ಐಪಿಎಸ್ ಅಧಿಕಾರಿ ನಿವಾಸದಿಂದ 2 ಕೋಟಿ ರೂ. ಸಂಗ್ರಹಿಸಲು ಗಂಗ್ವಾರ್ ಸೂಚನೆ: ದೋಷಾರೋಪ ಪಟ್ಟಿಯಲ್ಲಿ ಆರೋಪಿ ಕನ್ನಾಳೆ ಹೇಳಿಕೆ

Photo: facebook.com/kpscblr
ಬೆಂಗಳೂರು : ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಸರಿಯಾದ ಉತ್ತರಗಳನ್ನು ಸೋರಿಕೆ ಮಾಡಿದ್ದ ತಂಡವೇ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇದ್ದ ಸಿವಿಲ್, ಮೆಕ್ಯಾನಿಕಲ್, ಕೃಷಿ ಅಧಿಕಾರಿ ಪರೀಕ್ಷೆಯಲ್ಲಿಯೂ ಸರಿಯಾದ ಉತ್ತರಗಳನ್ನೂ ಸೋರಿಕೆ ಮಾಡಿದ್ದರು ಎಂಬ ಸಂಗತಿಯನ್ನು ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ದೋಷಾರೋಪ ಪಟ್ಟಿಯು ಬಹಿರಂಗಗೊಳಿಸಿದೆ.
ಅಲ್ಲದೇ ಕೆಎಎಸ್ ಸಂದರ್ಶನದ ವೇಳಾಪಟ್ಟಿ ಪ್ರಕಟವಾಗುವುದಕ್ಕೆ ಕೆಲವು ದಿನಗಳ ಮೊದಲು ಐಪಿಎಸ್ ಅಧಿಕಾರಿ ಎಂ.ವಿ.ಚಂದ್ರಕಾಂತ್ ಅವರ ನಿವಾಸದಿಂದ 2 ಕೋಟಿ ರೂ. ಸಂಗ್ರಹಿಸುವಂತೆ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರು ತಮಗೆ ಸೂಚಿಸಿದ್ದರು ಮತ್ತು ಸಂಗ್ರಹವಾಗಿದ್ದ ಈ ಹಣವನ್ನು ಶಿವಶಂಕರಪ್ಪ ಸಾಹುಕಾರ್ಗೆ ಹಸ್ತಾಂತರಿಸಬೇಕು ಎಂದು ಗಂಗ್ವಾರ್ ಸೂಚಿಸಿದ್ದರು ಎಂದು ನಾಲ್ಕನೇ ಆರೋಪಿಯಾಗಿರುವ ಬಸವರಾಜ ಕನ್ನಾಳೆ, ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿರುವುದನ್ನೂ ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಹಾಗೆಯೇ 2023ರಿಂದ ಗಂಗ್ವಾರ್ ಅವರ ಸುಮಾರು 12 ಕೋಟಿ ರೂ.ಯಿಂದ 15ಕೋಟಿ ರೂ.ಯನ್ನು ತಾನೇ ನಿರ್ವಹಿಸಿದ್ದೇನೆ ಎಂದು ಬಸವರಾಜ ಕನ್ನಾಳೆ, ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ನೀಡಿರುವ ಹೇಳಿಕೆಯಲ್ಲಿ ಬಾಯಿಬಿಟ್ಟಿದ್ದಾನೆ.
ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆಯಲ್ಲಿ ಐಪಿಎಸ್ ಅಧಿಕಾರಿಯೊಬ್ಬರ ಮಕ್ಕಳಿಗೂ ಅನುಕೂಲ ಮಾಡಿಕೊಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಈ ಪ್ರಕರಣದ ನಾಲ್ಕನೇ ಆರೋಪಿ ಬಸವರಾಜ ಕನ್ನಾಳೆ, ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ನೀಡಿರುವ ಹೇಳಿಕೆಯಲ್ಲಿ ಐಪಿಎಸ್ ಚಂದ್ರಕಾಂತ್ ಅವರ ಹೆಸರನ್ನೂ ಲಿಖಿತವಾಗಿ ಉಲ್ಲೇಖಿಸಿರುವುದು, ಅಕ್ರಮದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದಂತಾಗಿದೆ.
‘ತಮ್ಮ ಕೋರಿಕೆಯ ಮೇರೆಗೆ, ಪಿಡಿಒ, ಜೆಇ (ಜಲಸಂಪನ್ಮೂಲ ಇಲಾಖೆ -ಸಿವಿಲ್ ಮತ್ತು ಮೆಕ್ಯಾನಿಕಲ್) ಮತ್ತು ಕೃಷಿ ಅಧಿಕಾರಿ ಪರೀಕ್ಷೆಗಳಲ್ಲಿ ತಾವು ಶಿಫಾರಸು ಮಾಡಿದ ತಲಾ ಒಬ್ಬ ಅಭ್ಯರ್ಥಿಗೆ ಸರಿಯಾದ ಉತ್ತರ ಕೀಲಿಗಳನ್ನು ಗಂಗ್ವಾರ್ ಒದಗಿಸಿದ್ದರು. ಇದಕ್ಕಾಗಿ ಸುಮಾರು 40ಲಕ್ಷ ರೂ. ಸಂಗ್ರಹಿಸಲಾಗಿತ್ತು. ಯಾದಗಿರಿಯ ಕೃಷಿ ಅಧಿಕಾರಿ ಅಭ್ಯರ್ಥಿಯೊಬ್ಬರು 60ಲಕ್ಷ ರೂ. ಪಾವತಿಸಿದ್ದರು. ಆದರೆ, ಅವರು ಆಯ್ಕೆಯಾಗದ ಕಾರಣ ಆ ಹಣವನ್ನು ಹಿಂದಿರುಗಿಸಲಾಗಿತ್ತು. 2026ರ ಅಕ್ಟೋಬರ್ 10ರಂದು ಓಂಕಾರ್ ಎಂಬವರು ನೀಡಿದ್ದ ಹೇಳಿಕೆಯನ್ನು 2026ರ ಅಕ್ಟೋಬರ್ 11ರಂದು ಬಸವರಾಜ ಕನ್ನಾಳೆ ಮುಂದಿಟ್ಟು ವಿಚಾರಿಸಿದಾಗ ಅದನ್ನು ತನಿಖಾಧಿಕಾರಿ ಮುಂದೆ ದೃಢಪಡಿಸಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
7.10 ಕೋಟಿ ರೂ. ಸಾಲ ಬಾಕಿ: ಓಂಕಾರ್ ಅವರಿಗೆ ನೀಡಿದ್ದ 7.10 ಕೋಟಿ ರೂ. ಸಾಲ ಇನ್ನೂ ಬಾಕಿಯಿದೆ. ಈ ಹಣವನ್ನು ತಮ್ಮ ರಿಯಲ್ ಎಸ್ಟೇಟ್ ವ್ಯವಹಾರದಿಂದ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಂದ ಪಡೆದ ಸಾಲದಿಂದ ಒದಗಿಸಲಾಗಿತ್ತು. ತಮ್ಮ ಸೂಚನೆಯಂತೆ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಅಭ್ಯರ್ಥಿಗಳಿಂದ ಸಂಗ್ರಹಿಸಲಾದ ಹಣದಲ್ಲಿ 70 ಲಕ್ಷ ರೂ. M/s Om Lakshmi ಸಂಸ್ಥೆಯ ಖಾತೆಗೆ ಜಮೆ ಮಾಡಲಾಗಿತ್ತು. ಈ ಮೊತ್ತದಲ್ಲಿ 15 ಲಕ್ಷ ರೂ. ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗಾಗಿ ಆಭರಣ ಖರೀದಿಸಲು M/s Bhima Gold ಸಂಸ್ಥೆಗೆ ವರ್ಗಾಯಿಸಲಾಗಿತ್ತು. ಉಳಿದ 55 ಲಕ್ಷ ರೂ. ಅವರಿಗೆ ವೈಯಕ್ತಿಕವಾಗಿ ಹಸ್ತಾಂತರಿಸಲಾಗಿತ್ತು ಎಂದು ಹೇಳಿರುವುದು ದೋಷಾರೋಪ ಪಟ್ಟಿಯಿಂದ ಗೊತ್ತಾಗಿದೆ.
9 ಅಭ್ಯರ್ಥಿಗಳಿಂದ 1.35 ಕೋಟಿ ಸಂಗ್ರಹ: ಒಂಬತ್ತು ಅಭ್ಯರ್ಥಿಗಳಿಂದ ಒಟ್ಟು 1.35 ಕೋಟಿ ರೂ. ಸಂಗ್ರಹಿಸಲಾಗಿತ್ತು. ಅದರಲ್ಲಿ 70 ಲಕ್ಷ ರೂ. ಬ್ಯಾಂಕಿಂಗ್ ಮಾರ್ಗದ ಮೂಲಕ ಸ್ವೀಕರಿಸಲಾಗಿತ್ತು ಮತ್ತು 65 ಲಕ್ಷ ರೂ. ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ನೇರವಾಗಿ ಹಸ್ತಾಂತರಿಸಲಾಗಿತ್ತು ಎಂದು ಮತ್ತಷ್ಟು ವಿವರವನ್ನು ತನಿಖಾಧಿಕಾರಿಗೆ ತಿಳಿಸಿದ್ದಾರೆ.






