ಗಿಗ್ ಕಾರ್ಮಿಕರ ಪ್ರತಿಭಟನೆ; ಡೆಲಿವರಿ ಕಂಪನಿಗಳ ಲಾಭದ ಹೇಳಿಕೆ ಸುಳ್ಳು!

ಸಾಂದರ್ಭಿಕ ಚಿತ್ರ
ಗಿಗ್ ಕಾರ್ಮಿಕ ಸಂಘಟನೆಗಳ ಪ್ರಕಾರ ಮುಷ್ಕರ ಯಶಸ್ವಿಯಾಗಿದೆ. ಡೆಲಿವರಿ ಕಂಪನಿಗಳು ಕಾರ್ಮಿಕರ ಮೇಲೆ ಒತ್ತಡ ಹೇರಿ, ಆಮಿಷವೊಡ್ಡಿ ಕೆಲಸ ಮಾಡಿಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗಿವೆ.
ಆಹಾರ ಮತ್ತು ಸರಕು ಡೆಲಿವರಿ ವೇದಿಕೆಗಳಾಗಿರುವ ಝೊಮೆಟೊ ಮತ್ತು ಬ್ಲಿಂಕಿಟ್ನ ಸಂಸ್ಥಾಪಕ ದೀಪಿಂದರ್ ಗೋಯಲ್ ಗುರುವಾರ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಒಂದು ಒಂದು ಬಹಳ ಚರ್ಚೆಯಲ್ಲಿದೆ. ದೀಪಿಂದರ್ ಗೋಯಲ್ ಜನವರಿ 1ರಂದು ಮಾಡಿದ ಟ್ವೀಟ್ನಲ್ಲಿ “ಸ್ಥಳೀಯ ಕಾನೂನು ಜಾರಿ ವ್ಯವಸ್ಥೆಯು ಸಣ್ಣ ಪ್ರಮಾಣದಲ್ಲಿದ್ದ ದುಷ್ಕರ್ಮಿಗಳನ್ನು ನಿಯಂತ್ರಿಸಲು ನೆರವಾಗಿರುವುದಕ್ಕೆ ಧನ್ಯವಾದಗಳು. ಅದರಿಂದಾಗಿ 4.5 ಲಕ್ಷಕ್ಕೂ ಮೀರಿದ ಡೆಲಿವರಿ ಸಹಯೋಗಿಗಳಿಂದ 75 ಲಕ್ಷ ಆರ್ಡರ್ಗಳನ್ನು (ಸಾರ್ವಕಾಲಿಕ ದಾಖಲೆ) ಮಾಡಲು ಸಾಧ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಪೋಸ್ಟ್ಗೆ ಉತ್ತರವಾಗಿ ಅನೇಕರು ಡೆಲಿವರಿ ಹುಡುಗರ ಶೋಷಣೆಯಿಂದ ಸಂಸ್ಥೆ ಹಣ ಮಾಡುತ್ತಿದೆ ಮತ್ತು ಸರ್ಕಾರ ಅದಕ್ಕೆ ನೆರವಾಗುತ್ತಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಇನ್ನು ಕೆಲವರು ಕಂಪನಿಗಳು ಲಾಭ ಮಾಡಲು ಸಂಕಷ್ಟಪಡುತ್ತಿದೆ ಎಂದು ಮಾಲೀಕರ ಪರ ವಾದಿಸಿದ್ದಾರೆ.
ಝೊಮ್ಯಾಟೊ ಮಾಲೀಕರ ಅಭಿಪ್ರಾಯಕ್ಕೆ ಟೀಕೆ
ಎಕ್ಸ್’ ತಾಣದಲ್ಲಿ ಲಿವರ್ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ವೈದ್ಯರು ಪ್ರತ್ಯುತ್ತರ ನೀಡಿ, “ನಾನೂ ಝೊಮ್ಯಾಟೊ ಮತ್ತು ಸ್ವಿಗಿ ಸೇವೆಯನ್ನು ಅಪರೂಪಕ್ಕೆ ಬಳಸುತ್ತೇನೆ. ನನಗೆ ಇದು ಬಹಳ ಕಠಿಣ ಕೆಲಸ ಎಂದು ಅನಿಸುತ್ತದೆ. “ಡೆಲಿವರಿ ಸಹಭಾಗಿಗಳ ಮಕ್ಕಳಿಗೂ ಸ್ಥಿರವಾದ ಆದಾಯ ಮತ್ತು ಶಿಕ್ಷಣ ಸಾಧ್ಯವಾಗುವಂತೆ ಅವರು ಕಾರ್ಯಪಡೆಗೆ ಸೇರಿ ದೇಶವನ್ನು ವ್ಯಾಪಕವಾಗಿ ಬದಲಾಯಿಸುತ್ತಾರೆ” ಎನ್ನುವ ದೀಪಿಂದರ್ ಗೋಯಲ್ ಅಭಿಪ್ರಾಯ ನೋಡಿದರೆ ಜಮೀನ್ದಾರಿ ವ್ಯವಸ್ಥೆ ಎಂದು ಭಾಸವಾಗುತ್ತದೆ. ಶೋಷಿತ ಉದ್ಯೋಗಿಗಳ ಮಕ್ಕಳೂ ಅಂತಹುದೇ ಉದ್ಯೋಗಕ್ಕೆ ಸೆಳೆಯಲ್ಪಡುತ್ತಾರೆ. 12 ಗಂಟೆಗಳ ಕಾಲ ಕೆಲಸ ಮಾಡಿ 400-600 ರೂ. ಗಳಿಸುವ ಕೆಲಸಕ್ಕೆ ಅವರೇಕೆ ಬರಬೇಕು. ವೃತ್ತಿಪರ/ಉದ್ಯೋಗದ ಪ್ರಗತಿ ಇಲ್ಲದ ಕಡೆ ಕೆಲಸ ಮಾಡಬೇಕೆ? ಯಾವುದೇ ಡೆಲಿವರಿ ಹುಡುಗ ಮ್ಯಾನೇಜರ್ ಅಥವಾ ಕಾರ್ಯಕಾರಿ ಸ್ಥಾನವನ್ನು ಪಡೆದದ್ದು ಇದೆಯೆ? ಚಿಕನ್ ಬಿರಿಯಾನಿ ಅಥವಾ ಪನೀರ್ ಮಸಾಲ ಡೆಲಿವರಿ ಮಾಡುವುದರಿಂದ ದೇಶ ವ್ಯಾಪಕವಾಗಿ ಬೆಳೆಯುವುದು ಹೇಗೆ?” ಎಂದು ಅವರು ಪ್ರಶ್ನಸಿದ್ದಾರೆ.
I do use Zomato and Swiggy services occasionally. But I find this really dark.
— TheLiverDoc™ (@theliverdoc) January 2, 2026
"When delivery partners' children, supported by stable incomes and education, enter the workforce and help transform our country at scale."
1. Feels like a Zamindari system where the children are… https://t.co/IF63xE4PlQ pic.twitter.com/399HUrQitK
ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ರಾಜು ಪರುಲೇಕರ್ ಅವರು ಝೊಮ್ಯಾಟೊ ಮಾಲಕರಿಗೆ ಪ್ರತ್ಯುತ್ತರಿಸಿ, “ಸಣ್ಣ ಪ್ರಮಾಣದ ದುಷ್ಕರ್ಮಿಗಳ ಕಠಿಣ ಶ್ರಮದಿಂದ ಆತ ಲಕ್ಷಾಂತರ ದುಡಿಯುತ್ತಿದ್ದಾರೆ. ಮಾನವೀಯ ಕೆಲಸದ ವಾತಾವರಣ ಬೇಕೆಂದು ಕೇಳಿದ ತನ್ನದೇ ಕಾರ್ಮಿಕ ಪಡೆಯನ್ನು ‘ದುಷ್ಕರ್ಮಿಗಳು’ ಎಂದು ಕರೆಯುವ ದುರುಳನೀತ. ಇದು ಉತ್ತಮ ಬಂಡವಾಳಶಾಹಿ ಅಥವಾ ಕೆಟ್ಟ ಬಂಡವಾಳಶಾಹಿ ಎನ್ನುವ ವಿಚಾರವಲ್ಲ, ಇದು ಮಾನವೀಯತೆ ವರ್ಸಸ್ ಅನಾಗರಿಕತೆ. ಗೋಯಲ್ ಅನಾಗರಿಕನಂತೆ ನಡೆದುಕೊಳ್ಳುತ್ತಿದ್ದಾನೆ” ಎಂದು ನಿಂದಿಸಿದ್ದಾರೆ.
ಶಿಕ್ಷಣ ತಜ್ಞ ಸಂದೀಪ್ ಮನುದಾನೆ ಝೊಮ್ಯಾಟೊ ಮಾಲೀಕರನ್ನು ಟೀಕಿಸಿ, “ಮೊದಲಿಗೆ ಶೋಷಣೆ, ನಂತರ ಬೆದರಿಕೆ, ಇದೀಗ ಕಾನೂನು ವ್ಯವಸ್ಥೆಯನ್ನು ಬಳಸಿಕೊಂಡು ತಮ್ಮದೇ ಕಂಪನಿಯ ಪಾಲುದಾರರನ್ನು ‘ದುಷ್ಕರ್ಮಿಗಳು’ ಎಂದು ಜರೆಯುತ್ತಾರೆ. ನಂತರ ಸುವರ್ಣ ಭವಿಷ್ಯದ (ಗಿಗ್ ಕೆಲಸದಿಂದ ಸಾಧ್ಯವಿಲ್ಲ) ಭರವಸೆ ನೀಡುತ್ತಾರೆ. ನಾವು ಇದನ್ನು ಹಿಂದೆಯೂ ಕೇಳಿಲ್ಲವೇ? ಈ ಸಂಸ್ಥಾಪಕರು ಸಾಬೀತಾದ ಮಾಡೆಲ್ ಅನ್ನೇ ಅನುಸರಿಸುತ್ತಿದ್ದಾರೆ” ಎಂದು ಬರೆದಿದ್ದಾರೆ.
ಝೊಮ್ಯಾಟೊ ಮಾಲೀಕರನ್ನು ಬೆಂಬಲಿಸಿದ ಉದ್ಯಮಿಗಳು
ಆದರೆ ಬಹಳಷ್ಟು ಮಂದಿ ಹೂಡಿಕೆದಾರರು, ಉದ್ಯಮಿಗಳು ದೀಪಿಂದರ್ ಗೋಯಲ್ ಅವರನ್ನು ಬೆಂಬಲಿಸಿದ್ದಾರೆ. ಉದ್ಯಮಿ ಸಾಹಿಬ್ ಪುನಿಯಾನಿ, ಉದ್ಯಮಿ ವಿನೋದ್ ಚೆಂಧಿಲ್, ಷೇರು ಹೂಡಿಕೆದಾರ ರಾಜೇಂದ್ರ ಆರ್, ಇಂಟರ್ನೆಟ್ ಉದ್ಯಮಿ ಸಂಜೀವ್ ಬಿಕ್ಚಂದಾನಿ. ಕಸ್ಟಮ್ಸ್ ಬ್ರೋಕರ್ ಹರ್ಷ ಲ್ಯಾಪ್ಸಿಯ, ಹೂಡಿಕೆದಾರ ವೆಂಕಟೇಶ್ ಜಯರಾಮನ್ ಮೊದಲಾದವರು ಉದ್ಯಮದ ಸಂಕಷ್ಟಗಳನ್ನು ಒತ್ತಿಹೇಳಿ ದೀಪಿಂದರ್ ಅವರನ್ನು ಬೆಂಬಲಿಸಿದ್ದಾರೆ.
ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಯಶಸ್ವಿ?
ಇತ್ತ ಮಾಧ್ಯಮಗಳಿಗೆ ಅಭಿಪ್ರಾಯ ನೀಡಿದ ತೆಲಂಗಾಣ ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರ ಸಂಘಟನೆ (ಟಿಜಿಪಿಡಬ್ಲ್ಯುಯು) ದೀಪಿಂದರ್ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದೆ. ಟಿಜಿಪಿಡಬ್ಲ್ಯುಯು ಮುಖ್ಯಸ್ಥ ಶೇಕ್ ಸಲಹುದ್ದೀನ್ ಪ್ರಕಾರ, ಪ್ಲಾಟ್ಫಾರ್ಮ್ಗಳು ಹಣ ಮತ್ತು ಬೆದರಿಕೆಗಳ ಮೂಲಕ ಡೆಲಿವರಿ ಹುಡುಗರನ್ನು ನಿಯಂತ್ರಿಸಲು ಪ್ರಯತ್ನಿಸಿದೆ.
ಇತರ ಕಾರ್ಮಿಕ ಸಂಘಟನೆಗಳೂ ಪ್ಲಾಟ್ಫಾರ್ಮ್ ದೊಡ್ಡ ಪ್ರಮಾಣದ ಲಾಭ ಪಡೆದಿರುವುದು ಸುಳ್ಳು ಸುದ್ದಿ ಎಂದು ನಿರಾಕರಿಸಿವೆ. ದೀಪಿಂದರ್ ಗೋಯಲ್ ಅವರು ಸ್ವತಃ ಕಾನೂನು ಬಳಸಿ ಡೆಲಿವರಿ ಹುಡುಗರನ್ನು ಕೆಲಸಕ್ಕೆ ಬರಲು ಒತ್ತಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅನೇಕ ಪ್ಲಾಟ್ಫಾರ್ಮ್ಗಳು ಹೆಚ್ಚುವರಿ ಹಣದ ಆಮಿಷ ತೋರಿಸಿದ್ದವು. ಆದರೆ ಗಿಗ್ ಕಾರ್ಮಿಕ ಸಂಘಟನೆಗಳನ್ನು ಟೀಕಿಸಿರುವ ದೀಪಿಂದರ್, “ಕಾರ್ಮಿಕ ಸಂಘಟನೆಗಳ ಒತ್ತಡದ ನಡುವೆಯೂ ಗಿಗ್ ಕಾರ್ಮಿಕರು ಕೆಲಸಕ್ಕೆ ಬಂದಿದ್ದಾರೆ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೆ, ಇಷ್ಟೊಂದು ಪ್ರಮಾಣದಲ್ಲಿ ಅವರು ಕೆಲಸಕ್ಕೆ ಬರುವ ಸಾಧ್ಯತೆಯಿರಲಿಲ್ಲ. ಸ್ವಾರ್ಥ ಹಿತಾಸಕ್ತಿಗಳು ಮುಷ್ಕರಕ್ಕೆ ಪ್ರಯತ್ನಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಕನಿಷ್ಠ ಕೆಲಸದ ಭದ್ರತೆಯ ಬೇಡಿಕೆ
ಕಾರ್ಮಿಕರು ಕನಿಷ್ಠ ಗ್ಯಾರಂಟಿಯಾಗಿ ಮಾಸಿಕ 40,000 ರೂ.ಗಳನ್ನು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅನೇಕ ‘ಎಕ್ಸ್’ ಬಳಕೆದಾರರು ಹೇಳುವ ಪ್ರಕಾರ ಕಾರ್ಮಿಕರ ಮಾಸಿಕ ಗಳಿಕೆ ಇದಕ್ಕಿಂತ ಬಹಳ ಕಡಿಮೆಯಿದೆ. ಇನ್ನು ಕೆಲವರು ಇಂತಹ ಟೀಕೆಗಳು ಭಾರತದ ಕಾರ್ಮಿಕ ವರ್ಗದಲ್ಲಿ ಅರಿವಿನ ಕೊರತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಸ್ವಂತ ಕೆಲಸದಲ್ಲಿ ಎದುರಿಸುತ್ತಿರುವ ಅನ್ಯಾಯ ಮತ್ತು ಅನಾರೋಗ್ಯಕರ ವಾತಾವರಣವನ್ನು ಗುರುತಿಸುವ ಬದಲು ಮುಷ್ಕರನಿರತ ಕಾರ್ಮಿಕರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.
ವೃತ್ತಿಯಲ್ಲಿ ಸುರಕ್ಷಿತ ವಾತಾವರಣದ ಕೊರತೆ
ಅನೇಕ ಗಿಗ್ ಕಾರ್ಮಿಕರು ಶೌಚಾಲಯಗಳು, ಲಿಫ್ಟ್ಗಳು ಇಲ್ಲದ ಸ್ಥಿತಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ವಿಶ್ರಾಂತಿ ಪಡೆಯುವ ಮೂಲಕ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಾಮಾಜಿಕ ಭದ್ರತೆಯಿಲ್ಲ. ಸಂಬಳದಲ್ಲಿ ತಾರತಮ್ಯವಿದೆ. ಕುಂದುಕೊರತೆ ಆಲಿಕೆ ವ್ಯವಸ್ಥೆಯಿಲ್ಲ. ಜೊತೆಗೆ ಅಲ್ಪ ಪ್ರಮಾಣದ ವೇತನದ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರೋತ್ಸಾಹಧನ ನೀಡಿ ಆಮಿಷ
ಸಲಹುದ್ದೀನ್ ಪ್ರಕಾರ, ಕೆಲವು ಪ್ಲಾಟ್ಫಾರ್ಮ್ಗಳು ಡಿಸೆಂಬರ್ 31ರ ಸಂಜೆ ಒಂದು ದಿನದ ಮಟ್ಟಿಗೆ ಪ್ರೋತ್ಸಾಹ ಧನವನ್ನು ಪ್ರಕಟಿಸಿರುವುದು ಪ್ರತಿಭಟನಾನಿರತ ಡೆಲಿವರಿ ಹುಡುಗರಲ್ಲಿ ಗೊಂದಲಕ್ಕೆ ಕಾರಣವಾಗಿದೆ. “ಹುಡುಗರು ಇದನ್ನು ಶಾಶ್ವತ ಪ್ರೋತ್ಸಾಹ ಧನ ಎಂದುಕೊಂಡು ಮುಷ್ಕರ ಯಶಸ್ವಿಯಾಗಿದೆ ಎಂದುಕೊಂಡಿದ್ದರು. ಅದು ಒಂದು ದಿನಕ್ಕೆ ಮಾತ್ರ ನೀಡಲಾದ ಪ್ರೋತ್ಸಾಹ ಧನವಾಗಿತ್ತು. ವಾಸ್ತವದಲ್ಲಿ ಈ ಪ್ಲಾಟ್ಫಾರ್ಮ್ ಮಾಲೀಕರು ಯಾರೂ ಕುಳಿತು ಚರ್ಚಗೆ ಬರಲು ಸಿದ್ಧರಿಲ್ಲ. ನಮಗೆ ಗೌರವಯುತ ಕೆಲಸದ ವಾತಾವರಣವನ್ನು ನಾವು ಕೇಳುತ್ತಿದ್ದೇವೆ” ಎನ್ನುತ್ತಾರೆ ಸಲಹುದ್ದೀನ್.
ಕಾನೂನು ವ್ಯವಸ್ಥೆ ಬಳಸಿ ಬೆದರಿಕೆ
ಗಿಗ್ ಮತ್ತು ಪ್ಲಾಟ್ಫಾರ್ಮ್ ಸೇವಾ ಕಾರ್ಮಿಕರ ಸಂಘಟನೆ (ಜಿಐಪಿಎಸ್ಡಬ್ಲ್ಯುಯು) ಅಧ್ಯಕ್ಷರಾದ ಸೀಮಾ ಸಿಂಗ್ ಅವರು ಜನವರಿ ಒಂದರನ್ನೇ ಪತ್ರಿಕಾಗೋಷ್ಠಿ ನಡೆಸಿ ಕಂಪನಿ ಮಾಲೀಕರು ಪೊಲೀಸರನ್ನು ಮುಂದಿಟ್ಟು ಡೆಲಿವರಿ ಹುಡುಗರನ್ನು ಬೆದರಿಸುತ್ತಿದ್ದಾರೆ ಎಂದು ಹೇಳಿದ್ದರು.
“ಕಳೆದ ರಾತ್ರಿ ಡೆಲಿವರಿ ಹುಡುಗರಿಗೆ ಕರೆ ಮಾಡಿ “ಕಾನೂನು ವ್ಯವಸ್ಥೆಯೊಂದಿಗೆ ಮಾತಾಡಿ” ಎಂದು ಹೇಳಿ ಬಲವಂತವಾಗಿ ಕೆಲಸಕ್ಕೆ ಇಳಿಸಲಾಗಿತ್ತು. “ಶಾಂತಿಯುತ ಪ್ರತಿಭಟನೆಯನ್ನು ತಡೆಯಲು ಸ್ಥಳೀಯ ಪೊಲೀಸರನ್ನು ಕಳುಹಿಸಲಾಗಿತ್ತು. ಪ್ರತಿಭಟಿಸುವ ಹಕ್ಕು ಮತ್ತು ಕಾರ್ಮಿಕ ಸಂಘಟನೆಯ ವಿರುದ್ಧ ಸ್ಪಷ್ಟವಾಗಿ ಬೆದರಿಕೆ ಒಡ್ಡಲಾಗಿದೆ” ಎಂದು ಸೀಮಾ ಹೇಳಿದ್ದಾರೆ.
“ದಾಖಲೆ ಮಾರಾಟದ ಘೋಷಣೆ ಸುಳ್ಳು. ಆ್ಯಪ್ಗಳು ಅತಿಯಾದ ಬೇಡಿಕೆಯಿಂದ ಕ್ರ್ಯಾಶ್ ಆಗಿರಲಿಲ್ಲ. ಅನೇಕ ಕಾರ್ಮಿಕರು ಆ್ಯಪ್ ಅನ್ಇನ್ಸ್ಟಾಲ್ ಮಾಡಿದ ಕಾರಣ ಆರ್ಡರ್ ರಾಶಿ ಬಿದ್ದಿತ್ತು. ಡೆಲಿವರಿ ಮಾಡಲು ಜನರೇ ಇರಲಿಲ್ಲ. ಅವರಿಗೆ ಲಕ್ಷಾಂತರ ಲಾಭ ತರಲು ನಾವು ಬೆವರು ಸುರಿಸುತ್ತೇವೆ, ನಮ್ಮ ಪ್ರತಿಭಟನೆಯ ಧೈರ್ಯವನ್ನು ಕಂಪನಿ ಕುಚೇಷ್ಟೆ ಎನ್ನುತ್ತಿದೆ.” ಎಂದು ಸೀಮಾ ಹೇಳಿದ್ದಾರೆ.
ಮಾತುಕತೆಯಲ್ಲಿ ಪರಿಹಾರದ ಆಶಯ
ಕಂಪನಿಗಳು ಕಾರ್ಮಿಕ ಸಂಘಟನೆಗಳ ಜೊತೆಗೆ ಮಾತುಕತೆಯಲ್ಲಿ ಸಮಸ್ಯೆ ಪರಿಹರಿಸುವ ನಿರೀಕ್ಷೆಯಿತ್ತು. ಆದರೆ ಸರ್ಕಾರಗಳ ಮೌನದಿಂದಾಗಿ ಕಂಪನಿಗಳು ಶೋಷಣೆಗೆ ಇಳಿಯಲು ಸಾಧ್ಯವಾಗಿದೆ. “ನಾವು ಪ್ರತಿ ಡೆಲಿವರಿಗೆ 20 ರೂ. ಮತ್ತು 8 ಗಂಟೆಗಳ ಕಾರ್ಯಾವಧಿ, ಸುರಕ್ಷಿತ ಕೆಲಸದ ಸ್ಥಿತಿ, ಸಾಮಾಜಿಕ ಭದ್ರತೆ ಮತ್ತು ಪಾಲುದಾರರು ಬದಲಾಗಿ ‘ಕಾರ್ಮಿಕರು’ ಎಂದು ಗುರುತಿಸುವವರೆಗೂ ಪ್ರತಿಭಟನೆ ಮುಂದುವರಿಸಲಿದ್ದೇವೆ” ಎಂದು ಸೀಮಾ ಹೇಳಿದ್ದಾರೆ.







