ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಲೇ ಅವರ ಮತ ಸೆಳೆಯುವ ಹುನ್ನಾರ
► ಮುಸ್ಲಿಮರಿಗೆ ಈ ಬಾರಿ ಎಷ್ಟು ಟಿಕೆಟ್ ಕೊಡುತ್ತೆ ಬಿಜೆಪಿ ? ► ಮುಸ್ಲಿಮರನ್ನು ವಿನಾ ಕಾರಣ ದ್ವೇಷಿಸುವ ಭಕ್ತರಿಗೆ ಕೈಕೊಟ್ಟ ಮೋದಿಜಿ

ಸಾಂದರ್ಭಿಕ ಚಿತ್ರ
ಒಂದು ಕಡೆ ಮುಸ್ಲಿಮರ ವಿರುದ್ಧ ನಿರಂತರ ದ್ವೇಷ ಕಾರುವುದರಲ್ಲಿ, ದ್ವೇಷ ಹರಡುವುದರಲ್ಲಿ ಬಿಜೆಪಿ ನಾಯಕರು, ಬೆಂಬಲಿಗರು , ಸಂಘ ಪರಿವಾರದವರು ಬಿಝಿಯಾಗಿದ್ದರೆ, ಮತ್ತೊಂದು ಕಡೆಯಿಂದ ಅದೇ ಬಿಜೆಪಿಯ ವರಿಷ್ಠರು ಮುಸ್ಲಿಂ ಸಮುದಾಯದಲ್ಲಿ ಮೋದಿ ಮಿತ್ರರನ್ನು ಹುಡುಕುತ್ತಿದ್ದಾರೆ.
ಇಲ್ಲಿ ಈಶ್ವರಪ್ಪ, ಯತ್ನಾಳ್, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ತರದವರು ಮುಸ್ಲಿಂ ದ್ವೇಷವನ್ನೇ ತಮ್ಮ ರಾಜಕೀಯ ಬಂಡವಾಳ ಮಾಡಿಕೊಂಡಿದ್ದರೆ ಅಲ್ಲಿ ಮೋದೀಜಿ ಮುಸ್ಲಿಂ ಮಿತ್ರರ ಹೆಗಲಿಗೆ ಕೈ ಹಾಕಿ ನಡೆಯಲು ಹೊರಟಿದ್ದಾರೆ. ಹೌದು, ಬಿಜೆಪಿಗೆ ಈಗ ಮುಸ್ಲಿಮರಲ್ಲಿ ಮೋದಿ ಮಿತ್ರರು ಬೇಕಾಗಿದ್ದಾರೆ.
ಹೇಗಾದರೂ ಮುಂದಿನ ಲೋಕಸಭಾ ಚುನಾವಣೆಯನ್ನು ಗೆದ್ದು, ಸತತ ಮೂರನೇ ಅವಧಿಗೆ ಪ್ರಧಾನಿಯಾಗುವ ಗುರಿಯೊಂದಿಗೆ ಹೊರಟಿರುವ ಮೋದಿ ಅದಕ್ಕಾಗಿ ಹೂಡಿರುವ ಹಲವು ತಂತ್ರಗಳಲ್ಲಿ ಇದೂ ಒಂದಾಗಿದೆ. ಪಂಚರಾಜ್ಯ ಚುನಾವಣೆ ಹಾಗು ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರ ಮತ ಸೆಳೆಯಲು ಬಿಜೆಪಿ ಹೊರಟಿದೆ. ಅದಕ್ಕಾಗಿ ನಾನಾ ಕಸರತ್ತು ನಡೀತಿದೆ.
ಮುಸ್ಲಿಂ ಸಮುದಾಯದಲ್ಲಿನ ಪ್ರಮುಖರನ್ನು ಮೋದಿ ಮಿತ್ರ ಪಟ್ಟಿಗೆ ಸೇರಿಸಿಕೊಂಡು, ಅವರು ತಮ್ಮ ಆಪ್ತ ವಲಯದಲ್ಲಿ ಮೋದಿ ಪರ ಪ್ರಚಾರ ಮಾಡುವಂತೆ ಬಳಸಿಕೊಳ್ಳುವುದು ಈಗ ನಡೆಯುತ್ತಿದೆ. ಇದು ವಿಚಿತ್ರ, ವಿಪರ್ಯಾಸ ಎನ್ನಿಸುವುದಿಲ್ಲವೆ ?
ಒಂದು ಕಡೆ ಮೋದಿ, ಅಮಿತ್ ಶಾ , ಆರೆಸ್ಸೆಸ್ ಮಾತು ಕೇಳಿ ಅವರ ಕಟ್ಟಾ ಬೆಂಬಲಿಗರು ಮುಸ್ಲಿಮರ ವಿರುದ್ಧ ದ್ವೇಷ ಕಾರೋದು , ಸುಳ್ಳು ಹರಡೋದು, ಬಹಿಷ್ಕಾರ ಹಾಕೋದು, ಹಿಂಸೆಗೆ ಪ್ರಚೋದನೆ ನೀಡೋದು, ಇನ್ನೊಂದು ಕಡೆ ಮೋದೀಜಿ ಮುಸ್ಲಿಮರನ್ನು ಮಿತ್ರರಾಗಿ ಮಾಡಿಕೊಳ್ಳೋದು - ಈ ದ್ವಂದ್ವವನ್ನು ಜನ ನೋಡೋದಿಲ್ವ ?
ಚುನಾವಣಾ ಲಾಭಕ್ಕಾಗಿ ಈಗ ತಮ್ಮನ್ನೇ ನಂಬಿದ ಭಕ್ತರನ್ನೂ ಮೋದಿ ಹಾಗು ಬಿಜೆಪಿ ಕೈಬಿಟ್ಟ ಹಾಗೆ ಆಯ್ತಲ್ವಾ ? ಮೋದಿ ಹಾಗು ಬಿಜೆಪಿಗಾಗಿ ಮುಸ್ಲಿಮರ ವಿರುದ್ಧ ಪ್ರತಿದಿನ ದ್ವೇಷ ಕಾರುವ ಟಿವಿ ಆಂಕರ್ ಗಳು, ಬಿಜೆಪಿ ನಾಯಕರು, ಐಟಿ ಸೆಲ್ ಬೆಂಬಲಿಗರು ಈಗೇನು ಮಾಡ್ತಾರೆ ?. ಮೋದೀಜಿ ಹಾಗು ಸಂಘ ಪರಿವಾರದ ಮಾತು ಕೇಳಿ ಕೇಳಿ ಇರೋ ಕೆಲಸ ಬಿಟ್ಟು ವಾಟ್ಸ್ ಆಪ್ ನಲ್ಲಿ, ಫೇಸ್ ಬುಕ್ ನಲ್ಲಿ ಮುಸ್ಲಿಂ ದ್ವೇಷ ಹರಡುತ್ತಿರುವ ಮೋದಿ ಬೆಂಬಲಿಗ ಯುವಜನರಿಗೆ ಮೋದೀಜಿ ಉದ್ಯೋಗ ಹೇಗೂ ಕೊಡ್ಲಿಲ್ಲ. ಈಗ ಅವರು ಮೋದಿ ಮಿತ್ರ ಮುಸ್ಲಿಮರನ್ನು ಸ್ವಾಗತಿಸುವ ಕೆಲಸ ಮಾಡಬೇಕಾಗಿದೆ.
ಉತ್ತರಾಖಂಡದಲ್ಲಿ ಬಿಜೆಪಿಯ ಮುಸ್ಲಿಂ ಮುಖಂಡರೇ ಊರು ಬಿಡುವ ಹಾಗೆ ಸಂಘ ಪರಿವಾರ ಮಾಡಿದ್ದು ಹಾಗು ದೇಶಾದ್ಯಂತ ಹಾಗೆ ನಡೀತಾ ಇರೋದು ಬಿಜೆಪಿಯ ಸೋಗಲಾಡಿತನ ಅಲ್ಲವೇ ?. ಮುಸ್ಲಿಮರ ವಿರುದ್ಧ ಮಾತಾಡುವವರನ್ನೇ ಭಡ್ತಿ ನೀಡಿ ಬೆಳೆಸೋ ಬಿಜೆಪಿಗೆ ಮುಸ್ಲಿಮರ ಓಟು ಕೇಳುವ ನೈತಿಕತೆ ಇದೆಯೇ ?
ಈಗ ಸಡನ್ನಾಗಿ ನಮಗೆ ಮುಸ್ಲಿಮರಲ್ಲಿ ಮಿತ್ರರು ಬೇಕು ಅನ್ನೋದು ತಮ್ಮನ್ನು ನಂಬಿದ ಹಿಂದುತ್ವ ಕಾರ್ಯಕರ್ತರು, ನಿವೃತ್ತ ಅಂಕಲ್ ಆಂಟಿಗಳಿಗೂ ಬಿಜೆಪಿ ಮೋಸ ಮಾಡಿದ ಹಾಗಲ್ಲವೇ ? . ಮೋದಿ ಸಂಪುಟದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಗೂ ಅವಕಾಶ ಕೊಡದ, ಮುಸ್ಲಿಮರಿಗೆ ಟಿಕೆಟ್ ಅನ್ನೂ ಕೊಡದ ಬಿಜೆಪಿ ಈಗ ಅವರಲ್ಲಿ ಮಿತ್ರರನ್ನು ಹುಡುಕುವುದು ಎಂಥ ವಿಪರ್ಯಾಸ ಅಲ್ಲವೆ? ಈ ಆಟ ಎಷ್ಟು ದಿನ ನಡೆಯಲಿದೆ ?
ಸಂಸತ್ತಿನಲ್ಲೇ ಬಿಜೆಪಿ ಸಂಸದ ಮುಸ್ಲಿಂ ಸಂಸದನನ್ನು ಅತ್ಯಂತ ಅವಹೇಳನಕಾರಿಯಾಗಿ ಬಯ್ಯೋದು, ಅದಕ್ಕೆ ಆ ಸಂಸದನ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಳ್ಳದೇ ಇರೋದು, ಅದೇ ಸಂಸದನಿಗೆ ಪಕ್ಷದಲ್ಲಿ ಭಡ್ತಿ ಕೊಡೋದು, ಅವಹೇಳನಕ್ಕೆ ಒಳಗಾದ ಮುಸ್ಲಿಂ ಸಂಸದನ ವಿರುದ್ಧವೇ ಬಿಜೆಪಿಯ ಇನ್ನೊಬ್ಬ ಸಂಸದ ದೂರು ಕೊಡೋದು - ಇದೆಲ್ಲ ಆದಮೇಲೆ ಹೊರಗೆ ಬಂದು ಚುನಾವಣೆ ನಡೆಯೋ ರಾಜ್ಯಗಳಲ್ಲಿ ಮೋದಿ ಮಿತ್ರ ಮುಸ್ಲಿಮರನ್ನು ಹುಡುಕೋದು - ಇದ್ಯಾವ ರಾಜಕೀಯ ಸ್ವಾಮೀ ?
ನಮಗೆ ಮುಸ್ಲಿಮರ ಮತ ಬೇಡ, ಅವರ ಕೆಲಸ ಮಾಡೋದಿಲ್ಲ ಅಂತ ಬಿಜೆಪಿ ಸಂಸದರು, ಶಾಸಕರೇ ಹೇಳುತ್ತಿರುವಾಗ ದಿಲ್ಲಿಯಲ್ಲಿ ಮೋದೀಜಿ ಮುಸ್ಲಿಂ ಮಿತ್ರರ ಮೂಲಕ ಮುಸ್ಲಿಂ ಓಟು ಸೆಳೆಯಲು ಪ್ರಯತ್ನಿಸೋದು ಎಂಥಾ ರಾಜಕೀಯ ?
2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಮುಸ್ಲಿಂ ಸ್ನೇಹಿತರನ್ನು ಹುಡುಕುತ್ತಿರುವುದರ ಹಿಂದೆ ಏನೇನು ಲೆಕ್ಕಾಚಾರಗಳಿವೆ ಎಂಬುದನ್ನು ನೋಡೋಣ.
1.ಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಮೂರನೇ ಅವಧಿಗೆ ಗೆಲ್ಲುವುದಕ್ಕೆ ನೆರವಾಗಲು ಮುಸ್ಲಿಮರಲ್ಲಿ 25 ಸಾವಿರಕ್ಕೂ ಹೆಚ್ಚು ಮೋದಿ ಮಿತ್ರರನ್ನು ಬಿಜೆಪಿ ಈಗಾಗಲೇ ಹುಡುಕಿಕೊಂಡಿದೆ.
2.ಮುಸ್ಲಿಂ ಸಮುದಾಯದಲ್ಲಿನ ಶಿಕ್ಷಣತಜ್ಞರು, ಉದ್ಯಮಿಗಳು, ಧರ್ಮಗುರುಗಳು ಮತ್ತು ನಿವೃತ್ತ ಸರ್ಕಾರಿ ನೌಕರರಂತಹ ಪ್ರಮುಖರನ್ನು ಇದಕ್ಕಾಗಿ ಬಿಜೆಪಿ ಹುಡುಕುತ್ತಿದೆ. ಅವರು ಮೋದಿಯ ಪರವಾಗಿ ತಮ್ಮ ಸಮುದಾಯದ ಜನರಿಗೆ ಮನವರಿಕೆ ಮಾಡಬಲ್ಲರು ಎಂಬ ಲೆಕ್ಕಾಚಾರ ಬಿಜೆಪಿಯದ್ದು.
3.ಈ ಮೋದಿ ಮಿತ್ರರು ತಮ್ಮ ನೆರೆಹೊರೆಯವರು ಮತ್ತು ಸಂಬಂಧಿಕರಿಗೆ ಮದುವೆಗಳಂಥ ಸಮಾರಂಭದ ವೇಳೆ ಮತ್ತು ಸ್ನೇಹಿತರ ಮನೆಗಳಲ್ಲಿ ಸೇರಿದಾಗ ಮೋದಿ ಪರ ಪ್ರಚಾರ ಮಾಡುತ್ತಾರೆ. ಬಿಜೆಪಿಯ ಯೋಜನೆಗಳು ಎಲ್ಲಾ ಸಮುದಾಯಗಳಿಗೆ ಹೇಗೆ ಪ್ರಯೋಜನಕಾರಿ ಎಂಬುದರ ಕುರಿತು ಅವರು ಹೇಳುತ್ತಾರೆ. ಮೋದಿಯವರ ಆಳ್ವಿಕೆಯಲ್ಲಿ ಭಾರತ ಜಾಗತಿಕ ಶಕ್ತಿಯಾಗುತ್ತಿದೆ ಎಂದೆಲ್ಲ ಅವರು ಹೇಳಬೇಕಾಗಿದೆ.
4. ಕನಿಷ್ಠ ಶೇ.30ರಷ್ಟು ಮುಸ್ಲಿಂ ಜನಸಂಖ್ಯೆಯಿರುವ ಪ್ರಮುಖ 65 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರು ಸೇರಿದಂತೆ ಹಿಂದುಳಿದ ಮುಸ್ಲಿಂ ಮತದಾರರನ್ನು ಗೆಲ್ಲಲು ಅವರ ಮುಂದೆ ತನ್ನ ಸಾಧನೆಗಳ ಬಗ್ಗೆ ಈ ಮಿತ್ರರ ಮೂಲಕ ಹೇಳಿಸುವುದು ಬಿಜೆಪಿ ಉದ್ದೇಶ.
ಬಿಜೆಪಿಯವರು ಮತ್ತು ಬಲಪಂಥೀಯ ಪಡೆಗಳು ಮುಸ್ಲಿಂ ವಿರೋಧಿ ದ್ವೇಷ ಭಾಷಣ ಮತ್ತು ಹಿಂಸೆಯಲ್ಲಿ ತೊಡಗಿರುವುದು, ಮುಸ್ಲಿಂ ಒಡೆತನದ ಆಸ್ತಿಗಳನ್ನು ನಾಶ ಮಾಡುವುದು ಇವೆಲ್ಲ ನಡೆದಿರುವಾಗಲೇ, ಭಾರತದಲ್ಲಿ ಧಾರ್ಮಿಕ ತಾರತಮ್ಯವಿಲ್ಲ ಎಂದು ಶ್ವೇತಭವನದಲ್ಲಿ ನಿಂತು ಮೋದಿ ಹೇಳಬಲ್ಲರು.
ಅದೇ ಬಗೆಯಲ್ಲಿ ಬಿಜೆಪಿಯವರು ಈಗ ಮುಸ್ಲಿಂರ ಓಲೈಕೆಗೆ ಮುಸ್ಲಿಂ ಸಮುದಾಯದವರನ್ನೇ ಬಳಸಿಕೊಳ್ಳಲು ಮುಂದಾಗಿದ್ದು, ಈ ಅಭಿಯಾನ ಭಾರತದ 20 ಕೋಟಿ ಮುಸ್ಲಿಮರನ್ನು ಓಲೈಸುವ ದೊಡ್ಡ ತಂತ್ರವಾಗಿದೆ. ಮುಸ್ಲಿಂ ಮತಗಳನ್ನು ಸೆಳೆಯಲು ಇಂಥದೊಂದು ರಾಷ್ಟ್ರೀಯ ಅಭಿಯಾನ ಇದೇ ಮೊದಲನೆಯದೂ ಅತ್ಯಂತ ವ್ಯಾಪಕವಾದುದೂ ಆಗಿದೆ.
ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಶೇ.9ರಷ್ಟು ಮುಸ್ಲಿಂ ಮತಗಳನ್ನು ಗೆದ್ದಿರುವ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಶೇ.16ರಿಂದ 17ರಷ್ಟು, ಅಂದರೆ ಸುಮಾರು ಎರಡು ಪಟ್ಟು ಹೆಚ್ಚು ಮುಸ್ಲಿಂ ಮತಗಳನ್ನು ಗಳಿಸಲು ಈ ತಂತ್ರ ರೂಪಿಸಿದೆ.
ಒಂದೆಡೆ ಮುಸ್ಲಿಂ ದ್ವೇಷವನ್ನು ಹಿಂದುತ್ವ ಕಾರ್ಯಕರ್ತರು ಬಿತ್ತುತ್ತಿದ್ದಾರೆ. ಮತ್ತು ಅದೆಷ್ಟೋ ಅಮಾಯಕ ಮುಸ್ಲಿಂರು ಅದಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಆದರೆ, ಹಿಂದೆಯೂ ಇಂಥ ಹಿಂಸಾಚಾರ ಇತ್ತು, ಈಗ ಬಿಜೆಪಿಯ ರಾಜಕೀಯ ವಿರೋಧಿಗಳು ಬಿಜೆಪಿಯನ್ನು ಟಾರ್ಗೆಟ್ ಮಾಡಲು ಆ ವಿಚಾರವನ್ನು ಬಳಸುತ್ತಿದ್ಧಾರೆ ಎಂದು ಮುಸ್ಲಿಂ ನಾಯಕರ ಮೂಲಕವೇ ಬಿಜೆಪಿ ಹೇಳಿಸುತ್ತಿದೆ.
ಸಮಾನ ಮನಸ್ಕ ಪ್ರತಿಪಕ್ಷಗಳೆಲ್ಲ ಇಂಡಿಯಾ ಮೈತ್ರಿಕೂಟವಾಗಿರುವುದು ಒಂದೆಡೆಗಾದರೆ, ಇತ್ತೀಚಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿನ ಸೋಲು ಇನ್ನೊಂದೆಡೆ ಬಿಜೆಪಿಯನ್ನು ಚಿಂತೆಗೀಡುಮಾಡಿದೆ. ಅದರ ಹಿಂದೂ ರಾಷ್ಟ್ರೀಯತಾವಾದಿ ನೆಲೆ ಹೆಚ್ಚು ವಿರೋಧಕ್ಕೆ ತುತ್ತಾಗುತ್ತಿರುವಾಗ ಮುಸ್ಲಿಂ ಮಿತ್ರರ ಆಸರೆ ಅದಕ್ಕೆ ಮುಖ್ಯವಾಗಿಬಿಟ್ಟಿದೆ.
ಹಾಗೆಂದು, ಮುಸ್ಲಿಂರೆಲ್ಲ ಬಿಜೆಪಿಯ ಈ ಆಟವನ್ನು ನಂಬಿಬಿಡುತ್ತಾರೆ ಎಂದೇನೂ ಅಲ್ಲ. ಆದರೆ, ಬಿಜೆಪಿಯ ಸಾಧನೆ ಹಿಂದಿನ ಯಾವುದೇ ಸರ್ಕಾರಗಳಿಗಿಂತ ಹೆಚ್ಚು ಎಂದು ಬಿಂಬಿಸುವ ಯತ್ನ ನಡೆದಿದೆ. ಮುಸ್ಲಿಂರಿಗಾಗಿಯೂ ಬಜೆಪಿ ಬಹಳಷ್ಟು ಕೆಲಸಗಳನ್ನು ಮಾಡಿದೆ ಎಂದು ನಂಬಿಸುವ ಯತ್ನಗಳು ಆಗುತ್ತಿವೆ.
ಬಿಜೆಪಿ ಮುಸ್ಲಿಂರನ್ನು, ಅವರ ಕಳವಳಗಳನ್ನು ಎಂದಿಗೂ ಮುಖ್ಯವಾಗಿ ತೆಗೆದುಕೊಳ್ಳಲಿಲ್ಲ ಮತ್ತು ಅವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಿದೆ ಎಂಬುದನ್ನು ಮರೆಮಾಚುವ ತಂತ್ರಗಾರಿಕೆ ಕೂಡ ಇಲ್ಲಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಹಿಂಸಾತ್ಮಕ ಘರ್ಷಣೆಗಳು ಕಡಿಮೆ ಆಗಿವೆ ಎಂದು ಹೇಳಿಸುವ ಕೆಲ ಪ್ರಯತ್ನಗಳು ಕೂಡ ಆಗುತ್ತಿದೆ.
ಮುಸ್ಲಿಮರ ವಿರುದ್ಧ ಹಲ್ಲೆಯಂಥ ಘಟನೆಗಳು ನಡೆಯುತ್ತಿರುವುದರ ನಡುವೆಯೂ, ಮುಸ್ಲಿಂ ಮಹಿಳೆಯರ ಬಗ್ಗೆ ಬಿಜೆಪಿ ಮೃದುತ್ವ ಧೋರಣೆ ಹೊಂದಿದೆ ಎಂಬ ಭಾವನೆಯನ್ನು ಮೂಡಿಸಲಾಗುತ್ತಿದೆ. ಬಿಜೆಪಿ, ಸಂಘ ಪರಿವಾರ ಏನು ಮಾಡಿದರೂ, ಅದು ಮುಸ್ಲಿಂ ವಿರೋಧಿ, ಅಲ್ಪಸಂಖ್ಯಾತ ವಿರೋಧಿ. ಅದು ತನ್ನ ಮೂಲ ಬಣ್ಣವನ್ನು, ಮೂಲಭೂತ ಅಂಶಗಳನ್ನು ಬದಲಾಯಿಸಿಕೊಳ್ಳಲಾರದು ಎಂಬ ಸತ್ಯದ ಬಗ್ಗೆ ಗಮನ ಹರಿಯದಂಥ ಭ್ರಮೆಯನ್ನು ಸೃಷ್ಟಿಸುವುದು ನಡೆಯುತ್ತಿದೆ.
ಸಂಘ ಪರಿವಾರದ ಕಾರ್ಯಕರ್ತರ ಗೂಂಡಾಗಿರಿಯಿಂದ ಮುಸ್ಲಿಂರು ಭಯದಲ್ಲಿಯೇ ಬದುಕುವ ವಾತಾವರಣ ದೇಶದಲ್ಲಿದ್ದರೂ, ಮುಸ್ಲಿಮರ ಬಲದಿಂದಲೇ ಮುಂದಿನ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವ ಹವಣಿಕೆಯಲ್ಲಿ ಬಿಜೆಪಿ ತೊಡಗಿದೆ. ಇನ್ನು ಮೋದಿಯ ಮುಸ್ಲಿಂ ಮಿತ್ರರು, ಬಿಜೆಪಿ ತನ್ನ ಇಮೇಜ್ ಅನ್ನು ಹಾಳು ಮಾಡುವ, ಆದರೆ ಪಕ್ಷದೊಂದಿಗೇ ಇರುವ ಕಾರ್ಯಕರ್ತರನ್ನು ನಿಯಂತ್ರಿಸಬೇಕು ಎಂದು ಹೇಳುತ್ತಾರೆಯೇ ಹೊರತು, ಬಿಜೆಪಿ ಹಾಗು ಸಂಘ ಪರಿವಾರ ಮೂಲತಃ ಮುಸ್ಲಿಂ ವಿರೋಧಿ ಎಂಬುದನ್ನು ಮರೆತಂತೆ ನಟಿಸುತ್ತಿದ್ದಾರೆ.
ಮುಸ್ಲಿಂರ ವಿರುದ್ಧ ಅತ್ಯಂತ ಕಟುವಾಗಿ ವರ್ತಿಸುತ್ತಲೇ ಹೀಗೆ ಮುಸ್ಲಿಂ ಮಿತ್ರರ ಪಡೆಯೊಂದನ್ನೂ ಬಿಜೆಪಿ ಕಟ್ಟುತ್ತಿರುವುದು ಅದರ ಕುತಂತ್ರದ ಮತ್ತೊಂದು ಭಾಗವೇ ಆಗಿದೆ.







