ಪ್ಯಾಕೆಟ್ ಆಹಾರಗಳ ಮೇಲೆ ಎಚ್ಚರಿಕೆ ಲೇಬಲ್: ಒಂದೇ ಹಂತದಲ್ಲಿ ಜಾರಿಗೆ FSSAI ಪ್ರಸ್ತಾವನೆ, ಆಹಾರ ಉತ್ಪನ್ನಗಳಲ್ಲಿ ಏನೆಲ್ಲ ಬದಲಾಗಬಹುದು?
►ಕರಿಷ್ಮಾ ಜೈನ್- news18. com ವರದಿ

ಸಾಂದರ್ಭಿಕ ಚಿತ್ರ(AI )
ಹೆಚ್ಚು ಸಕ್ಕರೆ, ಕೊಬ್ಬು ಅಥವಾ ಉಪ್ಪನ್ನು ಹೊಂದಿರುವ ಪ್ಯಾಕೇಜ್ ಮಾಡಿದ ಆಹಾರಗಳ ಪ್ಯಾಕೆಟ್ಗಳ ಮುಂಭಾಗದಲ್ಲಿ ಶೀಘ್ರದಲ್ಲೇ ಸ್ಪಷ್ಟವಾದ ಕೆಂಪು ಬಣ್ಣದ ಎಚ್ಚರಿಕೆ ಚಿಹ್ನೆ ಬರಬಹುದು. ಇದರಿಂದ ನಿಗದಿತ ಪೌಷ್ಟಿಕಾಂಶದ ಮಿತಿಗಳನ್ನು ಮೀರಿದ ಉತ್ಪನ್ನಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸಲು ಸಹಾಯವಾಗುತ್ತದೆ.
ಬುಧವಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾದ ಹೊಸ ಅನುಸರಣೆ ಪ್ರಮಾಣಪತ್ರದಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣಿತ ಪ್ರಾಧಿಕಾರವು (FSSAI) ಭಾರತದಲ್ಲಿ ಪ್ಯಾಕೆಟ್ ಆಹಾರಗಳ ಮುಂಭಾಗದಲ್ಲಿ ಪೌಷ್ಟಿಕಾಂಶದ ಲೇಬಲಿಂಗ್ ಅನ್ನು ಹೇಗೆ ಪರಿಚಯಿಸಲು ಪ್ರಸ್ತಾಪಿಸಿದೆ ಎಂಬುದರ ವಿವರಗಳನ್ನು ನೀಡಿದೆ.
ತನ್ನ ಹಿಂದಿನ ಯೋಜನೆಯಲ್ಲಿ ನಿಯಂತ್ರಕ ಸಂಸ್ಥೆಯು ಪ್ರಮುಖ ಬದಲಾವಣೆಯೊಂದನ್ನು ಮಾಡಿದೆ. ಎಚ್ಚರಿಕೆಗಳನ್ನು ಎರಡು ಹಂತಗಳಲ್ಲಿ ಪರಿಚಯಿಸುವ ಬದಲು, ಈಗ ಒಂದೇ ಹಂತದ ಜಾರಿಯನ್ನು FSSAI ಪ್ರಸ್ತಾಪಿಸಿದೆ.
ಇದರಡಿ, ಮೂರು ಪೌಷ್ಟಿಕಾಂಶಗಳಲ್ಲಿ–ಅಂದರೆ ಸೇರಿಸಿದ ಸಕ್ಕರೆ, ಸೇರಿಸಿದ ಕೊಬ್ಬು ಅಥವಾ ಉಪ್ಪು–ಯಾವುದಾದರೂ ಒಂದೇ ಒಂದು ಅಂಶವು ನಿಗದಿತ ಮಿತಿಯನ್ನು ಮೀರಿದರೂ ಆ ಪ್ಯಾಕೆಟ್ ಆಹಾರದ ಮೇಲೆ ಎಚ್ಚರಿಕೆ ಮುದ್ರಿಸಲಾಗುತ್ತದೆ.
FSSAIನ ಹಿಂದಿನ ಪ್ರಸ್ತಾವನೆಯ ಮಿತಿಗಳು, ವಿನ್ಯಾಸ ಮತ್ತು ಎಚ್ಚರಿಕೆಯ ಗಾತ್ರ, ಚಿತ್ರ ಸಂಕೇತ, ಸಂಯೋಜಕಗಳ ನಿರ್ವಹಣೆ ಹಾಗೂ ಜಾರಿಗೆ ತರಬೇಕಾದ ಕಾಲಮಿತಿಯ ಕುರಿತು ಸೆಪ್ಟೆಂಬರ್ 10ರಂದು ಸುಪ್ರೀಂ ಕೋರ್ಟ್ ಪ್ರಶ್ನೆಗಳನ್ನು ಎತ್ತಿದ ನಂತರ ಈ ಹೊಸ ಪ್ರಮಾಣಪತ್ರ ಸಲ್ಲಿಕೆಯಾಗಿದೆ.
►ಎಚ್ಚರಿಕೆ ಲೇಬಲ್ ಹೇಗಿರಲಿದೆ?
ತನ್ನ ಪ್ರಮಾಣಪತ್ರದಲ್ಲಿ FSSAI ಸಂಸ್ಥೆಯು ಬಿಳಿ ಚೌಕಾಕಾರದ ಹಿನ್ನೆಲೆಯಲ್ಲಿ ಕೆಂಪು ಬಣ್ಣದ ಷಡ್ಭುಜಾಕೃತಿಯ (hexagonal) ಎಚ್ಚರಿಕೆ ಚಿಹ್ನೆಯನ್ನು ಪ್ರಸ್ತಾಪಿಸಿದೆ. ಇದನ್ನು ಪ್ಯಾಕೆಟ್ ನ ಮುಂಭಾಗದಲ್ಲಿ ಮೇಲೆ ಎಡಭಾಗದಲ್ಲಿ ಎದ್ದು ಕಾಣುವಂತೆ ಮುದ್ರಿಸಲಾಗುತ್ತದೆ.
ಈ ಪ್ರಸ್ತಾವಿತ ಎಚ್ಚರಿಕೆಯು ಈ ಕೆಳಗಿನಂತೆ ಕಾರ್ಯನಿರ್ವಹಿಸುತ್ತದೆ:
ಒಂದೇ ಒಂದು ಪೌಷ್ಟಿಕಾಂಶವು ನಿಗದಿತ ಮಿತಿಯನ್ನು ಮೀರಿದರೆ, ಆ ಪೌಷ್ಟಿಕಾಂಶದ ಹೆಸರನ್ನು ಕೆಂಪು ಷಡ್ಭುಜಾಕೃತಿಯ ಒಳಗೆ ನಮೂದಿಸಲಾಗುತ್ತದೆ.
ಎರಡು ಅಥವಾ ಮೂರು ಪೌಷ್ಟಿಕಾಂಶಗಳು ತಮ್ಮ ಮಿತಿಗಳನ್ನು ಮೀರಿದರೆ, ಆ ಎಲ್ಲಾ ಪೌಷ್ಟಿಕಾಂಶಗಳು ಒಂದೇ ಷಡ್ಭುಜಾಕೃತಿಯ ಒಳಗೆ ಕಾಣಿಸಿಕೊಳ್ಳುತ್ತವೆ.
ಪ್ಯಾಕೆಟ್ ನ ಹಿಂಭಾಗದಲ್ಲಿರುವ ಪೌಷ್ಟಿಕಾಂಶಗಳ ಮಾಹಿತಿ ಕೋಷ್ಟಕದಲ್ಲಿ ಬಳಸುವ ಫಾಂಟ್ಗಿಂತ ಕನಿಷ್ಠ ಒಂದು ಪಾಯಿಂಟ್ ದೊಡ್ಡದಾದ ಅಕ್ಷರಗಳನ್ನು ಈ ಎಚ್ಚರಿಕೆಗೆ ಬಳಸಲಾಗುತ್ತದೆ.
ಎಚ್ಚರಿಕೆಯ ಗಾತ್ರವನ್ನು ನಿರ್ಧರಿಸಲು ಕೆನಡಾದ ಮಾದರಿಯನ್ನು ಅನುಸರಿಸಲು FSSAI ಪ್ರಸ್ತಾಪಿಸಿದೆ.
ಚಿತ್ರ ಸಂಕೇತಗಳ ಬಳಕೆಯ ಕುರಿತು ಸುಪ್ರೀಂ ಕೋರ್ಟ್ ಕೂಡ FSSAIನಿಂದ ಸ್ಪಷ್ಟನೆ ಕೋರಿತ್ತು. ವಿಶೇಷವಾಗಿ ಹಲವು ಪೌಷ್ಟಿಕಾಂಶಗಳು ಸೇರಿಕೊಂಡಿರುವಾಗ, ಪ್ರತ್ಯೇಕ ಚಿತ್ರ ಸಂಕೇತಗಳು “ಗೊಂದಲ ಅಥವಾ ತಪ್ಪು ಗ್ರಹಿಕೆಗೆ ಹೆಚ್ಚು ಅವಕಾಶ ಮಾಡಿಕೊಡಬಹುದು” ಎಂದು ನಿಯಂತ್ರಕ ಸಂಸ್ಥೆ ತಿಳಿಸಿದೆ.
ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಹಾಗೂ ಈಗಾಗಲೇ ಬಳಕೆಯಲ್ಲಿರುವ ಮಾಂಸಾಹಾರಿ ಆಹಾರದ ಚಿಹ್ನೆಯ ನಡುವೆ ಗೊಂದಲ ಉಂಟಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ FSSAI, ಎರಡೂ ದೃಶ್ಯರೂಪದಲ್ಲಿ ವಿಭಿನ್ನವಾಗಿವೆ ಎಂದು ಸ್ಪಷ್ಟಪಡಿಸಿದೆ. ಮಾಂಸಾಹಾರಿ ಲೋಗೊ ತ್ರಿಕೋನವಿರುವ ಕಂದು ಬಣ್ಣದ ಚೌಕವಾಗಿದೆ, ಆದರೆ ಪ್ರಸ್ತಾವಿತ ಪೌಷ್ಟಿಕಾಂಶದ ಎಚ್ಚರಿಕೆಯು ಬಿಳಿ ಚೌಕದ ಹಿನ್ನೆಲೆಯಲ್ಲಿರುವ ಕೆಂಪು ಬಣ್ಣದ ಷಡ್ಭುಜಾಕೃತಿಯಾಗಿದೆ.
►ಎಷ್ಟು ಪ್ರಮಾಣದ ಸಕ್ಕರೆ, ಕೊಬ್ಬು ಅಥವಾ ಉಪ್ಪು ಇದ್ದರೆ ಎಚ್ಚರಿಕೆ ಬರಲಿದೆ?
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ-ರಾಷ್ಟ್ರೀಯ ಪೋಷಣೆ ಸಂಸ್ಥೆ (ICMR-NIN) ಬಿಡುಗಡೆ ಮಾಡಿರುವ 'ಭಾರತೀಯರಿಗಾಗಿ ಆಹಾರ ಮಾರ್ಗಸೂಚಿಗಳು, 2024'ರ ಆಧಾರದ ಮೇಲೆ FSSAI ಪೌಷ್ಟಿಕಾಂಶದ ಮಿತಿಗಳನ್ನು ಪ್ರಸ್ತಾಪಿಸಿದೆ.
ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾದ ಕೆಲವು ಮಿತಿಗಳು ಇಲ್ಲಿವೆ:
ದ್ರವ ಆಹಾರಗಳು: ಪ್ರತಿ 100 ಮಿ.ಲೀ.ಗೆ 2 ಗ್ರಾಂಗಿಂತ ಹೆಚ್ಚು ಸೇರಿಸಿದ ಸಕ್ಕರೆ
ದ್ರವ ಆಹಾರಗಳು: ಪ್ರತಿ 100 ಮಿ.ಲೀ.ಗೆ 175 ಮಿ.ಗ್ರಾಂಗಿಂತ ಹೆಚ್ಚು ಉಪ್ಪು
ಘನ ಆಹಾರಗಳು: ಪ್ರತಿ 100 ಗ್ರಾಂಗೆ 4.2 ಗ್ರಾಂಗಿಂತ ಹೆಚ್ಚು ಸೇರಿಸಿದ ಕೊಬ್ಬು
ಘನ ಆಹಾರಗಳು: ಪ್ರತಿ 100 ಗ್ರಾಂಗೆ 625 ಮಿ.ಗ್ರಾಂಗಿಂತ ಹೆಚ್ಚು ಉಪ್ಪು
ಆಹಾರವು ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಲ್ಪಟ್ಟಿದೆಯೇ ಅಥವಾ ಹೆಚ್ಚು ಸಂಸ್ಕರಿಸಲ್ಪಟ್ಟಿದೆಯೇ ಎಂಬುದನ್ನು ಲೆಕ್ಕಿಸದೆ ಈ ಮಿತಿಗಳು ಅನ್ವಯಿಸುತ್ತವೆ ಎಂದು FSSAI ತಿಳಿಸಿದೆ. ಪೋಷಣೆ ಮತ್ತು ಸಂಸ್ಕರಣೆಯು ಎರಡು ವಿಭಿನ್ನ ವಿಚಾರಗಳಾಗಿವೆ. ಪೌಷ್ಟಿಕಾಂಶದ ಅಂಶವೇ ಪ್ರಮುಖ ನಿಯಂತ್ರಕ ಮಾನದಂಡವಾಗಿರಬೇಕು ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
►FSSAI ಸಂಸ್ಥೆಯು ಸೇರಿಸಿದ ಸಕ್ಕರೆ ಮತ್ತು ಸೇರಿಸಿದ ಕೊಬ್ಬಿನ ಮೇಲೆ ಏಕೆ ಗಮನ ಹರಿಸುತ್ತಿದೆ?
ಪ್ರಸ್ತಾವಿತ ಎಚ್ಚರಿಕೆಗಳಿಗಾಗಿ, FSSAI ಸಂಸ್ಥೆಯು ಒಟ್ಟು ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಬದಲು, ಸೇರಿಸಿದ ಸಕ್ಕರೆ ಮತ್ತು ಸೇರಿಸಿದ ಕೊಬ್ಬನ್ನು ಪ್ರಮುಖ ಮಾನದಂಡಗಳಾಗಿ ಆಯ್ಕೆ ಮಾಡಿಕೊಂಡಿದೆ.
ಹಣ್ಣುಗಳು ಮತ್ತು ಹಾಲಿನಲ್ಲಿ ಸಹಜವಾಗಿಯೇ ಇರುವ ಸಕ್ಕರೆ ಅಂಶಕ್ಕೂ, ಆಹಾರ ತಯಾರಿಕೆ ಅಥವಾ ಸಂಸ್ಕರಣೆಯ ಸಮಯದಲ್ಲಿ ಹೊರಗಿನಿಂದ ಸೇರಿಸುವ ಸಕ್ಕರೆಗೂ ವ್ಯತ್ಯಾಸವಿದೆ ಎಂದು ನಿಯಂತ್ರಕ ಸಂಸ್ಥೆ ತಿಳಿಸಿದೆ. ಅಲ್ಲದೆ, ಕೇವಲ ಸ್ಯಾಚುರೇಟೆಡ್ ಕೊಬ್ಬು ಮಾತ್ರ ಅತಿಯಾದ ಕೊಬ್ಬಿನ ಸೇವನೆಗೆ ಸಂಬಂಧಿಸಿದ ವಿಶಾಲವಾದ ಕಾಳಜಿಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ಅದು ಹೇಳಿದೆ.
“ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಿ ಉತ್ತಮ ಆಯ್ಕೆ ಮಾಡಲು ಅವಕಾಶ ಕಲ್ಪಿಸಲು, ಒಟ್ಟು ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಬದಲಿಗೆ ಸೇರಿಸಿದ ಸಕ್ಕರೆ ಮತ್ತು ಸೇರಿಸಿದ ಕೊಬ್ಬಿಗೆ ಆದ್ಯತೆ ನೀಡಬೇಕು” ಎಂದು FSSAI ತನ್ನ ಪ್ರಮಾಣಪತ್ರದಲ್ಲಿ ತಿಳಿಸಿದೆ.
ಟ್ರಾನ್ಸ್ ಫ್ಯಾಟ್ ಅನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ ಇದಕ್ಕೆ ಈಗಾಗಲೇ ನಿರ್ದಿಷ್ಟ ನಿಯಂತ್ರಕ ಮಿತಿಗಳು ಮತ್ತು ಮಾಹಿತಿ ಬಹಿರಂಗಪಡಿಸುವ ಕಡ್ಡಾಯ ನಿಯಮಗಳಿವೆ.
►ಪಾನೀಯಗಳು ಮತ್ತು ಕ್ಯಾಲೋರಿರಹಿತ ಸಿಹಿಕಾರಕಗಳು
FSSAIನ ಈ ಪ್ರಸ್ತಾವನೆಯು ಕಾರ್ಬೋನೇಟೆಡ್ ಹಾಗೂ ನಾನ್-ಕಾರ್ಬೋನೇಟೆಡ್ ನೀರಿನಿಂದ ಮಾಡಿದ ಇತರೆ ಪಾನೀಯಗಳು, ಹಣ್ಣಿನ ರಸ, ಹಣ್ಣಿನ ಸಿರಪ್ಗಳು ಮತ್ತು ಶರ್ಬತ್ಗಳು, ಕೆಫೀನ್ಯುಕ್ತ ಪಾನೀಯಗಳು ಹಾಗೂ ನಿರ್ದಿಷ್ಟ ಹಣ್ಣು ಆಧಾರಿತ ಪಾನೀಯಗಳನ್ನು ಸಹ ಒಳಗೊಂಡಿದೆ.
ನಿರ್ದಿಷ್ಟಪಡಿಸಿದ ಪಾನೀಯ ವರ್ಗಗಳಿಗೆ ಸಂಬಂಧಿಸಿದಂತೆ, ಒಂದು ವೇಳೆ ಆ ಪಾನೀಯವು ನಿಗದಿತ ಪೌಷ್ಟಿಕಾಂಶದ ಮಿತಿಗಳನ್ನು ಮೀರದಿದ್ದರೂ ಸಹ, ಆ ಪಾನೀಯದ ವರ್ಗ ಯಾವುದು ಎಂಬುದನ್ನು ಪ್ಯಾಕೆಟ್ ನ ಮುಂಭಾಗದಲ್ಲೇ ನಮೂದಿಸಬೇಕಾಗಬಹುದು.
ಒಂದು ವೇಳೆ ಅದು ಸಕ್ಕರೆ ಅಥವಾ ಉಪ್ಪಿನ ಮಿತಿಯನ್ನು ಮೀರಿದರೆ, ಅದಕ್ಕೆ ತಕ್ಕ ಎಚ್ಚರಿಕೆ ಚಿಹ್ನೆಯೂ ಕಾಣಿಸಿಕೊಳ್ಳುತ್ತದೆ.
ಕ್ಯಾಲೋರಿರಹಿತ ಸಿಹಿಕಾರಕಗಳನ್ನು ಹೊಂದಿರುವ ಉತ್ಪನ್ನಗಳಿಗಾಗಿ ಪ್ರತ್ಯೇಕ ಘೋಷಣೆಯನ್ನು ಪ್ರಸ್ತಾಪಿಸಲಾಗಿದೆ. ಇಂತಹ ಆಹಾರಗಳು ಮತ್ತು ಪಾನೀಯಗಳು ಪ್ಯಾಕೆಟ್ ನ ಮುಂಭಾಗದಲ್ಲಿ “CONTAINS NON-CALORIC SWEETENER” ಎಂಬ ಹೇಳಿಕೆಯನ್ನು ಕಡ್ಡಾಯವಾಗಿ ಮುದ್ರಿಸಬೇಕಾಗಬಹುದು. ಪ್ರಸ್ತುತ ಈ ಮಾಹಿತಿಯನ್ನು ಪ್ಯಾಕೆಟ್ ನ ಹಿಂಭಾಗದಲ್ಲಿ ಮಾತ್ರ ಮುದ್ರಿಸಲಾಗುತ್ತಿದೆ.
►ಈ ಲೇಬಲ್ ಗಳು ಯಾವಾಗ ಕಾಣಿಸಿಕೊಳ್ಳಬಹುದು?
ತಕ್ಷಣಕ್ಕಂತೂ ಅಲ್ಲ.
ಕಾಲಮಿತಿ ನಿಯಮಗಳ ಕರಡನ್ನು ಸಿದ್ಧಪಡಿಸಿ ಅಂತಿಮಗೊಳಿಸಲು ಸುಮಾರು ನಾಲ್ಕು ತಿಂಗಳುಗಳು ಬೇಕಾಗುತ್ತವೆ ಎಂದು FSSAI ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಸಂಬಂಧಪಟ್ಟವರಿಂದ ಅಭಿಪ್ರಾಯಗಳನ್ನು ಆಹ್ವಾನಿಸಲು 60 ದಿನಗಳ ಕಾಲ ಕರಡನ್ನು ಪ್ರಕಟಿಸುವುದು, ಆ ಪ್ರತಿಕ್ರಿಯೆಗಳನ್ನು ಪರಿಶೀಲಿಸುವುದು ಮತ್ತು ಬಳಿಕ ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸಲು ಅಂತಿಮ ನಿಯಮಗಳನ್ನು ಸಚಿವಾಲಯಕ್ಕೆ ಕಳುಹಿಸುವುದು ಈ ಪ್ರಕ್ರಿಯೆಯಲ್ಲಿ ಒಳಗೊಂಡಿರುತ್ತದೆ.
ಅಂತಿಮ ನಿಯಮಗಳ ಅಧಿಸೂಚನೆ ಹೊರಬಂದ ನಂತರ, ಆಹಾರ ಉತ್ಪಾದನಾ ಕಂಪನಿಗಳಿಗೆ ಸ್ವಯಂಪ್ರೇರಿತ ಅನುಷ್ಠಾನಕ್ಕಾಗಿ ಮತ್ತೆ 365 ದಿನಗಳ ಕಾಲಾವಕಾಶ ಸಿಗಲಿದೆ.
“ಆಹಾರ ವ್ಯವಹಾರ ನಿರ್ವಾಹಕರು (FBOs) ಸ್ವಯಂಪ್ರೇರಿತವಾಗಿ ಜಾರಿಗೆ ತರಲು 365 ದಿನಗಳ ಕಾಲಾವಕಾಶ ಇರುತ್ತದೆ” ಎಂದು FSSAI ತಿಳಿಸಿದೆ.
ಈಗಾಗಲೇ ಮುದ್ರಿಸಿರುವ ಪ್ಯಾಕಿಂಗ್ ಸಾಮಗ್ರಿಗಳ ದಾಸ್ತಾನು ಹೊಂದಿರುವ ಕಂಪನಿಗಳಿಗೆ “ವ್ಯಾಪಾರದಲ್ಲಿ ನಷ್ಟ ಅಥವಾ ತೊಂದರೆ” ಉಂಟಾಗುವುದನ್ನು ತಪ್ಪಿಸಲು ಈ ಒಂದು ವರ್ಷದ ಕಾಲಾವಕಾಶ ಅಗತ್ಯವಿದೆ ಎಂದು ನಿಯಂತ್ರಕ ಸಂಸ್ಥೆ ಹೇಳಿದೆ.
ಸ್ಥಳೀಯ ಭಾಷೆಗಳಲ್ಲಿ ಕರಪತ್ರಗಳು ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು ಸೇರಿದಂತೆ ಪ್ರಸ್ತಾವಿತ ವ್ಯವಸ್ಥೆಯ ಜತೆಗೆ ಜಾಗೃತಿ ಅಭಿಯಾನಗಳೂ ಇರಲಿವೆ ಎಂದು FSSAI ನ್ಯಾಯಾಲಯಕ್ಕೆ ತಿಳಿಸಿದೆ.
ಅಲ್ಲದೆ, ಶಾಲಾ ಪಠ್ಯಕ್ರಮಗಳಲ್ಲಿ ಆಹಾರ ಸುರಕ್ಷತೆ ಮತ್ತು ಪೌಷ್ಟಿಕಾಂಶದ ವಿಷಯವನ್ನು ಸೇರಿಸಲು ಸಹ ಪ್ರಸ್ತಾಪಿಸಿದೆ.
ಸೌಜನ್ಯ: news18.com






