ಗಂಗಾ ಕಲ್ಯಾಣ ಯೋಜನೆ: ಸಾಮಗ್ರಿಗಳ ಖರೀದಿಗೆ ಕರೆದಿದ್ದ ಟೆಂಡರ್ಗಳ ವಿವರ ಒದಗಿಸಲು ನಿರ್ದೇಶನ

ಸಾಂದರ್ಭಿಕ ಚಿತ್ರ | Photo credit : AI chatgpt
ಬೆಂಗಳೂರು : ಗಂಗಾ ಕಲ್ಯಾಣ ಯೋಜನೆಯಡಿ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕೊರೆದಿರುವ ಕೊಳವೆ ಬಾವಿಗಳು, ವಿದ್ಯುತ್ ಸಂಪರ್ಕಕ್ಕೆ ನಿಗದಿಪಡಿಸಿದ್ದ ಮೊತ್ತ, ಪೂರಕ ಸಾಮಗ್ರಿಗಳ ಖರೀದಿಗೆ ಕರೆದಿದ್ದ ಟೆಂಡರ್ಗಳ ವಿವರಗಳನ್ನು ಒದಗಿಸಬೇಕು ಎಂದು ಈಗಿನ ಕಾಂಗ್ರೆಸ್ ಸರಕಾರವು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಸಮುದಾಯ ಅಭಿವೃದ್ಧಿ ನಿಗಮಗಳಿಗೆ ನಿರ್ದೇಶಿಸಿದೆ.
ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ವಿವಿಧ ರೀತಿಯ ಅಕ್ರಮಗಳಿಗೆ ಸಂಬಂಧಿಸಿದಂತೆ ಕೋಲಾರ ಮೂಲದ ಎನ್ ನಾರಾಯಣಸ್ವಾಮಿ ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಲೋಕಾಯುಕ್ತ ಹೆಚ್ಚುವರಿ ನಿಬಂಧಕರು ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಕಾರ್ಯದರ್ಶಿಗೆ 2026ರ ಫೆ.24, ಎ.22, ಜೂ.5 ಮತ್ತು ಸೆ.29ರಂದು ನಿರ್ದೇಶಿಸಿದ್ದರು. ಆದರೆ ಸರಕಾರವು ನಿಗದಿತ ಅವಧಿಯಲ್ಲಿ ಲೋಕಾಯುಕ್ತರಿಗೆ ವರದಿಯನ್ನು ಸಲ್ಲಿಸಿಲ್ಲ.
ಈ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಕಾರ್ಯದರ್ಶಿ 2026ರ ಅಕ್ಟೋಬರ್ 17ರಂದು ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್ಗೆ ಬರೆದಿರುವ ಪತ್ರದಲ್ಲಿ ಸಮುದಾಯ ಅಭಿವೃದ್ಧಿ ನಿಗಮಗಳಿಂದ ವರದಿ ಸ್ವೀಕೃತವಾದ ನಂತರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಕಾರ್ಯದರ್ಶಿಯು ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್ಗೆ ಬರೆದಿರುವ ಪತ್ರದ ಪ್ರತಿಯು "the-file.in'ಗೆ ಲಭ್ಯವಾಗಿದೆ.
► ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್ಗೆ ಬರೆದಿರುವ ಪತ್ರದಲ್ಲೇನಿದೆ? :
ಗಂಗಾ ಕಲ್ಯಾಣ ಕುರಿತು ವಿಶೇಷ ಸದನ ಸಮಿತಿಯ ಮಧ್ಯಂತರ ವರದಿ ಮೇಲೆ ಕೈಗೊಳ್ಳಲಾಗಿರುವ ಕ್ರಮ ಹಾಗೂ ಪ್ರಸ್ತುತ ಹಂತದ ಮಾಹಿತಿ/ವರದಿಯನ್ನು ಸರಕಾರಕ್ಕೆ ಒದಗಿಸಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ 2026ರ ಸೆ.7 ಮತ್ತು ಅ.14ರಂದು ಪತ್ರ ಬರೆಯಲಾಗಿದೆ. ಈ ನಿಗಮದಿಂದ ವರದಿ ಸ್ವೀಕೃತಗೊಂಡ ಕೂಡಲೇ ಸಲ್ಲಿಸಲಾಗುವುದು. ಕರ್ನಾಟಕ ವಿಧಾನ ಪರಿಷತ್ ರಚಿಸಿರುವ ವಿಶೇಷ ಸದನ ಸಮಿತಿಯ ಅಂತಿಮ ವರದಿಯನ್ನು 2025ರ ಆಗಸ್ಟ್ 22ರಂದು ಮಂಡಿಸಲಾಗಿದೆ. ವಿಶೇಷ ಸದನ ಸಮಿತಿಯ ಅಂತಿಮ ವರದಿಯನ್ನು ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್ಗೆ ಒದಗಿಸಿರುವುದು ಪತ್ರದಿಂದ ಗೊತ್ತಾಗಿದೆ.
ಅಲ್ಲದೇ ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್ಗೆ ಪತ್ರ ಬರೆದಿರುವ ದಿನದಂದೇ ಅಂದರೆ 2026ರ ಅ.17ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ಪತ್ರ ಬರೆದಿದೆ.
‘2021-22 ಮತ್ತು 2022-23ನೇ ಸಾಲಿನಲ್ಲಿ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ವಿದ್ಯುತ್ ಸಂಪರ್ಕಕ್ಕೆ ನಿಗದಿಪಡಿಸಿದ ಮೊತ್ತ, ಕೊಳವೆ ಬಾವಿ ಕೊರೆದ ನಂತರ ಪಂಪ್-
ಮೋಟರ್ ಹಾಗೂ ಇತರ ಪೂರಕ ಸಾಮಗ್ರಿಗಳ ಸರಬರಾಜಿಗಾಗಿ ಕರೆಯಲಾದ ಟೆಂಡರ್ನ ವಿವರ, ಪ್ರಸ್ತುತ ಹಂತದ ಮಾಹಿತಿ ಹಾಗೂ ಅಲ್ಪಾವಧಿ ಟೆಂಡರ್ ಕರೆಯುವ ಬಗ್ಗೆ ಅಭಿಪ್ರಾಯವನ್ನು ಎಲ್ಲ ನಿಗಮಗಳ ಪರವಾಗಿ ಒದಗಿಸಬೇಕು’ ಎಂದು ಡಿ.ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸರಕಾರದ ಕಾರ್ಯದರ್ಶಿಯು ನಿರ್ದೇಶಿಸಿರುವುದು ತಿಳಿದು ಬಂದಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳು ಅನುಷ್ಠಾನಗೊಳಿಸಿದ್ದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ್ದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಒದಗಿಸಿಲ್ಲ ಎಂಬ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಕೆಲವು ಕಂಪೆನಿಗಳು ಪ್ರತಿಪಾದಿಸಿದ್ದವು.
ಗಂಗಾ ಕಲ್ಯಾಣ ಯೋಜನೆಯಡಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ತನಿಖೆ ನಡೆಸಲು ಕರ್ನಾಟಕ ವಿಧಾನ ಪರಿಷತ್ನ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ನೇತೃತ್ವದ ವಿಶೇಷ ಸದನ ಸಮಿತಿಯು ಆರೋಪಿಸಿತ್ತು. ಈ ಸಮಿತಿಯು ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧೆಡೆ ಪ್ರವಾಸ ಮತ್ತು ಸ್ಥಳ ಪರಿಶೀಲನೆ ಕೈಗೊಂಡಿದ್ದ ಸಂದರ್ಭದಲ್ಲಿ ಫಲಾನುಭವಿಗಳು ಹಲವು ಅರೋಪಗಳನ್ನು ಮಾಡಿದ್ದರು. ಈ ಆರೋಪಗಳನ್ನು ಕಂಪೆನಿಗಳು ತಳ್ಳಿ ಹಾಕಿದ್ದವು.
ವಿಶೇಷ ಸದನ ಸಮಿತಿಗೆ ಯುನೈಟೆಡ್ ಇಂಜಿನಿಯರಿಂಗ್ ವರ್ಕ್ಸ್, ಅಹಮದಾಬಾದ್ ಮೂಲದ ಮಹಾವೀರ್ ಸಬ್ ಮರ್ಸಿಬಲ್ ಪ್ರೈವೆಟ್ ಲಿಮಿಟೆಡ್ ಪತ್ರ ಬರೆದು ಸ್ಪಷ್ಟನೆ ನೀಡಿವೆ. ಈ ಕುರಿತು ಒಂದು ವಾರದೊಳಗಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದು ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಬವ, ಬೋವಿ, ತಾಂಡ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಯು ಪತ್ರ ಬರೆದು ನಿರ್ದೇಶಿಸಿದ್ದರು.
ವಿಧಾನ ಪರಿಷತ್ನ ವಿಶೇಷ ಸದನ ಸಮಿತಿಯು ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿತ್ತು. ಈ ವೇಳೆ ಫಲಾನುಭವಿಗಳು ಯುನೈಟೆಡ್ ಇಂಜಿನಿಯರಿಂಗ್ ವರ್ಕ್ಸ್ ಮತ್ತು ಮಹಾವೀರ್ ಸಬ್ ಮರ್ಸಿಬಲ್ಸ್ ಪ್ರೈ ಲಿ., ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಪೂರೈಸಿಲ್ಲ ಎಂದು ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಯುನೈಟೆಡ್ ಇಂಜಿನಿಯರಿಂಗ್ ವರ್ಕ್ಸ್ ಮತ್ತು ಮಹಾವೀರ್ ಸಬ್ ಮರ್ಸಿಬಲ್ ಪ್ರೈ.ಲಿ., ಈ ದೂರುಗಳು ತಪ್ಪು ಗ್ರಹಿಕೆಯಿಂದ ಕೂಡಿವೆ. ಯಾವುದೇ ಆಧಾರವಿಲ್ಲ. ಸದನಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿನ ಅರೋಪ ಪಟ್ಟಿಯಿಂದ ಕೈ ಬಿಡಬೇಕು ಎಂದು ಸದನ ಸಮಿತಿಗೆ ಪತ್ರ ಬರೆದಿದ್ದವು.
ಈ ಕುರಿತಾದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಒಂದು ವಾರದೊಳಗಾಗಿ ವರದಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೇಜರ್ ಮಣಿವಣ್ಣನ್ ಅವರು ಪತ್ರದಲ್ಲಿ ನಿರ್ದೇಶಿಸಿದ್ದರು.
ಇವೇ ಕಂಪೆನಿಗಳು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು ಅನುಷ್ಠಾನಗೊಳಿಸಿದ್ದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊರೆಸಿದ್ದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಒದಗಿಸಿದ್ದವು. ಈ ಕಂಪೆನಿಗಳು ಬಳ್ಳಾರಿ ಜಿಲ್ಲೆಯಲ್ಲಿ ಪೂರೈಸಿದ್ದ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರಲಿಲ್ಲ. ಕೆಲವು ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಬಿದ್ದಿದೆ. ಮೋಟಾರ್ ಪಂಪ್ ಸರಬರಾಜು ಮಾಡಿಲ್ಲ. ಕೊಳವೆ ಬಾವಿಗಳಿಗೆ ಸಣ್ಣ ಪೈಪ್ಗಳನ್ನು ಅಳವಡಿಸಿದೆ ಎಂದು ಫಲಾನುಭವಿಗಳು ಯುನೈಟೆಡ್ ಇಂಜಿನಿಯರಿಂಗ್ ವರ್ಕ್ಸ್ ವಿರುದ್ಧ ದೂರು ಸಲ್ಲಿಸಿದ್ದವು.






