ಜೆನ್ z ಮತ್ತು ಮಿಲೇನಿಯಲ್ಸ್ ಕಿತ್ತಾಟ; ಏನಿದು ತಲೆಮಾರುಗಳ ವ್ಯತ್ಯಾಸ

ಸಾಂದರ್ಭಿಕ ಚಿತ್ರ | Photo Credit : freepik.com
ಉದ್ಯೋಗ ಮಾರುಕಟ್ಟೆಯಲ್ಲಿ ಜೆನ್ ಝೀಯನ್ನು ಹೇಗೆ ನಿಭಾಯಿಸುವುದು ಎನ್ನುವ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಕಚೇರಿ ಸಮಯ, ಶಿಸ್ತು ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದ ಮ್ಯಾನೇಜ್ಮೆಂಟ್ ಇದೀಗ ಜೆನ್ ಝೀಗಾಗಿ ತಮ್ಮ ನಿಯಮಗಳನ್ನು ಸಡಿಲಿಸುತ್ತಿದೆ!
ಉದ್ಯೋಗ ಕ್ಷೇತ್ರದಲ್ಲಿ ಇತ್ತೀಚೆಗೆ ಹೊಸ ರೀತಿಯ ತಿಕ್ಕಾಟ ಹೆಚ್ಚಾಗಿ ಕೇಳಿ ಬರುತ್ತಿದೆ. ಅದೆಂದರೆ ಜೆನ್ ಝೀ (20–28ರೊಳಗಿನವರು) ಮತ್ತು ಮಿಲೇನಿಯಲ್ಸ್ (30–45 ವರ್ಷದವರು) ನಡುವಿನ ತಿಕ್ಕಾಟ. ಮಿಲೇನಿಯಲ್ಸ್ ಮನೆಯ ದೊಡ್ಡಣ್ಣನಂತೆ ಆಡುತ್ತಾರೆ ಎನ್ನುವುದು ಜೆನ್ ಝೀ ದೂರಾಗಿದ್ದರೆ, ಈಗಿನ ಜೆನ್ ಝೀ ಕಷ್ಟವನ್ನೇ ನೋಡಿರದ ಅತಿ ಮುದ್ದಿನಿಂದ ಬೆಳೆದ ಮಗುವಿನಂತೆ ಆಡುತ್ತಾರೆ ಎನ್ನುವುದು ಮಿಲೇನಿಯಲ್ಸ್ಗಳ ದೂರು.
ಇತ್ತೀಚೆಗೆ ಉದ್ಯೋಗ ಮಾರುಕಟ್ಟೆಯಲ್ಲಿ ಜೆನ್ ಝೀಯನ್ನು ಹೇಗೆ ನಿಭಾಯಿಸುವುದು ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನ ಜೆನ್ ಝೀ ಜೊತೆಗೆ ಕೆಲಸ ಮಾಡುತ್ತಿರುವ ಅನುಭವಕ್ಕೆ ಸಂಬಂಧಿಸಿದ ಸ್ಕ್ರೀನ್ಶಾಟ್ಗಳು ಹರಿದಾಡುತ್ತಿರುತ್ತವೆ. ಮಾನಸಿಕ ಆರೋಗ್ಯಕ್ಕಾಗಿ 10 ದಿನ ರಜೆ ತೆಗೆದುಕೊಳ್ಳುವುದು ಅಥವಾ ಕುಂಟು ನೆಪ ಹೇಳಿ ಕೆಲಸಕ್ಕೆ ಬಾರದಿರುವುದು ಮೊದಲಾಗಿ, ಮಿಲೇನಿಯಲ್ಸ್ ನಿತ್ಯವೂ ವಿಭಿನ್ನ ರೀತಿಯಲ್ಲಿ ತಮ್ಮ ಅನುಭವವನ್ನು ವ್ಯಕ್ತಪಡಿಸುತ್ತಾರೆ.
ಯುವ ಸಹೋದ್ಯೋಗಿಗಳ ಜತೆ ಏಗುವುದು ಸರಳವಲ್ಲ!
ಪಿಆರ್ ಕನ್ಸಲ್ಟಂಟ್ ಆಗಿರುವ ಲಾವಣ್ಯ ಅವರ ಪ್ರಕಾರ, “ಮೊದಮೊದಲು ಜೆನ್ ಝೀಗಳ ಜತೆ ಕೆಲಸ ಮಾಡುವುದು ಅಸಾಧ್ಯವೆನಿಸಿತು. ಜವಾಬ್ದಾರಿ ಇಲ್ಲದ, ಆಫೀಸ್ನ ಯಾವುದೇ ನಿಯಮಗಳಿಗೂ ಬಗ್ಗದ, ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದೆ ಇರುವ ಯುವ ಸಹೋದ್ಯೋಗಿಗಳ ಜತೆ ಏಗುವುದು ಸರಳವಲ್ಲ. ಜೆನ್ ಝೀ — ಮನೆಯ ಎರಡನೇ ಮಕ್ಕಳ ಹಾಗೆ. ಮೊದಲ ಮಕ್ಕಳಂತೆ ತಂದೆ-ತಾಯಿಯ ಶಿಸ್ತಿಗೆ ಬಗ್ಗದವರು. ಅವರ ನಡವಳಿಕೆಗೆ ಎಲ್ಲರನ್ನೂ ಬಗ್ಗಿಸುವ ಚಾಂಪಿಯನ್ಗಳು ಎಂದರೆ ತಪ್ಪಾಗದು".
" ಕಚೇರಿ ಸಮಯಕ್ಕೆ ಬರುವುದು ಇವರಿಗೆ ಆಗದ ವಿಷಯ. ರಾತ್ರಿಯೆಲ್ಲಾ ನೆಟ್ಫ್ಲಿಕ್ಸ್ನಲ್ಲಿ ಬಿಂಜ್ ವಾಚ್ ಅಥವಾ ಪಾರ್ಟಿ ಮಾಡಿ ಬೆಳಗ್ಗೆ ತಡವಾಗಿ ಏಳುವುದು ಅವರ ಹಕ್ಕು. ಅದನ್ನು ಪ್ರಶ್ನಿಸುವುದು ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಲಗ್ಗೆ ಇಟ್ಟಂತೆ. ಇನ್ನು ಅಸೈನ್ಮೆಂಟ್ಗಳನ್ನು ನಿಗದಿತ ಸಮಯಕ್ಕೆ ನೀಡಬೇಕಿಲ್ಲ ಎನ್ನುವುದು ಅವರ ವಾದ. ಒಂದೆರಡು ದಿನ ತಡವಾಗಿ ಕೊಟ್ಟರೂ ಪ್ರಪಂಚ ಮುಳುಗುವುದಿಲ್ಲ ಎನ್ನುವುದು ಅವರ ಖಚಿತ ಅಭಿಪ್ರಾಯ. ಇದು ಸರಿಯಲ್ಲ ಎಂದರೆ, ಅದು ಮಿಲೇನಿಯಲ್ಸ್ಗಳು ಅವರ ಮೇಲೆ ಹೇರುತ್ತಿರುವ ಮಾನಸಿಕ ಒತ್ತಡ.”
ಒತ್ತಡ ಸಹಿಸಲು ಸಿದ್ಧರಿಲ್ಲ!
ಲಾವಣ್ಯ ಅವರ ಪ್ರಕಾರ, ನಗರ ಪ್ರದೇಶದ ಜೆನ್ ಝೀಗಳಿಗೆ ಹೋಲಿಸಿದರೆ ಟೈರ್–2 ಮತ್ತು ಟೈರ್–3 ನಗರಗಳ ಜೆನ್ ಝೀಗಳು ವಾಸಿ. ದುಡಿಯುವ ಅನಿವಾರ್ಯತೆ, ಹಸಿವು ಇರುವವರಿಗೆ ಜೆನ್ ಝೀ ನಡವಳಿಕೆ ಸಂಪೂರ್ಣವಾಗಿ ಆವರಿಸಿರುವುದಿಲ್ಲ.
ಆದರೆ ಮೈಸೂರಿನಲ್ಲಿ ರೈಲ್ವೇಯಲ್ಲಿ ಕೆಲಸ ಮಾಡುತ್ತಿರುವ ಎಲೆಕ್ಟ್ರಿಕಲ್ ಎಂಜಿನಿಯರ್ ಸೂರಜ್ ಹೇಳುವಂತೆ, “ಜೆನ್ ಝೀಗೆ ಕೆಲಸದ ಕುರಿತ ಶ್ರದ್ಧೆ ಅಥವಾ ಭಯ ಎರಡೂ ಇಲ್ಲ. ಹಣಕಾಸು ವಿಚಾರದಲ್ಲಿ ಭದ್ರತೆಯ ಅಗತ್ಯವೂ ಕಾಣುವುದಿಲ್ಲ. ನಮ್ಮಂತೆ ಕೆಲಸದ ಒತ್ತಡ ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ. ಕಸ ಹೊಡೆಯುವುದರಿಂದ ಹಿಡಿದು ಎಲ್ಲವನ್ನೂ ಹೇಳಿಕೊಡಬೇಕು. ಹಳೆಯವರ ಜೊತೆ ಕೆಲಸ ಮಾಡಬಹುದು. ಆದರೆ ಹೊಸಬರ ಜೊತೆ ಕಷ್ಟ".
"ಕೆಲಸ ಮುಗಿಸಿದ ನಂತರ ಕರೆ ಮಾಡಿದರೆ ನೆಟ್ವರ್ಕ್ ಇರುವುದಿಲ್ಲ. ಔಟ್ ಆಫ್ ಸರ್ವಿಸ್ನಲ್ಲೇ ಇರುತ್ತಾರೆ. ಕೆಲಸ ಹೇಳಿದರೆ ಇದು ತಮ್ಮ ಉದ್ಯೋಗದ ರೋಲ್ನಲ್ಲಿ ಇಲ್ಲ ಎನ್ನುವುದು ಮೊದಲ ಪ್ರತಿಕ್ರಿಯೆ. ಬಹಳ ಉದ್ಧಟತನ ತೋರಿಸುತ್ತಾರೆ. ಏನು ಕೆಲಸ ಮಾಡಬಾರದು ಎನ್ನುವ ಬಗ್ಗೆ ಮಾತ್ರ ಬಹಳ ಸ್ಪಷ್ಟತೆ ಅವರಲ್ಲಿ ಇರುತ್ತದೆ.”
ಜೆನ್ ಝೀ ಕೆಲಸಕ್ಕೆ ಸೇರುವ ಮೊದಲೇ ವೇತನದ ವಿವರ ತಿಳಿಯಲು ಬಯಸುತ್ತಾರೆ. ಎಷ್ಟು ರಜೆ ಎನ್ನುವುದನ್ನು ಕೇಳುತ್ತಾರೆ. ಸ್ಪಷ್ಟವಾಗಿ ಮನೆ ಮತ್ತು ಉದ್ಯೋಗದ ನಡುವೆ ಅಂತರ ಕಾಯ್ದುಕೊಳ್ಳಲು ಬಯಸುತ್ತಾರೆ ಎನ್ನುತ್ತಾರೆ ಬೆಂಗಳೂರಿನ ಪತ್ರಿಕೆಯೊಂದರಲ್ಲಿ ವಿನ್ಯಾಸಕರಾಗಿ ಕೆಲಸ ಮಾಡುತ್ತಿರುವ ಸುಮಾ.
“ಹೊಸದಾಗಿ ಬರುವವರಿಗೆ ಕೆಲಸದ ಜ್ಞಾನವೇ ಇರುವುದಿಲ್ಲ. ಒಂದು ವರ್ಷವಿಡೀ ಹೇಳಿಕೊಟ್ಟು ಕೆಲಸ ಮಾಡಿಸಿದ ನಂತರ ಬಿಟ್ಟು ಹೋಗುತ್ತಾರೆ. ಮತ್ತೆ ಅದೇ ರೀತಿಯ ಹೊಸಬರು ಕೆಲಸಕ್ಕೆ ಬರುತ್ತಾರೆ,” ಎನ್ನುತ್ತಾರೆ ಅವರು.
“ಕಳೆದ ಐದು ವರ್ಷದಲ್ಲಿ 30–40 ಜನರನ್ನು ಹ್ಯಾಂಡಲ್ ಮಾಡಿದ್ದೇನೆ. ಮನೆಯಿಂದಲೇ ಕೆಲಸ ಮಾಡಿಸುತ್ತಿದ್ದರೂ ಪ್ರತಿಯೊಬ್ಬರಿಗೂ ಮೂರು ಸಮಸ್ಯೆಗಳಿರುತ್ತವೆ. ಅದಕ್ಕಾಗಿ ಆಗಾಗ ರಜೆ ತಗೋತಾರೆ — ಆತಂಕ (anxiety), ಮೈಗ್ರೇನ್ ಮತ್ತು ಒತ್ತಡ (stress). ಏನಾದರೂ ಕೇಳಿದರೆ 2–3 ಗಂಟೆಗಳ ನಂತರ ಉತ್ತರ ಬರುತ್ತದೆ. ಕೆಲವೊಮ್ಮೆ ಒಂದೊಂದು ವಾರ ರಜೆ ತೆಗೆದುಕೊಂಡು ಹೋಗುತ್ತಾರೆ. ಕೆಲಸದ ನಡುವೆಯೇ ಪವರ್ ಹೋಗಿರುವ ನೆಪ ಹೇಳುತ್ತಾರೆ. ಕೆಲಸ ಲ್ಯಾಪ್ಟಾಪ್ನಲ್ಲಿ ಆಗುತ್ತಿದ್ದರೂ ವಾರಕ್ಕೆ ಎಂಟು ಸಲ ‘ಪವರ್ ಗೋನ್’ ಎಂಬ ನೆಪ ಕೇಳಬೇಕಾಗುತ್ತದೆ,” ಎನ್ನುತ್ತಾರೆ ಸುಮಾ.
ಜೆನ್ ಝೀಗೆ ಉದ್ಯೋಗ ವ್ಯಾಪ್ತಿಯ ಬಗ್ಗೆ ಸ್ಪಷ್ಟತೆ
ಆದರೆ ಜೆನ್ ಝೀ ಕೂಡ ಹಿರಿಯರ ಜೊತೆಗೆ ಕೆಲಸ ಮಾಡುವುದು ಬಹಳ ತಲೆನೋವು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರು ಕೆಲಸ ಮಾಡುವುದಿಲ್ಲ ಎಂದು ಬಂಡಾಯ ತೋರಿಸುವುದಿಲ್ಲ. ಬದಲಾಗಿ ಮಿಲೇನಿಯಲ್ಸ್ಗಳಂತೆ ಹೆಚ್ಚುವರಿ ಹೊರೆ ಹೊರುವುದಕ್ಕೆ ಸಿದ್ಧರಿರುವುದಿಲ್ಲ. ತಮ್ಮ ಉದ್ಯೋಗದ ವ್ಯಾಪ್ತಿಗೆ ಬರುವ ಕೆಲಸವನ್ನು ಮಾತ್ರ ಮಾಡುತ್ತೇವೆ ಎನ್ನುವ ಸ್ಪಷ್ಟ ಅಭಿಪ್ರಾಯ ಅವರದು.
ಮಿಲೇನಿಯಲ್ಸ್ ಮಾಡಿದ ತ್ಯಾಗವನ್ನು ತಾವು ಮಾಡಲು ಬಯಸುವುದಿಲ್ಲ. ಸರತಿಯಲ್ಲಿ ನಿಲ್ಲಲು ಇಷ್ಟಪಡುವುದಿಲ್ಲ. ತಕ್ಷಣ ಅಭಿಪ್ರಾಯ ವ್ಯಕ್ತಪಡಿಸುವ ಸ್ವಭಾವ ಅವರದು. ಮಿಲೇನಿಯಲ್ಸ್ ಕುಟುಂಬ ಮತ್ತು ಆರೋಗ್ಯಕ್ಕಿಂತ ವೃತ್ತಿಗೆ ಆದ್ಯತೆ ನೀಡಿದ್ದರು. ಆದರೆ ಆ ತ್ಯಾಗಕ್ಕೆ ತಕ್ಕ ಪ್ರತಿಫಲ ಅವರಿಗೆ ದೊರಕಲಿಲ್ಲ ಎಂಬುದನ್ನು ನಂತರದ ತಲೆಮಾರು ನೋಡಿದೆ. ಹೀಗಾಗಿ ಅವರು ತಮ್ಮದೇ ಶೈಲಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ.
ತಮಿಳುನಾಡಿನ ಕಂಪೆನಿಯೊಂದರಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ 24 ವರ್ಷದ ಗೌತಮ್ ಹೇಳುವ ಪ್ರಕಾರ, “ಸೀನಿಯರ್ಸ್ ಮೆಕಾನಿಕಲ್ ಅಥವಾ ಎಲೆಕ್ಟ್ರಿಕಲ್ ಎನ್ನದೆ ಎಲ್ಲಾ ಕೆಲಸ ಕಲಿತು ಮಾಡುತ್ತಾರೆ. ಅವರ ಹಾಗೆಯೇ ನಾವೂ ಎಲ್ಲವನ್ನೂ ಮಾಡಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಾವು ಅದೇ ರೀತಿಯಲ್ಲಿ ಮುಂದುವರಿಯಬೇಕು ಎಂದು ಬಯಸುತ್ತಾರೆ. ನಮ್ಮ ಸ್ವಂತ ಆಲೋಚನೆಗಳು ಮತ್ತು ಶೈಲಿಗೆ ಅವಕಾಶ ಕೊಡುವುದಿಲ್ಲ.”
“ರಜೆಗಳನ್ನು ಕೊಡುವುದಿಲ್ಲ. ದೀರ್ಘ ರಜೆ ಬೇಕೆಂದರೆ ‘ಸಿಕ್ ಲೀವ್’ ಹಾಕಿ ತಗೋಬೇಕಾಗುವಂತಹ ಕಠಿಣ ಶಿಸ್ತು ಇದೆ. ನಾನು ಕೆಲಸ ಮಾಡುವ ಸ್ಥಳ ಬಹಳ ಗ್ರಾಮೀಣ ಪ್ರದೇಶದಲ್ಲಿದೆ. ಮನೆಯಿಂದ ಬಹಳ ದೂರ ಬಂದು ಕೆಲಸ ಮಾಡುತ್ತಿದ್ದೇನೆ. ಶನಿವಾರ–ರವಿವಾರ ರಜೆಯಿದ್ದರೂ ತಿರುಗಾಡಲು ಸೂಕ್ತ ಸ್ಥಳವಿಲ್ಲ. ಹೀಗಾಗಿ ಮಾನಸಿಕವಾಗಿ ಬಹಳ ಆಯಾಸವಾಗುವಂತಹ ಸ್ಥಿತಿ ಇದೆ,” ಎನ್ನುತ್ತಾರೆ ಗೌತಮ್.
*ಮ್ಯಾನೇಜ್ಮೆಂಟ್ಗೆ ಪಾಠ ಕಲಿಸುವವರು!
ಕಚೇರಿ ಸಮಯ ಮತ್ತು ಶಿಸ್ತು ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದ ಮ್ಯಾನೇಜ್ಮೆಂಟ್ ಇದೀಗ ಜೆನ್ ಝೀಗಾಗಿ ತಮ್ಮ ನಿಯಮಗಳನ್ನು ಸಡಿಲಿಸುತ್ತಿದೆ. ಲಾವಣ್ಯ ಅವರ ಪ್ರಕಾರ, “ನಮ್ಮ ಮರ್ಯಾದೆಗೆ ಅಂಜಿ ಅವರ ವರ್ಕ್ ಎಥಿಕ್ಸ್ಗಳನ್ನೇ ನಾವು ಅಡಾಪ್ಟ್ ಮಾಡಿಕೊಂಡಿರುವುದು ಕ್ಷೇಮ. ಆದರೂ ಇತ್ತೀಚಿನ ಮತ್ತೊಂದು ರಿಯಲೈಸೇಷನ್ ಎಂದರೆ — ಮ್ಯಾನೇಜ್ಮೆಂಟ್ಗೆ ಇದು ಬೇಕಿತ್ತು".
"ಕಾಲು ಗಂಟೆ ತಡವಾಗಿ ಕಚೇರಿಗೆ ಬಂದಾಗ ಸಂಬಳ ಹಿಡಿಯುವವರು, ರಜೆ ಕೇಳಿದಾಗ ನಿರ್ದಾಕ್ಷಿಣ್ಯವಾಗಿ ‘ಇಲ್ಲ’ ಎಂದವರಿಗೆ ತಕ್ಕ ಪಾಠ ಕಲಿಸುವವರು ಬಂದಿದ್ದಾರೆ. ಕರ್ಮ ರಿಟರ್ನ್ಸ್. ಹೊಸ ತಲೆಮಾರಿನವರು ಇಂಥ ಕಟ್ಟಪಾಡುಗಳಲ್ಲಿ ಬದುಕುವವರೇ ಅಲ್ಲ. ಇಲ್ಲವಾದರೆ ಇನ್ನೊಂದು ಕೆಲಸ ಹುಡುಕಿ ಹೊರಡುತ್ತಾರೆ".
" ಬದಲಿಗೆ ಮತ್ತೊಬ್ಬರನ್ನು ಕರೆತಂದಾಗ ಮತ್ತೆ ಹೊಸದಾಗಿ ಪಾಠ ಮಾಡುವ ಕೆಲಸ ನಮ್ಮದು ಅಥವಾ ಆ ಉಸಾಬರಿ ಬೇಡವೆಂದು ನಾವೇ ಕೆಲಸ ಮಾಡಿ ಮುಗಿಸುವ ಆಯ್ಕೆ ನಮ್ಮದು.”
“ಅಶಿಸ್ತು, ಕೆಲಸದಲ್ಲಿ ಬೇಜಾಬ್ದಾರಿತನದ ಬಗ್ಗೆ ಅವರ ಎದುರಾಗಲಿ, ಮೇಲಿನವರ ಎದುರಾಗಲಿ ಪ್ರಸ್ತಾಪಿಸಿದರೆ ನಮ್ಮ ಮಾನ ಹಜಾರಾಗುವುದು ಖಂಡಿತ. ‘ಮಿಲೇನಿಯಲ್ಸ್ಗಳು ನಮ್ಮ ವೈಯಕ್ತಿಕ ವಿಷಯಕ್ಕೆ ಮೂಗು ತೂರಿಸುತ್ತಾರೆ’, ‘ಜಡ್ಜ್ಮೆಂಟಲ್ ಆಗಿರುತ್ತಾರೆ’, ‘ಸ್ಮೋಕ್ ಬ್ರೇಕ್ ತೆಗೆದುಕೊಂಡವರ ಚಾರಿತ್ರ್ಯವಧೆ ಮಾಡುತ್ತಾರೆ’, ‘ರಜೆ ಹಾಕಿ ಪ್ರವಾಸ ಹೋಗುವುದನ್ನು ಸಹಿಸದೇ ನಮ್ಮ ವಿರುದ್ಧ ದೂರು ನೀಡುತ್ತಾರೆ’ ಎಂದು ಪುಂಖಾನುಪುಂಖವಾಗಿ ಎಚ್ಆರ್ಗೆ ಚಾಟ್ಜಿಪಿಟಿ ಬಳಸಿ ದೂರು ಬರೆಯುವ ನಿಷ್ಣಾತರಿವರು. ಕೊನೆಗೆ ನಮ್ಮ ಮೇಲೆ ಎಲ್ಲರಿಗೂ ಅನುಮಾನ ಹುಟ್ಟಿಸಿ ಆಫೀಸ್ನಲ್ಲಿ ಜೆನ್ ಝೀ ದಂಗೆ ಎಬ್ಬಿಸುವ ನಿಪುಣರಿವರು,” ಎನ್ನುತ್ತಾರೆ ಲಾವಣ್ಯ.
ಅಹಂಕಾರ ಮತ್ತು ಕಡೆಗಣಿಸುವ ಮನೋಭಾವನೆ
25 ವರ್ಷದ ಅನುವಾದಕರಾದ ನವೀನ್ ಅವರ ಪ್ರಕಾರ, ಎರಡು ರೀತಿಯ ಮಿಲೇನಿಯಲ್ಸ್ ಇರುತ್ತಾರೆ. ಒಂದು ವಿಭಾಗದವರ ವರ್ತನೆಯಿಂದ ಹೊಸಬರು ಕಷ್ಟಪಟ್ಟರೆ, ಇನ್ನೊಂದು ವಿಭಾಗದವರು ಕಲಿಕೆಗೆ ನೆರವಾಗುತ್ತಾರೆ.
“ಹೊಸಬರಾಗಿ ಕೆಲಸಕ್ಕೆ ಸೇರಿದಾಗ ಸಾಮಾನ್ಯವಾಗಿ ಉತ್ಸಾಹ ಮತ್ತು ಕಲಿಯುವ ಹಂಬಲ ಇರುತ್ತದೆ. ಆದರೆ ಹಿರಿಯ ಉದ್ಯೋಗಿಗಳ ವರ್ತನೆಯಿಂದ ಅಹಂಕಾರ, ಕಡೆಗಣಿಸುವ ಮನೋಭಾವನೆ, ಗರ್ವ, ವ್ಯಂಗ್ಯ ಇವೆಲ್ಲ ಎದುರಾಗುತ್ತದೆ. ಹೊಸ ಉದ್ಯೋಗಿಗಳು ನೀಡುವ ಸಲಹೆಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಾರೆ".
" ಪ್ರಶ್ನೆ ಕೇಳಿದರೆ ಬೇಸರ ತೋರಿಸುತ್ತಾರೆ. ಮಾಹಿತಿ ಹಂಚಿಕೊಳ್ಳುವುದಿಲ್ಲ. ಕಚೇರಿ ರಾಜಕೀಯ ಮತ್ತು ಗುಂಪುಗಾರಿಕೆ ಹೊಸಬರಿಗೆ ದೊಡ್ಡ ತಲೆನೋವು. ಇದರಿಂದ ಮಾನಸಿಕ ಒತ್ತಡ, ಕೀಳರಿಮೆ ಬೆಳೆದು, ಕೊನೆಗೆ ಕೆಲಸ ಬಿಟ್ಟು ಹೋಗುವ ಸ್ಥಿತಿ ಬರುತ್ತದೆ,” ಎನ್ನುತ್ತಾರೆ ನವೀನ್.
ಹೊಸಬರಿಗೆ ಉತ್ತಮ ಮಾರ್ಗದರ್ಶಕರೂ ಇರುತ್ತಾರೆ
ಆದರೆ ಎಲ್ಲರೂ ಇದೇ ರೀತಿ ಇರಬೇಕೆಂದಿಲ್ಲ. ಕೆಲ ಹಿರಿಯರು ಅಮೂಲ್ಯ ಅನುಭವ ಮತ್ತು ಜ್ಞಾನ ಹಂಚಿಕೊಳ್ಳುತ್ತಾರೆ. ಪುಸ್ತಕಗಳಲ್ಲಿ ಸಿಗದ ಪ್ರಾಯೋಗಿಕ ಜ್ಞಾನ, ತಮ್ಮ ತಪ್ಪುಗಳಿಂದ ಕಲಿತ ಪಾಠಗಳನ್ನು ಹಂಚಿಕೊಳ್ಳುತ್ತಾರೆ. ಇದು ಹೊಸಬರ ವೃತ್ತಿಜೀವನಕ್ಕೆ ಬಹಳ ಉಪಯುಕ್ತ.
ಸರಿಯಾದ ಮಾರ್ಗದರ್ಶಕರು ಕೌಶಲ್ಯ ವಿಕಾಸ, ನಿರ್ಧಾರ ಸಾಮರ್ಥ್ಯ ಮತ್ತು ವೃತ್ತಿಪರ ನೆಟ್ವರ್ಕ್ ವಿಸ್ತರಣೆಗೆ ಸಹಾಯ ಮಾಡುತ್ತಾರೆ. ಕೆಲಸದ ಸ್ಥಳ ಕೇವಲ ಸಂಬಳಕ್ಕಾಗಿ ದುಡಿಯುವ ಸ್ಥಳವಲ್ಲ; ಅದು ನಿರಂತರ ಕಲಿಕೆ ಮತ್ತು ವೈಯಕ್ತಿಕ ವಿಕಾಸದ ತಾಣವಾಗಿದೆ ಎನ್ನುತ್ತಾರೆ ನವೀನ್.
ಈ ತಿಕ್ಕಾಟವನ್ನು ನೋಡುತ್ತಿರುವ 45 ವರ್ಷ ಮೀರಿದ ಜೆನ್ ಎಕ್ಸ್ ಏನು ಹೇಳುತ್ತಾರೆ?
ಹಿರಿಯ ಪತ್ರಕರ್ತ ವಿ. ನಟರಾಜು ಅವರ ಪ್ರಕಾರ, “ಜೆನ್ ಝೀಗೆ ನಿರೀಕ್ಷೆಗಳು ಹೆಚ್ಚು, ಆದರೆ ಅದರ ಹೋಲಿಕೆಯಲ್ಲಿ ಡೆಲಿವರಿ ಕಡಿಮೆ. ಈ ಮನಸ್ಥಿತಿಯಲ್ಲಿ ಮುಂದುವರೆದರೆ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ. ಏಕೆಂದರೆ ಅವರ ಬೆನ್ನಿಗೇ ಮತ್ತೊಂದು ಸಾಮರ್ಥ್ಯಶಾಲಿ ತಲೆಮಾರು ಕೆಲಸದ ವೇದಿಕೆಗೆ ಸಜ್ಜಾಗುತ್ತಿದೆ. ಜೊತೆಗೆ ಎಐ ತಂತ್ರಜ್ಞಾನ ಸ್ಪರ್ಧೆಯೂ ಇದೆ.”
ಜೆನ್ ಝೀ ನ್ಯೂಕ್ಲಿಯರ್ ಕುಟುಂಬದಲ್ಲಿ ಬೆಳೆದವರು. ಹಣಕಾಸು ಭದ್ರತೆಯ ಭಾವನೆ ಇದೆ. ಮಿಲೇನಿಯಲ್ಸ್ಗಳಂತೆ ಕೆಲಸ–ಹಣಕಾಸಿನ ಒತ್ತಡದಲ್ಲಿ ಬೆಳೆದಿಲ್ಲ. ಹೀಗಾಗಿ ಕೆಲಸದ ಒತ್ತಡ ತಾಳಿಕೊಳ್ಳಲೇಬೇಕು ಎನ್ನುವ ಅನಿವಾರ್ಯತೆ ಇಲ್ಲ.
ಇದಕ್ಕೆ ವಿರುದ್ಧವಾಗಿ, ಮಿಲೇನಿಯಲ್ಸ್ ಆರ್ಥಿಕವಾಗಿ ಎಲ್ಲವನ್ನೂ ತೂಗಿ ನೋಡುವ ಮನಸ್ಥಿತಿಯಲ್ಲೇ ಇರುತ್ತಾರೆ. ಕೆಲಸದ ಒತ್ತಡ ತಾಳುವ ಸಾಮರ್ಥ್ಯವೇ ಅವರ ಶಕ್ತಿ, ಅದೇ ಅವರ ಒತ್ತಡದ ಜೀವನಶೈಲಿಯ ಕಾರಣವೂ ಹೌದು.
ಜೆನ್ ಝೀ ತಂತ್ರಜ್ಞಾನದಲ್ಲಿ ಬೆಳೆದವರು. ಮಿಲೇನಿಯಲ್ಸ್ ತಂತ್ರಜ್ಞಾನದ ಜೊತೆ ಬೆಳೆದವರು. ಮ್ಯಾನೇಜ್ಮೆಂಟ್ಗಳು ಭವಿಷ್ಯ ನಿರೀಕ್ಷೆಯಲ್ಲಿ ಜೆನ್ ಝೀಗೆ ಹೆಚ್ಚು ಮಣೆ ಹಾಕುತ್ತವೆ. ಆದರೆ ಮಿಲೇನಿಯಲ್ಸ್ಗೆ ಇದ್ದ ಹೋಲಿಸ್ಟಿಕ್ ದೃಷ್ಟಿಕೋನ ಜೆನ್ ಝೀಗಳಲ್ಲಿ ಕಡಿಮೆಯಾಗಿದೆ.
ಕಂಪಾರ್ಟ್ಮೆಂಟಲೈಸ್ಡ್ ಕೆಲಸ ಶೈಲಿ ದಿನಕಳೆದಂತೆ ಹೆಚ್ಚಿನ ಜವಾಬ್ದಾರಿಯ ಸ್ಥಾನಗಳಿಗೆ ಹೋಗುವುದನ್ನು ತಡೆಯಬಹುದು. ಸಮಗ್ರ ದೃಷ್ಟಿಕೋನ ಬೆಳೆಸಿಕೊಳ್ಳದೇ ಕೇವಲ ನಿರೀಕ್ಷೆಗಳನ್ನು ಮಾತ್ರ ಇಟ್ಟರೆ ಮುಂದಿನ ಹಂತದಲ್ಲಿ ಈ ತಲೆಮಾರು ಸವಾಲು ಎದುರಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಮಿಲೇನಿಯಲ್ಸ್ ಮತ್ತು ಜೆನ್ ಝೀ ನಡುವೆ ವ್ಯತ್ಯಾಸವಿಲ್ಲ!
ಡಿಜಿಟಲ್ ಪಬ್ಲಿಕೇಶನ್ ನಡೆಸುತ್ತಿರುವ ಸಂಪಾದಕರು ಹೇಳುವ ಪ್ರಕಾರ, “ನನ್ನ ಮಗನಿಗೆ 25 ವರ್ಷ. ಅವರು ಬಹಳ ಗಂಭೀರ. ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಅವನ ಸ್ನೇಹಿತರನ್ನು ನೋಡಿದ್ದೇನೆ. ಫಾರ್ಮಾ ಕಂಪನಿಯೊಂದರಲ್ಲಿ ಪ್ರೋಗ್ರಾಮರ್ ಆಗಿದ್ದಾರೆ. ಕೆಲಸದ ಬಗ್ಗೆ ಮಾತನಾಡೋದಾದರೆ ಜೆನ್- ಝೀಗೆ ವರ್ಕ್ ಲೈಫ್ ಬ್ಯಾಲೆನ್ಸ್ ಮುಖ್ಯ. ರಜಾ ಬೇಕು. ವೀಕೆಂಡ್ ಅಲ್ಲಿ ತಿರುಗಾಡುತ್ತಾರೆ. ಕೆಲಸ ಇದ್ದರೆ ಮಾಡುತ್ತಾರೆ. ನಮ್ಮ ಜನರೇಶನ್ ಬಡತನ ನೋಡಿದ ತಲೆಮಾರು. ನಾವು ಬೆಳಿಬೇಕಾದ್ರೆ 60-70ರಲ್ಲಿ ನಿರುದ್ಯೋಗ, ಕೆಳ ಮಧ್ಯಮ ವರ್ಗದಲ್ಲೆ ಬೆಳೆದ ನಮಗೆ ರಜಾ ಗೊತ್ತೇ ಇಲ್ಲ. ಕೆಲಸ ಸಿಕ್ಕರೆ ಸಾಕು ಎನ್ನುವ ಸ್ಥಿತಿ ಇತ್ತು. ಆದರೆ ಈಗಿನ ಪೀಳಿಗೆಗೆ ಹಣಕಾಸು ಒತ್ತಡ ಇದೆ. ಹತಾಶೆ ಇಲ್ಲ. ರಜಾಗೆ ಸ್ವಿಜರ್ಲ್ಯಾಂಡ್, ಯುರೋಪ್ ಹೋಗಬೇಕು. ಉತ್ತಮ ಕಾರು ಬೇಕು ಎನ್ನುವ ಮಹಾತ್ವಾಕಾಂಕ್ಷೆ ಇದೆ. ಅಂತಹ ಹಣಕಾಸು ಒತ್ತಡ ಇದೆ. ಆದರೆ ಹತಾಶೆ ಇಲ್ಲ. ಅವರು ಮಾಹಿತಿ ಸಂಗ್ರಹ, ಮತ್ತು ಪ್ರಕ್ರಿಯೆ ಮಾಡೋ ರೀತಿ ಭಿನ್ನವಾಗಿದೆ. ನಮ್ಮ ಜನರೇಶನ್ ಮತ್ತು ಅವರ ಜನರೇಶನ್ ಭಿನ್ನ, ನಮಗೆ ಓದೋದು ಮುಖ್ಯವಾಗಿತ್ತು. ಈ ಪೀಳಿಗೆ ಪುಸ್ತಕದಲ್ಲಿ ಸಿಗೋ ವಿಷಯಗಳನ್ನ ಪಾಡ್ ಕಾಸ್ಟ್ ವೀಡಿಯೋಗಳಲ್ಲಿ ಪಡೆದುಕೊಳ್ಳುತ್ತಾರೆ. ನನ್ನ ಮಗ ಬಹಳ ಸೈದ್ಧಾಂತಿಕ ವಿಷಯಗಳನ್ನು ಕೇಳುತ್ತಾನೆ. ಆದರೆ ಅದು ಸೂಪರ್ಫಿಶಿಯಲ್ ಆಗಿರುತ್ತೆ.”
“ಮಿಲೇನಿಯಲ್ಸ್ ಎಂದರೆ 2000ದ ಆಚೀಚೆ ಬೆಳೆದವರು. ಜನ್ ಝೀ ಮತ್ತು ಮೆಲೇನಿಯಲ್ಸ್ ಹುಟ್ಟಿದಾಗಲೇ ಪೋನ್ ಇತ್ತು. ನಮ್ಮದು ಫೋನ್ ಪೂರ್ವಯುಗ. ಮಿಲೇನಿಯಲ್ಸ್ ಮತ್ತು ಜೆನ್ ಝೀ ಬಗ್ಗೆ ಹೆಚ್ಚು ವ್ಯತ್ಯಾಸ ಹುಡುಕುವ ಅಗತ್ಯವಿಲ್ಲ. ಮಿಲೇನಿಯಲ್ಸ್ ಮತ್ತು ಜೆನ್ ಝೀ ಒಂದೇ ಶಕ್ತಿಯಿಂದ ರೂಪುಗೊಂಡಿದೆ. ಫೇಸ್ಬುಕ್ನಿಂದ ಇನ್ಸ್ಟಾಗ್ರಾಂಗೆ ಬದಲಾಗಿದ್ದಾರೆ ಅಷ್ಟೆ! ಮಿಲೇನಿಯಲ್ಸ್ ಮತ್ತು ಜೆನ್ ಝೀ ಇಬ್ಬರೂ ಇಂಟರ್ನೆಟ್ ಪೀಳಿಗೆಯಲ್ಲಿ ಬೆಳೆದವರು. ನಮ್ಮ ಪ್ರಪಂಚದ ನೈತಿಕತೆಗೂ ಈಗಕ್ಕೂ ವ್ಯತ್ಯಾಸವಿದೆ. ಮೊದಲಿದ್ದ ಸಾಮಾಜಿಕ ಒತ್ತಡ ಈಗಿಲ್ಲ. ವ್ಯಕ್ತಿಗತವಾಗಿ ಆಲೋಚಿಸುವ ಪ್ರವೃತ್ತಿ ಹೆಚ್ಚಿದೆ. ಈಗಿನ ಪ್ರಪಂಚದಲ್ಲಿ ಏನೇ ಇದ್ದರೂ ನಾನು ಬಳಸಬೇಕು. ಎಲ್ಲವೂ ನನಗೆ ಇರುವ ಇನ್ಸ್ಟ್ರುಮೆಂಟ್ ಎನ್ನುವ ಭಾವನೆ. ಪ್ರಪಂಚವನ್ನು ಸಮಾಜದ ಒಳಿತಿಗೆ ಬಳಸಬೇಕು ಎನ್ನುವ ಭಾವನೆ ಹೋಗಿದೆ. ಸಮಾಜದ ಪರವಾಗಿ ಯೋಚನೆ ಮಾಡಲ್ಲ ಅಥವಾ ಸ್ವ ಹಿತಾಸಕ್ತಿಗೆ ಹೆಚ್ಚು ಗಮನ ಕೊಡುತ್ತಾರೆ. ಸಮುದಾಯದ ಸದಸ್ಯನಾಗಿ ಯೋಚನೆ ಮಾಡುವ ಬದಲಾಗಿ ವ್ಯಕ್ತಿಗತವಾಗಿ ಯೋಚನೆ ಮಾಡುವುದು ಬೆಳೆದಿದೆ. ನಮ್ಮ ಪೀಳಿಗೆಗೆ ಹೋಲಿಸಿದರೂ ಈಗಿನ ಪೀಳಿಗೆ ಬಹಳ ವ್ಯಕ್ತಿಗತವಾಗಿ ಯೋಚನೆ ಮಾಡುತ್ತಾರೆ. ಸ್ವಾರ್ಥದ ಅಂಶ ಇದೆ. ಪ್ರಶ್ನೆ ಮಾಡೋ ಮನೋಭಾವ ಇದೆ” ಎನ್ನುತ್ತಾರೆ.







