ಗೂಗಲ್ ನ AI ಅವಲೋಕನಗಳ ವಿರುದ್ಧ ಜರ್ಮನಿ ನ್ಯಾಯಾಲಯದ ತೀರ್ಪು; ತಂತ್ರಜ್ಞಾನ ಲೋಕದ ಮೇಲೆ ಪರಿಣಾಮ ಸಾಧ್ಯತೆ

Photo Credit : Google AI
ಪ್ರಾದೇಶಿಕ ನ್ಯಾಯಾಲಯದ ಪ್ರಾಥಮಿಕ ತೀರ್ಪು ಇದಾಗಿದ್ದರೂ, AI ಉದ್ಯಮದ ಮೇಲೆ ವಿಶಾಲವಾದ ಪರಿಣಾಮಗಳನ್ನು ಬೀರಬಹುದಾದ ಮಹತ್ವದ ಬೆಳವಣಿಗೆಯಾಗಿ ಇದು ಪರಿಗಣಿಸಲಾಗಿದೆ.
ಗೂಗಲ್ ನ ಹುಡುಕಾಟ ವೇದಿಕೆಯಲ್ಲಿ AI ಅವಲೋಕನಗಳ (AI Overviews) ಮೂಲಕ ಬಳಕೆದಾರರಿಗೆ ತೋರಿಸಲಾಗುವ AI-ರಚಿತ ವಿಷಯಕ್ಕೆ ಗೂಗಲ್ ನೇರ ಹೊಣೆಗಾರ ಎಂದು ಜರ್ಮನಿಯ ನ್ಯಾಯಾಲಯವೊಂದು ತೀರ್ಪು ನೀಡಿದೆ.
AI ಅವಲೋಕನಗಳ ಉತ್ತರಗಳ ಮೂಲಕ ಮ್ಯೂನಿಚ್ ನ ಇಬ್ಬರು ಪ್ರಕಾಶಕರ ಬಗ್ಗೆ ಗೂಗಲ್ ಸುಳ್ಳು ಮಾಹಿತಿಯನ್ನು ಹರಡುತ್ತಿರುವುದನ್ನು ತಡೆಯುವ ತಾತ್ಕಾಲಿಕ ತಡೆಯಾಜ್ಞೆಯನ್ನು ಜರ್ಮನಿಯ ಮ್ಯೂನಿಚ್ ಪ್ರಾದೇಶಿಕ ನ್ಯಾಯಾಲಯ ನೀಡಿದೆ.
AI ಅವಲೋಕನಗಳ ಉತ್ತರಗಳಲ್ಲಿನ ದೋಷಗಳ ಕುರಿತು ಪ್ರಕಾಶಕರು ಗೂಗಲ್ ವಿರುದ್ಧ ಸಲ್ಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿ ಈ ತೀರ್ಪು ಬಂದಿದೆ. ಪ್ರಕಾಶಕರು ಉತ್ತಮ ವ್ಯವಹಾರ ನಡೆಸುತ್ತಿದ್ದರೂ, ಗೂಗಲ್ನ AI ಅವಲೋಕನಗಳು ಅವರನ್ನು ‘ಸ್ಕ್ಯಾಮ್’ ವೆಬ್ಸೈಟ್ಗಳೆಂದು ಬಣ್ಣಿಸಿದ್ದವು. ಗೂಗಲ್ ಹೇಳಿದಂತೆ ಆ ವೆಬ್ಸೈಟ್ಗಳು ವಂಚನೆ ನಡೆಸಿರುವ ಯಾವುದೇ ಸಾಕ್ಷ್ಯ ಕಂಡುಬಂದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
‘AI ತಪ್ಪುಗಳನ್ನು ಮಾಡಬಹುದು; ಬಳಕೆದಾರರೇ ಮಾಹಿತಿಯನ್ನು ಪರಿಶೀಲಿಸಬೇಕು’ ಎಂಬ ಗೂಗಲ್ ನ ವಾದವನ್ನು ನ್ಯಾಯಾಲಯ ಸಂಪೂರ್ಣವಾಗಿ ತಳ್ಳಿಹಾಕಿದೆ. ಸಾಂಪ್ರದಾಯಿಕ ಸರ್ಚ್ ಎಂಜಿನ್ಗಳು ಕೇವಲ ಇತರ ವೆಬ್ಸೈಟ್ಗಳ ಲಿಂಕ್ಗಳನ್ನು ತೋರಿಸುತ್ತವೆ. ಆದರೆ ಗೂಗಲ್ನ AI ಮಾಹಿತಿ ಸಂಗ್ರಹಿಸಿ ತನ್ನದೇ ರೀತಿಯಲ್ಲಿ ಮರುರೂಪಿಸಿ ಹೊಸ ವಾಕ್ಯಗಳನ್ನು ರಚಿಸುವುದರಿಂದ, ಅದನ್ನು ಗೂಗಲ್ ಸಂಸ್ಥೆಯ ‘ಸ್ವಂತ ಹೇಳಿಕೆ’ ಎಂದೇ ಪರಿಗಣಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
AI ಉದ್ಯಮದ ಮೇಲೆ ಪರಿಣಾಮ
ಪ್ರಾದೇಶಿಕ ನ್ಯಾಯಾಲಯದ ಈ ಪ್ರಾಥಮಿಕ ತೀರ್ಪು AI ಉದ್ಯಮದ ಮೇಲೆ ದೂರಗಾಮಿ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿದೆ. AI ಮಾದರಿಗಳಿಂದ ಉಂಟಾಗುವ ವಾಸ್ತವಾಂಶದ ದೋಷಗಳು ಅಥವಾ ‘ಹ್ಯಾಲುಸಿನೇಶನ್’ಗಳಿಗೆ ಯಾರು ಹೊಣೆ ಎಂಬ ಮಹತ್ವದ ಪ್ರಶ್ನೆಯನ್ನು ಇದು ಮತ್ತೆ ಮುಂದಿಟ್ಟಿದೆ.
ಮಾದರಿಯನ್ನು ಅಭಿವೃದ್ಧಿಪಡಿಸಿದ ಕಂಪನಿಗಳೇ, AI-ರಚಿತ ವಿಷಯವನ್ನು ಪ್ರಕಟಿಸುವ ವೇದಿಕೆಗಳೇ ಅಥವಾ ಪ್ರಶ್ನೆಗಳನ್ನು ಕೇಳುವ ಬಳಕೆದಾರರೇ ಹೊಣೆಗಾರರು ಎಂಬ ಚರ್ಚೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ.
ಆನ್ಲೈನ್ ವೇದಿಕೆಗಳಿಗೆ ತಮ್ಮ ಸೇವೆಗಳಲ್ಲಿ ಕಾಣಿಸಿಕೊಳ್ಳುವ ವಿಷಯಗಳಿಗೆ ಸಂಬಂಧಿಸಿದಂತೆ ನೀಡಲಾಗಿರುವ ಕಾನೂನುಬದ್ಧ ವಿನಾಯಿತಿಗಳು ಇನ್ನೂ ಸೂಕ್ತವೇ ಎಂಬ ಪ್ರಶ್ನೆಯೂ ಚರ್ಚೆಗೆ ಬಂದಿದೆ. ತಪ್ಪು ಮಾಹಿತಿ ಹರಡುವಿಕೆ, ಗಲಭೆಗಳಿಗೆ ಪ್ರಚೋದನೆ ಮತ್ತು ಭಯೋತ್ಪಾದಕ ವಿಷಯಗಳ ಪ್ರಸರಣದಲ್ಲಿ AI ವೇದಿಕೆಗಳ ಪಾತ್ರದ ಬಗ್ಗೆ ವಿಶ್ವದಾದ್ಯಂತ ಪ್ರಶ್ನೆಗಳು ಕೇಳಿಬರುತ್ತಿವೆ.
ಭಾರತದಲ್ಲೂ ಗ್ರೋಕ್ ಬಗ್ಗೆ ಚರ್ಚೆ
ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಗ್ರೋಕ್ AI ಚಾಟ್ಬಾಟ್ ಕುರಿತೂ ಇದೇ ರೀತಿಯ ಚರ್ಚೆ ನಡೆದಿತ್ತು.
GPT ಆಧಾರಿತ ಮಾದರಿಗಳು ಮೂಲತಃ ಒಂದು ವಾಕ್ಯದಲ್ಲಿನ ಮುಂದಿನ ಟೋಕನ್ ಅಥವಾ ಚಿತ್ರದಲ್ಲಿನ ಮುಂದಿನ ಪಿಕ್ಸೆಲ್ ಅನ್ನು ಊಹಿಸುವ ಮೂಲಕ, ದೊಡ್ಡ ಪ್ರಮಾಣದ ತರಬೇತಿ ದತ್ತಾಂಶಗಳಿಂದ ಕಲಿತ ಮಾದರಿಗಳ ಆಧಾರದ ಮೇಲೆ ಪ್ರತಿಕ್ರಿಯೆ ನೀಡುತ್ತವೆ. ಈ ತರಬೇತಿ ದತ್ತಾಂಶವನ್ನು ಸೃಷ್ಟಿಸಿರುವುದೂ ಮಾನವರೇ ಆಗಿರುವುದರಿಂದ, ಹೊಣೆಗಾರಿಕೆಯನ್ನು ನಿಖರವಾಗಿ ನಿರ್ಧರಿಸುವುದು ಕಷ್ಟಕರವಾಗಿದೆ.
AI ಕಂಪೆನಿಗಳೇ ಜವಾಬ್ದಾರರು
AI ಕಂಪನಿಗಳು ತಮ್ಮ ವ್ಯವಸ್ಥೆಗಳ ಪ್ರತಿಕ್ರಿಯೆಗಳಿಗೆ ಜವಾಬ್ದಾರರಾಗಬೇಕು ಎಂದು ಅನೇಕ ತಜ್ಞರು ವಾದಿಸುತ್ತಾರೆ. ಜರ್ಮನ್ ನ್ಯಾಯಾಲಯದ ತೀರ್ಪು ಇದೇ ದೃಷ್ಟಿಕೋನಕ್ಕೆ ಬಲ ನೀಡಿದೆ.
‘ವೆಬ್ಸೈಟ್ಗಳನ್ನು ಸ್ಕ್ಯಾಮ್ ಎಂದು ಗುರುತಿಸಿರುವುದು ಗೂಗಲ್ನ AI ಉಪಕರಣಗಳ ವ್ಯಾಖ್ಯಾನವಾಗಿದೆ. ಆದ್ದರಿಂದ ಅದರ ಹೊಣೆಗಾರಿಕೆಯನ್ನು ಗೂಗಲ್ ಹೊತ್ತುಕೊಳ್ಳಬೇಕು’ ಎಂದು ನ್ಯಾಯಾಲಯ ಹೇಳಿದೆ.
ಈ ತೀರ್ಪಿಗೆ ಪ್ರತಿಕ್ರಿಯಿಸಿದ ಗೂಗಲ್, ‘ಬಹುಪಾಲು AI ಪ್ರತಿಕ್ರಿಯೆಗಳು ನಿಖರವಾಗಿರುತ್ತವೆ. ಅದಕ್ಕಾಗಿ ನಾವು ಗುಣಮಟ್ಟದ ಸುಧಾರಣೆಗೆ ಹೆಚ್ಚಿನ ಹೂಡಿಕೆ ಮಾಡಿದ್ದೇವೆ. ತೀರ್ಪನ್ನು ಪರಿಶೀಲಿಸುತ್ತಿದ್ದೇವೆ. ಇದು ಅಂತಿಮ ತೀರ್ಪಲ್ಲ’ ಎಂದು ತಿಳಿಸಿದೆ.
ಒಟ್ಟು ಮೊಕದ್ದಮೆ ಏನು?
ಎರಡು ಪ್ರಕಾಶನ ಸಂಸ್ಥೆಗಳು ಗೂಗಲ್ ವಿರುದ್ಧ ಮೊಕದ್ದಮೆ ಹೂಡಿದ್ದವು.
‘ಗೂಗಲ್ನ AI ಅವಲೋಕನಗಳು ನಮ್ಮನ್ನು ಸ್ಕ್ಯಾಮ್ ನಡೆಸುವವರು, ಚಂದಾದಾರಿಕೆ ಬಲೆಗೆ ಬೀಳಿಸುವವರು ಹಾಗೂ ಮೋಸದ ವ್ಯವಹಾರ ಪದ್ಧತಿಗಳನ್ನು ಅನುಸರಿಸುವವರು ಎಂದು ನಿರ್ದಿಷ್ಟ ಹುಡುಕಾಟ ಪ್ರಶ್ನೆಗಳಿಗೆ ಉತ್ತರ ನೀಡಿವೆ’ ಎಂದು ಪ್ರಕಾಶಕರು ಆರೋಪಿಸಿದ್ದಾರೆ.
35 ಪುಟಗಳ ನ್ಯಾಯಾಲಯದ ತೀರ್ಪಿನಲ್ಲಿ ಪ್ರಕಾಶಕರ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ.
AI ಕ್ಷೇತ್ರದ ಮೇಲೆ ದೂರಗಾಮಿ ಪರಿಣಾಮ
1. ಕಾನೂನು ರಕ್ಷಣಾ ಕವಚದ ನಷ್ಟ:
ಇಲ್ಲಿಯವರೆಗೆ ಇಂಟರ್ನೆಟ್ ಕಂಪನಿಗಳಿಗೆ ಲಭ್ಯವಿದ್ದ ‘ಹೋಸ್ಟ್ ಪ್ರೊವೈಡರ್ ಸೇಫ್ ಹಾರ್ಬರ್’ (ಮೂರನೇ ವ್ಯಕ್ತಿಯ ವಿಷಯಕ್ಕೆ ಸರ್ಚ್ ಎಂಜಿನ್ ಹೊಣೆಗಾರನಲ್ಲ ಎಂಬ ತತ್ವ) ರಕ್ಷಣೆ ಮುಂದಿನ ದಿನಗಳಲ್ಲಿ ಸೀಮಿತವಾಗುವ ಸಾಧ್ಯತೆ ಇದೆ.
2. ಇತರ ಕಂಪೆನಿಗಳಿಗೂ ಆತಂಕ:
ಸ್ವತಃ ಉತ್ತರಗಳನ್ನು ಸಂಶ್ಲೇಷಿಸಿ ನೀಡುವ AI ವ್ಯವಸ್ಥೆಗಳಾದ ChatGPT, ಮೈಕ್ರೋಸಾಫ್ಟ್ ಕೋಪೈಲಟ್ ಹಾಗೂ ಪರ್ಪ್ಲೆಕ್ಸಿಟಿ ಮೊದಲಾದ ಸೇವೆಗಳಿಗೂ ಈ ತೀರ್ಪು ಭವಿಷ್ಯದಲ್ಲಿ ಕಾನೂನು ಸವಾಲುಗಳನ್ನು ಉಂಟುಮಾಡಬಹುದು.
3. ಅಲ್ಗಾರಿದಮ್ಗಳ ಮೇಲೆ ಹೆಚ್ಚುವರಿ ನಿಗಾ:
AI ದೋಷಗಳನ್ನು ತಡೆಯಲು ಮತ್ತು ಮಾನಹಾನಿ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಕಂಪನಿಗಳು ತಮ್ಮ AI ಮಾದರಿಗಳ ಗುಣಮಟ್ಟದ ಮೇಲ್ವಿಚಾರಣೆಗೆ ಹೆಚ್ಚಿನ ವೆಚ್ಚ ಮಾಡಬೇಕಾಗಬಹುದು. ಜೊತೆಗೆ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನೂ ಜಾರಿಗೊಳಿಸಬೇಕಾಗುವ ಸಾಧ್ಯತೆ ಇದೆ.






