ಗ್ರೀನ್ ಕಾರ್ಡ್ ಬೇಕೇ? ಹಾಗಿದ್ದರೆ ಮೊದಲು ಅಮೆರಿಕ ಬಿಟ್ಟು ತಾಯ್ನಾಡಿಗೆ ಮರಳಿ: ಟ್ರಂಪ್ ಸರ್ಕಾರದ ಹೊಸ ಆದೇಶ ಹೇಳುವುದೇನು?

ಸಾಂದರ್ಭಿಕ ಚಿತ್ರ | Photo Credit : magnific.com
ಅಮೆರಿಕದ ಖಾಯಂ ನಿವಾಸಿ ಸೌಲಭ್ಯ (ಗ್ರೀನ್ ಕಾರ್ಡ್) ಪಡೆಯಲು ವರ್ಷಗಟ್ಟಲೆಗಳಿಂದ ಕಾಯುತ್ತಿರುವ ಸಾವಿರಾರು ಭಾರತೀಯರಿಗೆ ಭಾರಿ ಆಘಾತ ನೀಡುವಂತಹ ನಿರ್ಧಾರವೊಂದನ್ನು ಟ್ರಂಪ್ ಆಡಳಿತ ಪ್ರಕಟಿಸಿದೆ. ಇನ್ನು ಮುಂದೆ ಗ್ರೀನ್ ಕಾರ್ಡ್ ಆಕಾಂಕ್ಷಿಗಳು ಅಮೆರಿಕದಲ್ಲೇ ಉಳಿದುಕೊಂಡು ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತಿಲ್ಲ. ಬದಲಿಗೆ ಅವರು ಅಮೆರಿಕವನ್ನು ತೊರೆದು, ತಮ್ಮ ಸ್ವದೇಶಕ್ಕೆ ಮರಳಿ ಅಲ್ಲಿಂದಲೇ ವಲಸೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಶುಕ್ರವಾರ ಅಧಿಕೃತವಾಗಿ ಘೋಷಿಸಲಾಗಿದೆ.
ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಸಂಸ್ಥೆ (USCIS) ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ಗ್ರೀನ್ ಕಾರ್ಡ್ ಪಡೆಯಲು ಅಮೆರಿಕದೊಳಗೇ ಇದ್ದುಕೊಂಡು ತಮ್ಮ ವೀಸಾ ಸ್ಟೇಟಸ್ ಬದಲಾಯಿಸಿಕೊಳ್ಳಲು ಇನ್ನು ಮುಂದೆ ಅವಕಾಶವಿಲ್ಲ. ಅತ್ಯಂತ ಅನಿವಾರ್ಯ ಅಥವಾ ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, ಅರ್ಜಿದಾರರು ತಮ್ಮ ಸ್ವಂತ ದೇಶಕ್ಕೆ ಮರಳಿ ಅಲ್ಲಿಂದಲೇ ಹೊಸದಾಗಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
►ಏನಿದು ಗ್ರೀನ್ ಕಾರ್ಡ್?
ಗ್ರೀನ್ ಕಾರ್ಡ್ ಎನ್ನುವುದು ವಿದೇಶಿ ನಾಗರಿಕರಿಗೆ ಅಮೆರಿಕದಲ್ಲಿ ಖಾಯಂ ಆಗಿ ವಾಸಿಸುವ ಹಕ್ಕನ್ನು ನೀಡುವ ಅಧಿಕೃತ ಗುರುತಿನ ಚೀಟಿಯಾಗಿದೆ. ಗ್ರೀನ್ ಕಾರ್ಡ್ ಹೊಂದಿರುವ ವ್ಯಕ್ತಿಯು ಅಮೆರಿಕದ ಯಾವುದೇ ಭಾಗದಲ್ಲಿ ವಾಸಿಸಬಹುದು, ಕಂಪೆನಿಗಳಲ್ಲಿ ಉದ್ಯೋಗ ಮಾಡಬಹುದು, ಶಿಕ್ಷಣ ಪಡೆಯಬಹುದು, ನಿಯಮಾವಳಿಗಳಿಗೆ ಒಳಪಟ್ಟು ಮುಕ್ತವಾಗಿ ವಿದೇಶ ಪ್ರವಾಸ ಮಾಡಬಹುದು ಮತ್ತು ನಿಗದಿತ ಅವಧಿಯ ನಂತರ ಅರ್ಹತೆಯ ಆಧಾರದ ಮೇಲೆ ಅಮೆರಿಕದ ಪೌರತ್ವಕ್ಕೂ ಅರ್ಜಿ ಸಲ್ಲಿಸಬಹುದಾಗಿದೆ.
►ವಲಸೆ ನಿಯಮಗಳ ದುರ್ಬಳಕೆಗೆ ಲಗಾಮು
"ಇನ್ನು ಮುಂದೆ, ಅಮೆರಿಕದಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದು ಗ್ರೀನ್ ಕಾರ್ಡ್ ಬಯಸುವ ಯಾವುದೇ ವಿದೇಶಿ ನಾಗರಿಕನು, ಅತ್ಯಂತ ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, ಅರ್ಜಿ ಸಲ್ಲಿಸಲು ತನ್ನ ತಾಯ್ನಾಡಿಗೆ ಮರಳಲೇಬೇಕು" ಎಂದು ಯುಎಸ್ಸಿಐಎಸ್ ವಕ್ತಾರ ಝಾಕ್ ಕಾಲರ್ ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಮತ್ತು ದೇಶ ಬಿಟ್ಟು ಹೋಗದೆಯೇ ಖಾಯಂ ನಿವಾಸಿ ಸೌಲಭ್ಯ ಪಡೆಯುವ ನಿರೀಕ್ಷೆಯಲ್ಲಿದ್ದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು, H-1B ವೀಸಾ ಉದ್ಯೋಗಿಗಳು ಮತ್ತು ಪ್ರವಾಸಿಗರಿಗೆ ಭಾರಿ ಹಿನ್ನಡೆಯಾಗಲಿದೆ. ನಮ್ಮ ದೇಶದ ವಲಸೆ ವ್ಯವಸ್ಥೆಯನ್ನು ವಿದೇಶಿಗರು ಸರಿಯಾದ ಮಾರ್ಗದಲ್ಲೇ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾವು ಮೂಲ ಕಾನೂನಿನ ಆಶಯಕ್ಕೆ ಮರಳುತ್ತಿದ್ದೇವೆ ಎಂದು ಕಾಲರ್ ಸಮರ್ಥಿಸಿಕೊಂಡಿದ್ದಾರೆ.
ಹೊಸ ನೀತಿ ಪ್ರಕಾರ, ಇನ್ನು ಮುಂದೆ ಅಮೆರಿಕದೊಳಗೇ ಇದ್ದುಕೊಂಡು ವೀಸಾ ಸ್ಟೇಟಸ್ ಬದಲಾವಣೆಗೆ ಅರ್ಜಿ ಸಲ್ಲಿಸುವುದನ್ನು ಅತ್ಯಂತ ವಿರಳ ಅಥವಾ ‘ಅಸಾಧಾರಣ ಪರಿಹಾರ’ ಎಂದು ಪರಿಗಣಿಸಲಾಗುತ್ತದೆ. ವಲಸೆ ಅಧಿಕಾರಿಗಳು ಇಂತಹ ವಿನಂತಿಗಳನ್ನು ಅತ್ಯಂತ ಕಠಿಣವಾಗಿ, ಪ್ರತ್ಯೇಕವಾಗಿ ಪರಿಶೀಲಿಸಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ, "ಅಮೆರಿಕದಲ್ಲಿ ತಾತ್ಕಾಲಿಕವಾಗಿರುವ ವಿದೇಶಿಗರು ಗ್ರೀನ್ ಕಾರ್ಡ್ ಬಯಸಿದರೆ ಅರ್ಜಿಗಾಗಿ ಸ್ವದೇಶಕ್ಕೆ ಮರಳಲೇಬೇಕು. ಈ ನೀತಿಯು ಕಾನೂನಿನ ಲೋಪದೋಷಗಳನ್ನು ಬಳಸಿಕೊಳ್ಳುವುದನ್ನು ತಡೆಯಲಿದ್ದು, ನಮ್ಮ ವಲಸೆ ವ್ಯವಸ್ಥೆಯು ಕಾನೂನಿನ ಆಶಯಕ್ಕೆ ತಕ್ಕಂತೆ ಕೆಲಸ ಮಾಡಲು ಸಹಕಾರಿಯಾಗಲಿದೆ. ನಮ್ಮ ದೇಶದ ವಲಸೆ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಯುಗ ಇಂದಿಗೆ ಅಂತ್ಯವಾಗಿದೆ," ಎಂದು ಹೇಳಿದೆ.
ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ಅಮೆರಿಕದಲ್ಲೇ ಉಳಿದುಕೊಳ್ಳುವುದನ್ನು ತಡೆಯಲು ಮತ್ತು ಗ್ರೀನ್ ಕಾರ್ಡ್ ಅರ್ಜಿಗಳು ತಿರಸ್ಕೃತಗೊಂಡ ಬಳಿಕ ವಲಸಿಗರು ಕಾನೂನಿನ ಕಣ್ಣು ತಪ್ಪಿಸಿ ದೇಶದೊಳಗೆ ಅಡಗಿಕೊಳ್ಳುವುದನ್ನು ನಿಯಂತ್ರಿಸಲು ಈ ಕಠಿಣ ಕ್ರಮ ಅನಿವಾರ್ಯ ಎಂದು ಯುಎಸ್ಸಿಐಎಸ್ ವಾದಿಸಿದೆ.
"ವಿದ್ಯಾರ್ಥಿಗಳು, ತಾತ್ಕಾಲಿಕ ಕಾರ್ಮಿಕರು ಅಥವಾ ಪ್ರವಾಸಿ ವೀಸಾದ ಮೇಲೆ ಬರುವ ಅನಿವಾಸಿಗಳು ಅಮೆರಿಕಕ್ಕೆ ಬರುವುದು ಅತ್ಯಂತ ಸೀಮಿತ ಅವಧಿಗೆ ಮತ್ತು ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ. ಅವರ ಈ ತಾತ್ಕಾಲಿಕ ಭೇಟಿಯು ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆಯ ಮೊದಲ ಹೆಜ್ಜೆಯಾಗಿ ಬಳಕೆಯಾಗಬಾರದು" ಎಂದು ಏಜೆನ್ಸಿ ಹೇಳಿದೆ.
►ಭಾರತೀಯರ ಮೇಲೆ ಪರಿಣಾಮ
2024ರ ಆರ್ಥಿಕ ವರ್ಷದ ದತ್ತಾಂಶಗಳ ಪ್ರಕಾರ, 49,700 ಭಾರತೀಯ ಮೂಲದ ವಲಸಿಗರು ಗ್ರೀನ್ ಕಾರ್ಡ್ ಪ್ರಕ್ರಿಯೆಯ ಮೂಲಕ ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ. ಈ ಮೂಲಕ ಮೆಕ್ಸಿಕೋ ನಂತರ ಅಮೆರಿಕದ ಪೌರತ್ವ ಪಡೆದ ಎರಡನೇ ಅತಿ ದೊಡ್ಡ ವಲಸಿಗ ಸಮುದಾಯವಾಗಿ ಭಾರತೀಯರು ಗುರುತಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ನಡೆಯುವ ಒಟ್ಟು ಪೌರತ್ವ ಪ್ರಕ್ರಿಯೆಗಳಲ್ಲಿ ಭಾರತೀಯರ ಪಾಲು ಶೇಕಡಾ 6.1 ರಷ್ಟಿದೆ. ಹೀಗಾಗಿ ಹೊಸ ನಿಯಮವು ನೇರವಾಗಿ ಭಾರತೀಯ ಉದ್ಯೋಗಿ ವರ್ಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.
ಅರ್ಜಿ ಪ್ರಕ್ರಿಯೆಗಳನ್ನು ವಿದೇಶಗಳಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳಿಗೆ ವರ್ಗಾಯಿಸುವುದರಿಂದ, ಯುಎಸ್ಸಿಐಎಸ್ ಮೇಲಿನ ಕೆಲಸದ ಒತ್ತಡ ಕಡಿಮೆಯಾಗಲಿದೆ. ಇದರಿಂದಾಗಿ ಪೌರತ್ವ ಅರ್ಜಿಗಳ ವಿಲೇವಾರಿ ಹಾಗೂ ಮಾನವ ಸಾಗಣೆ ಮತ್ತು ಹಿಂಸಾತ್ಮಕ ಅಪರಾಧಗಳಿಗೆ ಬಲಿಯಾದ ಸಂತ್ರಸ್ತರಿಗೆ ವೀಸಾ ನೀಡುವಂತಹ ಇತರ ಪ್ರಮುಖ ಆದ್ಯತೆಗಳತ್ತ ಗಮನಹರಿಸಲು ಸಂಸ್ಥೆಗೆ ಸಹಕಾರಿಯಾಗಲಿದೆ ಎಂದು ಟ್ರಂಪ್ ಆಡಳಿತ ಹೇಳಿದೆ.
►ಕಾನೂನುಬದ್ಧ ವಲಸೆಯ ಮೇಲೆ ನಿರಂತರ ಪೆಟ್ಟು
ಟ್ರಂಪ್ ಆಡಳಿತದ ಈ ಇತ್ತೀಚಿನ ಪ್ರಕಟಣೆಯು, ಕಾನೂನುಬದ್ಧವಾಗಿ ಅಮೆರಿಕಕ್ಕೆ ವಲಸೆ ಬರುವ ಮಾರ್ಗಗಳಿಗೆ ಕಟ್ಟುಪಾಡುಗಳನ್ನು ಹೇರುತ್ತಿರುವ ಸರ್ಕಾರದ ನಿರಂತರ ನೀತಿಯ ಮತ್ತೊಂದು ಭಾಗವಾಗಿದೆ.
ಕಳೆದ ತಿಂಗಳಷ್ಟೇ ಅಮೆರಿಕ ಸರ್ಕಾರವು ತನ್ನ ‘ವೀಸಾ ಬಾಂಡ್ ಯೋಜನೆ’ಯನ್ನು ವಿಸ್ತರಿಸಿತ್ತು. ಇದರ ಅಡಿಯಲ್ಲಿ 50 ದೇಶಗಳ ನಾಗರಿಕರು ಅಮೆರಿಕಕ್ಕೆ ಬರಬೇಕಾದರೆ ಸುಮಾರು 15,000 ಡಾಲರ್ (ಅಂದಾಜು 12.5 ಲಕ್ಷ ರೂಪಾಯಿ) ವರೆಗೆ ಭದ್ರತಾ ಠೇವಣಿ ಇಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಇದೇ ವರ್ಷದ ಜನವರಿಯಲ್ಲಿ, ಗ್ರೀನ್ ಕಾರ್ಡ್ ತಪಾಸಣೆಗೆ ಒಳಗಾಗುತ್ತಿರುವ ನಿರಾಶ್ರಿತರನ್ನು ‘ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ’ ವಶಕ್ಕೆ ಪಡೆಯಬಹುದು ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಘೋಷಿಸಿತ್ತು. ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ನಿಯಮವೊಂದನ್ನು ಬಳಸಿಕೊಂಡು ಈ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಇದರ ಪ್ರಕಾರ, ಅಮೆರಿಕಕ್ಕೆ ಬಂದು ಒಂದು ವರ್ಷ ಕಳೆದರೂ ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸದ ನಿರಾಶ್ರಿತರು ಕಡ್ಡಾಯವಾಗಿ ಇಲಾಖೆಯ ಕಸ್ಟಡಿಗೆ ಮರಳಬೇಕಾಗುತ್ತದೆ. ಆ ಮೂಲಕ, ಒಂದು ವರ್ಷದೊಳಗೆ ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸದಿದ್ದರೂ ನಿರಾಶ್ರಿತರನ್ನು ಕಾನೂನುಬದ್ಧವಾಗಿ ಬಂಧಿಸಲು ಆಧಾರವಿಲ್ಲ ಎಂದು ಹೇಳಿದ್ದ 2010ರ ಹಳೆಯ ಆದೇಶವನ್ನು ಈ ಸರ್ಕಾರ ರದ್ದುಗೊಳಿಸಿತು.
ಅಷ್ಟೇ ಅಲ್ಲದೆ, ಇದೇ ಜನವರಿಯಲ್ಲಿ ಟ್ರಂಪ್ ಆಡಳಿತವು ಜಾರಿಗೆ ತಂದ ವಿಸ್ತರಿತ ‘ಪ್ರಯಾಣ ನಿಷೇಧ’ ಕಾಯ್ದೆಯು ಜಾರಿಗೆ ಬಂದಿದ್ದು, ಒಟ್ಟು 39 ದೇಶಗಳ ಜನರಿಗೆ ಅಮೆರಿಕ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಅಥವಾ ಕಟ್ಟುಪಾಡುಗಳನ್ನು ಹೇರಲಾಗಿದೆ.
ನವೆಂಬರ್ 2025ರಲ್ಲಿ, ಅಫ್ಘಾನಿಸ್ತಾನದ ಪ್ರಜೆಯೊಬ್ಬ ವೈಟ್ಹೌಸ್ ಬಳಿ ಇಬ್ಬರು ನ್ಯಾಷನಲ್ ಗಾರ್ಡ್ ಸೈನಿಕರ ಮೇಲೆ ಗುಂಡು ಹಾರಿಸಿ, ಒಬ್ಬರನ್ನು ಕೊಂದ ಘಟನೆಯ ನಂತರ, ಯುಎಸ್ಸಿಐಎಸ್ ಇಡೀ ಗ್ರೀನ್ ಕಾರ್ಡ್ ವ್ಯವಸ್ಥೆಯ ಸಮಗ್ರ ಮರುಪರಿಶೀಲನೆಗೆ ಆದೇಶಿಸಿತ್ತು. ದಾಳಿ ನಡೆಸಿದ್ದ ಅಫ್ಘಾನ್ ಪ್ರಜೆ 2021ರಲ್ಲಿ ಅಮೆರಿಕ ಪ್ರವೇಶಿಸಿದ್ದು, ಆತನ ವೀಸಾ ಸ್ಟೇಟಸ್ ಅನ್ನು ಪದೇ ಪದೇ ನವೀಕರಿಸಲಾಗಿತ್ತು. ಈ ಘಟನೆಯ ಬಳಿಕ ತಪಾಸಣೆಯನ್ನು ಕಠಿಣಗೊಳಿಸಿದ ಸರ್ಕಾರ, ಅರ್ಜಿದಾರರ ಮೂಲ ದೇಶ ಮತ್ತು ಅವರು ಅಮೆರಿಕಕ್ಕೆ ಬಂದಿರುವ ನಿಜವಾದ ಉದ್ದೇಶವನ್ನು ಕಡ್ಡಾಯವಾಗಿ ಕಠಿಣ ಪರಿಶೀಲನೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು. ಕೆಲವೊಂದು ದೇಶಗಳ ಹಿನ್ನೆಲೆಯನ್ನು ವಲಸೆ ನಿರ್ಧಾರಗಳಲ್ಲಿ ನೇರವಾಗಿ ‘ನಕಾರಾತ್ಮಕ ಅಂಶ’ ಎಂದು ಪರಿಗಣಿಸುವ ನಿಯಮ ತರಲಾಯಿತು.
ಅದೇ ತಿಂಗಳು, ಬೈಡನ್ ಆಡಳಿತದ ಅವಧಿಯಲ್ಲಿ ಅಮೆರಿಕಕ್ಕೆ ಬರಲು ಅನುಮತಿ ಪಡೆದಿದ್ದ ಸುಮಾರು 2,30,000 ನಿರಾಶ್ರಿತರ ಗ್ರೀನ್ ಕಾರ್ಡ್ ಪ್ರಕ್ರಿಯೆಯನ್ನು ಟ್ರಂಪ್ ಸರ್ಕಾರವು ಸಂಪೂರ್ಣವಾಗಿ ಸ್ಥಗಿತಗೊಳಿಸಿತು. ಇದರೊಂದಿಗೆ, ಭವಿಷ್ಯದಲ್ಲಿ ಯಾರಾದರೂ ಸರ್ಕಾರದ ಸೌಲಭ್ಯಗಳು ಅಥವಾ ಸಬ್ಸಿಡಿಗಳ ಮೇಲೆ ಅವಲಂಬಿತರಾಗಬಹುದು ಎಂದು ಅಧಿಕಾರಿಗಳಿಗೆ ಅನಿಸಿದರೆ, ಅಂತಹವರಿಗೆ ಗ್ರೀನ್ ಕಾರ್ಡ್ ನಿರಾಕರಿಸುವ ಹಕ್ಕನ್ನು ನೀಡುವ ಕಠಿಣ ಪಬ್ಲಿಕ್ ಚಾರ್ಜ್ ನಿಯಮವನ್ನೂ ಪ್ರಸ್ತಾಪಿಸಲಾಯಿತು.
ಡಿಸೆಂಬರ್ನಲ್ಲಿ ಬ್ರೌನ್ ಯೂನಿವರ್ಸಿಟಿಯಲ್ಲಿ ನಡೆದ ಮತ್ತೊಂದು ಗುಂಡಿನ ದಾಳಿಯ ನಂತರ, ಅಮೆರಿಕ ಸರ್ಕಾರವು ಪ್ರಸಿದ್ಧ ‘ಡೈವರ್ಸಿಟಿ ವೀಸಾ ಲಾಟರಿ ಯೋಜನೆ’ಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತು. ಏಕೆಂದರೆ ಆ ದಾಳಿ ನಡೆಸಿದ ವ್ಯಕ್ತಿ ಈ ಲಾಟರಿ ಯೋಜನೆಯ ಮೂಲಕವೇ ಅಮೆರಿಕಕ್ಕೆ ಬಂದಿದ್ದ ಎಂದು ತಿಳಿದುಬಂದಿತ್ತು. ಈ ಯೋಜನೆಯಡಿ ಅಮೆರಿಕದಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ದೇಶಗಳ ಜನರಿಗೆ ವಾರ್ಷಿಕವಾಗಿ ಲಾಟರಿ ಮೂಲಕ 50,000 ಗ್ರೀನ್ ಕಾರ್ಡ್ಗಳನ್ನು ನೀಡಲಾಗುತ್ತಿತ್ತು. ಸದ್ಯ ಈ ಅಮಾನತು ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯುತ್ತಿದ್ದು, ಈ ವರ್ಷದ ಯೋಜನೆಯ ಅವಧಿ ಸೆಪ್ಟೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ.
ಅಷ್ಟೇ ಅಲ್ಲದೆ, ಅಧಿಕಾರಕ್ಕೆ ಬಂದ ತಕ್ಷಣವೇ ಟ್ರಂಪ್ ಸರ್ಕಾರ ಹುಟ್ಟಿನಿಂದ ಬರುವ ಪೌರತ್ವದ ಹಕ್ಕನ್ನು ರದ್ದು ಮಾಡಿತ್ತು. ಈ ಕ್ರಮದಿಂದಾಗಿ ಅಮೆರಿಕದಲ್ಲಿ ವೀಸಾದ ಮೇಲೆ ನೆಲೆಸಿರುವ ವಿದೇಶಿಗರ ಮಕ್ಕಳಿಗೆ ಅಲ್ಲಿ ಜನಿಸಿದ ತಕ್ಷಣ ಸಿಗುತ್ತಿದ್ದ ಸ್ವಯಂಚಾಲಿತ ಪೌರತ್ವದ ಹಕ್ಕು ಕೈತಪ್ಪಿತು. ಇದರೊಂದಿಗೆ ಭವಿಷ್ಯದಲ್ಲಿ ಆ ಮಕ್ಕಳ ಮೂಲಕ ಪೋಷಕರು ಅಮೆರಿಕದ ಖಾಯಂ ನಿವಾಸಿಗಳಾಗುವ ಮಾರ್ಗವೂ ಮುಚ್ಚಿಹೋಯಿತು.
►ಮುಂದೇನು?
ಟ್ರಂಪ್ ಸರ್ಕಾರದ ಈ ಹೊಸ ನೀತಿಯು ಈಗಾಗಲೇ ದೊಡ್ಡ ಮಟ್ಟದ ಕಾನೂನು ಹೋರಾಟಗಳನ್ನು ಎದುರಿಸುತ್ತಿದೆ. ವಲಸೆ ವಕೀಲರು, ಜನಪ್ರತಿನಿಧಿಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಈ ನೀತಿಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಹಲವು ಅರ್ಜಿದಾರರು ಸುರಕ್ಷತೆಯ ಕಾರಣಗಳಿಂದಾಗಿ ಅಥವಾ ತಮ್ಮ ದೇಶಗಳಲ್ಲಿ ಅಮೆರಿಕದ ರಾಯಭಾರ ಕಚೇರಿಗಳೇ ಇಲ್ಲದ ಕಾರಣ ಈಗ ತಾಯ್ನಾಡಿಗೆ ಮರಳುವುದು ಅಸಾಧ್ಯ ಎಂದು ಅವರು ವಾದಿಸುತ್ತಿದ್ದಾರೆ. ಉದಾಹರಣೆಗೆ, 2021ರ ಆಗಸ್ಟ್ನಲ್ಲಿ ಅಮೆರಿಕ ಸೇನೆಯು ಹೊರಬಂದಾಗಿನಿಂದ ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ.
ಈ ನೀತಿಯಲ್ಲಿರುವ ಪ್ರಮುಖ ಆಡಳಿತಾತ್ಮಕ ಗೊಂದಲವನ್ನು ವಿಮರ್ಶಕರು ಎತ್ತಿ ತೋರಿಸಿದ್ದಾರೆ. ಹಲವು ದೇಶಗಳಲ್ಲಿ ಅಮೆರಿಕವು ವಲಸೆ ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವುದನ್ನೇ ನಿಲ್ಲಿಸಿದೆ. ಹೀಗಾಗಿ, ಸಾವಿರಾರು ಅರ್ಜಿದಾರರು ಗ್ರೀನ್ ಕಾರ್ಡ್ ಪಡೆಯುವ ಯಾವುದೇ ಗ್ಯಾರಂಟಿ ಇಲ್ಲದೆ, ತಮ್ಮ ಕುಟುಂಬಗಳಿಂದ ಅನಿರ್ದಿಷ್ಟಾವಧಿಗೆ ದೂರ ಉಳಿಯಬೇಕಾದ ಭೀಕರ ಪರಿಸ್ಥಿತಿ ನಿರ್ಮಾಣವಾಗಲಿದೆ.
‘ಕ್ಯಾಟೋ ಇನ್ಸ್ಟಿಟ್ಯೂಟ್’ನ ವಲಸೆ ಅಧ್ಯಯನ ವಿಭಾಗದ ನಿರ್ದೇಶಕರಾದ ಡೇವಿಡ್ ಬೈರ್ ತಮ್ಮ ಲೇಖನವೊಂದರಲ್ಲಿ, ಸರ್ಕಾರದ ಈ ಹಠಾತ್ ಕ್ರಮದಿಂದಾಗಿ ಜಾಗತಿಕ ಮಟ್ಟದ ಪ್ರತಿಭಾವಂತರು ಅಮೆರಿಕವನ್ನು ಬಿಟ್ಟು ಇತರ ದೇಶಗಳತ್ತ ಮುಖ ಮಾಡಲಿದ್ದಾರೆ. ಇದು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಉದ್ಯಮ ರಂಗದಲ್ಲಿ ಅಮೆರಿಕದ ಸ್ಪರ್ಧಾತ್ಮಕತೆಯನ್ನು ತಗ್ಗಿಸಲಿದೆ ಎಂದು ಎಚ್ಚರಿಸಿದ್ದಾರೆ.
ಸದ್ಯಕ್ಕೆ ಈ ನೀತಿಯು ಯಾವ ದಿನಾಂಕದಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಿಂದೆಯೂ ಟ್ರಂಪ್ ಸರ್ಕಾರದ ವಲಸೆ ವಿರೋಧಿ ನಿರ್ಧಾರಗಳಿಗೆ ಅಮೆರಿಕದ ನ್ಯಾಯಾಲಯಗಳು ತಡೆಯಾಜ್ಞೆ ನೀಡಿದ್ದ ಉದಾಹರಣೆಗಳಿವೆ. ಹೀಗಾಗಿ, ಈ ಹೊಸ ನಿಯಮದಿಂದ ಸಂಕಷ್ಟಕ್ಕೆ ಸಿಲುಕುವ ವಲಸಿಗರು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ವಲಸೆ ವಕೀಲರನ್ನು ಸಂಪರ್ಕಿಸಿ ಸಲಹೆ ಪಡೆಯುವಂತೆ ವಿವಿಧ ವಕೀಲರ ಒಕ್ಕೂಟಗಳು ಸೂಚಿಸಿವೆ.






