ದಿಲ್ಲಿಯಲ್ಲಿ ಆರುಪಟ್ಟು ಹೆಚ್ಚಾದ H1N1 ಪ್ರಕರಣಗಳು; ಯಾರಿಗೆ ಹೆಚ್ಚು ಸಮಸ್ಯೆ? ಯಾರು ಜಾಗರೂಕತೆ ವಹಿಸಬೇಕು?

ಸಾಂದರ್ಭಿಕ ಚಿತ್ರ
ದೀರ್ಘಕಾಲೀನ ಅನಾರೋಗ್ಯ ಪೀಡಿತರು ಜ್ವರದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಮತ್ತು ರೋಗಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಉಸಿರಾಟದ ಸಮಸ್ಯೆ, ಎದೆನೋವು, ತೀವ್ರ ದೌರ್ಬಲ್ಯ, ತುಟಿ ಅಥವಾ ಮುಖ ನೀಲಿಗಟ್ಟಿರುವುದು, ಡಿಹೈಡ್ರೇಶನ್ ಅಥವಾ ರೋಗಲಕ್ಷಣಗಳು ಹಠಾತ್ತನೆ ತೀವ್ರವಾದರೆ ವೈದ್ಯರನ್ನು ಕಾಣಬೇಕು.
ದಿಲ್ಲಿಯಲ್ಲಿ H1N1 ಇನ್ಫ್ಲ್ಯೂಯೆನ್ಸಾ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿರುವುದು ವೈದ್ಯರ ಕಳವಳಕ್ಕೆ ಕಾರಣವಾಗಿದೆ. ದಿಲ್ಲಿಯಲ್ಲಿ ಹಿಂದಿನ ವರ್ಷದ 229 ಪ್ರಕರಣಗಳಿಗೆ ಹೋಲಿಸಿದರೆ ಈ ವರ್ಷ 1,344 H1N1 ಪ್ರಕರಣಗಳು ದಾಖಲಾಗಿವೆ. ಬಹುತೇಕ ಆರೋಗ್ಯವಂತ ಮಂದಿ H1N1 ಸೋಂಕು ತಗಲಿದರೂ ಗುಣವಾಗುತ್ತಿದ್ದಾರೆ. ಆದರೆ ದೀರ್ಘಕಾಲೀನ ಅನಾರೋಗ್ಯ ಪೀಡಿತರು ಹದಗೆಡುತ್ತಿರುವ ಜ್ವರದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಮತ್ತು ರೋಗಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.
►H1N1 ರೋಗವೆಂದರೇನು?
H1N1 ಎನ್ನುವುದು ಉಸಿರಾಟದ ಕಾಯಿಲೆಗೆ ಕಾರಣವಾಗುವ ಇನ್ಫ್ಲೂಯೆನ್ಸಾ A ವೈರಸ್ ನ ಉಪವಿಭಾಗವಾಗಿದೆ. 2009ರ ಸಾಂಕ್ರಾಮಿಕದ ಸಮಯದಲ್ಲಿ ಇದನ್ನು ‘ಸ್ವೈನ್ ಫ್ಲೂ’ (ಹಂದಿ ಜ್ವರ) ಎಂದೇ ವ್ಯಾಪಕವಾಗಿ ಉಲ್ಲೇಖಿಸಲಾಗುತ್ತಿತ್ತು. ಆದರೆ ಈ H1N1 ವೈರಸ್ ಇದೀಗ ಸೀಸನಲ್ ವೈರಸ್ ಗಳಲ್ಲಿ ಒಂದಾಗಿ ಹರಡುತ್ತಿದೆ.
ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡುವಾಗ ಉಸಿರಾಟದ ಹನಿಗಳ ಮೂಲಕ ಮುಖ್ಯವಾಗಿ ಹರಡುತ್ತದೆ. ಜನರು ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸಿದ ನಂತರ ತಮ್ಮ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಸ್ಪರ್ಶಿಸಿದರೆ ಕೂಡ ಹರಡಬಹುದು. ಕೆಲವರು ಒಂದೆರಡು ದಿನಗಳಲ್ಲಿ ಚೇತರಿಸಿಕೊಂಡರೆ, ಇನ್ನು ಕೆಲವರಿಗೆ ಆಸ್ಪತ್ರೆಗೆ ದಾಖಲಾಗಬೇಕಾಗಿ ಬರಬಹುದು.
►H1N1 ರೋಗದ ಸಾಮಾನ್ಯ ಲಕ್ಷಣಗಳು
ಈ ರೋಗದ ಲಕ್ಷಣಗಳು ಉಸಿರಾಟದ ಸೋಂಕಿನಂತೆ ಕಾಣಿಸಬಹುದು. ಆದರೆ ಸಾಮಾನ್ಯ ಲಕ್ಷಣಗಳಲ್ಲಿ ಇವುಗಳು ಸೇರಿವೆ:
• ಜ್ವರ ಅಥವಾ ಶೀತ
• ಕೆಮ್ಮು, ನಿರಂತರವಾಗಿ ಇರಬಹುದು
• ಗಂಟಲು ನೋವು
• ತಲೆನೋವು
• ದೇಹ ಅಥವಾ ಸ್ನಾಯು ನೋವು
• ತೀವ್ರ ಆಯಾಸ ಅಥವಾ ದೌರ್ಬಲ್ಯ
• ಸ್ರವಿಸುವ ಅಥವಾ ಬ್ಲಾಕ್ ಆಗಿರುವ ಮೂಗು
• ಹಸಿವೆ ಇಲ್ಲದಿರುವುದು
ಕೆಲವರು ವಾಕರಿಕೆ, ವಾಂತಿ ಅಥವಾ ಅತಿಸಾರವನ್ನೂ ಎದುರಿಸಬಹುದು. ಇಂತಹ ಲಕ್ಷಣಗಳು ಮಕ್ಕಳಲ್ಲಿ ಹೆಚ್ಚಾಗಿರುತ್ತವೆ. ಉಸಿರಾಟದ ಸಮಸ್ಯೆ, ಎದೆನೋವು ಅಥವಾ ಹದಗೆಡುವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
►ಹೆಚ್ಚಿನ ಅಪಾಯ ಯಾರಿಗಿದೆ?
H1N1 ಯಾರ ಮೇಲೆ ಬೇಕಾದರೂ ಪರಿಣಾಮ ಬೀರಬಹುದು. ಆದರೆ ಕೆಲವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಬಹುದು. ಮಕ್ಕಳು ಮತ್ತು ದೀರ್ಘಕಾಲೀನ ಅನಾರೋಗ್ಯ ಪೀಡಿತರು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಉದಾಹರಣೆಗೆ,
• ಚಿಕ್ಕ ಮಕ್ಕಳು, ವಿಶೇಷವಾಗಿ ಹಸುಗೂಸುಗಳು
• ವೃದ್ಧರು
• ಗರ್ಭಿಣಿ ಮಹಿಳೆಯರು
• ಅಸ್ತಮಾ ಅಥವಾ ಇತರ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳಿರುವ ಮಂದಿ
• ಹೃದ್ರೋಗ ಇರುವವರು
• ಮಧುಮೇಹ ಅಥವಾ ದೀರ್ಘಕಾಲೀನ ಅನಾರೋಗ್ಯ ಪೀಡಿತರು
• ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುವವರು
• ತೀವ್ರ ಬೊಜ್ಜು ಹೊಂದಿರುವವರು ಮೊದಲಾದವರು ಹೆಚ್ಚು ಸಮಸ್ಯೆ ಎದುರಿಸಬಹುದು.
►H1N1ನಿಂದ ರಕ್ಷಣೆ ಹೇಗೆ?
• ಸರಳ ಮುನ್ನೆಚ್ಚರಿಕೆಗಳಿಂದ ಇನ್ಫ್ಲೂಯೆನ್ಸಾ ತಗಲುವ ಮತ್ತು ಹರಡುವ ಅಪಾಯ ಕಡಿಮೆ ಮಾಡಬಹುದು.
• ಸೀಸನಲ್ ಜ್ವರ ಲಸಿಕೆ ಪಡೆಯಿರಿ. ಲಸಿಕೆಯು ಹರಡುತ್ತಿರುವ ಇನ್ಫ್ಲೂಯೆನ್ಸಾ ತಳಿಗಳಿಂದ ರಕ್ಷಣೆ ಒದಗಿಸುತ್ತದೆ. ಹೆಚ್ಚಿನ ಅಪಾಯದಲ್ಲಿರುವವರಿಗೆ ಲಸಿಕೆ ಮುಖ್ಯವಾಗಿದೆ.
• ಕೈಗಳನ್ನು ನಿಯಮಿತವಾಗಿ ತೊಳೆಯಿರಿ. ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸಿ ತೊಳೆಯಿರಿ.
• ಕೆಮ್ಮು ಮತ್ತು ಸೀನುವಾಗ ಅಡ್ಡ ಹಿಡಿಯಿರಿ. ನಿಮ್ಮ ಕೈಗಳನ್ನು ಅಡ್ಡ ಹಿಡಿಯುವ ಬದಲಾಗಿ ಟಿಶ್ಯೂ ಅಥವಾ ಮೊಣಕೈ ಬಳಸಿ.
• ಅನಾರೋಗ್ಯದ ಸಂದರ್ಭದಲ್ಲಿ ನಿಕಟ ಸಂಪರ್ಕ ಬೇಡ. ಜ್ವರದಂತಹ ಲಕ್ಷಣಗಳಿದ್ದಾಗ ಇತರರಿಂದ ದೂರವಿರಿ.
• ಅಗತ್ಯವಿದ್ದರೆ ಮಾಸ್ಕ್ ಧರಿಸಿ. ಉಸಿರಾಟದಿಂದ ಪ್ರಸರಣ ಕಡಿಮೆಯಾಗುತ್ತದೆ. ವಿಶೇಷವಾಗಿ ಜನದಟ್ಟಣೆ ಅಥವಾ ಹೆಚ್ಚು ಗಾಳಿಯಾಡದ ಸಂದರ್ಭದಲ್ಲಿ ಈ ಮುಂಜಾಗರೂಕತೆ ಉತ್ತಮ.
• ನಿಮ್ಮ ಮುಖ ಸ್ಪರ್ಶಿಸಬೇಡಿ. ತೊಳೆಯದ ಕೈಗಳಿಂದ ನಿಮ್ಮ ಕಣ್ಣು, ಮೂಗು ಮತ್ತು ಬಾಯಿ ಸ್ಪರ್ಶಿಸದೆ ಇರಲು ಪ್ರಯತ್ನಿಸಿ.
• ಸ್ವಯಂ ಆಂಟಿಬಯಾಟಿಕ್ ತೆಗೆದುಕೊಳ್ಳಬೇಡಿ. ಇನ್ಫ್ಲೂಯೆನ್ಸಾ ವೈರಸ್ಗಳಿಗೆ ಆಂಟಿಬಯಾಟಿಕ್ ಸಾಕಾಗುವುದಿಲ್ಲ.
►ಯಾವಾಗ ವೈದ್ಯರನ್ನು ಕಾಣಬೇಕು?
ಸೌಮ್ಯ ರೋಗಲಕ್ಷಣಗಳಿದ್ದರೆ ವಿಶ್ರಾಂತಿ, ದ್ರವಾಹಾರ ಮತ್ತು ಸೂಕ್ತ ವೈದ್ಯಕೀಯ ಸಲಹೆ ಪಡೆದು ಚೇತರಿಸಿಕೊಳ್ಳಬಹುದು. ಆದರೆ ಜ್ವರ ಅಥವಾ ಉಸಿರಾಟದ ಲಕ್ಷಣ ಮುಂದುವರಿದಲ್ಲಿ ವೈದ್ಯಕೀಯ ಆರೈಕೆ ಅಗತ್ಯ. ಉಸಿರಾಟದ ಸಮಸ್ಯೆ, ಎದೆನೋವು, ತೀವ್ರ ದೌರ್ಬಲ್ಯ, ತುಟಿ ಅಥವಾ ಮುಖ ನೀಲಿಗಟ್ಟಿರುವುದು, ಡಿಹೈಡ್ರೇಶನ್ ಅಥವಾ ರೋಗಲಕ್ಷಣಗಳು ಹಠಾತ್ತನೆ ತೀವ್ರವಾದರೆ ವೈದ್ಯರನ್ನು ಕಾಣಬೇಕು.
ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮಾಹಿತಿಯಿಂದ ಬರೆಯಲಾಗಿದೆ. ವೈದ್ಯಕೀಯ ಸಲಹೆಗಳಿಗೆ ಪರ್ಯಾಯವಲ್ಲ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ವೃತ್ತಿಪರ ತಜ್ಞ ವೈದ್ಯರನ್ನು ಸಂಪರ್ಕಿಸಿ.






