AI ಬೇಡಿಕೆ ನಡುವೆ ಜಾಗತಿಕ ಚಿಪ್ ಕೊರತೆ ಆತಂಕ; ಅಮೆರಿಕಕ್ಕೆ ಎಚ್ಚರಿಕೆ, ಸ್ವಾವಲಂಬನೆಗೆ ಮುಂದಾದ ಯುರೋಪ್

ಸಾಂದರ್ಭಿಕ ಚಿತ್ರ | Photo Credit : magnific
ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ವೇಗದ ಬೆಳವಣಿಗೆಯಿಂದ ಮೆಮೊರಿ ಚಿಪ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದ್ದು, ಇದು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಆಟೋ ಮೊಬೈಲ್ ಸೇರಿದಂತೆ ಹಲವು ವಲಯಗಳಿಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ವ್ಯಾಪಾರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಇದೇ ವೇಳೆ, ಚಿಪ್ ಗಳು ಮತ್ತು ತಂತ್ರಜ್ಞಾನ ಸೇವೆಗಳಿಗಾಗಿ ವಿದೇಶಿ ಅವಲಂಬನೆ ಕಡಿಮೆಗೊಳಿಸಲು ಯುರೋಪಿಯನ್ ಒಕ್ಕೂಟ ಹೊಸ ಕ್ರಮಗಳನ್ನು ಘೋಷಿಸಿದೆ.
ಕೃತಕ ಬುದ್ಧಿಮತ್ತೆಗಾಗಿ ನಿರ್ಮಿಸಲಾಗುತ್ತಿರುವ ಡೇಟಾ ಕೇಂದ್ರಗಳು ಲಭ್ಯವಿರುವ ಮೆಮೊರಿ ಚಿಪ್ ಸಾಮರ್ಥ್ಯದ ಬಹುಪಾಲನ್ನು ಬಳಸುತ್ತಿರುವುದರಿಂದ ಚಿಪ್ ಗಳ ಬೆಲೆ ಏರಿಕೆಯಾಗಿದ್ದು, ಇತರೆ ಕೈಗಾರಿಕೆಗಳಿಗೆ ಪೂರೈಕೆ ಕಡಿಮೆಯಾಗುತ್ತಿದೆ ಎಂದು ಒಂಭತ್ತು ವ್ಯಾಪಾರ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಅಮೆರಿಕದ ಟ್ರೆಶರಿ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮತ್ತು ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರಿಗೆ ಬರೆದ ಪತ್ರದಲ್ಲಿ, “ಈ ಪರಿಸ್ಥಿತಿ ಗ್ರಾಹಕರ ಮೇಲಿನ ವೆಚ್ಚವನ್ನು ಹೆಚ್ಚಿಸಬಹುದು ಹಾಗೂ ಜಾಗತಿಕ ಪೂರೈಕೆ ಸರಪಳಿಯಲ್ಲಿ ಅಡಚಣೆ ಉಂಟುಮಾಡಬಹುದು” ಎಂದು ಒಕ್ಕೂಟ ಎಚ್ಚರಿಸಿದೆ.
“AI ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು ತಲೆಮಾರಿನ ತಾಂತ್ರಿಕ ಪ್ರಗತಿಗೆ ಕಾರಣವಾಗಲಿವೆ ಮತ್ತು ಅಮೆರಿಕದ ತಂತ್ರಜ್ಞಾನ ನಾಯಕತ್ವಕ್ಕೆ ಮಹತ್ವದ್ದಾಗಿವೆ. ಆದರೆ, ಈ ಬೆಳವಣಿಗೆ ಇತರ ಪ್ರಮುಖ ಕೈಗಾರಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆ ಏರಿಕೆ, ವಾಹನಗಳು ಮತ್ತು ವೈದ್ಯಕೀಯ ಸಾಧನಗಳ ಲಭ್ಯತೆಗೆ ಧಕ್ಕೆ ಹಾಗೂ ಫೆಡರಲ್ ಗುತ್ತಿಗೆದಾರರು ತಮ್ಮ ಖರೀದಿ ಬಾಧ್ಯತೆಗಳನ್ನು ಪೂರೈಸುವಲ್ಲಿ ಎದುರಿಸುತ್ತಿರುವ ತೊಂದರೆಗಳು ಈಗಾಗಲೇ ಗೋಚರಿಸುತ್ತಿವೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪತ್ರಕ್ಕೆ ಅಲಯನ್ಸ್ ಫಾರ್ ಆಟೊಮೊಟಿವ್ ಇನೋವೇಶನ್, ನ್ಯಾಷನಲ್ ರಿಟೇಲ್ ಫೆಡರೇಶನ್ ಹಾಗೂ ವೈದ್ಯಕೀಯ ಸಾಧನ ತಯಾರಕರ ಸಂಘ ಸೇರಿದಂತೆ ಹಲವು ಸಂಘಟನೆಗಳು ಸಹಿ ಹಾಕಿವೆ.
ಯುರೋಪ್ಗೆ ಚಿಪ್ ಬಿಸಿ
ಈ ನಡುವೆ, ಯುರೋಪಿಯನ್ ಒಕ್ಕೂಟವೂ ಚಿಪ್ ಕೊರತೆಯ ಪರಿಣಾಮವನ್ನು ಎದುರಿಸುತ್ತಿದೆ. AI ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳಿಗಾಗಿ ಅಮೆರಿಕದ ಕಂಪನಿಗಳ ಮೇಲೂ, ಮೈಕ್ರೋಚಿಪ್ ಗಳಿಗಾಗಿ ಏಷ್ಯಾದ ಮೇಲೂ ಅವಲಂಬಿತವಾಗಿರುವುದು ಯುರೋಪಿಯನ್ ನಾಯಕರು ಚಿಂತಿಸುವ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ, 27 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟ ಬುಧವಾರ “ತಂತ್ರಜ್ಞಾನ ಸಾರ್ವಭೌಮತ್ವ” (Technological Sovereignty) ಪ್ಯಾಕೇಜ್ ಅನ್ನು ಅನಾವರಣಗೊಳಿಸಿದೆ. ಇದರಡಿ, ಪ್ರಮುಖ ತಂತ್ರಜ್ಞಾನ ಸೇವೆಗಳು ಮತ್ತು ಹಾರ್ಡ್ವೇರ್ ಗಳಿಗೆ ಯುರೋಪಿನಲ್ಲೇ ಪರ್ಯಾಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಉತ್ತೇಜನ ನೀಡಲಾಗುತ್ತಿದೆ.
ವಿದೇಶಿ ತಂತ್ರಜ್ಞಾನ ಅವಲಂಬನೆಯು ತಮ್ಮ ವಿರುದ್ಧವೇ ಆಯುಧವಾಗಿ ಬಳಕೆಯಾಗುವ ಸಾಧ್ಯತೆಯ ಬಗ್ಗೆ ಯುರೋಪ್ ಆತಂಕ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಪ್ರಾಸಿಕ್ಯೂಟರ್ ವಿರುದ್ಧ ಟ್ರಂಪ್ ಆಡಳಿತ ಕ್ರಮ ಕೈಗೊಂಡ ಬಳಿಕ, ಅವರ ಇಮೇಲ್ ಖಾತೆಯನ್ನು ಮೈಕ್ರೋಸಾಫ್ಟ್ ರದ್ದುಗೊಳಿಸಿದ್ದ ಘಟನೆ ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರಮುಖ ತಂತ್ರಜ್ಞಾನ ಸೇವೆಗಳ ನಿಯಂತ್ರಣ ಅಮೆರಿಕದ ಟೆಕ್ ದೈತ್ಯ ಕಂಪೆನಿಗಳ ಕೈಯಲ್ಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಯುರೋಪಿಯನ್ ಒಕ್ಕೂಟದ ವಲಯಗಳು ಅಭಿಪ್ರಾಯಪಟ್ಟಿವೆ.
“ಯುರೋಪ್ ತನ್ನದೇ ಆಯ್ಕೆಯನ್ನು ಮಾಡುವ ಸ್ಥಿತಿಯಲ್ಲಿ ಇರಲು ಬಯಸುತ್ತದೆ. ಒಬ್ಬ ಪ್ರಬಲ ಪೂರೈಕೆದಾರ, ಒಂದೇ ಕಂಪೆನಿ ಅಥವಾ ಮೂರನೇ ದೇಶದ ಮೇಲಿನ ಅಪಾಯಕಾರಿ ಅವಲಂಬನೆಯನ್ನು ತಪ್ಪಿಸಲು ನಾವು ಬಯಸುತ್ತೇವೆ” ಎಂದು ತಂತ್ರಜ್ಞಾನ ಸಾರ್ವಭೌಮತ್ವ ಕಾರ್ಯಕ್ರಮದ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ಯುರೋಪಿಯನ್ ಆಯೋಗದ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಹೆನ್ನಾ ವಿರ್ಕುನೆನ್ ಹೇಳಿದ್ದಾರೆ.
“ಭೌಗೋಳಿಕ ರಾಜಕೀಯ ಮತ್ತು ತಂತ್ರಜ್ಞಾನ ಪರಸ್ಪರ ಸಂಬಂಧ ಹೊಂದಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ತಾಂತ್ರಿಕ ನಾವೀನ್ಯತೆ ಹೊಂದಿರುವವರೇ ಭವಿಷ್ಯವನ್ನು ರೂಪಿಸುತ್ತಾರೆ. ಆ ಪ್ರಕ್ರಿಯೆಯಲ್ಲಿ ಯುರೋಪ್ ಪ್ರಮುಖ ಪಾತ್ರ ವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.
ಈ ಪ್ಯಾಕೇಜ್ ಯುರೋಪಿಯನ್ ಒಕ್ಕೂಟದ 2023ರ ಚಿಪ್ಸ್ ಕಾಯ್ದೆಯ ಮುಂದುವರಿದ ಭಾಗವಾಗಿದೆ. ಸ್ಥಳೀಯವಾಗಿ ಸೆಮಿಕಂಡಕ್ಟರ್ಗಳ ಉತ್ಪಾದನೆ ಹೆಚ್ಚಿಸುವುದು ಮತ್ತು ಯುರೋಪಿನಲ್ಲೇ ಚಿಪ್ ತಯಾರಿಕೆಯ ಬಲಿಷ್ಠ ಪರಿಸರ ವ್ಯವಸ್ಥೆ ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಪೂರ್ವ ಏಷ್ಯಾದಲ್ಲಿ ಕೇಂದ್ರೀಕೃತವಾಗಿರುವ ಜಾಗತಿಕ ಚಿಪ್ ಪೂರೈಕೆ ಸರಪಳಿಯ ಮೇಲಿನ ಅವಲಂಬನೆಯಿಂದ ಉಂಟಾಗಿರುವ ಯುರೋಪ್ನ ದೌರ್ಬಲ್ಯ ಕಳೆದ ವರ್ಷ ಬಹಿರಂಗಗೊಂಡಿತ್ತು. ಚೀನೀ ಮಾಲೀಕತ್ವದ ನೆದರ್ಲ್ಯಾಂಡ್ ಮೂಲದ ಚಿಪ್ ತಯಾರಕ ‘ನೆಕ್ಸ್ಪೆರಿಯಾ’ಗೆ ಸಂಬಂಧಿಸಿದ ಅಧಿಕಾರ ಹೋರಾಟದ ಸಂದರ್ಭದಲ್ಲಿ ಈ ಸಮಸ್ಯೆ ಬೆಳಕಿಗೆ ಬಂದಿತ್ತು.
ಪ್ಯಾಕೇಜ್ ನ ಮತ್ತೊಂದು ಪ್ರಮುಖ ಅಂಶವೆಂದರೆ ಸ್ಥಳೀಯ ಕ್ಲೌಡ್ ಮತ್ತು AI ಅಭಿವೃದ್ಧಿಗೆ ಬೆಂಬಲ ನೀಡುವುದು. ಮುಂದಿನ ಐದುರಿಂದ ಏಳು ವರ್ಷಗಳ ಅವಧಿಯಲ್ಲಿ ಯುರೋಪಿನ ಡೇಟಾ ಕೇಂದ್ರಗಳ ಸಾಮರ್ಥ್ಯವನ್ನು ಮೂರುಪಟ್ಟು ಹೆಚ್ಚಿಸುವ ಗುರಿಯನ್ನು ಯುರೋಪಿಯನ್ ಒಕ್ಕೂಟ ಹೊಂದಿದೆ.






