ಮುಕ್ತ ವಿಶ್ವವಿದ್ಯಾನಿಲಯದ ಬ್ಯಾಂಕ್ ಖಾತೆಗಳ ಸ್ಥಗಿತ: ರಾಜ್ಯಪಾಲರಿಗೆ ಪತ್ರ ಬರೆದ ಎಚ್ಡಿಎಫ್ಸಿ ಬ್ಯಾಂಕ್

ಸಾಂದರ್ಭಿಕ ಚಿತ್ರ Photo: PTI
ಬೆಂಗಳೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಬ್ಯಾಂಕ್ ಖಾತೆಗಳ ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ಸರಕಾರದ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟ ನಡೆಯುತ್ತಿರುವ ನಡುವೆಯೇ ಬ್ಯಾಂಕ್ ಕಾರ್ಯಾಚರಣೆಯನ್ನು ನಿರ್ಬಂಧಿಸಲು ರಾಜ್ಯ ಸರಕಾರಕ್ಕೆ ಯಾವ ಕಾನೂನುಬದ್ಧ ಅಧಿಕಾರವಿದೆ ಎಂದು ಎಚ್ಡಿಎಫ್ಸಿ ಬ್ಯಾಂಕ್ ಪ್ರಶ್ನಿಸಿದೆ. ಈ ಸಂಬಂಧ ರಾಜ್ಯಪಾಲರಿಗೇ ನೇರವಾಗಿ ಪತ್ರ ಬರೆದಿದೆ.
ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು 2 ಬಾರಿ ಅಂದರೇ 2026ರ ಎಪ್ರಿಲ್, ಮೇ ತಿಂಗಳಿನಲ್ಲಿ ಪತ್ರ ಬರೆದಿದ್ದರು ಪತ್ರ ಬರೆದಿದ್ದರು. ಈ ನಡುವೆಯೇ ಎಚ್ಡಿಎಫ್ಸಿ ಬ್ಯಾಂಕ್ ಕೂಡ ಸರಕಾರ ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿರುವುದು ಮುನ್ನೆಲೆಗೆ ಬಂದಿದೆ.
ಎಚ್ಡಿಎಫ್ಸಿ ಬ್ಯಾಂಕ್ ಪತ್ರ ಆಧರಿಸಿ ರಾಜ್ಯಪಾಲರು ಈ ಪ್ರಕರಣದ ಬಗ್ಗೆ ಸರಕಾರಕ್ಕೆ ಮೂರನೇ ಪತ್ರವನ್ನು ಬರೆದಿದ್ದಾರೆ. ಇದೀಗ 2026ರ ಜೂನ್ 8ರಂದು ಮೂರನೇ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.ಈ ಬಾರಿ ಬರೆದಿರುವ ಪತ್ರದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಎಚ್ಡಿಎಫ್ಸಿ ಬ್ಯಾಂಕ್ನೊಂದಿಗೆ 2026ರ ಮಾರ್ಚ್ 27ರಂದು ನಡೆಸಿದ್ದ ಸಂವಹನವನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ.
ರಾಜ್ಯಪಾಲರ ಪತ್ರದಲ್ಲೇನಿದೆ?:
ವಿಶ್ವವಿದ್ಯಾನಿಲಯದ ಕಾನೂನುಬದ್ಧ ಕಾರ್ಯ ನಿರ್ವಹಣೆಗೆ ಯಾವುದೇ ರೀತಿಯ ಅಡ್ಡಿಪಡಿಸುವ ಕ್ರಮಗಳನ್ನು ಕೈಗೊಳ್ಳಬಾರದು ಎಂದು ರಾಜ್ಯ ಸರಕಾರಕ್ಕೆ ಮತ್ತಷ್ಟು ನಿರ್ದೇಶನ ನೀಡಲಾಗಿತ್ತು. ಅಲ್ಲದೆ, ಯಾವುದೇ ಅಕ್ರಮಗಳ ಕುರಿತು ಲಭ್ಯವಿರುವ ದಾಖಲೆಗಳು ಅಥವಾ ಮಾಹಿತಿಗಳನ್ನು ಕಾನೂನಿನಡಿ ನಿಗದಿಪಡಿಸಿರುವ ವಿಧಾನವನ್ನು ಅನುಸರಿಸಿ ಕುಲಾಧಿಪತಿಗಳ ಪರಿಗಣನೆಗೆ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಲಾಗಿತ್ತು ಎಂದು ಸರಕಾರದ ಗಮನಸೆಳೆದಿದೆ.
ಈ ಹಿನ್ನೆಲೆಯಲ್ಲಿಯೇ, ಎಚ್ಡಿಎಫ್ಸಿ ಬ್ಯಾಂಕ್ನ ಶಾಖಾ ವ್ಯವಸ್ಥಾಪಕರು 2026ರ ಮಾರ್ಚ್ 25ರಂದೇ ತಮ್ಮ ಪತ್ರದ ಮೂಲಕ ರಾಜ್ಯ ಸರಕಾರದಿಂದ ಸ್ಪಷ್ಟೀಕರಣವನ್ನು ಕೋರಿದ್ದಾರೆ. ಇದು ರಾಜ್ಯಪಾಲರು ಹಾಗೂ ಕುಲಾಧಿಪತಿಗಳ ಗಮನಕ್ಕೆ ಬಂದಿದೆ. ಬ್ಯಾಂಕ್ ಕಾರ್ಯಾಚರಣೆಯನ್ನು ನಿರ್ಬಂಧಿಸಲು ರಾಜ್ಯ ಸರಕಾರಕ್ಕೆ ಯಾವ ಕಾನೂನುಬದ್ಧ ಅಧಿಕಾರವಿದೆ ಎಂಬುದರ ಕುರಿತು ಎಚ್ಡಿಎಫ್ಸಿ ಬ್ಯಾಂಕ್ ಸ್ಪಷ್ಟೀಕರಣ ಕೇಳಿದೆ.






