ಖರ್ಚು ಮಾಡಿದ ನಂತರ ವೆಚ್ಚ ನೋಡುವ Gen Z

ಸಾಂದರ್ಭಿಕ ಚಿತ್ರ | Photo Credit : freepik
ಹದಿಹರೆಯದವರಿಗೆ ಕೆಫೆ ಬಿಲ್ಗಳಿಂದ ಹಿಡಿದು ಸ್ವ-ಆರೈಕೆಯ ವೆಚ್ಚದವರೆಗೆ, ಹಣ ಖರ್ಚು ಮಾಡಿದ ನಂತರ ಅಪರಾಧಿ ಭಾವನೆ ಕಾಡುತ್ತದೆ. ಒತ್ತಡ, ಸಾಮಾಜಿಕ ಮಾಧ್ಯಮ, ಕೌಟುಂಬಿಕ ಮೌಲ್ಯಗಳು ಮತ್ತು ಆರ್ಥಿಕ ಅನಿಶ್ಚಿತತೆ ಇದಕ್ಕೆ ಕಾರಣಗಳಾಗಿವೆ.
ಹದಿಹರೆಯದ ಯುವಕರು ಚೆನ್ನಾಗಿ ಗಳಿಸಿದರೂ, ಖರ್ಚು ಮಾಡಿದ ನಂತರ ಪಶ್ಚಾತ್ತಾಪಪಡುತ್ತಾರೆ. ವೃತ್ತಿಪರ ಹದಿಹರೆಯದವರಿಗೆ ಮಾತ್ರವಲ್ಲ, ಇನ್ನೂ ಓದುತ್ತಿರುವ ಹದಿಹರೆಯದವರೂ ಹಣ ಖರ್ಚು ಮಾಡಿದ ನಂತರ ಪಶ್ಚಾತ್ತಾಪಪಡುತ್ತಾರೆ. ಕೆಫೆ ಬಿಲ್ಗಳಿಂದ ಹಿಡಿದು ಸ್ವ-ಆರೈಕೆಯ ವೆಚ್ಚದವರೆಗೆ, ಖರ್ಚು ಮಾಡಿದ ಬಳಿಕ ಅಪರಾಧಿ ಭಾವನೆ ಕಾಡುತ್ತದೆ. ಒತ್ತಡ, ಸಾಮಾಜಿಕ ಮಾಧ್ಯಮ, ಕೌಟುಂಬಿಕ ಮೌಲ್ಯಗಳು ಮತ್ತು ಆರ್ಥಿಕ ಅನಿಶ್ಚಿತತೆ ಇದಕ್ಕೆ ಕೊಡುಗೆ ನೀಡುತ್ತವೆ.
ಚೆನ್ನಾಗಿ ಬದುಕಬೇಕೆಂಬ ಆಸೆ ಒಂದೆಡೆಯಾದರೆ, ತಪ್ಪು ಮಾಡುತ್ತಿದ್ದೇನೆ ಎಂಬ ಆತಂಕ ಇನ್ನೊಂದು ಕಡೆ. ಹೀಗಾಗಿ ಬಹಳಷ್ಟು ಯುವಜನತೆ ನಿತ್ಯದ ಆರಾಮವನ್ನು ಬಯಸುತ್ತಾರೆ. ಆದರೆ ಖರ್ಚು ಮಾಡಿದ ನಂತರ ಪಶ್ಚಾತ್ತಾಪಪಡುತ್ತಾರೆ. ಇಂತಹ ಭಾವನೆ ನಗರ ಜೀವನದಲ್ಲಿ ಹೆಚ್ಚಾಗಿದೆ. ಗ್ರಾಮೀಣ ಭಾರತದಲ್ಲಿ ಖರ್ಚು ಮಾಡುವುದಕ್ಕೇ ಹಿಂಜರಿಕೆ ಕಂಡುಬರುತ್ತದೆ.
ಖರ್ಚಿನ ನಂತರ ವಾಸ್ತವದ ಅರಿವು
ಎರೋನಾಟಿಕಲ್ ಎಂಜಿನಿಯರಿಂಗ್ ಪದವಿಯ ಅಂತಿಮ ಸೆಮಿಸ್ಟರ್ನಲ್ಲಿ ಓದುತ್ತಿರುವ ಬಿಲ್ವಶ್ರೀ ಅವರ ಪ್ರಕಾರ, “ಜನರೇಷನ್ ಝೀ ಯುವಕರು ಒತ್ತಡವನ್ನು ನಿಭಾಯಿಸಲು ಹೆಚ್ಚಾಗಿ ಹಣ ಖರ್ಚು ಮಾಡುವುದನ್ನು ಆಯ್ಕೆ ಮಾಡುತ್ತಾರೆ. ಓದು, ವೃತ್ತಿಜೀವನದ ಅನಿಶ್ಚಿತತೆ ಅಥವಾ ಜೀವನದ ಸಾಮಾನ್ಯ ಒತ್ತಡಗಳಿಂದಾಗಿ ತೊಂದರೆಗೆ ಒಳಗಾಗಿರುವಾಗ, ಹಣ ಖರ್ಚು ಮಾಡುವುದರಿಂದ ತಾತ್ಕಾಲಿಕ ನೆಮ್ಮದಿ ದೊರೆಯುತ್ತದೆ. ಆ ಕ್ಷಣದಲ್ಲಿ ಏನಾದರೂ ಖರೀದಿಸುವುದು ಅಥವಾ ಯಾವುದಾದರೂ ಅನುಭವಕ್ಕೆ ಹಣ ವ್ಯಯಿಸುವುದು ಪ್ರತಿಫಲ ಸಿಕ್ಕಂತೆಯೇ ಅನುಭವವಾಗುತ್ತದೆ ಮತ್ತು ಕ್ಷಣಿಕ ಸಂತೋಷವನ್ನು ನೀಡುತ್ತದೆ.”
“ಆದರೆ ಈ ಭಾವನೆ ಹೆಚ್ಚು ಕಾಲ ಉಳಿಯುವುದಿಲ್ಲ. ಖರ್ಚಿನ ನಂತರ ವಾಸ್ತವದ ಅರಿವು ಮೂಡುತ್ತದೆ. ಏರುತ್ತಿರುವ ಜೀವನ ವೆಚ್ಚಗಳು, ಹಣಕಾಸಿನ ಅಭದ್ರತೆ ಮತ್ತು ಭವಿಷ್ಯದ ಗುರಿಗಳ ಕುರಿತು ಚಿಂತನೆ ಆರಂಭವಾಗುತ್ತದೆ. ‘ನಾನು ಸಾಕಷ್ಟು ಹಣ ಉಳಿಸುತ್ತಿದ್ದೇನೆನಾ?’ ಅಥವಾ ‘ಮುಂದೆ ಈ ಹಣ ಬೇಕಾದರೆ ಏನು ಮಾಡುವುದು?’ ಎಂಬ ಪ್ರಶ್ನೆಗಳು ಕಾಡತೊಡಗುತ್ತವೆ. ಇದರಿಂದ ಒಂದು ಚಕ್ರಾಕಾರದ ಸ್ಥಿತಿ ನಿರ್ಮಾಣವಾಗುತ್ತದೆ. ಮೊದಲು ಸಮಾಧಾನ ನೀಡಿದ ಖರ್ಚೇ ನಂತರ ಆತಂಕ ಮತ್ತು ಅಪರಾಧಿ ಭಾವಕ್ಕೆ ಕಾರಣವಾಗುತ್ತದೆ. ಕ್ಷಣಿಕ ಸಂತೋಷ ಕ್ರಮೇಣ ಒತ್ತಡ ಮತ್ತು ಆತ್ಮನಿಂದನೆಯಾಗಿ ಪರಿವರ್ತನೆಯಾಗುತ್ತದೆ,” ಎನ್ನುತ್ತಾರೆ ಬಿಲ್ವಶ್ರೀ.
ಆರ್ಥಿಕತೆಯೇ ಮುಖ್ಯ ಕಾರಣ
ಮೈಸೂರಿನಲ್ಲಿ ಅಧ್ಯಾಪಕಿಯಾಗಿರುವ ಸ್ವರ್ಣ ಅವರ ಪ್ರಕಾರ, ಇಡೀ ಆರ್ಥಿಕತೆಯೇ ಇದಕ್ಕೆ ಕಾರಣ. “ಗ್ರಾಹಕೀಕರಣದ ಸಂಪೂರ್ಣ ಕಲ್ಪನೆ ನಮ್ಮನ್ನು ಖರೀದಿಸಲು ಒತ್ತಡ ಹೇರುತ್ತದೆ. ವಸ್ತುಗಳು ನಮ್ಮಲ್ಲಿರಬೇಕು; ಇಲ್ಲದಿದ್ದರೆ ಏನೋ ಕಳೆದುಕೊಂಡ ಭಾವನೆ ಉಂಟಾಗುತ್ತದೆ. ಖರೀದಿಸಿದ ನಂತರ ಪಶ್ಚಾತ್ತಾಪವಾಗುತ್ತದೆ ಎಂಬುದು ನಮಗೆ ಗೊತ್ತೇ ಇರುತ್ತದೆ. ಹಣ ವ್ಯರ್ಥ ಮಾಡುತ್ತಿದ್ದೇವೆ ಎನ್ನುವ ಅರಿವು ಇದ್ದರೂ, ಸಮಕಾಲೀನರ ಒತ್ತಡ ಅಥವಾ ಮಾರುಕಟ್ಟೆಯ ಒತ್ತಡದಿಂದ ‘ಇದನ್ನು ಖರೀದಿಸಿದರೆ ಸಂತೋಷ ಸಿಗುತ್ತದೆ’ ಎಂಬ ಭಾವನೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಸ್ವಾಸ್ಥ್ಯ ಮತ್ತು ಆರ್ಥಿಕ ಅನಿಶ್ಚಿತತೆಯನ್ನು ಸಮತೋಲನದಲ್ಲಿರಿಸಲು ನಮ್ಮ ತಲೆಮಾರು ಪ್ರಯತ್ನಿಸುತ್ತಿದೆ. ವಾಸ್ತವ ಮತ್ತು ಆಶಯಗಳ ನಡುವಿನ ಅಂತರ ನಮ್ಮ ಮೇಲೆ ಒತ್ತಡ ತರುತ್ತದೆ ಮತ್ತು ಪಶ್ಚಾತ್ತಾಪಕ್ಕೆ ಕಾರಣವಾಗುತ್ತದೆ,” ಎನ್ನುತ್ತಾರೆ ಸ್ವರ್ಣ.
ಗ್ರಾಹಕೀಕರಣದ ಪರಿಣಾಮ
ಒಟ್ಟು ಖರೀದಿ ವ್ಯವಸ್ಥೆಯೇ ಗ್ರಾಹಕೀಕರಣದ ಪರಿಣಾಮ ಎಂದು ಸ್ವರ್ಣ ಅಭಿಪ್ರಾಯಪಡುತ್ತಾರೆ. “ಖರ್ಚು ಮಾಡುವ ವಿವಿಧ ಆ್ಯಪ್ಗಳು (ಸ್ವಿಗಿ, ಝೊಮಾಟೊ, ಅಮೆಝಾನ್ ಅಥವಾ ಬ್ಲಿಂಕಿಟ್) ಅಗತ್ಯವೆಂಬ ಭಾವನೆಯನ್ನು ನಮ್ಮೊಳಗೆ ಬೆಳೆಸಿವೆ. ಸುಲಭವಾಗಿ ಲಭ್ಯವಾಗುವ ಸೇವೆಗಳ ಕಾರಣದಿಂದ ಮಾಡಿದ ಖರ್ಚುಗಳು ಯೋಗ್ಯವೆಂಬ ಮನಸ್ಥಿತಿ ರೂಪುಗೊಳ್ಳುತ್ತದೆ. ಅದೇ ಸಮಯದಲ್ಲಿ, ಯುವ ಪೀಳಿಗೆ ಎದುರಿಸುತ್ತಿರುವ ನಿರೀಕ್ಷೆಗಳು ಮತ್ತು ಒತ್ತಡ ದೇಶಾದ್ಯಂತ ಬಹುತೇಕ ಏಕರೂಪವಾಗಿವೆ. ಇದು ವಿರಾಮ, ಶಾಂತಿ ಮತ್ತು ನಿರಾಳತೆಗಳ ಅಗತ್ಯವನ್ನು ಹೆಚ್ಚಿಸುತ್ತದೆ,” ಎನ್ನುತ್ತಾರೆ ಅವರು.
ಎಲ್ಲಾ ವರ್ಗದವರಿಗೂ ಅನ್ವಯಿಸುತ್ತದೆ
ಕೇರಳದ ನಿವಾಸಿ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಿಯಾ ಅವರ ಪ್ರಕಾರ, ಇದು ಜೆನ್ ಝೀಗೆ ಮಾತ್ರ ಸೀಮಿತವಾದ ವಿಚಾರವಲ್ಲ. “ಇದನ್ನು ಎಲ್ಲ ಜೆನ್ ಝೀಗಳಿಗೂ ಅನ್ವಯಿಸಬಹುದು ಎನ್ನಲು ಸಾಧ್ಯವಿಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಮಿಲೇನಿಯಲ್ಸ್ (30–50 ವಯಸ್ಸಿನವರು) ಕೂಡ ಇಂತಹದೇ ಭಾವನೆಯನ್ನು ಅನುಭವಿಸುತ್ತಾರೆ,” ಎನ್ನುತ್ತಾರೆ ಅವರು.
ತೂಗಿ ನೋಡಿ ಖರ್ಚು
ಪೆರ್ಲದ ನಿವಾಸಿ ರೇಖಾ ಖರ್ಚು ಮಾಡುವುದೇ ಕಡಿಮೆ. “ಖರ್ಚು ಮಾಡುವಾಗ ಭವಿಷ್ಯಕ್ಕೆ ಸಾಕಾಗುತ್ತದೆಯೇ ಇಲ್ಲವೇ ಎಂದು ಯೋಚಿಸುತ್ತೇನೆ. ಆದಾಯ ಹೆಚ್ಚಾದಂತೆ ಖರ್ಚೂ ಹೆಚ್ಚಾಗುತ್ತದೆ ಎಂಬ ಭಾವನೆ ಇದೆ. ಆದರೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸುತ್ತೇನೆ. ಅನಾವಶ್ಯಕವಾಗಿ ಏನನ್ನೂ ಖರೀದಿಸುವುದಿಲ್ಲ. ಬಳಕೆಗೆ ಬರುವ ವಸ್ತು ಎಂದಾದರೆ ಮಾತ್ರ ಖರೀದಿಸುತ್ತೇನೆ,” ಎನ್ನುತ್ತಾರೆ ರೇಖಾ.
ಪ್ರೌಢಾವಸ್ಥೆಯ ಯುವಜನರ ದ್ವಂದ್ವ
“ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ನನ್ನಂತಹ ಯುವಜನರಿಗೆ—ಅಂತಿಮ ವರ್ಷದ ವಿದ್ಯಾರ್ಥಿಗಳು ಅಥವಾ ಇತ್ತೀಚೆಗೆ ಪದವಿ ಪಡೆದವರಿಗೆ—ಈ ಭಾವನೆ ಇನ್ನೂ ಹೆಚ್ಚು ತೀವ್ರವಾಗಿ ಅನುಭವವಾಗುತ್ತದೆ. ನಮ್ಮ ವೃತ್ತಿ, ಆದಾಯ ಮತ್ತು ಭವಿಷ್ಯದ ಕುರಿತು ಸ್ಪಷ್ಟ ಉತ್ತರಗಳನ್ನು ಹೊಂದಿರಬೇಕೆಂಬ ಒತ್ತಡವನ್ನು ನಿರಂತರವಾಗಿ ಅನುಭವಿಸುತ್ತೇವೆ. ಅದೇ ಸಮಯದಲ್ಲಿ ಹಣಕಾಸಿನ ಸ್ಥಿರತೆಯನ್ನು ಸಾಧಿಸಲು ಹೋರಾಟ ನಡೆಸುತ್ತಿದ್ದೇವೆ. ಇದರ ಪರಿಣಾಮವಾಗಿ, ಇಂದಿನ ಕ್ಷಣವನ್ನು ಆನಂದಿಸಬೇಕೆಂಬ ಆಸೆ ಮತ್ತು ಇಂದಿನ ಖರ್ಚು ನಮ್ಮ ಭವಿಷ್ಯಕ್ಕೆ ಏನು ಅರ್ಥ ಹೊಂದಿರಬಹುದು ಎಂಬ ಆತಂಕದ ನಡುವೆ ನಾವು Gen Z ಯುವಕರು ಸಿಲುಕಿಕೊಂಡಿರುವ ಭಾವನೆ ಅನುಭವಿಸುತ್ತೇವೆ,” ಎನ್ನುತ್ತಾರೆ ಬಿಲ್ವಶ್ರೀ.
ಸ್ವಯಂ ಗಳಿಕೆಯ ನಿರೀಕ್ಷೆ
“ಅಂತಿಮವಾಗಿ ಹೇಳುವುದಾದರೆ, ಜೆನ್ ಝೀ ತಲೆಮಾರಿನಿಂದ ವ್ಯಕ್ತಿಗತವಾಗಿ ಗಳಿಕೆ ಮಾಡಬೇಕು ಮತ್ತು ಸ್ವಯಂ ಪೋಷಣೆ ಮಾಡಿಕೊಳ್ಳಬೇಕು ಎಂಬ ನಿರೀಕ್ಷೆ ಇದೆ. ಈ ನಿರೀಕ್ಷೆಯೇ ತಮ್ಮ ಸ್ವಂತ ಹಣವನ್ನು ಬಳಸುವ ಅಗತ್ಯವನ್ನು ಹುಟ್ಟುಹಾಕುತ್ತದೆ. ಹೀಗಾಗಿ ಸ್ವತಃ ಗಳಿಸಿದ ಅಥವಾ ಹೆತ್ತವರ ಹಣವನ್ನು ಖರ್ಚು ಮಾಡಿದಾಗ ಕ್ಷಣಿಕ ತೃಪ್ತಿ ದೊರೆಯುತ್ತದೆ. ಆದರೆ ನಂತರ ಹಣ ವ್ಯರ್ಥವಾದ ಬಗ್ಗೆ ತಪ್ಪಿತಸ್ಥ ಭಾವನೆ ಉಂಟಾಗುತ್ತದೆ,” ಎನ್ನುತ್ತಾರೆ ಸ್ವರ್ಣ.







