ಮನೆಗೆ ಮರಳಿ; ಬ್ರಿಟನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಸಾರ್ವಜನಿಕ ಪಾರ್ಕ್ನಿಂದ ಹೊರದಬ್ಬಿದ ಗುಂಪು!

PC : indiatoday.in
ಕ್ಲೆಮ್ಸ್ಲೀ ವುಡ್ ಪೇಟ್ರಿಯಾಟ್ಸ್ ಎಂದು ಕರೆದುಕೊಳ್ಳುವ ಗುಂಪು ಸೋಲಿಹಲ್ ನ ಮೆರಿಡನ್ ಪಾರ್ಕ್ನಲ್ಲಿ ಗಸ್ತು ತಿರುಗುತ್ತಿತ್ತು ಮತ್ತು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿದೆ.
ಇಂಗ್ಲೆಂಡ್ನ ಉದ್ಯಾನವನದಲ್ಲಿ ನಡೆಯಲು ಹೊರಟಿದ್ದ ಮೂವರು ಭಾರತೀಯ ವಿದ್ಯಾರ್ಥಿಗಳನ್ನು ಸ್ವಯಂಘೋಷಿತ ಜಾಗೃತರ ಗುಂಪೊಂದು ಎದುರುಗೊಂಡು, ಮತ್ತೆ ಉದ್ಯಾನವನಕ್ಕೆ ಮರಳದಂತೆ ಎಚ್ಚರಿಸಿದೆ. ಕ್ಲೆಮ್ಸ್ಲೀ ವುಡ್ ಪೇಟ್ರಿಯಾಟ್ಸ್ ಎಂದು ಕರೆದುಕೊಳ್ಳುವ ಗುಂಪು ಸೋಲಿಹಲ್ ನ ಮೆರಿಡನ್ ಪಾರ್ಕ್ನಲ್ಲಿ ಗಸ್ತು ತಿರುಗುತ್ತಿತ್ತು. ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ಬಯಸುವುದಾಗಿ ಗುಂಪು ಹೇಳಿಕೊಂಡಿದೆ.
ಆದರೆ, ಬ್ರಿಟಿಷ್ ಸುದ್ದಿ ಸಂಸ್ಥೆ ಮೆಟ್ರೊ ವರದಿ ಮಾಡಿದ ವಿಡಿಯೊದಲ್ಲಿ ಸದಸ್ಯರು ಭಾರತೀಯ ಪುರುಷರನ್ನು ಇಂಗ್ಲೆಂಡ್ ನಲ್ಲಿ ಅವರ ಉಪಸ್ಥಿತಿಯ ಬಗ್ಗೆ ಪ್ರಶ್ನಿಸುವ ಮತ್ತು ಸಾರ್ವಜನಿಕ ಸ್ಥಳವನ್ನು ತೊರೆಯುವಂತೆ ಆದೇಶಿಸಿರುವುದನ್ನು ತೋರಿಸಲಾಗಿದೆ. ನಂತರ ವಿಡಿಯೊವನ್ನು ಗುಂಪಿನ ಸಾಮಾಜಿಕ ಮಾಧ್ಯಮ ಖಾತೆಯಿಂದ ಅಳಿಸಲಾಯಿತು. ಆದರೆ, ಬೇರೆಡೆ ಪ್ರಸಾರವಾಗುತ್ತಲೇ ಇದೆ.
ವಿಡಿಯೊದಲ್ಲಿ ಗುಂಪಿನ ಸದಸ್ಯರೊಬ್ಬರು ಪುರುಷರಲ್ಲಿ ಒಬ್ಬರನ್ನು ಸಂಪರ್ಕಿಸಿ, “ನೀವು ಇಂಗ್ಲೆಂಡ್ಗೆ ಏಕೆ ಬಂದಿರಿ?” ಎಂದು ಕೇಳುತ್ತಾರೆ. ಸಾಮಾನ್ಯವಾಗಿ ಬರ್ಮಿಂಗ್ಹ್ಯಾಮ್ ನಲ್ಲಿ ವಾಸಿಸುತ್ತಿರುವುದಾಗಿ ಮತ್ತು ಉದ್ಯಾನವನಕ್ಕೆ ತಿರುಗಲು ಬಂದಿರುವುದಾಗಿ ವಿದ್ಯಾರ್ಥಿಗಳಲ್ಲಿ ಒಬ್ಬರು ವಿವರಿಸುತ್ತಾರೆ. ಇನ್ನೊಬ್ಬರು ಸ್ನಾತಕೋತ್ತರ ಪದವಿ ಪಡೆಯಲು ಇಂಗ್ಲೆಂಡ್ ಗೆ ಬಂದು ಎರಡು ವರ್ಷಗಳಿಂದ ದೇಶದಲ್ಲಿರುವುದಾಗಿ ಹೇಳುತ್ತಾರೆ. ನಂತರ ವ್ಯಕ್ತಿಯೊಬ್ಬರು ವಿದ್ಯಾರ್ಥಿಗಳಿಗೆ, “ನೀವು ಮಕ್ಕಳ ಉದ್ಯಾನವನದಿಂದ ದೂರವೇ ಇರಿ. ಇಲ್ಲಿ ಮತ್ತೆ ಬರಬೇಡಿ. ಇಲ್ಲಿ ಮತ್ತೆ ಕಾಣಿಸಿಕೊಳ್ಳಬೇಡಿ. ನಿಮಗೆ ಅಂತಿಮ ಎಚ್ಚರಿಕೆ ನೀಡುತ್ತಿದ್ದೇವೆ!” ಎಂದು ತಿಳಿಸುತ್ತಾರೆ.
“ಹೋಗಿ ನಿಮ್ಮ ಮನೆಗೆ ಹೋಗಿ. ನೀವೆಲ್ಲಿಂದ ಬಂದಿದ್ದೀರೋ ಅಲ್ಲಿಗೆ ಹಿಂತಿರುಗಿ. ನಿಮ್ಮ HMOಗೆ ಹೋಗಿ” ಎಂದು ಎಚ್ಚರಿಸುತ್ತಾರೆ. HMO ಎಂದರೆ ಒಂದೇ ಮನೆಯ ಭಾಗವಲ್ಲದ ಜನರು ಹಂಚಿಕೊಳ್ಳುವ ಆಸ್ತಿಯಾಗಿದೆ. ಇಂತಹ ವಸತಿ ವ್ಯವಸ್ಥೆ UKಯಲ್ಲಿ ವಿದ್ಯಾರ್ಥಿಗಳು ಮತ್ತು ಇತರ ಬಾಡಿಗೆದಾರರಲ್ಲಿ ಸಾಮಾನ್ಯವಾಗಿದೆ.
ರಾತ್ರಿ ಗಸ್ತು ತಿರುಗುವುದನ್ನು ತಂಡ ಫೇಸ್ಬುಕ್ ಪೋಸ್ಟ್ ನಲ್ಲಿ ಸಮರ್ಥಿಸಿಕೊಂಡಿದೆ. ಪ್ರದೇಶದಲ್ಲಿ ಮಕ್ಕಳು ಕಾಣೆಯಾಗಿರುವುದು ಮತ್ತು ಅತ್ಯಾಚಾರಗಳ ವರದಿಗಳ ಹಿನ್ನೆಲೆಯಲ್ಲಿ ಕಾವಲು ಕಾಯಲಾಗುತ್ತಿದೆ ಎಂದು ತಂಡ ಹೇಳಿಕೊಂಡಿದೆ. ರಾತ್ರಿಯಲ್ಲಿ ಉದ್ಯಾನವನದಲ್ಲಿ ಮರಗಳು ಮತ್ತು ಶೌಚಾಲಯಗಳ ಬಳಿ ಪುರುಷರನ್ನು ಕಂಡುಕೊಂಡ ನಂತರ ಅದರ ಸದಸ್ಯರು ಅವರನ್ನು ಸಂಪರ್ಕಿಸಿದ್ದಾರೆ. “ನಮ್ಮ ದೇಶಭಕ್ತರು ವ್ಯಕ್ತಿಗಳ ಭುಜವನ್ನು ತಟ್ಟಿ ಉದ್ಯಾನವನದಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳಿದ್ದಾರೆ” ಎಂದು ಗುಂಪು ಬರೆದುಕೊಂಡಿದೆ. “ಕತ್ತಲಲ್ಲಿ ಉದ್ಯಾನವನದಲ್ಲಿ ಏನು ಹುಡುಕುತ್ತಿದ್ದಾರೆ? ಅದಕ್ಕಾಗಿಯೇ ಪುರುಷರನ್ನು ಚಿತ್ರೀಕರಿಸಲಾಗಿದೆ. ಉದ್ಯಾನವನ ಮಕ್ಕಳು ಮತ್ತು ಕುಟುಂಬಗಳಿಗಾಗಿ ಇದೆ. ಕತ್ತಲೆಯಲ್ಲಿ ಕುಳಿತು ಚಿತ್ರೀಕರಣ ಮಾಡಲು ಅಲ್ಲ” ಎಂದು ತಂಡ ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಸೋಲಿಹಲ್ ಗ್ರೀನ್ ಪಾರ್ಟಿ ಘಟನೆಯನ್ನು ಸಂಪೂರ್ಣವಾಗಿ ಖಂಡಿಸಿದೆ. “ವಿದ್ಯಾರ್ಥಿಗಳ ಜನಾಂಗೀಯತೆಯನ್ನು ಹೊರತುಪಡಿಸಿ ಇಂತಹ ವಿಧಾನಕ್ಕೆ ಸ್ಪಷ್ಟ ಕಾರಣವಿಲ್ಲ” ಎಂದು ಗ್ರೀನ್ ಪಾರ್ಟಿ ಹೇಳಿದೆ. ಗ್ರೀನ್ ಕೌನ್ಸಿಲ್ ಅಭ್ಯರ್ಥಿ ಮತ್ತು ಸಮುದಾಯ ಕಾರ್ಯಕರ್ತ ಶೇಶ್ ಶೇಷಭಟ್ಟರ್ ಅವರೂ ಘರ್ಷಣೆಯನ್ನು ಟೀಕಿಸಿದ್ದಾರೆ. “ಯುವಕರಿಗೆ ಹೊರಗೆ ನಡೆಯಲು ಅವಕಾಶವಿದೆ ಮತ್ತು ಹಕ್ಕಿದೆ. ಚರ್ಮದ ಬಣ್ಣ ಹೊರತುಪಡಿಸಿ ಅವರನ್ನು ಗುರಿಯಾಗಿಸಲು ಬೇರೆ ಯಾವುದೇ ಕಾರಣ ಕಾಣುತ್ತಿಲ್ಲ” ಎಂದು ಅವರು ಹೇಳಿದರು.
ಪೊಲೀಸರೂ ಪ್ರಕರಣವನ್ನು ದೃಢಪಡಿಸಿದ್ದಾರೆ.
ಯುನೈಟೆಡ್ ಕಿಂಗ್ಡಂ ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಲೇ ಇದೆ. ಅವರನ್ನು ದೇಶದ ಅತಿದೊಡ್ಡ ಅಂತರರಾಷ್ಟ್ರೀಯ ವಿದ್ಯಾರ್ಥಿ ಸಮುದಾಯಗಳಲ್ಲಿ ಒಂದನ್ನಾಗಿ ಮಾಡಿದೆ. ಉನ್ನತ ಶಿಕ್ಷಣ ಅಂಕಿಅಂಶ ಸಂಸ್ಥೆಯ ಪ್ರಕಾರ, 2024–25ರ ಶೈಕ್ಷಣಿಕ ವರ್ಷದಲ್ಲಿ 146,480 ಭಾರತೀಯ ವಿದ್ಯಾರ್ಥಿಗಳು ಯುನೈಟೆಡ್ ಕಿಂಗ್ಡಂನ ವಿಶ್ವವಿದ್ಯಾಲಯಗಳಲ್ಲಿ ದಾಖಲಾಗಿದ್ದರು. ಸತತ ಮೂರನೇ ವರ್ಷಕ್ಕೆ ಯಾವುದೇ ಇತರ ದೇಶಗಳ ವಿದ್ಯಾರ್ಥಿಗಳಿಗಿಂತ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ಅಂಕಿಅಂಶ ತಿಳಿಸಿದೆ.






