ತಮ್ಮ ಹೆಸರು ಡಿಲೀಟ್ ಮಾಡಲು ‘ಫಾರಂ 7’ ಸಲ್ಲಿಸುತ್ತಿರುವವರು ಯಾರು? ಒಡಿಶಾದ ಭದ್ರಕ್ ನ ಮುಸ್ಲಿಂ ಮತದಾರರ ಪ್ರಶ್ನೆ
ಮಧುಸೂದನ್ ಚಟರ್ಜಿ - thewire. in ಗ್ರೌಂಡ್ ರಿಪೋರ್ಟ್

Photo Credit : Madhu Sudan Chatterjee \ thewire.in
“ನನಗೆ 85 ವರ್ಷ. ಹಲವು ವರ್ಷಗಳಿಂದ ಮತ ಚಲಾಯಿಸುತ್ತಿದ್ದೇನೆ. ಆದರೆ ಈಗ, ನಾನು ಇಲ್ಲಿ ವಾಸಿಸುತ್ತಿಲ್ಲ, ನನಗೆ ಯಾವುದೇ ಅಸ್ತಿತ್ವವೇ ಇಲ್ಲ ಎಂದು ಹೇಳಲಾಗುತ್ತಿದೆ.” ಒಡಿಶಾದ ಭದ್ರಕ್ ವಿಧಾನಸಭಾ ಕ್ಷೇತ್ರದ ಭದ್ರಕ್ ಪುರಸಭೆಯ ಬೂತ್ ಸಂಖ್ಯೆ 174ರ ನಿವಾಸಿ, ವೃದ್ಧ ಮೀರ್ ಆಲಂ ಗೀರ್ ತಮ್ಮ ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಕೈಯಲ್ಲಿ ಹಿಡಿದು ತಮ್ಮ ಅಳಲನ್ನು ತೋಡಿಕೊಂಡರು. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದನ್ನು ಕಂಡು ಅವರು ಕಂಗಾಲಾಗಿದ್ದಾರೆ.
“ಮತದಾರರ ಪಟ್ಟಿಯಿಂದ ನನ್ನ ಹೆಸರು ತೆಗೆದುಹಾಕಲು ಕೋರಿ ‘ಫಾರಂ 7’ ಸಲ್ಲಿಸಿದ ವ್ಯಕ್ತಿಗೆ ಕೇವಲ 27 ವರ್ಷ. ಆತ ನನ್ನ ನೆರೆಹೊರೆಯಲ್ಲಿ ವಾಸಿಸುತ್ತಿಲ್ಲ. ಸುಮಾರು 20 ಮೈಲಿ ದೂರದಲ್ಲಿದ್ದಾನೆ. ನಾನು ಇಲ್ಲೇ ವಾಸಿಸುತ್ತಿದ್ದೇನೆಯೇ, ಬೇರೆಡೆಗೆ ಹೋಗಿದ್ದೇನೆಯೇ ಅಥವಾ ತೀರಿಕೊಂಡಿದ್ದೇನೆಯೇ ಎಂಬುದು ಆತನಿಗೆ ಹೇಗೆ ತಿಳಿಯಲು ಸಾಧ್ಯ? ಬಿಜೆಪಿ ಈ ರೀತಿಯಾಗಿ ಒಡಿಶಾದಲ್ಲಿ ಮುಸ್ಲಿಮರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಯತ್ನಿಸುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ಈ ಅನ್ಯಾಯ ಮತ್ತು ಅವಮಾನವನ್ನು ಪ್ರತಿಭಟಿಸಿ, ತಮ್ಮಂತೆಯೇ ಸಂಕಷ್ಟಕ್ಕೊಳಗಾದ ಕೆಲವು ಮತದಾರರು ಒಟ್ಟಾಗಿ ಭದ್ರಕ್ ಪೊಲೀಸ್ ಠಾಣೆಗೆ ತೆರಳಿ, ಹಕ್ಕು ಕಸಿಯಲು ಸುಳ್ಳು ಫಾರಂ 7 ಸಲ್ಲಿಸಿದವರ ವಿರುದ್ಧ ದೂರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಉಳಿಯುತ್ತದೋ ಇಲ್ಲವೋ, ನಮ್ಮ ಮತದಾನದ ಹಕ್ಕು ಕಸಿದುಕೊಳ್ಳಲಾಗುತ್ತದೋ ಎಂಬ ತೀವ್ರ ಆತಂಕದಲ್ಲೇ ನಾವು ಪ್ರತಿದಿನ ಕಾಲ ಕಳೆಯುತ್ತಿದ್ದೇವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
Mir Alam Gir, 85, a resident of Banka mohalla in Bhadrak, shows his Aadhaar and voter card. Photo: Madhu Sudan Chatterjee
ಒಡಿಶಾದಲ್ಲಿ ಜೂನ್ ನಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಾರಂಭವಾಗಿತ್ತು. ಒಡಿಶಾದ ಜಿಲ್ಲೆಗಳ ಪೈಕಿ ಭದ್ರಕ್ ಜಿಲ್ಲೆಯು ಶೇಕಡಾವಾರು ಪ್ರಮಾಣದಲ್ಲಿ (ಶೇ. 6.92) ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದು, ಒಟ್ಟು ಸಂಖ್ಯೆಯ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದೆ.
the wire ತಂಡವು ಭದ್ರಕ್ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಈ ಪ್ರಕ್ರಿಯೆಯು ಹೇಗೆ ನಡೆಯುತ್ತಿದೆ ಮತ್ತು ಮತದಾರರ ಮೇಲೆ ಇದು ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಪರಿಶೀಲಿಸಿತು. ಈ ಭೇಟಿಯ ಸಮಯದಲ್ಲಿ ಜಿಲ್ಲೆಯ ಹಲವು ಪಟ್ಟಣಗಳಲ್ಲಿ ಗೀರ್ ಹೇಳಿದಂತಹದ್ದೇ ಆತಂಕದ ವಾತಾವರಣ ಕಂಡುಬಂತು.
ಗ್ರಾಮದಿಂದ ಗ್ರಾಮಕ್ಕೆ ಹೋದಂತೆ “ನಾವು ಮತ ಚಲಾಯಿಸಲು ಸಾಧ್ಯವೇ? ಅಥವಾ ಬಂಗಾಳದಲ್ಲಿ ನಡೆದಂತೆ ‘ತಾರ್ಕಿಕ ವ್ಯತ್ಯಾಸಗಳ’ (Logical discrepancies) ನೆಪದಲ್ಲಿ ನಮ್ಮನ್ನು ತನಿಖೆಗೆ ಒಳಪಡಿಸಿ, ನಮ್ಮ ಮತದಾನದ ಹಕ್ಕಿನ ಬಗ್ಗೆ ಅನಿಶ್ಚಿತತೆ ಮೂಡಿಸಲಾಗುತ್ತದೆಯೇ?” ಎಂಬ ಅದೇ ಪ್ರಶ್ನೆಗಳು ಮತ್ತೆ ಮತ್ತೆ ಕೇಳಿಬಂದವು.
*ಒಡಿಶಾದ ಮುಸ್ಲಿಂ ಅಲ್ಪಸಂಖ್ಯಾತರಲ್ಲಿ ಆತಂಕಕ್ಕೆ ಕಾರಣವೇನು?
ಸಂಖ್ಯೆಯ ಆಧಾರದಲ್ಲಿ ಕಟಕ್ ಜಿಲ್ಲೆಯು ರಾಜ್ಯದಲ್ಲೇ ಅತ್ಯಂತ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು (1,42,263) ಹೊಂದಿದೆ. ಇದು ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ. 5.38ರಷ್ಟಿದೆ. ಇದರ ನಂತರದ ಸ್ಥಾನದಲ್ಲಿರುವ ಭದ್ರಕ್ ಜಿಲ್ಲೆಯಲ್ಲಿ 1,04,202 ಮುಸ್ಲಿಂ ಜನಸಂಖ್ಯೆಯಿದ್ದು, ಇದು ಜಿಲ್ಲೆಯ ಶೇ. 6.92ರಷ್ಟಾಗುತ್ತದೆ.
ಭದ್ರಕ್ ನ ಮುಸ್ಲಿಂ ಜನಸಂಖ್ಯೆಯ ದೊಡ್ಡ ಭಾಗವು ಬಡ ಕುಟುಂಬಗಳು, ದಿನಗೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರನ್ನು ಒಳಗೊಂಡಿದೆ. ಇವರ ಜೀವನೋಪಾಯವು ಬಹುತೇಕ ಅನಿಶ್ಚಿತ ಹಾಗೂ ಅಸಂಘಟಿತ ಉದ್ಯೋಗಗಳನ್ನು ನೆಚ್ಚಿಕೊಂಡಿದೆ.
Voters of Bhat mohalla showing their documents. Photo: Madhu Sudan Chatterjee
2024ರ ಇತ್ತೀಚಿನ ರಾಜ್ಯ ಚುನಾವಣೆಯಲ್ಲಿ ಭದ್ರಕ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಮತ್ತು ಬಿಜು ಜನತಾ ದಳ (ಬಿಜೆಡಿ) ನಡುವೆ ಮತಗಳು ವಿಭಜನೆಯಾಗಿದ್ದೇ ಬಿಜೆಪಿಯ ಗೆಲುವಿಗೆ ಪ್ರಮುಖ ಕಾರಣ ಎಂದು ಇಲ್ಲಿನ ಅನೇಕ ನಿವಾಸಿಗಳು ಅಭಿಪ್ರಾಯಪಡುತ್ತಾರೆ.
“ಜೂನ್ ತಿಂಗಳಲ್ಲಿ ಒಡಿಶಾದಲ್ಲಿ SIR ಪ್ರಕ್ರಿಯೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ, ಭದ್ರಕ್ ಕ್ಷೇತ್ರದ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿರುವ ಅನೇಕ ನೈಜ ಮತದಾರರ ಹೆಸರುಗಳ ವಿರುದ್ಧ ಫಾರಂ 7 ಅರ್ಜಿಗಳನ್ನು ಸಲ್ಲಿಸಲಾಗಿರುವುದು ನಮಗೆ ತಿಳಿಯಿತು. ಈ ವ್ಯಕ್ತಿಗಳು ಪಟ್ಟಿ ಮಾಡಲಾದ ವಿಳಾಸಗಳಲ್ಲಿ ಇನ್ನು ಮುಂದೆ ವಾಸಿಸುತ್ತಿಲ್ಲ ಎಂದು ಅರ್ಜಿದಾರರು ವಾದಿಸಿ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಕೋರಿದ್ದರು” ಎಂದು ಭದ್ರಕ್ ಜಿಲ್ಲೆಯ ಬಿಜೆಡಿ ಅಧ್ಯಕ್ಷ ವ್ಯೂಮಕೇಶ್ ರಾಯ್ ‘ದಿ ವೈರ್’ಗೆ ತಿಳಿಸಿದ್ದಾರೆ.
ಈ ಪ್ರದೇಶಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಈಗಾಗಲೇ ತಮ್ಮ ಎಸ್ಐಆರ್ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ರಾಯ್ ಹೇಳಿದ್ದಾರೆ.
ಅವರು ಮನೆ ಮನೆಗೆ ತೆರಳಿ ನಡೆಸಿದ ಪರಿಶೀಲನಾ ದಾಖಲೆಗಳಲ್ಲಿ ಈ ಮತದಾರರು ಗೈರುಹಾಜರಾಗಿದ್ದಾರೆ ಅಥವಾ ಮನೆ ತೊರೆದಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. “ಬಿಎಲ್ಒ ಅಧಿಕಾರಿಗಳಿಗೇ ತಮ್ಮ ತನಿಖೆಯಲ್ಲಿ ಇಂತಹ ಯಾವುದೇ ಮಾಹಿತಿ ಸಿಗದಿದ್ದಾಗ, ಫಾರಂ 7 ಅರ್ಜಿಗಳನ್ನು ಭರ್ತಿ ಮಾಡಿದವರಿಗೆ ಈ ಮಾಹಿತಿ ಎಲ್ಲಿಂದ ಸಿಕ್ಕಿತು?” ಎಂದು ರಾಯ್ ಪ್ರಶ್ನಿಸಿದ್ದಾರೆ.
ಭದ್ರಕ್ನ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಈ ಪ್ರಶ್ನೆ ಅತ್ಯಂತ ಮುಖ್ಯವಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯಿಂದಾಗಿ ತಮ್ಮ ಹೆಸರುಗಳು ಪಟ್ಟಿಯಲ್ಲಿ ಉಳಿಯುತ್ತವೆಯೋ ಇಲ್ಲವೋ ಎಂಬ ಆತಂಕ ನಿವಾಸಿಗಳಲ್ಲಿ ಮೂಡಿದೆ.
“ನಾವು ಈ ವಿಷಯವನ್ನು ಭದ್ರಕ್ ಉಪ ಜಿಲ್ಲಾಧಿಕಾರಿ ಸೌರವ್ ಚಕ್ರವರ್ತಿ ಅವರ ಗಮನಕ್ಕೆ ತಂದು, ನಮ್ಮ ಕಳವಳಗಳನ್ನು ಸ್ಪಷ್ಟವಾಗಿ ವಿವರಿಸಿದೆವು. ಆದರೆ ನಮಗೆ ಅವರಿಂದ ಯಾವುದೇ ಸ್ಪಷ್ಟ ಅಥವಾ ತೃಪ್ತಿಕರ ವಿವರಣೆ ಸಿಗಲಿಲ್ಲ” ಎಂದು ರಾಯ್ ಆರೋಪಿಸಿದ್ದಾರೆ.
*ಭದ್ರಕ್ ಪುರಸಭೆ ಅಧ್ಯಕ್ಷರ ಪ್ರತಿಕ್ರಿಯೆ
ಎಸ್ಐಆರ್ ಪ್ರಕ್ರಿಯೆಯ ಕುರಿತು ಪ್ರತಿಕ್ರಿಯೆ ಪಡೆಯಲು ‘ದಿ ವೈರ್’ ತಂಡವು ಕೆಲವು ದಿನಗಳ ಹಿಂದೆ ಭದ್ರಕ್ ಪುರಸಭೆಯ ಅಧ್ಯಕ್ಷೆ ಹಾಗೂ ಬಿಜೆಡಿ ನಾಯಕಿ ಗುಲ್ಮಾಖಿ ದಲಾವಾಜಿ ಹಬೀ ಅವರನ್ನು ಭೇಟಿ ಮಾಡಿತ್ತು. ಭದ್ರಕ್ ಪುರಸಭೆ ವ್ಯಾಪ್ತಿಯ 15 ಮುಸ್ಲಿಂ ಬಾಹುಳ್ಯದ ವಾರ್ಡ್ಗಳಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಕೋರಿ ಸುಮಾರು 200ರಿಂದ 300 ಫಾರಂ 7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
“ಎಸ್ಐಆರ್ ಪ್ರಕ್ರಿಯೆ ಪ್ರಾರಂಭವಾದಾಗ ಪ್ರತಿಯೊಬ್ಬರೂ ಇದಕ್ಕೆ ಸಹಕರಿಸಿದರು. ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದರು. ಎಲ್ಲಿಯೂ ಯಾವುದೇ ಸಮಸ್ಯೆಗಳಿರಲಿಲ್ಲ, ಅವರು ಅದರಂತೆ ವರದಿ ಸಲ್ಲಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಅವರ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ 7 ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂಬ ವಿಷಯ ನಮಗೆ ತಿಳಿಯಿತು” ಎಂದು ಹಬೀ ಹೇಳಿದ್ದಾರೆ.
Residents of Banka mohalla under ward 26 of Bhadrak constituency showing their voter cards. Photo: Madhu Sudan Chatterjee
ಹಬೀ ಅವರ ಪ್ರಕಾರ, ಈ ಮತದಾರರ ವಿಳಾಸಗಳು ಸರಿಯಾಗಿರಲಿಲ್ಲ. ಅರ್ಜಿಗಳನ್ನು ಸಿದ್ಧಪಡಿಸಿದ ರೀತಿಯೂ ಸರಿಯಾಗಿಲ್ಲ. “ಫಾರಂ 7 ಅರ್ಜಿಗಳನ್ನು ಕೈಬರಹದಲ್ಲಿ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಆದರೆ ಈ ಪ್ರಕರಣಗಳಲ್ಲಿ ಎಲ್ಲವನ್ನೂ ಕಂಪ್ಯೂಟರ್ನಲ್ಲಿ ಟೈಪ್ ಮಾಡಲಾಗಿದೆ.”
Residents of Mira mohalla showing their voter card. Photo: Madhu Sudan Chatterjee
ಈ ಅರ್ಜಿಗಳನ್ನು ಬಿಜೆಪಿ ಕಚೇರಿಯಿಂದ ಸಿದ್ಧಪಡಿಸಲಾಗಿದೆ ಮತ್ತು ಈ ಪ್ರಕ್ರಿಯೆಯು ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಹಬೀ ಶಂಕೆ ವ್ಯಕ್ತಪಡಿಸಿದ್ದಾರೆ. ಫಾರಂ 7 ಸಲ್ಲಿಕೆಯಾದ ನಂತರ, ಈ ಪ್ರಕರಣಗಳನ್ನು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಆಡಳಿತ ಯಂತ್ರವು ಬಿಎಲ್ಒಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಅವರು ಆರೋಪಿಸಿದರು.
Councillor of ward 25, with residents Sheikh Sahil Quadry and Sayed Mohammad Ali and Sheikh Nasim Sardar. Photo: Madhu Sudan Chatterjee
“ಇದು ಭದ್ರಕ್ನ ಮುಸ್ಲಿಂ ಸಮುದಾಯದ ಜನರಿಗೆ ಎಸಗಿದ ಘೋರ ಅವಮಾನ” ಎಂದು ಹೇಳಿದ ಅವರು, ಈ ವಿಷಯವನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.
ಭದ್ರಕ್ ಮತದಾರರಲ್ಲಿ ಭೀತಿ, ಆಕ್ರೋಶ ಮತ್ತು ಅನಿಶ್ಚಿತತೆ
ಭದ್ರಕ್ ಪುರಸಭೆಯು 30 ವಾರ್ಡ್ಗಳನ್ನು ಹೊಂದಿದ್ದು, ಇವುಗಳಲ್ಲಿ 15 ವಾರ್ಡ್ಗಳಲ್ಲಿ ಮುಸ್ಲಿಂ ಸಮುದಾಯದವರೇ ಬಹುಸಂಖ್ಯಾತರಾಗಿದ್ದಾರೆ. ಭದ್ರಕ್ ನಗರದಲ್ಲಿ ಸುಮಾರು 90,000 ಮತದಾರರಿದ್ದು, ಈ ಪೈಕಿ 40,000ಕ್ಕೂ ಹೆಚ್ಚು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪುರಸಭೆಯ 140 ಮತಗಟ್ಟೆಗಳ ಪೈಕಿ 51 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ.
ಪ್ರಸ್ತುತ ಈ ಜಿಲ್ಲಾ ಪುರಸಭೆಯು ಬಿಜೆಡಿ ಆಡಳಿತದಲ್ಲಿದೆ. ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಸೌಹಾರ್ದತೆಯನ್ನು ಕಾಯ್ದುಕೊಂಡು ಬಂದ ಪರಂಪರೆ ಭದ್ರಕ್ಗಿದೆ.
Salmun Bibi, Johara Bibi, Sakila Bibi, Fotema, Saheda Bibi residents of Banka mohalla under ward 26 of Bhadrak municipality showing their voter cards. Photo: Madhu Sudan Chatterjee
ನಗರದಲ್ಲಿರುವ ಮುಸ್ಲಿಂ ಸಮುದಾಯದ ದೊಡ್ಡ ಭಾಗವು ಬಡವರು ಮತ್ತು ಕೂಲಿ ಕಾರ್ಮಿಕರನ್ನೊಳಗೊಂಡ ಶ್ರಮಿಕ ವರ್ಗವಾಗಿದೆ. ಪ್ರಶಾಂತ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದ ಈ ಜನರಲ್ಲಿ ಎಸ್ಐಆರ್ ಪ್ರಕ್ರಿಯೆಯೊಂದಿಗೆ ಆತಂಕ ಶುರುವಾಗಿದೆ. ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡುವ ಯತ್ನ ನಡೆದಿರುವುದು, ದೇಶದ ಮತದಾರರಾಗಿ ತಮಗಿರುವ ಹಕ್ಕಿನ ಬಗ್ಗೆ ಅವರಲ್ಲಿ ತೀವ್ರ ಅಪಮಾನ ಮತ್ತು ಅಭದ್ರತೆಯ ಭಾವನೆಯನ್ನು ಮೂಡಿಸಿದೆ.
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಸಂದರ್ಭದಲ್ಲಿ ಅನುಸರಿಸಲಾದ ವಿವಾದಾತ್ಮಕ ಪ್ರಕ್ರಿಯೆಯ ಬಗ್ಗೆ ತಾವು ಕೇಳಿರುವುದಾಗಿ ಹಲವು ನಿವಾಸಿಗಳು ತಿಳಿಸಿದ್ದಾರೆ. ಇದೀಗ ಒಡಿಶಾದಲ್ಲೂ ಅಂತಹದ್ದೇ ಪ್ರಕ್ರಿಯೆ ನಡೆಯಬಹುದು ಎಂಬ ಭೀತಿ ಅವರನ್ನು ಕಾಡುತ್ತಿದೆ.
*ಮತದಾನದ ಹಕ್ಕಿಗಾಗಿ ಹೋರಾಟ
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಲು ಕೆಲ ನಿವಾಸಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆಗಸ್ಟ್ 13ರಂದು ಭದ್ರಕ್ ಜಿಲ್ಲೆಯು ಪ್ರವಾಹಕ್ಕೆ ಸಿಲುಕಿತ್ತು. ಈಗಲೂ ಪ್ರತಿದಿನ ಮಳೆಯಾಗುತ್ತಿದೆ. ಹದಗೆಟ್ಟ ಹವಾಮಾನ ಮತ್ತು ಪ್ರವಾಹದ ಸಂಕಷ್ಟಗಳ ನಡುವೆಯೂ, ಭದ್ರಕ್ನ ವಾರ್ಡ್ ಸಂಖ್ಯೆ 25 ಮತ್ತು 26ರ ನಿವಾಸಿಗಳು ಎಸ್ಐಆರ್ ಪ್ರಕ್ರಿಯೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಲು ಪ್ರತಿಭಟನೆ ಆರಂಭಿಸಿದ್ದಾರೆ.
ವಾರ್ಡ್ ಸಂಖ್ಯೆ 26ರ ಮೀರಾ ಮೊಹಲ್ಲಾದ ಗೃಹಿಣಿ ಶರಿಮಾ ಬೀಬಿ ಮಾತನಾಡಿ, ಈ ಪ್ರದೇಶದ ನಿವಾಸಿಗಳು ದಶಕಗಳಿಂದ ಯಾವುದೇ ಸಮಸ್ಯೆಯಿಲ್ಲದೆ ಮತದಾನ ಮಾಡುತ್ತಿದ್ದಾರೆ ಎಂದಿದ್ದಾರೆ. “ನಾವು ದೀರ್ಘಕಾಲದಿಂದ ಇಲ್ಲಿ ಮತ ಚಲಾಯಿಸುತ್ತಿದ್ದೇವೆ. ಹಿಂದೆಂದೂ ನಮಗೆ ಯಾವುದೇ ತೊಂದರೆಯಾಗಿರಲಿಲ್ಲ. ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಮರು ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗ ಅವರು ಮತದಾರರ ಪಟ್ಟಿಯಿಂದ ನಮ್ಮ ಹೆಸರುಗಳನ್ನು ತೆಗೆದುಹಾಕಲು ಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಶರಿಮಾ ಅವರ ತವರು ಮನೆ ಪಶ್ಚಿಮ ಬಂಗಾಳದ ಉಲುಬೇರಿಯಾದಲ್ಲಿದೆ ಎಂದೂ, ತಾವು ಅಲ್ಲಿನ ಎಸ್ಐಆರ್ ಪ್ರಕ್ರಿಯೆಯನ್ನು ಹತ್ತಿರದಿಂದ ಗಮನಿಸಿದ್ದಾಗಿಯೂ ಹೇಳಿದರು. “ಬಂಗಾಳದಲ್ಲಿ ಎಸ್ಐಆರ್ ಸಮಯದಲ್ಲಿ ಜನರಿಗೆ ಏನಾಯಿತು ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಹೇಗೆ ತೆಗೆದುಹಾಕಲಾಯಿತು ಎಂಬುದು ನನಗೆ ತಿಳಿದಿದೆ. ಇಲ್ಲೂ ಅದನ್ನೇ ಮಾಡಲು ಹೊರಟಿದ್ದಾರೆ” ಅಂತಾರೆ ಅವರು.
ದಿ ವೈರ್ನೊಂದಿಗೆ ಮಾತನಾಡಿದ ವಾರ್ಡ್ ನಂಬರ್ 25ರ ಕೌನ್ಸಿಲರ್ ಶೇಖ್ ಸಾಹಿಲ್ ಖಾದ್ರಿ, ಈ ಪ್ರದೇಶದೊಂದಿಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳು ಮತದಾರರ ಬಗ್ಗೆ ಸುಳ್ಳು ಮಾಹಿತಿಯನ್ನು ಒಳಗೊಂಡ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
“ಜನರು ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ದಿನಗಟ್ಟಲೆ ಕಚೇರಿಗೆ ಅಲೆಯುವಂತಾಗಿದೆ. ತಮ್ಮ ಗುರುತು ಮತ್ತು ವಾಸಸ್ಥಳವನ್ನು ಸಾಬೀತುಪಡಿಸಲು ದಾಖಲೆಗಳು ಹಾಗೂ ಇತರ ಪುರಾವೆಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಪ್ರದೇಶದ ನಿವಾಸಿ ಸೈಯದ್ ಮೊಹಮ್ಮದ್ ಅಲಿ ಅವರು ಮಾತನಾಡಿ, ಸುಮಾರು 20 ಕಿಲೋಮೀಟರ್ ದೂರದಲ್ಲಿ ವಾಸಿಸುವ ಗಣೇಶ್ ಪತಿ ಮತ್ತು ಪ್ರತಾಪ್ ಬಾರಿ ಎಂಬ ಇಬ್ಬರು ಬಿಜೆಪಿ ಕಾರ್ಯಕರ್ತರು, ಈ ಭಾಗದ ನಿವಾಸಿಗಳ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶದಿಂದ ಅವರ ವಿರುದ್ಧ ಫಾರಂ 7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
26ನೇ ವಾರ್ಡ್ನ ಬಂಕಾ ಮೊಹಲ್ಲಾದ ವಿವಿಧ ವಯಸ್ಸಿನ ಅನೇಕ ಮಹಿಳೆಯರು ಇದೇ ರೀತಿಯ ಆರೋಪಗಳನ್ನು ಮಾಡಿದರು. ಸಲಾಮುನ್ ಬೀಬಿ, ಜೋಹ್ರಾ ಬೀಬಿ, ಶಕಿಲಾ ಬೀಬಿ, ಫಾತಿಮಾ ಬೀಬಿ ಮತ್ತು ಸಹೇದಾ ಬೀಬಿ ಸೇರಿದಂತೆ ಇತರರು ಈ ಪಟ್ಟಿಯಲ್ಲಿದ್ದಾರೆ. “ಇದು ನಮಗೆ ದೊಡ್ಡ ಅಪಮಾನ. ನಮಗೆ ನ್ಯಾಯ ಬೇಕು” ಎಂದು ಫಾತಿಮಾ ಬೀಬಿ ಹೇಳಿದರು.
ಅವರೊಂದಿಗೆ ನಿಂತಿದ್ದ ನಾಸಿರುದ್ದೀನ್ ಖಾನ್ ಮಾತನಾಡಿ, ಆರಂಭದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ಮುಸ್ಲಿಂ ಸಮುದಾಯದ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಬಿಜೆಪಿ ಉದ್ದೇಶಪೂರ್ವಕವಾಗಿ ಈ ಮಾರ್ಗವನ್ನು ಅನುಸರಿಸಿದೆ ಎಂದು ಆರೋಪಿಸಿದರು.
ಕೆಲವು ಕುಟುಂಬಗಳಿಗೆ ಈ ವಿವಾದವು ತೀವ್ರ ಮಾನಸಿಕ ಆಘಾತವನ್ನುಂಟುಮಾಡಿದೆ. ಮೀರಾ ಮೊಹಲ್ಲಾದ ನಿವಾಸಿ ಕಮರುನ್ ಬೀಬಿ, ತಮ್ಮ ಪತಿ ಸುಲೇಮಾನ್ ಖಾನ್ ಅವರ ಹೆಸರು ತೆಗೆದುಹಾಕಲು ಫಾರಂ 7 ಅರ್ಜಿ ಸಲ್ಲಿಕೆಯಾಗಿದೆ ಎಂದು ತಿಳಿದ ನಂತರ ಅವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಹೇಳಿದರು.
ಇದೇ ರೀತಿಯ ಘಟನೆ ಅದೇ ನೆರೆಹೊರೆಯ ಶೇಖ್ ಆಡಮ್ ಅವರ ಮನೆಯಲ್ಲೂ ನಡೆದಿದೆ. ಅವರ ಹೆಸರು ತೆಗೆದುಹಾಕಲು ಫಾರಂ 7 ಅರ್ಜಿ ಸಲ್ಲಿಕೆಯಾಗಿದೆ ಎಂಬ ಸುದ್ದಿ ತಿಳಿದ ನಂತರ, ಅವರ 108 ವರ್ಷದ ತಂದೆ ಶೇಖ್ ಶಂಸುದ್ದೀನ್ ತೀವ್ರ ಅಸ್ವಸ್ಥಗೊಂಡರು ಎಂದು ಅವರು ತಿಳಿಸಿದರು.
Sheikh Adam and his 108-year-old father Sheikh Samsuddin at Mir Mohalla of Bhadrak. Photo: Madhu Sudan Chatterjee
ಭಟ್ ಮೊಹಲ್ಲಾದ ನಿವಾಸಿಗಳಾದ ಶೇಖ್ ಕಲಾಂ ಮತ್ತು ಕಲಿಮುದ್ದೀನ್ ಖಾನ್, ಯಾವುದೇ ಸೂಕ್ತ ಕಾರಣವಿಲ್ಲದೆ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಈ ವಿಷಯವನ್ನು ಪೊಲೀಸರ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ಕ್ರಮ ಜರುಗಿಲ್ಲ. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನಾಸಿರುದ್ದೀನ್ ಖಾನ್ ಒತ್ತಾಯಿಸಿದ್ದಾರೆ.
*‘ಫಾರಂ 7 ಸಲ್ಲಿಕೆಯಾಗಿದ್ದು ಬಿಜೆಪಿ ಕಚೇರಿಯಿಂದ’
ಫಾರಂ 7 ಅರ್ಜಿಗಳನ್ನು ಭದ್ರಕ್ ನ ಬಿಜೆಪಿ ಕಚೇರಿಯಿಂದಲೇ ಸಿದ್ಧಪಡಿಸಿ ಸಲ್ಲಿಸಲಾಗಿದೆ ಎಂದು ಹಲವು ನಿವಾಸಿಗಳು ಆರೋಪಿಸಿದ್ದಾರೆ. ತಮ್ಮ ಆರೋಪಕ್ಕೆ ಪುರಾವೆಯಾಗಿ ಅವರು ಅರ್ಜಿಗಳಲ್ಲಿನ ಒಂದು ವಿಶೇಷ ಸಾಮ್ಯತೆಯನ್ನು ತೋರಿಸಿದ್ದಾರೆ. ಅದೇನೆಂದರೆ ಮತದಾರರ ಹೆಸರು ಮತ್ತು ವಾಸಸ್ಥಳದ ವಿಳಾಸ ಸರಿಯಾಗಿದೆ, ಆದರೆ ಅಂಚೆ ಕಚೇರಿಯ ಹೆಸರನ್ನು ಭದ್ರಕ್ನಿಂದ 100 ಕಿಲೋಮೀಟರ್ಗೂ ಹೆಚ್ಚು ದೂರದಲ್ಲಿರುವ ಭುವನೇಶ್ವರ ಎಂದು ನಮೂದಿಸಲಾಗಿದೆ.
ಅರ್ಜಿಗಳನ್ನು ಕಂಪ್ಯೂಟರ್ ಮೂಲಕ ಒಂದೇ ಬಾರಿಗೆ ಸಿದ್ಧಪಡಿಸಿ, ಒಟ್ಟಿಗೆ ಸಲ್ಲಿಸಿರಬಹುದು ಎಂಬುದನ್ನು ಇದು ಸೂಚಿಸುತ್ತದೆ ಎಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಆರೋಪವನ್ನು ಆ ಸಮಯದಲ್ಲಿ ‘ದಿ ವೈರ್’ ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಈ ಕುರಿತು ತನಿಖೆ ನಡೆಸಬೇಕಿದೆ.
ಭದ್ರಕ್ ಪುರಸಭೆ ಒಂದರಲ್ಲೇ ಮುಸ್ಲಿಂ ಬಹುಸಂಖ್ಯಾತ ಬೂತ್ಗಳ ಸುಮಾರು 5,000 ಮತದಾರರನ್ನು ಫಾರಂ 7 ಅರ್ಜಿಗಳ ಮೂಲಕ ಗುರಿ ಮಾಡಲಾಗಿದೆ ಎಂದು ನಾಸಿರುದ್ದೀನ್ ಖಾನ್ ಆರೋಪಿಸಿದರು. ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ, ಈ ನೈಜ ಮತದಾರರು ತಮ್ಮ ನೋಂದಾಯಿತ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದು ಸುಳ್ಳು ಮಾಹಿತಿ ನೀಡಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಯೋಜನಾಬದ್ಧವಾಗಿ ಫಾರಂ 7 ಅರ್ಜಿಗಳನ್ನು ತುಂಬಿದ್ದಾರೆ ಎಂದು ಅವರು ಹೇಳಿದ್ದಾರೆ.
Residents of Bhat mohalla in Bhadrak constituency. Photo: Madhu Sudan Chatterjee
*ಮರು ತನಿಖೆ ನಡೆಸುವಂತೆ ಬಿಎಲ್ಒಗಳಿಗೆ ಸೂಚನೆ
ಈ ಮತದಾರರ ಮನೆಗಳಿಗೆ ಮತ್ತೆ ಭೇಟಿ ನೀಡಿ ಮರು ತನಿಖೆ ನಡೆಸುವಂತೆ ಬಿಎಲ್ಒಗಳಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಅರ್ಜಿಗಳಲ್ಲಿರುವ ಮಾಹಿತಿ ತಪ್ಪಾಗಿದೆ ಎಂದು ಈಗಾಗಲೇ ಹಲವು ಬಿಎಲ್ಒಗಳು ತಿಳಿಸಿದ್ದಾರೆ ಎಂದು ನಿವಾಸಿಗಳು ಹೇಳುತ್ತಾರೆ. ಆದರೂ ಪರಿಶೀಲನಾ ಪ್ರಕ್ರಿಯೆ ಮುಂದುವರಿದಿದ್ದು, ಬಿಎಲ್ಒಗಳು ಮತ್ತು ಸಂಕಷ್ಟಕ್ಕೆ ಒಳಗಾದ ಮತದಾರರು ಪದೇ ಪದೇ ಪರಿಶೀಲನೆಗೆ ಒಳಪಡುವಂತಾಗಿದೆ.
ಭದ್ರಕ್ನ ಅನೇಕ ಬಡ ಮುಸ್ಲಿಂ ಕುಟುಂಬಗಳಿಗೆ, ಎಸ್ಐಆರ್ ಪ್ರಕ್ರಿಯೆಯು ಕೇವಲ ಒಂದು ಸರ್ಕಾರಿ ಪರಿಶೀಲನೆಯಾಗಿ ಉಳಿದಿಲ್ಲ. ತಾವು ನಿಯಮಿತವಾಗಿ ವಾಸಿಸುತ್ತಿರುವ ಸ್ಥಳದಲ್ಲೇ ಇದ್ದೇವೆ ಎಂಬುದನ್ನು ಸಾಬೀತುಪಡಿಸಲು ಮತ್ತು ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಅವರು ಪ್ರತಿದಿನ ಹೋರಾಡುವಂತಾಗಿದೆ.
ಈ ಆರೋಪಗಳ ಕುರಿತು ದಿ ವೈರ್, ಭದ್ರಕ್ ಎಸ್ಪಿ ಮನೋಜ್ ರಾವತ್ ಅವರನ್ನು ಸಂಪರ್ಕಿಸಿದಾಗ, ಉಪ ಜಿಲ್ಲಾಧಿಕಾರಿ ಈ ವಿಷಯವನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು. ಫಾರಂ 7 ಅರ್ಜಿಗಳಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪಿಗಳ ವಿರುದ್ಧ ಪೊಲೀಸ್ ಆಡಳಿತ ಏನು ಕ್ರಮ ಕೈಗೊಂಡಿದೆ ಎಂದು ನಿರ್ದಿಷ್ಟವಾಗಿ ಕೇಳಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಮತ್ತೊಂದೆಡೆ, ಭದ್ರಕ್ ಉಪ ಜಿಲ್ಲಾಧಿಕಾರಿ ಸೌರವ್ ಚಕ್ರವರ್ತಿ ದಿ ವೈರ್ಗೆ ಪ್ರತಿಕ್ರಿಯಿಸಿ, ಆಡಳಿತವು ಈ ವಿಷಯವನ್ನು ಪರಿಶೀಲಿಸುತ್ತಿದ್ದು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆದರೆ, ಸೆಪ್ಟೆಂಬರ್ 21ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಈ ಭರವಸೆಗಳು ಮತದಾರರಲ್ಲಿರುವ ಆತಂಕವನ್ನು ಕಡಿಮೆ ಮಾಡಿಲ್ಲ. ಅಂತಿಮ ಪಟ್ಟಿ ಬಂದಾಗ ತಮ್ಮ ಹೆಸರುಗಳು ಇರುತ್ತವೆಯೋ ಇಲ್ಲವೋ ಎಂಬ ತೀವ್ರ ಆತಂಕದಲ್ಲೇ ಭದ್ರಕ್ನ ಸಾವಿರಾರು ಮತದಾರರು ದಿನ ದೂಡುತ್ತಿದ್ದಾರೆ.
*ಸಿಇಒಗೆ ಬಿಜೆಡಿ ಮನವಿ ಸಲ್ಲಿಕೆ
ಫಾರಂ 7 ದುರುಪಯೋಗದ ಕುರಿತು ಬಿಜೆಡಿಯ ರಾಜ್ಯ ಅಲ್ಪಸಂಖ್ಯಾತರ ಘಟಕದ ನಿಯೋಗವು ಭುವನೇಶ್ವರದಲ್ಲಿ ಒಡಿಶಾದ ಮುಖ್ಯ ಚುನಾವಣಾಧಿಕಾರಿಗೆ (ಸಿಇಒ) ಮನವಿ ಪತ್ರ ಸಲ್ಲಿಸಿ ತನ್ನ ಕಳವಳವನ್ನು ವ್ಯಕ್ತಪಡಿಸಿದೆ.
ಆಗಸ್ಟ್ 19ರಂದು ಹಕ್ಕುಗಳು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿ ಮುಗಿದ ನಂತರ ಸಲ್ಲಿಕೆಯಾದ ಎಲ್ಲಾ ಫಾರಂ 7 ಅರ್ಜಿಗಳನ್ನು ವಿಶೇಷವಾಗಿ ಪರಿಶೀಲಿಸಬೇಕು, ಒಟ್ಟಾರೆಯಾಗಿ ಅರ್ಜಿಗಳನ್ನು ಸಲ್ಲಿಸಿದ ಪ್ರಕರಣಗಳನ್ನು ಗುರುತಿಸಬೇಕು ಮತ್ತು ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ಸ್ವರೂಪವನ್ನು ಪರಿಶೀಲಿಸಬೇಕು ಎಂದು ನಿಯೋಗ ಆಗ್ರಹಿಸಿದೆ.
A delegation of the BJD’s minority cell meets the Odisha CEO on September 2, 2026. Photo by arrangement.
ಸೌಜನ್ಯ: thewire.in






