ (1997)
ಸಿಲಿಕಾನ್ ವ್ಯಾಲಿಯ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಕಾರ್ಪೊರೇಟ್ ಪುನರಾಗಮನವೆಂದರೆ ಸ್ಟೀವ್ ಜಾಬ್ಸ್ ಅವರದ್ದು. ಇವರು 1976ರಲ್ಲಿ ಸ್ಟೀವ್ ವೋಜ್ನಿಯಾಕ್ ಅವರೊಂದಿಗೆ ಸೇರಿ ಆ್ಯಪಲ್ ಕಂಪೆನಿಯನ್ನು ಸ್ಥಾಪಿಸಿದರು.
ಸ್ವತಃ ಜಾಬ್ಸ್ ಅವರೇ ಪೆಪ್ಸಿಕೋದಿಂದ ನೇಮಿಸಿಕೊಂಡಿದ್ದ ಅಂದಿನ ಆ್ಯಪಲ್ ಸಿಇಒ ಜಾನ್ ಸ್ಕಲ್ಲಿ ಅವರೊಂದಿಗೆ ತೀವ್ರ ಅಧಿಕಾರ ಸಂಘರ್ಷ ನಡೆದ ನಂತರ, 1985ರಲ್ಲಿ ಕಂಪೆನಿಯ ಆಡಳಿತ ಮಂಡಳಿಯು ಸ್ಕಲ್ಲಿ ಪರ ನಿಂತಿತು. ಇದರಿಂದ ಜಾಬ್ಸ್ ಕಂಪೆನಿಯಿಂದ ಹೊರನಡೆಯಬೇಕಾಯಿತು. ನಂತರ ಅವರು NeXT ಎಂಬ ಕಂಪ್ಯೂಟರ್ ಕಂಪೆನಿಯನ್ನು ಸ್ಥಾಪಿಸಿದರು ಮತ್ತು ಮುಂದೆ ಅನಿಮೇಷನ್ ಸ್ಟುಡಿಯೊ Pixar ಆಗಿ ಬದಲಾದ ಉದ್ಯಮವನ್ನು ಖರೀದಿಸಿದರು.
1990ರ ದಶಕದ ಮಧ್ಯಭಾಗದ ವೇಳೆಗೆ, ಆ್ಯಪಲ್ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತು ಮತ್ತು ಮೈಕ್ರೋಸಾಫ್ಟ್ ಆಧಾರಿತ ಪರ್ಸನಲ್ ಕಂಪ್ಯೂಟರ್ಗಳ ಎದುರು ನೆಲೆ ಕಳೆದುಕೊಳ್ಳುತ್ತಿತ್ತು. ಆ್ಯಪಲ್ ಕಂಪೆನಿಯು NeXT ಅನ್ನು ಖರೀದಿಸಿದ್ದರಿಂದ ಜಾಬ್ಸ್ ಮತ್ತೆ ಕಂಪೆನಿಗೆ ಮರಳಿದರು ಮತ್ತು 1997ರ ಸೆಪ್ಟೆಂಬರ್ ನಲ್ಲಿ ಹಂಗಾಮಿ ಸಿಇಒ ಆದರು.
ನಂತರ ನಡೆದದ್ದು ಕಾರ್ಪೊರೇಟ್ ಇತಿಹಾಸದಲ್ಲೇ ಅತ್ಯಂತ ಗಮನಾರ್ಹ ಬದಲಾವಣೆಗಳಲ್ಲಿ ಒಂದು. ಜಾಬ್ಸ್ ನೇತೃತ್ವದಲ್ಲಿ ಆ್ಯಪಲ್ iMac, iPod, iPhone ಮತ್ತು iPad ಅನ್ನು ಬಿಡುಗಡೆ ಮಾಡಿತು. ಈ ಉತ್ಪನ್ನಗಳು ಗ್ರಾಹಕ ತಂತ್ರಜ್ಞಾನ ಉದ್ಯಮವನ್ನೇ ಮೂಲಭೂತವಾಗಿ ಬದಲಾಯಿಸಿದವು. 2011ರ ಆಗಸ್ಟ್ನಲ್ಲಿ ಜಾಬ್ಸ್ ಕೆಳಗಿಳಿಯುವ ವೇಳೆಗೆ, ಆ್ಯಪಲ್ ವಿಶ್ವದ ಅತ್ಯಂತ ಮೌಲ್ಯಯುತ ಕಂಪೆನಿಗಳಲ್ಲಿ ಒಂದಾಗಿ ಬೆಳೆದಿತ್ತು ಮತ್ತು ಇಂದಿಗೂ ಅದೇ ಸ್ಥಾನದಲ್ಲಿದೆ.
►ಸ್ಯಾಮ್ ಆಲ್ಟ್ಮನ್, OpenAI (2023)
ವಾಂಗ್ ಅವರ ನಾಟಕೀಯ ಮರುನೇಮಕಾತಿಗೆ ಅತ್ಯಂತ ಹತ್ತಿರದ ಹೋಲಿಕೆಯೆಂದರೆ, 2023ರ ನವೆಂಬರ್ ನಲ್ಲಿ OpenAI ಸಿಇಒ ಆಗಿ ಸ್ಯಾಮ್ ಆಲ್ಟ್ಮನ್ ಅವರ ಮರುಪ್ರವೇಶ. ಆದರೆ ಇಲ್ಲಿ ವಿವಾಹೇತರ ಸಂಬಂಧಗಳ ಆರೋಪಗಳಿರಲಿಲ್ಲ.
ನಿರ್ದೇಶಕರೊಂದಿಗಿನ ಸಂವಹನದಲ್ಲಿ ಆಲ್ಟ್ಮನ್ ನಿರಂತರವಾಗಿ ಪ್ರಾಮಾಣಿಕವಾಗಿರಲಿಲ್ಲ ಎಂದು ಹೇಳಿ, OpenAI ಆಡಳಿತ ಮಂಡಳಿಯು 2023ರ ನವೆಂಬರ್ ನಲ್ಲಿ ಅವರನ್ನು ದಿಢೀರ್ ವಜಾಗೊಳಿಸಿತ್ತು. OpenAI ಅನ್ನು ಜಾಗತಿಕ AI ಉದ್ಯಮದ ಮುಂಚೂಣಿಗೆ ತಂದ ChatGPT ಬಿಡುಗಡೆಯಾದ ಕೇವಲ ಒಂದು ವರ್ಷದಲ್ಲೇ ಈ ನಿರ್ಧಾರ ಹೊರಬಿದ್ದಿತ್ತು.
ಈ ವಜಾ ಕ್ರಮವು ಕಂಪೆನಿಯೊಳಗೆ ಭಾರೀ ಬಂಡಾಯಕ್ಕೆ ಕಾರಣವಾಯಿತು. ಆಲ್ಟ್ಮನ್ ಅವರನ್ನು ಮರುನೇಮಕ ಮಾಡದಿದ್ದರೆ ಕೆಲಸ ಬಿಡುವುದಾಗಿ ಬಹುಪಾಲು ಉದ್ಯೋಗಿಗಳು ಬೆದರಿಕೆ ಹಾಕಿದರು. ಆ ಸಮಯದಲ್ಲಿ OpenAIನ ಅತಿದೊಡ್ಡ ಆರ್ಥಿಕ ಬೆಂಬಲಿಗನಾಗಿದ್ದ ಮೈಕ್ರೋಸಾಫ್ಟ್, ಆಲ್ಟ್ಮನ್ ಮತ್ತು ಅವರ ಸಹೋದ್ಯೋಗಿಗಳಿಗೆ ಕೆಲಸ ನೀಡುವ ಪ್ರಸ್ತಾಪ ಮುಂದಿಟ್ಟಿತು.
ಕೆಲವೇ ದಿನಗಳಲ್ಲಿ OpenAI ಆಡಳಿತ ಮಂಡಳಿಯ ಪುನರ್ರಚನೆಯೊಂದಿಗೆ ಆಲ್ಟ್ಮನ್ ಮರಳಲು ಒಪ್ಪಂದ ಏರ್ಪಟ್ಟಿತು. ಅವರ ನಡವಳಿಕೆಯು ಅವರನ್ನು ವಜಾಗೊಳಿಸುವಷ್ಟು ಗಂಭೀರವಾಗಿರಲಿಲ್ಲ ಎಂದು ನಂತರ ನಡೆದ ಸ್ವತಂತ್ರ ಪರಿಶೀಲನೆಯು ತೀರ್ಮಾನಿಸಿತು.
AI ತಂತ್ರಜ್ಞಾನದ ಸುರಕ್ಷಿತ ಅಭಿವೃದ್ಧಿಗೆ ಆದ್ಯತೆ ನೀಡಲೆಂದೇ ವಿಶೇಷವಾಗಿ ರಚಿಸಲಾದ ಆಡಳಿತ ಮಂಡಳಿಯೂ ಸಹ, ಹೂಡಿಕೆದಾರರು ಮತ್ತು ಉದ್ಯೋಗಿಗಳ ವಾಣಿಜ್ಯ ಹಿತಾಸಕ್ತಿಗಳೊಂದಿಗೆ ಸಂಘರ್ಷಕ್ಕೆ ಇಳಿಯಬಹುದು ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿತು.
►ಮೈಕೆಲ್ ಡೆಲ್, ಡೆಲ್ (2007)
1984ರಲ್ಲಿ ತಮ್ಮದೇ ಹೆಸರಿನ ಕಂಪ್ಯೂಟರ್ ಕಂಪೆನಿಯನ್ನು ಸ್ಥಾಪಿಸಿದ ಮೈಕೆಲ್ ಡೆಲ್, ಅಧ್ಯಕ್ಷ ಸ್ಥಾನವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು. ಅವರ ಉತ್ತರಾಧಿಕಾರಿ ಕೆವಿನ್ ರೋಲಿನ್ಸ್ ತೀವ್ರ ಸ್ಪರ್ಧೆ ಮತ್ತು ನಿಧಾನಗತಿಯ ಬೆಳವಣಿಗೆಯನ್ನು ನಿಭಾಯಿಸಲು ಪರದಾಡಿದ್ದರಿಂದ, 2007ರ ಜನವರಿಯಲ್ಲಿ ಡೆಲ್ ಸಿಇಒ ಆಗಿ ಮರಳಿದರು.
2013ರಲ್ಲಿ, ಡೆಲ್ ಖಾಸಗಿ ಇಕ್ವಿಟಿ ಸಂಸ್ಥೆ Silver Lake ಜೊತೆ 24.9 ಶತಕೋಟಿ ಡಾಲರ್ ಒಪ್ಪಂದದ ಮೂಲಕ ಕಂಪೆನಿಯನ್ನು ಖಾಸಗೀಕರಣಗೊಳಿಸಿದರು. ಇದು ಸಾರ್ವಜನಿಕ ಮಾರುಕಟ್ಟೆಗಳ ಕಣ್ಗಾವಲಿನಿಂದ ದೂರವಿದ್ದು ಕಂಪೆನಿಯನ್ನು ಪುನರ್ರಚಿಸಲು ಅವರಿಗೆ ಅವಕಾಶ ನೀಡಿತು.
ಮೂರು ವರ್ಷಗಳ ನಂತರ, ಒಂದು ಮಹತ್ವದ ತಂತ್ರಜ್ಞಾನ ಒಪ್ಪಂದದಲ್ಲಿ ಕಂಪೆನಿಯು ಡೇಟಾ ಸಂಗ್ರಹಣಾ ದೈತ್ಯ EMC ಅನ್ನು ಸ್ವಾಧೀನಪಡಿಸಿಕೊಂಡಿತು. ಇದು ಕೇವಲ ಪರ್ಸನಲ್ ಕಂಪ್ಯೂಟರ್ಗಳಿಗೆ ಸೀಮಿತವಾಗಿದ್ದ ಡೆಲ್ ಕಂಪೆನಿಯನ್ನು ಪ್ರಮುಖ ಎಂಟರ್ಪ್ರೈಸ್ ತಂತ್ರಜ್ಞಾನ ಮತ್ತು ಕಂಪ್ಯೂಟಿಂಗ್ ಮೂಲಸೌಕರ್ಯ ಕಂಪೆನಿಯಾಗಿ ಬದಲಾಯಿಸಿತು.
►ಜಾಕ್ ಡಾರ್ಸೆ, ಟ್ವಿಟರ್ (2015)
ಟ್ವಿಟರ್ ನ ಸಹ-ಸಂಸ್ಥಾಪಕ ಮತ್ತು ಮೊದಲ ಸಿಇಒ ಜಾಕ್ ಡಾರ್ಸೆ, ಆಗಷ್ಟೇ ಬೆಳೆಯುತ್ತಿದ್ದ ಈ ಸಾಮಾಜಿಕ ಮಾಧ್ಯಮ ವೇದಿಕೆಯ ನಿರ್ವಹಣೆಯ ಕುರಿತಾದ ಆತಂಕಗಳ ನಡುವೆ 2008ರಲ್ಲಿ ಆ ಸ್ಥಾನದಿಂದ ಹೊರಹಾಕಲ್ಪಟ್ಟರು.
2015ರಲ್ಲಿ ಟ್ವಿಟರ್ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಿದ್ದಾಗ ಮತ್ತು ಹೂಡಿಕೆದಾರರ ಒತ್ತಡಕ್ಕೆ ಸಿಲುಕಿದ್ದಾಗ, ಡಿಕ್ ಕೋಸ್ಟೊಲೊ ಅವರ ರಾಜೀನಾಮೆಯ ನಂತರ ಡಾರ್ಸೆ ಸಿಇಒ ಆಗಿ ಮರಳಿದರು. ಮುಂದಿನ ಆರು ವರ್ಷಗಳ ಕಾಲ ಅವರು ಏಕಕಾಲದಲ್ಲಿ ಟ್ವಿಟರ್ ಮತ್ತು ಪಾವತಿ ಕಂಪೆನಿ Square ಎರಡನ್ನೂ ಮುನ್ನಡೆಸಿದರು.
2021ರ ನವೆಂಬರ್ ನಲ್ಲಿ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಮತ್ತೆ ಕೆಳಗಿಳಿದಾಗ, ಸಂಸ್ಥಾಪಕರ ನೇತೃತ್ವದ ತಂತ್ರಜ್ಞಾನ ಕಂಪೆನಿಗಳ ಸಂಸ್ಕೃತಿಯನ್ನು ಡಾರ್ಸೆ ಬಹಿರಂಗವಾಗಿಯೇ ಪ್ರಶ್ನಿಸಿದರು. ಸಂಸ್ಥಾಪಕರ ಮೇಲಿನ ಅತಿಯಾದ ಅವಲಂಬನೆಯು ಉದ್ಯಮಗಳಿಗೆ ಮಿತಿಯಾಗಬಹುದು ಎಂದು ಅವರು ವಾದಿಸಿದರು.
►ಲ್ಯಾರಿ ಪೇಜ್, ಗೂಗಲ್ (2011)
ವೇಗವಾಗಿ ಬೆಳೆಯುತ್ತಿದ್ದ ಕಂಪೆನಿಯನ್ನು ನಿರ್ವಹಿಸಲು ಕರೆತರಲಾಗಿದ್ದ ಅನುಭವಿ ತಂತ್ರಜ್ಞಾನ ಕಾರ್ಯನಿರ್ವಾಹಕ ಎರಿಕ್ ಸ್ಮಿತ್ ಅವರಿಗಾಗಿ, ಗೂಗಲ್ ಸಹ-ಸಂಸ್ಥಾಪಕ ಲ್ಯಾರಿ ಪೇಜ್ 2001ರಲ್ಲಿ ಸಿಇಒ ಸ್ಥಾನವನ್ನು ಬಿಟ್ಟುಕೊಟ್ಟರು.
ಒಂದು ದಶಕದ ನಂತರ ಪೇಜ್ ಮತ್ತೆ ಆ ಸ್ಥಾನಕ್ಕೆ ಮರಳಿದರು ಮತ್ತು ಸ್ಮಿತ್ ಕಾರ್ಯನಿರ್ವಾಹಕ ಅಧ್ಯಕ್ಷರಾದರು. ಇತರ ಹಲವು ಪ್ರಭಾವಿ ಸಂಸ್ಥಾಪಕರ ಪುನರಾಗಮನದಂತೆ, ಈ ಅಧಿಕಾರ ಹಸ್ತಾಂತರವು ಆಡಳಿತ ಮಂಡಳಿಯೊಳಗಿನ ಯಾವುದೇ ಕಹಿ ಸಂಘರ್ಷದಿಂದ ನಡೆದಿರಲಿಲ್ಲ.
2015ರಲ್ಲಿ ಪೇಜ್ ಅವರು ಗೂಗಲ್ ನ ಕಾರ್ಪೊರೇಟ್ ಪುನರ್ರಚನೆಯ ನೇತೃತ್ವ ವಹಿಸಿ, Alphabet ಎಂಬ ಹೊಸ ಮಾತೃ ಸಂಸ್ಥೆಯನ್ನು ಹುಟ್ಟುಹಾಕಿದರು. ಇದು ಗೂಗಲ್ ನ ಪ್ರಮುಖ ಇಂಟರ್ನೆಟ್ ವ್ಯವಹಾರ ಮತ್ತು ಇತರ ಪ್ರಾಯೋಗಿಕ ತಂತ್ರಜ್ಞಾನ ಯೋಜನೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿತು. ಪೇಜ್ Alphabetನ ಸಿಇಒ ಆದರೆ, ಸುಂದರ್ ಪಿಚೈ ಗೂಗಲ್ ನ ಜವಾಬ್ದಾರಿ ವಹಿಸಿಕೊಂಡರು.
ಸೌಜನ್ಯ: indianexpress.com






