ಗಾಝಿಯಾಬಾದ್ ನಲ್ಲಿ ಸಹೋದರಿಯರ ಆತ್ಮಹತ್ಯೆಗೆ ಕಾರಣವಾದ ಕೊರಿಯನ್ ಗೀಳು; ಭಾರತದಲ್ಲಿ Korean culture ಯಾವ ರೀತಿ ಹಬ್ಬಿಕೊಂಡಿದೆ?

PC | firstpost
ಗಾಝಿಯಾಬಾದ್ ನಲ್ಲಿ ಬುಧವಾರ ತಡರಾತ್ರಿ 12, 14 ಮತ್ತು 16ರ ಹರೆಯದ ಮೂವರು ಸಹೋದರಿಯರು ತಮ್ಮ ವಸತಿ ಕಟ್ಟಡದ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂವರು ಹುಡುಗಿಯರು ಕಟ್ಟಡದಿಂದ ಜಿಗಿಯುತ್ತಿರುವುದನ್ನು ನೋಡಿದ ನೆರೆಮನೆಯ ಅರುಣ್ ಸಿಂಗ್ ಎಂಬವರು, “ನಾನು ಹುಡುಗಿಯರು ವಾಸಿಸುತ್ತಿದ್ದ ಕಟ್ಟಡದ ಪಕ್ಕದಲ್ಲಿರುವ ಇನ್ನೊಂದು ಕಟ್ಟಡದ ಹತ್ತನೇ ಮಹಡಿಯಲ್ಲಿ ವಾಸಿಸುತ್ತಿದ್ದೇನೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ, ನಾನು ಮಲಗಲು ಹೋಗುವುದಕ್ಕಿಂತ ಮುನ್ನ ನನ್ನ ಬಾಲ್ಕನಿಯಲ್ಲಿ ನಿಂತಿದ್ದಾಗ ಆ ಹುಡುಗಿಯರು ಜಿಗಿಯುತ್ತಿರುವುದನ್ನು ನೋಡಿದೆ. ಏನಾಗುತ್ತಿದೆ ಎಂದು ನಾನು ಅರ್ಥ ಮಾಡಿಕೊಂಡು ಕೂಗುವ ಮೊದಲೇ ಆ ಹುಡುಗಿಯರು ಕಟ್ಟಡದಿಂದ ಕೆಳಗೆ ಬಿದ್ದಿದ್ದರು” ಎಂದು ಘಟನೆಯನ್ನು ವಿವರಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಆ ಸಹೋದರಿಯರು ಆನ್ಲೈನ್ನಲ್ಲಿ ಕೊರಿಯನ್ ಡ್ರಾಮಾ ಮತ್ತು ಆಟದ ವ್ಯಸನಿಗಳಾಗಿದ್ದರು. ಈ ಆಟದ ಗೀಳು ಅವರನ್ನು ಆತ್ಮಹತ್ಯೆಗೆ ದೂಡಿದೆ ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದು ಬಂದಿದೆ.
►ಕೊರಿಯಾದ ಮೇಲೆ ಸಿಕ್ಕಾಪಟ್ಟೆ ಪ್ರೀತಿ
ಆತ್ಮಹತ್ಯೆ ಮಾಡಿಕೊಂಡ ಆ ಸಹೋದರಿಯರ ಕೋಣೆಯಿಂದ ಪೊಲೀಸರಿಗೆ ಎಂಟು ಪುಟಗಳ ಆತ್ಮಹತ್ಯೆ ಟಿಪ್ಪಣಿ ಸಿಕ್ಕಿದೆ. “ಇಸ್ ಡೈರಿ ಮಿ ಜೋ ಕುಚ್ ಭಿ ಲಿಖಾ ಹೈ ವೋ ಸಬ್ ಪಡ್ ಲೋ ಕ್ಯೂಂಕೀ ಯೇ ಸಬ್ ಸಚ್ ಹೈ (ಈ ಡೈರಿಯಲ್ಲಿ ಬರೆದಿರುವ ಎಲ್ಲವನ್ನೂ ಓದಿ ಏಕೆಂದರೆ ಇದಲ್ಲೆಲ್ಲ ಸತ್ಯ ಇದೆ.) I’m really sorry. Sorry Papa” ಎಂದು ಇದರಲ್ಲಿ ಬರೆದಿದ್ದು, ಕೈಯಲ್ಲಿ ಬಿಡಿಸಿದ ಅಳುವ ಎಮೋಜಿಯೂ ಪತ್ರದಲ್ಲಿದೆ.
ಪೋಷಕರು ತಮಗೆ ಹೊಡೆದಿದ್ದು, ನಿಮಗೆ ಮದುವೆ ಮಾಡಿಸ್ತೀವಿ ಎಂದು ಬೆದರಿಸಿದ್ರು ಎಂದು ಸಹೋದರಿಯರು ಆತ್ಮಹತ್ಯಾ ಟಿಪ್ಪಣಿಯಲ್ಲಿ ಬರೆದಿದ್ದಾರೆ ಎಂದಿದ್ದಾರೆ ಪೊಲೀಸರು. ಈ ಸಹೋದರಿಯರಿಗೆ ಅಪ್ಪ ಅಮ್ಮ ಹೇಳಿದ ಮಾತು ಇಷ್ಟವಾಗಿಲ್ಲ, ಯಾಕೆಂದರೆ ಅವರಿಗೆ ಕೊರಿಯನ್ನರೇ ಇಷ್ಟವಾಗಿದ್ದರು.
“ನಿಮ್ಮಿಂದ ಏಟು ತಿಂದು ನಾವು ಈ ಜಗತ್ತಿನಲ್ಲಿ ಬದುಕಬೇಕೇ? ಇದಕ್ಕಿಂತ ಸಾವೇ ಉತ್ತಮ. ಮದುವೆಯ ವಿಷಯ ಮಾತಾಡಿದರೆ ನಾವು ಚಿಂತೆಗೀಡಾಗುತ್ತೇವೆ. ನಾವು ಕೊರಿಯನ್ನರನ್ನು ಇಷ್ಟಪಡುತ್ತೇವೆ. ಅವರನ್ನು ಪ್ರೀತಿಸುತ್ತೇವೆ. ಭಾರತದವರನ್ನು ಮದುವೆಯಾಗುವುದಕ್ಕೆ ನಾವು ಒಪ್ಪಲ್ಲ. ಕೊರಿಯನ್ ನಮ್ಮ ಬದುಕು, ನೀವು ನಮ್ಮನ್ನು ನಮ್ಮ ಬದುಕಿನಿಂದ ದೂರ ಹೋಗುವಂತೆ ಹೇಗೆ ಮಾಡ್ತೀರೀ? ನಾವು ಅವರನ್ನು ಅದೆಷ್ಟು ಪ್ರೀತಿಸುತ್ತೇವೆ ಎಂದು ನಿಮಗೆ ತಿಳಿದಿಲ್ಲ. ನೀವೀಗ ಅದರ ಪುರಾವೆಯನ್ನು ನೋಡುತ್ತೀರಿ. ಕೊರಿಯನ್ ಮತ್ತು ಕೆ–ಪಾಪ್ ನಮ್ಮ ಬದುಕು ಎಂದು ನೀವು ಈಗ ನಂಬಬೇಕು” ಎಂದು ಹುಡುಗಿಯರು ಆತ್ಮಹತ್ಯಾ ಟಿಪ್ಪಣಿಯಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಸಹಾಯಕ ಪೊಲೀಸ್ ಆಯುಕ್ತ (ಶಾಲಿಮಾರ್ ಗಾರ್ಡನ್) ಅತುಲ್ ಕುಮಾರ್ ಸಿಂಗ್ ಅವರ ಪ್ರಕಾರ, ಹುಡುಗಿಯರು ಕೊರಿಯನ್ ಆಟದ ಗೀಳು ಹೊಂದಿದ್ದರು. ಅವರು ಭಾರತೀಯರಲ್ಲ, ಸ್ವತಃ ಕೊರಿಯನ್ನರು ಎಂದು ಭಾವಿಸಿದ್ದರು. ಅವರು ಆಟದ ಪ್ರಭಾವದಿಂದ ತಮ್ಮನ್ನು ತಾವೇ ಕೊರಿಯನ್ ರಾಜಕುಮಾರಿಯರಂತೆ ಚಿತ್ರಿಸಿಕೊಂಡರು. ಈ ಮೂವರು ಸಹೋದರಿಯರು ದೈನಂದಿನ ಜೀವನದಲ್ಲಿ ಸದಾ ಜತೆಗೇ ಅಂಟಿಕೊಂಡಿರುತ್ತಿದ್ದರು. ಏನೇ ಮಾಡುತ್ತಿದ್ದರು ಜತೆಯಾಗಿಯೇ ಮಾಡುತ್ತಿದ್ದರು. ಒಟ್ಟಿಗೆ ಸ್ನಾನ ಮಾಡುವುದು, ಒಟ್ಟಿಗೆ ತಿನ್ನುವುದು, ಒಟ್ಟಿಗೆ ಮಲಗುವುದು ಹೀಗೆ. ಅವರ ಜೀವನಶೈಲಿಯೂ ಒಂದೇ ರೀತಿಯಾಗಿದ್ದು, ಮೂವರೂ ಆನ್ಲೈನ್ ಆಟಗಳಲ್ಲಿ ತುಂಬಾನೇ ತೊಡಗಿಸಿಕೊಂಡಿದ್ದರು.
►ಹುಡುಗಿಯರ ಅಪ್ಪ ಹೇಳಿದ್ದೇನು?
“ನನ್ನ ಮಕ್ಕಳಿಗೆ ಕೊರಿಯನ್ ಆಟ ಇಷ್ಟ ಎಂದು ಗೊತ್ತಿತ್ತು. ಆದರೆ ಅವರಿಗೆ ಇಷ್ಟೊಂದು ಗೀಳು ಇತ್ತು ಎಂಬುದು ನನಗೆ ಗೊತ್ತಿರಲಿಲ್ಲ” ಎಂದು ಆತ್ಮಹತ್ಯೆ ಮಾಡಿಕೊಂಡ ಹೆಣ್ಮಕ್ಕಳ ಅಪ್ಪ ಹೇಳಿದ್ದಾರೆ.
“ಇದು ಯಾವುದೇ ಪೋಷಕರಿಗೆ ಅಥವಾ ಮಗುವಿಗೆ ಸಂಭವಿಸಬಾರದು. ಪೋಷಕರು ತಮ್ಮ ಮಕ್ಕಳನ್ನು ಆಟ ಆಡಲು ಬಿಡಬಾರದು. ನನಗೆ ಆಟದ ಬಗ್ಗೆ ತಿಳಿದಿರಲಿಲ್ಲ. ಇದನ್ನೆಲ್ಲ ತಿಳಿದಿದ್ದರೆ ನಾನು ಅವರನ್ನು ಎಂದಿಗೂ ಆಡಲು ಬಿಡುತ್ತಿರಲಿಲ್ಲ. ನನ್ನ ಮಕ್ಕಳು ಸುಮಾರು ಎರಡೂವರೆ ವರ್ಷಗಳಿಂದ ಆಟ ಆಡುತ್ತಿದ್ದಾರೆ. ಅವರು ಹೆಚ್ಚಾಗಿ ಫೋನ್ ಹಿಡಿದುಕೊಂಡು ತಮ್ಮ ಕೋಣೆಯಲ್ಲಿಯೇ ಇರುತ್ತಿದ್ದರು”.
“ಹುಡುಗಿಯರು ಕನಿಷ್ಠ ಮೂರು ವರ್ಷಗಳ ಹಿಂದೆ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು. ಹಿರಿಯವಳು 7ನೇ ತರಗತಿಯಲ್ಲಿ ಮತ್ತು ಉಳಿದಿಬ್ಬರು 6 ಮತ್ತು 5ನೇ ತರಗತಿಗಳಲ್ಲಿ ಶಾಲೆ ಬಿಟ್ಟಿದ್ದರು. ಅವರು ತರಗತಿಯಲ್ಲಿ ಫೇಲಾಗಿದ್ದರು. ಆಮೇಲೆ ಶಾಲೆಗೆ ಹೋಗುವುದಕ್ಕೆ ಒಪ್ಪಲಿಲ್ಲ. ಒಂದು ವರ್ಷದ ಹಿಂದೆ ನಾನು ಅವರನ್ನು ಖಾಸಗಿ ತರಬೇತಿ ಕೇಂದ್ರಕ್ಕೆ ಕಳುಹಿಸಿದೆ. ಅಲ್ಲಿ ಅವರು ಶಿಕ್ಷಕರೊಂದಿಗೆ ಜಗಳವಾಡಿ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದರು” ಎಂದು ಹುಡುಗಿಯರ ಅಪ್ಪ ಹೇಳಿದ್ದಾರೆ ಎಂದು Indian Express ವರದಿ ಮಾಡಿದೆ.
►ಭಾರತ ಮತ್ತು ಜಗತ್ತಿನಾದ್ಯಂತ ಕೆ–ಸಂಸ್ಕೃತಿಯ ಉಗಮ
ಗಾಝಿಯಾಬಾದ್ ನ ಮೂವರು ಸಹೋದರಿಯರ ಆತ್ಮಹತ್ಯೆ ಪ್ರಕರಣ ಭಾರತದಲ್ಲಿ ಕೆ–ಸಂಸ್ಕೃತಿಯ ಉಗಮ ಮತ್ತು ಅದರ ಗೀಳಿನ ಬಗ್ಗೆ ಚರ್ಚೆಗೆ ಕಾರಣವಾಗಿದೆ. ‘ಹಲ್ಯು’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೊರಿಯನ್ ಅಲೆ ದಕ್ಷಿಣ ಕೊರಿಯಾದ ಎಲ್ಲಾ ವಿಷಯಗಳ ಬಗ್ಗೆ ಜಾಗತಿಕ ಕ್ರೇಝ್ ಅನ್ನು ಒಳಗೊಂಡಿದೆ. ‘ಹಲ್ಯು’ ಎಂಬುದು ಚೀನೀ ಪದ ‘ಹ್ಯಾನ್ಲಿಯು’ ನಿಂದ ಬಂದಿದ್ದು, ಇದರರ್ಥ ಕೊರಿಯನ್ ಜನಪ್ರಿಯ ಸಂಸ್ಕೃತಿಯ ಜನಪ್ರಿಯತೆ.
ಭಾರತದಲ್ಲಿ ಕೊರಿಯನ್ ಅಲೆ 2012ರಲ್ಲಿ ರ್ಯಾಪರ್ ಸೈ ಮತ್ತು ಅವರ ಹಾಡು ‘ಗಂಗ್ನಮ್ ಸ್ಟೈಲ್’ ಜೊತೆ ಪ್ರಾರಂಭವಾಯಿತು ಎಂದು ಹಲವರು ನಂಬುತ್ತಾರೆ. ಈ ಹಾಡು ಬಹುಬೇಗನೆ ಜನಪ್ರಿಯವಾಯಿತು. ಇದು ಭಾರತದಲ್ಲಿ K-culture ಅನ್ನು ಪ್ರಾರಂಭಿಸಿತು. ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಕೊರಿಯನ್ ಸಂಸ್ಕೃತಿ ಭಾರತದಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಿತು. ಎಲ್ಲೆಡೆ ಲಾಕ್ಡೌನ್ ಆಗುತ್ತಿದ್ದಂತೆ ಅನೇಕರು ಮನರಂಜನೆಗಾಗಿ ನೆಟ್ಫ್ಲಿಕ್ಸ್ ಮತ್ತು ಇತರ OTT ಪ್ಲಾಟ್ಫಾರ್ಮ್ಗಳನ್ನು ಬಳಸಿದರು. ಇದರಲ್ಲಿ ಪ್ರಸಾರವಾಗುತ್ತಿದ್ದ ಕೆ-ಡ್ರಾಮಾಗಳು ಜನಪ್ರಿಯವಾದವು.
ಇಂದು ಕೆ-ಡ್ರಾಮಾ ಮತ್ತು ಕೆ-ಪಾಪ್ ಭಾರತದಲ್ಲಿ ದೊಡ್ಡ ಮಾರುಕಟ್ಟೆಯನ್ನು ಕಂಡುಕೊಂಡಿವೆ. 2025ರ ಜಾಗತಿಕ ಹಲ್ಯು ಸಮೀಕ್ಷೆಯಲ್ಲಿ (2024ರ ಡೇಟಾವನ್ನು ಆಧರಿಸಿ) ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾ ನಂತರ ಭಾರತವು ಕೆ-ಕಂಟೆಂಟ್ ಬಗ್ಗೆ ಜಾಗತಿಕವಾಗಿ ಶೇಕಡಾ 84.5ರಷ್ಟು ಹೆಚ್ಚಿನ ಒಲವು ಹೊಂದಿದೆ. ಸರಿಸುಮಾರು 185 ಮಿಲಿಯನ್ ಬಳಕೆದಾರರಲ್ಲಿ ಭಾರತದ ಕೆ-ಪಾಪ್ ಸ್ಟ್ರೀಮಿಂಗ್ ಸಂಖ್ಯೆಗಳು ಜಾಸ್ತಿ ಇದೆ ಎಂದು financial express ವರದಿ ಹೇಳಿದೆ.
ಇದಲ್ಲದೆ, ಕೆ-ಡ್ರಾಮಗಳು ಮತ್ತು ಕೆ-ಪಾಪ್ ಮೇಲಿನ ಪ್ರೀತಿಯು ಕೊರಿಯನ್ ಕಲಿಯಲು ಬಯಸುವವರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. 2023ರಲ್ಲಿ ಭಾರತದಲ್ಲಿ ಡ್ಯುಯೊಲಿಂಗೊದಲ್ಲಿ ನಾಲ್ಕನೇ ಹೆಚ್ಚು ಕಲಿತ ವಿದೇಶಿ ಭಾಷೆಯಾಗಿದೆ ಕೊರಿಯನ್. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 2020ರಲ್ಲಿ ತನ್ನ ವಿದೇಶಿ ಭಾಷಾ ಪಠ್ಯಕ್ರಮದ ಅಡಿಯಲ್ಲಿ ಕೊರಿಯನ್ ಅನ್ನು ಐಚ್ಛಿಕ ಭಾಷೆಯಾಗಿ ಅಧಿಕೃತವಾಗಿ ಸೇರಿಸಿತು. 2024ರ ಹೊತ್ತಿಗೆ 2,000ಕ್ಕೂ ಹೆಚ್ಚು CBSE-ಸಂಯೋಜಿತ ಶಾಲೆಗಳು ಕೊರಿಯನ್ ಅನ್ನು ಎರಡನೇ ಅಥವಾ ಮೂರನೇ ಭಾಷೆಯಾಗಿ ಕಲಿಸುತ್ತಿವೆ.
2019 ಮತ್ತು 2024ರ ನಡುವೆ ವಿಶೇಷವಾಗಿ ದೆಹಲಿ ವಿಶ್ವವಿದ್ಯಾಲಯ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳಲ್ಲಿ ಕೊರಿಯನ್ ಭಾಷಾ ಕಾರ್ಯಕ್ರಮಗಳಲ್ಲಿ ಶೇಕಡಾ 280ರಷ್ಟು ಏರಿಕೆ ಕಂಡುಬಂದಿದೆ.
ಕೊರಿಯನ್ ಮೇಲಿನ ಪ್ರೀತಿ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಭಾರತವು ಕೆ-ಬ್ಯೂಟಿ ಮತ್ತು ಕೆ-ಫ್ಯಾಷನ್ ಜಗತ್ತಿನಲ್ಲಿಯೂ ಸಿಕ್ಕಾಪಟ್ಟೆ ಆಸಕ್ತಿ ಹೊಂದಿದೆ.
KOTRA (Korea Trade-Investment Promotion Agency) ಪ್ರಕಾರ, 2020 ಮತ್ತು 2023ರ ನಡುವೆ ಭಾರತದ ಕೊರಿಯನ್ ಜೀವನಶೈಲಿ ಉತ್ಪನ್ನಗಳು (ಸೌಂದರ್ಯ, ಆಹಾರ, ಫ್ಯಾಷನ್) ಆಮದು ಶೇಕಡಾ 287ರಷ್ಟು ಹೆಚ್ಚಾಗಿದೆ. ಇದರ ಮೌಲ್ಯ 2023ರ ಅಂತ್ಯದ ವೇಳೆಗೆ 418 ಮಿಲಿಯನ್ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚು. ಕೆ-ಬ್ಯೂಟಿ ಮತ್ತು ಕೆ-ಫ್ಯಾಷನ್ ಬ್ರ್ಯಾಂಡ್ ಗಳು 160ಕ್ಕೂ ಹೆಚ್ಚು ಭಾರತೀಯ ಮಾಲ್ ಗಳು ಮತ್ತು ಚಿಲ್ಲರೆ ಮಾರುಕಟ್ಟೆಗಳನ್ನು ಸಹ ಪ್ರವೇಶಿಸಿವೆ.
ಈ ಹಲ್ಯು ಸಂಸ್ಕೃತಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಪಾಶ್ಚಿಮಾತ್ಯ ದೇಶಗಳೂ ಇದರಿಂದ ಆಕರ್ಷಿತವಾಗಿವೆ. ಸಿನಿಮಾ, ಸ್ಕ್ವಿಡ್ ಗೇಮ್ಸ್ನಂತಹ ಶೋಗಳು ಮತ್ತು ಬ್ಲ್ಯಾಕ್ಪಿಂಕ್ನಂತಹ ಬ್ಯಾಂಡ್ಗಳ ಯಶಸ್ಸು ಇದಕ್ಕೆ ಸಾಕ್ಷಿಯಾಗಿದೆ. ಕೆ-ಸಂಸ್ಕೃತಿಯು ದಕ್ಷಿಣ ಕೊರಿಯಾದ ಒಟ್ಟಾರೆ ಚಿತ್ರಣವನ್ನೂ ಹೆಚ್ಚಿಸಿದೆ. 2025ರ ಸಮೀಕ್ಷೆಯ ಪ್ರಕಾರ ಪ್ರಪಂಚದಾದ್ಯಂತ 10 ಜನರಲ್ಲಿ ಎಂಟು ಜನರು ಈಗ ಕೊರಿಯಾವನ್ನು ಅನುಕೂಲಕರವಾಗಿ ನೋಡುತ್ತಾರೆ.
►ಕೆ–ಸಂಸ್ಕೃತಿಯ ಕರಾಳ ಮುಖ
ಕೆ-ಸಂಸ್ಕೃತಿಯ ಜನಪ್ರಿಯತೆ ಎಷ್ಟೋ ಅದರ ಮೇಲಿನ ಗೀಳು ಕೂಡ ಅಷ್ಟೇ ಅಪಾಯಗಳನ್ನು ಹೊಂದಿದೆ. ಹದಿಹರೆಯದವರಲ್ಲಿ ಇದು ಗುರುತಿನ ನಷ್ಟ ಅಥವಾ ಸಾಂಸ್ಕೃತಿಕ ಸಂಪರ್ಕ ಕಡಿತದ ಬಗ್ಗೆ ಕಳವಳಗಳನ್ನುಂಟು ಮಾಡಿದೆ.
ಕೆ-ಪಾಪ್ ವಿಷಯಕ್ಕೆ ಬಂದಾಗ, ಸಂಗೀತವು ಕೇಳುಗರಿಗೆ ಹಾನಿಕಾರಕವಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಕಲಾವಿದರ ಮೇಲೆ ಉದ್ಯಮದ ಒತ್ತಡವು ಆತಂಕ, ಅಸ್ತವ್ಯಸ್ತ ಜೀವನಶೈಲಿ ಮತ್ತು ಆಹಾರ ಸೇವನೆಯಲ್ಲಿ ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಎಂದು ಸಂಶೋಧಕರು ಗಮನಿಸುತ್ತಾರೆ. ಅಭಿಮಾನಿಗಳು ತಾವು ಆರಾಧಿಸುವ ಕಲಾವಿದರನ್ನೇ ಅನುಸರಿಸಲು ತೊಡಗಿದಾಗ ಸಮಸ್ಯೆ ಉದ್ಭವಿಸುತ್ತದೆ. ಕೆಲವೊಮ್ಮೆ ಇದು “ಫ್ಯಾಂಡಮ್ ಬರ್ನ್ಔಟ್” ಗೆ ಕಾರಣವಾಗಬಹುದು, ಅಲ್ಲಿ ಭಾವನಾತ್ಮಕ ಸಂಬಂಧವು ಕಲಾವಿದರ ಸಾಮಾಜಿಕ ಮಾಧ್ಯಮದ ತೊಡಗಿಸಿಕೊಳ್ಳುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ.
ಸಾಮಾನ್ಯ ಜನರಿಗೆ ಹೋಲಿಸಿದರೆ ಕೆ-ಪಾಪ್ ಅಭಿಮಾನಿಗಳಲ್ಲಿ ಆತಂಕ ಮತ್ತು ಖಿನ್ನತೆ ಜಾಸ್ತಿ ಎಂದು ಕೆಲವು ಅಧ್ಯಯನಗಳು ತೋರಿಸಿದರೂ ಕಾರಣ ಸ್ಪಷ್ಟವಾಗಿಲ್ಲ.
ಕೆ-ಡ್ರಾಮಾಗಳು ಪ್ರೀತಿಯ ಅವಾಸ್ತವಿಕ ಆವೃತ್ತಿಗಳನ್ನು ಚಿತ್ರಿಸುತ್ತವೆ. ಕೆ-ಸಂಸ್ಕೃತಿಯು ತನ್ನ ಅನುಯಾಯಿಗಳಲ್ಲಿ ಒಂಟಿತನವನ್ನು ಹುಟ್ಟುಹಾಕುತ್ತದೆ ಎಂದೂ ಹೇಳಲಾಗುತ್ತಿದೆ. ವಾಸ್ತವವಾಗಿ ದಕ್ಷಿಣ ಕೊರಿಯಾದ ಜನರು ಕೂಡ ತೀವ್ರ ಒಂಟಿತನದಿಂದ ಪ್ರಾಣ ಕಳೆದುಕೊಂಡಿದ್ದಾರೆ. 2023ರಲ್ಲಿ ಅಲ್ಲಿ ಒಂಟಿತನದಿಂದ ಸಾವಿಗೀಡಾದವರ ಸಂಖ್ಯೆ 3,661 ಆಗಿದ್ದು, 2022ರಲ್ಲಿ 3,559 ಮತ್ತು 2021ರಲ್ಲಿ 3,378ರಷ್ಟಿತ್ತು.
ಗಾಝಿಯಾಬಾದ್ ಸಹೋದರಿಯರ ಪ್ರಕರಣದಲ್ಲಿಯೂ ಇದು ಕಾಣಿಸುತ್ತದೆ. ಆತ್ಮಹತ್ಯೆ ಮಾಡಿಕೊಂಡ ಆ ಮೂವರು ಹುಡುಗಿಯರು ಕೂಡ ಒಂಟಿತನದ ಬಗ್ಗೆ ಬರೆದಿದ್ದರು. ಅವರ ಕೋಣೆಯ ಗೋಡೆಗಳ ಮೇಲೆ “I am very, very alone”, “ನನ್ನ ಜೀವನ ತುಂಬಾ ತುಂಬಾ ಒಂಟಿಯಾಗಿದೆ” ಮತ್ತು “Make me a heart of broken” ಮುಂತಾದ ಸಾಲುಗಳನ್ನು ಪದೇಪದೇ ಬರೆಯಲಾಗಿತ್ತು.
ಯಾವುದೇ ಒಂದು ವಿಷಯ ಅದು ಮನರಂಜನೆ ಅಥವಾ ಆಟವೇ ಆಗಿರಲಿ, ಅದು ಗೀಳು ಆಗುವ ಮುನ್ನ ಅದರ ಬಗ್ಗೆ ಎಚ್ಚರ ವಹಿಸಬೇಕು ಎಂಬುದನ್ನು ಗಾಝಿಯಾಬಾದ್ ನ ಸಹೋದರಿಯರ ಆತ್ಮಹತ್ಯೆ ಪ್ರಕರಣ ತೋರಿಸಿದೆ.







