ಭಾರತದಲ್ಲಿ ಹೆಚ್ಚಿದ ತಾಪಮಾನ: ಬಿಸಿಲಿನಿಂದಾಗುವ ಪರಿಣಾಮಗಳಿಗೆ ಸರ್ಕಾರದ ವೈಫಲ್ಯವೂ ಕಾರಣ, ಹೇಗೆ?

Photo Credit : PTI
ಭಾರತದಲ್ಲಿ ಬಿಸಿಲಿನ ಬೇಗೆ ಜಾಸ್ತಿಯಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ ಮತ್ತು ಗುಜರಾತ್ ಸೇರಿದಂತೆ ದೇಶದ ಮಧ್ಯ ಹಾಗೂ ವಾಯುವ್ಯ ಭಾಗಗಳಲ್ಲಿ ಹಗಲು ಮತ್ತು ರಾತ್ರಿಯ ತಾಪಮಾನವು ಸಾಮಾನ್ಯಕ್ಕಿಂತ ಬರೋಬ್ಬರಿ 5.1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗಿದೆ ಎಂದು ಮೇ 17ರಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿತ್ತು. ಈ ವಾರ ದಿಲ್ಲಿಯಲ್ಲಿ ತಾಪಮಾನ 45 ಡಿಗ್ರಿ ಮುಟ್ಟುವ ಸಾಧ್ಯತೆಯಿದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದ್ದು, ಈ ಬಿಸಿಗಾಳಿ ಕನಿಷ್ಠ ಇನ್ನೂ ಒಂದು ವಾರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಭಾರತ ಇಂತಹ ತೀವ್ರ ಬಿಸಿಗಾಳಿಗೆ ಸಿಲುಕುತ್ತಿರುವುದು ಇದು ಎರಡನೇ ಬಾರಿ. ಎಪ್ರಿಲ್ ಮಧ್ಯಭಾಗದಲ್ಲೂ ದೇಶದ ಹಲವೆಡೆ ಜನ ಬಿಸಿಲಿನ ಧಗೆಯಿಂದ ತತ್ತರಿಸಿದ್ದರು. ಕೆಲವರು ಪ್ರಾಣ ಕಳೆದುಕೊಂಡಿರುವ ಬಗ್ಗೆಯೂ ವರದಿಯಾಗಿತ್ತು. ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವಾಗ ಇದರಲ್ಲಿ ಆಶ್ಚರ್ಯವೇನಿಲ್ಲ ಎಂದು ಕೆಲವರು ವಾದಿಸಬಹುದು. ನಾವು ಪ್ರಸ್ತುತ 'ಸೂಪರ್ ಎಲ್ ನಿನೋ' ವರ್ಷದಲ್ಲಿದ್ದೇವೆ. ಹವಾಮಾನ ವೈಪರೀತ್ಯದಿಂದಾಗಿ ಪ್ರಪಂಚದಾದ್ಯಂತ ಹಾಗೂ ಭಾರತದಲ್ಲಿ ಬಿಸಿಗಾಳಿಯ ತೀವ್ರತೆ ಮತ್ತು ಅದು ಪದೇ ಪದೇ ಮರುಕಳಿಸುವ ಪ್ರಮಾಣ ಹೆಚ್ಚುತ್ತಲೇ ಇದೆ.
ಆದರೆ, ಕೇವಲ ಪ್ರಕೃತಿಯನ್ನು ದೂಷಿಸಿದರೆ ಸಾಲದು. ಸರ್ಕಾರದ ವೈಫಲ್ಯಗಳು ಮತ್ತು ಇಂತಹ ಪರಿಸ್ಥಿತಿಯನ್ನು ಎದುರಿಸಲು ನಮ್ಮ ವ್ಯವಸ್ಥೆ ಸಜ್ಜಾಗದೇ ಇರುವುದು ಕೂಡ ಈ ಬಿಸಿಲಿನ ಪೆಟ್ಟು ಹೆಚ್ಚಾಗಲು ಕಾರಣವಾಗಿದೆ. ಇದಕ್ಕೆ ಹಲವು ಪ್ರಮುಖ ಕಾರಣಗಳಿವೆ. ಅವುಗಳನ್ನು ಪಟ್ಟಿ ಮಾಡುವುದಾದರೆ:
1. ಭಾರತ ಸರ್ಕಾರವು ಬಿಸಿಗಾಳಿಯನ್ನು 'ರಾಷ್ಟ್ರೀಯ ವಿಪತ್ತು' ಎಂದು ಪರಿಗಣಿಸಿಲ್ಲ.
2. ಬಿಸಿಲಿನ ತಾಪದಿಂದ ಸಾವಿಗೀಡಾಗುವವರ ಅಧಿಕೃತ ಲೆಕ್ಕ ಇಂದಿಗೂ ತೀರಾ ಕಡಿಮೆ ಇರುತ್ತದೆ. ಅಸಲಿ ಸಾವುಗಳು ಸರಿಯಾಗಿ ದಾಖಲಾಗುತ್ತಿಲ್ಲ.
3. ದೀರ್ಘಾವಧಿಯಲ್ಲಿ ಪರಿಸರ ಉಳಿಸುವ ಕೆಲಸಗಳಿಗಿಂತ, ಕಣ್ಣಿಗೆ ಕಾಣುವ ತಂಪು ಕೇಂದ್ರಗಳನ್ನು ತೆರೆಯುವಂತಹ ತಾತ್ಕಾಲಿಕ ಕ್ರಮಗಳಿಗೇ ಸರ್ಕಾರಗಳು ಹೆಚ್ಚು ಹಣ ಖರ್ಚು ಮಾಡುತ್ತವೆ.
4. ಗಿಡ ನೆಡುವಂತಹ ದೀರ್ಘಾವಧಿ ಯೋಜನೆಗಳನ್ನು ಜಾರಿಗೆ ತಂದರೂ, ಅವು ಯಶಸ್ಸು ಕಾಣುತ್ತಿಲ್ಲ. ಬಿಸಿಲಿನ ಬೇಗೆಯಿಂದ ಹೆಚ್ಚು ನರಳುವ ಬಡ ಮತ್ತು ದುರ್ಬಲ ವರ್ಗದ ಜನ ವಾಸಿಸುವ ಪ್ರದೇಶಗಳತ್ತ ಯಾರೂ ಗಮನ ಹರಿಸುತ್ತಿಲ್ಲ.
ಆದರೆ ಈ ಪರಿಸ್ಥಿತಿಯನ್ನು ಬದಲಾಯಿಸಲು ಖಂಡಿತ ದಾರಿಗಳಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
►ಭಾರತಕ್ಕೆ ತಟ್ಟಿದ ಬಿಸಿಲಾಘಾತ
ವಿಶ್ವ ಹವಾಮಾನ ಸಂಸ್ಥೆಯ (WMO) ಪ್ರಕಾರ, ಹಗಲು ಮತ್ತು ರಾತ್ರಿಯ ತಾಪಮಾನವು ಸತತವಾಗಿ ಸಾಮಾನ್ಯಕ್ಕಿಂತ ವಿಪರೀತ ಹೆಚ್ಚಾಗಿದ್ದರೆ, ಅದನ್ನು ಬಿಸಿಗಾಳಿ ಅಥವಾ 'ಹೀಟ್ವೇವ್' ಎನ್ನಲಾಗುತ್ತದೆ. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ, 2000 ಮತ್ತು 2019ರ ನಡುವೆ ಪ್ರಪಂಚದಾದ್ಯಂತ ಪ್ರತಿವರ್ಷ ಸರಾಸರಿ 4,89,000 ಜನರು ಬಿಸಿಲಿನ ಬೇಗೆಗೆ ಬಲಿಯಾಗಿದ್ದಾರೆ. ಇದರಲ್ಲಿ ಶೇಕಡಾ 45ರಷ್ಟು ಸಾವುಗಳು ಏಷ್ಯಾ ಖಂಡದಲ್ಲೇ ಸಂಭವಿಸಿವೆ ಎನ್ನುವುದು ಆತಂಕಕಾರಿ ಸಂಗತಿ.
►ಭಾರತದಲ್ಲಿ ಹೀಟ್ವೇವ್ ಗೆ ಏನು ಮಾನದಂಡ?
ನಮ್ಮ ದೇಶದಲ್ಲಿ ಹವಾಮಾನ ಇಲಾಖೆಯು ಬಿಸಿಗಾಳಿಯನ್ನು ಘೋಷಿಸಲು ಕೆಲವು ನಿಯಮಗಳನ್ನು ರೂಪಿಸಿದೆ. ಬಯಲು ಸೀಮೆಯ ಪ್ರದೇಶಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾದರೆ, ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ದಾಟಿದರೆ ಅದನ್ನು ಬಿಸಿಗಾಳಿ ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ, ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ 4.5 ಡಿಗ್ರಿಯಷ್ಟು ಹೆಚ್ಚಾಗಬೇಕು ಅಥವಾ 45 ಡಿಗ್ರಿ ಸೆಲ್ಸಿಯಸ್ ದಾಟಬೇಕು.
►ಬಿಸಿಲಿನಿಂದ ದೇಶಕ್ಕಾಗುತ್ತಿರುವ ನಷ್ಟ ಎಷ್ಟು?
ಪ್ರಪಂಚದಲ್ಲೇ ಬಿಸಿಲಿನ ಬೇಗೆಗೆ ಅತಿ ಹೆಚ್ಚು ತುತ್ತಾಗುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ದೇಶದ ಬೃಹತ್ ಜನಸಂಖ್ಯೆ ಮತ್ತು ಇಲ್ಲಿನ ಭೌಗೋಳಿಕ ಪರಿಸ್ಥಿತಿಯನ್ನು ಆಧರಿಸಿ 2022ರಲ್ಲಿ ನಡೆದ ಅಧ್ಯಯನವೊಂದು ಮಹತ್ವದ ಎಚ್ಚರಿಕೆ ನೀಡಿದೆ. 2030ರಿಂದ 2100ರ ಅವಧಿಯಲ್ಲಿ ಭಾರತದ ಜನಸಂಖ್ಯೆ ಮತ್ತು ಆರ್ಥಿಕತೆಯು ಜಗತ್ತಿನಲ್ಲೇ ಅತ್ಯಂತ ಭೀಕರವಾದ ಬಿಸಿಲಿನ ಅಪಾಯವನ್ನು ಎದುರಿಸಲಿದೆ ಎಂದು ಅದು ಹೇಳಿದೆ.
ಒಂದು ಅಂದಾಜಿನ ಪ್ರಕಾರ, 2001 ಮತ್ತು 2020ರ ನಡುವೆ ವಿಪರೀತ ಸೆಖೆ ಮತ್ತು ಆರ್ದ್ರತೆ ಕಾರಣದಿಂದಾಗಿ ಭಾರತವು ಪ್ರತಿವರ್ಷ 2,590 ಕೋಟಿ ಕೆಲಸದ ಗಂಟೆಗಳನ್ನು ಕಳೆದುಕೊಂಡಿದೆ. ಇದರ ಆರ್ಥಿಕ ನಷ್ಟ ಬರೋಬ್ಬರಿ 46 ಲಕ್ಷ ಕೋಟಿ ರೂಪಾಯಿಗಳು.
ಇಷ್ಟೆಲ್ಲ ನಷ್ಟವಾಗುತ್ತಿದ್ದರೂ, ಕೇಂದ್ರ ಸರ್ಕಾರವು ಬಿಸಿಗಾಳಿಯನ್ನು ಇನ್ನೂ 'ರಾಷ್ಟ್ರೀಯ ವಿಪತ್ತು' ಎಂದು ಪರಿಗಣಿಸಿಲ್ಲ.
►ಬಿಸಿಗಾಳಿ 'ರಾಷ್ಟ್ರೀಯ ವಿಪತ್ತು' ಅಲ್ಲ
ಪ್ರಸ್ತುತ, ಬಿಸಿಲಿನ ಬೇಗೆಯನ್ನು ತಡೆಯುವ ಯೋಜನೆಗಳನ್ನು ಜಾರಿಗೆ ತರಲು ರಾಜ್ಯಗಳು ಎರಡು ಪ್ರಮುಖ ನಿಧಿಗಳನ್ನು ಬಳಸಬಹುದು. ಅವುಗಳೆಂದರೆ 'ರಾಷ್ಟ್ರೀಯ ವಿಪತ್ತು ತಡೆ ನಿಧಿ' (NDMF) ಮತ್ತು 'ರಾಜ್ಯ ವಿಪತ್ತು ತಡೆ ನಿಧಿ' (SDMF). ಆದರೆ, ಅಧಿಕೃತವಾಗಿ ಘೋಷಿಸಲ್ಪಟ್ಟ ಒಟ್ಟು 12 ರಾಷ್ಟ್ರೀಯ ವಿಪತ್ತುಗಳನ್ನು (ಇದರಲ್ಲಿ ಶೀತಗಾಳಿಯೂ ಸೇರಿದೆ) ಎದುರಿಸಲು ಬೇರೆಯದೇ ಆದ ಎರಡು ತುರ್ತು ನಿಧಿಗಳಿವೆ. ಅವು 'ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ' (NDRF) ಮತ್ತು 'ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ' (SDRF).
ಸದ್ಯದ ನಿಯಮಗಳ ಪ್ರಕಾರ, ರಾಜ್ಯಗಳು ತಮ್ಮ ಸ್ಥಳೀಯ ಅಥವಾ ರಾಜ್ಯ ಮಟ್ಟದ ವಿಪತ್ತುಗಳಿಗಾಗಿ ತಮಗೆ ಸಿಗುವ ಎಸ್ಡಿಆರ್ಎಫ್ ಹಣದಲ್ಲಿ ಕೇವಲ ಶೇಕಡಾ 10ರಷ್ಟನ್ನು ಮಾತ್ರ ಬಳಸಲು ಅವಕಾಶವಿದೆ. ಇನ್ನು ಕೇಂದ್ರದ NDRF ನಿಧಿಯಿಂದ ರಾಜ್ಯಗಳಿಗೆ ನಯಾಪೈಸೆ ಹಣವೂ ಸಿಗುವುದಿಲ್ಲ. ಏಕೆಂದರೆ ಕೇಂದ್ರ ಸರ್ಕಾರ ಬಿಸಿಗಾಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಒಪ್ಪಿಕೊಂಡಿಲ್ಲ.
"75 ಜಿಲ್ಲೆಗಳು, 24 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ದೇಶದಲ್ಲೇ ಅತಿ ಹೆಚ್ಚು ಬಿಸಿಲಿನ ಅಪಾಯ ಎದುರಿಸುತ್ತಿರುವ ಉತ್ತರ ಪ್ರದೇಶದಂತಹ ರಾಜ್ಯಕ್ಕೆ, ಈಗಾಗಲೇ ತೀರಾ ಕಡಿಮೆ ಇರುವ ನಿಧಿಯಲ್ಲಿ ಕೇವಲ ಶೇಕಡಾ 10ರಷ್ಟು ಮಿತಿ ಹೇರಲಾಗಿದೆ. ಇದು ಕೇವಲ ಕಾಗದದ ಮೇಲಿರುವ ನಿಯಮವೇ ಹೊರತು, ಜನರನ್ನು ರಕ್ಷಿಸುವ ಸುರಕ್ಷಾ ಕವಚ ಖಂಡಿತ ಅಲ್ಲ" ಎಂದು ಪ್ರಯಾಗ್ರಾಜ್ನ ಗೋವಿಂದ್ ವಲ್ಲಭ್ ಪಂತ್ ಸೋಶಿಯಲ್ ಸೈನ್ಸ್ ಇನ್ಸ್ಟಿಟ್ಯೂಟ್ನ ಸಂಶೋಧಕ ಅಂಕಿತ್ ಮಿಶ್ರಾ ಅವರು 'ಡೌನ್ ಟು ಅರ್ಥ್' ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಬರೆದಿದ್ದಾರೆ.
ಆದರೆ, ಕೇಂದ್ರ ಸರ್ಕಾರವು 16ನೇ ಹಣಕಾಸು ಆಯೋಗದ ಮಾತಿಗೆ ಕಿವಿಗೊಟ್ಟರೆ ಈ ಪರಿಸ್ಥಿತಿ ಬದಲಾಗಬಹುದು. ಈ ವರ್ಷ ಫೆಬ್ರುವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಾದ ತನ್ನ ವರದಿಯಲ್ಲಿ, ಹಣಕಾಸು ಆಯೋಗವು ಬಿಸಿಗಾಳಿ ಮತ್ತು ಸಿಡಿಲು ಬಡಿಯುವುದನ್ನು ರಾಷ್ಟ್ರೀಯ ವಿಪತ್ತುಗಳ ಪಟ್ಟಿಗೆ ಸೇರಿಸಬೇಕೆಂದು ಶಿಫಾರಸು ಮಾಡಿದೆ.
"ಪ್ರಸ್ತುತ ರಾಜ್ಯಗಳು ತಮ್ಮ ಸ್ಥಳೀಯ ವಿಪತ್ತುಗಳಿಗಾಗಿ ಎಸ್ಡಿಆರ್ಎಫ್ ನಿಧಿಯ ಶೇಕಡಾ 10ರಷ್ಟನ್ನು ಬಳಸುವ ಸ್ವಾತಂತ್ರ್ಯ ಹೊಂದಿದ್ದರೂ, ಇತ್ತೀಚಿನ ದಿನಗಳಲ್ಲಿ ಬಿಸಿಗಾಳಿ ಮತ್ತು ಸಿಡಿಲಿನ ತೀವ್ರತೆ ವಿಪರೀತ ಹೆಚ್ಚಾಗಿದೆ. ಹೀಗಾಗಿ ಇವುಗಳನ್ನು ರಾಷ್ಟ್ರೀಯ ವಿಪತ್ತುಗಳ ಪಟ್ಟಿಗೆ ಸೇರಿಸುವುದು ಅನಿವಾರ್ಯ. ಇವೆರಡೂ ಭೀಕರ ದುರಂತಗಳಾಗಿದ್ದು, ದೇಶದಲ್ಲಿ ದೊಡ್ಡ ಮಟ್ಟದ ಜೀವಹಾನಿಗೆ ಕಾರಣವಾಗುತ್ತಿವೆ. ಇವುಗಳ ವ್ಯಾಪ್ತಿ ಎಷ್ಟು ದೊಡ್ಡದಾಗಿದೆ ಎಂದರೆ, ಸ್ಥಳೀಯ ಜನರಿಗೆ ಇದನ್ನು ತಾವೊಬ್ಬರೇ ಎದುರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇವು ರಾಷ್ಟ್ರೀಯ ಮಟ್ಟದ ವಿಪತ್ತುಗಳ ಪಟ್ಟಿಗೆ ಸೇರಲು ಸಂಪೂರ್ಣ ಅರ್ಹವಾಗಿವೆ" ಎಂದು ವರದಿಯಲ್ಲಿ ಹೇಳಲಾಗಿದೆ.
ದೇಶದ 11 ರಾಜ್ಯಗಳು ಈಗಾಗಲೇ ಬಿಸಿಗಾಳಿಯನ್ನು ತಮ್ಮ ರಾಜ್ಯ ಮಟ್ಟದ ವಿಪತ್ತು ಎಂದು ಘೋಷಿಸಿಕೊಂಡಿವೆ ಎಂಬುದನ್ನು ಆಯೋಗವು ಗುರುತಿಸಿದೆ. ಅಷ್ಟೇ ಅಲ್ಲದೆ, ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕು ಎಂದು ಹಲವು ರಾಜ್ಯಗಳು ಆಯೋಗದ ಮುಂದೆ ಒತ್ತಾಯಿಸಿದ್ದವು. ಆದರೆ, ಹಿಂದಿನ ಮೂರು ಹಣಕಾಸು ಆಯೋಗಗಳು ರಾಜ್ಯಗಳ ಈ ಬೇಡಿಕೆಯನ್ನು ಒಪ್ಪಿರಲಿಲ್ಲ.
ಬಿಸಿಗಾಳಿಯನ್ನು ವಿಪತ್ತು ಎಂದು ಘೋಷಿಸಿದರೆ, ಸರ್ಕಾರವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಐಪಿಇ ಗ್ಲೋಬಲ್ ಸಲಹಾ ಸಂಸ್ಥೆಯ ಹವಾಮಾನ ಬದಲಾವಣೆ ವಿಭಾಗದ ಮುಖ್ಯಸ್ಥ ಅಬಿನಾಶ್ ಮೊಹಂತಿ ಹೇಳಿದ್ದಾರೆ. ಹೀಗೆ ಘೋಷಣೆಯಾದ ನಂತರವೇ ಈ ನಿಟ್ಟಿನಲ್ಲಿ ಫಂಡಿಂಗ್ ಆರಂಭವಾಗುತ್ತದೆ ಎಂದು ಅವರು ಹೇಳಿರುವುದಾಗಿ The Wire ವರದಿ ಮಾಡಿದೆ.
ದಿಲ್ಲಿ ಮೂಲದ ಸ್ವತಂತ್ರ ಸಂಶೋಧನಾ ಸಂಸ್ಥೆ 'ಸಸ್ಟೈನಬಲ್ ಫ್ಯೂಚರ್ಸ್ ಕಲೆಕ್ಟಿವ್'ನ ಸಂಶೋಧಕಿ ತಮನ್ನಾ ದಲಾಲ್ ಅವರ ಪ್ರಕಾರ, ಭಾರತವು ಬಿಸಿಗಾಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಇರುವ ಅಸಲಿ ಕಾರಣ 'ಹೊಣೆಗಾರಿಕೆ'. ಇದರಿಂದ ವ್ಯವಸ್ಥೆಯಲ್ಲಿ ಜವಾಬ್ದಾರಿ ಮೂಡುತ್ತದೆ. ಬಿಸಿಲಿನ ಬೇಗೆಯೂ ಒಂದು ರಾಷ್ಟ್ರೀಯ ವಿಪತ್ತು, ಇದರ ಬಗ್ಗೆ ಮೇಲಿರುವವರಿಗೂ ಕಾಳಜಿಯಿದೆ ಎಂಬ ಭರವಸೆ ಜನರಿಗೆ ಸಿಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಹೊಣೆಗಾರಿಕೆಯ ಕೊರತೆ ಎದ್ದು ಕಾಣುತ್ತಿದೆ ಎಂದಿದ್ದಾರೆ.
►ಬಿಸಿಲಿನ ಬೇಗೆಯಿಂದ ಸಾವಿಗೀಡಾದವರ ಸಂಖ್ಯೆ ದಾಖಲಾಗುತ್ತಿಲ್ಲ
ಆದರೆ ಕೇಂದ್ರ ಸರ್ಕಾರ ಈ ಬೇಡಿಕೆಗೆ ಒಪ್ಪುತ್ತದೆಯೇ? ಸದ್ಯಕ್ಕಂತೂ ಸಾಧ್ಯವಿಲ್ಲ ಎಂದೇ ತೋರುತ್ತದೆ. ಏಕೆಂದರೆ, ಒಮ್ಮೆ ಬಿಸಿಗಾಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದರೆ, ಬಿಸಿಲಿನ ಹೊಡೆತದಿಂದ ಸಾಯುವ ಪ್ರತಿಯೊಬ್ಬರ ಕುಟುಂಬಕ್ಕೂ ತಲಾ 4 ಲಕ್ಷ ರೂ. ಪರಿಹಾರ ನೀಡಬೇಕಾಗುತ್ತದೆ. ಇದರ ಜೊತೆಗೆ ಬಿಸಿಲಿನ ತಡೆ ಯೋಜನೆಗಳಿಗೆ ಭಾರಿ ಪ್ರಮಾಣದ ಹಣವನ್ನು ಮೀಸಲಿಡಬೇಕಾಗುತ್ತದೆ ಎಂದು ಸಂಶೋಧಕ ಅಂಕಿತ್ ಮಿಶ್ರಾ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಬಿಸಿಲಿನಿಂದ ಸಂಭವಿಸುವ ಸಾವುಗಳ ಅಧಿಕೃತ ಲೆಕ್ಕ ಇಂದಿಗೂ ತೀರಾ ಕಡಿಮೆ ಇರುತ್ತದೆ. ಕಳೆದ ವರ್ಷ ಆಗಸ್ಟ್ನಲ್ಲಿ ಭೂ ವಿಜ್ಞಾನ ಸಚಿವಾಲಯವು ಸಂಸತ್ತಿಗೆ ಸಲ್ಲಿಸಿದ ವರದಿಯ ಪ್ರಕಾರ, 2018 ಮತ್ತು 2022ರ ನಡುವೆ ದೇಶಾದ್ಯಂತ ಬಿಸಿಲಿಗೆ ಬಲಿಯಾದವರ ಸಂಖ್ಯೆ ಕೇವಲ 3,798.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ, 2000 ಮತ್ತು 2020ರ ನಡುವೆ ದೇಶದಲ್ಲಿ ಬಿಸಿಲಿನ ಆಘಾತದಿಂದ 20,615 ಜನ ಮೃತಪಟ್ಟಿದ್ದಾರೆ. ಈ ಸರ್ಕಾರಿ ಲೆಕ್ಕಾಚಾರಗಳನ್ನು ನೋಡಿದರೆ, ಭಾರತದಲ್ಲಿ ವರ್ಷಕ್ಕೆ ಸರಾಸರಿ 1,000 ಅಥವಾ ಅದಕ್ಕಿಂತ ಕಡಿಮೆ ಜನ ಬಿಸಿಲಿಗೆ ಸಾಯುತ್ತಿದ್ದಾರೆ.
ಆದರೆ ಅಸಲಿ ವಿಷಯ ಬೇರೆಯೇ ಇದೆ. ಯುಸಿ ಬರ್ಕ್ಲಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜಿಲ್ಲಾವಾರು ಅಂಕಿ-ಅಂಶಗಳನ್ನು ವಿಶ್ಲೇಷಿಸಿ ನೀಡಿದ ವರದಿ ಪ್ರಕಾರ, ಭಾರತದಲ್ಲಿ ಕೇವಲ ಒಂದು ದಿನ ತೀವ್ರ ಬಿಸಿಗಾಳಿ ಬೀಸಿದರೆ ದೇಶಾದ್ಯಂತ ಸರಾಸರಿ 3,400 ಹೆಚ್ಚುವರಿ ಸಾವುಗಳು ಸಂಭವಿಸುತ್ತವೆ. ಅದೇ ಬಿಸಿಗಾಳಿ ಸತತ ಐದು ದಿನ ಮುಂದುವರಿದರೆ, ಹಳ್ಳಿ ಮತ್ತು ನಗರ ಪ್ರದೇಶಗಳನ್ನೆಲ್ಲ ಸೇರಿಸಿ ಸುಮಾರು 30,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಾರೆ.
ಇದನ್ನು ನೋಡಿದರೆ ಭಾರತದಲ್ಲಿ ದಾಖಲಾಗುತ್ತಿರುವ ಬಿಸಿಲಿನ ಸಾವುಗಳ ಸಂಖ್ಯೆ ತೀರಾ ಕಡಿಮೆ ಎಂಬುದು ಸ್ಪಷ್ಟವಾಗುತ್ತದೆ. ಹಲವು ವಿಜ್ಞಾನಿಗಳು ಕೂಡ ಇದೇ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಸಾವುಗಳು ದಾಖಲಾಗದೇ ಇರಲು ಮುಖ್ಯ ಕಾರಣವೇನೆಂದರೆ, ಮರಣ ಪ್ರಮಾಣಪತ್ರದಲ್ಲಿ ವ್ಯಕ್ತಿಯ ಸಾವಿಗೆ 'ಬಿಸಿಗಾಳಿ' ಕಾರಣ ಎಂದು ಎಲ್ಲೂ ನಮೂದಿಸುವುದೇ ಇಲ್ಲ. ವೈದ್ಯರು ಕೇವಲ ಆ ಕ್ಷಣದ ವೈದ್ಯಕೀಯ ಕಾರಣವನ್ನು ಬರೆಯುತ್ತಾರೆಯೇ ಹೊರತು, ಸಾವಿಗೆ ಕಾರಣವಾಗಿದ್ದು ವಿಪರೀತ ಬಿಸಿಲು ಎಂಬುದನ್ನು ದಾಖಲಿಸುವುದಿಲ್ಲ.
"ಅಪೂರ್ಣ ವರದಿಗಳು, ತಡವಾಗಿ ದಾಖಲಾಗುವ ಮಾಹಿತಿ ಮತ್ತು ಸಾವಿನ ಕಾರಣಗಳನ್ನು ತಪ್ಪಾಗಿ ವರ್ಗೀಕರಿಸುವುದು ಇಂದಿನ ದೊಡ್ಡ ಸಮಸ್ಯೆಯಾಗಿದೆ" ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಸಂಸ್ಥಾಪಕ ಶ್ರೀನಾಥ್ ರೆಡ್ಡಿ ಅವರು ಹೇಳಿರುವುದಾಗಿ ಎಎಫ್ಪಿ ವರದಿ ಉಲ್ಲೇಖಿಸಿದೆ.
ನಿಜವಾಗಿಯೂ ಬಿಸಿಲಿನಿಂದ ಎಷ್ಟು ಜನ ಸಾಯುತ್ತಿದ್ದಾರೆ ಎಂಬ ನಿಖರವಾದ ಅಂಕಿ-ಅಂಶ ಇಲ್ಲದಿರುವುದರಿಂದ, ಈ ದುರಂತವನ್ನು ಎದುರಿಸಲು ಭಾರತ ಯಾವ ಕ್ರಮಗಳಿಗೆ ಮೊದಲ ಆದ್ಯತೆ ನೀಡಬೇಕು ಎಂಬುದೇ ತಿಳಿಯದಂತಾಗಿದೆ.
►ದೀರ್ಘಾವಧಿ ಯೋಜನೆಗಳಿಗಿಲ್ಲ ಆದ್ಯತೆ
ನಮ್ಮ ದೇಶದಲ್ಲಿ ಬಿಸಿಲನ್ನು ಎದುರಿಸಲು ಕೈಗೊಳ್ಳುತ್ತಿರುವ ಬಹುತೇಕ ಕ್ರಮಗಳು ತಾತ್ಕಾಲಿಕವಾಗಿವೆ (ಉದಾಹರಣೆಗೆ ಕೂಲಿಂಗ್ ಕೇಂದ್ರಗಳನ್ನು ತೆರೆಯುವುದು, ಜಾಗೃತಿ ಮೂಡಿಸುವುದು ಅಥವಾ ಒಆರ್ಎಸ್ ವಿತರಿಸುವುದು). ಏಕೆಂದರೆ, ಇಂತಹ ತಾತ್ಕಾಲಿಕ ಕ್ರಮಗಳು ಕಣ್ಣಿಗೆ ತಕ್ಷಣ ಕಾಣಿಸುತ್ತವೆ. ಇವುಗಳಿಗೆ ಹಣ ಹೊಂದಿಸುವುದು ಮತ್ತು ಜಾರಿಗೆ ತರುವುದು ಸುಲಭ. ಜೊತೆಗೆ ಸರ್ಕಾರದ ಇಂದಿನ ನಿಯಮಗಳೂ ಇಂತಹ ದೀರ್ಘಾವಧಿ ಯೋಜನೆಗಳಿಗಿಂತ ಹೆಚ್ಚಾಗಿ ಅಲ್ಪಾವಧಿಯ ಕೆಲಸಗಳಿಗೇ ಹೆಚ್ಚು ಪೂರಕವಾಗಿವೆ ಎನ್ನುತ್ತಾರೆ ಸಂಶೋಧಕಿ ತಮನ್ನಾ ದಲಾಲ್.
ಕಳೆದ ವರ್ಷ ದಿಲ್ಲಿ, ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಒಂಭತ್ತು ಪ್ರಮುಖ ನಗರಗಳಲ್ಲಿ ಬಿಸಿಲಿನ ತಡೆ ಯೋಜನೆಗಳು ಹೇಗೆ ಜಾರಿಯಾಗುತ್ತಿವೆ ಎಂಬುದನ್ನು ತಮನ್ನಾ ಮತ್ತು ಅವರ ತಂಡ ಪರಿಶೀಲಿಸಿತ್ತು. ಈ ವೇಳೆ ಆರೋಗ್ಯ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಆರು ವಿವಿಧ ಇಲಾಖೆಗಳ 88 ಸರ್ಕಾರಿ ಅಧಿಕಾರಿಗಳನ್ನು ಅವರು ಸಂದರ್ಶಿಸಿದ್ದರು.
ಈ ವೇಳೆ ಎಲ್ಲಾ ನಗರಗಳೂ ಕೇವಲ ತಾತ್ಕಾಲಿಕ ಕ್ರಮಗಳಿಗಷ್ಟೇ ಆದ್ಯತೆ ನೀಡುತ್ತಿದ್ದು, ದೀರ್ಘಾವಧಿ ಯೋಜನೆಗಳ ಕೊರತೆ ಎದ್ದು ಕಾಣುತ್ತಿರುವುದು ವರದಿಯಲ್ಲಿ ಬಯಲಾಗಿದೆ. ಇಲಾಖೆಗಳ ನಡುವೆ ಸಮನ್ವಯದ ಕೊರತೆ, ಸಿಬ್ಬಂದಿ ಕೊರತೆ ಮತ್ತು ಹಣಕಾಸಿನ ಮುಗ್ಗಟ್ಟು ಇದಕ್ಕೆ ಮುಖ್ಯ ಕಾರಣ.
"ತಾತ್ಕಾಲಿಕ ಕ್ರಮಗಳು ಮುಖ್ಯ. ಅವು ಜೀವ ಉಳಿಸುತ್ತವೆ, ನಿಜ. ಆದರೆ ಸರ್ಕಾರಗಳು ದೀರ್ಘಾವಧಿ ಕ್ರಮಗಳನ್ನು ಯಾಕೆ ಕೈಗೊಳ್ಳುತ್ತಿಲ್ಲ? ಇದಕ್ಕೆ ಭೂಮಿಯ ಲಭ್ಯತೆಯೇ ದೊಡ್ಡ ಸಮಸ್ಯೆಯಾಗಿದೆ" ಎನ್ನುತ್ತಾರೆ ತಮನ್ನಾ. ಉದಾಹರಣೆಗೆ, ನಗರ ಯೋಜನಾ ಇಲಾಖೆಯು ಬಿಲ್ಡರ್ಗಳಿಗೆ ಎರಡು ಕಟ್ಟಡಗಳ ನಡುವೆ ಕಡ್ಡಾಯವಾಗಿ ಜಾಗ ಬಿಡಲು ಒಪ್ಪಿಸುವುದು ಕಷ್ಟ. ಏಕೆಂದರೆ ಆ ಜಾಗದಲ್ಲೂ ಬಿಲ್ಡರ್ಗಳು ಕಟ್ಟಡ ಕಟ್ಟಲು ಬಯಸುತ್ತಾರೆ.
ಇದರ ಜೊತೆಗೆ, ದೀರ್ಘಾವಧಿ ಯೋಜನೆಗಳು ಎಂದರೆ ಕೇವಲ ಗಿಡ ನೆಡುವುದು ಮಾತ್ರ ಎಂಬ ತಪ್ಪು ಕಲ್ಪನೆ ಇದೆ. ಅದರಾಚೆಗೆ ಯೋಚಿಸುವ ಕಲ್ಪನಾ ಶಕ್ತಿಯೇ ಅಧಿಕಾರಿಗಳಿಗಿಲ್ಲ. ಅಂತಿಮವಾಗಿ ರಾಜಕೀಯ ನಾಯಕರು, ಮತದಾರರು ಮತ್ತು ಅಧಿಕಾರಿಗಳು ಎಲ್ಲರೂ ಕೇವಲ ಅಲ್ಪಾವಧಿಯ ಲಾಭಗಳನ್ನಷ್ಟೇ ನೋಡುತ್ತಿದ್ದಾರೆ. ರಾಜಕಾರಣಿಗಳು ಇರುವುದು ಕೇವಲ ಐದು ವರ್ಷಗಳ ಕಾಲ ಮಾತ್ರ. ಹಾಗಾಗಿ ಜನ ತಮಗೆ ಮತ ಹಾಕುವಂತೆ ಪ್ರೇರೇಪಿಸುವ, ಕಣ್ಣಿಗೆ ತಕ್ಷಣ ಕಾಣುವಂತಹ ಕೆಲಸಗಳನ್ನಷ್ಟೇ ಮಾಡಲು ಅವರು ಇಷ್ಟಪಡುತ್ತಾರೆ.
►ದಿಕ್ಕು ತಪ್ಪಿದ ಪರಿಸರ ಯೋಜನೆಗಳು
ಸರ್ಕಾರಗಳು ಜಾರಿಗೆ ತರುತ್ತಿರುವ ದೀರ್ಘಾವಧಿ ಯೋಜನೆಗಳಲ್ಲಿ ಒಂದು ದೊಡ್ಡ ಲೋಪವಿದೆ. ಅದೇನೆಂದರೆ, ಈ ಯೋಜನೆಗಳು ತಪ್ಪು ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಗಿಡ ನೆಡುವ ಕಾರ್ಯಕ್ರಮಗಳು ಎಂದು ಸಂಶೋಧಕಿ ತಮನ್ನಾ ದಲಾಲ್ ಹೇಳುತ್ತಾರೆ.
"ಭಾರತದ ಎಲ್ಲಾ ಇಲಾಖೆಗಳಿಗೂ ಪ್ರತಿವರ್ಷ ಇಷ್ಟೇ ಸಸಿ ನೆಡಬೇಕು ಎಂಬ ಗುರಿ ಇರುತ್ತದೆ. ಅವರು ಎಲ್ಲೆಲ್ಲಿ ಜಾಗ ಸಿಗುತ್ತದೋ, ಅಲ್ಲೆಲ್ಲ ತಮ್ಮ ಕೈಗೆ ಸಿಕ್ಕ ಗಿಡಗಳನ್ನು ನೆಡುತ್ತಾ ಹೋಗುತ್ತಾರೆ. ಆದರೆ ಬಿಸಿಲಿನ ತಾಪ ತಗ್ಗಿಸುವ ದೃಷ್ಟಿಯಿಂದ ಅವರು ಯೋಚಿಸುವುದೇ ಇಲ್ಲ. ಹಸಿರು ಕಡಿಮೆ ಇರುವ ಕಡೆ ಮರ ನೆಡುತ್ತಿದ್ದಾರೆಯೇ? ಹೆಚ್ಚು ನೆರಳು ಕೊಡುವ ದೊಡ್ಡ ಮರಗಳನ್ನು ಆರಿಸಿಕೊಳ್ಳುತ್ತಿದ್ದಾರೆಯೇ? ಎಂದರೆ ಅದಕ್ಕೆ ಉತ್ತರವಿಲ್ಲ" ಎನ್ನುತ್ತಾರೆ ತಮನ್ನಾ.
ಇತ್ತೀಚೆಗೆ ಭಾರತದ ಐಐಟಿ ವಿಜ್ಞಾನಿಗಳು ನಡೆಸಿದ ಸಂಶೋಧನೆಗಳು ಕೂಡ ಇದನ್ನೇ ಹೇಳುತ್ತವೆ. ದೇಶದ 138 ನಗರಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ಐಐಟಿ ಗಾಂಧಿನಗರದ ವಿಜ್ಞಾನಿಗಳು, "ಕೇವಲ ಗಿಡ ನೆಟ್ಟರೆ ಸಾಲದು, ಅವು ನೆರಳು ನೀಡಲು ನಗರಗಳಲ್ಲಿ ಸ್ಮಾರ್ಟ್ ಪ್ಲಾನಿಂಗ್ ಬೇಕು. ಒಣ ಹವೆ ಇರುವ ನಗರಗಳಲ್ಲಿ ಗಿಡಮರಗಳು ಹೆಚ್ಚು ತಂಪು ನೀಡುತ್ತವೆ. ಆದರೆ ಹೆಚ್ಚು ಉಷ್ಣಾಂಶ ಮತ್ತು ಆರ್ದ್ರತೆ ಇರುವ ನಗರಗಳಲ್ಲಿ ಗಾಳಿಗೂ ಜಾಗ ಬಿಡಬೇಕಾಗುತ್ತದೆ" ಎಂದಿದ್ದಾರೆ.
ಅದೇ ರೀತಿ, ಐಐಟಿ ಖರಗ್ಪುರದ ವಿಜ್ಞಾನಿಗಳು ದಿಲ್ಲಿಯ ಮಾಲಿನ್ಯ ಮತ್ತು ತಾಪಮಾನವನ್ನು ಅಧ್ಯಯನ ಮಾಡಿ, ಈಗಾಗಲೇ ಹಸಿರು ಹೆಚ್ಚಿರುವ ಸೆಂಟ್ರಲ್ ದಿಲ್ಲಿ ತಂಪಾಗಿದೆ. ಆದರೆ ಫರಿದಾಬಾದ್, ನೋಯ್ಡಾ ಮತ್ತು ಗಾಜಿಯಾಬಾದ್ನಂತಹ ಪ್ರದೇಶಗಳು ಬಿಸಿಲು ಮತ್ತು ಮಾಲಿನ್ಯಕ್ಕೆ ತುತ್ತಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
►ಇದ್ದ ಮರಗಳನ್ನೂ ಕಟಾವು ಮಾಡುತ್ತಿರುವ ಸರ್ಕಾರಗಳು
ಹೊಸದಾಗಿ ಗಿಡ ನೆಡುವುದಿರಲಿ, ಇದ್ದ ಹಸಿರನ್ನು ಉಳಿಸಿಕೊಳ್ಳಲು ಕೂಡ ಸರ್ಕಾರಗಳು ಒದ್ದಾಡುತ್ತಿವೆ ಎಂದು ದಿ ವೈರ್ ಜತೆ ಮಾತನಾಡಿದ ಐಐಟಿ ಖರಗ್ಪುರದ ಸಹ-ಪ್ರಾಧ್ಯಾಪಕ ಜಯನಾರಾಯಣನ್ ಕುಟ್ಟಿಪ್ಪುರತ್ ಹೇಳುತ್ತಾರೆ.
2027ರ ಕುಂಭಮೇಳಕ್ಕಾಗಿ ರಸ್ತೆ ಅಗಲಗೊಳಿಸಲು ನಾಸಿಕ್ ಮಹಾನಗರ ಪಾಲಿಕೆಯು ಮಾರ್ಚ್ ತಿಂಗಳಲ್ಲಿ ಸುಮಾರು 584 ಮರಗಳನ್ನು ಕಡಿಯಲು ಮುಂದಾಗಿತ್ತು. ಸದ್ಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಇದಕ್ಕೆ ತಡೆಯಾಜ್ಞೆ ನೀಡಿದೆ.
ದಿಲ್ಲಿಯ ಸೆಂಟ್ರಲ್ ವಿಸ್ಟಾ ಯೋಜನೆಗಾಗಿ 2,400ಕ್ಕೂ ಹೆಚ್ಚು ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಇತ್ತೀಚೆಗೆ ಸರ್ಕಾರವೇ ಸಂಸತ್ತಿನಲ್ಲಿ ಒಪ್ಪಿಕೊಂಡಿರುವ ಪ್ರಕಾರ, ಸ್ಥಳಾಂತರಗೊಂಡ ಒಟ್ಟು 3,600 ಮರಗಳಲ್ಲಿ ಶೇಕಡಾ 43ರಷ್ಟು (ಅಂದರೆ 1,545 ಮರಗಳು) ಈಗಾಗಲೇ ಒಣಗಿ ಹೋಗಿವೆ. ಇದರರ್ಥ ವಿವೇಚನೆಯಿಲ್ಲದ ನಗರಗಳ ವಿಸ್ತರಣೆ ಮತ್ತು ತಪ್ಪು ಜಾಗಗಳಲ್ಲಿ ಕೈಗೊಳ್ಳುವ ಪರಿಸರ ಯೋಜನೆಗಳು ಬಿಸಿಲಿನ ಭೀಕರತೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಬಿಸಿಗಾಳಿ ತಡೆಗೆ ಸಂಬಂಧಿಸಿದಂತೆ ಸಣ್ಣದೊಂದು ಆಶಾಕಿರಣ ಮೂಡಿದೆ. ಅಧಿಕಾರಿಗಳಲ್ಲಿ ಮತ್ತು ಜನರಲ್ಲಿ 'ಹೀಟ್ ಆಕ್ಷನ್ ಪ್ಲಾನ್' (HAP - ಬಿಸಿಲು ತಡೆ ಯೋಜನೆ)ಗಳ ಬಗ್ಗೆ ಜಾಗೃತಿ ಹೆಚ್ಚಾಗಿದೆ. 2022ರಲ್ಲಿ ಇದ್ದ ಪರಿಸ್ಥಿತಿಗೆ ಹೋಲಿಸಿದರೆ, ಇಂದು ದೇಶಾದ್ಯಂತ ಕನಿಷ್ಠ 23 ರಾಜ್ಯಗಳು, 30 ನಗರಗಳು ಮತ್ತು 69 ಜಿಲ್ಲೆಗಳು ತಮ್ಮದೇ ಆದ ಬಿಸಿಲು ತಡೆ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿವೆ. ಈ ವರ್ಷದ ಕೊನೆಯ ವೇಳೆಗೆ ಇಂತಹ ಯೋಜನೆಗಳ ಸಂಖ್ಯೆ 300ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಯೋಜನೆಗಳಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ.
►ಇಲಾಖೆಗಳ ನಡುವೆ ಬೇಕು ಸಮನ್ವಯ
ಬಿಸಿಲು ಎನ್ನುವುದು ಕೇವಲ ಹವಾಮಾನ ಇಲಾಖೆಗೆ ಸಂಬಂಧಿಸಿದ ವಿಷಯವಲ್ಲ. ಇದು ಹಲವು ವಲಯಗಳ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆ. ಉದಾಹರಣೆಗೆ, ಕಾರ್ಮಿಕ ಇಲಾಖೆಯು ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ಅವಧಿಯನ್ನು ಬದಲಾಯಿಸಬಹುದೇ ಹೊರತು, ಸಾರ್ವಜನಿಕ ಸ್ಥಳಗಳಲ್ಲಿ ನೆರಳು ನೀಡಲು ಅದಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಲೋಕೋಪಯೋಗಿ ಇಲಾಖೆ ಮತ್ತು ಇತರ ನಗರಾಭಿವೃದ್ಧಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಎಲ್ಲಾ ಇಲಾಖೆಗಳು ಒಂದಾಗಿ ಕೆಲಸ ಮಾಡದ ಹೊರತು ಬಿಸಿಲಿನಿಂದ ಜನರನ್ನು ರಕ್ಷಿಸಲು ಸಾಧ್ಯವಿಲ್ಲ.
ಆದ್ದರಿಂದ, ಸರ್ಕಾರಿ ವ್ಯವಸ್ಥೆಯಲ್ಲಿ ಬಿಸಿಲಿನ ಹೊಣೆಗಾರಿಕೆಯನ್ನು ನಿಖರವಾಗಿ ನಿಗದಿಪಡಿಸಬೇಕು. ಹಣಕಾಸು ಆಯೋಗದ ಮಾದರಿಯಲ್ಲಿಯೇ ಒಂದು 'ಕ್ಲೈಮೇಟ್ ರಿಸ್ಕ್ ಕಮಿಷನ್' (ಹವಾಮಾನ ಅಪಾಯಗಳ ಆಯೋಗ) ರಚನೆಯಾದರೆ, ಜವಾಬ್ದಾರಿಯುತ ಮತ್ತು ಕಡ್ಡಾಯ ಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ತೀವ್ರ ಬಿಸಿಲಿರುವ ದಿನಗಳಲ್ಲಿ ಜನ ಅನಿವಾರ್ಯವಾಗಿ ಮನೆಯಿಂದ ಹೊರಗೆ ಬರುವುದನ್ನು ಕಡಿಮೆ ಮಾಡುತ್ತಿದ್ದಾರೆ. ಆದರೆ ಕೇವಲ ಮುನ್ನೆಚ್ಚರಿಕೆ ಸಂದೇಶಗಳನ್ನು ರವಾನಿಸಿದರೆ ಅಥವಾ ತಂಪು ಕೇಂದ್ರಗಳನ್ನು ತೆರೆದರೆ ಸಾಲದು. ಸರ್ಕಾರಗಳು ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಬೇಕಿದೆ.






