GST ದರ ಇಳಿಕೆಯ ಲಾಭ ಕ್ಷೀಣಿಸುತ್ತಿದೆಯೇ?: FMGC ಉತ್ಪನ್ನಗಳ ಬೆಲೆ ಶೇ. 5ರಷ್ಟು ಏರಿಕೆ; ಇತ್ತೀಚಿನ ಬೆಲೆ ಏರಿಕೆಗೆ ಕಾರಣಗಳೇನು?

ಸಾಂದರ್ಭಿಕ ಚಿತ್ರ | Photo Credit : freepik
GST ಲಾಭದ ಹಂತ ಇದೀಗ ಮುಗಿದಿರುವುದರಿಂದ ಕಂಪನಿಗಳು ಮತ್ತೊಮ್ಮೆ ಬೆಲೆ ನಿಗದಿ ಅಧಿಕಾರವನ್ನು ಚಲಾಯಿಸಲು ಪ್ರಾರಂಭಿಸಿವೆ. FMCG ಕಂಪನಿಗಳು ಅಂದರೆ ವೇಗವಾಗಿ ಮಾರಾಟವಾಗುವ ಆಹಾರ, ಪಾನೀಯ ಮತ್ತು ವೈಯಕ್ತಿಕ ಆರೈಕೆಯಂತಹ ಗ್ರಾಹಕರ ಸರಕುಗಳ ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿವೆ ಎಂದು ವರದಿಯಾಗಿದೆ.
ಕಳೆದ ಸೆಪ್ಟೆಂಬರ್ ನಲ್ಲಿ GST ಕಡಿತವು ಅಲ್ಪ ಸಮಯದವರೆಗೆ ಬೆಲೆಗಳನ್ನು ಸ್ಥಿರವಾಗಿಡಲು ಸಹಾಯ ಮಾಡಿತ್ತು. ಆದರೆ ಇದೀಗ ಸುಮಾರು ಆರು ತಿಂಗಳ ನಂತರ ಗ್ರಾಹಕ ಸರಕು ತಯಾರಕರು ಬೆಲೆಗಳನ್ನು ಶೇ 5ರಷ್ಟು ಹೆಚ್ಚಿಸುತ್ತಿದ್ದಾರೆ. ಹೆಚ್ಚುತ್ತಿರುವ ಸರಕು ವೆಚ್ಚಗಳು ಮತ್ತು ರೂಪಾಯಿ ಬೆಲೆ ಕುಸಿಯುತ್ತಿರುವುದರಿಂದ ಗ್ರಾಹಕ ಸರಕು ತಯಾರಕರ ಮೇಲೆ ಒತ್ತಡವಿದೆ ಎಂದು Times of India ವರದಿ ಮಾಡಿದೆ.
ಈ ತ್ರೈಮಾಸಿಕದಲ್ಲಿ ಅಂಗಡಿಗಳಲ್ಲಿ ಇದರ ಪರಿಣಾಮ ಗೋಚರಿಸುತ್ತಿದೆ. ಡಿಟರ್ಜೆಂಟ್ ಗಳು, ಹೇರ್ ಆಯಿಲ್ ಗಳು, ಚಾಕೋಲೇಟ್ ಗಳು, ನೂಡಲ್ಸ್ ಮತ್ತು ಉಪಹಾರ ಧಾನ್ಯಗಳು ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಆಯ್ದ ಪ್ಯಾಕ್ಗಳು ಹೆಚ್ಚಿನ ಬೆಲೆಯೊಂದಿಗೆ ಕಪಾಟಿಗೆ ತಲುಪುತ್ತಿವೆ ಎಂದು ವಿತರಕರು ಹೇಳುತ್ತಿದ್ದಾರೆ. ಅನೇಕ ಗ್ರಾಹಕ ವಿಭಾಗಗಳಲ್ಲಿ ಜಿಎಸ್ಟಿ ದರಗಳನ್ನು ಕಡಿಮೆ ಮಾಡಿದ ನಂತರ ಕಂಪನಿಗಳು ತೆರಿಗೆ ಪ್ರಯೋಜನಗಳನ್ನು ತ್ವರಿತವಾಗಿ ಗ್ರಾಹಕರಿಗೆ ತಲುಪಿಸಿದ್ದವು. ಆಂಟಿ ಪ್ರಾಫಿಟಿಂಗ್ (ಅತಿ ಲಾಭ ಮಾಡಿಕೊಳ್ಳುವ ವಿರುದ್ಧ) ನಿಯಮಗಳ ಅಡಿಯಲ್ಲಿ ತನಿಖೆಗೆ ಒಳಗಾಗುವ ಭಯದಿಂದ ಸಂಸ್ಥೆಗಳು ಎಚ್ಚರಿಕೆಯ ನಿರ್ಧಾರಗಳನ್ನು ಕೈಗೊಂಡಿದ್ದವು. ಜಿಎಸ್ಟಿ ಲಾಭದ ಹಂತ ಇದೀಗ ಮುಗಿದಿರುವುದರಿಂದ ಕಂಪನಿಗಳು ಮತ್ತೊಮ್ಮೆ ಬೆಲೆ ನಿಗದಿ ಅಧಿಕಾರವನ್ನು ಚಲಾಯಿಸಲು ಪ್ರಾರಂಭಿಸಿವೆ.
ರಿಯಲ್ ಜ್ಯೂಸ್ ಮತ್ತು ವಾಟಿಕಾ ಹೇರ್ ಆಯಿಲ್ ಉತ್ಪಾದಿಸುವ ಕಂಪನಿಯಾದ ಡಾಬರ್ ಇಂಡಿಯಾದ ಮುಖ್ಯಕಾರ್ಯಕಾರಿ ಅಧಿಕಾರಿ ಮೋಹಿತ್ ಮಲ್ಹೋತ್ರ ಪ್ರಕಾರ, ಆಂಟಿಪ್ರಾಫಿಟಿಂಗ್ ವಿಚಾರದಿಂದಾಗಿ ಬೆಲೆ ಏರಿಕೆಯನ್ನು ತಡೆದಿದ್ದೆವು. ಕಂಪನಿ ಪ್ರಸಕ್ತ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 2ರಷ್ಟು ಬೆಲೆ ಏರಿಕೆ ಮಾಡಲಿದೆ. ಮುಂದಿನ ತ್ರೈಮಾಸಿಕದಲ್ಲೂ ಬೆಲೆ ಏರಿಸುವುದು ಮುಂದುವರಿಯಲಿದೆ.”
ಕಚ್ಚಾ ವಸ್ತುಗಳಾದ ತೈಲ, ಲೋಹಗಳು ಅಥವಾ ಆಹಾರ ಧಾನ್ಯಗಳ ಬೆಲೆ ದುಬಾರಿಯಾಗಿವೆ. ಹೀಗಾಗಿ ಕಂಪನಿಗಳು ತಮ್ಮ ವೆಚ್ಚಗಳು ಹೆಚ್ಚುತ್ತಿರುವ ಕಾರಣ ಲಾಭ ಕಾಯ್ದುಕೊಳ್ಳುವುದು ಕಷ್ಟವಾಗಿದೆ. ವಿದೇಶಿ ಕರೆನ್ಸಿಗಳ ವಿರುದ್ಧ ರುಪಾಯಿ ಮೌಲ್ಯ ಕಳೆದುಕೊಂಡು ಆಮದು ದುಬಾರಿಯಾಗಿದೆ. ಹೀಗಾಗಿ ಲಾಭಗಳಿಸುವ ಸಾಮರ್ಥ್ಯ ಕುಗ್ಗುತ್ತಿರುವಾಗ ಸರಕುಗಳ ವೆಚ್ಚ ಹೆಚ್ಚಾಗಿ ಉದ್ಯಮ ಕಷ್ಟದಲ್ಲಿದೆ.
ಇತ್ತೀಚೆಗೆ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಸಲ್ಫರ್ ಮತ್ತು ಎನ್ ಪ್ಯಾರಾಫಿನ್ಗಳಂತಹ ಸಂಬಂಧಿತ ಸರಕುಗಳ ವೆಚ್ಚ ಏರಿದೆ. ಕಳೆದ ಒಂದು ವರ್ಷದಲ್ಲಿ ತೆಂಗಿನ ಎಣ್ಣೆ ದರ ದುಪ್ಪಟ್ಟಾಗಿದೆ. ಈ ನಡುವೆ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದ್ದು, ಡಾಲರ್ ವಿರುದ್ಧ 92.02 ರೂ. ಗೆ ತಲುಪಿದೆ. ಹೀಗಾಗಿ ಆಮದು ವೆಚ್ಚ ಏರಿದೆ. “ಉಪಹಾರದಲ್ಲಿ ಬಳಸುವ ಧಾನ್ಯಗಳು, ಮುಸ್ಲಿ, ಓಟ್ಸ್ ಮತ್ತು ಬಾದಾಮಿಗಳಂತಹ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ರೂಪಾಯಿ ಮೌಲ್ಯ ಕುಸಿತದಿಂದ ಆಮದು ವೆಚ್ಚವನ್ನು ಏರಿಸಿದೆ” ಎನ್ನುತ್ತಾರೆ ಬ್ಯಾಗ್ರಿಸ್ ಕಂಪನಿಯ ನಿರ್ದೇಶಕ ಆದಿತ್ಯ ಬ್ಯಾಗ್ರಿ.
ಗೃಹೋಪಯೋಗಿ ಮತ್ತು ವೈಯಕ್ತಿಕ ಆರೈಕೆಯ ವಸ್ತುಗಳ ತಯಾರಿಕೆ ಉದ್ಯಮ ಕಚ್ಚಾ ವಸ್ತುಗಳ ಬೆಲೆಯೇರಿಕೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಈ ಕಂಪನಿಗಳು ದ್ರವ ಪ್ಯಾರಾಫಿನ್ ಮತ್ತು ಸರ್ಫಕ್ಟಂಟ್ಗಳಂತಹ ಸರಕುಗಳ ಮೇಲೆ ಅವಲಂಬಿಸಿವೆ. ಈ ಸರಕುಗಳ ಬೆಲೆ ಕಚ್ಚಾ ತೈಲ ಉತ್ಪನ್ನಗಳ ಮೇಲೆ ಅವಲಂಬಿತವಾಗಿವೆ. “ಶೀಘ್ರದಲ್ಲೇ ಗೃಹ ಮತ್ತು ವೈಯಕ್ತಿಕ ಆರೈಕೆಯ ವಸ್ತುಗಳ ಬೆಲೆ ಏರಲಿದೆ. ಹೆಚ್ಚಿದ ಬೆಲೆಯ ಟ್ಯಾಗ್ಗಳೊಂದಿಗೆ ಪ್ಯಾಕ್ಗಳು ಈಗಾಗಲೇ ಮಾರುಕಟ್ಟೆಗೆ ಬರುತ್ತಿವೆ ಮತ್ತು ಇನ್ನಷ್ಟು ಮುಂದೆ ಬರಲಿವೆ” ಎಂದು ಹಿಂದೂಸ್ತಾನ್ ಯುನಿಲಿವರ್ ನ ಮುಖ್ಯ ಹಣಕಾಸು ಅಧಿಕಾರಿ ನಿರಂಜನ್ ಗುಪ್ತಾ ಕಳೆದ ವಾರ ಹೂಡಿಕೆದಾರರ ಸಭೆಯಲ್ಲಿ ಹೇಳಿದ್ದಾರೆ. ಹೀಗಾಗಿ ಸರ್ಫ್ ಎಕ್ಸೆಲ್, ರಿನ್, ವಿಮ್ ಮತ್ತು ಡೊಮೆಕ್ಸ್ನಂತಹ ವಸ್ತುಗಳ ಬೆಲೆ ಏರಲಿದೆ.
ಟಾಟಾ ಗ್ರಾಹಕ ಉತ್ಪನ್ನಗಳಲ್ಲಿ ಚಹಾ ಬೆಲೆಗಳು ಏರುವ ಸಾಧ್ಯತೆಯಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಸ್ವಲ್ಪ ಬೆಲೆ ಏರಿಸಲಾಗಿದೆ.
FMCG ಕಂಪನಿಗಳು (ವೇಗವಾಗಿ ಮಾರಾಟವಾಗುವ ಆಹಾರ, ಪಾನೀಯ ಮತ್ತು ವೈಯಕ್ತಿಕ ಆರೈಕೆಯಂತಹ ಗ್ರಾಹಕರ ಸರಕುಗಳು) ಮೂರನೇ ತ್ರೈಮಾಸಿಕದಲ್ಲಿ ಶೇ 9ರಷ್ಟು ಲಾಭ ಗಳಿಸಿವೆ. ಕಂಪನಿಗಳು ಹೆಚ್ಚು ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸಿವೆ. ಆದರೆ ಹೆಚ್ಚಿನ ವೆಚ್ಚಗಳಿಂದಾಗಿ ಅವುಗಳ ಲಾಭಾಂಶವು ಗಮನಾರ್ಹವಾಗಿ ಸುಧಾರಣೆಯಾಗಲಿಲ್ಲ. ಬಿಸ್ಕತ್ತು, ನೂಡಲ್ಸ್ ಮತ್ತು ಸ್ನ್ಯಾಕ್ ಆಹಾರಗಳಲ್ಲಿ ಜಿಎಸ್ಟಿ ಕಡಿತದ ನೆರವಿನಿಂದ ವರ್ಷದಿಂದ ವರ್ಷಕ್ಕೆ ಶೇ 6ರಷ್ಟು ಮಾರಾಟ ಗಾತ್ರ ಹೆಚ್ಚಾಗಿದೆ.







