“ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಕಸಿದುಕೊಳ್ಳಲಾಯಿತು”; ಭಾರತದ MMA ಮೊದಲ ಪದಕ ವಿಜೇತೆ ಸುಚಿಕಾ ಆರೋಪ

Photo Credit : PTI
ವಿಚಿತ್ರ ತೂಕದ ನಿಯಮಗಳಿಂದಾಗಿ ತಮಗೆ ಸಿಗಬೇಕಿದ್ದ ಚಿನ್ನದ ಪದಕವನ್ನು ಕಸಿದುಕೊಳ್ಳಲಾಗಿದೆ ಎಂದು ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿರುವ ಸುಚಿಕಾ ತರಿಯಾಲ್ ಆರೋಪಿಸಿದ್ದಾರೆ.
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (MMA) ಕ್ರೀಡೆಯನ್ನು ಸೇರಿಸಲಾಗಿದ್ದು, ಭಾರತದ ಸುಚಿಕಾ ತರಿಯಾಲ್ ಭಾರತಕ್ಕೆ ಮೊದಲ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.
ಆದರೆ, “ವಿಚಿತ್ರ ತೂಕದ ನಿಯಮಗಳಿಂದಾಗಿ” ತಮಗೆ ಸಿಗಬೇಕಿದ್ದ ಚಿನ್ನದ ಪದಕವನ್ನು ಕಸಿದುಕೊಳ್ಳಲಾಗಿದೆ ಎಂದು ಅವರು ಗುರುವಾರ ಹೇಳಿದ್ದಾರೆ.
ಐಚಿ–ನಗೋಯಾ ಏಷ್ಯನ್ ಗೇಮ್ಸ್ನಲ್ಲಿ MMA ಪದಾರ್ಪಣೆ ಮಾಡಿದ್ದು, 36 ವರ್ಷದ ಸುಚಿಕಾ ಅವರು ಸೆಮಿಫೈನಲ್ನಲ್ಲಿ ಸಿಂಗಾಪುರದ ಟಿ ಹುಯಿ ಹೂನ್ ವಿರುದ್ಧ ಸೋತ ನಂತರ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು. ಸೆಮಿಫೈನಲ್ ಪಂದ್ಯದಲ್ಲಿ ತಾವು ‘ಸ್ಪಷ್ಟವಾಗಿ’ ಗೆಲ್ಲುತ್ತಿದ್ದರೂ ಪಂದ್ಯದ ಫಲಿತಾಂಶವನ್ನು ಬಹಳ ವಿಚಿತ್ರವಾಗಿ ಘೋಷಿಸಲಾಯಿತು ಎಂದು ಸುಚಿಕಾ ಹೇಳಿದ್ದಾರೆ.
“ನಾನು ಪಂದ್ಯದಲ್ಲಿ ಸ್ಪಷ್ಟವಾಗಿ ಗೆಲ್ಲುತ್ತಿದ್ದೆ. ಆದರೆ ಬಹಳ ವಿಚಿತ್ರವಾಗಿ ‘ಡ್ರಾ’ (ಸಮಬಲ) ಆಗಿದೆ ಎಂದು ಘೋಷಿಸಲಾಯಿತು. ಮತ್ತೊಂದು ಸುತ್ತಿನ ಆಟ ನಡೆಸುವ ಬದಲು ವಿಚಿತ್ರ ತೂಕದ ನಿಯಮಗಳನ್ನು ಹೇರಿದರು. ಇದು ನನಗೆ ಸಿಗಬೇಕಿದ್ದ ಚಿನ್ನದ ಪದಕವನ್ನು ವಾಸ್ತವದಲ್ಲಿ ನನ್ನಿಂದ ಕಸಿದುಕೊಂಡಿದೆ” ಎಂದು ಸುಚಿಕಾ ಹೇಳಿದ್ದಾರೆ. ಅವರು ಗುರುವಾರ ಭಾರತಕ್ಕೆ ಮರಳಿದ್ದಾರೆ.
“ತೂಕದ ನಿಯಮ ಬಹಳ ಕೆಟ್ಟ ನಿಯಮ ಎಂದು ನನಗೆ ಅನಿಸಿದೆ. ನನಗೆ ಮತ್ತೊಂದು ಸುತ್ತು ಆಡಲು ಅವಕಾಶ ನೀಡಬಹುದಾಗಿತ್ತು. ಒಂದು ವೇಳೆ ನಾನು ಆ ಸುತ್ತಿನಲ್ಲಿ ಸೋತಿದ್ದರೂ ಒಪ್ಪಿಕೊಳ್ಳುತ್ತಿದ್ದೆ. ಆದರೆ ಅಲ್ಲಿ ನಡೆದದ್ದನ್ನು ಒಪ್ಪಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದ್ದಾರೆ.
“ಕಂಚಿನ ಪದಕ ಸಿಕ್ಕಿರುವುದು ಖುಷಿಯಾಗಿದೆ. ನನ್ನ ಪ್ರದರ್ಶನವನ್ನು ಗಮನಿಸಿದರೆ ಚಿನ್ನದ ಪದಕ ಕೈಗೆಟುಕುವಂತಿತ್ತು. ಈ ಹಂತ ತಲುಪಲು ನಾನು ಹೇಗೆ ಶ್ರಮಿಸಿದ್ದೇನೆ ಎಂಬುದು ನನಗೆ ಗೊತ್ತು. ಬಹಳ ಕಷ್ಟಪಟ್ಟಿದ್ದೆ. ಹೀಗೆ ಸೋಲಲು ಸಾಧ್ಯವಿರಲಿಲ್ಲ. ನನಗೆ ತಿಳಿದಿರುವ ಮಟ್ಟಿಗೆ ನಾನು ಎರಡೂ ಪಂದ್ಯಗಳನ್ನು ಗೆಲ್ಲುತ್ತಿದ್ದೆ” ಎಂದು ಸುಚಿಕಾ ಹೇಳಿದರು.
“ಕೊನೆಯ ಸುತ್ತಿನಲ್ಲೂ ನಾನು ಅವಳ ಮೇಲೆ ಪ್ರಾಬಲ್ಯ ಸಾಧಿಸುತ್ತಿದ್ದೆ. ಅವರು ಹಿಂದಕ್ಕೆ ಓಡುತ್ತಿದ್ದರು. ನಾನು ಮೇಲುಗೈ ಸಾಧಿಸಿದ್ದೆ. ಫೆಡರೇಶನ್ ಸಿಂಗಾಪುರಕ್ಕೆ ಸೇರಿದ್ದು ಎಂದು ನಿಮಗೆ ನಾನು ಮೊದಲೇ ಹೇಳಿದ್ದೆ. ಹಾಗಾಗಿ ಬಹುಶಃ ಅವರು ಆಕೆಯನ್ನು ಗೆಲ್ಲಿಸಬೇಕಾಗಿತ್ತೇನೋ. ಅಧಿಕಾರಿಗಳು ಇಬ್ಬರೂ ಸ್ಪರ್ಧಿಗಳನ್ನು ವಿಜೇತರೆಂದು ಘೋಷಿಸಬಹುದಿತ್ತು. ನಾವಿಬ್ಬರೂ ಸಮಾನರು ಎಂದು ಹೇಳಿದ ಮೇಲೆ ಗೆಲುವನ್ನು ಆಕೆಗೆ ನೀಡಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಅವರು ಏಕೆ ಹಾಗೆ ಮಾಡಿದರು ಎಂದು ನನಗೆ ತಿಳಿದಿಲ್ಲ. ಅದು ಮೋಸ ಎಂದು ನಾನು ಹೇಳುತ್ತಿಲ್ಲ. ಪಂದ್ಯ ಸಮಬಲ ಎಂದು ಘೋಷಿಸುವಾಗ ನನಗೂ ಗೆಲುವು ನೀಡಬಹುದಾಗಿತ್ತು. ಆಕೆಗೆ ಗೆಲುವು ನೀಡಲು ನನ್ನ ಆಟದಲ್ಲಿ ಯಾವ ಕೊರತೆಯಿತ್ತು ಎಂದಷ್ಟೇ ಕೇಳಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
“ಇದನ್ನು ದುರದೃಷ್ಟ ಎಂದು ಕರೆಯಬಹುದು. ಆದರೂ ಕಂಚಿನ ಪದಕ ದೊರೆತಿರುವುದಕ್ಕೆ ಸಂತೋಷಪಟ್ಟಿದ್ದೇನೆ. ಇದು ನನ್ನ ಪಾಲಿಗೆ ಪ್ರಾಣಕ್ಕಿಂತಲೂ ಅಮೂಲ್ಯ. ಇದಕ್ಕಾಗಿ ಬಹಳ ಕಠಿಣ ಪರಿಶ್ರಮಪಟ್ಟಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಒಲಿಂಪಿಕ್ಸ್ನಲ್ಲಿ MMA ಇಲ್ಲದಿರುವ ಕಾರಣ, ಮುಂದಿನ ವರ್ಷದ ವಿಶ್ವ ಚಾಂಪಿಯನ್ಶಿಪ್ಗೆ ಸಿದ್ಧತೆ ನಡೆಸುವುದಾಗಿ ಸುಚಿಕಾ ಹೇಳಿದ್ದಾರೆ.






